ಕಲಾಗುರು- ಕಲಾವಿದ ಎಂ.ಬಿ. ಲೋಹಾರ್
ಕಲಾವಿದ ಎಂ.ಬಿ. ಲೋಹಾರ್ ಅವರು ಸರಳ, ಸಜ್ಜನ ವ್ಯಕ್ತಿತ್ವದ ಮೃದುಹೃದಯಿ. ಮಿತಭಾಷಿಯಾಗಿದ್ದ ಅವರು ಯಾವುದೇ ಸಂದರ್ಭದಲ್ಲಿಯೂ ಸಂಯಮದ ಎಲ್ಲೆ ಮೀರಿ ಮಾತನಾಡಿದವರಲ್ಲ. ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೀತಿ ಹೊಂದಿದ್ದ ಅಪರೂಪದ ಕಲಾಗುರು ಅವರಾಗಿದ್ದರು. ಮೂರು ದಶಕಗಳ ಕಲಾಜೀವನವನ್ನು ಇತ್ತೀಚೆಗೆ (ಆಗಸ್ಟ್ 3) ಗುಲ್ಬರ್ಗದಲ್ಲಿ ಪೂರ್ಣಗೊಳಿಸಿದರು. ಅವರಿಗೊಂದು ನುಡಿನಮನ ಇಲ್ಲಿದೆ.-- ಸತತ ಮತ್ತು ಕಠಿಣ ಪರಿಶ್ರಮದಿಂದ ಕಲಾಲೋಕದಲ್ಲಿ ನೆಲೆ ಕಂಡುಕೊಂಡ ಕಲಾವಿದ ಎಂ.ಬಿ. ಲೋಹಾರ್. `ಕಪಲ್ಸ್' ಸರಣಿ ಅವರ ಚಿತ್ರಗಳ ಮೂಲಕ ನಾಡಿನ ಕಲಾವಲಯದಲ್ಲಿ ಜನಪ್ರಿಯರಾಗಿದ್ದ ಲೋಹಾರ್ ಅವರು ವಸ್ತುವಿನ ಆಯ್ಕೆಯಲ್ಲಿ ಜನಪರ- ಜೀವಪರ ಧೋರಣೆ ತಳೆಯುತ್ತಿದ್ದವರಾಗಿದ್ದರು. ಅವರ ಕುಂಚದ ಬೀಸುಗಳಲ್ಲಿ ಯಾವುದೇ ಗೊಂದಲ- ಗಲಿಬಿಲಿ ಇರುತ್ತಿರಲಿಲ್ಲ. ತಮ್ಮ ಕಲಾಕೃತಿಗೆ ಪರ್ಫೆಕ್ಟ್ ಆದ `ಲೋಹಾರ ಟಚ್' ನೀಡುತ್ತಿದ್ದರು. ರೂಢಿಗತವಾದ ನಿಸರ್ಗ ಚಿತ್ರಣ ಇರುವ ಲ್ಯಾಂಡ್‌ಸ್ಕೇಪ್ ಮತ್ತು ವ್ಯಕ್ತಿಚಿತ್ರಣದ ಪೋಟ್ರೇಟ್‌ಗಳನ್ನು ಲೋಹಾರ ರಚಿಸುತ್ತಿದ್ದರು. ಆದರೆ, ಅವರ ಕಲಾಕೃತಿಗಳ ಅನನ್ಯತೆ ಇರುವುದು ನವ್ಯ ಆಕೃತಿಗಳ ಮೂಲಕ ನಿಸರ್ಗ ಮತ್ತು ಮಾನವನ ನಡುವಿನ ಮುಖಾಮುಖಿಯಲ್ಲಿ. ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕಣಜಿಯಲ್ಲಿ 1949ರಲ್ಲಿ ಜನಿಸಿದ ಮನೋಹರ ಬಸವಂತ ಲೋಹಾರ ಅವರು ಕಲಾವಲಯದಲ್ಲಿ `ಎಂ.ಬಿ.ಲೋಹಾರ' ಎಂದೇ ಚಿರಪರಿಚಿತರು. ಗುಲ್ಬರ್ಗದ ಐಡಿಯಲ್ ಫೈನ್ ಆರ್ಟ್ ಸ್ಕೂಲ್‌ನ ವಿದ್ಯಾರ್ಥಿಯಾಗಿದ್ದ ಅವರು ಅಲ್ಲಿಯೇ ಮೇಷ್ಟ್ರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಲೋಹಾರ್ ಅವರು ತಮ್ಮ ಸುತ್ತಲಿನ ಐತಿಹಾಸಿಕ ಸ್ಮಾರಕ, ಹಸಿರು ವನರಾಶಿಯ ಭೂದೃಶ್ಯಗಳ ನಡುವೆ ಬೆಳೆದವರು. ಬದುಕಿನ ಹಲವು ಮುಖಗಳನ್ನು ಗ್ರಹಿಸಿ ಅವುಗಳನ್ನು ತಮ್ಮ ಕಲಾತ್ಮಕ ಆಕೃತಿಗಳಾಗಿ ಪರಿವರ್ತಿಸಿದವರು.
ಅವರ ಗ್ರಹಿಕೆ ಆಳ- ಹರವುಗಳು ಅವರ ಕಲಾಕೃತಿಗಳಲ್ಲಿ ಆಕರ್ಷಕವಾಗಿ ಬಿಂಬಿತವಾಗಿವೆ. ಎಲ್ಲ ಕಲಾವಿದರ ಹಾಗೆ ಲೋಹಾರ್ ಕೂಡ ನಿಸರ್ಗದ ಆರಾಧಕರು. ಪ್ರಕೃತಿಯ ಸುಂದರ ಸಂಜೆ, ಬೆಳಗುಗಳನ್ನು ವಿಭಿನ್ನ ರೀತಿಯಲ್ಲಿ ಅವರು ಕ್ಯಾನ್ವಾಸ್ ಮೇಲೆ ಸೆರೆ ಹಿಡಿದಿದ್ದಾರೆ. ಗಿಡ ಮರಗಳ ಆಕಾರ, ವಿವಿಧ ಕಾಲದ- ಋತುಗಳ ಸಡಗರ- ಸಂಭ್ರಮಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಭಾವಚಿತ್ರಗಳಲ್ಲಿ ಅಪರೂಪದ ಚೆಲುವು ಮತ್ತು ಮುಖದ ಭಾವನೆ, ಲಕ್ಷಣಗಳನ್ನು ದಾಖಲಾಗುವಂತೆ ಮಾಡುವ ಅವರ ಕಲಾತ್ಮಕ ಶ್ರದ್ಧೆ ಬಹುತೇಕ ಎಲ್ಲ ಪೋಟ್ರೇಟ್‌ಗಳಲ್ಲಿಯೂ ಕಾಣಿಸುತ್ತದೆ. ನೋಡುಗನ ಮನಸ್ಸಿಗೆ ಮುದ ನೀಡುವ ವರ್ಣಗಳ ಆಯ್ಕೆ ಮತ್ತು ಮೃದುವಾದ ಅಲೆಗಳು ಅನಂತತೆಯ ಕಡೆಗೆ ಕರೆದುಕೊಂಡು ಹೋಗುತ್ತವೆ. ಹೊಸ ಟಚ್ ಮತ್ತು ಆ ಮೂಲಕ ನೀಡುವ ವಿಭಿನ್ನ ಆಯಾಮದಿಂದ ಭಾವಚಿತ್ರಗಳು ಗಮನ ಸೆಳೆಯುತ್ತವೆ. ಲೋಹಾರ ಅವರ ಸಂಯೋಜನೆಗಳಲ್ಲಿ ಕ್ರಿಯಾಶೀಲ ಅಭಿವ್ಯಕ್ತಿ ಎದ್ದು ಕಾಣಿಸುತ್ತದೆ. ಸಾಂಕೇತಿಕವಾಗಿ- ಸೂಚ್ಯವಾಗಿ ಹೇಳಬಹುದಾದ ವೈಚಾರಿಕತೆಯ ಅಂಶಗಳು ವರ್ಣರೇಖೆಗಳ ಹರಿತ ಅಭಿವ್ಯಕ್ತಿಯಲ್ಲಿ ಕೊನೆಗೊಳ್ಳುವುದು ಗಮನಾರ್ಹ ಅಂಶ. ಆಕಾರಗಳಲ್ಲಿ ದೇಸಿ ಸೊಗಡುತನ, ಬಳ್ಳಿ-ಹೂಗಳೊಂದಿಗೆ ಮೈಮಾಟ ರೂಪುಗೊಳ್ಳುವುದು. ಬೆಳಕಿನ ವಿನ್ಯಾಸ ಮತ್ತು ಅದನ್ನು ದಾಖಲಿಸುವುದಕ್ಕಾಗಿ ಬಳಸುವ ವೈವಿಧ್ಯಮಯ ವರ್ಣಗಳು ಲೋಹಾರ ಅವರ ಕಲಾಕೃತಿಗಳಲ್ಲಿ ಸೊಗಸಾಗಿ ಅನಾವರಣಗೊಂಡಿವೆ. ನಿಸರ್ಗ ಚಿತ್ರಣದಲ್ಲಿ ಹಕ್ಕಿಗಳ ಹಾರಾಟ, ಹೆಣ್ಣು-ಗಂಡಿನ ಆಕಾರಗಳ ಕಾಲ್ಪನಿಕ ಚಿತ್ರಣ ಶಕ್ತಿ ವಿಚಾರ- ಭಾವನೆಗಳಿಗೆ ಸ್ಪಂದಿಸುವ ಗುಣ ಉಳ್ಳದ್ದಾಗಿವೆ. ತೈಲವರ್ಣ, ಜಲವರ್ಣ ಮತ್ತು ಆಕ್ರಿಲಿಕ್ ವರ್ಣಗಳನ್ನು ಪ್ರಯೋಗಶೀಲವಾಗಿ ಬಳಸುವಲ್ಲಿ ಲೋಹಾರ ಸಿದ್ಧಹಸ್ತರು. ನಿತ್ಯ ಬದುಕಿನ ವಿಷಯಗಳಿಗೆ ತಮ್ಮದೇ ಕಲ್ಪನೆ- ಒಳನೋಟ ಬೆರೆಸಿದ ಕಲಾಕೃತಿಗಳ ಮೂಲಕ ಅಭಿವ್ಯಕ್ತಿ ಕಂಡುಕೊಳ್ಳುತ್ತಿದ್ದರು. ದೃಶ್ಯಗಳಲ್ಲಿನ ನೈಜತೆಯ ಜೊತೆಗೆ ವೈಚಾರಿಕ ಹಾಗೂ ಹಲವು ಅರ್ಥದ ಸಾಧ್ಯತೆಗಳನ್ನು ಕಲ್ಪಿಸುವ ಗುಣ ಅವರ ಕಲಾಕೃತಿಗಳಲ್ಲಿ ಕಾಣಿಸುತ್ತದೆ. ಪ್ರಕೃತಿ ಚಿತ್ರಣದ ಆರಂಭದ ಕೃತಿಗಳಲ್ಲಿನ ಅಭಿವ್ಯಕ್ತಿ, ವೈವಿಧ್ಯಮಯ ಆಕೃತಿಗಳು ಲೋಹಾರ ಅವರ ಕಲಾಸಂವೇದನೆಗೆ ಹಿಡಿದ ಕನ್ನಡಿಯಂತಿವೆ. ಹೆಣ್ಣು-ಗಂಡಿನ ಮಾನವೀಯ ಸಂಬಂಧಗಳ ಹಲವು ಒಳನೋಟಗಳನ್ನು ತೈಲವರ್ಣದ ಕೃತಿಗಳಲ್ಲಿ ನಾಟಕೀಯವಾಗಿ ಬಿಂಬಿಸುವಂತೆ ಚಿತ್ರಿಸಿದ್ದಾರೆ. `ಕುಂಚಗಳ ಬೀಸುಗಳ ಆವೇಶದಲ್ಲಿ ಆಕರ್ಷಕವಾಗಿ ಅಲಂಕೃತಗೊಂಡ ಬಣ್ಣಗಳು, ಆಳದಲ್ಲಿ ಹಲವು ಭಾಗಗಳು ವೈಭವೀಕರಣಗೊಂಡು ನೋಡುಗನ್ನು ಆವರಿಸಿ ಬಿಡುತ್ತವೆ' ಎನ್ನುವ ವಿಮರ್ಶಕರ ಮಾತುಗಳಲ್ಲಿ ಹುರುಳಿದೆ. ಅವರ `ಕಪಲ್' ಸರಣಿಯ ಚಿತ್ರಗಳು ವಸ್ತು ಮತ್ತು ಮಾಧ್ಯಮದ ನಿರ್ವಹಣೆಯಲ್ಲಿ ಗಣನೀಯ ಸಾಧ್ಯತೆಗಳನ್ನು ಸಾಧಿಸಿರುವುದು ಕಾಣಿಸುತ್ತದೆ.
ಕಾಮೆಂಟ್‌ಗಳು