ನಿಕಿಟಿನ್ ಹೆಜ್ಜೆ ಜಾಡಿನಲ್ಲಿ


 

ಏಳು ವರ್ಷದ ಹಿಂದಿನ ಮಾತು. ಬೀದರ್‌ಗೆ ಆಗ ಈಗಿನಷ್ಟು ಜನ ವಿದೇಶಿಯರು ಬರುತ್ತಿರಲಿಲ್ಲ. ಇರಲೇ ಇಲ್ಲ ಎಂದರೂ ಆದೀತು. ಅಂತಹ ದಿನಗಳಲ್ಲಿ  ಯಾರಾದರೂ ಕಂಡರೆ ಸಹಜವಾಗಿಯೇ ಆಶ್ಚರ್ಯ ಮೂಡದೇ ಇರದು. ಸರಿಯಾಗಿ ೨೦೦೭ ಮಾರ್ಚ್ ೨೫ರ ಸಂಜೆ ಕೆಲವು ವಿದೇಶಿಯರು ಮತ್ತು ದೇಶಿ ಜನರ ತಂಡವು ಬೀದರ್‌ನ ಹೋಟೆಲ್ ಒಂದರಲ್ಲಿ ಕುಳಿತು ಮಾತು- ಚರ್ಚೆ- ಹರಟೆಯಲ್ಲಿ  ನಿರತರಾಗಿದ್ದರು. ಅವರ ಮಾತಿನ ಮಧ್ಯೆ ನಿಕಿಟಿನ್, ಬೀದರ್, ಗಾವಾನ್ ಮತ್ತಿತರ ವಿವರಗಳು ಸುಳಿದಾಡುತ್ತಿದ್ದವು. ಅಲ್ಲಿಯೇ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಕನ್ನಡ ಉಪನ್ಯಾಸಕ ಬಸವರಾಜ ಬಲ್ಲೂರು ಅವರಿಗೆ ಸಹಜವಾಗಿಯೇ ಕುತೂಹಲ ಮೂಡಿತು. ಅವರೊಡನೆ ಮಾತಿಗೀಳಿದರು. ಮಾತನಾಡಿದ ನಂತರವೂ ಮೊದಲು ಗೊತ್ತಿದ್ದಕ್ಕಿಂತ ಹೆಚ್ಚೇನು ಸಂಗತಿ ಅರ್ಥವಾಗಲಿಲ್ಲ. ಆದರೆ, ಆ ತಂಡದ ಸದಸ್ಯರಿಗೆ ಇಲ್ಲೊಬ್ಬ  ಹಿಸ್ಟರಿ ಬಗ್ಗೆ ಗೊತ್ತಿರುವ ಪ್ರೊಫೆಸರ್ ಇದ್ದಾರೆ ಎಂದು ಅವರನ್ನು ಪ್ರೊ. ಬಿ.ಆರ್. ಕೊಂಡಾ ಅವರ ಬಳಿಗೆ ಕರೆದೊಯ್ದರು. ಮನೆ ಮುಂದೆ ಬಂದು ನಿಂತ ವಿದೇಶಿ ತಂಡ ತಂಡ ನೋಡಿದ ಕೊಂಡಾ ಅವರಿಗೆ ಅರೆಕ್ಷಣ ಗಲಿಬಿಲಿ. ೫೩೨ ವರುಷಗಳ ಹಿಂದೆ ಇತಿಹಾಸದ ಪುಟಗಳಲ್ಲಿ  ದಾಖಲಾಗಿದ್ದ ಪ್ರವಾಸಿಯೊಬ್ಬನ ಹೆಜ್ಜೆಜಾಡಿನಲ್ಲಿ   ನಡೆದು ಬಂದ ತಂಡ ಅವರ ಮನೆಯ ಬಾಗಿಲ ವರೆಗೂ ಬಂದದ್ದು ಯಾರಿಗೆ ತಾನೆ ಅಚ್ಚರಿ ಮೂಡಿಸಲು ಸಾಧ್ಯವಿಲ್ಲ.
೧೫ನೇ ಶತಮಾನದ ರಷ್ಯದ ಪ್ರವಾಸಿ ಅಫನಾಸಿ ನಿಕಿಟಿನ್ ವ್ಯಾಪಾರ ಮಾಡುವ ಉzಶದಿಂದ ಹೊರಟು ಹಲವು ದೇಶ, ಸಮುದ್ರಗಳನ್ನು ದಾಟಿ ಬೀದರ್‌ಗೆ ಬಂದು ತಲುಪಿದ್ದ. ತನ್ನ ಪ್ರವಾಸವನ್ನು  ’ಮೂರು ಸಮುದ್ರಗಳಾಚೆ’ಯಲ್ಲಿ  ಕಥನವಾಗಿಸಿದ್ದಾನೆ. ರಷ್ಯದಿಂದ ಹೊರಗೆ ಹೊರಟ ಮೊದಲ ಪ್ರವಾಸಿ ಮತ್ತು ಲೇಖಕ. ಅದೇ ಕಾರಣಕ್ಕಾಗಿ ರಷ್ಯದಲ್ಲಿ  ಅವನಿಗೆ ವಿಶೇಷ ಮನ್ನಣೆ- ಗೌರವ. ನಿಕಿಟಿನ್‌ನ ಹೆಜ್ಜೆಜಾಡಿನಲ್ಲಿ  ನಡೆಯ ಬಯಸಿದ ರಷ್ಯ ಮತ್ತು ಭಾರತದ ವಿದ್ವಾಂಸರ ತಂಡವು ಅದಕ್ಕಾಗಿ ’ಇನ್ ದ ಫುಟ್‌ಸ್ಟೆಪ್ ಆಫ್ ನಿಕಿಟಿನ್’ ಯೋಜನೆಯನ್ನು ಸಿದ್ಧಪಡಿಸಿತು. ಅಲೆದಾಡುತ್ತ ಬಂದ ನಿಕಿಟಿನ್ ಕೊನೆಗೆ ತಲುಪಿದ್ದು ಮತ್ತು ಹೆಚ್ಚು ಕಾಲ ಕಳೆದದ್ದು ಬೀದರ್‌ನಲ್ಲಿ . ಹಾಗೆಯೇ ತನ್ನ ದಿನಚರಿಯ ಬಹುಪಾಲು ಪುಟಗಳನ್ನು ಬೀದರ್ ಕುರಿತ ವಿವರಗಳಿಗಾಗಿ ಮೀಸಲಿಟ್ಟಿದ್ದಾನೆ. ನಿಕಿಟಿನ್‌ನ ಹಾಗೆ ಈ ವಿದ್ವಾಂಸರ ತಂಡವು ಬೀದರ್‌ಗೆ ತಲುಪಿತು. ಅಲ್ಲಿ  ನಿಕಿಟಿನ್, ಗಾವಾನ್ ಬಗ್ಗೆ ಮಾತನಾಡುವ- ಹೇಳುವ- ವಿವರಿಸುವ ವ್ಯಕ್ತಿ ಸಿಗಬಹುದೇ? ಎಂದು ಹುಡುಕುತ್ತಿದ್ದರು. ಹುಡುಕುತ್ತಿದ್ದ ಬಳ್ಳಿಯೇ ಕಾಲಿಗೆ ಸಿಕ್ಕಂತೆ ಬಲ್ಲೂರು ಅವರನ್ನು ಕೊಂಡಾ ಅವರ ಮನೆ ಬಾಗಿಲಿಗೆ ತಲುಪಿಸಿದರು. ನಿಕಿಟಿನ್ ಕುರಿತ ವಿವರಗಳನ್ನು ಕೊಂಡಾ ಅವರ ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದರು. ರಾಜ್ಯಶಾಸ್ತ್ರದ ಅಧ್ಯಾಪಕರಾಗಿದ್ದರೂ ಇತಿಹಾಸ ಅವರಿಗೆ ಪ್ರಿಯವಾದ ವಸ್ತು ಆಗಿತ್ತು. ಕೇವಲ ಇತಿಹಾಸ ಮಾತ್ರವಲ್ಲ. ಗ್ರಾಮೀಣಾಭಿವೃದ್ಧಿ, ಮಹಿಳೆಯರ ಅಭ್ಯುದಯ, ಸಣ್ಣ ಉಳಿತಾಯ ಕ್ಷೇತ್ರಗಳು ಕೊಂಡಾ ಅವರ ಆಸಕ್ತಿಯ ಕ್ಷೇತ್ರಗಳು. ಕೊಂಡಾ ಅವರು ಮಾತಿಗೆ ನಿಂತರೆ ಕಾಲ ಸರಿದ್ದಿದೇ ಗೊತ್ತಾಗುತ್ತಿರಲಿಲ್ಲ. ಮೂರು ದಶಕಗಳ ಕಾಲ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಅನುಭವ ಇದ್ದ ಕೊಂಡಾ ಅವರು ಎದುರಿದ್ದವರು ಮಂತ್ರಮುಗ್ಧರಾಗುವಂತೆ ಸಂಗತಿ, ಘಟನೆಗಳನ್ನು ವಿವರಿಸಬಲ್ಲವರಾಗಿದ್ದರು. ಅರಿಯ ಬಯಸುವ ಆರ್ಥಿಗೆ ಅವರೊಂದು ಸಲಿಲ ಧಾರೆಯಂತಿದ್ದರು. ಅಂದು ಕೂಡ ಹಾಗೆಯೇ ಆಯಿತು. ನಿಕಿಟಿನ್ ಹೆಜ್ಜೆಜಾಡಿನಲ್ಲಿ  ಬಂದ ತಂಡವು ಕೊಂಡಾ ಅವರ ವಿವರಣೆ ಕೇಳಿ ಬೆಕ್ಕಸ ಬೆರಗಾಯಿತು. ಮರುದಿನ ಕೊಂಡಾ ಅವರನ್ನು ಕರೆದುಕೊಂಡು ಬೀದರ್‌ನ ಐತಿಹಾಸಿಕ ಸ್ಮಾರಕಗಳ ಸುತ್ತ ತಂಡ ಸುತ್ತಾಡಿತು. ತಮ್ಮ ಪ್ರವಾಸವನ್ನು ವಿಡಿಯೋ ದಾಖಲೀಕರಣ ಮಾಡಿಕೊಂಡಿತು. ನಂತರ  ಅದನ್ನು ಆಧರಿಸಿ ಸಾಕ್ಷ್ಯಚಿತ್ರ ಸಿದ್ಧಪಡಿಸಲಾಯಿತು.  ಡಾಕ್ಯುಮೆಂಟರಿಯ ಬಿಡುಗಡೆಗೆ ಕೊಂಡಾ ಅವರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು.
೭೧ ವರ್ಷದ ತುಂಬು ಜೀವನ ನಡೆಸಿದ ಬಸವಲಿಂಗಪ್ಪ ರಾಚಪ್ಪ  (೧೫-೧-೧೯೪೩ ರಿಂದ  ೨೬-೬-೨೦೧೪) ನಾಡು ಕಂಡ ಅಪರೂಪದ ವಿದ್ವಾಂಸರಾಗಿದ್ದರು. ನಿಕಿಟಿನ್ ತಂಡ ಬೀದರ್‌ಗೆ ಬರುವ ನಾಲ್ಕಾರು ತಿಂಗಳು ಮೊದಲೇ ಕೊಂಡಾ ಅವರು ಮಹಮೂದ್ ಗಾವಾನ್ ಬಗ್ಗೆ  ಡಾಕ್ಯುಮೆಂಟರಿ ಫಿಲಂ ತಯಾರಿಸಿದ್ದರು. ಬೀದರ್ ಜಿಲ್ಲಾಡಳಿತ ಸಿದ್ಧಪಡಿಸಿದ ಗಾವಾನ್ ಕುರಿತ ಸಾಕ್ಷ್ಯಚಿತ್ರ ನೋಡುತ್ತಿದ್ದರೆ ಇಷ್ಟೊಂದು ದೊಡ್ಡ ವ್ಯಕ್ತಿಯೇ ಇದ್ದಿದ್ದರೆ ಹೀಗೇಕೆ ಮೂಲೆಗುಂಪಾಗಿರುತ್ತಿದ್ದ ಎಂಬ ಅನುಮಾನ ಮೂಡದೇ ಇರದು. ಗಾವಾನ್ ಬಗ್ಗೆ  ಹುಚ್ಚೆದ್ದು ಓಡುವುದಕ್ಕೆ ಪ್ರೇರಣೆ ಸಿಕ್ಕz ಕೊಂಡಾ ಅವರಿಂದ. ರಾಜ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಆಡಳಿತದ ಪಠ್ಯ ರಚಿಸಿದ್ದ ಕೊಂಡಾ ಅವರಿಗೆ ಆಡಳಿತಗಾರನಾಗಿದ್ದ ಗಾವಾನ್ ಬಗ್ಗೆ ಆಸ್ಥೆ ಇದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಆದರೆ, ಅವರ ನಿಜವಾದ ಕಾಳಜಿ -ಆಸ್ಥೆ ಇದ್ದದ್ದು ಅಭಿವೃದ್ಧಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಅಭಿವೃದ್ಧಿಯಲ್ಲಿ. ಮಾನವ ಹಾಗೂ ಪರಿಸರ ಸಂಪನ್ಮೂಲ ಆಧಾರಿತ ಅಭಿವೃದ್ಧಿ  ಬರದೇ ಇದ್ದರೆ ಅಂತಹ ಅಭಿವೃದ್ಧಿಗೆ ಯಾವುದೇ ಅರ್ಥ ಇರುವುದಿಲ್ಲ ಎಂಬುದು ಅವರ ನಿಲುವಾಗಿತ್ತು. ಬೀದರ್‌ನಲ್ಲಿ  ಡಿಸಿಸಿ ಬ್ಯಾಂಕ್ ನಡೆಸಿದ ಸ್ವಸಹಾಯ ಸಂಘಗಳ ಪ್ರಯೋಗವೇ ನಂತರ ರಾಜ್ಯದಲ್ಲಿ  ಸ್ತ್ರೀಶಕ್ತಿ ಗುಂಪುಗಳಾಗಿ ಕಾಣಿಸಿಕೊಂಡಿತು. ಸ್ವಸಹಾಯ ಸಂಘಗಳ ಅಭೂತಪೂರ್ವ ಯಶಸ್ಸು  ಗಮನಿಸಿದ ದೇಶದ ವಿವಿಧ ರಾಜ್ಯಗಳ ಜಿಲ್ಲಾಡಳಿತದ ತಂಡಗಳು ಬೀದರ್‌ಗೆ ಬಂದು ಅಧ್ಯಯನ ನಡೆಸಿವೆ. ಅಂತಹ ತಂಡಗಳಿಗೆ ತರಬೇತಿ -ಮಾಹಿತಿ ನೀಡುವ ಪ್ರತ್ಯೇಕ ಘಟಕವೇ ಇದೆ. ಪ್ರೊ. ಕೊಂಡಾ ಅವರು ಅದರ ಸಂಪನ್ಮೂಲ ವ್ಯಕ್ತಿ ಆಗಿದ್ದರು. ದೇಶದ ೩೫೦ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾ  ಪಂಚಾಯತ್ ಮಾದರಿಯ ಸಂಸ್ಥೆಗಳ ಮುಖ್ಯಸ್ಥರಿಗೆ ಕೊಂಡಾ ತರಬೇತಿ ನೀಡಿದ್ದಾರೆ. ಬೀದರ್‌ನಂತಹ ಪುಟ್ಟ ಪಟ್ಟಣದಲ್ಲಿ ಕಾಲೇಜೊಂದರ ಮೇಷ್ಟ್ರಾಗಿದ್ದ ಅವವರು ಒಮ್ಮೆಯೂ ವಿದೇಶಿ ನೆಲದ ಮೇಲೆ ಕಾಲಿಡದಿದ್ದರೂ ತಮ್ಮ  ಖ್ಯಾತಿಯನ್ನು ಸಮುದ್ರಗಳಾಚೆ ಹರಡಿದವರು. ಪಾಶ್ಚಾತ್ಯ ವಿದ್ವಾಂಸರ ಆಸ್ಥೆ- ಶ್ರದ್ಧೆಗಳೆರಡೂ ನಮ್ಮಲ್ಲಿ ಇಲ್ಲದ್ದಕ್ಕೆ ವ್ಯಥೆ ಪಡುತ್ತಿದ್ದರು.
ವಿದೇಶಿ ನೆಲದಲ್ಲಿ ಕಾಲಿಟ್ಟು  ಅಲ್ಲಿ ಉತ್ತರ ಕರ್ನಾಟಕ ಅದರಲ್ಲೂ ವಿಶೇಷವಾಗಿ ಹೈದರಾಬಾದ್ ಕರ್ನಾಟಕದ ಜಾನಪದ ಲೋಕವನ್ನು ಅನಾವರಣ ಮಾಡಿದವರು ಡಾ. ಬಸವರಾಜ ಮಲಶೆಟ್ಟಿ . ಬಯಲಾಟದ ತಂಡ ಕಟ್ಟಿಕೊಂಡು ಅದಕ್ಕೆ ಶಿಸ್ತುಬದ್ಧ, ತಾತ್ವಿಕ ಚೌಕಟ್ಟು  ಕಟ್ಟಿ ಆಡಿ- ಹಾಡಿ ತೋರಿಸಿದ ಮಲಶೆಟ್ಟಿ ಅವರು ಹೆಜ್ಜಿಮ್ಯಾಳ, ಕರಡಿಮಜಲು, ಕೋಲಾಟಗಳ ಬೆನ್ನು ಹತ್ತಿ ಓಡಾಡಿದರು. ತಮ್ಮ ಬಯಲಾಟದ ತಂಡದ ಗಿರಿಜಾ ಕಲ್ಯಾಣ ಪ್ರಸಂಗವನ್ನು ಜರ್ಮನಿಯಲ್ಲಿ  ಪ್ರದರ್ಶಿಸಿದ್ದರು. ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ  ಕನ್ನಡ ಮೇಷ್ಟ್ರಾಗಿದ್ದ ಮಲಶೆಟ್ಟಿ ಅವರು ಅಲ್ಲಿಯೇ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು. ಜಾನಪದ ಮತ್ತು ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದ ವಿವರಗಳನ್ನು ಚಟಪಟನೆ ಅರಳು ಹುರಿದಂತೆ ವಿವರಿಸುತ್ತಿದ್ದ ಮೇಷ್ಟ್ರು  ಅದರಲ್ಲಿ ಅಪಾರ ಗತಿ ಹೊಂದಿದವರಾಗಿದ್ದರು. ಹಿಂದೂಸ್ತಾನಿ ಗಾಯಕ ಬಸವರಾಜ ರಾಜಗುರು ಅವರ ಆಪ್ತರಾಗಿದ್ದ  ಅವರು ’ಇಂಚರ’ ಅಭಿನಂದನ ಗ್ರಂಥ ಸಂಪಾದಿಸಿದ್ದರು. ಹಿಕ್ಕೆ, ಹೆಂಡಿ, ಕುಳ್ಳು, ಸೆಗಣಿಗಳ ನಡುವಿನ ವ್ಯತ್ಯಾಸ ಗುರುತಿಸಲಾಗದ ಸಾಂಸ್ಕೃತಿಕ ಬಿಕ್ಕಟ್ಟಿನ ದಿನಗಳು ಎದುರಾಗುತ್ತಿರುವ ಬಗ್ಗೆ ಆತಂಕಿತರಾಗಿದ್ದರು. ಜಾನಪದದಲ್ಲಿ ಆಸಕ್ತಿ ಇರುವ ಕಾರಣದಿಂದ ಉತ್ತರ ಕರ್ನಾಟಕದ ಬಯಲಾಟಗಳ ಬಗ್ಗೆ ಅಧ್ಯಯನ ನಡೆಸಿದ್ದ ಮಲಶೆಟ್ಟಿ ಅವರು ಅದನ್ನು ಕೇವಲ ಅಧ್ಯಯನಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳದೇ ತಮ್ಮ ವ್ಯಕ್ತಿತ್ವದ ಭಾಗ ಆಗಿಸಿಕೊಂಡಿದ್ದರು. ಅದಕ್ಕಾಗಿಯೇ ಅವರು ಊರೂರು ಅಲೆಯುತ್ತ ಗೀಗಿಮ್ಯಾಳ, ಹೆಜ್ಜಿಮ್ಯಾಳ, ಕರಡಿಮಜಲುಗಳ ತಂಡದ ಸದಸ್ಯರ ಜತೆ ಬೆರೆತು ಬಿಡುತ್ತಿದ್ದರು. ಜಾನಪದ ಕಲಾವಿದರ ಜತೆ ಇದ್ದಾಗ ಅವರು ವಿದ್ವಾಂಸರಾಗಿರುತ್ತಿರಲಿಲ್ಲ, ಸ್ವತಃ ಕಲಾವಿದರಾಗಿರುತ್ತಿದ್ದರು ಅಥವಾ ಆಸ್ಥೆಯಿಂದ ಗಮನಿಸುವ ಮಗುವಾಗಿರುತ್ತಿದ್ದರು. ಸಂಗ್ಯಾ-ಬಾಳ್ಯಾ ನಾಡಿನಿಂದ ಬಂದವರಾದ ಮಲಶೆಟ್ಟಿ  ಅವರು ರಾಧಾನಾಟ, ಕೃಷ್ಣ ಪಾರಿಜಾತ ಸೇರಿದಂತೆ ಪ್ರದರ್ಶನ ಕಲೆಗಳ ಬಗ್ಗೆ ಆಸಕ್ತಿ ಹೊಂದಿದ್ದರು. ಅವರಿಬ್ಬರ ನಿರ್ಗಮನ ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕಲೋಕದ ದೊಡ್ಡ ನಷ್ಟ.
ಕೊಂಡಾ ಮತ್ತು ಮಲಶೆಟ್ಟಿ  ಇಬ್ಬರೂ ವಿಶ್ವವಿದ್ಯಾಲಯದಲ್ಲಿ  ಇರಲಿಲ್ಲ. ಆದರೆ, ವಿಶ್ವವಿದ್ಯಾಲಯದಲ್ಲಿ ಇದ್ದ- ಇರುವ ಯಾವೊಬ್ಬ ವಿದ್ವಾಂಸರಿಗಿಂತಲೂ ಅವರು ಕಡಿಮೆ ಆಗಿರಲಿಲ್ಲ. ಅವರಿಬ್ಬರೂ ಅಕಾಡೆಮಿಕ್ ಲೋಕದಲ್ಲಿ  ಕ್ರಿಯಾಶೀಲವಾಗಿದ್ದ ದಿನಗಳಲ್ಲಿ ಯುಜಿಸಿ (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಈಗಿನ ಹಾಗೆ ಹಣ ಸುರಿಯುತ್ತಿರಲಿಲ್ಲ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಹಣದ ಕೊರತೆಯಾದರೆ ಅಧ್ಯಯನ, ಅಧ್ಯಾಪನ, ಸಂಶೋಧನೆಯ ಮೇಲೆ ಪರಿಣಾಮ ಬೀರುತ್ತದೆ. ಅದಾಗಬಾರದು ಎಂಬ ಉzಶದಿಂದ ಯುಜಿಸಿ ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಅಧ್ಯಾಪಕರಿಗೆ ಅಪಾರ ಹಣ ನೀಡುತ್ತಿದೆ. ಆದರೆ, ಆಗುತ್ತಿರುವುದೇನು?  ವ್ಯಾಪಕವಾಗಿದ್ದ ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಚಿಂತನೆ ನಡೆಸಿದ ಬಹಮನಿ ಸಾಮ್ರಾಜ್ಯದಲ್ಲಿ ಪ್ರಧಾನಿಯಾಗಿದ್ದ ಮಹಮೂದ್ ಗಾವಾನ್ ಸಿಬ್ಬಂದಿ ಭ್ರಷ್ಟರಾಗುವುದಕ್ಕೆ ಅವರಿಗೆ ಸಾಕಾಗುವಷ್ಟು ಹಣ ಸಿಗದಿರುವುದೇ ಕಾರಣ ಎಂದು ವ್ಯಾಖ್ಯಾನಿಸಿ ವೇತನವನ್ನು ಮೂರು ಪಟ್ಟು ಹೆಚ್ಚು ಮಾಡಿದ. ಆದರೆ, ಗಾವಾನ್‌ನ ಆಪ್ತಕಾರ್ಯದರ್ಶಿಯೇ ಲಂಚಪಡೆದು ಖಾಲಿ ಹಾಳೆಯ ಮೇಲೆ ಸೀಲುಹಾಕಿಕೊಟ್ಟು  ಪ್ರಧಾನಿಯ ಹತ್ಯೆಗೆ ಕಾರಣನಾದ. ಹಣದ ಕೊರತೆ ಆಗದೇ ಅಧ್ಯಯನ- ಅಧ್ಯಾಪನದಲ್ಲಿ  ತೊಡಗಲಿ ಎಂದು ಯುಜಿಸಿ ನಡೆಸಿದ ಚಿಂತನೆಯೂ ಗಾವಾನ್ ಮಾದರಿಯದೇನೋ ಅನ್ನಿಸದೇ ಇರದು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು