Saturday, December 6, 2008

’ನಾನು’ ಅಂದರೆ ದೇವು

ನೋಡಿ ಸ್ವಾಮಿ ನಾನೊಬ್ಬ ಸಣ್ಣ ಮನುಷ್ಯ. ಕರ್ಣಾಟವೆಂಬ ದೇಶದ ಆಚೆಗೆ ಏನಿದೆ? ಎಂದು ಕಂಡವನಲ್ಲ. ಅಷ್ಟೇ ಏಕೆ ಕರ್ನಾಟಕದ ಒಳಗಡೆ ಕೂಡ ಹೆಚ್ಚು ಓಡಾಡಿದವನಲ್ಲ. ಏಳೆಂಟು ವರ್ಷದಿಂದ ಪತ್ರಕರ್ತನಾಗಿ ಕೆಲಸ ಮಾಡುತ್ತ ಬಂದಿದ್ದೇನೆ. ಅದೂ ಹೊಟ್ಟೆಯ ಪಾಡಿಗಾಗಿ. 'ಕೋಶ ಓದು, ದೇಶ ನೋಡು' ಎಂಬ ಗಾದೆ ಕೇಳಿದ್ದೇನೆ. ಅದನ್ನು ಜಾರಿಗೆ ತರುವಷ್ಟು ದೊಡ್ಡ ಮನಸ್ಸು, ಮನುಷ್ಯ ನಾನಾಗಿಲ್ಲ. ಆಗಲು ಆಸೆ ಇತ್ತು, ಇದೆ. ಆದರೆ, ಎಲ್ಲ ಕನಸು- ಆಸೆಗಳು ಈಡೇರುವುದಿಲ್ಲ ಅಲ್ಲವೇ? ಎಷ್ಟೋ ಬಾರಿ ಅವು ನಮ್ಮ ಕಣ್ಣಮುಂದೆಯೇ ಕಮರಿಹೋಗುವುದನ್ನು ನೋಡುತ್ತ ಅಸಹಾಯಕರಾಗಿ ಇರಬೇಕಾಗುತ್ತದೆ. ನಾನು ಕನರ್ಾಟಕ ಎಂಬ ಬಾವಿ ಅಲ್ಲಲ್ಲ. 'ಬೀದರ್' ಎಂಬ ರಾಜಧಾನಿಯಿಂದ ದೂರ ಇರುವ, ನಾಲ್ಕೈದು ತಾಲ್ಲೂಕುಗಳಿರುವ ಸಣ್ಣ ಬಾವಿಯೊಳಗಿನ ಕಪ್ಪೆ. ಅದಕ್ಕೆ ತಾನಂದುಕೊಂಡದ್ದೇ ದೊಡ್ಡ ಜಗತ್ತು.
ಇದೇ ನೆಪದಲ್ಲಿ ನನ್ನ ಬಗ್ಗೆ ಒಂದಿಷ್ಟು ಬರೆಯುತ್ತೇನೆ. ಹೈದರಾಬಾದ್ ಕರ್ನಾಟಕ ಎಂಬ ಬಿರುಬಿಸಿಲಿನ ಗುಲ್ಬರ್ಗ ಜಿಲ್ಲೆಯ ಶಹಾಪುರ ಎಂಬ ಪಟ್ಟಣ ನನ್ನ ಊರು. ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಈಗ ನಿವೃತ್ತರಾಗಿದ್ದಾರೆ. ಅವರು ಕೆಲಸ ಮಾಡುತ್ತಿದ್ದ 'ಅಣಬಿ' ಕುಗ್ರಾಮದಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಆರಂಭವಾಯಿತು. ಕರೆಂಟ್ ಇಲ್ಲದ, ಬಸ್ಗಳೇ ಬಾರದ ಯಾವ ದಿಕ್ಕಿನಿಂದ ಹೋದರೆ ನಡೆದುಕೊಂಡೇ ಹೋಗಬೇಕಾಗಿದ್ದ ಗ್ರಾಮ ಅದು. ಕತ್ತಲಾಗುತ್ತಿದ್ದಂತೆ ಸಿರಿವಂತರಂತೆ ಕಂದೀಲು ಖರೀದಿಸಲಾಗದೆ ಚಿಮಣಿಯ ಬೆಳಕಿನಲ್ಲಿ ಜೀವನ ನಡೆಸುತ್ತಿದ್ದೆವು. ಹೊಟ್ಟೆ ಬಟ್ಟೆಗೆ ಕೊರತೆ ಇರಲಿಲ್ಲ ಬಿಡಿ. ಕಲ್ಲು ಹಾಸಿನ ಛಾವಣಿ ಇದ್ದ ಕಟ್ಟಿದ 'ಹರಜಾಪರ' ಮನೆಗಳವು. ಶಹಾಬಾದ್ ಫರಸಿಗಳನ್ನು ಬೆಳಕು, ಗಾಳಿ ಬರುವಂತೆ ನೀರು ಸುರಿಯದೆ ಆಶ್ರಯ ನೀಡದಂತೆ ಕಲಾತ್ಮಕವಾಗಿ ಅವುಗಳನ್ನು ಒಂದರ ಮೇಲೊಂದು ಇಟ್ಟು ಮಾಳಿಗೆ ಮಾಡುತ್ತಾರೆ. ಅಂತಹ ಮಾಳಿಗೆಯಿಂದ ದೊಡ್ಡ ಗಾತ್ರದ ಕರಿಚೇಳುಗಳು ಬಿದ್ದು ಗಾಬರಿ- ಭಯ ಆತಂಕ ಪಟ್ಟ ಘಳಿಗೆಗಳು ಕಡಿಮೆಯೇನಿಲ್ಲ. ಮೊದಲೇ ಹೇಳಿದ ಹಾಗೆ ನಮ್ಮ ಮನೆಯಲ್ಲಿ ಕಂದೀಲು ಇರಲಿಲ್ಲ. ಕರಿಚೇಳುಗಳು ಬಿದ್ದರೆ ತಕ್ಷಣ ಗೊತ್ತಾಗಲಿ ಎಂಬ ಕಾರಣಕ್ಕಾಗಿ ರಾತ್ರಿಯಿಡೀ ಚಿಮಣಿ ಹಚ್ಚಿರುತ್ತಿದ್ದೆವು. ದೊಡ್ಡ ಗಾತ್ರದ ಒಂದೇ ಕೋಣೆ ಇರುವ ಮನೆಯದು. ಆ ಊರಿನ ಕುಲಕಣರ್ಿಯವರು ತಮ್ಮ ಮನೆಯ ಹೊರಗಡೆಯಿದ್ದ ಕಟ್ಟಿಗೆ- ದನಗಳಿಗೆ ಮೇವು ಸಂಗ್ರಹಿಸಿಡುತ್ತಿದ್ದ 'ಕೊಟಗಿ'ಯನ್ನು ಖಾಲಿ ಮಾಡಿಸಿದ್ದರು. ನಮ್ಮ ತಂದೆಯವರೇ ಹಣ ನೀಡಿ ಅದಕ್ಕೆ ಛತ್ತು ಹಾಕಿಸಿದ್ದು ನೆನಪಿದೆ. ಅದಕ್ಕಾಗಿ 'ಬಾಡಿಗೆ' ಕೂಡ ಕೊಡುತ್ತಿದ್ದೆವು. ಒಂದು ಮೂಲೆಯಲ್ಲಿ ಒಲೆಗಳನ್ನು ಹೂಡಿ ಅಡುಗೆ ಮಾಡಲಾಗುತ್ತಿತ್ತು. ಮತ್ತೊಂದು ಮೂಲೆಯಲ್ಲಿ ನನ್ನ ಪಾಟಿ-ಪುಸ್ತಕಗಳ ಬ್ಯಾಗು ಇಡುತ್ತಿದ್ದೆ. ಮಧ್ಯದಲ್ಲಿ ಮಲಗುವ ವ್ಯವಸ್ಥೆ ಮಾಡಿಕೊಂಡಿದ್ದೆವು. ಸಣ್ಣ ಪುಟ್ಟ ಸಪ್ಪಳವಾದರೂ ಎದ್ದು ಕೂಡಬೇಕು. ಹಾವು ಕಡಿದು ಸತ್ತ ಸುದ್ದಿ ಮೇಲಿಂದ ಮೇಲೆ ಕೇಳುತ್ತಿದ್ದೆವು. ಹಾವುಗಳಿರಲಿ ದೊಡ್ಡವರ ಅಂಗೈ ಅಗಲದಷ್ಟು ದೊಡ್ಡದಾಗಿದ್ದ ಚೇಳು ಕಚ್ಚುವುದೇ ಸಾಕಾಗುತ್ತಿತ್ತು ಸಾಯಲು.
ಇಂತಹದೇ ದಿನಗಳಲ್ಲಿ ನಾವು ಒಂದು ಹೊಲ ಖರೀದಿಸಿದೆವು. ನಮ್ಮ ತಂದೆಯವರ ದೂರದ ಸಂಬಂಧಿಯೇ ಅದನ್ನು ನಮಗೆ ಮಾರಿದರು. ಎಂಟು ಎಕರೆಯ ಹೊಲ ಅದು. ಜನ ಅದನ್ನು ಹೊಲ ಎಂದು ಕರೆಯುತ್ತಿದ್ದರು. ಹಾಗೆ ನೋಡಿದರು ಅದು ದೊಡ್ಡದೊಡ್ಡ ಬಂಡೆಗಳಿದ್ದ ಬಂಜರು ಭೂಮಿ. ಮೊದಲ ವರ್ಷ ಅದರಲ್ಲಿ ಬಂದ ಬೆಳೆಯ ಪ್ರಮಾಣ ಬೇರೆಯವರ ಒಂದು ಎಕರೆ ಹೊಲದ ಬೆಳೆಗೆ ಸಮನಾಗಿತ್ತು. ನಮ್ಮ ಕಡೆ ಯಾರೇ ಹೊಲ ಖರೀದಿಸಿದರೂ 'ಮುತ್ತು’ ಬೆಳೆಯಬೇಕು ಅನ್ನುವ ಕಾರಣಕ್ಕಾಗಿ ಮೊದಲ ವರ್ಷ ಜೋಳ ಬಿತ್ತುತ್ತಾರೆ. ನಿತ್ಯ ರೊಟ್ಟಿ/ಭಕ್ರಿ ತಿನ್ನುವ ನಮ್ಮ ಮನೆಗಳಲ್ಲಿ ಆಗಾಗ ಅಂದರೆ ಹಬ್ಬ- ಹುಣ್ಣಿವೆಗಳ ಸಂದರ್ಭದಲ್ಲಿ ಅನ್ನ ಮಾಡಲಾಗುತ್ತಿತ್ತು. ದುಬಾರಿ ಅಕ್ಕಿ ಖರೀದಿಸಿ ಅನ್ನ ಮಾಡಿ ಊಟ ಮಾಡುವುದು ಸಾಧ್ಯವೇ ಇರಲಿಲ್ಲ. ಶಹಪುರದಲ್ಲಿ ನನ್ನ ತಂದೆಯವರಿಗೆ ಪಿತ್ರಾರ್ಜಿತವಾಗಿ ಬಂದ ಗದ್ದೆಯಲ್ಲಿ ಬೆಳೆಯುತ್ತಿದ್ದ ಭತ್ತವು ನಮ್ಮ ಇಡೀ ವರ್ಷಕ್ಕೆ ಸಾಕಾಗುವಷ್ಟು ಇರುತ್ತಿತ್ತು. ಅಣಬಿಯಲ್ಲಿ ಹೊಲ ಖರೀದಿಸಿದ ನಂತರ ಜೋಳ ಬಿತ್ತಿದ ಬಗ್ಗೆ ಪ್ರಸ್ತಾಪಿಸಿದೆ. ಜೋಳ ತೆನೆ ಬಿಟ್ಟದ್ದನ್ನು ನೋಡಿದ ಗಳಿಗೆ ನನ್ನ ಜೀವನದ ಅತ್ಯಂತ ಅವಿಸ್ಮರಣೀಯ ಅನುಭವಗಳಲ್ಲಿ ಒಂದು. ಎತ್ತಿನ ಬಂಡಿಕಟ್ಟಿಕೊಂಡು ಸೀತನಿ (ಸಿಹಿತೆನೆ= ಜೋಳದ ಕಾಳು ಎಳೆಯವಾಗಿದ್ದಾಗ ಅದನ್ನು ಸುಟ್ಟು ತಿನ್ನುತ್ತಾರೆ. ಅತ್ಯಂತ ರುಚಿಯಾದ ಕಾಳುಗಳನ್ನು ತಿನ್ನುವುದೇ ವಿಶಿಷ್ಟ ಅನುಭವ) ತಿನ್ನಲು ಹೋಗಿದ್ದೆವು. ಎರಡನೇ ವರ್ಷ ಹತ್ತಿ ಬಿತ್ತಲಾಯಿತು. ಮೊದಲ ವರ್ಷಕ್ಕಿಂತ ಬೇರೆಯದೇ ಬೆಳೆ ಆಗಿದ್ದರಿಂದ ನಮಗೂ ಅದನ್ನು ನೋಡುವುದೇ ಖುಷಿ. ಬಿಡಿಸಿದ ಹತ್ತಿಯ ತೊಳೆಗಳನ್ನು ಚೀಲಗಳಲ್ಲಿ ತುಂಬಿಕೊಂಡು ಬಂದು ಮನೆಯಲ್ಲಿ ಸುರಿಯಲಾಯಿತು. ಇಡಲು ಬೇರೆ ಜಾಗವೇ ಇಲ್ಲದ್ದರಿಂದ ಮನೆಯಲ್ಲಿಯೇ ಇಟ್ಟುಕೊಳ್ಳುವುದು ಅನಿವಾರ್ಯವೂ ಅಗತ್ಯವೂ ಆಗಿತ್ತು. ಮನೆಯ ಕಾಲುಭಾಗವನ್ನು ಹತ್ತಿ ಆಕ್ರಮಿಸಿಕೊಂಡು ಬಿಟ್ಟಿತು. ಹೀಗೆ ಹಾಕಿದ ಹತ್ತಿಯಿಂದ ಕೆಲವೇ ಅಡಿ ದೂರದಲ್ಲಿ ನಾವು ಮಲಗಿದ್ದವು. ಅವ್ವನ ಆರೋಗ್ಯ ಸರಿಯಿರಲಿಲ್ಲ. ಆಸ್ಪತ್ರೆಗೆ ತೋರಿಸುವುದಕ್ಕಾಗಿ ದೂರ ದೇಶದ ಬಿಜಾಪುರಕ್ಕೆ ಕರೆದುಕೊಂಡು ಹೋಗಿದ್ದರು. ಮನೆಯಲ್ಲಿ ಇದ್ದದ್ದು ನಾನು, ನನ್ನ ಪುಟ್ಟ ತಂಗಿ ಮತ್ತು ತಂದೆಯ ತಾಯಿ ಆಯಿ. ಓದಲು ಅಂತ ಕೆಲವು ಹುಡುಗರು ನಮ್ಮ ಮನೆಗೆ ಬರುತ್ತಿದ್ದರು. ವಯಸ್ಸಾದ ಆಯಿ ಮತ್ತು ಕೆಲವು ಹುಡುಗರು ಇದ್ದ ಅಂತಹ ಒಂದು ರಾತ್ರಿ ಎಷ್ಟೊಂದು ಭೀಕರವಾಗಿತ್ತು ಎನ್ನುವುದನ್ನು ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ. ಏನೋ ಸಪ್ಪಳ ಆಯಿತು ಎಂದು ಕಣ್ತೆರೆದು ನೋಡಿದರೆ ನಾವು ಕೂಡಿ ಹಾಕಿದ್ದ ಹತ್ತಿ ಬೆಂಕಿ ಹತ್ತಿ ಉರಿಯುತ್ತಿತ್ತು. ಅದು ಹರಡಿ ನಾವು ಹೊರಬರಬೇಕಿದ್ದ ಬಾಗಿಲನ್ನು ಕೂಡ ಆವರಿಸಿತ್ತು. ಎಲ್ಲರನ್ನು ಎಬ್ಬಿಸಿ ಕಿಟಕಿ ಮುರಿದು ಹೊರ ತರಲಾಯಿತು. ಯಾರಿಗೂ ಸುಟ್ಟ ಗಾಯಗಳಾಗಲಿಲ್ಲ. ಒಂದು ತೊಳೆ ಹತ್ತಿ ಕೂಡ ಉಳಿಯಲಿಲ್ಲ. ಎಲ್ಲವೂ ಬೆಂಕಿಗೆ ಆಹುತಿಯಾಯಿತು. ಸ್ವಲ್ಪ ಅಜಾಗರೂಕತೆ ವಹಿಸಿದ್ದರೆ ನಾವು ಅರಗಿನ ಮನೆಯಲ್ಲಿ ಸಿಕ್ಕಿಕೊಂಡವರಂತೆ ದಹಿಸಿಹೋಗುತ್ತಿದ್ದೆವು. ಅದಾದ ನಂತರವೂ ಮನೆ ರಿಪೇರಿ ಮಾಡಿಸಿಕೊಂಡು ಇರಲು ಆರಂಭಿಸಿದೆವು. ನಾಗರಿಕ ಎಂದು ಕರೆಯುವ ವ್ಯವಸ್ಥೆಯಿಂದ ತುಂಬ ದೂರ ಇದ್ದೆವು ಅಂತ ಈಗ ಅನ್ನಿಸುತ್ತಿದೆ. 'ಗ್ರಾಮೀಣ ಬದುಕು' ಎಂದರೆ ನನಗೆ ಅಣಬಿಯಾಚೆಗಿನ ಜಗತ್ತು ಕಾಣಿಸುವುದೇ ಇಲ್ಲ. ಕತೆ- ಕಾದಂಬರಿ ಪದ್ಯ ಓದುವಾಗ ಹಳ್ಳಿಯ ಬದುಕಿನ ಪ್ರಸ್ತಾಪವಾದಾಗಲೆಲ್ಲ ನನಗೆ ಅಣಬಿಯದೇ ನೆನಪು ಬರುತ್ತಿತ್ತು. ಅದರಿಂದಾಚೆಗೆ ಈಗಲೂ ಬರಲು ಸಾಧ್ಯವಾಗಿಲ್ಲ. ಅದು ನನ್ನ ಮಿತಿ. ಎಸ್ಎಸ್ಎಲ್ಸಿ ಇದ್ದಾಗ ಓದಿದ ಕಂಬಾರರ 'ಸಿಂಗಾರೆವ್ವ ಮತ್ತು ಅರಮನೆ', ಪಿ.ಯು.ಸಿ ವಿದ್ಯಾರ್ಥಿಯಾಗಿದ್ದಾಗ ಓದಿದ ರಾವಬಹದ್ದೂರರ 'ಗ್ರಾಮಾಯಣ' ಕಾದಂಬರಿಯ ಘಟನೆಗಳು ಪೂರ್ತಿ ನಡೆದದ್ದು ಅಣಬಿಯಲ್ಲಿಯೇ ಎಂದು ಖಚಿತವಾಗಿ ನಂಬಿದವ ನಾನು. ಈಗಲೂ ನಂಬುತ್ತೇನೆ. ಮಾಧ್ಯಮಿಕ ಶಾಲೆ ಇಲ್ಲದ ಕಾರಣಕ್ಕಾಗಿ ಸ್ವಂತ ಊರಾದ ಶಹಾಪುರಕ್ಕೆ ಮರಳಬೇಕಾಯಿತು. ಅದು ಕೂಡ ಅತ್ತ ನಗರವೂ ಅಲ್ಲದ, ಇತ್ತ ಗ್ರಾಮವೂ ಅಲ್ಲದಂತಹ ಪಟ್ಟಣ. ಗ್ರಂಥಾಲಯ ಅಂದರೆ ಏನು ಎಂದು ಗೊತ್ತಿಲ್ಲದ ಸಾವಿರಾರು ಜನ ವಿದ್ಯಾವಂತರು ಅಲ್ಲಿದ್ದರು, ಈಗಲೂ ಇದ್ದಾರೆ. ಶಾಲೆಯ ಬೀರುಗಳಲ್ಲಿದ್ದ ಪುಸ್ತಕ ಅದೂ ಕಾದಂಬರಿಗಳನ್ನು ಪಡೆದು ಓದಲು ಆರಂಭಿಸಿದೆ. ಕಾದಂಬರಿ ಓದಿದರೆ ಹಾಳಾಗುತ್ತಾರೆ ಎಂಬ ನಂಬಿಕೆ ಅತ್ಯಂತ ಪ್ರಚಲಿತದಲ್ಲಿತ್ತು. ಆ ದಿನಗಳಲ್ಲಿಯೇ ಭೈರಪ್ಪ, ಕಾರಂತ, ಅನಕೃ, ತರಾಸು ಕಾದಂಬರಿ ಓದಿದ್ದು. ಪಠ್ಯಪುಸ್ತಕ ಓದದೆ ಪತ್ರಿಕೆಗಳು- ಕಾದಂಬರಿ ಓದುತ್ತಿದ್ದ ಹುಡುಗ ನಾನು. ಎಸ್ಎಸ್ಎಲ್ಸಿಯಲ್ಲಿ ಮೊದಲ ಬಾರಿಗೆ ಪಾಸಾಗಿದ್ದೇ ಎಂಬುದೇ ಹೆಮ್ಮೆಯ ಸಂಗತಿಯಾಗಿತ್ತು. ಪಿಯುಸಿಗಾಗಿ ಪ್ರವೇಶ ಪಡೆಯುವುದಕ್ಕಾಗಿ ಧಾರವಾಡಕ್ಕೆ ಹೋದೆ. ಹೊಸ ದೊಡ್ಡ ಜಗತ್ತನ್ನು ಮೊದಲ ಬಾರಿಗೆ ನೋಡಿದೆ. ಅದಕ್ಕಿಂತ ಮುಂಚೆ ಒಂದೆರಡು ಬಾರಿ ಗುಲ್ಬರ್ಗಕ್ಕೆ ಹೋಗಿ ಪರಕೀಯ ಅನುಭವ ಪಡೆದು ಕೆಲವೇ ಗಂಟೆಗಳಲ್ಲಿ ಓಡಿ ಬಂದುಬಿಟ್ಟುಬಿಟ್ಟಿದ್ದೆ. ಧಾರವಾಡದಲ್ಲಿ ಓದುವ ನನ್ನ ಕನಸು ಕಡಿಮೆ ಅಂಕ ಬಂದಿದ್ದವು ಎನ್ನುವ ಕಾರಣಕ್ಕಾಗಿ ಈಡೇರಲಿಲ್ಲ. ಧಾರವಾಡದ ಯಾವ ಕಾಲೇಜಿನಲ್ಲಿಯೂ ಪ್ರವೇಶ ದೊರೆಯಲಿಲ್ಲ. ಆಗ ಆಯ್ಕೆ ಮಾಡಿಕೊಂಡದ್ದು ನನ್ನ ಬಂಧುವೊಬ್ಬರು ಲೆಕ್ಚರರ್ ಆಗಿದ್ದ ಹೊಸಪೇಟೆಯ ವಿಜಯನಗರ ಕಾಲೇಜನ್ನು. ಹೊಸಪೇಟೆಯಲ್ಲಿ ಎರಡು ವರ್ಷ ಪಿ.ಯು.ಸಿಗಾಗಿ ಕಳೆದೆ ಅದೇ ದಿನಗಳಲ್ಲಿ ಹಂಪಿ ನೋಡುವ ಅಲ್ಲಲ್ಲ ಅನುಭವಿಸುವ ಅವಕಾಶ ದೊರೆಯಿತು. ಪ್ರತಿ ವಾರ- ರಜಾದಿನಗಳನ್ನು ಹಂಪಿಗೆ ಅಲ್ಲಿನ ಕಲ್ಲುಗಳ ಜೊತೆ ಕಳೆಯುತ್ತ ಬಂದೆ. ಮಧ್ಯೆ ಕಾಣಿಸಿಕೊಂಡ ಬೆನ್ನುನೋವಿನ ಸಮಸ್ಯೆ ಪರೀಕ್ಷೆ ಬರೆಯಲಾಗದಂತೆ ಮಾಡಿತು. ಚೇತರಿಸಿಕೊಂಡು ಬರೆದ ಪರೀಕ್ಷೆಯಲ್ಲಿ ಪಾಸಾಗಲು ವಿಫಲಯತ್ನ. ಒಂದೆರಡು ಬಾರಿಯಲ್ಲ ನಾಲ್ಕು ಬಾರಿ. ಕೊನೆಗೊಮ್ಮೆ ಪಾಸಾಗುವ ವೇಳೆಗೆ ಆಸೆಗಳೇ ಉಳಿದಿರಲಿಲ್ಲ. ನಾನು ಮುಂದೆ ಓದಬಹುದು ಅಂತ ಯಾರೂ ಭಾವಿಸಿರಲಿಲ್ಲ. ನನ್ನ ಸುತ್ತಲು ಇರುವವರೆಲ್ಲ 'ಓದು ಅವನ ತಲೆಗೆ ಹತ್ತುವುದಿಲ್ಲ. ಯಾವುದಾದರೂ ಬಿಸಿನೆಸ್ ಹಚ್ಚಿಕೊಡಿ' ಎಂದು ಸಲಹೆ ಮಾಡುತ್ತಿದ್ದರು. ಈ ಹುಡುಗ ಯಾಕೆ ಹೀಗಾದ? ಬಹುಶಃ ಕಾದಂಬರಿ ಓದಿದ್ದರಿಂದಲೇ ಹೀಗಾಗಿರಬಹುದು ಎಂದು ಆಡಿಕೊಂಡರು. ಪಿಯುಸಿ ಮುಗಿಸಿ ಡಿಗ್ರಿಗಾಗಿ ಧಾರವಾಡಕ್ಕೆ ಹೋದೆ. ಒಬ್ಬನೇ ಒಬ್ಬಂಟಿಯಾಗಿ. ಏನು ಮಾಡಬೇಕು ಅಂತ ಗೊತ್ತಿರಲಿಲ್ಲ. ಎಲ್ಲಿ ಉಳಿಯಬೇಕು ಎಂದು ಗೊತ್ತಿರಲಿಲ್ಲ. ಮೊದಲ ಬಾರಿಗೆ ನನ್ನದಲ್ಲದ ಜಗತ್ತನ್ನು ಮುಖಾಮುಖಿಯಾಗುತ್ತಿತ್ತು. ಮೇಲಿಂದ ಮೇಲೆ ಕಾಡುತ್ತ ಬಂದ ಸೋಲು ಅಸಹಾಯಕನನ್ನಾಗಿ ಮಾಡಿತ್ತು. ಮತ್ತೊಂದು ಸೋಲು ಎದುರಿಸುವುದು ಸಾಧ್ಯವೇ ಇರಲಿಲ್ಲ. ರ್ಯಾಂಕ್ ಬಂದ, ಡಿಸ್ಟಿಂಕ್ಷನ್, ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿದ್ಯಾಥರ್ಿಗಳಿಗೇ ಸೀಟು ಸಿಗುವುದು ಕಷ್ಟವಾಗಿದ್ದ ದಿನಗಳವು. ನಾಲ್ಕು ಬಾರಿ ಫೇಲಾದ ನನಗೆ ಯಾರು ತಾನೆ ಅಡ್ಮಿಷನ್ ಕೊಡಿಸಲು ಸಾಧ್ಯವಿತ್ತು. ಏನೂ ಇಲ್ಲದವನಿಗೆ ಹುಲ್ಲು ಕಡ್ಡಿಯೇ ಆಸರೆಯಾಗುತ್ತದೆ. ನಾನು ಧಾರವಾಡಕ್ಕೆ ಹೋಗುವ ಕೆಲವೇ ದಿನ ಅಲ್ಲ ವರ್ಷ ಮೊದಲು ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. ವೇದಿಕೆಯಲ್ಲಿ ಭಾಷಣ ಮಾಡಿದ್ದ ಕವಿ ಸಿದ್ಧಲಿಂಗ ಪಟ್ಟಣಶೆಟ್ಟರು ನೆನಪಾದರು. ಅವರು ಕನರ್ಾಟಕ ಕಾಲೇಜಿನಲ್ಲಿ ಹಿಂದಿ ವಿಭಾಗದ ಮುಖ್ಯಸ್ಥರು. ಅವರನ್ನು ಭೇಟಿ ಮಾಡಿದರೆ ಸಹಾಯ ಆಗಬಹುದು ಅಂತ ಅನ್ನಿಸಿತು. ಯಾಕೆ ಹಾಗನ್ನಿಸಿತು ಅಂತ ಗೊತ್ತಿಲ್ಲ. ಅದಕ್ಕಿಂತ ಮುಂಚೆ ಒಮ್ಮೆಯೂ ಅವರನ್ನು ಭೇಟಿ ಮಾಡಿರಲಿಲ್ಲ. ಯಾರೂ ಗೊತ್ತಿಲ್ಲದ ಊರಿನಲ್ಲಿ ಓಡಾಡುತ್ತಿದ್ದೆ. ನೆನಪು- ಕಲ್ಪನೆಗಳೇ ಆಸರೆಯಾಗಿದ್ದವು. ವೇದಿಕೆಯಲ್ಲಿ ನೋಡಿದ್ದ ಪಟ್ಟಣಶೆಟ್ಟರ ಸಹಾಯ ಕೇಳಬೇಕು ಎಂಬುದು ಅಂತಹುದೇ ಒಂದು ಹುಂಬ ಆಲೋಚನೆಯಾಗಿತ್ತು. ಮನೆ ಹುಡುಕುತ್ತ ಹೊರಟೆ ನನ್ನ ಸುದೈವದಿಂದ ಸರ್ ಮನೆಯಲ್ಲಿಯೇ ಇದ್ದರು. ಯಾರು ನೀವು? ಏನು ಬಂದದ್ದು? ಎಂದು ಕೇಳಿದರು. ಅವರ ಜೊತೆ ಏನು ಮಾತಾಡುವುದು ಎಂದು ಗೊತ್ತಾಗದೇ ಕಕ್ಕಾಬಿಕ್ಕಿಯಾಗಿ ಬಿಟ್ಟೆ. ಒಂದರೆಕ್ಷಣ ಸಾವರಿಸಿಕೊಂಡು ಬಿ.ಎ.ಗೆ ಅಡ್ಮಿಷನ್ ಎಂದು ಹೇಳಿದೆ. ನಮ್ಮ ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದಿದೆ ಎಂದರು. ಅವರ ಕಾಲೇಜಿನಲ್ಲಿ ಸೀಟು ಸಿಗುವುದು ಸಾಧ್ಯವೇ ಇಲ್ಲ ಎಂದು ನನಗೆ ಗೊತ್ತಿತ್ತು. ಆಗ ನಾನು ನನಗೆ ತಿಳಿದಿದ್ದ ಸಣ್ಣ ಸಂಗತಿಗಳ ಸಹಾಯ ಪಡೆಯಬಯಸಿದೆ. ಶಿವಾನಂದ ಗಾಳಿ ಸರ್ಗೆ ನೀವು ಒಂದು ಲೆಟರ್ ಕೊಟ್ಟರೆ ನನಗೆ ಸಹಾಯ ಆಗುತ್ತದೆ ಎಂದು ಬಿಟ್ಟೆ. ಅವರಿಗೆ ಏನನ್ನಿಸಿತೋ ಗೊತ್ತಿಲ್ಲ. ತಕ್ಷಣ ಎದ್ದು ಒಂದು ನೋಟುಬುಕ್ಕಿನ ಕಾಗದ ಹರಿದು ಅದರಲ್ಲಿ ಎರಡು ಸಾಲಿನ ಪುಟ್ಟಪತ್ರ ಬರೆದರು. ಅದು ಹೀಗಿತ್ತು.
ಪ್ರಿಯ ಶಿವಣ್ಣ,
ಈ ಪತ್ರ ತಂದಿರುವ ದೇವು ನನಗೆ ಬೇಕಾದವರು. ಸಾಧ್ಯವಾದರೆ ಅವರಿಗೆ ಸಹಾಯ ಮಾಡು.
ಅದನ್ನು ಹಿಡಿದುಕೊಂಡು ಗಾಳಿ ಸರ್ ಮನೆಯ ಕಡೆಗೆ ಓಡಿದೆ. ಅವರು ನಾಳೆ ಕಾಲೇಜಿಗೆ ಬಾ ಎಂದರು. ಬೆಳಿಗ್ಗೆ ಜೆ.ಎಸ್.ಎಸ್ ಕಾಲೇಜಿಗೆ ಹೋದರೆ ಅಲ್ಲಿಯೂ ಕೂಡ ಅರ್ಜಿ ಹಾಕುವ ಕೊನೆಯ ದಿನ ಮುಗಿದು ಹೋಗಿತ್ತು. ಸ್ವತಃ ಗಾಳಿ ಅವರೇ ಆಫೀಸ್ ರೂಮಿಗೆ ಹೋಗಿ ನನಗಾಗಿ ಒಂದು ಅರ್ಜಿ ತಂದು ಕೊಟ್ಟು ಇದನ್ನು ತುಂಬಿಕೊಂಡು ಬಾ ಎಂದು ನೀಡಿದರು. ನನಗಿನ್ನೂ ಖಚಿತವಾಗಿ ನೆನಪಿದೆ. ಕಾಲೇಜಿನ ಬಯಲು ರಂಗಮಂದಿರದಲ್ಲಿ ಕುಳಿತು ಅರ್ಜಿ ತುಂಬಿದೆ. ಆಗಲೇ 'ಇಂಗ್ಲಿಷ್' ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದೆ. ಬಿ.ಎ.ದಲ್ಲಿ ಯಾವ ವಿಷಯಗಳಿರುತ್ತವೆ ಎಂಬುದೇ ಗೊತ್ತಿರಲಿಲ್ಲ. ಇತಿಹಾಸದ ಬಗ್ಗೆ ಸ್ವಲ್ಪ ಕೇಳಿದ್ದೆ. ಪೊಲಿಟಿಕಲ್ ಸೈನ್ಸ್ ಎಂದರೆ ಸೈನ್ಸ್ಗೆ ಸಂಬಂಧಿಸಿದ್ದು ಏನೋ ಇರಬಹುದು ಎಂದು ಆಯ್ಕೆ ಮಾಡಿದೆ. ಭರ್ತಿ ಮಾಡಿದ ಅರ್ಜಿ ಗಾಳಿ ಸರ್‌ಗೆ ನೀಡಿದರೆ ಇಷ್ಟೊಂದು ಬಾರಿ ಫೇಲಾದ ನೀನು ಇಂಗ್ಲಿಷ್ ಯಾಕೆ ತಗೋತಿ? ಕನ್ನಡ ತೆಗೆದುಕೋ ಅಂತ ಸಲಹೆ ಮಾಡಿದರು. ಅಳುಕುತ್ತಲೇ ಸುಧಾರಿಸಿಕೊಳ್ಳುತ್ತೇನೆ ಎಂದದ್ದು ನೆನಪು. 'ನಿನಗೆ ತಿಳಿದಂತೆ ಮಾಡು' ಎಂದು ಗೊಣಗುತ್ತ ನನ್ನ ಅರ್ಜಿಯನ್ನು ಅಜಿತ್‌ ಪ್ರಸಾದ್ ಗೆ ನೀಡಿದರು. ಮರುದಿನ ಪ್ರಕಟಿಸಿದ ಎರಡನೇ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಅಡ್ಮಿಷನ್ ಮಾಡಿಸಲು ಕಿಸೆಯಲ್ಲಿ ದುಡ್ಡಿರಲಿಲ್ಲ. ಕೇಳಬೇಕು ಎಂದರೆ ಗೊತ್ತಿರುವವರು ಯಾರೂ ಇರಲಿಲ್ಲ. ಮತ್ತೊಮ್ಮೆ ಎಲ್ಲ ಕಳೆದುಕೊಳ್ಳುತ್ತಿರುವ ಅನುಭವ. ಆಗ ಬೇಕಿದ್ದದ್ದು ಕೇವಲ 300 ರೂಪಾಯಿ. ನನ್ನ ಅಸಹಾಯಕ ಗಳಿಗೆಗಳಲ್ಲಿ ಆಪ್ತನಂತೆ ಜೊತೆಗಿದ್ದದ್ದು ಪುಸ್ತಕಗಳು. ಇಂದು ನಾನು ಬದುಕಿರುವದಕ್ಕೆ ಅಥವಾ ಬದುಕುವಂತೆ ನನಗೆ ಆತ್ಮವಿಶ್ವಾಸ ತುಂಬಿದ್ದು ಪುಸ್ತಕಗಳೇ. ಏನಾದರಾಗಲಿ ಎಂದು ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಹೋದೆ. ಅಲ್ಲಿ ನಮ್ಮೂರಿಂದ ಬಂದಿದ್ದ ರಂಗರಾಜ ಕಾಣಿಸಿದರು. ಅವರ ಹತ್ತಿರ ಹೋಗಿ ಅನುಮಾನಿಸುತ್ತಲೇ ಹಣ ಕೇಳಿದೆ. ಎರಡು ಯೋಚಿಸದೇ ಹಣ ನೀಡಿದರು. ಅಡ್ಮಿಷನ್ ಮಾಡಿಸಿದೆ. ಧಾರವಾಡದಲ್ಲಿ ಉಳಿದು ಓದಲು ಆರಂಭಿಸಿದೆ. 'ಇಂಗ್ಲಿಷ್ ಸಾಹಿತ್ಯ' ಪತ್ರಿಕೆಯಲ್ಲಿ ಅತಿ ಹೆಚ್ಚು ಅಂಕ ಪಡೆದದ್ದಕ್ಕಾಗಿ ಬಿ.ಎಂ.ಶ್ರೀ ಹೆಸರಿನ ಫೆಲೋಶಿಪ್ ನನಗೆ ದೊರೆಯಿತು. ಧಾರವಾಡದಲ್ಲಿ ಇದ್ದ ದಿನಗಳಲ್ಲಿ ಗೋವಾ ನೋಡುವ ಆಸೆಯಿತ್ತು. ಪುಸ್ತಕ ಖರೀದಿಸುವ ಚಟ ಯಾವಾಗಲೂ ಕಿಸೆಯಲ್ಲಿ ಹಣ ಇರದಂತೆ ಮಾಡುತ್ತಿತ್ತು. ಅತ್ಯಂತ ಸಮೀಪದಲ್ಲಿ ಇದ್ದರೂ ನನಗೆ ಹೋಗಲು ಆಗಲೇ ಇಲ್ಲ. ಈಗಲೂ ನನಗೆ ಗೋವಾ ನೋಡುವುದು ಸಾಧ್ಯವಾಗಿಲ್ಲ.
ಬಿ.ಎ. ನಂತರ ಒಂದರೆಕ್ಷಣ ಪತ್ರಿಕೋದ್ಯಮ ಓದುವ ಆಸೆಯಾಯಿತು. ಆದರೆ, ಇಂಗ್ಲಿಷ್ ಆಯ್ಕೆ ಮಾಡಿದೆ. ಎಂ.ಎ. ಮುಗಿದ ನಂತರ ಹೈದರಾಬಾದ್ ಕರ್ನಾಟಕದಲ್ಲಿ ಇಂಗ್ಲಿಷ್ ಕಲಿಸುವ ಇರಾದೆಯಿಂದ ಊರಿಗೆ ಮರಳಿದೆ. ಪಾರ್ಟ್ ಟೈಮ್‌ ಲೆಕ್ಚರರ್ ಆಗಿ ಕೆಲಸ ತಿಂಗಳಿಗೆ 600 ಸಂಬಳ. ಮತ್ತೆ ಒಂಟಿತನ, ಅಸಹಾಯಕತೆ. ಅಂತಹ ದಿನಗಳಲ್ಲಿ ಆಸರೆಯಾದದ್ದು ಪ್ರಜಾವಾಣಿ.
ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಪತ್ರಿಕೋದ್ಯಮದ ಅ.. ಆ.. ಇ.. ಕಲಿಯಲು ಆರಂಭಿಸಿದೆ. ನನ್ನ ಜೊತೆ ಕೆಲಸಕ್ಕೆ ಸೇರಿದ್ದ ಬಹುತೇಕ ಜನ ಪತ್ರಿಕೋದ್ಯಮದಲ್ಲಿ ಪಡೆದವರಾಗಿದ್ದರು. ಆಗಾಗ ಕವಿತೆ- ಕತೆ ಬರೆದುಕೊಂಡಿದ್ದ ನನಗೆ ಅವರ ಜೊತೆ ಸ್ಪರ್ಧಿಸುವುದು ಸಾಧ್ಯವೇ ಇರಲಿಲ್ಲ. ಆಗ ಅವರಂತೆ ಕೆಲಸ ಕಲಿಯಬೇಕು. ಯಾಕೆಂದರೆ ಬದುಕು ರೂಪಿಸಿಕೊಳ್ಳಬೇಕು. ಸಿಕ್ಕಿರುವ ಕೆಲಸ ಬಿಟ್ಟರೆ ಮತ್ತೆಂದೂ ದಾರಿ ಸಿಗುವುದಿಲ್ಲ ಎಂಬ ಹಠದಿಂದ ಎಲ್ಲಿಗೂ ಹೋಗದೆ ಕಣ್ಣಿಗೆ ಬಟ್ಟೆ ಕಟ್ಟಿದ ಗಾಣದೆತ್ತಿನಂತೆ ಅಲ್ಲಿಯೇ ಸುತ್ತಿದೆ. ಬೆಂಗಳೂರಿನಲ್ಲಿದ್ದ ದಿನಗಳಲ್ಲಿ ನಾನು ನೋಡಿದ ದೂರದ ದೇಶ ಎಂದರೆ ಪಾಂಡಿಚೇರಿ. ಬೇಂದ್ರೆ- ಮಧುರಚೆನ್ನರ ಪದ್ಯಗಳಲ್ಲಿ ಅರವಿಂದರು ಮತ್ತು ಪಾಂಡಿಯ ಬಗ್ಗೆ ಓದಿದ್ದೆ. ಮದುವೆಯಾಗಲು ಮನೆಯಲ್ಲಿ ಒತ್ತಾಯಿಸುತ್ತಿದ್ದ ದಿನಗಳವು. ಮದುವೆಯಾದರೆ ಸ್ವಾತಂತ್ರ್ಯ ಕಳೆದುಕೊಳ್ಳುತ್ತೇನೆ ಎಂದು ಭಾವಿಸಿದ್ದ ದಿನಗಳವು. ಪಾಂಡಿಯ ಪ್ರಶಾಂತ ವಾತಾವರಣ ಮತ್ತು ಸಮುದ್ರದ ಅಬ್ಬರದ ಅಲೆಗಳ ನಡುವೆ ಸಿಲುಕಿದ್ದೆ. ನಿರ್ಣಯ ತೆಗೆದುಕೊಳ್ಳಲೇ ಬೇಕಿತ್ತು. ನಾನು ಮದುವೆಯಾಗುವ ನಿರ್ಣಯಕ್ಕೆ ಬಂದದ್ದು ಪಾಂಡಿಯಲ್ಲಿಯೇ. ನಾನು ಕರಾವಳಿ ನೋಡಿದ್ದು ಕಾರವಾರ ಮತ್ತು ಪಾಂಡಿಯಲ್ಲಿ ಮಾತ್ರ. ಮಧುಚಂದ್ರಕ್ಕೆ ಅಂತ ಕೇರಳದ ಮುನ್ನಾರಗೆ ಹೋಗಿದ್ದೆ. ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಶ್ರವಣಬೆಳಗೊಳ, ಬೇಲೂರು- ಹಳೆಬೀಡು ನೋಡಿದೆ. ಸಾಹಿತ್ಯ ಸಮ್ಮೇಳನದ ವರದಿ ಮಾಡುವುದಕ್ಕಾಗಿ ತುಮಕೂರಿಗೆ ಹೋಗಿದ್ದೆ. ಸ್ನೇಹಿತ ಚಿದಾನಂದ ಸಾಲಿಯ ಮದುವೆ ಕಾರಣಕ್ಕಾಗಿ ರಾಯಚೂರು ನೋಡಿದೆ. ಕೆಲಸ ಸಿಕ್ಕ ಬಂಧುವನ್ನು ಬಿಡುವುದಕ್ಕಾಗಿ ಚಾಮರಾಜನಗರಕ್ಕೆ ಹೋಗಿ ಬಂದೆ. ಕುವೆಂಪು ಮೇಲಿನ ಪ್ರೀತಿ- ಭಕ್ತಿಯಿಂದ ಕುಪ್ಪಳಿಗೆ ಹೋಗಿದ್ದೆ. ಈಗಲೂ ಮಂಗಳೂರು, ಚಿಕ್ಕಮಗಳೂರು, ಕೋಲಾರ, ಮಂಡ್ಯ, ಹಾಸನ, ಮಡಿಕೇರಿ, ಶಿವಮೊಗ್ಗ ನೋಡಿಲ್ಲ.
ಬೆಂಗಳೂರಿನಿಂದ ನೇರವಾಗಿ ಬೀದರ್‌ಗೆ ಬಂದೆ. ಅದೂ ರೈಲಿನಲ್ಲಿ 18ಗಂಟೆಗಳ ಪ್ರಯಾಣ ಮಾಡಿ. ಮತ್ತೆ ಹೊಸ ಜನ, ಹೊಸ ಊರು, ಕೆಲಸ ಕಲಿಯುವುದು ಹೊಂದಿಕೊಳ್ಳುವುದು. ಹಿಂಜರಿಕೆ- ಭಯ- ಆತಂಕ ಸದಾ ಜೊತೆಯಲ್ಲಿಯೇ ಇವೆ. ಬೀದರ್ ಎಂಬ ದ್ವೀಪಕ್ಕೆ ಬಂದ ಮೇಲೆ ಎಲ್ಲಿಗೂ ಹೋಗಿಲ್ಲ. ನಾನೀಗ ಊರಿನಿಂದ ಹೈದರಾಬಾದ್ ಕೇವಲ 120 ಕಿ.ಮೀ. ದೂರದಲ್ಲಿದೆ. ಬೀದರ್ನ ಜನ ಶಾಪಿಂಗ್ ಮಾಡುವುದಕ್ಕಾಗಿ ಹೈದರಾಬಾದ್ಗೆ ಹೋಗುತ್ತಾರೆ. ಪ್ರತಿ ದಿನ ನೂರಾರು ಬಸ್ ಓಡಾಡುತ್ತವೆ. ನನ್ನ ಜೊತೆಗೆ ಇರುವ ನನ್ನ ವಿಚಿತ್ರ ಹವ್ಯಾಸಗಳು ನನ್ನ ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸುತ್ತ ಬಂದಿವೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕೇಳುವುದರಲ್ಲಿ ವಿಶೇಷ ಆಸಕ್ತಿ ಇರುವ ನನಗೆ ಪೇಂಟಿಂಗ್, ಸಾಹಿತ್ಯದ ಓದು ತುಂಬ ಇಷ್ಟ. ಹಾಗೆಯೇ ಕ್ಲಾಸಿಕ್ ಸಿನಿಮಾ ನೋಡುವುದು. ನಾನಿರುವ ದ್ವೀಪದಲ್ಲಿಯೇ ನನಗಿಷ್ಟವಾದ ಹವ್ಯಾಸಗಳ ಲೋಕ ಕಟ್ಟಿಕೊಂಡಿದ್ದೇನೆ. ಹೀಗಾಗಿ ಬೀದರ್‌ನಲ್ಲಿ ಇದ್ದರೂ ಒಂಟಿ ಆಗಿಲ್ಲ. ಬೇಂದ್ರೆ, ಮನಸೂರು, ಕುವೆಂಪು ಸದಾ ನನ್ನ ಜೊತೆಗಿರುತ್ತಾರೆ. ಕಂಬಾರ, ಲಂಕೇಶ, ತೇಜಸ್ವಿ, ಚಿತ್ತಾಲ, ದೇಸಾಯಿ, ಅನಂತಮೂರ್ತಿ ಕೂಡ.
ಅಂದಹಾಗೆ ನನಗೆ ಇಂಡಿಯಾಗೇಟ್ ಮತ್ತು ಗೇಟ್ ವೇ ಆಫ್ ಇಂಡಿಯಾದ ನಡುವಿನ ಅಂತರ ಗೊತ್ತಿದೆ. ನಾನು ಆ ನಗರಗಳಿಗೆ ಹೋಗದಿದ್ದರು ಕೂಡ.
ಗುಲಾಂ ಮುಂತಕಾ ಬಗ್ಗೆ ಬರೆಯುವಾಗ ಯಾಮಾರಿದ್ದು ನಿಜ. ಅದಕ್ಕೆ ಮುಂತಕಾ ವಿವರಗಳನ್ನು ಹೇಳುವಾಗ 'ಇಂಡಿಯಾ ಗೇಟ್' ಎಂದೇ ವಿವರಿಸಿದ್ದು ಒಂದು ಕಾರಣ ಇರಬಹುದು ಅಂತ ಈಗ ಅನ್ನಿಸುತ್ತದೆ. ಬರೆಯುವುದಕ್ಕೆ ಸುಲಭ ಅನ್ನುವ ಕಾರಣಕ್ಕಾಗಿ ಕೂಡ ನಾನು ಅದನ್ನು ಆಯ್ಕೆ ಮಾಡಿಕೊಂಡಿರಬಹುದು. ಎಚ್ಚರಿಸಿದ್ದಕ್ಕೆ ಧನ್ಯವಾದಗಳು. ಹಿರಿಯ ಪತ್ರಕರ್ತ ಏನಲ್ಲ. ವಯಸ್ಸಾದ ಮಾತ್ರಕ್ಕೆ ಹಿರಿಯರೇನಾಗುವುದಿಲ್ಲ.

Friday, November 14, 2008

ಛಾಯಾಗ್ರಾಹಕ ಅಲ್ಲ, ಫೋಟೊ ಎಂಜಿನಿಯರ್



ತನ್ನಲ್ಲಿರುವ ಅಪರೂಪದ ಕ್ಯಾಮರಾಗಳು ಮತ್ತು ಅವುಗಳಿಂದ ಕ್ಲಿಕ್ಕಿಸಿದ ಫೋಟೆಗಳಿಂದ ಬೆರಗುಗೊಳಿಸುವ ವ್ಯಕ್ತಿ ಗುಲಾಂ ಮುಂತಾಕ್. ಐತಿಹಾಸಿಕವಾಗಿ ಮಹತ್ವದ ನಗರವಾದರೂ ಸಮಕಾಲೀನವಾಗಿ `ಹಿಂದುಳಿದ' ಹಣೆಪಟ್ಟಿ ಕಟ್ಟಿಕೊಂಡ ಬೀದರ್‌ನಂತಹ ಪುಟ್ಟ ಪಟ್ಟಣದಲ್ಲಿ ಇರುವ ಅದ್ಭುತ ವ್ಯಕ್ತಿ. ಕ್ಯಾಮರಾ ಹುಚ್ಚಿನ ಈ ಛಾಯಾಗ್ರಾಹಕ ಜಗತ್ತಿನಲ್ಲಿಯೇ ಅತಿ ದೊಡ್ಡ ನೆಗೆಟಿವ್ ಒಡೆಯ. ಅವರ ಬಳಿ ಇರುವ ಎಂಟು ಅಡಿ ಅಗಲದ ನೆಗೆಟಿವ್ನಷ್ಟು ದೊಡ್ಡ ನೆಗೆಟಿವ್ ಜಗತ್ತಿನಾದ್ಯಂತ ಬೇರೆಲ್ಲಿಯೂ ಇಲ್ಲ. ನೆಹರೂ ಕಾಲದ ದೆಹಲಿಯ ಛಾಯಾಗ್ರಾಹಕ ಎ.ಆರ್.ದತ್ತಾ ಸಂದರ್ಶನವೊಂದರಲ್ಲಿ `ನನ್ನ ಹತ್ತಿರ ಇರುವ ಆರು ಅಡಿ ಅಗಲದ ನೆಗೆಟಿವ್ ಅತ್ಯಂತ ದೊಡ್ಡದು' ಎಂದು ತಿಳಿಸಿದ್ದರು. ಆದರೆ, ಮುಂತಾಕ್ ಬಳಿ ಅದಕ್ಕಿಂತ ಎರಡು ಅಡಿ ಹೆಚ್ಚು ಅಗಲವಾಗಿರುವ ನೆಗೆಟಿವ್ ಇದೆ. ಸಾಲಾಗಿ 400ಕ್ಕೂ ಹೆಚ್ಚು ಜನ ಕುಳಿತಾಗ ಕ್ಲಿಕ್ಕಿಸಿದ ಗ್ರೂಪ್ ಫೋಟೊ (ಸಮೂಹ ಚಿತ್ರ)ದಲ್ಲಿನ ಪ್ರತಿಯೊಬ್ಬರನ್ನೂ ನಿಚ್ಚಳವಾಗಿ ಕಾಣಿಸುವಂತೆ ಒಂದೇ ಕಾಲಕ್ಕೆ ಸೆರೆ ಹಿಡಿಯಬಲ್ಲರು ಮುಂತಾಕ್. ಆ ಚಿತ್ರದ ನೆಗೆಟಿವ್ನಿಂದ ಪ್ರತಿಯೊಬ್ಬ ವ್ಯಕ್ತಿಯ ಪ್ರತ್ಯೇಕ ಛಾಯಾಚಿತ್ರ ಪ್ರಕಟಿಸಬಹುದು. ಸಮೂಹದಲ್ಲಿರುವ ಎಲ್ಲರ ಮುಖದ ಮೇಲಿನ ನೆರಿಗೆಗಳು, ಹಣೆಯ ಮೇಲಿನ ಬೆವರ ಹನಿಯನ್ನೂ ಈ ಕ್ಯಾಮರಾ ದಾಖಲಿಸುತ್ತದೆ.ಕೇವಲ ಇವಷ್ಟೇ ಅಲ್ಲ. ಅಂತಹ ಹತ್ತು ಹಲವು ವೈಶಿಷ್ಟ್ಯಗಳ ಆಗರ ಈ ಮುಂತಾಕ್. ಪರಸ್ಪರ ಮುಖಾಮುಖಿಯಾಗಿರುವ ಮುಂಬೈನ ಗೇಟ್‌ ವೇ ಆಫ್‌ ಇಂಡಿಯಾ ಮತ್ತು ತಾಜಮಹಲ್ ಹೊಟೆಲ್‌ಗಳನ್ನು ಏಕಕಾಲಕ್ಕೆ ಒಂದೇ ನೆಗೆಟಿವ್ ಮೇಲೆ ಸೆರೆ ಹಿಡಿದಿರುವ ಕೌಶಲಿ. ಅದು ಮತ್ತು ಅಂತಹ ಹಲವು ಕೌತುಕಮಯ ಛಾಯಾಗ್ರಹಣ ಮಾಡುವುದು ಸಾಧ್ಯವಾದದ್ದು ಮುಂತಾಕ್ ಬಳಿ ಇರುವ `ಮ್ಯಾಜಿಕ್ ಬಾಕ್ಸ್'ನಿಂದ. ಶತಮಾನದಷ್ಟು ಹಳೆಯದಾದ ಸಕ್ಯರ್ೂಟ್ ಕ್ಯಾಮರಾ ಅದು. ಅದನ್ನು ಟ್ರೈಪಾಡ್ ಸ್ಟ್ಯಾಂಡ್ ಮೇಲಿಟ್ಟು 180 ಡಿಗ್ರಿ ವರೆಗೆ ತಿರುಗಿಸಿ ಎದುರಿಗಿರುವ ವಸ್ತು-ವ್ಯಕ್ತಿಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಅದಕ್ಕಿದೆ. ಗುಜರಿವಸ್ತುಗಳನ್ನು ಮಾರಾಟ ಮಾಡುವ ಮುಂಬೈನ ಚೋರ್ ಬಜಾರ್‌ನಿಂದ ತಂದ ಕ್ಯಾಮರಾ ಅದು. ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ, ತೂಕಕ್ಕೆ ಹಾಕುವ ಬೆಲೆಯಲ್ಲಿ ತಂದ ಕ್ಯಾಮರಾಕ್ಕೆ ವಿವಿಧ ಲೆನ್ಸ್‌ಗಳನ್ನು ಹಾಕಿ `ಪ್ರಯೋಗ' ನಡೆಸಿದರು. ಆಶ್ಚರ್ಯಕರ ರೀತಿಯಲ್ಲಿ ಕ್ಯಾಮರಾ ಕಾರ್ಯ ನಿರ್ವಹಿಸಲು ಆರಂಭಿಸಿತು.ಆಕ್ಸಫರ್ಡ್‌ ವಿಶ್ವವಿದ್ಯಾಲಯದಲ್ಲಿ ಗ್ರೂಪ್ ಫೋಟೊ ತೆಗೆಯುವುದಕ್ಕಾಗಿ ಬಳಸಲಾಗುತ್ತಿದ್ದ ಮಾದರಿಯ ಕ್ಯಾಮರಾ ಅದು. ನಿಷ್ಕ್ರಿಯ ಎಂದೇ ಭಾವಿಸಿ ಗುಜರಿಗೆ ಹಾಕಲಾಗಿತ್ತು. `ಏಕಕಾಲಕ್ಕೆ ನಾರ್ಮಲ್, ಟೆಲಿ ಮತ್ತು ವೈಡ್ ಲೆನ್ಸ್ ಆಗಿ ಬಳಸುವ ಅಪರೂಪದ ಲೆನ್ಸ್ ಉಪಯೋಗಕ್ಕೆ ಬರಬಹುದು ಎಂದು ಅಂದಾಜು ಮಾಡಿ `ಕ್ಯಾಮರಾ'ವನ್ನೇ ಕೇವಲ 1500 ರೂಪಾಯಿಗೆ ಖರೀದಿಸಿದೆ' ಎನ್ನುತ್ತಾರೆ ಮುಂತಾಕ್. ಆಗ ಅವರಿಗೆ ಸುತ್ತಮುತ್ತ ತಿರುಗುವ ಸಾಮರ್ಥ್ಯ ಈ ಕ್ಯಾಮರಾಕ್ಕೆ ಇರಬಹುದು ಎಂದು ಗೊತ್ತಿರಲಿಲ್ಲ.ಮುಂಬೈನಿಂದ ಬೀದರ್‍ಗೆ ತಂದ ಮೇಲೆ ಮುಂತಾಕ್ ಕ್ಯಾಮರಾ ಜೊತೆ ಒಡನಾಟದಲ್ಲಿ ಹಲ ಹೊಸ ಅಂಶಗಳನ್ನು ಗುರುತಿಸಲು ಆರಂಭಿಸಿದರು. ಮತ್ತು ಅದರ ಜೊತೆ ಹಲವು ಪ್ರಯೋಗಗಳನ್ನೂ ನಡೆಸಿದರು. ಬೇರೆ ಬೇರೆ ಲೆನ್ಸ್ ಹಾಕಿ ಸಾಧ್ಯತೆಗಳನ್ನು ಪರೀಕ್ಷಿಸಿದರು. ಅವರೇ ಆಶ್ಚರ್ಯ ಪಡುವ ರೀತಿಯಲ್ಲಿ ಫಲಿತಾಂಶ ಬರಲಾರಂಭಿಸಿತು. ಈ ಕಾರಣಗಳಿಗಾಗಿಯೇ ಮುಂತಾಕ್ ಅವರನ್ನು ಕೇವಲ ಛಾಯಾಗ್ರಾಹಕ ಎಂದು ಗುರುತಿಸುವ ಬದಲು `ಫೋಟೊ- ಎಂಜಿನಿಯರ್' ಎಂದು ಕರೆಯುವುದು ಸೂಕ್ತ. ಛಾಯಾಗ್ರಾಹಕನಾಗಿ ಬೀದರ್‌ನಲ್ಲಿ ಜನಪ್ರಿಯನಾಗಿದ್ದರೂ ತನ್ನ ಕ್ಯಾಮರಾ ಮೂಲಕ `ದೊಡ್ಡ ಗ್ರೂಪ್ ಫೋಟೊ' ತೆಗೆಯಬಹುದು ಎಂದಾಗ ಬಹಳಷ್ಟು ನಂಬಲಿಲ್ಲ. ಕೊನೆಗೂ ಅವರು ಬೀದರ್ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. 100 ಜನರ ಸಮೂಹವನ್ನು ಕ್ಲಿಕ್ಕಿಸಿದ ನಂತರ ಮುಂತಕಾ ಅವರಿಗೆ ತಮ್ಮ ಮೇಲೆಯೇ ಭರವಸೆ ಮೂಡಲು ಆರಂಭವಾಯಿತು. ನಂತರ ಕಾಲೇಜೊಂದರ 300 ವಿದ್ಯಾರ್ಥಿಗಳ ಗ್ರೂಪ್ ಫೋಟೊ ತೆಗೆದರು. ಮುಂತಾಕ ಅವರ ಸಾರ್ವಜನಿಕವಾಗಿ ತಮ್ಮ ಗ್ರೂಪ್ ಫೋಟೊ ಕೌಶಲ್ಯ ತೋರಿಸುವ ಅವಕಾಶ ಸಿಕ್ಕದ್ದು 1994ರಲ್ಲಿ. ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ೩೦೦ ಜನ ಶಾಸನ ಸಭೆಯ ಸದಸ್ಯರ ಚಿತ್ರ ಸೆರೆಹಿಡಿದರು. ಆ ಚಿತ್ರದಲ್ಲಿ ವಿಧಾನಸೌಧದ ಜೊತೆಗೆ ಹೈಕೋರ್ಟ್‌ ಕೂಡ ದಾಖಲಾಗಿದೆ.ಇಂತಹ ಅದ್ಭುತ ಕ್ಯಾಮರಾ ತನ್ನ ಸಂಗ್ರಹದಲ್ಲಿರಲಿ ಎಂದು ಮುಂಬೈನ ಛಾಯಾಗ್ರಹಣ ಮ್ಯೂಸಿಯಂ ಈ ಕ್ಯಾಮರಾಕ್ಕೆ ಎರಡು ಲಕ್ಷ ರೂಪಾಯಿ ಕೊಡಲು ಮುಂದೆ ಬಂದಿತ್ತು. ಆದರೆ, ಮುಂತಕಾ ಹಣಕ್ಕಾಗಿ ಅದನ್ನು ತನ್ನಿಂದ ಬೇರ್ಪಡಿಸಿಕೊಳ್ಳಲು ಸಿದ್ಧರಿಲ್ಲ. ಮುಂತಕಾ ಅವರ ಬಳಿ ಕೇವಲ ಅದೊಂದೇ ಕ್ಯಾಮರಾ ಇಲ್ಲ. ಅತ್ಯಂತ ಹಳೆಯ ಕ್ಯಾಮರಾಗಳಿಂದ ಹಿಡಿದು ಅತ್ಯಾಧುನಿಕ ಡಿಜಿಟಲ್ ಕ್ಯಾಮರಾಗಳು ಅವರ ಸಂಗ್ರಹದಲ್ಲಿವೆ.ವಿವಿಧ ಕಂಪೆನಿಗಳಿಂದ ಬೇರೆ ಬೇರೆ ಕಾಲದಲ್ಲಿ ತಯಾರಾದ 100ಕ್ಕೂ ಹೆಚ್ಚು ಕ್ಯಾಮರಾಗಳನ್ನು ಮುಂತಾಕ್ ಖರೀದಿಸಿದ್ದಾರೆ. ಒಂದು ಕ್ಯಾಮರಾದ ಬಿಡಿಭಾಗ ಮತ್ತೊಂದಕ್ಕೆ ಹಾಕುವುದು ಹಾಗೂ ಒಂದರ ಲೆನ್ಸ್ ಮತ್ತೊಂದಕ್ಕೆ ಹಾಕಿ `ಪ್ರಯೋಗ' ಮಾಡುವ ಹವ್ಯಾಸ ಅವರದು. ಆ ಎಲ್ಲ ಕ್ಯಾಮರಾಗಳನ್ನು ಅವುಗಳ ಮೂಲ ಸ್ವರೂಪದಲ್ಲಿ ನೋಡುವುದೇ ಕಷ್ಟ. ಮುಂತಕಾ ಅವರ ತಂದೆ ನಿಜಾಂರ ಕಾಲದಲ್ಲಿ ಪೊಲೀಸ್ ಫೋಟೊಗ್ರಾಫರ್ ಆಗಿದ್ದರು. ತಂದೆಯಿಂದ ಬಳುವಳಿಯಾಗಿ ಬಂದ ಕಲೆಯನ್ನು ಮುಂದುವರೆಸಿದ ಮುಂತಕಾ ಅವರು ಅದನ್ನು ಬೆಳೆಸಿದರು. ಅವರ ಸಂಗ್ರಹದಲ್ಲಿರುವ ಅಪರೂಪದ ನೆಗೆಟಿವ್ ಮತ್ತು ಫೋಟೊಗಳನ್ನು ನೋಡುವುದೇ ಮೈ ನವಿರೇಳಿಸುವ ಅನುಭವ. ಗಾಜಿನ ಮೇಲೆ ಸಿಲ್ವರ್ ನೈಟ್ರೇಟ್ ಲೇಪಿಸಿ ಮಾಡಲಾದ ನೆಗೆಟಿವ್‌ಗಳೂ ಅವರ ಸಂಗ್ರಹದಲ್ಲಿವೆ. ಬಹುತೇಕ ಎಲ್ಲ ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ರಾಷ್ಟ್ರಪತಿಗಳ ಛಾಯಾಚಿತ್ರಗಳನ್ನು ಮುಂತಾಕ್ ಸೆರೆ ಹಿಡಿದಿದ್ದಾರೆ. ಬೀದರ್ ವಿಮಾನ ನಿಲ್ದಾಣದಲ್ಲಿ ಕ್ಲಿಕ್ಕಿಸಿದ ನೆಹರೂ ಚಿತ್ರ ಮುಂತಕಾ ಅವರ ಅತ್ಯಂತ ಮೆಚ್ಚಿನ ಫೋಟೊ. ಹಾಗೆಯೇ ಲಾತೂರನಲ್ಲಿ ಸಂಭವಿಸಿದ ಭೂಕಂಪದ ಛಾಯಾಚಿತ್ರಗಳು ಮತ್ತು ತಡೋಳದ ಹತ್ತಿರ ನಡೆದ ಬೆಂಕಿ ದುರಂತದ ಚಿತ್ರಗಳು ಕರುಳು ಕಿವುಚುವಂತಿವೆ. ಹಾಗೆಯೇ ಬೀದರನ ಐತಿಹಾಸಿಕ ಸ್ಮಾರಕಗಳನ್ನು ಮುಂತಾಕ್ ಸೆರೆ ಹಿಡಿದಿರುವ ರೀತಿಯೇ ಅನನ್ಯ. `ಒಂದು ಕಾಲಕ್ಕೆ ಮನಸ್ಸು ಮಾಡಿದ್ದರೆ ಮುಂಬೈ ಅಥವಾ ಹೈದಾರಾಬಾದ್‌ಗೆ ಹೋಗಿ ನೆಲೆಸಬಹುದಿತ್ತು. ಆದರೆ, ಬೀದರ್ ಮೇಲಿನ ಪ್ರೀತಿ ಮತ್ತು ಈ ನೆಲದ ಮೇಲಿನ ಅಭಿಮಾನ ನನ್ನನ್ನು ಹೊರಗೆ ಹೋಗಲು ಬಿಡಲಿಲ್ಲ. ಎಲ್ಲಿಗೆ ಹೋದರು ಎರಡ್ಮೂರು ದಿನದಲ್ಲಿ ಬೀದರ್‌ಗೆ ಮರಳುತ್ತೇನೆ' ಎನ್ನುತ್ತಾರೆ ಮುಂತಕಾ. ಅವರ ಸಹೋದರ ಮತ್ತು ಕುಟುಂಬದ ಸದಸ್ಯರೆಲ್ಲ ವಿದೇಶದಲ್ಲಿದ್ದಾರೆ ಒಬ್ಬಂಟಿಯಾಗಿ ವಾಸಿಸುವ ಅವರ ಜೊತೆಗಾರ ಎಂದರೆ ಕ್ಯಾಮರಾ ಮತ್ತು ಅವುಗಳ ಲೆನ್ಸ್‌ಗಳು. 70 ವಸಂತಗಳನ್ನು ಪೂರೈಸ್ದಿದರೂ ಕ್ಯಾಮರಾಬ್ಯಾಗ್ ಹೆಗಲಮೇಲೆ ಹಾಕಿಕೊಂಡು ಸೈಕಲ್ ಮೇಲೆ ಸಂಚರಿಸುತ್ತ ಚಿತ್ರ ಕ್ಲಿಕ್ಕಿಸುವ ಹವ್ಯಾಸ ಕೈ ಬಿಟ್ಟಿಲ್ಲ. ಸಂಕೋಚ ಸ್ವಭಾವದ ಮುಂತಕಾ ಅವರು ಸದಾ ಎಲೆ ಮರೆಯ ಕಾಯಿಯಂತೆಯೇ ಉಳಿಯಬಯಸುತ್ತಾರೆ. ಅವರು ತಮ್ಮ ಬಗ್ಗೆ ಮತ್ತು ತಮ್ಮ ಬಳಿ ಇರುವ ಕ್ಯಾಮರಾಗಳ ಕುರಿತು ಮಾತನಾಡುವುದೇ ಅಪರೂಪ. ಅಂತಹ ಮುಂತಕಾ ಅವರಿಗೆ ಆಶ್ಚರ್ಯಕರ ರೀತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಬಂದಿದೆ.

Thursday, November 13, 2008

ಜೌಗು ನೆಲದಲ್ಲಿ ಬಂಪರ್‌ ಬೆಳೆ



ಕೇವಲ 15ವರ್ಷಗಳ ಹಿಂದೆ ಬೆಳೆ ಬೆಳೆಯಲು ಉಪಯುಕ್ತವಲ್ಲದ ಜೌಗು ಪ್ರದೇಶವಾಗಿದ್ದ ನೆಲ ಇಂದು ರಾಜ್ಯದಲ್ಲಿಯೇ ಅತಿ ಹೆಚ್ಚು ಕಡಲೆ ಇಳುವರಿ ತರುತ್ತಿದೆ. ಕಾರಂಜಾ ನದಿಗುಂಟ ಇರುವ ಕಾರಣಕ್ಕಾಗಿಯೇ ಭಾಲ್ಕಿ ತಾಲ್ಲೂಕಿನ ಕುರುಬಖೇಳಗಿಯ ಶೇಷಪ್ಪ ಬಿರಾದಾರ ಅವರಿಗೆ ಸೇರಿದ ಬೀಳು ಬಿಡಲಾಗಿತ್ತು. ಆಗಾಗ ಬರುವ ನೆರೆ ಮತ್ತು ಅತಿ ನೀರಿನ ಕಾರಣದಿಂದಾಗಿ ಬಿತ್ತಿ ಬೆಳೆಯಲು ಸಾಧ್ಯವಿಲ್ಲದ ಹೊಲವಾಗಿತ್ತು. ದನಕರುಗಳಿಗೆ ಮೇವಾದರೂ ಆಗಲಿ ಎನ್ನುವ ಕಾರಣಕ್ಕಾಗಿ ಆ ಹೊಲವನ್ನು ಬೀಳು ಬಿಡಲಾಗಿತ್ತು.
ಹರಿಯುತ್ತಿದ್ದ ಕಾರಂಜಾ ನದಿಗೆ ಅಡ್ಡಗಟ್ಟಿ ಜಲಾಶಯ ನಿರ್ಮಿಸಿದ ಮೇಲೆ ನದಿಯ ಹರಿವು ನಿಂತೇ ಹೋಯಿತು. ನದಿ ನೀರು ಬರುವುದು ನಿಂತ ಮೇಲೆ ಹೊಲಕ್ಕೆ ಜೀವ ಬಂತು. ಹಿಂದೆ ನದಿಯ ನೀರಿನಗುಂಟ ಬಂದಿದ್ದ ಮೆಕ್ಕಲು ಮಣ್ಣು ಹೊಲವನ್ನು ಫಲವತ್ತಾಗಿಸಿತ್ತು. ಅದೇ ಹೊಲದಲ್ಲಿ ಕೃಷಿ ಆರಂಭಿಸಲು ನಿರ್ಧರಿಸಿದರು ಶೇಷಪ್ಪ ಬಿರಾದಾರ.
ಕೆಲವು ವರ್ಷಗಳ ಸತತ ಪ್ರಯತ್ನದ ನಂತರ ಏನನ್ನೂ ಬೆಳೆಯಲು ಸಾಧ್ಯವಿಲ್ಲದ ಜಮೀನಿನಲ್ಲಿ ಸುತ್ತಲ ಹತ್ತು ಹಳ್ಳಿಯ ಯಾರೊಬ್ಬರ ಹೊಲದಲ್ಲಿಯೂ ಇರದಷ್ಟು ಪ್ರಮಾಣದ ಇಳುವರಿ ಬರಲಾರಂಭಿಸಿತು. ಬಿತ್ತಿದ ವಸ್ತು ಏನೇ ಆದರೂ ಬಂಪರ್ ಇಳುವರಿ ತರುವ ಅದೃಷ್ಟಶಾಲಿ ಹೊಲವಾಯಿತು.
ಮಳೆನೀರನ್ನೇ ಆಶ್ರಯಿಸಿ ಕೃಷಿ ಮಾಡುವುದನ್ನು ಮುಂದುವರೆಸಿದ ಶೇಷಪ್ಪ ಅವರು ಕೆಲ ವರ್ಷಗಳ ನಂತರ ಕಡಲೆ ಆ ನೆಲಕ್ಕೆ ಸೂಕ್ತ ಎಂದು ನಿರ್ಧರಿಸಿದರು. ಅದಾದ ಮೇಲೆ ಕಡಲೆಯ ಬೆಳೆಯು ಅವರಿಗೆ ಕೈತುಂಬ ಹಣ ಮಾತ್ರವಲ್ಲದೇ ಹೆಸರು, ಪ್ರಶಸ್ತಿ, ಕೀರ್ತಿ ತರಲಾರಂಭಿಸಿತು. ರಾಜ್ಯದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ಕಡಲೆ ಬೆಳೆಯುವುದಕ್ಕಾಗಿ ರಾಜ್ಯ ಸರ್ಕಾರ ನೀಡುವ ಕೃಷಿ ಪ್ರಶಸ್ತಿ ಈ ಹೊಲದಲ್ಲಿ ಬೆಳೆದ ಕಡಲೆಗೆ ಬಂದಿದೆ. 2004-05ರಲ್ಲಿ ಈ ಹೊಲದಲ್ಲಿಯೇ ಕೃಷಿ ಮಾಡಿದ್ದಕ್ಕಾಗಿ ಪ್ರಕಾಶ ಬಿರಾದರ ಕೃಷಿ ಪ್ರಶಸ್ತಿಗೆ ಭಾಜನರಾಗಿದ್ದರು. ಅದರ ನಂತರದ ವರ್ಷದಲ್ಲಿ ಅವರ ತಂದೆ ಶೇಷಪ್ಪ ಬಿರಾದಾರ ಅವರಿಗೂ 2005-06ನೇ ಸಾಲಿನ ಕಡಲೆ ಬೆಳೆಗಾಗಿ ಕೃಷಿ ಪ್ರಶಸ್ತಿ ಸಂದಿದೆ. ಒಂದೇ ಕುಟುಂಬಕ್ಕೆ ಸೇರಿದ ಇಬ್ಬರಿಗೆ ಕೃಷಿ ಪ್ರಶಸ್ತಿ ಬಂದಿರುವುದು ಅಪರೂಪ. ಅದರಲ್ಲೂ ಸತತ ಎರಡು ಬಾರಿ ಪ್ರಶಸ್ತಿ ಪಡೆದ ಉದಾಹರಣೆ ರಾಜ್ಯದಲ್ಲಿಯೇ ಮತ್ತೊಂದಿಲ್ಲ.
ರಾಜ್ಯ ಸರ್ಕಾರವು ಹೆಕ್ಟೇರ್‌ವಾರು ಅತಿ ಹೆಚ್ಚು ಇಳುವರಿ ಬರುವಂತೆ ಕೃಷಿ ಮಾಡುವ ರೈತರಿಗೆ ಕೃಷಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಪ್ರಶಸ್ತಿ ಪುರಸ್ಕೃತ ರೈತನಿಗೆ 30 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುತ್ತದೆ. ಪ್ರಕಾಶ ಬಿರಾದಾರ ಅವರಿಗೆ ಪ್ರಶಸ್ತಿ ಬಂದ ವರ್ಷದಲ್ಲಿ ಹೆಕ್ಟೇರ್‌ಗೆ 28 ಕ್ವಿಂಟಾಲ್ ಕಡಲೆ ಬೆಳೆಯಲಾಗಿದ್ದರೆ ಅವರ ತಂದೆ ಶೇಷಪ್ಪ ಅವರಿಗೆ ಪ್ರಶಸ್ತಿ ಬಂದ ವರ್ಷದ ಕಡಲೆಯ ಇಳುವರಿ ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿ ಹೆಕ್ಟೇರ್‌ಗೆ 33ಕ್ವಿಂಟಾಲ್ ಬೆಳೆ ಬಂದಿದೆ.
`ಕರ್ನಾಟಕ ರಾಜ್ಯ ಬೀಜ ನಿಗಮವು ಮಾರಾಟ ಮಾಡುವ ಅಣ್ಣಿಗೇರಿ ಫೌಂಡೇಶನ್ ತಳಿಯ ಬೀಜಗಳನ್ನೇ ಬಿತ್ತುತ್ತೇವೆ. ಆಗಾಗ ಸದಿ (ಕಳೆ) ತೆಗೆಸುತ್ತೇವೆ. ಗೊಬ್ಬರದ ಪ್ರಮಾಣ ಕೂಡ ಹೆಚ್ಚಿಗೆ ನೀಡುವುದಿಲ್ಲ. ಹುಳುಗಳ ನಿಯಂತ್ರಣಕ್ಕಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಸೂಚಿಸುವ ಕೀಟನಾಶಕಗಳನ್ನು ಬಳಸುತ್ತೇವೆ' ಎಂದು ಶೇಷಪ್ಪ ಬಿರಾದಾರ ಹೇಳುತ್ತಾರೆ.
`ಹೊಲದ ನಮಗಿರುವುದು ನಿಜವಾಗಿಯೂ ಪುಣ್ಯ ಸರ್. ನಮಗೆ ಒಳ್ಳೆ ಬೆಳೆ ಬರುತ್ತಿದೆ. ಅದರಿಂದ ಹಣ- ಹೆಸರು ಎರಡೂ ಬಂದಿದೆ. ಇದಕ್ಕೆಲ್ಲ ಭಾಲ್ಕಿ ತಾಲ್ಲೂಕಿನ ಮತ್ತು ಬೀದರ್ ಜಿಲ್ಲೆಯ ಕೃಷಿ ಅಧಿಕಾರಿಗಳ ಸಲಹೆ- ಸೂಚನೆಗಳೇ ಕಾರಣ. ಅವರ ಸಲಹೆಯಿಂದಲೇ ನಾವು ಒಳ್ಳೆಯ ಬೆಳೆ ತೆಗೆಯುವುದು ಸಾಧ್ಯವಾಗಿದೆ' ಎಂದು ಪ್ರಶಸ್ತಿ ಪಡೆದಿರುವ ಶೇಷಪ್ಪ ಬಿರಾದಾರ ಅವರ ಪುತ್ರ ಪ್ರಕಾಶ ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಸತತ ಎರಡು ವರ್ಷ ಅರಸಿ ಬಂದ ಪ್ರಶಸ್ತಿಯಿಂದ ತೃಪ್ತರಾಗಿರುವ ಬಿರಾದಾರ ಕುಟುಂಬ ಈ ಬಾರಿ ಅದೇ ಹೊಲದಲ್ಲಿ `ಕಾಬೂಲ್ ಚನಾ' ಎಂದು ಕರೆಯಲಾಗುವ ದೊಡ್ಡಗಾತ್ರದ ಬಿಳಿಬಣ್ಣದ ಕಡಲೆ ಬಿತ್ತಲಾಗಿದೆ. ಕಣ್ಮನ ತಣಿಸುವ ಹಸಿರು ಹೊಲದ ಮಧ್ಯೆ ಪ್ರತಿ ಗಿಡಕ್ಕೆ ಇರುವ ನೂರಾರು ಕಡಲೆ ಕಾಯಿಗಳು ಗಿಡದ ಸೊಬಗು ಹೆಚ್ಚಿಸಿವೆ. ಈ ವರ್ಷವೂ ಒಳ್ಳೆಯ ಇಳುವರಿ ನೀಡುವ `ಭರವಸೆ' ನೀಡುತ್ತಿವೆ.
ಚಿತ್ರ: ಟಿ.ಗೋಪಿಚಂದ

ದಶಮಾನೋತ್ಸವ ಪೂರ್ಣಗೊಳಿಸಿದ `ನಾದವೇದಿಕೆ'

ಹವ್ಯಾಸಿ ಸಂಗೀತ ಆಸಕ್ತರು ಹುಟ್ಟು ಹಾಕಿದ ಪುಟ್ಟ ನಾದದ ತೊರೆಯೊಂದು ಅವಿರತವಾಗಿ ಕಳೆದ ಹತ್ತು ವರ್ಷಗಳಿಂದ ಹರಿದು ಬರುತ್ತಿದೆ. ಶಾಸ್ತ್ರೀಯ ಸಂಗೀತಕ್ಕೇ ಪ್ರಾಧಾನ್ಯ ನೀಡುವ ಬೀದರ್ ಜಿಲ್ಲೆಯ ಹುಮನಾಬಾದ್ನ `ನಾದ ವೇದಿಕೆ' ಸಂಗೀತದ ಆಸಕ್ತಿ ಉಳಿಸಿ ಬೆಳೆಸುವಲ್ಲಿ ಮಾಡಿದ ಸಾಧನೆ ಅನನ್ಯ ಮತ್ತು ಅಪೂರ್ವ. ಸಂಗೀತದಲ್ಲಿ ಆಸಕ್ತಿ ಇರುವ ಹತ್ತಾರು ಜನ ತಮ್ಮ `ಪಾಕೆಟ್ ಮನಿ' ಆರಂಭಿಸಿದ ಈ ಸಂಸ್ಥೆ ಮಾಡಿದ ಕೆಲಸ ಗಮನಾರ್ಹ.
`ನಾದ ವೇದಿಕೆ'ಯಲ್ಲಿ ಇರುವ ಬೆರಳೆಣಿಕೆಯಷ್ಟು ಜನರಲ್ಲಿ ಬಹುತೇಕ ಜನ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸದಲ್ಲಿ ಇರುವವರು. ಅದರಲ್ಲೂ ಉಪನ್ಯಾಸಕ ಅಥವಾ ಶಿಕ್ಷಕ ಹ್ದುದೆಯಲ್ಲಿ ಇರುವವರು. ನಿತ್ಯದ ನೂರು ಜಂಜಡಗಳ ನಡುವೆಯೇ ಅಲ್ಪ ಆದಾಯದಲ್ಲಿಯೇ ಒಂದಷ್ಟು ಹಣ ಉಳಿಸಿಟ್ಟು ವೇದಿಕೆಯ ಕಾರ್ಯಕ್ರಮಗಳಿಗೆ ನೀಡುತ್ತಾರೆ. ಅದೇ ವೇದಿಕೆಯ ಚಟುವಟಿಕೆಗಳಿಗೆ ಪ್ರಮುಖ ಆಧಾರ.
ಸರ್ಕಾರದಿಂದ ಅಥವಾ ಉದ್ಯಮಿಗಳಿಂದ ಆರ್ಥಿಕ ನೆರವು ಪಡೆಯದೇ ಸಂಗೀತ ಕಚೇರಿಗಳನ್ನು ನಡೆಸುವ ಉದ್ದೇಶದಿಂದ ಆರಂಭವಾದ ಈ ಸಂಗೀತ ಸಂಸ್ಥೆ ನಂತರದ ದಿನಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ಸಂಗೀತಗಾರರಿಗೆ `ಸಂಗೀತ ಸಿರಿ' ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿತು. ಎಲೆ ಮರೆಯ ಕಾಯಿಯಂತೆ ಪ್ರಚಾರ- ಪ್ರಭಾವಗಳಿಂದ ದೂರ ಉಳಿದ ಕಲಾವಿದರಿಗೇ ಈ ವೇದಿಕೆಯಲಿ ಮನ್ನಣೆ.
ಹುಮನಾಬಾದ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿರುವ ಎ.ಎಸ್. ವಠಾರ ಇಡೀ ವೇದಿಕೆಯ ಆಧಾರ ಸ್ತಂಭ. ಅವರೇ ಸದ್ಯದ ಅಧ್ಯಕ್ಷರು ಕೂಡ. ಹಾಗೇ ನೋಡಿದರೆ ವೇದಿಕೆಯಲ್ಲಿರುವ ಏಕಮಾತ್ರ ಸಂಗೀತಗಾರ ಕೂಡ ಅವರೊಬ್ಬರೇ. ಬಾಕಿಯವರೆಲ್ಲ ಆಸಕ್ತ ಕೇಳುಗರು- ಶ್ರೋತೃಗಳು. ವಠಾರ ಅವರ ನಿರ್ದೇಶನದಲ್ಲಿ `ನಾದ ವೇದಿಕೆ'ಯ ಕಾರ್ಯಕ್ರಮಗಳು ರೂಪುಗೊಳ್ಳುತ್ತವೆ. ಆದರೂ, ಇಡೀ ವರ್ಷ ಯಾವ್ಯಾವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಮತ್ತು ಯಾವ ಕಲಾವಿದರನ್ನು ಕರೆಯಿಸಬೇಕು ಎನ್ನುವ ಅಂತಿಮ ತೀರ್ಮಾನ `ಸಭೆ'ಯಲ್ಲಿಯೇ ಆಗುತ್ತದೆ.
ವರ್ಷವಿಡೀ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನಡೆಸುವ `ನಾದ ವೇದಿಕೆ' ಪ್ರತಿವರ್ಷದ ಏಪ್ರಿಲ್‌ನಲ್ಲಿ `ಪಂಡಿತ್ ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ' ಸಮಾರಂಭ ಏರ್ಪಡಿಸುತ್ತದೆ. ಅದು ವೇದಿಕೆ ನಡೆಸುವ ವರ್ಷದ ಅತೀ ದೊಡ್ಡ ಕಾರ್ಯಕ್ರಮ. ಆಹೋರಾತ್ರಿ ನಡೆಯುವ ಸಂಗೀತ ಸಮಾರಾಧನೆಯು ಕೇಳುಗರನ್ನು ಗಾಂಧರ್ವಲೋಕಕ್ಕೆ ಕರೆದೊಯ್ಯುತ್ತದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಹಿರಿಯ ಕಲಾವಿದರಿಂದ ಗಾಯನ- ವಾದನ ನಡೆಸಲಾಗುತ್ತದೆ.
ಧಾರವಾಡದ ಪಂ. ಎಂ. ವೆಂಕಟೇಶಕುಮಾರ್, ಡಿ. ಕುಮಾರದಾಸ, ರಘುನಾಥ ನಾಕೋಡ್, ಶ್ರೀಪಾದ ಹೆಗಡೆ, ಗುಲ್ಬರ್ಗದ ಗೀತಾ ಚಕ್ರವತರ್ಿ, ಶಾಂತಲಿಂಗ ದೇಸಾಯಿ, ಫಕಿರೇಶ ಕಣವಿ, ಬೆಂಗಳೂರಿನ ಸಂಗೀತಾ ಕಟ್ಟಿ ಸೇರಿದಂತೆ 25ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ತಮ್ಮ ಸಂಗೀತ ಸುಧೆ ಹರಿಸಿದ್ದಾರೆ. ಕೇವಲ ಸಂಗೀತ ಕಾರ್ಯಕ್ರಮಗಳನ್ನು ಮಾತ್ರ ನಡೆಸದೆ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವಲ್ಲಿಯೂ `ನಾದ ವೇದಿಕೆ' ಹಿಂದೆ ಬಿದ್ದಿಲ್ಲ. ಪ್ರತಿವರ್ಷ ಸಂಗೀತ ಸ್ಪರ್ಧೆ ನಡೆಸುವ ಮೂಲಕ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಸಂಗೀತಾಸಕ್ತಿ ಬೆಳೆಸುವಲ್ಲಿ ವೇದಿಕೆ ಕಾರ್ಯನಿರತವಾಗಿದೆ.
1996ರಲ್ಲಿ ಆರಂಭವಾದ ನಾದವೇದಿಕೆಯ ಮೊದಲ ಅಧ್ಯಕ್ಷ ಕೇಶವರಾವ್ ವಾಘಮಾರೆ. ನಂತರ ಆ ಸ್ಥಾನವನ್ನು ಕೆ.ಎಂ. ಮ್ಯಾಗೇರಿ, ಎಸ್.ಎಸ್.ಪಾರಾ ವಹಿಸಿದ್ದರು. ವೇದಿಕೆ ಆರಂಭವಾದ ಮೊದಲ ವರ್ಷದಿಂದಲೇ `ಸಂಗೀತ ಸಿರಿ' ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಲಾಯಿತು. ತಾಳಿಕೋಟೆಯ ಹಿರಿಯ ಸಂಗೀತಗಾರ ಪ್ರಭುದೇವ ಸಾಲಿಮಠ ಅವರು ಪ್ರಶಸ್ತಿಗೆ ಭಾಜನರಾದ ಮೊದಲ ಸಂಗೀತಗಾರ. ನಂತರದ ವರ್ಷಗಳಲ್ಲಿ ಗೊಬ್ಬೂರು ಚೆನ್ನವೀರಪ್ಪ ಗವಾಯಿ, ಘಾಟಬರೋಳದ ಭೀಮಣ್ಣ ಪಂಚಾಳ, ಬೀದರ್ನ ಈಶ್ವರಪ್ಪ ಪಂಚಾಳ, ಧಾರವಾಡದ ಚಂದ್ರಶೇಖರ ಪುರಾಣಿಕಮಠ, ಭಾಲ್ಕಿಯ ಶೇಖ್ ಹನ್ನುಮಿಯಾ, ವಿಜಾಪುರದ ಚೆನ್ನವೀರ ಬನ್ನೂರು, ಲಾತೂರಿನ ಶಾಂತಾರಾಮ ಚಿಗರಿ, ಬಾಗಲಕೋಟೆಯ ಹಣಮಂತಪ್ಪ ಬಡಿಗೇರ ಅವರಿಗೆ ಸಂದಿದೆ.
2003ರಲ್ಲಿ ಗದಗಿನ ಪುಣ್ಯಾಶ್ರಮದ ಪಂ.ಪುಟ್ಟರಾಜ ಗವಾಯಿಗಳ ಸಾನ್ನಿಧ್ಯದಲ್ಲಿ ನಡೆಸಿದ ಸಂಗೀತ ಸಂಜೆ ವೇದಿಕೆ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದು. ಸಂಗೀತಾಸಕ್ತಿ ಬೆಳೆಸುವುದಕ್ಕಾಗಿ ಸಂಗೀತದ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನೂ ಸಂಸ್ಥೆ ನಡೆಸುತ್ತ ಬಂದಿದೆ. ಜಾತಿ ಮತ, ಧರ್ಮಗಳ ವರ್ಗೀಕರಣವಿಲ್ಲದೇ ಸಂಗೀತವನ್ನೇ ಧರ್ಮವನ್ನಾಗಿಸಿಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ `ನಾದವೇದಿಕೆ' ದಶಮಾನದ ಸಂಭ್ರಮವನ್ನು ಮತ್ತಷ್ಟು ಬೆಳೆಯಲು ಬಳಸಿಕೊಳ್ಳಲಿದೆ.

Saturday, October 18, 2008

’೧೮೫೭ರ ಸಿಪಾಯಿದಂಗೆ’ ಮತ್ತು ’ಭಾಲ್ಕಿ ಪಿತೂರಿ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಸರಿಯಾಗಿ ೬೧ ವರ್ಷಗಳು ಪೂರ್ಣಗೊಂಡಿವೆ. ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೋರಾಟ ಆರಂಭವಾಗಿ ೧೫೧ ವರ್ಷಗಳಾಗಿವೆ. ಸತತ ೯೦ ವರ್ಷಗಳ ಕಾಲ ನಡೆದ ಹೋರಾಟದಲ್ಲಿ ಭಾಗಿಯಾದ ಬಹುತೇಕರು `ಕಾಲ'ನ ಮನೆ ಸೇರಿದ್ದಾರೆ. ಹೊರಾಟ ಮತ್ತು ಅದರ ನೆನಪುಗಳು ಇತಿಹಾಸದ ಪುಟ ಸೇರಿವೆ. ಹಲವು ಪ್ರಸಂಗ- ಘಟನೆಗಳು ಪುಸ್ತಕದ ಪುಟಗಳಲ್ಲಿ ಮರೆತು ಹೋಗಿವೆ. ಮರೆತು ಹೋದ, ಆದರೆ, ಮರೆಯಬಾರದ ಒಂದು ಘಟನೆಯ ವಿವರ ಇಲ್ಲಿದೆ-
****

೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಬೀದರ್ ಜಿಲ್ಲೆಯ ಭಾಲ್ಕಿಗೂ ಏನು ಸಂಬಂಧ? ವಿದೇಶಿ ವಿದ್ವಾಂಸರು `ಸಿಪಾಯಿ ದಂಗೆ' ಗುರುತಿಸುವ `ಮೊದಲ ಸ್ವಾತಂತ್ರ್ಯ ಸಂಗ್ರಾಮ' ಆರಂಭವಾದದ್ದು ಸರಿಯಾಗಿ ೧೫೧ ವರ್ಷಗಳ ಹಿಂದೆ. ಸತತ ಹತ್ತು ವರ್ಷಗಳ ಕಾಲ ದೇಶದ ವಿವಿಧ ಕಡೆಗಳಲ್ಲಿ ನಡೆದ ದಂಗೆ- ಪಿತೂರಿಗಳು ಕಂಪೆನಿ ಸರ್ಕಾರವನ್ನು ಕಂಗೆಡಿಸ್ದಿದವು. ಸರಿಯಾಗಿ ಹತ್ತು ವರ್ಷಗಳ ನಂತರ `ಭಾಲ್ಕಿ ಪಿತೂರಿ'ಯನ್ನು ವಿಫಲಗೊಳಿಸುವ ಮೂಲಕ ಬ್ರಿಟಿಷರು ಮೊದಲ ಹೋರಾಟವನ್ನು ಸಂಪೂರ್ಣವಾಗಿ ಕೊನೆಗೊಳಿಸುವಲ್ಲಿ ಯಶಸ್ವಿಯಾದರು.
ಆ ಕಥೆಯ ಕೆಲವು ಐತಿಹಾಸಿಕ ವಿವರಗಳು ಇಲ್ಲಿವೆ-
೧೮೫೭ಮೇ ೧೦ರಂದು ಮೀರತ್‌ನಲ್ಲಿ ಮತ್ತು ಅಂಬಾಲಾಗಳ ಬ್ರಿಟಿಷ್ ಸೇನಾ ಪಡೆಯಲ್ಲಿ ಆರಂಭವಾದ ದಂಗೆಯು ರಾಷ್ಟ್ರದ ಹಲವೆಡೆಗಳಲ್ಲಿ ಪಸರಿಸಿತು. ಭಾರತೀಯರು ನಡೆಸಿದ ೧೮೫೭ರ ಹೋರಾಟದ ತಕ್ಷಣದ ಕಾರಣ ಬಂದೂಕಿನ ತೋಟಾಗಳಿಗೆ `ಹಂದಿ ಮತ್ತು ಗೋವಿನ ಕೊಬ್ಬು ಸವರಿದ್ದಾರೆ' ಎಂಬ ವದಂತಿ. ಸೈನಿಕರಲ್ಲಿ ಕ್ಷಿಪ್ರಗತಿಯಲ್ಲಿ ಹರಡಿದ ಈ ಹೋರಾಟವನ್ನು ತಡೆಯುವಲ್ಲಿ ಬ್ರಿಟಿಷ್ ಅಧಿಕಾರಿಗಳು ಯಶಸ್ವಿಯಾದರು.
`ಸಿಪಾಯಿ ದಂಗೆ' ಎಂದು ಕರೆಯಲಾಗುವ ೧೮೫೭ರ ಹೋರಾಟ ಕೇವಲ ಸೈನಿಕರ ಹಠಾತ್ ಪ್ರತಿಕ್ರಿಯೆ ಆಗಿರಲಿಲ್ಲ. ಅದಕ್ಕೆ ಪೂರ್ವಭಾವಿಯಾಗಿ ಬ್ರಿಟಿಷ್ ದುರಾಡಳಿತದ ವಿರುದ್ಧ ಉತ್ತರ ಭಾರತ ತಾತ್ಯಾಟೋಪಿ ಮತ್ತು ಪುಣೆಯ ನಾನಾ ಸಾಹೇಬ್ ವ್ಯವಸ್ಥಿತ ಯೋಜನೆ ರೂಪಿಸಿದ್ದರು. ಅದು, ಸೈನಿಕರ ರೂಪದಲ್ಲಿ ಹಠಾತ್ ಆಗಿ ಸಿಡಿದದ್ದರಿಂದ `ಯೋಜನೆ' ಬುಡಮೇಲಾಯಿತು. ಆದರೆ, ಬ್ರಿಟಿಷರ ವಿರುದ್ಧ ಸಣ್ಣ ಪುಟ್ಟ ಸಂಸ್ಥಾನಗಳನ್ನು ಒಂದುಗೂಡಿಸುವಲ್ಲಿ ಪೇಶ್ವೆ ನಾನಾ ಸಾಹೇಬ್ ಮತ್ತು ತಾತ್ಯಾಟೋಪಿಯ ಕನಸು ಮಾತ್ರ ಜೀವಂತವಾಗಿ ಉಳಿದಿತ್ತು.
ನಾನಾ ಸಾಹೇಬ್ರ ಅಣ್ಣನ ಮಗ ರಾವ್ ಸಾಹೇಬ್ ಅಂತಹುದೇ ಸಂಚಿನ ಭಾಗವಾಗಿ ೧೮೬೨ರಲ್ಲಿ ತನ್ನ ಸಹಚರರೊಡನೆ ಹೈದರಾಬಾದ್‌ಗೆ ಬರುತ್ತಾನೆ. ಆಗ, ಸುಳಿವು ಅರಿತ ಅವನನ್ನು ಬೆನ್ನಟ್ಟುತ್ತಾರೆ. ತಲೆ ತಪ್ಪಿಸಿಕೊಂಡು ಓಡಿ ಹೋದರೂ ಆಗ್ರಾದಲ್ಲಿ ಸೆರೆ ಸಿಕ್ಕುತ್ತಾನೆ. ಬ್ರಿಟಿಷರು ಅವನನ್ನು ಗಲ್ಲಿಗೆ ಹಾಕುತ್ತಾರೆ.
ಕೆಲವರ್ಷ ಹೈದರಾಬಾದ್‌ನಲ್ಲಿ ಗುಪ್ತವಾಗಿ ಉಳಿಯುವ ರಾವ್ಸಾಹೇಬ್‌ನ ಬೆಂಬಲಿಗ ರಾಮರಾವ್ ತನ್ನ ಸಹಚರರೊಂದಿಗೆ ೧೮೬೭ರಲ್ಲಿ ಬೀದರ್‌ಗೆ ಬರುತ್ತಾನೆ. ಬೀದರ್ ತಾಲ್ಲೂಕಿನ ಅಷ್ಟಿ ಗ್ರಾಮದಲ್ಲಿ `ಭಗವಾ ಧ್ವಜ' ಆರೋಹಣ ನಡೆಸುತ್ತಾನೆ. ಆಗ, ದೇಶಮುಖರು, ಪಟೇಲರು ಬ್ರಿಟಿಷರ ವಿರ್ದುದ ಒಂದಾಗುವಂತೆ ಸತಾರಾದ ಅರಸ ನೀಡಿದ ಪತ್ರ ಅವನ ಜೊತೆಗಿರುತ್ತದೆ.
ನಂತರ ಮರಾಠ ಮತ್ತು ನಿಜಾಂ ಆಡಳಿತ ಅಂಚಿನಲ್ಲಿರುವ ಭಾಲ್ಕಿಯಲ್ಲಿ ಯೋಜನೆ ರೂಪಿಸುವುದಕ್ಕಾಗಿ ಸಭೆ ಸೇರುತ್ತಾರೆ. ಅವರಲ್ಲಿ ಭೀಮರಾವ್, ಬಾಲಕೃಷ್ಣ ಮತ್ತು ವಿಠೋಬಾ ಪ್ರಮುಖರು. ಅದರ ಸುಳಿವು ದೊರೆತ ಬ್ರಿಟಿಷ್ ಅಧಿಕಾರಿಗಳು ಪಿತೂರಿಯನ್ನು ಭೇದಿಸಿ ಎಲ್ಲರನ್ನೂ ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ. ಆ ಘಟನೆಯನ್ನೇ `ಭಾಲ್ಕಿ ಪಿತೂರಿ' ಎಂದು ದಾಖಲಿಸಲಾಗಿದೆ. ಆ ಘಟನೆಯೇ ೧೮೫೭ರ `ಸಿಪಾಯಿ ದಂಗೆ'ಯ ಕೊನೆಯ `ಪಿತೂರಿ' ಎಂದು ಕರ್ನಾಟಕ ಸರ್ಕಾರ ೧೯೭೭ರಲ್ಲಿ ಪ್ರಕಟಿಸಿ ಬೀದರ್ ಜಿಲ್ಲಾ ಗ್ಯಾಸೆಟಿಯರ್‌ನಲ್ಲಿ ದಾಖಲಾಗಿದೆ.
ಹೀಗೆ ೧೮೫೭ರ `ಪ್ರಥಮ ಸ್ವಾತಂತ್ರ್ಯ ಸಂಗ್ರಾಮ'ದ ಕೊನೆಗೊಂಡದ್ದು ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ. ಅದು ೧೮೬೭ರಲ್ಲಿ. `ಭಾಲ್ಕಿ ಪಿತೂರಿ' ಎಂದೇ ಇತಿಹಾಸದ ಪುಟದಲ್ಲಿ ಅದನ್ನು ದಾಖಲಿಸಲಾಗಿದೆ. ೧೮೫೭ರ ಘಟನೆಯನ್ನು ಬ್ರಿಟಿಷ್ ಮತ್ತು ಪಾಶ್ಚಾತ್ಯ ಇತಿಹಾಸ ತಜ್ಞರು `ಸಿಪಾಯಿ ದಂಗೆ' ಎಂದು ದಾಖಲಿಸಿದರೆ, ಭಾರತೀಯ ವಿದ್ವಾಂಸರು `ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ಕರೆಯುತ್ತಾರೆ. ಹಾಗೆಯೇ, ಭಾಲ್ಕಿಯ ಘಟನೆ ಕೂಡ ಬ್ರಿಟಿಷರು ಬರೆದ `ಇತಿಹಾಸ'ದಲ್ಲಿ `ಪಿತೂರಿ' ಎಂದು ದಾಖಲಾಗಿದೆ.

Sunday, October 12, 2008

ಕವಿಗಳು ಮತ್ತು ತಾಜಮಹಲ್



ಚೆಲುವಾಗಿರುವ ತಾಜ್ ಸಹಜವಾಗಿ ಭಾವನಾಜೀವಿಗಳನ್ನು ತನ್ನತ್ತ ಸೆಳೆಯುತ್ತಿದೆ. ಅದರ ಸುತ್ತ ಹರಡಿರುವ ಕತೆ- ದಂತಕತೆಗಳು ಕೂಡ ಅದರ ಸೌಂದರ್ಯವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿವೆ. ತಾಜ್ ಜೊತೆಗೆ ಕವಿಗಳು, ಕಲಾವಿದರು, ಪ್ರೇಮಿಗಳು ಮತ್ತು ರಸಿಕರಿಗೆ ಅತ್ಯಂತ ಭಾವನಾತ್ಮಕ ಸಂಬಂಧ. ಪ್ರತಿಯೊಬ್ಬ ಕವಿಯೂ ಒಂದಲ್ಲ ಒಂದು ಹಂತದಲ್ಲಿ ತಾಜ್ ಬಗ್ಗೆ ಪ್ರೀತಿ- ಒಲವು ತೋರಿಸಿರುತ್ತಾನೆ. ಆ ಒಲವು ಕೇವಲ ರಮ್ಯವಾದ ಚಿತ್ರಣದಲ್ಲಿ ಕೊನೆಗೊಂಡಿರಬೇಕೆಂದೆನೂ ಇಲ್ಲ. ತಾಜ್ ಕುರಿತು ಹಲವು ವಿಭಿನ್ನ ನೋಟ- ದೃಷ್ಟಿಕೋನಗಳ ಕವಿತೆಗಳಿವೆ. ಕನ್ನಡ ಮತ್ತು ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಹಲವು ಕವಿಗಳ 'ಪ್ರೇಮಾರಾಧನೆ'ಯ ಸಂಕೇತವಾಗಿ ತಾಜ್ ಚಿತ್ರಿತವಾಗಿದೆ.
ರವೀಂದ್ರನಾಥ್ ಠಾಕೂರ್ `ಕಾಲದ ಕೆನ್ನೆಯ ಮೇಲಿನ ಮುತ್ತಿನ ಹನಿ' ಎಂದು ತಾಜ್ ಬಗ್ಗೆ ಬರೆದರೆ ಇಂಗ್ಲಿಷ್ ಕವಿ ಸರ್ ಎಡ್ವಿನ್ ಅರ್ನಾಲ್ಡ್‌ `ಸಾಮಾನ್ಯ ವಾಸ್ತುಶಿಲ್ಪದ ತುಣುಕಲ್ಲ. ಜೀವಂತ ಕಲ್ಲುಗಳ ಮೇಲೆ ಕೆತ್ತಿದ ಸಾಮ್ರಾಟನ ಪ್ರೇಮ-ಕನಸು' ಎಂದು ವ್ಯಾಖ್ಯಾನಿಸುತ್ತಾನೆ.
ಬೆಂದ್ರೆಯವರು `ಬೆಲೆ ಕಟ್ಟಬರದ ಈ ಪ್ರೇಮ ಸ್ಮಾರಕ ಕೊನೆಗೆ ಕಾಲಲೀಲೆಗೆ ಈಡೇ?' ಎಂದು ಪ್ರಶ್ನಿಸಿ `ಮಣ್ಣ ಪ್ರಕೃತಿಗೆ ಸದಾ ಮಣ್ಣ ಆಟವೆ ಸಾಜ/ಅಂದು ಕತೆಯಾದೀತು ಇಂದಿನದ್ಭುತ ತಾಜ;/ ಬಿಟ್ಟಾವು ಈ ಕಥಾಕಲ್ಪವೃಕ್ಷದ ಕೊನೆಗೆ ಪ್ರೇಮಸ್ಮಾರಕಕೆ ಸಾವಿರದ ಸಾವಿರ ಕವನ' ಎಂದು ಪ್ರೀತಿ- ಗೌರವ ಸೂಚಿಸುತ್ತಾರೆ.
ಮಲಯಾಳಿ ಕವಿ ಅಯ್ಯಪ್ಪ ಪಣಿಕ್ಕರ್ ತಮ್ಮ `ಆಗ್ರಾದಲ್ಲಿ ಚಳಿ' ಕವಿತೆಯಲ್ಲಿ `ಚಂದ್ರ ಶಿಲೆಯ ನೊರೆಗಳ ಸಾಲು ಗಟ್ಟಿಗೊಂಡು ಮುದುಡುವ/ ಮುಮ್ತಾಜಳ ಕಣ್ಣೀರನ್ನು ಅನಶ್ವರವಾಗಿಸಿದ ತಾಜು' ಎಂದು ಬರೆದರೆ, ಸಿದ್ದಯ್ಯ ಪುರಾಣಿಕರು `ಶಿಲೆಯ ಹಾಲಿಗೆ ಕಲೆಯ ಹೆಪ್ಪು ಹಾಕಿ ಕಡೆಯೆ ಕುಶಲತೆಯೆಂಬ ಕಡೆಗೋಲನಿಕ್ಕಿ ಹರಿದುದಾಕಡೆ ತಕ್ರ ಯಮುನೆಯಾಗಿ, ಮೆರೆದುದೀಕಡೆ ಬೆಣ್ಣೆ ತಾಜಮಹಲಾಗಿ' ಎಂದು ತಮ್ಮ ಕಲ್ಪನೆ ಹರಿಯ ಬಿಡುತ್ತಾರೆ.
ನೊಬೆಲ್ ಪುರಸ್ಕೃತ ಕವಿಗೆ ನೆರೂಡಗೆ ತಾಜಮಹಲ್ ನೋಡಬೇಕೆಂಬ ಮಹದಾಸೆ. ಎಡಪಂಥೀಯ ನೆರೂಡ ರಷ್ಯಾ-ಭಾರತ ಸಂಬಂಧದ ಮಧ್ಯವರ್ತಿಯಾಗಿ ದೆಹಲಿಗೆ ಆಗಮಿಸಿದಾಗ ಆಗಿನ ಪ್ರಧಾನಿ ನೆಹರೂಗೆ ತನ್ನ ಆಸೆ ವಿವರಿಸುತ್ತಾರೆ. ನೆಹರೂ ಅದಕ್ಕೆ ಒಪ್ಪುತ್ತಾರೆ. ಆದರೆ, ನೆರೂಡ ಭಾರತದಲ್ಲಿ ಇದ್ದಷ್ಟೂ ದಿನ ಅವರ ಚಲನವಲನ ಗಮನಿಸುವಂತೆ ಬೇಹುಗಾರರಿಗೆ ಸೂಚಿಸಿರುತ್ತಾರೆ. ಈ ವಿಷಯ ತಿಳಿದ ನೆರೂಡ ನೊಂದು ತಾಜ್‌ಗೆ ಭೇಟಿ ನೀಡುವ ತನ್ನ ಯೋಜನೆ ರದ್ದುಗೊಳಿಸಿ ರಷ್ಯಕ್ಕೆ ಮರಳುತ್ತಾರೆ. ತಾಜ್ ನೋಡಲಾಗದ ತಮ್ಮ ಹಳಹಳಿಕೆಯನ್ನು ನೆರೂಡ ತಮ್ಮ ಆತ್ಮಕತೆಯಲ್ಲಿ ದಾಖಲಿಸಿದ್ದಾರೆ.

Wednesday, October 8, 2008

ಬೇಡದ ಜಂಗದ- ಬೆಲ್ದಾಳ ಶರಣರು


ತಾವು ಧರಿಸಿರುವ ನೊರೆ ಹಾಲಿನಂತಹ ಅಚ್ಚ ಬಿಳುಪಿನ ಬಟ್ಟೆಯಿಂದ ತಟ್ಟನೆ ಗಮನ ಸೆಳೆಯುವ ಸಿದ್ಧರಾಮ ಶರಣರು ಬಸವ ತತ್ವದಲ್ಲಿ ಅಚಲ ನಂಬುಗೆ ಇಟ್ಟವರು. `ಬೆಲ್ದಾಳ ಶರಣರು' ಎಂದೇ ಧಾರ್ಮಿಕ- ಸಾಂಸ್ಕೃತಿಕ ವಲಯದಲ್ಲಿ ಚಿರಪರಿಚಿತರಿರುವ ಅವರದು ಖಚಿತ ನಿಲುವು. ಹಾಗೆಯೇ ಅಷ್ಟೇ ನಿರ್ಭಿಡೆಯಿಂದ ಕಡ್ಡಿ ತುಂಡು ಮಾಡುವಂತೆ ಮಾತನಾಡುವವರು. ವಚನ ಸಾಹಿತ್ಯದ ಬಗ್ಗೆ ಅಪಾರ ಗೌರವ ಇರಿಸಿಕೊಂಡಿರುವ ಬೆಲ್ದಾಳ ಶರಣರು ಮಠ ಮಾನ್ಯಗಳ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಲೂ ಹಿಂದೇಟು ಹಾಕುವವರಲ್ಲ.

ಕರ್ನಾಟಕದ ತುತ್ತ ತುದಿಯಲ್ಲಿರುವ ಔರಾದ್ ತಾಲ್ಲೂಕಿನ ಕೌಠಾ ಗ್ರಾಮದಲ್ಲಿ ಶಾಲೆ-ಕಾಲೇಜು ಮತ್ತು ಆಸ್ಪತ್ರೆಗಳಂತಹ ಸಾರ್ವಜನಿಕ ಸೇವೆಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡ್ದಿದಾರೆ. ಮಾಂಜ್ರಾ ನದಿಯ ದಡದ ಮೇಲಿರುವ ಆಶ್ರಮ ಅವರ ಕಾರ್ಯಕ್ಷೇತ್ರ. ದಲಿತ ವರ್ಗದಲ್ಲಿ ಹುಟ್ಟಿ ಬೆಳೆದ ಅವರು ಸತತ ಅಧ್ಯಯನ, ಸತ್ಸಂಗಗಳ ಮೂಲಕ ಆಧ್ಯಾತ್ಮಿಕ ಲೋಕ ನಿರ್ಮಿಸಿಕೊಂಡು ಪರಂಪರಾನುಗತ ಧಾರ್ಮಿಕ ವ್ಯವಸ್ಥೆಗೆ ಸೆಡ್ಡು ಹೊಡೆದು ಪರ್ಯಾಯ ಲೋಕ ಸೃಷ್ಟಿಸಿದವರು. ಅವರ ಕೌಠಾ ಜಗತ್ತಿನಲ್ಲಿ, ಲೋಕದಲ್ಲಿ ಅಕ್ಷರಶಃ ಮೇಲು-ಕೀಳುಗಳಿಲ್ಲ. ದೀನರ ಸೇವೆಯನ್ನು ಯಾವುದೇ ಆಡಂಬರಗಳಿಲ್ಲದೇ ನಡೆಸುತ್ತ ಬಂದಿರುವ ಅವರಿಗೆ 2006ನೇ ಸಾಲಿನಲ್ಲಿ `ಅನುಭವ ಮಂಟಪ ಪ್ರಶಸ್ತಿ' ಸಂದಿದೆ.

ಸೌಜನ್ಯದ ಸಾಕಾರ ಮೂರ್ತಿಯಂತಿರುವ ಬೆಲ್ದಾಳ ಶರಣರು ಶಿಸ್ತು ಮತ್ತು ಸಂಯಮದ ಬದುಕಿಗೆ ಹೆಸರಾದವರು. ನಿಜಾಂ ಆಡಳಿತದಲ್ಲಿ ಉರ್ದು ನಾಮಫಲಕ ಹಾಕಿ ಶಾಲೆಯಲ್ಲಿ ಕನ್ನಡ ಕಲಿಸಿದ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಒಡನಾಟದಲ್ಲಿ ಬೆಳೆದವರು. ಮಾಡುವ ಕೆಲಸಕ್ಕಾಗಿ ಕೈಒಡ್ಡದೇ `ಬೇಡದ ಜಂಗಮ'ನೆನಿಸಿಕೊಂಡಿದ್ದಾರೆ.

ಬೆಲ್ದಾಳದ ಜನರಿಂದ `ಹುಚ್ಚ- ತಲೆ ಕೆಟ್ಟವ' ಎಂದು ಕರೆಯಿಸಿಕೊಳ್ಳುತ್ತಿದ್ದ `ವಿಠಲ' ನಂತರದ ದಿನಗಳಲ್ಲಿ `ಸಿದ್ಧರಾಮ ಶರಣರು' ಆಗಿ ಬೆಳೆದ ಪರಿ ಅನನ್ಯ. ದಲಿತ ಕುಟುಂಬದಲ್ಲಿ ಜನಿಸಿದ ವಿಠಲ ಶಾಲೆಗೆ ಹೋಗಿ ಕಲಿತದ್ದು ಮೂರನೇ ತರಗತಿಯವರೆಗೆ. ತಂದೆ ಲಾಲಪ್ಪ ಮತ್ತು ತಾಯಿ ಲಕ್ಷ್ಮಿದೇವಿ ಹೊಟ್ಟೆಪಾಡಿಗಾಗಿ ಮನೆಕಟ್ಟುವ ಕೂಲಿ ಕೆಲಸ ಮಾಡುವವರು. ಸಂಜೆ ಭಜನೆ- ಅಭಂಗಗಳನ್ನು ಹಾಡುವ ಮೂಲಕ ದೇವರ ಧ್ಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇದಷ್ಟೇ ವಿಠಲನಿಗೆ ಬಾಲ್ಯದಲ್ಲಿ ದೊರೆತ ಧಾರ್ಮಿಕ ಸಂಪರ್ಕ. ನಂತರ ಬಟ್ಟೆ ಹೊಲಿಯುವ ಕಾಯಕದಲ್ಲಿ ನಿರತರಾದರು. ಜನರೊಡನೆ ಬೆರೆಯದೇ ಒಬ್ಬಂಟಿಯಾಗಿರುತ್ತಿದ್ದ ವಿಠಲನನ್ನು ಹೀಗೆ ಬಿಟ್ಟರೆ `ಕೈತಪ್ಪಿ ಹೋದಾನು' ಎಂದು ಪಾಲಕರು 15ನೇ ವಯಸ್ಸಿನಲ್ಲಿಯೇ ಅಕ್ಕ ನಾಗಮ್ಮಳೊಂದಿಗೆ ಬಾಲ್ಯ ವಿವಾಹ ಮಾಡಿದರು. ಕೌಟುಂಬಿಕ ಜೀವನದ ಜೊತೆಗೆ ಯೋಗಿಕ ಸಾಧನೆಯೂ ಮುಂದುವರೆಯಿತು.

1974ರ ಜನವರಿ 14. ಅಂದು ಔರಾದ್‌ನಲ್ಲಿ ಭಾಲ್ಕಿ ಪಟ್ಟದ್ದೇವರ ಸಮ್ಮುಖದಲ್ಲಿ ಸಿದ್ಧರಾಮೇಶ್ವರ ಜಯಂತಿ. ಭಾಲ್ಕಿ ಗುರುಗಳನ್ನು ಕಾಣುವ ಉದ್ದೇಶದಿಂದ ಕಾರ್ಯಕ್ರಮ ನಡೆಯುತ್ತಿದ್ದ ಅಮರೇಶ್ವರ ಮಂದಿರಕ್ಕೆ ಹೋದರು. ಅದಾಗಲೇ ಸುತ್ತಲಿನ ಜನರಿಗೆ `ಯೋಗಿ' ಎನ್ನಿಸಿಕೊಂಡಿದ್ದರು. ಅದರ ಅರಿವಿದ್ದ ಭಾಲ್ಕಿ ಗುರುಗಳು ವೇದಿಕೆಗೆ ಆಹ್ವಾನಿಸಿ ಮಾತನಾಡುವಂತೆ ಕೇಳಿದರು. ಯುವಕ ವಿಠಲ ತನ್ನ ವಾಗ್ಝರಿಯ ಮೂಲಕ ಸಭೆಯನ್ನು ಬೆರಗುಗೊಳಿಸಿದ. ಪಟ್ಟದ್ದೇವರು ಎದ್ದು ನಿಂತು `ಇಂದು ಸಿದ್ಧರಾಮ ಸಿಕ್ಕ' ಎಂದು ಪ್ರೀತಿಯಿಂದ ಬಿಗಿದಪ್ಪಿದರು. `ಇದುವರೆಗೆ ಕಾಗದದ ಫೋಟೊ ಮೆರೆಸಿದ್ದೀರಿ, ಇದೀಗ ಸಿದ್ಧರಾಮನೇ ಸಿಕ್ಕ' ಎಂದ ಸ್ವಾಮೀಜಿ ಅವರು ವಿಠಲನಿಗೆ `ಸಿದ್ಧರಾಮ' ಎಂದು ನಾಮಕರಣ ಮಾಡಿದರು.

ಅದಾದ ಕೆಲವೇ ದಿನಗಳಲ್ಲಿ ಭಾಲ್ಕಿ ಮಠಕ್ಕೆ ಹೋದ ಸಿದ್ಧರಾಮ ಬೆಲ್ದಾಳಕ್ಕೆ ಬರುವಂತೆ ಮನವಿ ಮಾಡಿದರು. ಆಗ ಔರಾದ್ ತಾಲ್ಲೂಕಿನಲ್ಲಿ ಓಡಾಡಲು ಕುದುರೆ-ಒಂಟೆಗಳನ್ನು ಬಳಸಬೇಕಿತ್ತು. ಕುದುರೆ ಹತ್ತಿ ಬಂದ ಭಾಲ್ಕಿ ಗುರುಗಳು ಬೆಲ್ದಾಳ ಸೀಮಿ ಬರುತ್ತಿದ್ದಂತೆಯೇ ಕೆಳಗಿಳಿದು ನಡೆದು ಬಂದರು. ಆಗ ಊರ ತುಂಬ ಮೆರವಣಿಗೆ. ದಲಿತರ ಕೇರಿಗೆ ಗುರುಗಳು ಬಂದದ್ದು ಆಗಿನ ಕಾಲಕ್ಕೆ ದೊಡ್ಡ ಕ್ರಾಂತಿಯೇ ಆಗಿತ್ತು. ಅದೊಂದು `ರೋಮಾಂಚಕ ಘಟನೆ' ಎಂದು ಬೆಲ್ದಾಳ ಶರಣರು ಮೆಲುಕು ಹಾಕುತ್ತಾರೆ.

1975ರಲ್ಲಿ ಬಸವಕಲ್ಯಾಣದಲ್ಲಿ ಭಾಲ್ಕಿ ಗುರುಗಳಿಂದ ಸಿದ್ಧರಾಮರಿಗೆ ಲಿಂಗದೀಕ್ಷೆ. 12ನೇ ಶತಮಾನದಲ್ಲಿ ಚನ್ನಬಸವಣ್ಣನಿಂದ ಸಿದ್ಧರಾಮನಿಗೆ ದೀಕ್ಷೆ ಆಗಿತ್ತು. ಈಗ ಭಾಲ್ಕಿಯ ಚನ್ನಬಸವರಿಂದ ಸಿದ್ರಾಮನಿಗೆ ದೀಕ್ಷೆ ಎಂದು ಜನರಾಡಿಕೊಂಡರು. ನಂತರದ ದಿನಗಳನ್ನು ಬಸವ ತತ್ವ ಚಿಂತನೆ- ಯೋಗಿಕ ಸಾಧನೆ- ಪ್ರವಚನಗಳಲ್ಲಿ ಸಿದ್ಧರಾಮ ತಮ್ಮನ್ನು ತೊಡಗಿಸಿಕೊಂಡರು.

1981ರಲ್ಲಿ ಕೌಠಾ (ಬಿ)ಕ್ಕೆ ಬಂದ ಶರಣರು ಅಲ್ಲಿಯೇ `ಬಸವ ಯೋಗಾಶ್ರಮ' ಸ್ಥಾಪಿಸಿ `ಮಾದಾರ ಚೆನ್ನಯ್ಯ ಪ್ರಸಾದ ನಿಲಯ' ಆರಂಭಿಸಿದರು. 1982ರಲ್ಲಿ ಆರಂಭವಾದ `ಹರಳಯ್ಯ ಪ್ರೌಢಶಾಲೆ' ಈಗ ಹರಳಯ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಾಗಿ ಬೆಳೆದು 400 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. `ಪಟ್ಟಣದಾಗ ಡೊನೇಷನ್ ತಗೊಂಡು ಸಾಲಿ ನಡಸಾಕ ಭಾಲ ಮಂದಿ ಅದಾರ್ರಿ. ನಮ್ಮ ಹಳ್ಳಿ ಬಡ ಮಕ್ಕಳಿಗಿ ಕಲಸಾಕ ಅಂತಾನೇ ಈ ಸಾಲಿ' ಎನ್ನುತ್ತಾರೆ.

ಧಾರ್ಮಿಕ ಚಿಂತನೆ- ಸಾಮಾಜಿಕ ಸೇವೆಯ ನಡುವೆಯೂ ಸಾಹಿತ್ಯ ಕೃಷಿ ನಡೆಸಿದ ಶರಣರು `ವಚನ ತತ್ವಸಾರ', `ಭಗವಾನ ಬುದ್ಧ', `ಬಸವತತ್ವ ಪ್ರದೀಪಿಕೆ', `ಷಟಸ್ಥಲ ಸಂಪತ್ತು', `ಶೂನ್ಯ ಸಂಪಾದನೆಯ ರಹಸ್ಯ' ಸೇರಿದಂತೆ 15ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬೆಲ್ದಾಳ ಶರಣರ ಸಾಧನೆಯನ್ನು ಗುರುತಿಸಿ ಚಿತ್ರದುರ್ಗದ ಮುರುಘಾಮಠ `ಬಸವಶ್ರೀ' ಪ್ರಶಸ್ತಿ ನೀಡಿ ಗೌರವಿಸಿದೆ. ಅದಲ್ಲದೆ, ಕುಮಾರ ಕಕ್ಕಯ್ಯ ಪ್ರಶಸ್ತಿ, ಕಂಬಳಿವಾಲಾ ಪ್ರಶಸ್ತಿಗಳು ಕೂಡ ಅವರನ್ನು ಅರಸಿ ಬಂದಿವೆ. `ಬಸವಶ್ರೀ'ಯೊಂದಿಗೆ ಬಂದ ಒಂದು ಲಕ್ಷ ರೂಪಾಯಿಗಳನ್ನು ಕೌಠಾದಲ್ಲಿ ಆಸ್ಪತ್ರೆ ನಿರ್ಮಿಸಲು ವಿನಿಯೋಗಿಸಿದ್ದಾರೆ.

ಕೆರೆಯ ನೀರನು ಕೆರೆಗೆ ಚೆಲ್ಲುವ ಕಾಯಕದಲ್ಲಿ ನಿರತರಾಗಿರುವ `ಸ್ದಿದರಾಮ ಶರಣರು' ಸದ್ಯ ಬಸವಕಲ್ಯಾಣದ ಅನುಭವ ಮಂಟಪದ ದಾಸೋಹ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.