ಇಟಗಿ ಈರಣ್ಣ: ಬಾಷ್ಪಾಂಜಲಿ, ಶ್ರದ್ಧಾಂಜಲಿ


ಸರಿಯಾಗಿ ನೆನಪಿದೆ. ನಾನಾಗ ಎಸ್ಎಸ್ಎಲ್ ಸಿ ಪಾಸಾಗಿ ಪಿಯುಸಿ ಓದಿಗಾಗಿ ಹೊಸಪೇಟೆಯ ವಿಜಯನಗರ ಕಾಲೇಜು ಸೇರಿದ್ದೆ. ಅತ್ತ ಹಳ್ಳಿಯೂ ಅಲ್ಲದ ಇತ್ತ ನಗರವೂ ಅಲ್ಲದ ಪಟ್ಟಣದಂತಿದ್ದ ಶಹಾಪುರದಿಂದ ಹೊಸಪೇಟೆಗೆ ಹೋಗಿದ್ದ ನನಗೆ ಕಾಲೇಜಿನ ಅನುಭವ ಹೊಸದು. ದೊಡ್ಡ ಕಾಲೇಜು ಬೃಹತ್ ವಿದ್ಯಾರ್ಥಿ ಸಮೂಹದ ನಡುವೆ ಕೆಲಕಾಲ ಬೆರಗು. ನಂತರ ಅಚ್ಚರಿ, ಭಯ, ಆತಂಕ. ಪಿಯುಸಿ ಮೊದಲ ವರ್ಷದ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನನಗೆ ಫಿಜಿಕ್ಸ್, ಕೆಮಿಸ್ಟ್ರಿ ನುರಿಯದ ಕಬ್ಬಿಣದ ಕಡಲೆಯಾಗಿದ್ದವು. ಕನ್ನಡ ಮೀಡಿಯಂನಲ್ಲಿ ಓದಿ ಇದ್ದಕ್ಕಿದ್ದಂತೆ ಎಲ್ಲವೂ ಇಂಗ್ಲಿಷ್ ಮಯ ಕಲಿಕೆಗೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದೆ. ಸರಳವಾಗಿ ವಿವರಿಸುತ್ತಿದ್ದ ಮೇಷ್ಟ್ರುಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಬಾಕಿಯವರೆಲ್ಲ ಕುದುರೆಯ ಮೇಲೆ ಕುಳಿತಂತೆ ಓಡಿ ಬಿಡುತ್ತಿದ್ದರು. ಬೆನ್ನೆತ್ತಲಾಗದೇ ಭೀತನಾಗುತ್ತಿದ್ದೆ. ಅಂತಹ ದಿನಗಳಲ್ಲಿ ನನಗೆ ಅರ್ಥವಾಗುತ್ತಿದ್ದ ಏಕೈಕ ಸಬ್ಜೆಕ್ಟ್ ಕನ್ನಡ ಆಗಿತ್ತು. ಹೀಗಾಗಿ ಕನ್ನಡ ತರಗತಿಗಳನ್ನು ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ. ಕನ್ನಡದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದ ಮೇಷ್ಟ್ರುಗಳು ಕೂಡ ಜನಪ್ರಿಯ ತಾರೆಗಳೇ ಆಗಿದ್ದರು. ಬಯಲಾಟ, ರಂಗಭೂಮಿ, ಜಾನಪದ ಸಾಹಿತ್ಯ, ಶಾಸ್ತ್ರೀಯ ಸಂಗೀತ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ. ತಮ್ಮ ಬಯಲಾಟದ ತಂಡದೊಂದಿಗೆ ಜರ್ಮನಿ ಸೇರಿದಂತೆ ಹಲವು ದೇಶ ಸುತ್ತಿ ಬಂದಿದ್ದ ಡಾ. ಬಸವರಾಜ ಮಲಶೆಟ್ಟಿ ಅವರು ದೊಡ್ಡ ಸ್ಟಾರ್. ಅವರೇ ಕನ್ನಡ ವಿಭಾಗದ ಮುಖ್ಯಸ್ಥರು. ಶ್ವೇತವರ್ಣದ ತಲೆಯ ದಪ್ಪ ಮೀಸೆಯ ಅಷ್ಟೇನು ತೆಳುವಲ್ಲದ ಮಲಶೆಟ್ಟಿ ಸರ್ ಅವರ ಪಾಠ ಮನಸೂರೆಗೊಳ್ಳುವಂತಿತ್ತು.

ಸಿನಿಯಾರಿಟಿಯಲ್ಲಿ ಅವರ ನಂತರದ ಸ್ಥಾನದಲ್ಲಿದ್ದ ಇಟಗಿ ಈರಣ್ಣ ಅವರದು ಆಕರ್ಷಕ ಮಾತುಗಾರಿಕೆ. ಕಾವ್ಯಾತ್ಮಕ ಮಾತುಗಳಿಂದ ವಿದ್ಯಾರ್ಥಿಗಳನ್ನು ಮಂತ್ರಮುಗ್ಧರಾಗಿ ಕೂರಿಸುತ್ತಿದ್ದ ಈರಣ್ಣ ಅವರು ಆಗ ‘ಶಾಯಿರಿ ಬ್ರಹ್ಮ’ ಎಂದೇ ಖ್ಯಾತರಾಗಿದ್ದರು. ನನಗಾಗ ಶಾಯಿರಿ, ಗಜಲ್ ಎಂದರೇನೆಂದೆ ಗೊತ್ತಿರಲಿಲ್ಲ. ಕನ್ನಡದಲ್ಲಿ ಶಾಯಿರಿ ಬರೆಯಲು ಆರಂಭಿಸಿದ ಮೊದಲ ಲೇಖಕ ಎಂಬ ಹೆಗ್ಗಳಿಕೆ ಈರಣ್ಣ ಅವರದಾಗಿತ್ತು. ಜನಪ್ರಿಯ ತಾರೆಯಂತೆ ಕಾಣಿಸುತ್ತಿದ್ದ ಈರಣ್ಣ ಅವರು ನನಗೆ ಪ್ರಿಯರಾದ ಮೇಷ್ಟ್ರುಗಳಲ್ಲಿ ಒಬ್ಬರಾಗಿದ್ದರು. ಹಂಪಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್ಐ)ಯು ಪರಂಪರಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಎನ್ಎಸ್ಎಸ್ ಕ್ಯಾಂಪ್ ನಲ್ಲಿ ಭಾಗವಹಿಸಿದ್ದೆ. ಆಗ ಎನ್ಎಸ್ಎಸ್ ಅಧಿಕಾರಿ ಆಗಿದ್ದ ಎಸ್. ಶಿವಾನಂದ ಹಾಗೂ ಇಟಗಿ ಈರಣ್ಣ ಏಳೂದಿನವೂ ನಮ್ಮ ಜೊತೆಗಿದ್ದು ಹುರಿದುಂಬಿಸುತ್ತಿದ್ದರು. ಹತ್ತಾರು ವಿದ್ಯಾರ್ಥಿಗಳು ತಮ್ಮ  ಸುತ್ತ ನೆರೆದು ಇರುವಂತೆ ನೋಡಿಕೊಳ್ಳುವ ವ್ಯಕ್ತಿತ್ವ ಅವರದಾಗಿತ್ತು. ಈರಣ್ಣ ಕಥೆಗಳನ್ನು, ತಮಾಷೆಯ ಮಾತುಗಳನ್ನು ಆಡುತ್ತಿದ್ದರೆ ಕೆಲಸ ಮಾಡಿದ ಆಯಾಸ ದೂರವಾಗುತ್ತಿತ್ತು. ಅವರ ಮಾತುಗಳಲ್ಲಿ ಅದೆಂತಹ ಉತ್ಪ್ರೇಕ್ಷೆ ಇರುತ್ತಿತ್ತು ಸತ್ಯಾಸತ್ಯತೆಯನ್ನು ನಂಬುವುದೇ ಕಷ್ಟವಾಗುತ್ತಿತ್ತು. ನಂಬದಿರುವುದು ಇನ್ನೂ ಕಷ್ಟದ ಸಂಗತಿಯಾಗಿತ್ತು.
ಕ್ಲಾಸಿನಲ್ಲಿ ಜ್ಯೊತಿಷ್ಯ, ಭವಿಷ್ಯದ ಬಗ್ಗೆ ಪ್ರಾಸಂಗಿಕವಾಗಿ ಮಾತನಾಡಿದ್ದ ಈರಣ್ಣ ಅವರು ಹಸ್ತದಲ್ಲಿ ಇರುವ ರೇಖೆಗಳು ಅದೆಂತಹ ಭವಿಷ್ಯ ಹೇಳಬಲ್ಲವು? ಎಂದು ಪ್ರಶ್ನಿಸಿದ್ದರು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ತಾಯಿಯ ಗರ್ಭದಲ್ಲಿ ಇರುವಾಗ ಮಗುವು ಕೈಗಳನ್ನು ಮಡಿಚಿಟ್ಟದ್ದರಿಂದ ಗೆರೆಗಳು ಮೂಡುತ್ತವೆಯೇ ಹೊರತು ಅದರಿಂದ ಯಾವುದೇ ಮುನ್ಸೂಚನೆ ದೊರೆಯುವುದು ಸಾದ್ಯವಿಲ್ಲ ಎಂದು ವಿವರಿಸಿದ್ದರು. ಆದರೆ, ಒಂದು ದಿನ ರಾತ್ರಿಯ ಊಟದ ನಂತರ ಬೆಳದಿಂಗಳ ರಾತ್ರಿಯಲಿ ಹಂಪಿಯ ಕಮಲ್ ಮಹಲ್ ಆವರಣದಲ್ಲಿ ಹರಟುತ್ತ ಕುಳಿತಾಗ ಈರಣ್ಣ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಹತ್ತಿರ ಕರೆದು ಅವರ ಕೈ ನೋಡಿ ಭವಿಷ್ಯ ಹೇಳಲು ಆರಂಭಿಸಿದರು. ನನಗೋ ಕುತೂಹಲ- ಅಚ್ಚರಿ ಹಾಗೆಯೇ ಬೇಸರ. ನನ್ನ ಆಕ್ಷೇಪವನ್ನು ಹೇಳದೇ ಬಿಡಲಿಲ್ಲ. ಯೂಟರ್ನ್ ಹೊಡೆದ ಮೇಷ್ಟ್ರು ಬಗ್ಗೆ ಒಂದು ಬಗೆಯ ತಾತ್ಸಾರ ಕೂಡ. ಮಾತು ತಾರಕಕ್ಕೂ ಹೋಯಿತು. ನನ್ನನ್ನವರು ಗೇಲಿ ಮಾಡಿ ನಗತೊಡಗಿದರು. ಜೊತೆಗಿದ್ದ ಸ್ನೇಹಿತರು ಕೂಡ. ಈ ಘಟನೆಯ ನಂತರ ನಾನು ಈರಣ್ಣ ಅವರಿಂದ ದೂರ ಇರತೊಡಗಿದೆ. ಅವರು ಮಾತುಗಳ ಮೋಹಕತೆಯೂ ನನ್ನನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ, ಎಂದೂ ಅವರ ಕ್ಲಾಸ್ ತಪ್ಪಿಸುತ್ತಿರಲಿಲ್ಲ. ಸುಳ್ಳುಗಳನ್ನು ಸತ್ಯದ ಮುಖದ ಮೇಲೆ ಹೊಡೆದಷ್ಟೂ ರಮ್ಯವಾಗಿ, ಮೋಹಕವಾಗಿ, ಮನದಟ್ಟಾಗುವಂತೆ ಒಪ್ಪಿಸಿಬಿಡುವಲ್ಲಿ  ಈರಣ್ಣ ನಿಷ್ಣಾತರಾಗಿದ್ದರು.  ಅವರ ಮಾತಿನ ಮೋಡಿಗೆ ಒಳಗಾಗಿ ಅದನ್ನು ಒಪ್ಪಿಬಂದವರೂ ನಂತರ ಅವರೊಬ್ಬ ಮಹಾನ್ ಸುಳ್ಳುಗಾರ ಎಂದೇ ಕರೆಯುತ್ತಿದ್ದರು. ಆದರೆ, ಎಲ್ಲರಿಗೂ ಪ್ರಿಯವಾಗುವ ಸುಳ್ಳು ಹೇಳುತ್ತಿದ್ದ ಈರಣ್ಣ ಅವರ ಜನಪ್ರಿಯತೆಯೇನೂ ಕಡಿಮೆಯಾಗಲಿಲ್ಲ.

ನಾಯಕನಾಗಿ ಸುದೀಪ್  ಎಂಟ್ರಿಗೆ ಕಾರಣವಾದ ‘ಸ್ಪರ್ಶ’ ಚಿತ್ರದಲ್ಲಿ ಇಟಗಿ ಈರಣ್ಣ ರಚಿಸಿದ ಎರಡು ಹಾಡುಗಳನ್ನು ಬಳಸಲಾಗಿತ್ತು. ಅದಕ್ಕಿಂತ ಹೆಚ್ಚಾಗಿ ಚಿತ್ರದುದ್ದಕ್ಕೂ ಈರಣ್ಣನವರ ಶಾಯಿರಿಗಳು ಮೇಲಿಂದ ಮೇಲೆ ಕೇಳಿ ಕಚಗುಳಿ ಇಡುವಂತೆ ಮಾಡಿದ್ದವು. ಮಾತಿನ ಸೊಗಸುಗಾರಿಕೆ ಅಥವಾ ವಾಗ್ ವೈಖರಿಯ ಸ್ವರೂಪದಂತಿದ್ದ ಈರಣ್ಣ ಅವರಿಂದ ನಾನು ಹೆಚ್ಚು ಸಮೀಪಕ್ಕೆ ಹೋಗಲಿಲ್ಲ. ಆದರೆ, ನನ್ನ ಬಗ್ಗೆ ಅವರಿಗೆ ಪ್ರೀತಿ- ಕಾಳಜಿ ಕಡಿಮೆಯಾಗಿರಲಿಲ್ಲ. ಕೆಲವು ದಿನಗಳ ಹಿಂದೆ ನನಗೆ ಈರಣ್ಣ ಅವರು ಕಬೀರ್ ದೋಹೆಗಳನ್ನು ಕನ್ನಡಕ್ಕೆ ಅನುವಾದಿಸಿದ ಸಂಗತಿ ತಿಳಿಯಿತು. ನನ್ನ ಬಳಿ ಅವರ ಸಂಪರ್ಕ ಸಂಖ್ಯೆ ಇರಲಿಲ್ಲವಾದ್ದರಿಂದ ಹಂಪಿಯ ಸ್ನೇಹಿತ ಮಾರುತಿಗೆ ಫೋನ್ ಮಾಡಿ ನನ್ನ ಅಗತ್ಯ ತಿಳಿಸಿದೆ. ಮಾರುತಿ ‘ನಾನೇ ಸಂಪರ್ಕಿಸಿ ತಿಳಿಸುವುದಾಗಿ’ ಹೇಳಿದ. ಅಷ್ಟಕ್ಕೇ ಸುಮ್ಮನಿರದ ನಾನು ಅವರು ಫೇಸ್ ಬುಕ್ ಅಕೌಂಟ್ ಗೆ ಹೋಗಿ ಕಬೀರ್ ಕವಿತೆಗಳ ಕನ್ನಡ ಅನುವಾದದ ಪುಸ್ತಕಕ್ಕಾಗಿ ರಿಕ್ಷೆಸ್ಟ್ ಮಾಡಿದೆ. ಕೆಲವು ದಿನಗಳ ನಂತರ ನನಗೇ ಅಚ್ಚರಿ ಉಂಟು ಮಾಡುವಂತೆ ಬಂದ ದೂರವಾಣಿ ಕರೆಯಲ್ಲಿ ಆ ಕಡೆಯಿಂದ ಈರಣ್ಣ ಮೇಷ್ಟ್ರು ಮಾತನಾಡುತ್ತಿದ್ದರು. ‘ಕಬೀರ್ ಪುಸ್ತಕ ಮುರುಮುದ್ರಣ ಆಗ್ತಿದೆ. ನಿನಗ ಕಳಿಸಿ ಕೊಡ್ತಿನಿ. ನಿನಗಲ್ಲದೇ ಬ್ಯಾರೆ ಯಾರಿಗೆ ಕೊಡಲಿ?’ ಎಂದು ಪ್ರಶ್ನಿಸಿದರು. ಆಗ ನಾನು ‘ಸರ್ ಮುದ್ರಣವಾಗಿ ಬರಲು ತಡವಾಗುತ್ತದೆ. ನನಗೆ ಕ್ಸೆರಾಕ್ಸ್ ಪ್ರತಿ ಕಳುಹಿಸಿದರೂ ಆಗುತ್ತದೆ’ ಎಂದೆ. ‘ಎರಡೇ ತಿಂಗಳು ಕಾಯಿ ಹೊಸ ಪ್ರತಿ ಬರುತ್ತಿದ್ದಂತೆಯೇ ನಿನಗೆ ಕಳುಹಿಸುತ್ತೇನೆ’ ಎಂದಿದ್ದರು ಈರಣ್ಣ ಮೇಷ್ಟ್ರು. ಮಾರ್ಚಿ ಅಂತ್ಯದ ವೇಳೆಗೆ ಕಬೀರ್ ಅನುವಾದದ ಮರುಮುದ್ರಣ ಬರಬೇಕಿತ್ತು. ಅದು ಬರಬಹುದು. ನನಗೆ ಅದರ ಪ್ರತಿ ಕಳುಹಿಸಬೇಕಾಗಿದ್ದ ಈರಣ್ಣ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ. ಅವರಿಗೆ ನನ್ನ ಬಾಷ್ಪಾಂಜಲಿ, ಶ್ರದ್ಧಾಂಜಲಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು