ನಗುವಿನ ಅಲೆ ಮೇಲೆ ತೇಲಿಸುತ್ತಿದ್ದ ಗವಾಯಿ


'ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ.. . ' ಎಂದು ಷಣ್ಮುಖಪ್ಪ ಗವಾಯಿ ಹಿಂದೂಸ್ತಾನಿ ಶಾಸ್ತ್ರೀಯ ಆಲಾಪನೆಯಲ್ಲಿನ ಹಾಡು ಕೇಳುತ್ತಿದ್ದರೆ ಅಲೌಕಿಕ ಜಗತ್ತನ್ನು ಪ್ರವೇಶಿಸಿದ ಅನುಭವ. 12ನೇ ಶತಮಾನದ ಕ್ರಾಂತಿಪುರುಷ ಬಸವಣ್ಣನವರ ವ್ಯಕ್ತಿತ್ವವನ್ನು ಮತ್ತು ಅವನ ಪತ್ನಿ ನೀಲಾಂಬಿಕೆ ಆಧ್ಯಾತ್ಮಿಕ ಎತ್ತರಗಳೆರಡರ ಚಿತ್ರಣ ನೀಡುವ ಚೆನ್ನವೀರ ಕಣವಿಯವರ ಪದ್ಯಕ್ಕೆ ಸಂಗೀತದ ಮೂಲಕ ಅರ್ಥದ ಹಲವು ಛಾಯೆಗಳನ್ನು ಹೊರಡಿಸುತ್ತಿದ್ದರು ಷಣ್ಮುಖಪ್ಪ.

'ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾದಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು' ಎಂದು ನೀಲಮ್ಮನವರ ವ್ಯಕ್ತಿತ್ವವನ್ನು ಹರಳುಗೊಳಿಸಿದ ಸಾಲುಗಳು ಷಣ್ಮುಖಪ್ಪ ಅವರ ಹಾಡಿನಲ್ಲಿ ತನ್ನದೇ ಹೊಸ ಅರ್ಥಗಳನ್ನು ಹೊರಡಿಸುತ್ತಿತ್ತು. ಕವಿತೆ ಮತ್ತು ಅದರ ಪ್ರಸ್ತುತಿಗಳೆರಡೂ ಬೆಳೆಯುತ್ತ ಹೋಗುತ್ತಿದ್ದವು. ಅರ್ಧ ಗಂಟೆಗೂ ಹೆಚ್ಚುಕಾಲ ಸಾಗುತ್ತಿದ್ದ ಈ ಹಾಡು ಅಂತ್ಯಕ್ಕೆ ಸಮೀಪಿಸಿದಾಗ ನಿಜವಾದ ಅರ್ಥದಲ್ಲಿ ತುರಿಯಾವಸ್ಥೆಯ ಅನುಭವ ನೀಡುತ್ತಿತ್ತು. ಬಸವಣ್ಣನವರ ಬದುಕಿನ ಕೊನೆಯ ಗಳಿಗೆಯಲ್ಲಿ ಹಡಪದ ಅಪ್ಪಣ್ಣನವರಿಗೆ ನೀಲಮ್ಮ ಕೇಳುವ ಪ್ರಶ್ನೆಯಂತೂ ತಾತ್ವಿಕ- ಆಧ್ಯಾತ್ಮಿಕ ಪರಿಭಾಷೆಯಲ್ಲಿ ಶಿಖರಸ್ವರೂಪದ್ದು. 'ಅಲ್ಲಿ ಇಲ್ಲಿ ಉಭಯವಳಿದು ಅಂಗೈಯಲಿ ಸಂಗಮ ಅಲ್ಲಿದ್ದರು ಇಲ್ಲಿಲ್ಲವೇ ಜಗದ ಜೀವ ಜಂಗಮ' ಎಂಬ ಸಾಲುಗಳು ಅರೆಕ್ಷಣ ರೋಮಾಂಚನಗೊಳಿಸುತ್ತಿದ್ದವು. ಯಾವುದೋ ಅನನ್ಯ ಲೋಕಕ್ಕೆ ಕರೆದೊಯ್ಯುತ್ತಿದ್ದವು. ಗ್ರಾಮೀಣ ಪ್ರದೇಶದಲ್ಲಿ ಮತ್ತು ತಿಳಿದವರ- ಬುದ್ಧಿವಂತರ ನಡುವೆಯೂ ಷಣ್ಮುಖಪ್ಪನವರ ಈ ಹಾಡು ಅತ್ಯಂತ ಜನಪ್ರಿಯವಾಗಿತ್ತು. ಹಾಗಾಗಿಯೇ ನಾಟಕದಲ್ಲಿ ಇದ್ದಹಾಗೆ 'ಒನ್ಸ್ಮೋರ್' ಫರಮಾಯಿಷ್ ಬರುತ್ತಿತ್ತು. ಅಥವಾ ಹತ್ತಾರು ರೂಪಾಯಿ ನೀಡಿ 'ಷಣ್ಮುಖಪ್ಪ.. ಸ್ವಲ್ಪ 'ಸದುವಿನಯದ ಅನ್ರಿ' ಎಂದು ಕೇಳಲಾಗುತ್ತಿತ್ತು.

ನಾನು ಈ ಹಾಡನ್ನು ಹಲವರ ಗಾಯನದಲ್ಲಿ ಕೇಳಿದ್ದೇನೆ. ಆದರೆ, ಷಣ್ಮುಖಪ್ಪ ಸೃಷ್ಟಿಸುತ್ತಿದ್ದ ಬೆರಗು-ಮೋಡಿ ಬೇರೆಯವರ ಗಾಯನದಲ್ಲಿ ನನಗೆ ಕಾಣಿಸಿಲ್ಲ. ದುರದೃಷ್ಟವಷಾತ್ ಆ ಹಾಡಿನ ಗಾಯನದ ರೆಕಾಡರ್ಿಂಗ್ ಕೂಡ ನನ್ನ ಬಳಿ ಇಲ್ಲ. ಆದರೆ, ಅದನ್ನು ಕೇಳಿದ ಅನುಭವ ನನ್ನನ್ನು ಯಾವಾಗಲೂ ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಈ ಹಾಡಿನ ಗಾಯನದ ಮೂಲಕ ಬಸವಣ್ಣನವರ ಬಗ್ಗೆ ಕುತೂಹಲ ಮತ್ತು ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಳ್ಳುವುದು ಕೂಡ ಸಾಧ್ಯವಾಯಿತು.

ನಾನು ಮೊದಲ ಬಾರಿಗೆ ಷಣ್ಮುಖಪ್ಪ ಅವರ ಹಾಡು ಕೇಳಿದ್ದು ಯಾವಾಗ ಎಂಬುದು ಖಚಿತವಾಗಿ ನೆನಪಿಲ್ಲ. ಆದರೆ, ಹತ್ತಾರು ಜನ ಕುಳಿತ ಕಡೆ ಅವರು ಬಂದರೆ ಗಮನ ಸೆಳೆಯುವ ವ್ಯಕ್ತಿಯಾಗಿದ್ದರು ಎಂಬುದು ನನ್ನ ನೆನಪಿನಲ್ಲಿದೆ. ಸುಮಾರು 20 ವರ್ಷಗಳ ಹಿಂದೆಯೇ ಕೆಂಭಾವಿಯ ಸಮಾರಂಭವೊಂದರಲ್ಲಿ ಹಾಡು ಕೇಳಿದ ನಾನು ಕಿಸೆಯಲ್ಲಿದ್ದ ಹತ್ತು ರೂಪಾಯಿ ಕೊಟ್ಟು 'ಮತ್ತೊಮ್ಮೆ ಸದುವಿನ ಅನ್ರಿ' ಎಂದು ಕೇಳಿದ್ದು ನೆನಪಿನಲ್ಲಿದೆ. ಅವರ ಊರು ಗುಲಬರ್ಗ ಜಿಲ್ಲೆಯ ಸುರಪುರ.

ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದ ದಿನಗಳವು. ಸಂಗೀತ ಅದರಲ್ಲೂ ಶಾಸ್ತ್ರೀಯ ಸಂಗೀತ ಎಂದರೆ ಮೂಗು ಮುರಿಯುತ್ತಿದ್ದೆವು. ರೇಡಿಯೋದಲ್ಲಿ ಶಾಸ್ತ್ರೀಯ ಸಂಗೀತ ಆರಂಭವಾಗುತ್ತಿದ್ದಂತೆಯೇ ಕಿವಿ ಹಿಂಡಿ ಸುಮ್ಮನಾಗಿಸಿದ್ದು ಒಂದರೆರಡು ಬಾರಿಯಲ್ಲ. ಅದೇ ದಿನಗಳಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ಅವರ ವಚನ ಗಾಯನವನ್ನು ನಮ್ಮ ಶಾಲೆಯಲ್ಲಿಯೇ ಏರ್ಪಡಿಸಲಾಗಿತ್ತು. ಆಗ ನಾಲ್ಕಾರು ಜೊತೆಗಾರರೊಂದಿಗೆ ಅಲ್ಲಿ ಕುಳಿತು ಸಂಗೀತ ಆರಂಭವಾಗುತ್ತಿದ್ದಂತೆಯೇ ಎದ್ದು ಹೊರಟದ್ದು ಚೆನ್ನಾಗಿ ನೆನಪಿದೆ.

ಇಂತಹ ಸಂಗೀತದ ಪರಮದ್ವೇಷಿಯಾಗಿದ್ದ ನನಗೆ ಸಂಗೀತದ ಸಂಸ್ಕಾರ ದೊರೆಯಲು ಆರಂಭವಾದದ್ದು ಷಣ್ಮುಖಪ್ಪ ಅವರ ಹಾಡು ಕೇಳಿದ ನಂತರವೇ. ಹಾಗೆ ನೋಡಿದರೆ ಷಣ್ಮುಖಪ್ಪ ತಮ್ಮತ್ತ ಸೆಳೆಯುತ್ತಿದ್ದದ್ದು ಗಾಯನದ ಮೂಲಕ ಅಲ್ಲ. ಕನರ್ಾಟಕದ ಅದ್ಭುತ ಗಾಯಕರಲ್ಲಿ ಒಬ್ಬರಾಗಿದ್ದ ಷಣ್ಮುಖಪ್ಪ ಜನಪ್ರಿಯರಾಗಿದ್ದದು ಮಾತ್ರ ನಗೆ ಉಕ್ಕಿಸುವಂತೆ ಹಾಸ್ಯ ಪ್ರಸಂಗಗಳನ್ನು ಪ್ರಸ್ತುತಪಡಿಸುವುದರಲ್ಲಿ. ಈಗಿನ ನಗೆಹಬ್ಬದ ಹಳಸಲು ಕಾರ್ಯಕ್ರಮಗಳ ಸರಣಿ ಆರಂಭವಾಗುವ ಬಹಳಷ್ಟು ಅಂದರೆ ಹತ್ತಾರು ವರ್ಷಗಳಿಗಿಂತ ಮುನ್ನವೇ ಷಣ್ಮುಖ ನಗಿಸುವ 'ಕಾಯಕ' ಆರಂಭಿಸಿದ್ದರು. ಮೇಲ್ನೋಟಕ್ಕೆ ಶಾಸ್ತ್ರೀಯ ಸಂಗೀತಕ್ಕೂ, ಭಾವಗೀತೆ ಹಾಡುವುದಕ್ಕೂ ಹಾಸ್ಯಕ್ಕೂ ಎಲ್ಲೆಂದೆಲ್ಲಿಯ ಸಂಬಂಧ ಎನ್ನಿಸುತ್ತದೆ. ಆದರೆ, ಷಣ್ಮುಖಪ್ಪ ತಮ್ಮ ಹಾಡುಗಳಿಗೆ- ಸಂಗೀತದತ್ತ ಆಕಷರ್ಿಸುವುದಕ್ಕಾಗಿ ಹಾಸ್ಯವನ್ನು ಮೆಟ್ಟಿಲಾಗಿ ಬಳಸುತ್ತಿದ್ದರು. ಸಾಮಾನ್ಯವಾಗಿ ಸಂಗೀತ ಕಚೇರಿಗಳು ಶಾಸ್ತ್ರೀಯ ಸಂಗೀತದಿಂದ ಆರಂಭವಾಗಿ ಲಘುಸಂಗೀತದಲ್ಲಿ ಕೊನೆಗೊಳ್ಳುತ್ತವೆ. ಆದರೆ, ಷಣ್ಮುಖಪ್ಪ ಅದಕ್ಕೆ ವಿರುದ್ಧವಾದ ರೀತಿಯಲ್ಲಿ ತಮ್ಮ ಕಾರ್ಯಕ್ರಮದ ಸ್ವರೂಪ ನಿರ್ಧರಿಸುತ್ತಿದ್ದರು. ಹಾಸ್ಯ, ತಮಾಷೆ, ವ್ಯಂಗ್ಯದ ಹರಿತವಾದ ಟೀಕೆಗಳ ಮೂಲಕ ಆರಂಭವಾಗುತ್ತಿದ್ದ ಅವರ ಕಾರ್ಯಕ್ರಮ ನಂತರ ಭಾವಗೀತೆಗಳ ಪ್ರಸ್ತುತಿಯತ್ತ ತಿರುಗುತ್ತಿತ್ತು. ಮಧ್ಯೆ ಒಂದು ಶಾಸ್ತ್ರೀಯ ಗಾಯನದ ತುಣುಕು ಮತ್ತೆ ಭಾವಗೀತೆ, ಆಗಾಗ ಹಾಸ್ಯವೂ ಇಣುಕುತ್ತಿತ್ತು. ಇದೆಲ್ಲದರ ನಡುವೆ ಶಾಸ್ತ್ರೀಯ ಸಂಗೀತವೂ ಬಂದು ಹೋಗುತ್ತಿತ್ತು. ಕೇಳುಗರನ್ನು ಹೆಚ್ಚಿಸುವುದಕ್ಕಾಗಿ ಮತ್ತು ಅದಕ್ಕಿಂತ ಹೆಚ್ಚಾಗಿ ಹೊಟ್ಟೆಪಾಡಿಗಾಗಿ ಈ ರೀತಿಯ ತಂತ್ರ ಬಳಸುವುದು ಅವರಿಗೆ ಅನಿವಾರ್ಯವಿತ್ತು ಎನ್ನಿಸುತ್ತದೆ. ಯಾವುದಾದರೂ ಕಾರ್ಯಕ್ರಮ ಬಂದರೆ ಮಾತ್ರ ಕೈಯಲ್ಲಿ ನಾಲ್ಕು ಕಾಸು. ಇಲ್ಲದಿದ್ದರೆ ಇಲ್ಲ. ಬೇರೆ ವೃತ್ತಿ ಮಾಡುವುದು ಸಾಧ್ಯವಿರಲಿಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ಗವಾಯಿಯೊಬ್ಬ ಹೀಗೆಯೇ ಇರಬೇಕು ಎಂಬ ಚೌಕಟ್ಟು ಮೀರುವ ಹಾಗೂ ಇರುವುದಿಲ್ಲ. ಅದೆಲ್ಲದರ ನಡುವೆಯೂ ಸಂಗೀತಕ್ಕಾಗಿ ಮಿಡಿಯುತ್ತಿದ್ದ ಷಣ್ಮುಖಪ್ಪ ಹಾಡಲು ಕುಳಿತ ತಕ್ಷಣ ಎಲ್ಲವನ್ನೂ ಮರೆಯುತ್ತಿದ್ದರು ಮತ್ತು ಮರೆಸುತ್ತಿದ್ದರು.

ಅವರ ತಮಾಷೆಯ ಜೋಕುಗಳು ಮತ್ತು ಅದನ್ನು ಕಟ್ಟಿಕೊಡುತ್ತಿದ್ದ ರೀತಿ ಸಾಮಾನ್ಯರನ್ನು ತಮ್ಮತ್ತ ಸೆಳೆಯುತ್ತಿದ್ದವು. ಇಂತಹ ತಂತ್ರಗಳನ್ನು ಅಳವಡಿಸಿಕೊಂಡ ಕಾರಣಕ್ಕಾಗಿಯೇ ಆಕಾಶವಾಣಿಯಲ್ಲಿ ಶಾಸ್ತ್ರೀಯ ಗಾಯಕ ಎಂಬ ಪಟ್ಟ ಅವರಿಗೆ ದೊರೆಯಲಿಲ್ಲ. ಆದರೆ, ಅವರ ಕಷ್ಟದ ದಿನಗಳಲ್ಲಿ ಆಥರ್ಿಕ ನೆರವು ನೀಡಿದ್ದು, ಬದುಕುವ-ಬೆಳೆಯುವ ಪ್ರೇರಣೆ ನೀಡಿದ್ದು ಕೂಡ ಆಕಾಶವಾಣಿಯೇ ಎಂಬುದರಲ್ಲಿ ಎರಡು ಮಾತಿಲ್ಲ. ಮೂರು ತಿಂಗಳಿಗೆ ಒಮ್ಮೆ ಮಾತ್ರ ಬರುತ್ತಿದ್ದ ಅವಕಾಶಕ್ಕಾಗಿ ಕಾದು ಕುಳಿತುಕೊಳ್ಳುವ ಸ್ಥಿತಿ ಷಣ್ಮುಖಪ್ಪನವರಿಗೂ ಇತ್ತು. ಹೆಚ್ಚಿನ ಸಂಖ್ಯೆಯ ಗಾಯಕರು- ಸಂಗೀತಗಾರರು ಇಲ್ಲದಿದ್ದ ಹೈದರಾಬಾದ್ ಕನರ್ಾಟಕದಂತಹ ಪ್ರದೇಶಕ್ಕೂ 'ಮೂರು ತಿಂಗಳ' ನಿಯಮವನ್ನು ಆಕಾಶವಾಣಿ ಕಡ್ಡಾಯವಾಗಿ ಪಾಲಿಸುತ್ತಿತ್ತು. ಇದೇ ಕಾರಣಕ್ಕಾಗಿಯೇ ಷಣ್ಮುಖಪ್ಪ ಆಕಾಶವಾಣಿಯ ಕಾರ್ಯಕ್ರಮ ಬಂದಾಗಲೆಲ್ಲ ಸಂಭ್ರಮಿಸುತ್ತಿದ್ದರು. ಅದಕ್ಕೆ ಹೆಚ್ಚು ಜನರನ್ನು ತಲುಪುತ್ತಿದ್ದೇನೆ ಎನ್ನುವುದಕ್ಕಿಂತ ಬದುಕಲು ನಾಲ್ಕು ಕಾಸು ಸಿಗುತ್ತದಲ್ಲ ಎಂಬುದೇ ಪ್ರಮುಖ ಸಂಗತಿ ಆಗಿತ್ತು. ಕಾರ್ಯಕ್ರಮಗಳೇ ಇಲ್ಲದ ದಿನಗಳಲ್ಲಿ ಯಾವುದಾದರೂ ಸಣ್ಣಪುಟ್ಟ ಸಭೆ-ಸಮಾರಂಭಗಳಲ್ಲಿ ಪ್ರಾರ್ಥನೆ, ಸ್ವಾಗತಗೀತೆಗಳನ್ನೂ ಷಣ್ಮುಖಪ್ಪ ಹಾಡುತ್ತಿದ್ದರು. ಅದಕ್ಕೆ, ಬಸ್ಚಾಜರ್್ ಸೇರಿದ ಹತ್ತಾರು ರೂಪಾಯಿ ಕೈಸೇರುತ್ತದೆ ಎಂಬ ಕಾರಣ ಸಾಕಾಗಿತ್ತು.

ಷಣ್ಮುಖಪ್ಪ ಅವರ ಗಾಯನದ ಬಗ್ಗೆ ಪ್ರೀತಿ ಒಲವು ಬೆಳೆಸಿಕೊಂಡಿದ್ದವರು ಹಲವರು. ಅವರನ್ನು ಈಗಿರುವ ಅರ್ಥದಲ್ಲಿ ಅಭಿಮಾನಿಗಳು ಎಂದು ಹೇಳಲು ಆಗುವುದಿಲ್ಲ. ಅವರನ್ನು ಕರೆಸಿ ಹಾಡು ಕೇಳಿ ಹತ್ತಾರು ರೂಪಾಯಿ ಕೊಟ್ಟು ಕಳುಹಿಸುತ್ತಿದ್ದವರ ಸಂಖ್ಯೆ ಕಡಿಮೆಯಿತ್ತು. ಆಗ ಜನರ ಹತ್ತಿರ ಈಗಿನಂತೆ ಹಣ ಓಡಾಡುತ್ತಿರಲಿಲ್ಲ. ಹಣ ಇರುವವರಿಗೆ ಕೇಳುವ ಆಸಕ್ತಿ- ವ್ಯವಧಾನ ಇರುತ್ತಿರಲಿಲ್ಲ. ಕೇಳ ಬಯಸುವವರಿಗೆ ಹಣ ನೀಡುವ ಸಾಮಥ್ರ್ಯ ಇರುತ್ತಿರಲಿಲ್ಲ. ಇಂತಹ ಕಾರಣಗಳಿಗಾಗಿಯೇ ಷಣ್ಮುಖಪ್ಪ ಅವರಿಗೆ ಮಾಸಿದ- ಹರಿದ ಷಟರ್್ ಧರಿಸಿ ಊರೂರು ತಿರುಗು ಹಾಡು-ಹಾಡಿ, ನಗಿಸಿ ತನ್ನ ನೋವು- ಹಸಿವು ಮರೆಯುವುದು ಅನಿವಾರ್ಯ ಆಗಿತ್ತು.

ಸರಸತಿ ಒಲಿದರೂ ಲಕ್ಷ್ಮಿಯನ್ನು ಆಕಷರ್ಿಸುವ ಕೌಶಲ್ಯ ಮತ್ತು ಚಾಕಚಕ್ಕತೆ, ವ್ಯಾವಹಾರಿಕ ಜಾಣತನದ ಕೊರತೆ ಅಥವಾ ಅತ್ತ ಗಮನ ಕೊಡದೇ ಇರುವ ಕಾರಣಗಳಿಗಾಗಿ ಷಣ್ಮುಖಪ್ಪ ಅವರ ಕೊನೆಯ ದಿನಗಳು ಕಷ್ಟಕರವಾಗಿದ್ದವು. ಹಾಡುತ್ತಿದ್ದಾಗಲೇ ಕೈತುಂಬ ನಾಲ್ಕು ಕಾಸು ಸಂಪಾದಿಸುವುದು ಸಾಧ್ಯವಿಲ್ಲದಿದ್ದ ಅವರಿಗೆ ಹಣದ ಕೊರತೆ, ಆಸ್ಪತ್ರೆಗೆ ತೋರಿಸಲಾಗದ ಅಸಹಾಯಕತೆ ಕಾಡುತ್ತಿದ್ದವು. ಅವರ ಬಾಯಿಕಟ್ಟಿತ್ತು. ಹಾಡು ನಿಂತು ಹೋಗಿತ್ತು. ಅಂತಹ ದಿನಗಳಲ್ಲಿಯೇ ಷಣ್ಮುಖಪ್ಪನವರಿಗೆ ಅವರ ಪ್ರೀತಿ ಪಾತ್ರರು ತುಲಾಭಾರ ಸಮಾರಂಭ ಏರ್ಪಡಿಸಿ ಕೊರತೆ ನೀಗಲು ಪ್ರಯತ್ನಿಸಿದರು. ಆಗ ಶಹಾಪುರದಿಂದ ಪ್ರಕಟವಾಗುತ್ತಿದ್ದ 'ಅಗ್ನಿ ಅಂಕುರ' ಪಾಕ್ಷಿಕ ಪತ್ರಿಕೆಯಲ್ಲಿ ಷಣ್ಮುಖಪ್ಪನವರ ಗಾಯನ ಕುರಿತಂತೆ ಲೇಖನ ಪ್ರಕಟವಾಗಿದ್ದವು. ಸತ್ಯಂಪೇಟೆ ಲಿಂಗಣ್ಣ ಮೇಷ್ಟ್ರು ಷಣ್ಮುಖಪ್ಪನವರ ಹಾಡನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ತಮ್ಮ ತಂದೆಯವರ ಪುಣ್ಯತಿಥಿಯನ್ನು ಸಾಂಸ್ಕೃತಿಕ ಹಬ್ಬವಾಗಿ ಆಚರಿಸುವ ಪರಿಪಾಠ ಇಟ್ಟುಕೊಂಡಿದ್ದ ಸರ್ ನಾಲ್ಕಾರು ಬಾರಿ ಅಥವಾ ಷಣ್ಮುಖಪ್ಪ ಬದುಕಿರುವರೆಗೂ ಸತ್ಯಂಪೇಟೆಗೆ ಕರೆಸಿ ಹಾಡಿಸಿದರು. ಮೆಚ್ಚುಗೆಯ ಮಾತುಗಳನ್ನು ಆಡಿದರು. ಷಣ್ಮುಖಪ್ಪ ಅವರ ಕೊನೆಯ ದಿನಗಳಲ್ಲಿ ತಮ್ಮ ಪತ್ರಿಕೆಯಲ್ಲಿ ಸಹಾಯಹಸ್ತ ಚಾಚುವಂತೆ ಮನವಿ ಪ್ರಕಟಿಸಿದ್ದರು. ನಾನಾಗ ಬಿ.ಎ. ಓದುತ್ತಿದ್ದಿರಬಹುದು. ಕೈಯಲ್ಲಿ ಕಾಸಿರುತ್ತಿರಲಿಲ್ಲ. ಆದರೂ ನೂರು ರೂಪಾಯಿ ಕಳುಹಿಸಲು ಯೋಚಿಸಿದ್ದೆ. ಎಂ.ಓ ಮಾಡುವ ಮುನ್ನವೇ ಅವರು ಇಲ್ಲವಾದ ಸುದ್ದಿ ಕೇಳಿದೆ. ಆಥರ್ಿಕವಾಗಿ ಕಂಗೆಟ್ಟಿದ್ದ ಷಣ್ಮುಖಪ್ಪ ಅವರಿಗೆ ರೂಪಾಯಿ ನೀಡಿ ಋಣ ತೀರಿಸಿಬಹುದು ಎಂದುಕೊಂಡಿದ್ದೆ. ಹಾಗೆ ಋಣದ ಭಾರ ಇಳಿಸುವುದು ಸಾಧ್ಯವಿಲ್ಲದ ಸಂಗತಿ. ಹಾಡು ಕೇಳುವಂತೆ ಮಾಡಿದ, ಆ ಮೂಲಕ ಸಂಗೀತದ ಬಗ್ಗೆ ಪ್ರೀತಿ ಬೆಳೆಸುವುಕ್ಕೆ ಕಾರಣವಾದ ಗಾಯಕನ ಋಣ ತೀರಿಸುವುದು ಹೇಗೆ ಸಾಧ್ಯ?




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಎಸ್.ಎಂ. ಪಂಡಿತ್

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ