ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ



ಶ್ರೀದೇವಿ ಪುರಾಣದ ಕರ್ತೃ ಚಿದಾನಂದ ಅವಧೂತರ ಉಪಾಸನಾ ದೈವ ’ಅಂಬಾ’ಮಾತೆಯ ವಿಗ್ರಹಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಗಡ್ಡದ ಅವರ ಮನೆಯಲ್ಲಿ ನಿತ್ಯಪೂಜೆ ನಡೆಯುತ್ತಿದೆ. ನವರಾತ್ರಿಯ ಈ ದಿನಗಳಲ್ಲಿ ಅಲ್ಲಿ ವಿಶೇಷ ಪೂಜೆ- ಅರ್ಚನೆಗಳು ಶ್ರದ್ಧೆ- ಭಕ್ತಿಯಿಂದ ನಡೆಯುತ್ತಿವೆ.
ಸುರಪುರ ಪಟ್ಟಣದ ಮುಜಂದಾರ ಗಲ್ಲಿಯ ಪಾಂಡುರಂಗ ದೇವಸ್ಥಾನದ ಹಿಂಬದಿಯಲ್ಲಿ ಇರುವ ವೆಂಕಣ್ಣಭಟ್ ಗಡ್ಡದ ಅವರ ಮನೆಯಲ್ಲಿ ಚಿದಾನಂದ ಅವಧೂತರು ಪೂಜಿಸುತ್ತಿದ್ದ ಉಪಾಸನಾ ಮೂರ್ತಿ ಇದೆ. ನಿತ್ಯಪೂಜೆ ಸಲ್ಲುವ ಶ್ರೀಚಕ್ರ ಸಮೇತ ಇರುವ ದೇವಿಯ ಪ್ರತಿಮೆಯು ಸುಮಾರು ೧೨ ಇಂಚು ಎತ್ತರದ್ದಾಗಿದೆ. ಪಾಶ ಅಂಕುಶ, ಬಿಲ್ಲುಬಾಣಗಳನ್ನು ಕೈಯಲ್ಲಿ ಹಿಡಿದಿರುವ ಚತುರ್ಭುಜೆ ದೇವಿಯ ಪ್ರತಿಮೆಗೆ ಕೇವಲ ಧಾರ್ಮಿಕ ಕಾರಣಗಳಿಗಾಗಿ ಮುಖ್ಯ ಅಲ್ಲ. ಇದೊಂದು ಐತಿಹಾಸಿಕ, ಸಾಂಸ್ಕೃತಿಕ ಮಹತ್ವ ಇರುವಂತಹದ್ದು. ಆಸ್ಥೆ ಮತ್ತು ಶ್ರದ್ಧೆಯ ಕಾರಣಗಳಿಂದ ಮೂರ್ತಿಯನ್ನು ಸಮೀಪದಿಂದ ನೋಡಲು ಸಾಧ್ಯವಿಲ್ಲದಿದ್ದರೂ ಪೂಜಾಲಂಕೃತ ವಿಗ್ರಹವನ್ನು ನೋಡುವುದೇ ಒಂದು ಸೊಬಗು. ಚಿದಾನಂದ ಅವಧೂತರೇ ಸ್ವತಃ ಪೂಜಿಸುತ್ತಿದ್ದ ಈ ವಿಗ್ರಹ ಅವರ ಕಾಲಾನಂತರ ಗಡ್ಡದ ಮನೆ ಸೇರಿಕೊಂಡಿತು. ಸದ್ಯ ಸುರಪುರ ನಿವಾಸಿಗಳಾಗಿರುವ ಕನಕಗಿರಿ ಮೂಲದ ಗಡ್ಡದ ಮನೆತನದ ಹಿರಿಯರಿಗೆ ಈ ಪ್ರತಿಮೆಯನ್ನು ಸ್ವತಃ ಅವಧೂತರೇ ತಮ್ಮ ಕೊನೆಯ ದಿನಗಳಲ್ಲಿ ನಿತ್ಯಪೂಜೆ ನಡೆಸುವಂತೆ ಸೂಚಿಸಿ ಹಸ್ತಾಂತರ ಮಾಡಿದರು ಎಂಬ ಐತಿಹ್ಯ ಇದೆ. ವೆಂಕಣ್ಣಭಟ್ಟರು ಈ ಐತಿಹ್ಯವನ್ನು ದೃಢಪಡಿಸುತ್ತಾರೆ.
ಯಾರು ಈ ಚಿದಾನಂದ ಅವಧೂತ?
ಕಾಲನಿರ್ಣಯ ಸಾಧ್ಯವಾಗಿಲ್ಲವಾದರೂ ೧೮ನೇ ಮಧ್ಯಭಾಗದಲ್ಲಿ ಈಗ ಹೈದರಾಬಾದ್ ಕರ್ನಾಟಕ ಎಂದು ಕರೆಯಲಾಗುವ ಪ್ರದೇಶದಲ್ಲಿ ಜೀವಿಸಿದ ಕವಿ, ಜಿಜ್ಞಾಸು ಚಿದಾನಂದ ಅವಧೂತ. ಸಿಂಧನೂರು ತಾಲೂಕಿನ ಹಿರೇಹರಿವಾಣ ಗ್ರಾಮದವರಾದ ಕೊಂಡಣ್ಣ ಅವರು ಸತತ ಸಾಧನೆಯ ನಂತರ ’ಅವಧೂತ’ ಹಂತ ತಲುಪಿದವರು. ಚಿದಾನಂದರೇ ತಮ್ಮ ಕೃತಿಗಳಲ್ಲಿ ಅವಧೂತ ಎಂದರೆ ’ವಿಟಪುರುಷನಂತೆ, ಯೋಗಿಯಂತೆ, ಭೋಗಿಯಂತೆ, ಬ್ರಹ್ಮನಂತೆ, ಸಂಸಾರಿಯಂತೆ, ವಿರಕ್ತನಂತೆ ಕಾಣಿಸಿಕೊಳ್ಳುವ ಸ್ಥಿತಿ’ ಎಂದು ವ್ಯಾಖ್ಯಾನಿಸಿದ್ದಾರೆ. ಚಿತ್+ ಆನಂದ = ಚಿದಾನಂದ (ಸುಖ-ದುಃಖಗಳೆರಡನ್ನೂ ಚಿತ್ತದಲ್ಲಿಯೇ ಸಮನಾಗಿ ಆನಂದದಿಂದ ಸ್ವೀಕರಿಸುವ ಸ್ಥಿತಿ). ಕವಿ-ಲೇಖಕನಾಗಿ ಚಿದಾನಂದ ಅವಧೂತರು ಮಾಡಿದ ಸಾಧನೆ ಅನನ್ಯ. ಜ್ಞಾನಸಿಂಧು, ದೇವಿ ಮಹಾತ್ಮೆ, ಕಾಮವಿಡಂಬನ, ಬಗಳಾಂಬಸ್ತೋತ್ರ, ಚಿದಾನಂದ ವಚನ, ಪಂಚೀಕರಣ, ತತ್ವಚಿಂತಾಮಣಿ, ನವಚಕ್ರಕುಲರೇಖಾ ಶಿಕ್ಷಣ ಅವಧೂತರು ರಚಿಸಿದ ಕೃತಿಗಳು. ಆ ಪೈಕಿ ಜ್ಞಾನಸಿಂಧು ಮತ್ತು ದೇವಿ ಮಹಾತ್ಮೆಗಳು ಪ್ರಧಾನ ಕೃತಿಗಳು.
’ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಉಷ್ಣವಳಿದ ಹಾಲಿನಂದದಿ’ ಕನ್ನಡವನ್ನು ಬಣ್ಣಿಸಿದ ಮಹಾಲಿಂಗರಂಗರ ’ಅನುಭವಾಮೃತ’ ಗ್ರಂಥದ ಜತೆಗೆ ತೌಲನಿಕ ಅಧ್ಯಯನಕ್ಕೆ ಅವಕಾಶ ಇರುವ ಅವಧೂತರ ’ಜ್ಞಾನಸಿಂಧು’ ಅತ್ಯಂತ ಮಹತ್ವದ ಆಧ್ಯಾತ್ಮಿಕ ಗ್ರಂಥ. ಪಾಮರರಿಗೆ ’ಅದ್ವೈತ ವೇದಾಂತ ನಿರೂಪಣೆ’ಯ ಮೂಲಕ ತಿಳುವಳಿಕೆ ನೀಡುವುದೇ ಜ್ಞಾನಸಿಂಧು ಉದ್ದೇಶ ಎಂದು ಹೇಳಿರುವ ಕವಿ ಅದಕ್ಕಾಗಿ ಸರಳ ಕನ್ನಡದಲ್ಲಿ ಸರಳವಾದ ಉಪಮೆ, ದೃಷ್ಟಾಂತಗಳನ್ನು ಬಳಸಿಕೊಂಡು ಸುಲಭವಾಗಿ ಅರ್ಥವಾಗುವಂತೆ ನಿರೂಪಿಸಿದ್ದಾನೆ.
ದೇವಿ ಪುರಾಣದ ಮಹತ್ವ
ಅವರ ’ಶ್ರೀದೇವಿ ಮಹಾತ್ಮೆ’ ಎಂಬ ದೇವಿಪುರಾಣವು ಶಾಕ್ತೇಯರಿಗೆ ಅತ್ಯಂತ ಮಹತ್ವದ ಗ್ರಂಥ. ಹಲವೆಡೆ ಈ ಪುರಾಣದ ನಿತ್ಯ ಪಾರಾಯಣ ನಡೆದರೆ ಬಹಳಷ್ಟು ಕಡೆಗಳಲ್ಲಿ ತದಿಗೆ, ಅಷ್ಟಮಿ, ನವಮಿ, ಚತುರ್ದಶಿ, ಪೌರ್ಣಮಿ, ಗುರು, ಮಂಗಳ, ಶುಕ್ರವಾರ ಹಾಗೂ ನವರಾತ್ರಿಯ ದಿನಗಳಂದು ಶ್ರದ್ಧೆಯಿಂದ ಓದಲಾಗುತ್ತದೆ. ೧೮ ಅಧ್ಯಾಯಗಳಲ್ಲಿ ೭೯೬ ಪದ್ಯಗಳಿಂದ ಕೂಡಿರುವ ದೇವಿಪುರಾಣವು ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ. ’ಸಂಸ್ಕೃತ ಗ್ರಂಥದ ಭಾಷಾಂತರ. ಆದರೂ ಸ್ವತಂತ್ರ ಕೃತಿ ಎನ್ನಿಸದೇ ಇಲ್ಲ’ ಎಂದು ಎಚ್.ವಿ.ಶ್ರೀನಿವಾಸಶರ್ಮ ಅವರು ’ಷಟ್ಪದಿಯಲ್ಲಿ ಆಡುಮಾತಿನ ಬಳಕೆ’ಯ ವಿಶಿಷ್ಟ ಪ್ರಯೋಗ ನಡೆಸಿದ ಕೃತಿ ಎಂದು ವಿವರಿಸುತ್ತಾರೆ.
ಕನ್ನಡದ ಹಿರಿಯ ವಿದ್ವಾಂಸ ತ.ಸು. ಶಾಮರಾಯರು ’ಕುಮಾರವ್ಯಾಸನ ಛಾಯೆ ಚಿದಾನಂದ ಅವಧೂತನ ಪದ್ಯಗಳಲ್ಲಿ ಸ್ಪಷ್ಟವಾಗಿ ಮೂಡಿದೆ. ಅದನ್ನು ಬಳಸಿಕೊಳ್ಳುವಲ್ಲಿ ತನ್ನತನ ಮೆರೆದಿದ್ದಾನೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಪುರಾಣ ಎಂಬ ಕಾರಣದಿಂದಾಗಿ ಆರಂಭದ ಸಾಹಿತ್ಯ ಚರಿತ್ರಕಾರರು ಈ ಗ್ರಂಥಕ್ಕೆ ಹೆಚ್ಚು ಮಹತ್ವ ನೀಡಿರಲಿಲ್ಲ. ನಂತರ ಕಾವ್ಯಗುಣದ ಕಾರಣದಿಂದಾಗಿ ಸಾಹಿತ್ಯ ಆಸಕ್ತರ ಗಮನ ಸೆಳೆಯಿತು.
ಸಿದ್ಧಪರ್ವತ
’ಈಗ ಅಂಬಾಮಠ ಎಂದು ಕರೆಯಲಾಗುವ ಪ್ರದೇಶದಲ್ಲಿಯೇ ಚಿದಾನಂದ ಅವಧೂತರಿಗೆ ದೇವಿಯು ಕುಮಾರಿ ರೂಪದಲ್ಲಿ ಸಾಕ್ಷಾತ್ಕಾರ ಆದಳು’ ಎಂದು ತಮ್ಮ ಹಿರಿಯರು ಹೇಳುತ್ತಿದ್ದ ಮಾತುಗಳನ್ನು ಆಧರಿಸಿ ಹೇಳುವ ವೆಂಕಣ್ಣಭಟ್ ಗಡ್ಡದ ಅವರು ’ಸಿದ್ಧಪರ್ವತದಲ್ಲಿ ಇರುವುದು ಶ್ರೀಚಕ್ರ. ಸ್ವತಃ ಅವಧೂತ ಮಹಾರಾಜರೇ ಪೂಜಿಸುತ್ತಿದ್ದ ಆರಾಧ್ಯದೈವ ನಮ್ಮ ಮನೆಯಲ್ಲಿದೆ’ ಎಂದು ಹೇಳುತ್ತಾರೆ. ’ಮೂಲತಃ ನಮ್ಮ ಹಿರೀಕರು ಕನಕಗಿರಿ ಮೂಲದವರು’ ಎಂದು ಹೇಳುವ ಶ್ರೀಪಾದಭಟ್ ಅವರು ’ಕನಕಗಿರಿಯಿಂದ ಸುರಪುರಕ್ಕೆ ಬರುವಾಗ ಪ್ರತಿಮೆಯನ್ನು ತೆಗೆದುಕೊಂಡು ಬಂದಿದ್ದಾರೆ’ ಎಂದು ಹೇಳುತ್ತಾರೆ. ಗಡ್ಡಧಾರಿಗಳಾಗಿರುತ್ತಿದ್ದ ಕಾರಣಕ್ಕೆ ನಮ್ಮ ಮನೆಗೆ ಅದೇ ಅಡ್ಡಹೆಸರು ಬಂದಿದೆ ಎಂದು ವಿವರಿಸುತ್ತಾರೆ.
ಚಿದಾನಂದ ಅವಧೂತರು ತಮ್ಮ ಕೊನೆಯ ದಿನಗಳನ್ನು ಕಳೆದದ್ದು ಕನಕಗಿರಿಯಲ್ಲಿ. ಚಿದಾನಂದರು ಆಗಿನ ಕನಕಗಿರಿಯ ದೊರೆಯನ್ನು ಕರೆದು ತಮ್ಮ ಪಾರ್ಥಿವ ಶರೀರದ ಅಂತ್ಯಕ್ರಿಯೆ ವಿವರಿಸಿದ ಬಗ್ಗೆ ಒಂದು ಐತಿಹ್ಯ ಇದೆ. ಕತ್ತೆಯ ಹಿಂದಿನ ಕಾಲಿಗೆ ತಮ್ಮ ಕಾಲಿನ ಹೆಬ್ಬೆರಳನ್ನು ಕಟ್ಟಿ ಒಂಟಿ ಹಲಗೆಯ ಮೆರವಣಿಗೆ ಮಾಡುವಂತೆ ಚಿದಾನಂದರು ಸೂಚಿಸಿದ್ದರು. ಮೊದಲು ಒಪ್ಪಿದ ದೊರೆಯು ಕಾಲವಾದ ನಂತರ ಚಿದಾನಂದರ ಸಾಧನೆಯ ಮಹತ್ವ ಅರಿತು ಗೌರವಪೂರ್ವಕವಾಗಿ ಅಂತ್ಯಕ್ರಿಯೆ ನಡೆಸಿದ. ಅದರಿಂದ ಅವಧೂತರ ಮಾತು ಮೀರಿದ ಶಾಪಕ್ಕೆ ಗುರಿಯಾದ ಎಂಬ ಕಥೆಯು ಜನಜನಿತವಾಗಿದೆ. ಅವಧೂತರ ಸಮಾಧಿ ಕೂಡ ಕನಕಗಿರಿಯಲ್ಲಿದೆ.
ಹಸ್ತಪ್ರತಿ
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ಸಂಗ್ರಹದಲ್ಲಿ ಚಿದಾನಂದ ಅವಧೂತರ ’ಜ್ಞಾನಸಿಂಧು’ ಮತ್ತು ’ದೇವಿ ಮಹಾತ್ಮೆ’ ಗ್ರಂಥದ ಹಸ್ತಪ್ರತಿಗಳಿವೆ. ಸರಳವಾಗಿ ಓದಬಹುದಾದ ಲಿಪಿಗಳಲ್ಲಿ ಇರುವ ಈ ಎರಡೂ ಗ್ರಂಥಗಳ ಲಿಪಿಕಾರರು ತಾವು ಲಿಪಿ ಮಾಡಿದ ದಿನಾಂಕ ಸಮಯಗಳನ್ನು ದಾಖಲಿಸಿದ್ದಾರೆ. ಬರೆಯುವಾಗ ಆದ ದೋಷಗಳನ್ನು ತಿದ್ದಿಕೊಂಡು ಓದುವಂತೆ ಮನವಿ ಮಾಡಿದ್ದಾರೆ. ದೇವಿ ಪುರಾಣದ ಹಸ್ತಪ್ರತಿಯ ಕೊನೆಯಲ್ಲಿ ಅದು ಪೂರ್ಣಗೊಂಡ ’ಶ್ರೀನೃಪಶಾಲಿವಾಹನ ಶಕೆ ೧೮೨೫ ಶುಭಾನುಕ್ರತು ಜೇಷ್ಠ ವದ್ಯ ಶುಕ್ರವಾರ ಸಂಪೂರ್ಣ ಮಂಗಳಮಸ್ತು’ ಎಂದು ದಾಖಲಿಸಲಾಗಿದೆ.
ಡಿಪಿ

ಕೋಟ್-೧
ಪುರಾಣ ಎನ್ನುವ ಕಾರಣಕ್ಕಾಗಿ ಬಹಳಷ್ಟು ದಿನ ಅದನ್ನು ನಾನು ಓದಿರಲಿಲ್ಲ. ಹಸ್ತಪ್ರತಿ ದೊರೆತದ್ದರಿಂದ ಓದಬೇಕಾಯಿತು. ಹಸ್ತಪ್ರತಿ ದೊರಕದೇ ಹೋಗಿದ್ದರೆ ಅಮೂಲ್ಯ ಕೃತಿ ನಮಗೆ ಲಭ್ಯವಾಗುತ್ತಲೇ ಇರಲಿಲ್ಲ. ದೇವಿ ಪುರಾಣವನ್ನು ಸ್ತ್ರೀವಾದಿ ನೆಲೆಯಲ್ಲಿ ಚರ್ಚಿಸಬಹುದು ಎಂಬ ವ್ಯಾಖ್ಯಾನ ಕೇಳಿಬರುತ್ತಿದೆ. ಈ ಕಾವ್ಯದಲ್ಲಿ ಬರುವ ರಕ್ತಬೀಜಾಸುರನ ನಿರ್ನಾಮದ ವಿವರಗಳು ನಾವು ಎದುರಿಸುತ್ತಿರುವ ಜಾಗತೀಕರಣಕ್ಕೆ ಹೇಗೆ ಮುಖಾಮುಖಿ ಆಗಬೇಕು ಎನ್ನುವುದನ್ನು ಸೂಚಿಸುವಂತಿದೆ. ದೇಸಿಜ್ಞಾನ ಮತ್ತು ಅವರ ತಿಳುವಳಿಕೆಗಳು ನಮ್ಮ ನಡುವಿನ ಪರ್ಯಾಯದ ಹುಡುಕಾಟಗಳು ಎಂದು ನೋಡಲು ಸಾಕಷ್ಟು ಅವಕಾಶಗಳಿವೆ.
ಡಾ. ಬಸವರಾಜ ಸಬರದ
ಕನ್ನಡ ಅಧ್ಯಯನ ಕೇಂದ್ರ, ಗುಲ್ಬರ್ಗ ವಿಶ್ವವಿದ್ಯಾಲಯ

ಕೋಟ್-೨
ದೇವಿ ಪುರಾಣವನ್ನು ಯುದ್ಧದ ವರ್ಣನೆಗಳಿರುವ ವೀರಕಾವ್ಯ ಎಂದು ನೋಡುವ ಪರಿಪಾಠ ಇದೆ. ಪುರಾಣದಲ್ಲಿ ಬರುವ ಅಸುರರು ನಮ್ಮ ಒಳಗಿನ ಸಣ್ಣತನಗಳ ಪ್ರತೀಕ. ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಮುಖಾಮುಖಿ ಆಗುವುದನ್ನು ದೇವಿ ಪುರಾಣ ಕಲಿಸಿಕೊಡುತ್ತದೆ. ಈ ವ್ಯಾಖ್ಯಾನವನ್ನು ಗಂವಾರ ತ್ರಿವಿಕ್ರಮಾನಂದಮಠ ಶಂಕರಶಾಸ್ತ್ರಿಗಳು, ಶಹಾಪುರದ ಏಕದಂಡಿಗಿಮಠದ ದೇವೇಂದ್ರಸ್ವಾಮಿಗಳು ಮಾಡುತ್ತಿದ್ದರು. ದೇವಿ ಪುರಾಣ ಆಗಿರುವ ಹಾಗೆಯೇ ಅದು ದೇಹದ ಪುರಾಣ ಕೂಡ ಹೌದು.
ಡಿ. ಅಜೇಂದ್ರಸ್ವಾಮಿ
ಕನ್ನಡ ಉಪನ್ಯಾಸಕರು, ಹುಮನಾಬಾದ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು