ಇಟಗಿ ಈರಣ್ಣ: ಬಾಷ್ಪಾಂಜಲಿ, ಶ್ರದ್ಧಾಂಜಲಿ
ಸರಿಯಾಗಿ ನೆನಪಿದೆ. ನಾನಾಗ ಎಸ್ಎಸ್ಎಲ್ ಸಿ ಪಾಸಾಗಿ ಪಿಯುಸಿ ಓದಿಗಾಗಿ ಹೊಸಪೇಟೆಯ ವಿಜಯನಗರ ಕಾಲೇಜು ಸೇರಿದ್ದೆ. ಅತ್ತ ಹಳ್ಳಿಯೂ ಅಲ್ಲದ ಇತ್ತ ನಗರವೂ ಅಲ್ಲದ ಪಟ್ಟಣದಂತಿದ್ದ ಶಹಾಪುರದಿಂದ ಹೊಸಪೇಟೆಗೆ ಹೋಗಿದ್ದ ನನಗೆ ಕಾಲೇಜಿನ ಅನುಭವ ಹೊಸದು. ದೊಡ್ಡ ಕಾಲೇಜು ಬೃಹತ್ ವಿದ್ಯಾರ್ಥಿ ಸಮೂಹದ ನಡುವೆ ಕೆಲಕಾಲ ಬೆರಗು. ನಂತರ ಅಚ್ಚರಿ, ಭಯ, ಆತಂಕ. ಪಿಯುಸಿ ಮೊದಲ ವರ್ಷದ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನನಗೆ ಫಿಜಿಕ್ಸ್, ಕೆಮಿಸ್ಟ್ರಿ ನುರಿಯದ ಕಬ್ಬಿಣದ ಕಡಲೆಯಾಗಿದ್ದವು. ಕನ್ನಡ ಮೀಡಿಯಂನಲ್ಲಿ ಓದಿ ಇದ್ದಕ್ಕಿದ್ದಂತೆ ಎಲ್ಲವೂ ಇಂಗ್ಲಿಷ್ ಮಯ ಕಲಿಕೆಗೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದೆ. ಸರಳವಾಗಿ ವಿವರಿಸುತ್ತಿದ್ದ ಮೇಷ್ಟ್ರುಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಬಾಕಿಯವರೆಲ್ಲ ಕುದುರೆಯ ಮೇಲೆ ಕುಳಿತಂತೆ ಓಡಿ ಬಿಡುತ್ತಿದ್ದರು. ಬೆನ್ನೆತ್ತಲಾಗದೇ ಭೀತನಾಗುತ್ತಿದ್ದೆ. ಅಂತಹ ದಿನಗಳಲ್ಲಿ ನನಗೆ ಅರ್ಥವಾಗುತ್ತಿದ್ದ ಏಕೈಕ ಸಬ್ಜೆಕ್ಟ್ ಕನ್ನಡ ಆಗಿತ್ತು. ಹೀಗಾಗಿ ಕನ್ನಡ ತರಗತಿಗಳನ್ನು ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ. ಕನ್ನಡದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದ ಮೇಷ್ಟ್ರುಗಳು ಕೂಡ ಜನಪ್ರಿಯ ತಾರೆಗಳೇ ಆಗಿದ್ದರು. ಬಯಲಾಟ, ರಂಗಭೂಮಿ, ಜಾನಪದ ಸಾಹಿತ್ಯ, ಶಾಸ್ತ್ರೀಯ ಸಂಗೀತ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ. ತಮ್ಮ ಬಯಲಾಟದ ತಂಡದೊಂದಿಗೆ ಜರ್ಮನಿ ಸೇರಿದಂತೆ ಹಲವು ದೇಶ ಸುತ್ತಿ ಬಂದಿದ್ದ ಡಾ. ಬಸವರಾಜ ಮಲಶೆಟ್ಟಿ ಅವರು ದೊಡ್ಡ ಸ್ಟಾರ...