ಮನುಕುಲದ ಕಾಜಾಣ


ನೋಡಲು ಗುಬ್ಬಿಗಿಂತ ದೊಡ್ಡದಾಗಿರುವ ಹಾಗೂ ಗಿಳಿಗಿಂತ ಸಣ್ಣ ಗಾತ್ರದ ಕಪ್ಪುಹಕ್ಕಿ ಡ್ರೊಂಗೊ. ಕಾಜಾಣ ಎಂದು ಕನ್ನಡದಲ್ಲಿ ಕರೆಯಲಾಗುವ ಈ ಹಾಡುಹಕ್ಕಿಗೆ ಸಿಂಹಹೃದಯ. ಅದರ ಇರುವಿಕೆ ಸಣ್ಣಹಕ್ಕಿಗಳ ಕಲರವದಿಂದ ಅರಿವಿಗೆ ಬರುತ್ತದೆ. ಅದಕ್ಕಿಂತ ಹೆಚ್ಚಾಗಿ ಡ್ರೊಂಗೋದ ವಿಶೇಷತೆ ಎಂದರೆ ಅದರ ಯಾರಿಗೂ ಹೆದರದ ಗುಣ. ಸಣ್ಣಹಕ್ಕಿಗಳ ಮೇಲೆ ದಾಳಿ ನಡೆಸಿ ಭೀತಿ ಉಂಟು ಮಾಡುವ ಹಾಗೂ ಗಾತ್ರದಲ್ಲಿ ದೊಡ್ಡದಾಗಿರುವ ಹದ್ದು ಮತ್ತು ಗಿಡುಗನಂತಹ ಬೇಟೆಗಾರ ಹಕ್ಕಿಗೂ ಸವಾಲು ಹಾಕುವ ಸಾಮರ್ಥ್ಯ ಮತ್ತು ಎದೆಗಾರಿಕೆ ಡ್ರೊಂಗೋಕ್ಕೆ ಇದೆ. ನೂರಾರು ಅಡಿ ಮೇಲಿನಿಂದ ನೆಲದ ನಡೆಯುವ ಚಟುವಟಿಕೆಯನ್ನು ನೋಡುವ ಕಣ್ಣಿನ ವಿಶೇಷ ಸಾಮರ್ಥ್ಯ ಹೊಂದಿರುವ ಮತ್ತು ಅದಕ್ಕೆ ಪ್ರತಿಕ್ರಿಯಿಸುವ, ದಾಳಿ ನಡೆಸುವ ಗಿಡುಗನ ಶಕ್ತಿ ಮತ್ತು ಸಾಮರ್ಥ್ಯ ವಿವರಿಸುವ ಅಗತ್ಯವಿಲ್ಲ. ಅಂತಹ ಅಸಾಧ್ಯ ಬಲ-ಪ್ರಾಬಲ್ಯದ ಗಿಡುಗನ ನೆತ್ತಿಯ ಮೇಲೆ ಕುಳಿತು ಆಡುವ- ಆಡಿಸುವ- ಕಾಡಿಸುವ ಎದೆಗಾರಿಕೆ ಛಾತಿ ಕಾಜಾಣಕ್ಕಿದೆ. ಗಿಡುಗ ಮತ್ತು ಕಾಜಾಣದ ಮುಖಾಮುಖಿ ಹಾಗೂ ದೊಡ್ಡಣ್ಣನ ಮೇಲೆಯೇ ಸವಾರಿ ಮಾಡುವ ನಿರ್ಭೀತ ಮನೋಭಾವದ ಕಾಜಾಣವು ಹಕ್ಕಿಲೋಕದ ಕೌತುಕ.
ಮಾನವ ಬದುಕಿನಲ್ಲಿಯೂ ದೊಡ್ಡಣ್ಣರನ್ನು ಗೋಳು ಹೋಯ್ದುಕೊಳ್ಳುವ ಸಣ್ಣವರ (?) ಸಂಖ್ಯೆಯೂ ಕಡಿಮೆಯೇನಿಲ್ಲ. ಹಾಗೆಯೇ  ‘ದೊಡ್ಡಣ್ಣ’ ಗಿಡುಗನನ್ನೂ ಭೀತಿಯ, ಆತಂಕದ ಛಾಯೆ ಹರಡುವಂತೆ ಮಾಡಿ ಅದನ್ನು ಹಲವು ದಶಕಗಳ ಕಾಲ ಜೀವಂತವಾಗಿರಿಸಿದ್ದ ಪುಟ್ಟ ಹಕ್ಕಿ ಕ್ಯೂಬಾ. ಎಲ್ಲವನ್ನೂ ಎಲ್ಲರನ್ನೂ ನಿಯಂತ್ರಿಸುತ್ತೇನೆ, ಪ್ರತಿಯೊಂದೂ ನನ್ನ ಮೂಗಿನ ನೇರಕ್ಕೇ ನಡೆಯಬೇಕು ಎಂಬ ದುರಹಂಕಾರದ ಪ್ರಬಲ ರಾಷ್ಟ್ರದ ಎದುರು ಲ್ಯಾಟಿನ್ ಅಮೆರಿಕಾದ ಪುಟ್ಟ ದ್ವೀಪರಾಷ್ಟ್ರ ತೋರಿಸಿದ ದಿಟ್ಟ ಪ್ರತಿಕ್ರಿಯೆ ಜಾಗತಿಕ ಚರಿತ್ರೆಯ ಪುಟಗಳಲ್ಲಿ ಅಪೂರ್ವ ಹಾಗೂ ಅನನ್ಯ ಉದಾಹರಣೆ. ಇಂತಹ ಐತಿಹಾಸಿಕ ಉದಾಹರಣೆಗೆ ಕಾರಣರಾದವರು ಕೊನೆಗೂ ತನ್ನ 90ನೇ ವಯಸ್ಸಿನಲ್ಲಿ ಸಾವನ್ನಪ್ಪಿದ ಧೀಮಂತ, ಹಠವಾದಿ ನಾಯಕ ಫಿಡೆಲ್ ಕ್ಯಾಸ್ಟ್ರೋ. ಪ್ರತಿದಿನವೂ ಸಾವಿನ ಜೊತೆಗೇ ಮುಖಾಮುಖಿ. ಲೆಕ್ಕಕ್ಕೆ ಸಿಕ್ಕಿರುವ 90ಕ್ಕೂ ಹೆಚ್ಚು ಬಾರಿ ನಡೆದ ವಿಫಲ ಹತ್ಯೆಯ ಯತ್ನಗಳು ಎಂತಹ ಎಂಟೆದೆಯವನನ್ನೂ ಭೀತನನ್ನಾಗಿಸುತ್ತವೆ. ಆದರೆ,  ಕ್ಯಾಸ್ಟ್ರೋ ಭೀತಿಗೆ ಒಳಗಾಗುವ ವ್ಯಕ್ತಿ ಆಗಿರಲಿಲ್ಲ. ಹಲವು ಮುಖಾಮುಖಿ, ಪ್ರಯತ್ನದ ನಂತರ ಸಾವಿಗೆ ಮಾತ್ರ ಅವರನ್ನು ಸೋಲಿಸಲು ಸಾಧ್ಯವಾಯಿತು. ಅದು ಕೂಡ ಸಾವಿನ ಗೆಲುವೇನಲ್ಲ. ಅಂತಹ ದಿಟ್ಟ ಹೋರಾಟ ಕ್ಯಾಸ್ಟ್ರೋ ಅವರದ್ದು. ಐದು ದಶಕಗಳ ಕಾಲ ಆಡಳಿತ ನಡೆಸಿದ ಹನ್ನೊಂದು ಅಮೆರಿಕಾದ ಅಧ್ಯಕ್ಷರು ನೆಮ್ಮದಿಯಾಗಿರಲು ಬಿಟ್ಟಿರಲಿಲ್ಲ ಫಿಡೆಲ್ ಕ್ಯಾಸ್ಟ್ರೊ. ಹೀಗಂತ ಹೇಳಿದರೆ ಕ್ಯಾಸ್ಟ್ರೋ ಬಗ್ಗೆ ಏನನ್ನೂ ಹೇಳಿದಂತಾಗುವುದಿಲ್ಲ.
ಸಿರಿವಂತ ಜಮೀನ್ದಾರರ ಕುಟುಂಬದಲ್ಲಿ ಜನಿಸಿದ ಕ್ಯಾಸ್ಟ್ರೋಗೆ ದೀನರ ಅಸಹಾಯಕರ ಪರವಾಗಿ ಹೋರಾಡಬೇಕಾದ ದರ್ದೇನು ಇರಲಿಲ್ಲ. ಆದರೆ, ಅವರಿಗೆ ದೊರೆತ ಸಮಾನತೆಯ ಕನಸು ಕಾಣುವ ಯುವಕರ ಒಡನಾಟ, ತನ್ನ ಸಮಕಾಲೀನ ಗೆಳೆಯರ ಹೋರಾಟದ ಕಿಚ್ಚು ಕ್ಯಾಸ್ಟ್ರೋ ನಡೆಯಬೇಕಾಗಿದ್ದ ದಿಕ್ಕು ಬದಲಿಸಲು ಕಾರಣವಾಯಿತು. ಜಗತ್ತಿನ ಕ್ರಾಂತಿಯ ಸಂಕೇತದಂತೆ ಗೋಚರವಾಗುವ ‘ಚೆ’ ಎಂದೇ ಖ್ಯಾತನಾದ ಚೆಗುವೆರಾ ಕ್ಯಾಸ್ಟ್ರೋಗೆ ಒಡನಾಡಿಯಾಗಿದ್ದರೆ ಹಾಗೂ ಕಾವ್ಯ- ಸಾಹಿತ್ಯಲೋಕದಲ್ಲಿ ಕ್ರಾಂತಿಯ ಹಾಡು ಹಾಡಿದ ಪ್ಯಾಬ್ಲೋ ನೆರುಡಾ ಆಪ್ತರಾಗಿದ್ದವರು.
ಕಮ್ಯುನಿಸ್ಟ್ ತತ್ವಚಿಂತನೆ ಹಾಗೂ ಅದರ ಆಧಾರದ ಮೇಲೆ ಆಡಳಿತ ನಡೆಸಿದ ಸೋವಿಯತ್ ರಷ್ಯಾದ ಪತನ, ಕುಸಿತದ ನಂತರ ಎಡಪಂಥೀಯ ವಿಚಾರಧಾರೆಯ ಜನರಿಗೆ ಸಮಾಧಾನ ಉಂಟು ಮಾಡುವ ನೆಲ- ನೆಲೆಯಾಗಿ ಕಾಣಿಸಿದ್ದು ಕ್ಯೂಬಾ. ಆದರೆ, ಅದಕ್ಕಾಗಿ ಕ್ಯೂಬಾ ನಡೆದು ಬಂದ ದಾರಿ ಮತ್ತು ಅದಕ್ಕಾಗಿ ತೆತ್ತ ದುಬಾರಿ ಬೆಲೆ ಸಣ್ಣದು- ಸಾಮಾನ್ಯವಾದುದೇನಾಗಿರಲಿಲ್ಲ. ಹಾಗೆ ನಡೆಯುವುದಕ್ಕೆ ಪ್ರೇರಣೆಯಾಗಿದ್ದವ ಜೀವ ಫಿಡೆಲ್ ಕ್ಯಾಸ್ಟ್ರೋ ಎಂಬುದರಲ್ಲಿ ಎರಡು ಮಾತಿಲ್ಲ. ಮಾತಿನಲ್ಲಿ ಅರಮನೆ ಕಟ್ಟುವ ಹಲವು ಜನ ನಾಯಕರಿದ್ದಾರೆ. ಕ್ಯಾಸ್ಟ್ರೋ ಆ ವರ್ಗಕ್ಕೆ ಸೇರಿದವರಲ್ಲ. ಹೌದು ಕ್ಯಾಸ್ಟ್ರೋ ಕೂಡ ಸೊಗಸಾದ ಮಾತುಗಾರ. ಆದರೆ, ಅವರ ಮಾತುಗಳು ದಂತಗೋಪುರದ ಕಥನಗಳಾಗಿರದೆ ವಾಸ್ತವತೆಯ ನೆಲಗಟ್ಟಿನಲ್ಲಿ ರೂಪುತಳೆದ ಪ್ರಾಕ್ಟಿಕಲ್ ಆದ ಸ್ವರೂಪದವುಗಳಾಗಿದ್ದವು. ಅದಕ್ಕಾಗಿಯೇ ಕ್ಯೂಬಾದ ಜನತೆಯು ಐದು ದಶಕಗಳ ಕಾಲ ಕ್ಯಾಸ್ಟ್ರೋ ಅವರಲ್ಲಿ ತಮ್ಮ ನಾಯಕನನ್ನು ಕಂಡುಕೊಂಡಿತು. ಹಾಗೆ ಕಂಡುಕೊಳ್ಳುವ ನಿಟ್ಟಿನಲ್ಲಿ ಎದುರಾದ ಆರ್ಥಿಕ ದಿಗ್ಬಂಧನ, ಯುದ್ಧಭೀತಿಗಳನ್ನು ಸವಾಲಾಗಿ ಸ್ವೀಕರಿಸಿ ಸೂಕ್ತ ಪ್ರತ್ಯುತ್ತರ ನೀಡಿತು. ಕ್ಯೂಬಾ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟದಲ್ಲಿ ಸವೆಸಿದ ದಾರಿ ಸಣ್ಣದೂ ಅಲ್ಲ, ಸರಳವಾದದ್ದೂ ಆಗಿರಲಿಲ್ಲ. ಪ್ರಜಾಪ್ರಭುತ್ವದ (ಡೆಮಾಕ್ರಸಿ) ನೆಪದಲ್ಲಿ ಸರ್ಕಾರದಲ್ಲಿರುವವರನ್ನು ಪದಚ್ಯುತಗೊಳಿಸಿ ಅಲ್ಲಿ ತನ್ನ ಛೇಲಾಗಳನ್ನು ನೇಮಿಸುವ ಪರಿಪಾಠ ಅಮೆರಿಕಾಕ್ಕೆ ಹೊಸದೇನಲ್ಲ. ಅದನ್ನು ಹಲವು ದೇಶಗಳ ಮೇಲೆ ಮಾಡುತ್ತಲೇ ಬಂದಿದೆ. ಹಾಗೆ ಮಾಡಲು ಸಾಧ್ಯವಾಗದ ಏಕೈಕ ರಾಷ್ಟ್ರ ಕ್ಯೂಬಾ. ಅದಕ್ಕೆ ಕಾರಣರಾದವರು ಕ್ಯಾಸ್ಟ್ರೋ ಮತ್ತವರ ದೇಶದ ಜನತೆ.
ಅಮೆರಿಕಾದ ಕೈಗೊಂಬೆಯಾಗಿದ್ದ ಪುಲ್ಗಾನ್ಸಿಯೋ ಬಟೆಸ್ಟಾ ದುರಾಡಳಿತದ ವಿರುದ್ಧ ಸಶಸ್ತ್ರ ದಂಗೆ ನಡೆಸಿದ ಸಮೂಹದಲ್ಲಿ ಇದ್ದವರು ಫಿಡೆಲ್ ಕ್ಯಾಸ್ಟ್ರೋ. ಮೊದಲ ಹೋರಾಟದಲ್ಲಿ ವಿಫಲರಾಗಿ ಜೈಲು ಸೆರೆವಾಸ ಅನುಭವಿಸಿದ ಕ್ಯಾಸ್ಟ್ರೋ ಎರಡು ವರ್ಷದ ನಂತರ ಬಿಡುಗಡೆಯಾದರು. ನೆರೆಯ ಮೆಕ್ಸಿಕೋದಿಂದ 80 ಜನರ ತಂಡದೊಂದಿಗೆ ಐತಿಹಾಸಿಕ ಮಹತ್ವದ ಪಯಣ ಆರಂಭಿಸಿದ ಕ್ಯಾಸ್ಟ್ರೋ ಕ್ಯೂಬಾ ತಲುಪಿ ಗುಡ್ಡಗಾಡುಗಳ ನಡುವೆ ಎರಡು ವರ್ಷಗಳ ಸಶಸ್ತ್ರ ಹೋರಾಟಕ್ಕೆ ಗೆರಿಲ್ಲಾ ಪಡೆ ತಯಾರಿಸುವಲ್ಲಿ ತೊಡಗಿಸಿಕೊಂಡಿದ್ದರು. ರೈತರು ಮತ್ತು ಕಾರ್ಮಿಕರು ಹಾಗೂ ದೀನರನ್ನು ಒಳಗೊಂಡ ಹೋರಾಟ ರೂಪಿಸಿದ ಕ್ಯಾಸ್ಟ್ರೋ ಮತ್ತವರ ಮಿತ್ರಪಡೆಯನ್ನು ನಿಯಂತ್ರಿಸಲು ಸರ್ಕಾರ ಎಲ್ಲ ರೀತಿಯ ಹತ್ತಿಕ್ಕುವ ಪ್ರಯತ್ನ ನಡೆಸಿತು. ಆದರೆ, ಕೊನೆಗೂ ರಾಜಧಾನಿ ಹವಾನಾ ವಶಪಡಿಸಿಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದು ಕ್ಯಾಸ್ಟ್ರೋ. ನಂತರ ಪ್ರಧಾನಿಯಾಗಿ ಅಧ್ಯಕ್ಷರಾಗಿ ದೇಶ ಮುನ್ನಡೆಸಿದರು. ಅನಾರೋಗ್ಯದ ಕಾರಣದಿಂದ ಸಕ್ರಿಯ ರಾಜಕಾರಣದಿಂದ ದೂರ ಸರಿದ ಕ್ಯಾಸ್ಟ್ರೋ ಕೊನೆಯ ದಿನಗಳ ವರೆಗೂ ಕ್ರಿಯಾಶೀಲರಾಗಿದ್ದರು. ಕಳೆದ ಏಪ್ರಿಲ್ ತಿಂಗಳಿನಲ್ಲಷ್ಟೇ ಅವರು ವಿದಾಯದ ಭಾಷಣ ಮಾಡಿದ್ದರು. ಅಮೆರಿಕದ ಜನತೆಗೆ ಪ್ರಿಯವಾಗಿದ್ದ ಬೇಸ್ ಬಾಲ್ ಆಟದಲ್ಲಿ ನಿಷ್ಣಾತನಾಗಿದ್ದ ಕ್ಯಾಸ್ಟ್ರೋಗೆ ಅಲ್ಲಿನ ಪ್ರಖ್ಯಾತ ಲೀಗ್ ಗಳಲ್ಲಿ ಆಡುವ ಬಯಕೆ ಹರೆಯದ ದಿನಗಳಲ್ಲಿ ಇತ್ತು. ರಾಜಕೀಯ ಹಾಗೂ ಹೋರಾಟದ ಬದುಕು ಕ್ಯಾಸ್ಟ್ರೋ ಕ್ರೀಡೆಯಿಂದ ವಿಮುಖನಾಗುವಂತೆ ಮಾಡಿತು. ಸೀದಾಸಾದಾ, ಸರಳ ಬದುಕು, ನೇರಚಿಂತನೆ, ಜನಪರ ಕಾಳಜಿಗಳಿದ್ದ ಕ್ಯಾಸ್ಟ್ರೋ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಆತ್ಮಗೌರವದಿಂದ ಬದುಕುವ ಅವಕಾಶ ಕಲ್ಪಿಸಲು ಹೆಣಗಾಡಿದವರು. ಅದೇ ಕಾರಣಕ್ಕಾಗಿ ಇತಿಹಾಸದ ಪುಟ ಸೇರಿದ್ದರೂ ಹಲವು ಕಾಲ ಕ್ಯಾಸ್ಟ್ರೋ ಜೀವಂತವಾಗಿರುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಬಸವೇಶ್ವರ ಮತ್ತು ಅವನ ಕಾಲ