ಮಲ್ಲಿಕಾರ್ಜುನ ಬಾಗೋಡಿ

ಸಂಶೋದಕನ ಅರಿಯ ಬಯಸುವ ಹಂಬಲ ಮತ್ತು ಕುತೂಹಲ, ಕಲಾವಿದನ ಸೃಜನಶೀಲ ಮನಸ್ಸು,  ಲೇಖಕನ ಮನವರಿಕೆ ಮಾಡಿಸುವ ಕಾಳಜಿ, ಅಧ್ಯಾಪಕನ ಕಲಿಸುವ ಕಳಕಳಿ ಹೊಂದಿರುವ ಮಲ್ಲಿಕಾರ್ಜುನ ಬಾಗೋಡಿ ಅವರು ಕೇವಲ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮಾತ್ರವಲ್ಲದೆ ಕನ್ನಡದ ಪ್ರಮುಖ ಕಲಾ ಲೇಖಕರಲ್ಲಿ ಒಬ್ಬರು. ದೃಶ್ಯ ಮಾಧ್ಯಮಕ್ಕೆ ಸಂಬಂಧಿಸಿದ ವಿಷಯ, ಮಾಹಿತಿ, ಸಂಗತಿಗಳನ್ನು ಮನಮುಟ್ಟುವಂತೆ ಅಕ್ಕರದಲ್ಲಿ ದಾಖಲಿಸಬಲ್ಲರು. ಕಲಬುರಗಿಯ ಅನನ್ಯ ಹಾಗೂ ಅಜ್ಞಾತ ಕಲಾವಿದ ನಾಗಭೂಷಣ ಅವರನ್ನು ಕುರಿತ ಈ ಪುಟ್ಟ ಹೊತ್ತಿಗೆಯು ಬಾಗೋಡಿಯವರ ಆಸಕ್ತಿ ಹಾಗೂ ಪ್ರೀತಿಗೆ ಕನ್ನಡಿ ಹಿಡಿದಂತಿದೆ. ಭಾವನಾತ್ಮಕ ಹಾಗೂ ಸೃಜನಾತ್ಮಕ ಮನಸ್ಸಿನ ನಾಗಭೂಷಣ ಅವರು ಮುಂಬಯಿ ನ ಪ್ರತಿಷ್ಠಿತ ಜೆ.ಜೆ. ಕಲಾಶಾಲೆಯ ವಿದ್ಯಾರ್ಥಿ ಆಗಿದ್ದವರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅದರ ಕಥೆಯೇ ಬೇರೆ ಆಗಿರುತ್ತಿತ್ತು. ದುರದೃಷ್ಟವಶಾತ್ ಹಾಗೆ ಆಗಲಿಲ್ಲ. ಆದರೆ, ಅದು ಮತ್ತೊಂದು ವಿಭಿನ್ನ ಕಲಾಸೃಷ್ಟಿಗೆ ಅನುವು ಮಾಡಿಕೊಟ್ಟಿತು. ಕ್ರಿಶ್ಚಿಯಮನ್ ಸ್ನೇಹಿತರ ಒಡನಾಟದಿಂದ ಪ್ರಭಾವಿತರಾಗಿದ್ದ ನಾಗಭೂಷಣ ಕಲಾಕೃತಿಗಳು ಕರ್ನಾಟಕದ ದೃಶ್ಯ ಮಾಧ್ಯಮ ಲೋಕಕ್ಕೆ ನೀಡಿದ ವಿಭಿನ್ನ ಮತ್ತು ಅಪರೂಪದ ಕೊಡುಗೆ. ವಸ್ತುವಿನ ಆಯ್ಕೆಯೂ ಸೇರಿದಂತೆ ಅದನ್ನು ಮಂಡಿಸುವ ಕ್ರಮದಲ್ಲಿಯೂ ನಾಗಭೂಷಣ ಭಿನ್ನರಾಗಿ ನಿಲ್ಲುತ್ತಾರೆ. ಬಹುತ್ವ ಪ್ರಪ್ರಿಯರೂ ಮತ್ತು ಅದರ ಪ್ರತಿಪಾದಕರೂ ಆಗಿದ್ದ ನಾಗಭೂಷಣ ಅವರು ಕಲಾಲೋಕವು ಮರೆತಿರುವ ಹಾಗೂ ಮರೆಯಬಾರದ ಕಲಾವಿದ.  ಅಪರೂಪದ ಪುಟ್ಟ ಪುಸ್ತಿಕೆಯು ಕಿರಿಯದರಲ್ಲಿ ಹಿರಿದರ್ಥ ಹೊಂದಿರುವಂತಹದ್ದು.
ದೇವು ಪತ್ತಾರ, ಶಹಾಪುರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು