ಜಾತಿವಾದದಿಂದ ಜಾತ್ಯತೀತತೆಯೆಡೆಗೆ ನಡೆಯುತ್ತಲೇ ‘ರಾಜಕೀಯ’ ಮುಗಿಸಿದ ಕಮರುಲ್




ವರ್ಣರಂಜಿತ ವ್ಯಕ್ತಿತ್ವದ ಮಾಜಿ ಸಚಿವ ಕಮರುಲ್ ಇಸ್ಲಾಮ್ ನಿಧನದೊಂದಿಗೆ ಹೈದರಾಬಾದ್ ಕರ್ನಾಟಕ ಪ್ರದೇಶದ ಮತ್ತೊಂದು ರಾಜಕೀಯ ಕೊಂಡಿ ಕಳಚಿದೆ. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ವಾಲಿಬಾಲ್, ಹಾಕಿ, ಕ್ರಿಕೆಟ್ ಆಟದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ ಯುವಕ ಕಮರುಲ್ ಚರ್ಚೆ ಮತ್ತು ಭಾಷಣ ಸ್ಪರ್ಧೆಗಳಲ್ಲಿಯೂ ಮುಂದಿರುತ್ತಿದ್ದರು. ಪಿಡಿಎ (ಪೂಜ್ಯ ದೊಡ್ಡಪ್ಪ ಅಪ್ಪ) ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಕಾಲೇಜು ದಿನಗಳಿಂದಲೇ ನಾಯಕತ್ವದ ರುಚಿ ಕಂಡಿದ್ದ ಕಮರುಲ್ ಅವರು ನಂತರದ ದಿನಗಳಲ್ಲಿಯೂ ‘ರಾಜಕೀಯ’ದ ಆಟ ಮುಂದುವರೆಸಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾದ ಮೊದಲ ಮತ್ತು ಕೊನೆಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಯುವಕ ಅವರಾಗಿದ್ದರು. ಅವರು ಚುನಾವಣೆಯಲ್ಲಿ ಮೊದಲ ಗೆಲುವು ಸಾಧಿಸಿದ ದಿನ ಕಲಬುರಗಿ (ಆಗಿನ ಗುಲ್ಬರ್ಗ) ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ತೆಗೆಯಲಾಗಿತ್ತು. ಆಟೋಟ- ಭಾಷಣಗಳಲ್ಲಿ ನುರಿತ ಯುವಕ ಮುಂದೊಂದು ದಿನ ಪ್ರಮುಖ ನಾಯಕ ಆಗಬಹುದು ಎಂದು ಆಗ ಯಾರೂ ಭಾವಿಸಿರಲಿಲ್ಲ. ಸ್ವತಃ ಕಮರುಲ್ ಅವರಿಗೆ ಕೂಡ ಅಂತಹ ಆಸೆಗಳಿರಲಿಲ್ಲ.
ವಿದ್ಯಾಭ್ಯಾಸ ಮುಗಿದ ತಕ್ಷಣ ನೌಕರಿ ಮಾಡಲೇ ಬೇಕಾದ ಅನಿವಾರ್ಯ ಸ್ಥಿತಿಯೂ ಅವರ ಎದುರಿಗಿತ್ತು. ಎಂಜಿನಿಯರಿಂಗ್ ಪದವೀಧರರಾಗಿದ್ದ ಕಮರುಲ್ ಆಗ ತಮ್ಮದೇ ಸಮುದಾಯದ ಪ್ರಮುಖ ನಾಯಕನಾಗಿದ್ದ ಸಾರಿಗೆ ಸಚಿವ ಮಹ್ಮದ್ ಅಲಿ ಅವರ ಬಳಿಗೆ ನೌಕರಿಗಾಗಿ ಶಿಫಾರಸು ಪತ್ರ ನೀಡುವಂತೆ ಕೇಳಿ ಕೈ ಕಟ್ಟಿ ನಿಂತಿದ್ದರು. ಮಹ್ಮದ್ ಅಲಿ ಅವರು ಶಿಫಾರಸು ಪತ್ರ ನೀಡುವ ಬದಲಿಗೆ ‘ಅವಮಾನ’ಕರ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಅದನ್ನೇ ಛಲವಾಗಿ ಸ್ವೀಕರಿಸಿ ಅವರದೇ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದೆ ಎಂದು ಅವರು ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದರು. ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರೂ ಆಗಿದ್ದ ಸಾರಿಗೆ ಸಚಿವ ಮಹ್ಮದ್ ಅಲಿ ಅವರ ವಿರುದ್ಧ ಕಮರುಲ್ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದರು. ಹಾಗೆ ಸ್ಪರ್ಧಿಸುವುದಕ್ಕೆ ಕಾರಣ ತಾನು ‘ಗೆಲ್ಲಬೇಕು’ ಎನ್ನುವುದಕ್ಕಿಂತ ಮಹ್ಮದ್ ಅಲಿ ಅವರನ್ನು ಸೋಲಿಸುವ ಹಠವೇ ಮುಖ್ಯವಾಗಿತ್ತು. ಮುಸ್ಲಿಮ್ ಲೀಗ್ ಪಕ್ಷದಿಂದ ಸ್ಪರ್ಧಿಸಿದ್ದ ಕಮರುಲ್ ಅವರಿಗೆ ಕೇವಲ ಮಹ್ಮದ್ ಅಲಿ ಮಾತ್ರ ಎದುರಾಳಿಯಾಗಿರಲಿಲ್ಲ. ಜನಪ್ರಿಯ ನಾಯಕರಾಗಿದ್ದ ಹಿರಿಯ ಕಾಮ್ರೆಡ್ ಗಂಗಾಧರ ನಮೋಶಿ ಕೂಡ ಕಮ್ಯುನಿಸ್ಟ್ ಪಕ್ಷದಿಂದ ಸ್ಪರ್ಧಿಸಿದ್ದರು. ತ್ರಿಕೋಣ ಸ್ಪರ್ಧೆಯಲ್ಲಿ ಉಭಯ ಪ್ರಮುಖರನ್ನೂ ಸೋಲಿಸಿ ಗೆಲುವು ತನ್ನದಾಗಿಸಿಕೊಂಡ ಕಮರುಲ್ ನಂತರದ ರಾಜಕೀಯ ಜೀವನದಲ್ಲಿ ಹಿಂತಿರುಗಿ ನೋಡಿದ್ದು ಕಡಿಮೆ.
ಮುಸ್ಲಿಮ್ ಸಮುದಾಯದ ಪ್ರತಿಷ್ಠಿತ ರಾಜಕೀಯ ನಾಯಕ ಮಹ್ಮದ್ ಅಲಿ ಅವರಿಗೆ ಕಮರುಲ್ ಪರ್ಯಾಯ ಆಗಿ ಕಾಣಿಸಿದ್ದು ಅಚ್ಚರಿಯ ಸಂಗತಿ. ಅದಕ್ಕಾಗಿ ಕಮರುಲ್ ಸಮುದಾಯದ ಹಿತ ಕಾಯುವ ‘ಆಶಾಕಿರಣ’ದಂತೆ ಕಾಣಿಸುವ ಕಾರ್ಡ್ ಬಳಸಿದ್ದರು ಎಂಬುದು ಗುಟ್ಟಿನ ಸಂಗತಿಯೇನಲ್ಲ. ಅದನ್ನು ಕಮರುಲ್ ಕೂಡ ಮುಚ್ಚಿಡುತ್ತಿರಲಿಲ್ಲ. 1978ರಲ್ಲಿ ಗುಲ್ಬರ್ಗ ಕ್ಷೇತ್ರದಿಂದ ವಿಧಾನ ಸಭೆ ಪ್ರವೇಶಿಸಿದ ಕಮರುಲ್ ಅವರದು ಏರಿಳಿತದ ರಾಜಕೀಯ ಜೀವನ. 1983ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಕಾರ್ಮಿಕ ಮುಖಂಡ ಎಸ್.ಕೆ. ಕಾಂತಾ ಅವರಿಗೆ ಸ್ಥಾನ ಬಿಟ್ಟುಕೊಟ್ಟ ಕಮರುಲ್ ಅವರು 1985ರ ಚುನಾವಣೆಯಲ್ಲಿಯೂ ಪರಾಭವ ಎದುರಿಸಿದರು. 1989ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಮರುಲ್ ಅವರು ನಂತರ ನಡೆದ 1994ರ ಚುನಾವಣೆಯಲ್ಲಿಯೂ ಗೆಲುವು ತಮ್ಮದಾಗಿಸಿಕೊಂಡರು. ಆದರೆ, 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಸಂಸದ ಬಿ.ಜಿ.ಜವಳಿ (ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಅಳಿಯ) ವಿರುದ್ದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು. ನಂತರ 1998ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಮರುಲ್ ಅವರು ಬಿಜೆಪಿಯ ಬಸವರಾಜ ಪಾಟೀಲ್ ಸೇಡಂ ಅವರ ವಿರುದ್ಧ ಪರಾಜಿತಗೊಂಡಿದ್ದರು. ಲೋಕಸಭೆ ಪ್ರವೇಶಿಸುವ ಕಾರಣಕ್ಕಾಗಿ ಕಮರುಲ್ ರಾಜೀನಾಮೆ ನೀಡಿದ್ದ ಸ್ಥಾನಕ್ಕೆ ಕೈಸರ್ ಮಹಮೂದ್ ಮಣಿಯಾರ್ ಆಯ್ಕೆಯಾಗಿದ್ದರು. 1999ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಕಮರುಲ್ ಚುನಾಯಿತರಾದರು, ಮಾತ್ರವಲ್ಲ ಎಸ್.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ಗೃಹ ನಿರ್ಮಾಣ ಮತ್ತು ಕಾರ್ಮಿಕ ಖಾತೆ ಸಚಿವರಾಗಿದ್ದರು. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಚಂದ್ರಶೇಖರ ಪಾಟೀಲ್ ರೇವೂರ ಅವರ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು. ನಂತರದ 2008 ಮತ್ತು 2013ರ ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ಮತದಾರರೇ ಹೆಚ್ಚಾಗಿರುವ ಗುಲ್ಬರ್ಗ ಉತ್ತರ ಮತಕ್ಷೇತ್ರದಿಂದ ಸತತ ಎರಡು ಬಾರಿ ಚುನಾಯಿತರಾಗಿದ್ದರು. ಸಿದ್ಧರಾಮಯ್ಯ ನೇತೃತ್ವದ ಮಂತ್ರಿಮಂಡಲದಲ್ಲಿ ಪೌರಾಡಳಿತ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಸಿದ್ಧರಾಮಯ್ಯ ಅವರು ಸಂಪುಟ ಪುನರ್ ರಚನೆಯಲ್ಲಿ ಕೈಬಿಟ್ಟಿದ್ದರಿಂದ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪ್ರಮುಖ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಮರುಲ್ ಬಂಡಾಯದ ಬಾವುಟ ಹಾರಿಸಿದ್ದರು. ಕಮರುಲ್ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಹಾಗೂ ಕೇರಳ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ವಹಿಸಲಾಗಿತ್ತು.
ಉಗ್ರ ಭಾಷಣಗಳ ಮೂಲಕ ತನ್ನ ಸಮುದಾಯದ ಮತದಾರರನ್ನು ಜೊತೆಗಿರುವುದು ಅನಿವಾರ್ಯವಾಗುವಂತೆ ಮಾಡುತ್ತಿದ್ದ ಕಮರುಲ್ ಮುಸ್ಲಿಮ್ ಲೀಗ್ ನಿಂದ ಸ್ಪರ್ಧಿಸಿ ಸೋಲುಂಡ ನಂತರ ರಾಜಕಾರಣದ ‘ಭಾಷೆ’ ಕಲಿತರು. ಮುಸ್ಲಿಮ್ ಲೀಗ್ ನಿಂದ ಜನತಾದಳ ನಂತರ ಕಾಂಗ್ರೆಸ್ ಸೇರಿದರು. ಅದರೊಂದಿಗೆ ಮಾತಿನ ಶೈಲಿ, ಭಾಷೆಯ ಬಳಕೆ ಬದಲಿಸಿಕೊಂಡರು. ಶೋಷಿತರು, ದಲಿತರು ಕೂಡ ತನ್ನ ರಾಜಕೀಯದ ಭಾಗ ಆಗುವಂತೆ ನೋಡಿಕೊಂಡರು. ಸ್ಥಳೀಯ ಧರ್ಮಗುರುಗಳ ನೆರವು ಪಡೆಯುವುದು ಮತ್ತು ಅವರಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಕಮರುಲ್ ತಾನೂ ಚಾಣಾಕ್ಷ್ಯ ಎಂಬುದನ್ನು ಸಾಬೀತು ಪಡಿಸುತ್ತಿದ್ದರು.
ರಾಜಕೀಯ ದಾಳ ಉರುಳಿಸುವ ಪಾಠವನ್ನು ಜಿಲ್ಲೆಯ ಹಿರಿಯ ರಾಜಕಾರಣಿಗಳಿಂದ ಕಲಿತ ಕಮರುಲ್ ಅವರಿಗೆ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯ ನಂತರ ರೂಪುಗೊಂಡ ಗುಲ್ಬರ್ಗ ಉತ್ತರ ಕ್ಷೇತ್ರವು ವರವಾಗಿ ಪರಿಣಮಿಸಿತು. ಆ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಅಲ್ಪಸಂಖ್ಯಾತ ಸಮುದಾಯದ ಜನರ ಸಂಪೂರ್ಣ ಬಲ-ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸಂಸತ್ತಿನ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದ ನಾಸೀರ್ ಹುಸೇನ್ 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜಿಪಿಯಿಂದ ಸ್ಪರ್ಧಿಸಿದಾಗ ಅವರು ತೀವ್ರ ಪೈಪೋಟಿ ಎದುರಿಸಬೇಕಾಯಿತು. ನಾಸೀರ್ ಕಾಂಗ್ರೆಸ್ ಪಕ್ಷದೊಳಕ್ಕೆ ಸೇರಿದರೆ ತಮ್ಮ ರಾಜಕೀಯ ಭವಿಷ್ಯಕ್ಕೆ ಸಂಚಕಾರ ಬರುತ್ತದೆ ಎಂದು ಭಾವಿಸಿದ ಕಮರುಲ್ ಅದು ನಡೆಯದಂತೆ ಒತ್ತಡ ಹೇರುವಲ್ಲಿ ಸಫಲರಾಗಿದ್ದರು. ನಾಸೀರ್ ಅವರ ಸಮೂಹವನ್ನು ಗಮನದಲ್ಲಿಟ್ಟುಕೊಂಡೇ ಕಮರುಲ್ ಅವರ ಸಚಿವ ಸ್ಥಾನ ಕೈ ತಪ್ಪುವಂತೆ ಕಾಂಗ್ರೆಸ್ ನಾಯಕರು ಮಾಡಿದ್ದೀಗ ಗುಟ್ಟಾಗಿ ಉಳಿದಿಲ್ಲ.
‘ಕಮರ್ ಸಾಬ್’ ಎಂದೇ ಚಿರಪರಿಚಿತರಾಗಿದ್ದ ಕಮರುಲ್ ಅವರದು ನಿಶಾಚರಿ ಬದುಕು. ರಾತ್ರಿಯ ವೇಳೆ ಹೆಚ್ಚಾಗುತ್ತಿದ್ದಂತೆ ಅವರ ಮನೆಯ ಒಳಗಿನ ಚಟುವಟಿಕೆಗಳು ತೀವ್ರವಾಗುತ್ತಿದ್ದವು. ಅಂದರೆ ಅದರರ್ಥ ಇಷ್ಟೇ. ಮಧ್ಯರಾತ್ರಿಯ ನಂತರ ಅವರ ಮನೆಗೆ ಭೇಟಿ ನೀಡುವ ಆಪ್ತರ, ಕಾರ್ಯಕರ್ತರ ಸಂಖ್ಯೆಯೇ ಜಾಸ್ತಿ ಇತ್ತು. ರಾತ್ರಿಯಿಡೀ ಹಗಲೇ ಇದೆಯೇನೋ ಎನ್ನುವಂತೆ ಕಮರುಲ್ ಅವರ ಮನೆಯ ಒಳಗೆ ಮತ್ತು ಸುತ್ತಲಿನ ಪ್ರದೇಶ ಇರುತ್ತಿತ್ತು. ಕಮರುಲ್ ಅವರು ಮನೆಯಲ್ಲಿ ಇದ್ದಾರೆ ಎಂಬುದು ರಾತ್ರಿ ಅವರ ಮನೆಯ ಕಡೆಗೆ ತೆರಳುತ್ತಿದ್ದ ಜನಸಮೂಹ ನೋಡಿಯೇ ಅಂದಾಜು ಮಾಡಬಹುದಿತ್ತು. ಕಮರುಲ್ ರಾತ್ರಿಯಿಡಿ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಆ ಪ್ರಯತ್ನಗಳೆಲ್ಲ ವೈಯಕ್ತಿಕ ನೆಲೆಗಟ್ಟಿನವುಗಳಾಗಿರುತ್ತಿದ್ದವು. ಅಭಿವೃದ್ಧಿ ಎನ್ನುವ ರಾಜಕಾರಣದ ಬೆನ್ನು ಹತ್ತುವ ಬದಲು ವ್ಯಕ್ತಿಗತವಾಗಿ, ಸಮುದಾಯಗಳನ್ನು ಜೊತೆಗಿಟ್ಟುಕೊಳ್ಳುವುದರ ಬಗ್ಗೆ ಕಮರುಲ್ ಅವರಿಗೆ ವಿಶೇಷ ಆಸಕ್ತಿ. ವಿವಿಧ ಸಂಸ್ಥೆಗಳ ಜೊತೆಗೆ ಗುರುತಿಸಿಕೊಂಡಿದ್ದ ಕಮರುಲ್ ಅವರ ದತ್ತು ಪುತ್ರನೇ ಅವರ ರಾಜಕೀಯ ವಾರಸುದಾರ ಆಗಬಹುದು. ವಕ್ಫ್ ಆಸ್ತಿಗೆ ಸಂಬಂಧಿಸಿದ ವಿವಾದವೂ ಅವರ ಸುತ್ತ ಸುತ್ತಿಕೊಂಡಿದ್ದನ್ನು ಮರೆಯುವಂತಿಲ್ಲ.
‘ತನ್ನ ಸಮುದಾಯದ ಹಿತ ಕಾಪಾಡುವ ಭರವಸೆ, ಅಬ್ಬರದ ಮಾತುಗಳನ್ನಾಡುತ್ತಲೇ ರಾಜಕಾರಣ ಪ್ರವೇಶಿಸಿದ ಕಮರುಲ್ ನಂತರದ ದಿನಗಳಲ್ಲಿ ಬೆಳೆಯುತ್ತ ತನ್ನನ್ನು ತಾನೇ ಸೆಕ್ಯುಲರ್ ನಾಯಕನಾಗಿ ರೂಪಿಸಿಕೊಳ್ಳಲು ಸತತ ಪ್ರಯತ್ನ ಮಾಡಿದರು. ಹಳೆಯ ಆವರಣದಿಂದ ಕಳಚಿಕೊಂಡು ಹೊಸ ರೂಪು ತಳೆಯಲು ಅವರು ನಡೆದುಕೊಂಡ ರೀತಿ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗುವಂತಹದು. ಕೆಲವರು ಅವರು ಪೊರೆ ಕಳಚಿದ್ದಾರೆ ಎಂದು ಭಾವಿಸಿದರೆ, ಮತ್ತೂ ಕೆಲವರು ಅದೇ ಹಳೆಯ ‘ಜಾತಿವಾದಿ’ ಎಂದು ವಾದಿಸುತ್ತಿದ್ದರು. ಎರಡೂ ಕಡೆಯವರಿಗೆ ತಮ್ಮಮ್ಮ ವಾದ ಮಂಡಿಸಲು, ಸಮರ್ಥಿಸಿಕೊಳ್ಳಲು ಸಾಕಷ್ಟು ಅಂಶಗಳು ಇದ್ದೇ ಇರುತ್ತವೆ. ಜಾತೀವಾದಿ- ಧರ್ಮ ಆಧಾರಿತ ಭಾರತದಲ್ಲಿ ಇಂತಹ ವಾದಗಳು ಕೊನೆಗೊಳ್ಳಲಾರವು. ಕಮರುಲ್ ಕೂಡ ಹಾಗೆಯೇ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು