ಜನನಾಯಕರ ನಿರ್ಗಮನದ ಸುತ್ತ

ಸಾವು ಬಂದು ಹೋಗುವ ಮನೆಯಲ್ಲಿನ ಸಂಗತಿಗಳು ಚಿತ್ರ-ಚಿತ್ರವಾಗಿರುತ್ತವೆ. ಅಲ್ಲಿ ಆತಂಕ- ದುಃಖ, ಬೇಸರ- ನಿರಾಸೆಗಳ ಜತೆಯಲ್ಲಿಯೇ ನಿರೀಕ್ಷೆ - ಕನಸುಗಳೂ ಬಂದು ಸೇರುತ್ತವೆ. ಹಲವು ಕಾಲ ಬದುಕಿದ್ದ ಜೀವ ಇಲ್ಲವಾಗುವ ಸಂಕಟ ಒಂದೆಡೆಗಾದರೆ ಅದರ ವಾರಸುದಾರಿಕೆಗಾಗಿ ನಡೆವ ತಂತ್ರ, ಕುತಂತ್ರ, ಪೈಪೋಟಿಗಳು ಮತ್ತೊಂದೆಡೆಗಿರುತ್ತವೆ. ವಾರಸುದಾರಿಕೆಯ ಪ್ರಶ್ನೆ ದೊಡ್ಡ ಅರಮನೆಯ ಒಡೆಯರಿಗೆ, ಹಣ-ಆಸ್ತಿಪಾಸ್ತಿ- ಅಧಿಕಾರ ಹೊಂದಿದವರಿಗೆ ಮಾತ್ರ ಎಂದೇನೂ ಇಲ್ಲ. ಯಾವ ಅಧಿಕಾರದ- ಪ್ರಭಾವದ ಸೋಂಕು ಕೂಡ ಇಲ್ಲದ ಕಡೆಗಳಲ್ಲಿಯೂ ’ನನ್ನದು’ ಎಂಬ ಹಠ ಕಾಣಿಸುತ್ತದೆ.
ತಮ್ಮ ಬದುಕಿನ ಬಹುಭಾಗ ಸೆರೆವಾಸದಲ್ಲಿಯೇ ಕಳೆದ ದಕ್ಷಿಣ ಆಫ್ರಿಕಾದ ಮಂಡೇಲಾ ಅವರು ಕೊನೆಯುಸಿರು ಎಳೆಯುವ ಮುನ್ನವೇ ಆಸ್ತಿ ಹಂಚಿಕೆಯ ವಿವಾದ ಆರಂಭವಾಯಿತು. ಕನ್ನಡಕ್ಕೆ ಸೊಗಸಾದ ಹಾಡುಗಳನ್ನು ನೀಡಿದ ಅನುಭಾವಿ ಕವಿ ಶರೀಫರು ಇಹಲೋಕ ತ್ಯಜಿಸಿದಾಗ ಅವರ ದೇಹದ ಅಂತಿಮ ಸಂಸ್ಕಾರ ಯಾವ ವಿಧಿವಿಧಾನಗಳಲ್ಲಿ ನಡೆಯಬೇಕು ಎಂಬ ಚರ್ಚೆ ನಡೆದಿತ್ತು. ಹಾಗೆ ನೋಡಿದರೆ ಸಾವು ಒಂದು ಜೀವದ ಅಂತ್ಯ ಮಾತ್ರ ಅಲ್ಲ. ಹಲವು ಚರ್ಚೆ-ಹೊಸ ಬದುಕಿನ ಆರಂಭ. ಅಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಲೆಕ್ಕಾಚಾರ ಇರುತ್ತದೆ. ಅದು ಸಹಜ ಕೂಡ.
ಗುಲ್ಬರ್ಗ ಜಿಲ್ಲೆಗೆ ಮಾತ್ರವಲ್ಲದೇ ತನ್ನ  ಕೋಲಿ-ಕಬ್ಬಲಿಗ ಸಮುದಾಯದ ಜನಪ್ರಿಯ ನೇತಾರ ಆಗಿದ್ದ ವಿಠಲ ಹೇರೂರು ಇತ್ತೀಚೆಗೆ ’ಇನ್ನಿಲ್ಲ’ ಆದರು. ಖಾಸಗಿ ಆಸ್ಪತ್ರೆಯಲ್ಲಿದ್ದ ಅವರ ಕೊನೆಯ ದಿನಗಳಲ್ಲಿ ನಡೆದ ನಾಟಕೀಯ ಬೆಳವಣಿಗೆಗಳು ಕುತೂಹಲಕಾರಿಯಾಗಿದ್ದವು. ಜತೆಗೆ ಬೇಸರ ಹುಟ್ಟಿಸದೇ ಇರಲಿಲ್ಲ. ಸಾಯುವ ಮುನ್ನವೇ ಅಂತ್ಯಸಂಸ್ಕಾರ ಎಲ್ಲಿ ಮಾಡಬೇಕು? ಎಂಬ ಕಾರಣಕ್ಕಾಗಿ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ಅದು ಎಷ್ಟರ ಮಟ್ಟಿಗೆ ವಿಕೋಪಕ್ಕೆ ಹೋಯಿತು ಎಂದರೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಯಿಂದ ಸಹಿ ಪಡೆಯುವ, ಅದನ್ನು ಹರಿಯುವ ಘಟನೆಗಳಿಗೂ ಆಸ್ಪತ್ರೆ ಸಾಕ್ಷಿಯಾಯಿತು. ಅಂತ್ಯಸಂಸ್ಕಾರದ ಕುರಿತು ಭಾರೀ ಗಲಾಟೆ ನಡೆದ ಮರುದಿನ ಹೇರೂರು ಅವರಿಗೆ ಡಯಾಲಿಸಿಸ್ ಮಾಡಲಾಯಿತು. ಅವರು ಎದ್ದು ಕುಳಿತು ಮಾತನಾಡಲು ಆರಂಭಿಸಿದರು. ತನ್ನ ಭೇಟಿಯಾಗಲು ಬಂದ ಹಿರಿಯ ರಾಜಕೀಯ ನಾಯಕರಿಗೆ ಸಮುದಾಯದ ಹಿತ ಕಾಪಾಡಲು ಮನವಿ ಮಾಡಿದರು. ಹಲವು ಸಂಗತಿಗಳನ್ನು ಚರ್ಚಿಸಿದರು. ನಿನ್ನೆ ಸಾವಿನ ಮನೆ ಬಾಗಿಲಲ್ಲಿ ಇದ್ದ ವ್ಯಕ್ತಿ ಇವರೇನಾ? ಎಂದು ಬೆರಗಾಗಿ ನೋಡುವಂತೆ ಆಯಿತು. ಆಸ್ಪತ್ರೆಯ ಹೊರಗಡೆ ಅವರನ್ನು ಭೇಟಿಯಾಗಲು-ನೋಡಲು- ಯೋಗಕ್ಷೇಮ ವಿಚಾರಿಸಲು ಬರುವವರ ಜನಜಾತ್ರೆಯೇ ನೆರೆದಿರುತ್ತಿತ್ತು. ಆ ಜನರ ಜಂಗುಳಿಯನ್ನು ನೋಡಿದರೆ ’ವಿಟಿ’ ಎಷ್ಟು ಜನಪ್ರಿಯರು ಎಂಬುದು ಅರಿವಿಗೆ ಬರುತ್ತಿತ್ತು. ಹಾಗೆಯೇ ಸಾಯುವ ಮುನ್ನವೇ ಸಂತಾಪ ಹೇಳಲು ಅವಸರಿಸುವ ಧೋರಣೆಯೂ ಇತ್ತು.
ವಿಠಲ್ ಹೇರೂರು ಏನಾಗಿದ್ದರು? ಎಂದು ಅಂಕಿ-ಅಂಶಗಳ ಅಥವಾ ರಾಜಕೀಯ ಸಾಧನೆಯ ಲೆಕ್ಕಾಚಾರದಲ್ಲಿ ನೋಡ ಹೊರಟರೆ ಅದು ನಮ್ಮನ್ನು ಹೆಚ್ಚು ದೂರ ಕರೆದುಕೊಂಡು ಹೋಗುವುದಿಲ್ಲ. ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರಿಗೆ ಎರಡು ಬಾರಿಯೂ ಜಯದ ಸಮೀಪ ಹೋಗುವುದು ಕೂಡ ವಿಠಲ್ ಅವರಿಗೆ ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲದೆ, ಅಫಜಲಪುರ ಮತ್ತು ಗುರುಮಠಕಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಅಖಾಡಕ್ಕೆ ಇಳಿದ ಸಂದರ್ಭದಲ್ಲಿಯೂ ಫಲಿತಾಂಶ ಅವರ ಪರವಾಗಿರಲಿಲ್ಲ. ಆದರೆ, ಅವರು ಚುನಾವಣೆಯ ಕಣದಲ್ಲಿ ಇದ್ದಾಗಲೆಲ್ಲ ’ನಿರ್ಣಾಯಕ’ ಆಗಿರುತ್ತಿದ್ದರು. ಹೇರೂರು ಪಡೆದ ಮತಗಳು ಅವರನ್ನು ಜಯದ ಕಡೆಗೆ ಕರೆದುಕೊಂಡು ಹೋಗುವಷ್ಟರ ಪ್ರಮಾಣದಲ್ಲಿ ಇರದಿದ್ದರೂ ಮತ್ತೊಬ್ಬರ ಭವಿಷ್ಯ ನಿರ್ಧಾರ ಆಗುವಷ್ಟಿರುತ್ತಿದ್ದವು. ಅವರು ಪಡೆದ/ವ ಮತಗಳ ಸಂಖ್ಯೆಯು ಎದುರಾಳಿಗಳ ಎದೆ ನಡುಗಿಸುವಷ್ಟರ ಮಟ್ಟಿಗಿರುತ್ತಿತ್ತು.
2004ರಲ್ಲಿ ಲೋಕಸಭೆ-ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆಗಳು ನಡೆದವು. ಆಗ ಹೇರೂರು ಗುಲ್ಬರ್ಗ ಲೋಕಸಭೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ಪಡೆದ ಮತಗಳ ಸಂಖ್ಯೆ ಅರ್ಧ ಲಕ್ಷ ದಾಟಿತ್ತು. ಅವರ ಜನಪ್ರಿಯತೆಯು ಗುಲ್ಬರ್ಗ ಜಿಲ್ಲೆಯಲ್ಲಿ ಜೆಡಿಎಸ್‌ನ ಆರು ವಿಧಾನಸಭಾ ಸದಸ್ಯರು ಆಯ್ಕೆ ಆಗುವುದಕ್ಕೆ ಕಾರಣವಾಗಿತ್ತು. ಬಹುಕಾಲ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಗುಲ್ಬರ್ಗದಲ್ಲಿ ಜನತಾ ಪರಿವಾರ ಗಣನೀಯ ಸಾಧನೆ ಮಾಡುವುದಕ್ಕೆ ಹಲವು ಕಾರಣಗಳಿದ್ದವು. ಅವುಗಳಲ್ಲಿ ವಿಠಲ್ ಹೇರೂರು ಅವರ ಸ್ಪರ್ಧೆಯೂ ಪ್ರಮುಖ ಕಾರಣವಾಗಿತ್ತು. ಅದೇ ಅವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನದ ವರೆಗೂ ಕರೆದುಕೊಂಡು ಹೋಯಿತು. ಸಮುದಾಯದ ನಡುವೆ ವಿಠಲ್ ಹೇರೂರು ಅವರಿಗಿದ್ದ ಜನಪ್ರಿಯತೆಯ ಅರಿವಿದ್ದ ದೇವೇಗೌಡರು ವಿಧಾನ ಪರಿಷತ್ ಸದಸ್ಯತ್ವದ ಜತೆ ಮುಖ್ಯ ಸಚೇತಕ ಹುದ್ದೆಯೂ ದೊರಕುವಂತೆ ನೋಡಿಕೊಂಡರು.
ವಿಠಲ್ ಹೇರೂರು ಅವರು ಕೇವಲ ವಿಧಾನ ಪರಿಷತ್ ಸದಸ್ಯ ಮತ್ತು ಮುಖ್ಯ ಸಚೇತಕ ಆಗಿದ್ದರು ಎನ್ನುವ ಕಾರಣಕ್ಕೆ ಮುಖ್ಯರಾಗುವುದಿಲ್ಲ. ಹಾಗೆ ನೋಡಿದರೆ ಅದು ಅಂತಹ ಮಹತ್ವದ ಸಂಗತಿಯೂ ಅಲ್ಲ. ವಿಠಲ್ ಹೇರೂರು ಅವರ ಸಾಧನೆಯು ಅವರ ರಾಜಕೀಯ ಬದುಕು- ನಡೆಗಳಲ್ಲಿ ಇಲ್ಲ. ಸಮಾಜದ-ಬದುಕಿನ ಪ್ರಮುಖ ಸಂಗತಿಗಳನ್ನು ನಿರ್ಧರಿಸುವ ರಾಜಕೀಯ ಧಾರೆಯಲ್ಲಿ ಅವರಿದ್ದರು ಅಷ್ಟೆ. ರಾಜಕೀಯದಾಚೆಗಿನ ಅವರ ಸಾಮಾಜಿಕ ವ್ಯಕ್ತಿತ್ವ ಮತ್ತು ತಮ್ಮ ಸಮುದಾಯ ಕಟ್ಟುವುದಕ್ಕಾಗಿ ನಡೆಸಿದ ಪ್ರಯತ್ನ ಅವರನ್ನು ಜನಪ್ರಿಯರನ್ನಾಗಿಸಿತ್ತು. ವಿಠಲ್ ಹೇರೂರು ಬಹುದೊಡ್ಡ ಮಾತುಗಾರರಾಗಿದ್ದರು. ಮಾತಿನ ಮಂತ್ರವಿದ್ಯೆ ಬಲ್ಲವರಾಗಿದ್ದ  ವಿಠಲ್ ಅದೇ ಕಾರಣದಿಂದ ನೂರಾರು-ಸಾರಾರು ಜನರನ್ನು ತಮ್ಮತ್ತ ಸೆಳೆದುಕೊಳ್ಳಬಲ್ಲವರಾಗಿದ್ದರು. ಪಟಪಟನೆ ಅರಳು ಹುರಿದಂತೆ ಮಾತನಾಡುತ್ತಿದ್ದ ಹೇರೂರು ಅವರ ಭಾಷಣ ನುರಿತ ಎಂಜಿನಿಯರ್ ಒಬ್ಬ ಯೋಜಿಸಿ-ರೂಪಿಸಿ-ಕಟ್ಟಿಸಿದ ಮಹಲಿನ ಮಾದರಿಯಲ್ಲಿ ಇರುತ್ತಿತ್ತು. ಪ್ರತಿಯೊಂದು ವಿಚಾರವನ್ನೂ ಸ್ಪಷ್ಟವಾಗಿ ಖಚಿತವಾಗಿ ಮಂಡಿಸುತ್ತಿದ್ದ ವಿಠಲ್ ಅವರಿಗೆ ಅವರ ಮಾತೇ ದೊಡ್ಡ ಶತ್ರುವೂ ಆಗಿತ್ತು. ಮಾತಿನ ಮೂಲಕ ಗೆಳೆಯರನ್ನು ಕಟ್ಟಿಕೊಂಡ ಹಾಗೆಯೇ ಅವರು ಶತ್ರುಗಳನ್ನೂ ಸೃಷ್ಟ್ಟಿಸಿಕೊಳ್ಳುತ್ತಿದ್ದರು. ಎದುರಾಳಿ ಪ್ರಬಲನಾಗಿದ್ದ ಎಲ್ಲ ಸಂದರ್ಭಗಳಲ್ಲಿಯೂ ಅವರ ಬೆಂಬಲಕ್ಕೆ ನಿಂತದ್ದು ಅವರ ಸಮುದಾಯ. ಕೋಲಿ, ಕಬ್ಬಲಿಗ, ಟೋಕರಿ ಕೋಲಿ, ಅಂಬಿಗ, ಬೆಸ್ತ ಎಂಬ ಹೆಸರುಗಳಿಂದ ಗುರುತಿಸಲಾಗುವ ಹಿಂದುಳಿದ ವರ್ಗದ ಸಮುದಾಯಕ್ಕೆ ಸೇರಿದ ವಿಠಲ್ ಹೇರೂರು ಅವರು ತಮ್ಮ ಸಮುದಾಯದ ಒಳಿತಿಗಾಗಿ ಕಂಕಣ ಕಟ್ಟಿ ನಿಂತಿದ್ದರು. ಅದಕ್ಕಾಗಿಯೇ ಇಡೀ ಸಮುದಾಯ ಅವರಲ್ಲಿ ತನ್ನ ನಾಯಕನನ್ನು ಕಂಡಿತು.
ಉತ್ತರ ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಹೆಚ್ಚು ಜನ ಇರುವ ಕಬ್ಬಲಿಗ ಸಮುದಾಯಕ್ಕೆ ರಾಜಕೀಯ ನೆಲೆ ದೊರೆತದ್ದು ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ದಿನಗಳಲ್ಲಿ. ಅರಸು ಸಂಪುಟದಲ್ಲಿ ಸಚಿವರಾಗಿದ್ದ ದೇವೇಂದ್ರಪ್ಪ ಘಾಳೆಪ್ಪ ಜಮಾದಾರ ಚಿಂಚೋಳಿ ಮತಕ್ಷೇತ್ರವನ್ನು ಸತತ ಮೂರು ಬಾರಿ ಪ್ರತಿನಿಧಿಸಿದ್ದರು. ಅವರ ನಂತರ ಸಂಪುಟದಲ್ಲಿ ಕಾಣಿಸಿಕೊಂಡವರು ಡಿ.ಟಿ.ಜಯಕುಮಾರ್ ಮತ್ತು ಬಾಬುರಾವ ಚಿಂಚನಸೂರು. ಮೂರು ದಶಕಗಳ ರಾಜಕೀಯ ಪ್ರಜ್ಞೆಯು ಆ ಸಮುದಾಯದ ಒಟ್ಟು  ಒಳಿತಿಗೆ ಹೆಚ್ಚು ಉಪಯೋಗ ಆಗಲಿಲ್ಲ. ಎಲ್ಲ ಹಿಂದುಳಿದ- ಕೆಳವರ್ಗದ ಸಮುದಾಯಗಳು ಎದುರಿಸುತ್ತಿದ್ದ  ಸಮಸ್ಯೆಗಳು ಕೋಲಿ ಸಮಾಜದ ಜತೆಗೂ ಇದ್ದವು. ರಾಜಕೀಯ ಲಾಭಾಪೇಕ್ಷೆಯಿಂದ ಮಾತ್ರ ಒಗ್ಗೂಡಿಸಿ ಚುನಾವಣೆಯ ನಂತರ ಮರೆತು ಬಿಡುವವರೇ ಹೆಚ್ಚಾಗಿರುವ ದಿನಗಳಲ್ಲಿ  ಸಮುದಾಯದ ಹಿತ ಕಾಪಾಡುವುದಕ್ಕಾಗಿ ಸತತ ಪ್ರಯತ್ನ ಮಾಡಿದ ವಿಠಲ್ ಹೆರೂರು ಅಪ್ಯಾಯಮಾನವಾಗಿ ಕಾಣಿಸಿದರು.
ಕೃಷ್ಣ ನದಿ ಕಣಿವೆಯಲ್ಲಿ ಅದರಲ್ಲೂ ವಿಶೇಷವಾಗಿ ಭೀಮೆ- ಕೃಷ್ಣೆಯರ ನಡುವಿನ ಎರಡು ದಡಗಳ ಗುಂಟ ಹೆಚ್ಚು ದಟ್ಟಣೆ ಇರುವ  ಕೋಲಿ ಸಮಾಜದ ಬಹುತೇಕ ಜನ ನೀರನ್ನೇ ನಂಬಿ ಬದುಕುವವರು. ನದಿಯ ನೀರಿನಗುಂಟ ಬದುಕು ಕಟ್ಟಿಕೊಂಡ ಸಮುದಾಯ ನಿಶ್ಚಿತ ಆದಾಯದ ಮೂಲಗಳಿಲ್ಲದೆ ಪರಾವಲಂಬಿ ಆಗಿತ್ತು. ಬಡತನ, ಶಿಕ್ಷಣದ ಕೊರತೆ, ಆರ್ಥಿಕ ಸಂಪನ್ಮೂಲಗಳಿಲ್ಲದೇ ಇರುವ ಕಾರಣಗಳಿಂದಾಗಿ ಪ್ರಬಲರ ಕೈಗೊಂಬೆ ಆಗಬೇಕಾಗಿತ್ತು. ಆ ದಿನಗಳಲ್ಲಿ ವಿಠಲ್ ಹೆರೂರು ಮತ್ತು ಅವರ ಸಂಗಡಿಗರು ಮನೆ ಮನೆಗೆ  ತೆರಳಿ ಶಿಕ್ಷಣ ಪಡೆಯುವುದರ ಮಹತ್ವ ವಿವರಿಸಿದರು. ’ಎಷ್ಟು ದಿನ ಹೊಡೆದಾಡಿ- ಬಡದಾಡಕೋಂತ ಇರತೀರಿ. ಸಾಲಿ ಕಲೀರಿ’ ಎಂದು ಹೇಳುತ್ತಿದ್ದರು. ಹಾಗೆ ಕಲಿಯಲು ಮುಂದೆ ಬಂದ ಬಡವರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆಯನ್ನೂ ರೂಪಿಸಿದ್ದರು. ಬಂಡಾಯ ಸಾಹಿತ್ಯ ಸಂಘಟನೆಯ ಒಡನಾಟದಿಂದ ದೊರೆತ ಚಿಂತನೆ- ಸಾಹಿತ್ಯ ಮತ್ತು ಓದುವ ಹವ್ಯಾಸ ಅವರ ಹೋರಾಟಕ್ಕೆ ತಕ್ಕ ನೆಲೆಗಳನ್ನು ಕಟ್ಟಿಕೊಟ್ಟಿತು. ನೆರೆಯ ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡದಲ್ಲಿ ಇರುವ ಕೋಲಿ ಸಮುದಾಯವನ್ನು ರಾಜ್ಯದಲ್ಲಿಯೂ ಪರಿಶಿಷ್ಟ  ಪಂಗಡದ ಪಟ್ಟಿಗೆ ಸೇರಿಸಬೇಕು ಎಂಬ ಹಠ ಅವರದಾಗಿತ್ತು. ಜೀವಿತದ ಅವಧಿಯಲ್ಲಿ  ಅವರ ಉದ್ದೇಶ ಈಡೇರದೇ ಇರಬಹುದು. ಆದರೆ, ಬಹಳಷ್ಟು ಜನ ಅವರ ಬೆಂಬಲಿಗರು ಭಾವಿಸಿದಂತೆ  ಪರಿಶಿಷ್ಟ ಪಂಗಡಕ್ಕೆ ಸೇರಿಸುವುದೊಂದೇ ಅವರ ಗುರಿ ಆಗಿರಲಿಲ್ಲ. ಅದು ಒಟ್ಟು ಸಮುದಾಯದ ಹಿತಕ್ಕಾಗಿ ಸಾಗುವ ದಾರಿಯಲ್ಲಿನ ಮೈಲಿಗಲ್ಲು ಎಂದು ಭಾವಿಸಿದ್ದರು.
ನಿಜವಾದ ಅರ್ಥದಲ್ಲಿ ಜನನಾಯಕನಾಗಿದ್ದ ವಿಠಲ್ ಹೆರೂರು ಅವರ ಸಾವು ಹೈದರಾಬಾದ್ ಕರ್ನಾಟಕದಲ್ಲಿ ವಿಷಾದದ ಛಾಯೆ ಮೂಡಿಸಿದೆ. ಹಳ್ಳಿಹಳ್ಳಿಗಳಲ್ಲಿಯೂ ಅವರ ಭಾವಚಿತ್ರ ಕಟ್ಟಿ ಶ್ರದ್ಧಾಂಜಲಿ ಅರ್ಪಿಸಿ ಕೃತಜ್ಞತೆ ತೋರಿಸಿದ್ದನ್ನು ನೋಡಿದರೆ ಅವರಿಗಿದ್ದ ಜನಪ್ರಿಯತೆ ಅರಿವಿಗೆ ಬರುತ್ತದೆ. ಸಾವು ಉಳಿಸಿದ ವಿಷಾದದ ನಡುವೆಯೂ ಮತ್ತೆ ಬದುಕು ಕಟ್ಟಿಕೊಳ್ಳುವ ಹರಿವ ನೀರ ಜತೆ ಸಾಗುವ ಅನಿವಾರ್ಯತೆ ಇದ್ದೇ ಇರುತ್ತದೆ. ನೆನಪುಗಳು ಮಾತ್ರ ಜತೆಗಿರುತ್ತವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು