ಕಲಾಗುರು- ಕಲಾವಿದ ಎಂ.ಬಿ. ಲೋಹಾರ್
ಕಲಾವಿದ ಎಂ.ಬಿ. ಲೋಹಾರ್ ಅವರು ಸರಳ, ಸಜ್ಜನ ವ್ಯಕ್ತಿತ್ವದ ಮೃದುಹೃದಯಿ. ಮಿತಭಾಷಿಯಾಗಿದ್ದ ಅವರು ಯಾವುದೇ ಸಂದರ್ಭದಲ್ಲಿಯೂ ಸಂಯಮದ ಎಲ್ಲೆ ಮೀರಿ ಮಾತನಾಡಿದವರಲ್ಲ. ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೀತಿ ಹೊಂದಿದ್ದ ಅಪರೂಪದ ಕಲಾಗುರು ಅವರಾಗಿದ್ದರು. ಮೂರು ದಶಕಗಳ ಕಲಾಜೀವನವನ್ನು ಇತ್ತೀಚೆಗೆ (ಆಗಸ್ಟ್ 3) ಗುಲ್ಬರ್ಗದಲ್ಲಿ ಪೂರ್ಣಗೊಳಿಸಿದರು. ಅವರಿಗೊಂದು ನುಡಿನಮನ ಇಲ್ಲಿದೆ.-- ಸತತ ಮತ್ತು ಕಠಿಣ ಪರಿಶ್ರಮದಿಂದ ಕಲಾಲೋಕದಲ್ಲಿ ನೆಲೆ ಕಂಡುಕೊಂಡ ಕಲಾವಿದ ಎಂ.ಬಿ. ಲೋಹಾರ್. `ಕಪಲ್ಸ್' ಸರಣಿ ಅವರ ಚಿತ್ರಗಳ ಮೂಲಕ ನಾಡಿನ ಕಲಾವಲಯದಲ್ಲಿ ಜನಪ್ರಿಯರಾಗಿದ್ದ ಲೋಹಾರ್ ಅವರು ವಸ್ತುವಿನ ಆಯ್ಕೆಯಲ್ಲಿ ಜನಪರ- ಜೀವಪರ ಧೋರಣೆ ತಳೆಯುತ್ತಿದ್ದವರಾಗಿದ್ದರು. ಅವರ ಕುಂಚದ ಬೀಸುಗಳಲ್ಲಿ ಯಾವುದೇ ಗೊಂದಲ- ಗಲಿಬಿಲಿ ಇರುತ್ತಿರಲಿಲ್ಲ. ತಮ್ಮ ಕಲಾಕೃತಿಗೆ ಪರ್ಫೆಕ್ಟ್ ಆದ `ಲೋಹಾರ ಟಚ್' ನೀಡುತ್ತಿದ್ದರು. ರೂಢಿಗತವಾದ ನಿಸರ್ಗ ಚಿತ್ರಣ ಇರುವ ಲ್ಯಾಂಡ್‌ಸ್ಕೇಪ್ ಮತ್ತು ವ್ಯಕ್ತಿಚಿತ್ರಣದ ಪೋಟ್ರೇಟ್‌ಗಳನ್ನು ಲೋಹಾರ ರಚಿಸುತ್ತಿದ್ದರು. ಆದರೆ, ಅವರ ಕಲಾಕೃತಿಗಳ ಅನನ್ಯತೆ ಇರುವುದು ನವ್ಯ ಆಕೃತಿಗಳ ಮೂಲಕ ನಿಸರ್ಗ ಮತ್ತು ಮಾನವನ ನಡುವಿನ ಮುಖಾಮುಖಿಯಲ್ಲಿ. ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕಣಜಿಯಲ್ಲಿ 1949ರಲ್ಲಿ ಜನಿಸಿದ ಮನೋಹರ ಬಸವಂತ ಲೋಹಾರ ಅವರು ಕಲಾವಲಯದಲ್ಲಿ `ಎಂ.ಬಿ.ಲೋಹಾರ' ಎಂದೇ ಚಿರಪರಿಚಿತರು. ಗುಲ್ಬರ್ಗದ ಐಡಿಯಲ್ ...