ದಶಮಾನೋತ್ಸವ ಪೂರ್ಣಗೊಳಿಸಿದ `ನಾದವೇದಿಕೆ'

ಹವ್ಯಾಸಿ ಸಂಗೀತ ಆಸಕ್ತರು ಹುಟ್ಟು ಹಾಕಿದ ಪುಟ್ಟ ನಾದದ ತೊರೆಯೊಂದು ಅವಿರತವಾಗಿ ಕಳೆದ ಹತ್ತು ವರ್ಷಗಳಿಂದ ಹರಿದು ಬರುತ್ತಿದೆ. ಶಾಸ್ತ್ರೀಯ ಸಂಗೀತಕ್ಕೇ ಪ್ರಾಧಾನ್ಯ ನೀಡುವ ಬೀದರ್ ಜಿಲ್ಲೆಯ ಹುಮನಾಬಾದ್ನ `ನಾದ ವೇದಿಕೆ' ಸಂಗೀತದ ಆಸಕ್ತಿ ಉಳಿಸಿ ಬೆಳೆಸುವಲ್ಲಿ ಮಾಡಿದ ಸಾಧನೆ ಅನನ್ಯ ಮತ್ತು ಅಪೂರ್ವ. ಸಂಗೀತದಲ್ಲಿ ಆಸಕ್ತಿ ಇರುವ ಹತ್ತಾರು ಜನ ತಮ್ಮ `ಪಾಕೆಟ್ ಮನಿ' ಆರಂಭಿಸಿದ ಈ ಸಂಸ್ಥೆ ಮಾಡಿದ ಕೆಲಸ ಗಮನಾರ್ಹ.
`ನಾದ ವೇದಿಕೆ'ಯಲ್ಲಿ ಇರುವ ಬೆರಳೆಣಿಕೆಯಷ್ಟು ಜನರಲ್ಲಿ ಬಹುತೇಕ ಜನ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸದಲ್ಲಿ ಇರುವವರು. ಅದರಲ್ಲೂ ಉಪನ್ಯಾಸಕ ಅಥವಾ ಶಿಕ್ಷಕ ಹ್ದುದೆಯಲ್ಲಿ ಇರುವವರು. ನಿತ್ಯದ ನೂರು ಜಂಜಡಗಳ ನಡುವೆಯೇ ಅಲ್ಪ ಆದಾಯದಲ್ಲಿಯೇ ಒಂದಷ್ಟು ಹಣ ಉಳಿಸಿಟ್ಟು ವೇದಿಕೆಯ ಕಾರ್ಯಕ್ರಮಗಳಿಗೆ ನೀಡುತ್ತಾರೆ. ಅದೇ ವೇದಿಕೆಯ ಚಟುವಟಿಕೆಗಳಿಗೆ ಪ್ರಮುಖ ಆಧಾರ.
ಸರ್ಕಾರದಿಂದ ಅಥವಾ ಉದ್ಯಮಿಗಳಿಂದ ಆರ್ಥಿಕ ನೆರವು ಪಡೆಯದೇ ಸಂಗೀತ ಕಚೇರಿಗಳನ್ನು ನಡೆಸುವ ಉದ್ದೇಶದಿಂದ ಆರಂಭವಾದ ಈ ಸಂಗೀತ ಸಂಸ್ಥೆ ನಂತರದ ದಿನಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ಸಂಗೀತಗಾರರಿಗೆ `ಸಂಗೀತ ಸಿರಿ' ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿತು. ಎಲೆ ಮರೆಯ ಕಾಯಿಯಂತೆ ಪ್ರಚಾರ- ಪ್ರಭಾವಗಳಿಂದ ದೂರ ಉಳಿದ ಕಲಾವಿದರಿಗೇ ಈ ವೇದಿಕೆಯಲಿ ಮನ್ನಣೆ.
ಹುಮನಾಬಾದ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿರುವ ಎ.ಎಸ್. ವಠಾರ ಇಡೀ ವೇದಿಕೆಯ ಆಧಾರ ಸ್ತಂಭ. ಅವರೇ ಸದ್ಯದ ಅಧ್ಯಕ್ಷರು ಕೂಡ. ಹಾಗೇ ನೋಡಿದರೆ ವೇದಿಕೆಯಲ್ಲಿರುವ ಏಕಮಾತ್ರ ಸಂಗೀತಗಾರ ಕೂಡ ಅವರೊಬ್ಬರೇ. ಬಾಕಿಯವರೆಲ್ಲ ಆಸಕ್ತ ಕೇಳುಗರು- ಶ್ರೋತೃಗಳು. ವಠಾರ ಅವರ ನಿರ್ದೇಶನದಲ್ಲಿ `ನಾದ ವೇದಿಕೆ'ಯ ಕಾರ್ಯಕ್ರಮಗಳು ರೂಪುಗೊಳ್ಳುತ್ತವೆ. ಆದರೂ, ಇಡೀ ವರ್ಷ ಯಾವ್ಯಾವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಮತ್ತು ಯಾವ ಕಲಾವಿದರನ್ನು ಕರೆಯಿಸಬೇಕು ಎನ್ನುವ ಅಂತಿಮ ತೀರ್ಮಾನ `ಸಭೆ'ಯಲ್ಲಿಯೇ ಆಗುತ್ತದೆ.
ವರ್ಷವಿಡೀ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನಡೆಸುವ `ನಾದ ವೇದಿಕೆ' ಪ್ರತಿವರ್ಷದ ಏಪ್ರಿಲ್‌ನಲ್ಲಿ `ಪಂಡಿತ್ ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ' ಸಮಾರಂಭ ಏರ್ಪಡಿಸುತ್ತದೆ. ಅದು ವೇದಿಕೆ ನಡೆಸುವ ವರ್ಷದ ಅತೀ ದೊಡ್ಡ ಕಾರ್ಯಕ್ರಮ. ಆಹೋರಾತ್ರಿ ನಡೆಯುವ ಸಂಗೀತ ಸಮಾರಾಧನೆಯು ಕೇಳುಗರನ್ನು ಗಾಂಧರ್ವಲೋಕಕ್ಕೆ ಕರೆದೊಯ್ಯುತ್ತದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಹಿರಿಯ ಕಲಾವಿದರಿಂದ ಗಾಯನ- ವಾದನ ನಡೆಸಲಾಗುತ್ತದೆ.
ಧಾರವಾಡದ ಪಂ. ಎಂ. ವೆಂಕಟೇಶಕುಮಾರ್, ಡಿ. ಕುಮಾರದಾಸ, ರಘುನಾಥ ನಾಕೋಡ್, ಶ್ರೀಪಾದ ಹೆಗಡೆ, ಗುಲ್ಬರ್ಗದ ಗೀತಾ ಚಕ್ರವತರ್ಿ, ಶಾಂತಲಿಂಗ ದೇಸಾಯಿ, ಫಕಿರೇಶ ಕಣವಿ, ಬೆಂಗಳೂರಿನ ಸಂಗೀತಾ ಕಟ್ಟಿ ಸೇರಿದಂತೆ 25ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ತಮ್ಮ ಸಂಗೀತ ಸುಧೆ ಹರಿಸಿದ್ದಾರೆ. ಕೇವಲ ಸಂಗೀತ ಕಾರ್ಯಕ್ರಮಗಳನ್ನು ಮಾತ್ರ ನಡೆಸದೆ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವಲ್ಲಿಯೂ `ನಾದ ವೇದಿಕೆ' ಹಿಂದೆ ಬಿದ್ದಿಲ್ಲ. ಪ್ರತಿವರ್ಷ ಸಂಗೀತ ಸ್ಪರ್ಧೆ ನಡೆಸುವ ಮೂಲಕ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಸಂಗೀತಾಸಕ್ತಿ ಬೆಳೆಸುವಲ್ಲಿ ವೇದಿಕೆ ಕಾರ್ಯನಿರತವಾಗಿದೆ.
1996ರಲ್ಲಿ ಆರಂಭವಾದ ನಾದವೇದಿಕೆಯ ಮೊದಲ ಅಧ್ಯಕ್ಷ ಕೇಶವರಾವ್ ವಾಘಮಾರೆ. ನಂತರ ಆ ಸ್ಥಾನವನ್ನು ಕೆ.ಎಂ. ಮ್ಯಾಗೇರಿ, ಎಸ್.ಎಸ್.ಪಾರಾ ವಹಿಸಿದ್ದರು. ವೇದಿಕೆ ಆರಂಭವಾದ ಮೊದಲ ವರ್ಷದಿಂದಲೇ `ಸಂಗೀತ ಸಿರಿ' ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಲಾಯಿತು. ತಾಳಿಕೋಟೆಯ ಹಿರಿಯ ಸಂಗೀತಗಾರ ಪ್ರಭುದೇವ ಸಾಲಿಮಠ ಅವರು ಪ್ರಶಸ್ತಿಗೆ ಭಾಜನರಾದ ಮೊದಲ ಸಂಗೀತಗಾರ. ನಂತರದ ವರ್ಷಗಳಲ್ಲಿ ಗೊಬ್ಬೂರು ಚೆನ್ನವೀರಪ್ಪ ಗವಾಯಿ, ಘಾಟಬರೋಳದ ಭೀಮಣ್ಣ ಪಂಚಾಳ, ಬೀದರ್ನ ಈಶ್ವರಪ್ಪ ಪಂಚಾಳ, ಧಾರವಾಡದ ಚಂದ್ರಶೇಖರ ಪುರಾಣಿಕಮಠ, ಭಾಲ್ಕಿಯ ಶೇಖ್ ಹನ್ನುಮಿಯಾ, ವಿಜಾಪುರದ ಚೆನ್ನವೀರ ಬನ್ನೂರು, ಲಾತೂರಿನ ಶಾಂತಾರಾಮ ಚಿಗರಿ, ಬಾಗಲಕೋಟೆಯ ಹಣಮಂತಪ್ಪ ಬಡಿಗೇರ ಅವರಿಗೆ ಸಂದಿದೆ.
2003ರಲ್ಲಿ ಗದಗಿನ ಪುಣ್ಯಾಶ್ರಮದ ಪಂ.ಪುಟ್ಟರಾಜ ಗವಾಯಿಗಳ ಸಾನ್ನಿಧ್ಯದಲ್ಲಿ ನಡೆಸಿದ ಸಂಗೀತ ಸಂಜೆ ವೇದಿಕೆ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದು. ಸಂಗೀತಾಸಕ್ತಿ ಬೆಳೆಸುವುದಕ್ಕಾಗಿ ಸಂಗೀತದ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನೂ ಸಂಸ್ಥೆ ನಡೆಸುತ್ತ ಬಂದಿದೆ. ಜಾತಿ ಮತ, ಧರ್ಮಗಳ ವರ್ಗೀಕರಣವಿಲ್ಲದೇ ಸಂಗೀತವನ್ನೇ ಧರ್ಮವನ್ನಾಗಿಸಿಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ `ನಾದವೇದಿಕೆ' ದಶಮಾನದ ಸಂಭ್ರಮವನ್ನು ಮತ್ತಷ್ಟು ಬೆಳೆಯಲು ಬಳಸಿಕೊಳ್ಳಲಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಎಸ್.ಎಂ. ಪಂಡಿತ್

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ