ಜನನಾಯಕರ ನಿರ್ಗಮನದ ಸುತ್ತ
ಸಾವು ಬಂದು ಹೋಗುವ ಮನೆಯಲ್ಲಿನ ಸಂಗತಿಗಳು ಚಿತ್ರ-ಚಿತ್ರವಾಗಿರುತ್ತವೆ. ಅಲ್ಲಿ ಆತಂಕ- ದುಃಖ, ಬೇಸರ- ನಿರಾಸೆಗಳ ಜತೆಯಲ್ಲಿಯೇ ನಿರೀಕ್ಷೆ - ಕನಸುಗಳೂ ಬಂದು ಸೇರುತ್ತವೆ. ಹಲವು ಕಾಲ ಬದುಕಿದ್ದ ಜೀವ ಇಲ್ಲವಾಗುವ ಸಂಕಟ ಒಂದೆಡೆಗಾದರೆ ಅದರ ವಾರಸುದಾರಿಕೆಗಾಗಿ ನಡೆವ ತಂತ್ರ, ಕುತಂತ್ರ, ಪೈಪೋಟಿಗಳು ಮತ್ತೊಂದೆಡೆಗಿರುತ್ತವೆ. ವಾರಸುದಾರಿಕೆಯ ಪ್ರಶ್ನೆ ದೊಡ್ಡ ಅರಮನೆಯ ಒಡೆಯರಿಗೆ, ಹಣ-ಆಸ್ತಿಪಾಸ್ತಿ- ಅಧಿಕಾರ ಹೊಂದಿದವರಿಗೆ ಮಾತ್ರ ಎಂದೇನೂ ಇಲ್ಲ. ಯಾವ ಅಧಿಕಾರದ- ಪ್ರಭಾವದ ಸೋಂಕು ಕೂಡ ಇಲ್ಲದ ಕಡೆಗಳಲ್ಲಿಯೂ ’ನನ್ನದು’ ಎಂಬ ಹಠ ಕಾಣಿಸುತ್ತದೆ. ತಮ್ಮ ಬದುಕಿನ ಬಹುಭಾಗ ಸೆರೆವಾಸದಲ್ಲಿಯೇ ಕಳೆದ ದಕ್ಷಿಣ ಆಫ್ರಿಕಾದ ಮಂಡೇಲಾ ಅವರು ಕೊನೆಯುಸಿರು ಎಳೆಯುವ ಮುನ್ನವೇ ಆಸ್ತಿ ಹಂಚಿಕೆಯ ವಿವಾದ ಆರಂಭವಾಯಿತು. ಕನ್ನಡಕ್ಕೆ ಸೊಗಸಾದ ಹಾಡುಗಳನ್ನು ನೀಡಿದ ಅನುಭಾವಿ ಕವಿ ಶರೀಫರು ಇಹಲೋಕ ತ್ಯಜಿಸಿದಾಗ ಅವರ ದೇಹದ ಅಂತಿಮ ಸಂಸ್ಕಾರ ಯಾವ ವಿಧಿವಿಧಾನಗಳಲ್ಲಿ ನಡೆಯಬೇಕು ಎಂಬ ಚರ್ಚೆ ನಡೆದಿತ್ತು. ಹಾಗೆ ನೋಡಿದರೆ ಸಾವು ಒಂದು ಜೀವದ ಅಂತ್ಯ ಮಾತ್ರ ಅಲ್ಲ. ಹಲವು ಚರ್ಚೆ-ಹೊಸ ಬದುಕಿನ ಆರಂಭ. ಅಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಲೆಕ್ಕಾಚಾರ ಇರುತ್ತದೆ. ಅದು ಸಹಜ ಕೂಡ. ಗುಲ್ಬರ್ಗ ಜಿಲ್ಲೆಗೆ ಮಾತ್ರವಲ್ಲದೇ ತನ್ನ ಕೋಲಿ-ಕಬ್ಬಲಿಗ ಸಮುದಾಯದ ಜನಪ್ರಿಯ ನೇತಾರ ಆಗಿದ್ದ ವಿಠಲ ಹೇರೂರು ಇತ್ತೀಚೆಗೆ ’ಇನ್ನಿಲ್ಲ’ ಆದರು. ಖಾಸಗಿ ಆಸ್ಪತ್ರೆಯಲ್ಲಿದ್ದ ಅವರ ಕೊನೆಯ ದಿನಗಳ...