ಮಾಧ್ಯಮಗಳು ಮತ್ತು ಸಾಮಾಜಿಕ ಕಾಳಜಿ



* ಬದಲಾದ ಈ ದಿನಗಳಲ್ಲ್ಲಿ ವೇಗ, ಓಟ ಎಷ್ಟು ಹೆಚ್ಚಾಗಿದೆ ಎಂದರೆ ಮಾಡಿದ ವರದಿಯ ಬಗ್ಗೆ ಮತ್ತೊಮ್ಮೆ ವಿಚಾರಿಸಿ ಪರಿಶೀಲನೆ ನಡೆಸುವಷ್ಟೂ ವ್ಯವಧಾನ ಇಲ್ಲದಂತಾಗಿದೆ. ಕೈಯಲ್ಲಿ ಇರುವುದನ್ನು ಮುಗಿಸುತ್ತಿದ್ದಂತೆಯೇ ಮತ್ತೊಂದನ್ನು ತೆಗೆದುಕೊಂಡು ಮಾಡಿ ಮುಗಿಸುವ ಅವಸರ ಮತ್ತು ಒತ್ತಡಗಳ ಮಧ್ಯೆ ಯೋಚನೆ ಮಾಡುವುದಕ್ಕೆ ಪುರುಸೊತ್ತಿಲ್ಲ. ಬಹಳಷ್ಟು ಜನ ಮೆಚ್ಚಿಕೊಂಡರೆ ಮಾಡಿದ ಕೆಲಸ ’ಯಶಸ್ವಿ’ ಎಂದೂ ಬಹಳಷ್ಟು ಜನ ಬೈದರೆ ’ವೈಫಲ್ಯ’ ಎಂದೂ ಪರಿಗಣಿಸಬಹುದಾದ ದಯನೀಯ ಸ್ಥಿತಿಯಿದೆ. ಅಂದರೆ ಇಡೀ ಬದುಕು ಸೋಲು- ಗೆಲವು, ಯಶಸ್ಸು -ಅಪಯಶಸ್ಸುಗಳ ದ್ವಿಭಾಗೀಯ ವರ್ಗೀಕರಣಕ್ಕೆ ಸೀಮಿತವಾಗಿದೆ. ಇವುಗಳ ಮಧ್ಯೆ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಯೋಚಿಸುವುದಕ್ಕೆ ಅವಕಾಶವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.
* ವಿಷಯ, ವಿವಾದ, ಚರ್ಚೆ, ಸಂಗತಿಗಳ ’ಕೇಂದ್ರ’ಗಳಿಂದ ದೂರ ಸಾಗುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ವ್ಯಾಪಕವಾಗಿದೆ. ವಿಭಿನ್ನವಾಗಿ ಮತ್ತು ಅದನ್ನು ಎಲ್ಲರಿಗಿಂತ ಮೊದಲು ಹಾಗೂ ಬೇಗ ಕೊಡಬೇಕು ಎನ್ನುವ ಕಾರಣಕ್ಕಾಗಿ ಸಮಸ್ಯೆಯ ಕೇಂದ್ರದ ಸುತ್ತ ಗಿರಕಿ ಹೊಡೆದು ಅದರ ಬಗ್ಗೆ ಮಾಹಿತಿ, ಅರಿವು ಮೂಡಿಸುವ ಬದಲು ಪರಿಧಿಯ ಯಾವುದೋ ಬಿಂದುವನ್ನು ಕೇಂದ್ರ ಅಂತ ಭಾವಿಸಿ ಅದರ ಸುತ್ತ ಚರ್ಚೆ ಬೆಳೆಸಲಾಗುತ್ತದೆ. ಇದರಿಂದಾಗಿ ಯಾವುದೋ ಅಮುಖ್ಯ ಸಂಗತಿಗೆ ಪ್ರಾಮುಖ್ಯತೆ ಬಂದರೆ ಮುಖ್ಯ ಸಂಗತಿ ಹಿನ್ನೆಲೆಗೆ ಸರಿದು ಬಿಡುತ್ತದೆ. ಇದು ಎರಡೂ ಕಡೆಯಿಂದ ನೋಡಿದರೂ ಓದುಗ- ವೀಕ್ಷಕನಿಗೆ ಆಗುವ ನಷ್ಟ.
* ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿಗಳು ಮತ್ತೆ ಮಧ್ಯಕಾಲೀನ ಕಪ್ಪುಯುಗಕ್ಕೆ ಕರೆದುಕೊಂಡು ಹೋಗುತ್ತಿವೆ. ಈ ದಾಳಿ ಕೇವಲ ನನ್ನ ದೇವರ ಆಯ್ಕೆ ಮತ್ತು ಮಹಿಳೆಯರು ಧರಿಸುವ ಬಟ್ಟೆಗೆ ಮಾತ್ರ ಸೀಮಿತವಾಗಿಲ್ಲ. ಸಂಸ್ಕೃತಿ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯ ಬಗ್ಗೆ ಭಾರತೀಯ ಸಂಸ್ಕೃತಿಯ ಹುಸಿಕಲ್ಪನೆಯಲ್ಲಿ ಮುಳುಗಿರುವ ಬಹುತೇಕರು ಜಾಣ ಕುರುಡು, ಕಿವುಡು ತೋರಿಸುತ್ತಿದ್ದಾರೆ. ಇಂದು ವೈಯಕ್ತಿಕ ದಾಳಿಯಂತೆ ಕಾಣಿಸುವ ಸಂಗತಿಗಳ ಸಂದರ್ಭದಲ್ಲಿ ತಾಳಿರುವ ’ಮೌನ’ವು ನಾಳೆ ನಡೆಯಲಿರುವ ದಾಳಿಯ ಸಂದರ್ಭದಲ್ಲಿ ಸಹಾಯ ಯಾಚಿಸುವ ಅವಕಾಶವನ್ನು ಕಿತ್ತುಕೊಂಡು ಬಿಡುತ್ತದೆ.
* ’ವ್ಯಕ್ತಿ ಭ್ರಷ್ಟನಾಗುತ್ತಾನೆ ಸಮುದಾಯ ಆಗುವುದಿಲ್ಲ’ ಎಂಬ ನಂಬಿಕೆಯಿತ್ತು. ಅದು ಬಹುತೇಕ ಹುಸಿಯಾದಂತೆ ಭಾಸವಾಗುತ್ತಿದೆ. ಸುತ್ತ ನಡೆಯುತ್ತಿರುವ ವಿದ್ಯಮಾನಗಳು ಮಾತ್ರ ಆಘಾತಕಾರಿಯಾಗಿವೆ. ನಾನು ಬಳಸಿದ ಭ್ರಷ್ಟತೆ ಎನ್ನುವ ಪದ ಕೇವಲ ಹಣಕಾಸಿಗೆ ಸಂಬಂಧಿಸಿದ್ದಲ್ಲ. ಮಾನಸಿಕವಾಗಿ ಆಗುವ ಕುಸಿತ ಅದಕ್ಕಿಂತ ಹೆಚ್ಚು ಆಪಾಯಕಾರಿಯಾದದ್ದು. ಮಾಧ್ಯಮಗಳಿಗಿದ್ದ ’ಹೋಲಿ ಕೌ’ ವ್ಯಾಖ್ಯಾನ ಈಗ ಬಹುತೇಕ ಇಲ್ಲವಾಗಿದೆ.
* ಯಾವ ರೀತಿಯ ಮತ್ತು ಎಷ್ಟು ಬೆಲೆ ತೆತ್ತು ಸುದ್ದಿ ಕೊಡುತ್ತಿದ್ದೇವೆ ಎಂಬ ಎಚ್ಚರ ಇಲ್ಲದಿದ್ದರೆ ಮುಂದಿನ      ದಿನಗಳಲ್ಲಿ ಮಾಧ್ಯಮಗಳು ಭಾರಿ ಅಪಾಯವನ್ನು ಉಂಟು ಮಾಡಲಿವೆ. ಇದರಿಂದಾಗಿ ಮಾಧ್ಯಮಗಳೇ ಉರಿಯುವ ಬೆಂಕಿಗೆ ತುಪ್ಪ ಸುರಿವ ಕೆಲಸವನ್ನು ಮಾಡುವ ಪ್ರಸಂಗಗಳು ಎದುರಾಗಬಹುದು.
* ಸಮಕಾಲೀನ ರಾಜಕಾರಣದ ಶಕ್ತಿಗಳು ತಮ್ಮ ಎಲ್ಲ ಕಬಂಧ ಬಾಹುಗಳನ್ನು ಬಳಸಿ ಮಾಧ್ಯಮಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಯಸುತ್ತಿವೆ. ಬಹುತೇಕ ಸಂದರ್ಭಗಳಲ್ಲಿ ಯಶಸ್ಸು ಕಂಡಿವೆ. ಎಲ್ಲವನ್ನೂ ಖರೀದಿಸಬಹುದು ಎಂಬ ಮನೋಭಾವ ಬೆಳೆದಿದೆ. ಅದಕ್ಕೆ ಸುತ್ತಲಿನ ಜಗತ್ತು ಅವಕಾಶ ಕಲ್ಪಿಸಿದೆ.
* ಮಾಧ್ಯಮಗಳಿಗೆ ಇರುವ ಸಾಮಾಜಿಕ ಜವಾಬ್ದಾರಿ ಅದಕ್ಕಿದ್ದ ’ಸೇವೆ’ಯ ಎನ್ನುವ ಕಾರಣದಿಂದ ಬಂದದ್ದಾಗಿತ್ತು. ಸ್ವತಂತ್ರ ಹೋರಾಟ, ಏಕೀಕರಣ, ಚಳವಳಿಗಳ ಸಂದರ್ಭದಲ್ಲಿ ಆ ಕೆಲಸವನ್ನು ಮಾಧ್ಯಮಗಳು ಯಶಸ್ವಿಯಾಗಿ ಮಾಡಿದ್ದವು. ಈಗ ಇಡೀಯಾಗಿ ಅದಕ್ಕೆ ಉದ್ಯಮದ ಸ್ವರೂಪ ಬಂದಿರುವುದರಿಂದ ಲಾಭ- ನಷ್ಟದ ಲೆಕ್ಕಾಚಾರವೇ ಪ್ರಮುಖ. ಉದ್ಯಮದಲ್ಲಿ ಉಳಿಯಬೇಕಾದರೆ ಅದರ ಸ್ವರೂಪಕ್ಕೆ ತಕ್ಕಂತೆ ಹೊಂದಿಕೊಂಡು ಇರುವುದು ಅನಿವಾರ್ಯ. ಅಂದರೆ ಮಾಧ್ಯಮಗಳನ್ನು ಮಾರುಕಟ್ಟೆ ಮತ್ತು ರಾಜಕೀಯ ಶಕ್ತಿಗಳು ನೇರವಾಗಿ ನಿಯಂತ್ರಿಸುತ್ತಿವೆ. ಅದು ಮೇಲುನೋಟಕ್ಕೇ ಎದ್ದು ಕಾಣಿಸುವಷ್ಟು ಸ್ಪಷ್ಟವಾಗಿ ಗೋಚರ ಆಗುತ್ತಿದೆ.
* ಬದಲಾದ ಸಂದರ್ಭದಲ್ಲಿ ಪತ್ರಿಕೆಗಳ ಮೇಲಿದ್ದ ಓದುಗನ ಮಾಲೀಕತ್ವ ಇಲ್ಲವಾಗಿದೆ. ದರ ಸಮರದ ಪರಿಣಾಮವಾಗಿ ಓದುಗನಿಗೆ ಪೇಪರ್ ಕಡಿಮೆ ಬೆಲೆಗೆ ಸಿಗುತ್ತಿದೆ. ಆದರೆ, ’ಓದುಗನೇ ಮಾಲೀಕ’ನಾಗಿದ್ದ ದಿನಗಳಿದ್ದವು. ದುಬಾರಿ ದಿನಗಳಲ್ಲಿ ಪತ್ರಿಕೆಗಳ ನಿರ್ವಹಣೆಯ ವೆಚ್ಚ ಹೆಚ್ಚಿದೆ. ಅದರಿಂದಾಗಿ ಬೆಲೆಯಿಂದಾಗಿ ಮಾರುಕಟ್ಟೆ ಅಂದರೆ ಜಾಹೀರಾತಿನ ಮೂಲಕ ಆದಾಯವನ್ನು ಸರಿದೂಗಿಸಬೇಕಾಗುತ್ತಿದೆ. ಮಾರುಕಟ್ಟೆಯು ಪತ್ರಿಕೆಗಳ ಆದಾಯಕ್ಕೆ ಪ್ರಮುಖ ಕೊಡುಗೆ ನೀಡುತ್ತಿದೆ. ಆದ್ದರಿಂದ ಪತ್ರಿಕೆಗಳ ಮಾಲೀಕತ್ವ ಜಾಹೀರಾತುದಾರರಿಗೆ ವರ್ಗಾವಣೆ ಆದಂತೆ ಭಾಸವಾಗುತ್ತಿದೆ. ಇದರಿಂದಾಗಿ ತೀರಾ ಜನಪರವಾಗಿ ಯೋಚಿಸುವ ಪತ್ರಿಕಾ ಸಮೂಹ ಕೂಡ ಒತ್ತಡಕ್ಕೆ ಸಿಲುಕಿದೆ.
ಇಷ್ಟೆಲ್ಲ ಆತಂಕಗಳ ಮಧ್ಯೆಯೂ ಆಸೆಗಳು ಕಮರಿಹೋಗಿಲ್ಲ. ನಿರಾಶೆಯ ಕಾರ್ಮೋಡದ ನಡುವೆಯೂ ಅಲ್ಲಲ್ಲಿ ಕಾಣಿಸುತ್ತಿರುವ ಬೆಳ್ಳಿಗೆರೆಗಳು ಹೊಸ ದಾರಿ ತೆರೆದುಕೊಳ್ಳಲಿದೆ ಎಂಬುದನ್ನು ಸೂಚಿಸುತ್ತಿವೆ.


-ದೇವು ಪತ್ತಾರ
24-2-2011

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು