‘ಬಹಿಷ್ಕೃತ ಭಾರತ’ದ ಮೂಕನಾಯಕ
ಅಂಬೇಡ್ಕರ್ ಎಂದಾಕ್ಷಣ ತಕ್ಷಣ ನೆನಪಿಗೆ ಬರುವುದು ಭಾರತದ ಸಂವಿಧಾನದ ಕರಡು ಸಿದ್ಧಪಡಿಸಿದವರು ಮತ್ತು ಶೋಷಿತ ದಲಿತರಿಗೆ ಬಿಡುಗಡೆಯ ಬೆಳಕು ತೋರಿಸಿದ ಮಹಾನ್ ಚೇತನ. ಹೌದು ಈ ಎರಡೂ ಅಂಶಗಳು ನಿಜ. ಅವು ತುಂಬಾ ಮಹತ್ವದ ಸಂಗತಿಗಳು ಎಂಬುದರಲ್ಲಿ ಎರಡು ಮಾತೇನಲ್ಲ. ಆದರೆ, ಅಂಬೇಡ್ಕರ್ ಅವರ ಪ್ರತಿಭೆ ಹಾಗೂ ಚಿಂತನೆಯ ಹೊಳಹುಗಳು ಕೇವಲ ಅವೆರಡಕ್ಕೇ ಸೀಮಿತವೇ? ಎಂಬ ಪ್ರಶ್ನೆ ಕೇಳಿಕೊಂಡರೆ ಉತ್ತರ ಸಿಗುವುದು ಕಷ್ಟವೇನಲ್ಲ. ಅಂಬೇಡ್ಕರ್ ಒಬ್ಬ ಪ್ರಖರ ವಿಚಾರವಾದಿ, ಚಿಂತಕ. ಹಾಗೆಯೇ ಅವರೊಬ್ಬ ರಾಷ್ಟ್ರೀಯವಾದಿ. ಆರ್ಥಿಕ- ಸಾಮಾಜಿಕ- ಧಾರ್ಮಿಕ ವಿಚಾರಗಳ ಚಿಂತನೆಯ ವಿಷಯಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ಅವರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಮತ್ತೊಂದು ವ್ಯಕ್ತಿತ್ವ ದೊರೆಯುವುದು ಕಷ್ಟ. ಅಥವಾ ಬಹುತೇಕ ಅಸಾಧ್ಯ. ಆಧುನಿಕ ಭಾರತದ ಅದ್ಭುತ ವ್ಯಕ್ತಿ-ವ್ಯಕ್ತಿತ್ವ ಅಂಬೇಡ್ಕರ್. ಅವರದು ಅಸಾಧಾರಣ ಸಾಧನೆ. ಅರಿವಿನ ಕ್ಷಿತಿಜದ ಮೇರೆಯನ್ನು ವಿಸ್ತರಿಸುತ್ತಲೇ ಹೋಗುವ ಅಂಬೇಡ್ಕರ್ ಅವರು ಅಮೆರಿಕಾದ ಕೋಲಂಬಿಯಾ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ ಪಡೆದಿದ್ದರು. ಕೋಲಂಬಿಯಾ ವಿಶ್ವವಿದ್ಯಾಲಯ ಆರಂಭವಾಗಿ ಸರಿ ಸುಮಾರು 300 ವರ್ಷಗಳಾಗಿವೆ. ಈ ಮೂರು ಶತಮಾನಗಳ ಕಾಲಘಟ್ಟದಲ್ಲಿ ಕೋಲಂಬಿಯಾದಿಂದ ಪದವಿ ಪಡೆದ ಮತ್ತು ಜಾಗತಿಕ ನಕಾಶೆಯಲ್ಲಿ ತಮ್ಮ ಸಾಧನೆಯ ಮೂಲಕ ತಮ್ಮದೇ ಛಾಪು ಮೂಡಿಸಿದ ಹಲವು ಗಣ್ಯರು ನೋಡಸಿಗುತ್ತಾರೆ. ಅವರೆಲ್ಲರಿಗಿಂತ ಒಂದು ಹೆಜ್ಜೆ ಹೆಚ...