ಎಸ್.ಎಂ. ಪಂಡಿತ್



ಹೆಸರಾಂತ
ಸಂಗೀತಗಾರ ದೀನಾನಾಥ ಮಂಗೇಶ್ಕರ್ ಅವರ ಜನ್ಮಶತಮಾನೋತ್ಸವ (1990) ಸಮಾರಂಭ. ದೇಶದ ಗಣ್ಯ-ಮಾನ್ಯರೆಲ್ಲ ಭಾಗವಹಿಸಿದ್ದ ಬೃಹತ್ ವೇದಿಕೆಯಲ್ಲಿ  ಚಟುವಟಿಕೆಗಳು ಚುರುಕಾಗಿ ನಡೆಯುತ್ತಿದ್ದವು. ಅದೇ ಹೊತ್ತಿಗೆ ಶ್ವೇತವರ್ಣದ ಗಡ್ಡಧಾರಿಯೊಬ್ಬರು ಸಭಾಂಗಣ ಪ್ರವೇಶಿಸಿದರು. ಅವರನ್ನು ನೋಡಿದ ದೀನಾನಾಥ ಅವರ ಪುತ್ರಿ ಲತಾ ಮಂಗೇಶ್ಕರ್ ಅವರು ವೇದಿಕೆಯಿಂದ ಕೆಳಗಿಳಿದು ಬಂದು ಹಿರಿಯರ ಕಾಲುಮುಟ್ಟಿ ನಮಸ್ಕರಿಸಿದರು. ಅವರನ್ನು ಮುಂದಿನ ಸಾಲಿನಲ್ಲಿ ಕೂಡಿಸಿ ವೇದಿಕೆಗೆ ಮರಳಿದರು. ನೀಳವಾದ ಬಿಳಿಗಡ್ಡ ಹಣೆಯಲ್ಲಿ ಕಾಸಗಲದ ಕುಂಕುಮ ಹಚ್ಚಿಕೊಂಡಿದ್ದ ವ್ಯಕ್ತಿಯು ಯಾರೋ ಸ್ವಾಮೀಜಿ ಅಥವಾ ಆಚಾರ್ಯರು ಇರಬಹುದು ಎಂದು ಬಹುತೇಕರು ಭಾವಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯ ಸ್ವಲ್ಪ ಸಮಯದ ನಂತರ ಲತಾ ಮತ್ತೊಮ್ಮೆ ಸ್ವತಃ ಕೆಳಗಿಳಿದು ಬಂದು ವಿನಮ್ರತೆಯಿಂದ ವೇದಿಕೆಯ ಮೇಲೆ ಬರುವಂತೆ ಆಹ್ವಾನಿಸಿದರು. ವೇದಿಕೆ ಹತ್ತಿದ ನಂತರ ಮೈಕ್ ಹತ್ತಿರ ಬಂದ ಲತಾ ಅವರುತಂದೆಯು ಸದಾಕಾಲ ನನ್ನ ಜತೆ ಇರುವಂತೆ ಮಾಡಿದ ಕಲಾವಿದ ಎಸ್.ಎಂ. ಪಂಡಿತ್ (ಸಾಂಬಾನಂದ ಮೋನಪ್ಪ ಪಂಡಿತ್). ಅವರ ಕಲಾಕೃತಿಯಿಂದಾಗಿ ಪ್ರತಿದಿನವೂ ನನ್ನ ತಂದೆಯ ಜತೆ ಸಂವಾದ ನಡೆಸುವುದು ಸಾಧ್ಯವಾಗಿದೆಎಂದು ಹೇಳುತ್ತಿದ್ದಂತೆ ಭಾರೀ ಕರತಾಡನದ ಪ್ರತಿಕ್ರಿಯೆ. ಸಂಗೀತಗಾರರಿಗೆ ನೀಡಲಾಗುವ ಮೊದಲ ದೀನಾನಾಥ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸುವುದಕ್ಕಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿಂದೂಸ್ತಾನಿ ಗಾಯಕ ಪಂಡಿತ್ ಭೀಮಸೇನ ಜೋಷಿ ಅವರು ಪಂಡಿತ್ರನ್ನು ಪ್ರೀತಿಯಿಂದ ಅಪ್ಪಿಕೊಂಡರು. ಪಂಡಿತ್ ಮತ್ತೊಬ್ಬ ಜೀವದ ಗೆಳೆಯ ಆಗ ವ್ಯಂಗ್ಯಚಿತ್ರ ಕಲಾವಿದರಾಗಿದ್ದ ಬಾಳ್ ಠಾಕ್ರೆ ಕೂಡ ಹತ್ತಿರ ಬಂದು ಕೈ ಕುಲುಕಿದರು. ಇದು ನಡೆಯುವಾಗ ಲತಾ ಮಾತು ಮುಂದುವರೆಸಿದ್ದರು. ’ಪಂಡಿತ್ ಅವರು ಅತ್ಯಲ್ಪ ಅವಯಲ್ಲಿಯೇ ಸೊಗಸಾದ ಕಲಾಕೃತಿ ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ವೇದಿಕೆಯ ಮೇಲೆ ಇರಿಸಲಾಗಿದ್ದ ದೀನಾನಾಥ ಮಂಗೇಶ್ಕರ್ ಭಾವಚಿತ್ರವು ಛಾಯಾಚಿತ್ರವೂ ನಾಚುವಷ್ಟು ಸೊಗಸಾಗಿತ್ತು.
ಮುಂಬೈ ಘಟನೆಯ ಸರಿಸುಮಾರು ಒಂದುವರೆ ದಶಕದ ನಂತರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಗುಲ್ಬರ್ಗಕ್ಕೆ ಆಗಮಿಸಿದ್ದರು. ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿದ್ದ ರಾಷ್ಟ್ರಪತಿ ಅವರು ನೂತನವಾಗಿ ನಿರ್ಮಿಸಲಾಗಿದ್ದ ರಂಗಮಂದಿರದ ಉದ್ಘಾಟನೆಯನ್ನು ನೇರವೇರಿಸಬೇಕಿತ್ತು. ರಂಗಮಂದಿರದ ಉದ್ಘಾಟನೆಯ ನಂತರ ಮತ್ತೊಂದು ಕಾರ್ಯಕ್ರಮ ಇದ್ದದ್ದರಿಂದ ಪ್ರತತಿಭಾ ಪಾಟೀಲ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮ ಇಟ್ಟುಕೊಂಡಿರಲಿಲ್ಲ. ಸಾಂಪ್ರದಾಯಿಕ ಉದ್ಘಾಟನೆಯ ನಂತರ ಎಸ್.ಎಂ. ಪಂಡಿತ್ ಅವರ ಕಲಾಕೃತಿಗಳನ್ನು ವೀಕ್ಷಿಸಿದ ಪ್ರತಿಭಾ ಪಾಟೀಲ್ ಅವರು ನೇರವಾಗಿ ವೇದಿಕೆಯ ಮೇಲೆ ಬಂದರು. ’ಇಲ್ಲಿ ನಾನು ಮಾತನಾಡುವ ಕಾರ್ಯಕ್ರಮ ನಿಗದಿಯಾಗಿಲ್ಲ. ಆದರೆ, ಪಂಡಿತ್ ಅವರ ಜೀವಂತ ಕಲಾಕೃತಿಗಳನ್ನು ನೋಡಿದ ನಂತರ ಮಾತನಾಡದೇ ಮುಂದೆ ಹೋಗುವುದು ಸಾಧ್ಯವೇ ಇಲ್ಲ. ಆದ್ದರಿಂದ ಮಾತನಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆಎಂದು ಮಾತಿಗೆ ಆರಂಭಿಸಿದರು. ನಂತರ ಮುಂದುವರೆಸಿದ ಅವರುಕಲಾಕೃತಿಗಳು ನನ್ನ ಮನಸೂರೆಗೊಂಡವು. ಯುವಕರಿಗೆ ಸದಾಕಾಲ ಪ್ರೇರಣೆ ಒದಗಿಸುವ ಅಪೂರ್ವ ಆಕೃತಿಗಳನ್ನು ನೋಡುವ ಅವಕಾಶ ಒದಗಿಸಿದ ಪಂಡಿತ್ರಿಗೆ ನಮನಗಳುಎಂದು ಮಾತು ಮುಗಿಸಿದರು. ಬೆಳವಣಿಗೆಯನ್ನು ರಾಷ್ಟ್ರಪತಿಗಳ ಬೆಂಗಾವಲು ಪಡೆಯವರು ಬೆಕ್ಕಸ ಬೆರಗಾಗಿ ನೋಡುತ್ತಿದ್ದರು.

ಎರಡು ಘಟನೆಗಳು ಗುಲ್ಬರ್ಗದ ಹೆಸರನ್ನು ರಾಷ್ಟ್ರೀಯ- ಅಂತರರಾಷ್ಟ್ರೀಯ ಕಲಾನಕಾಶೆಯಲ್ಲಿ  ಢಾಳಾಗಿ ಎದ್ದುಕಾಣುವಂತೆ ಮೊದಲ ಬಾರಿಗೆ ದಾಖಲಿಸಿದ ಎಸ್.ಎಂ. ಪಂಡಿತ್ ಅವರ ಮಹತ್ವವನ್ನು ಸೂಚಿಸುತ್ತವೆ. ಪಂಡಿತ್ರಿಗೆ ಸಂಬಂಧಿಸಿದಂತೆ ಇಂತಹ ಹತ್ತಾರು ಘಟನೆಗಳಿವೆ. ಕಲಾಸಕ್ತರ ಸ್ಮೃತಿ ಪಟಲದಲ್ಲಿ ದಾಖಲಾಗಿರುವ ಘಟನೆಗಳನ್ನು ಮೆಲುಕು ಹಾಕುವಾಗಿನ ಅವರ ಸಡಗರ-ಸಂಭ್ರಮವನ್ನು ನೋಡಿಯೇ ಅನುಭವಿಸಬೇಕು. ಎಸ್.ಎಂ. ಪಂಡಿತ್ರು ಇಹಲೋಕ ತ್ಯಜಿಸಿ ಎರಡು ದಶಕಗಳು ಕಳೆದಿವೆ. ಅವಧಿಯಲ್ಲಿ ಪಂಡಿತ್ ಅವರನ್ನು ಕಲಾಕೃತಿಗಳ ಮೂಲಕ ಜೀವಂತವಾಗಿಡುವ ಕೆಲಸವನ್ನು ಅವರ ಪುತ್ರ ಕೃಷ್ಣರಾಜ ಪಂಡಿತ್ ಮಾಡುತ್ತ ಬಂದಿದ್ದಾರೆ. ಗುಲ್ಬರ್ಗದಲ್ಲಿ ಹುಟ್ಟಿ ಬೆಳೆದ ಪಂಡಿತ್ರು (1916-1993) ತಮ್ಮ ಜೀವನದ ಬಹುತೇಕ ದಿನಗಳನ್ನು ಕಳೆದದ್ದು ಮುಂಬೈನಲ್ಲಿ. ವಾಣಿಜ್ಯ ನಗರಿಯ ಸಾಂಸ್ಕೃತಿಕ ಲೋಕದ ಪ್ರಮುಖರಲ್ಲಿ ಒಬ್ಬರಾಗಿದ್ದ ಪಂಡಿತ್ ಅವರಿಗೆ ತವರಿನಿಂದ ದೂರ ಇದ್ದ ಕೊರಗು. ಅದರಿಂದ ದೂರ ಆಗುವುದಕ್ಕೇನೋ ಎಂಬಂತೆ ತಮ್ಮ ಕಲಾಕೃತಿಗಳಿಗೆ ಪ್ರೇರಣೆ ಆಗಿದ್ದ ಕಾಳಿಮಾತೆಯ ದೇವಾಲಯವನ್ನು ಗುಲ್ಬರ್ಗದಲ್ಲಿ ಸ್ವತಃ ನಿಂತು ಕಟ್ಟಿಸಿದ್ದರು. ತಾಯ್ನಾಡಿನಲ್ಲಿ (ಬೆಂಗಳೂರು) ಕಲಾಪ್ರದರ್ಶನ ನಡೆಸುವ ಅವರ ಆಸೆ ಈಡೇರಿದ್ದುಭೌತಿಕವಾಗಿ ಇಲ್ಲವಾದ ಕೆಲವು ದಿನಗಳ ನಂತರ. ಕೃಷ್ಣರಾಜ ಅವರು ಪ್ರದರ್ಶನದ ಹೊಣೆ ಹೊತ್ತಿದ್ದರು. ಪಂಡಿತ್ ಇಚ್ಛೆಯಂತೆ ಅವರ ಎಲ್ಲ ಮೂಲ ಕಲಾಕೃತಿಗಳನ್ನು ಗುಲ್ಬರ್ಗದ ಮನೆಯಲ್ಲಿ ಇರಿಸಲಾಗಿದೆ. ಕೆಲವರ್ಷಗಳ ಹಿಂದೆ ಗುಲ್ಬರ್ಗದಲ್ಲಿಯೂ ಕಲಾಕೃತಿಗಳ ಪ್ರದರ್ಶನ ಏರ್ಪಡಿಲಾಗಿತ್ತು. ಪಂಡಿತ್ ಕಲಾಕೃತಿಗಳ ಬ್ಲಾಗ್ ಆರಂಭಿಸಲಾಗಿದೆ. ಹೊಳಪುಗಣ್ಣಿನ ಭಗವಾನ್ ಬುದ್ಧನ ಮುಖಮುದ್ರೆಯ ಮುಖಪುಟ ಇರುವ ಪುಸ್ತಕದಲ್ಲಿ ಪಂಡಿತ್ ಅನನ್ಯ ಕಲಾಕೃತಿಗಳನ್ನು ಸೊಗಸಾಗಿ ಅನಾವರಣ ಮಾಡಲಾಗಿದೆ.
 ಕೇರಳದ ರಾಜಾ ರವಿವರ್ಮನಿಂದ ಭಾರತದಲ್ಲಿ ಆರಂಭವಾದ ರಮ್ಯ ಸಂಪ್ರದಾಯವನ್ನು ತಮ್ಮದೇ ವಿಶಿಷ್ಟ ಮತ್ತು ವಿಭಿನ್ನ ಶೈಲಿಯಲ್ಲಿ  ಶ್ರೀಮಂತಗೊಳಿಸಿದ ಪಂಡಿತ್ರು ಅದಕ್ಕಾಗಿ ಭಾರತೀಯ ಪುರಾಣದ ಪಾತ್ರಗಳನ್ನು -ಕಥೆಗಳನ್ನು ಆಯ್ದುಕೊಂಡರು. ವಿಶ್ವಾಮಿತ್ರ- ಮೆನಕೆಯ ಸರಣಿ ಕಲಾಕೃತಿಗಳಿಗಾಗಿ ಅವರು ಪಟ್ಟ ಪರಿಶ್ರಮ ಬಣ್ಣನೆಗೆ ನಿಲುಕದ್ದು. ಒಂದು ಕಲಾಕೃತಿಗೆ ಅಂತಿಮ ರೂಪು ನೀಡುವ ಮುನ್ನ ಅದಕ್ಕಾಗಿ ನಡೆಸಿದ ಪೂರ್ವತಯಾರಿ ಅವರ ಹಲವು ರೇಖಾಚಿತ್ರಗಳಲ್ಲಿ  ಗೋಚರವಾಗುತ್ತದೆ. ಅವಿರತ ಪ್ರಯತ್ನದಿಂದ ರೂಪುಗೊಂಡ ಶಾಕುಂತಲೆಯ ಪತ್ರಲೇಖನ, ಬಿಲ್ಲಿಗೆ ಹೆದೆಯೇರಿಸಿದ ರಾಮ, ನಳ-ದಮಯಂತಿ, ಪುಂಡರೀಕ-ಮಹಾಶ್ವೇತೆ, ಕುರುಕ್ಷೇತ್ರದ ಕೃಷ್ಣಾರ್ಜುನ ಮುಂತಾದ ತೈಲವರ್ಣ ಚಿತ್ರಗಳು ಕಣ್ಣಿಗೆ ಕಟ್ಟುವಂತಹ ವಿವರಗಳಲ್ಲಿ ಗೋಚರಿಸುತ್ತವೆ. ಕಥೆ ನಡೆದ ಲೋಕದದೊಳಕ್ಕೆ ಸಹೃದಯನನ್ನು ಎಳೆದೊಯ್ಯುತ್ತವೆ. ಪಂಡಿತ್ ಕಲಾಕೃತಿಗಳು ಪಡೆದ ಲೋಕಮನ್ನಣೆ ಅವುಗಳ ಜೀವಂತಿಕೆಗೆ ಸಾಕ್ಷಿ. ಕಲಾಕೃತಿ ರಚಿಸುವುದಕ್ಕಾಗಿ ಪಂಡಿತ್ರು ಎಲ್ಲ ಮಹತ್ವದ ಕಲಾವಿದರ ಹಾಗೆ ತಮ್ಮದೇ ವಿಧಾನ ರೂಢಿಸಿಕೊಂಡರು. ತೈಲವರ್ಣ ಚಿತ್ರ ರಚಿಸುವವರು ಸಾಮಾನ್ಯವಾಗಿ ಒಂದಾದ ಮೇಲೆ ಒಂದರಂತೆ ಲೇಯರ್ಗಳನ್ನು ಸೃಷ್ಟಿಸುತ್ತ ಹೋಗುತ್ತಾರೆ.  ಮೂಲಕ ಗಾಢತೆಯ ಕಡೆಗೆ ತೆಗೆದುಕೊಂಡು ಹೋಗುತ್ತಾರೆ. ಆದರೆ, ಪಂಡಿತ್ರು ಒಂದು ಮೂಲೆಯಿಂದ ಆರಂಭಿಸಿ ಅದನ್ನು ಪೂರ್ಣಗೊಳಿಸಿದ ನಂತರವೇ ಕ್ಯಾನ್ವಾಸಿನ ಮತ್ತೊಂದು ಭಾಗಕ್ಕೆ ಹೋಗುತ್ತಾರೆ. ಇದರಿಂದಾಗಿ ಪ್ರತಿಯೊಂದು ಸಣ್ಣ ವಿವರದ ಕಡೆಗೂ ಗಮನ ಹರಿಸುವುದು ಸಾಧ್ಯವಾಗುತ್ತದೆ. ಹಾಗೆಯೇ ಇದೇ ಕಾರಣಕ್ಕಾಗಿ ಅವರ ಅಪೂರ್ಣ ಕಲಾಕೃತಿಗಳನ್ನ ನೋಡುತ್ತಿದ್ದರೆ ತೀರಾ ಸೂಕ್ಷ್ಮವಾಗಿ ಗಮನಿಸದ ಹೊರತು ಅದು ಅಪೂರ್ಣ ಎಂದು ಅನ್ನಿಸುವುದೇ ಇಲ್ಲ. ಪಂಡಿತ್ ಅವರ ಪೌರಾಣಿಕ ಕಥಾಚಿತ್ರಗಳು ಬಹುತೇಕ ಎಲ್ಲರಿಗೂ ಗೊತ್ತಿರುವಂತಹವು. ಅವುಗಳ ಜತೆಯಲ್ಲಿಯೇ ಅಪರೂಪದ ಲ್ಯಾಂಡ್ಸ್ಕೇಪ್ಗಳನ್ನೂ ಚಿತ್ರಿಸಿದ ಹಿರಿಮೆ ಪಂಡಿತ್ ಅವರದು.
ಪಂಡಿತ್ ಅವರ ಮತ್ತೊಂದು ವೈಶಿಷ್ಟ್ಯ ಭಾವಚಿತ್ರ (ಪೋಟ್ರೇಟ್) ರಚನೆಯಲ್ಲಿನ ಅವರ ಕೌಶಲ್ಯ. ಪ್ರಾತ್ಯಕ್ಷಿಕೆಯ ಹಾಗೂ ಕಮಿಷನ್ಡ್ (ಹೇಳಿ ಬರೆಸಿದಂತವು)ಗಳೆರಡರಲ್ಲೂ  ಪಂಡಿತ್ ನಿಷ್ಣಾತರು. ಗಾಂಧೀ, ನೆಹರು, ರಾಜಾಜಿ, ಇಂದಿರಾಗಾಂಧಿ, ಮಾರ್ಗರೇಟ್ ಥ್ಯಾಚರ್, ಎಸ್.ನಿಜಲಿಂಗಪ್ಪ ಅವರ ಭಾವಚಿತ್ರಗಳ ಸೊಗಸೇ ಸೊಗಸು. ಅತ್ಯಂತ ನುರಿತ ಕಸುಬುದಾರರಿಗೂ ಸಾಧ್ಯವಾಗದಂತಹ ವೈಶಿಷ್ಟ್ಯ ಪಂಡಿತ್ ಅವರದಾಗಿತ್ತು. ಯಾವೊಬ್ಬ ಕಲಾವಿದನಿಂದಲೇ ಆಗಲಿ ಒಂದೇ ರೀತಿಯ ಎರಡು ಕಲಾಕೃತಿಗಳನ್ನು ರಚಿಸುವುದು ಸಾಧ್ಯವಿಲ್ಲ. ತನ್ನದೇ ಕಲಾಕೃತಿಯನ್ನು ನಕಲು ಮಾಡುವಾಗ ಕೂಡ ಅದು ಸಾಧ್ಯವಿಲ್ಲ. ಅನುಭವದ ತೀವ್ರತೆ, ಕುಂಚದ ಬೀಸು, ಕಾಲದ ಬದಲಾವಣೆಗಳು ಎರಡು ಕಲಾಕೃತಿಗಳ ನಡುವೆ ಗುರುತಿಸಬಹುದಾದ ಭಿನ್ನತೆಯನ್ನು ತಂದುಕೊಟ್ಟಿರುತ್ತವೆ. ಆದರೆ, ಪಂಡಿತ್ರು ಒಂದು ಕುಟುಂಬದ ಎಂಟು ಸದಸ್ಯರಿಗಾಗಿ ಸಿದ್ಧಪಡಿಸಿದ ಅವರ ತಂದೆಯ ಎಂಟು ಭಾವಚಿತ್ರಗಳಲ್ಲಿ  ಯಾವುದೇ ವ್ಯತ್ಯಾಸ ಗುರುತಿಸುವುದು ಸಾಧ್ಯವಿಲ್ಲ. ಇಂತಹ ಹಲವು ಉದಾಹರಣೆಗಳನ್ನು ನೋಡಬಹುದು. ಹೀಗೆ ಕಾಲವನ್ನು  ಹಾಗೂ ಮಾಗುವಿಕೆಯನ್ನು  ನಿಲ್ಲಿಸಿಬಿಡಬಲ್ಲ ತಾಕತ್ತು ಅವರಿಗಿತ್ತು. ಅದು ಅವರ ಕಲಾಕೃತಿಗಳಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.

ಪಂಡಿತ್
ಅವರ ಮತ್ತೊಂದು ಪ್ರಮುಖ ಮಾಧ್ಯಮ ಟೆಂಪರಾ (ಪೋಸ್ಟರ್) ಕಲಾಕೃತಿಗಳು. ಬಣ್ಣದ ಛಾಯಾಗ್ರಹಣ ಇಲ್ಲದ ದಿನಗಳಲ್ಲಿ  ಬಾಲಿವುಡ್ ತಾರೆಯರನ್ನು  ಕಪ್ಪು-ಬಿಳುಪುನಲ್ಲಿಯೇ ನೋಡಬೇಕಿತ್ತು. ತಾರೆಯರನ್ನು ಬಣ್ಣದಿ ಮೀಯಿಸಿ ಅಭಿಮಾನಿಗಳಿಗೆ ಪರಿಚಯಿಸಿದ ಪಂಡಿತ್ರು ಅವರು ಇದ್ದದ್ದಕ್ಕಿಂತ ಹೆಚ್ಚು ಸುಂದರವಾಗಿ ಕಾಣುವಂತೆ ಮಾಡಿದರು. ಹಾಗೆಯೇ ತಾರೆಗಳಿಗೆಚಿರಯೌವನವನ್ನೂ ದಯಪಾಲಿಸಿದರು. ಸಂಗೀತಗಾರರ ಜತೆಗೆ ಒಡನಾಟ ಇದ್ದ ಪಂಡಿತ್ರು ರಾಗಮಾಲಾ ಚಿತ್ರಗಳನ್ನು ಪೋಸ್ಟರ್ ಮಾಧ್ಯಮದಲ್ಲಿ ಹಿಡಿದಿಟ್ಟಿದ್ದಾರೆ.
ಪಂಡಿತ್ ಅವರ ಜನ್ಮ ಶತಮಾನೋತ್ಸವ ಆಚರಣೆ ನಾಡಿನಾದ್ಯಂತ ಸಂಭ್ರಮದಿಂದ ನಡೆಯಬೇಕಾಗಿತ್ತು. ಅಂತರರಾಷ್ಟ್ರೀಯ ಕಲಾ ನಕಾಶೆಯಲ್ಲಿ ಭಾರತವನ್ನು ಮತ್ತು ಕರ್ನಾಟಕವನ್ನು ಢಾಳಾಗಿ ಎದ್ದು ಕಾಣುವಂತೆ ದಾಖಲಿಸಿದ ಮಹಾನ್ ಕಲಾವಿದನ ಶತಮಾನೋತ್ಸವದ ಉದ್ಘಾಟನಾ ಸಮಾರಂಭ ಕಲಬುರಗಿಯಲ್ಲಿ ಅದ್ಧೂರಿಯಾಗಿ  ನಡೆಯಿತು. ಮುಂಬೈನಲ್ಲಿ ಪಂಡಿತ್ ಅವರ ಬಹುತೇಕ ಎಲ್ಲ ಕಲಾಕೃತಿಗಳ ಪ್ರದರ್ಶನ ನಡೆದದ್ದು ಬಿಟ್ಟರೆ ರಾಜ್ಯದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಸಮಾರಂಭ ನಡೆಯಲಿಲ್ಲ. ಕರ್ನಾಟಕ ಲಲಿತಕಲಾ ಅಕಾಡೆಮಿಯಂತೂ ಒಂದು ಪುಟ್ಟ ಕಾರ್ಯಕ್ರಮ ನಡೆಸಿ ಕೈತೊಳೆದುಕೊಂಡಿತು. ಕಾಡುವ ದೇವರ ಕಾಟ ಕಳೆದುಕೊಂಡಂತೆ.
ಹೌದು. ಅನನ್ಯ ಕಲಾವಿದನ ಹೆಸರನ್ನು ಕಲಬುರಗಿಯಲ್ಲಿ ಇರುವ ರಂಗಮಂದಿರಕ್ಕೆ ಇಡಲಾಗಿದೆ. ಅದನ್ನು ಬಿಟ್ಟರೆ ಕಲಾವಿದ ಹಾಗೂ ಅವರ ಕಲಾಕೃತಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಹತ್ವದ ಚಟುವಟಿಕೆ ನಡೆದಿಲ್ಲ. ಸರಕಾರ ಕೂಡಲೇ ಎಚ್ಚೆತ್ತು ಎಸ್.ಎಂ. ಪಂಡಿತ್ ಅವರ ಕಲಾಕೃತಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಬೇಕಿದೆ. ಮುಂದಿನ ತಲೆಮಾರಿಗೆ ಪಂಡಿತ್ ಅವರ ಮಹತ್ವದ ಸಾಧನೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ರಚಿಸಲು ಸರ್ಕಾರ ಮುಂದಾಗುವ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಾಗಿದೆ,





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಬಸವೇಶ್ವರ ಮತ್ತು ಅವನ ಕಾಲ