ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು
ಬರವಣಿಗೆ ಮಾತ್ರವಲ್ಲದೆ ಓದು ಅದರಲ್ಲೂ ವಿಶೇಷವಾಗಿ ’ಸಾಹಿತ್ಯದ ಓದು’ ಕೂಡ ಅಭಿವ್ಯಕ್ತಿಯ ಮಾಧ್ಯಮ ಎಂದು ಖಚಿತವಾಗಿ ನಂಬಿದವ, ನಂಬುವವ ನಾನು. ಕಳೆದ ಎರಡು ದಶಕಗಳ ಅವಧಿಯಲ್ಲಿ ಓದುಗನಾಗಿ ಸಾಹಿತ್ಯಲೋಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕುತೂಹಲ - ಆಸಕ್ತಿಯಿಂದ ಗಮನಿಸುತ್ತ ಬಂದಿದ್ದೇನೆ. ಹಲವು ಸಲ ಹೊರಗಿನವನಾಗಿ ಕೆಲವೊಮ್ಮೆ ’ಒಳಗಿನವ’ನಾಗಿ ಯೋಚಿಸಿ, ವರ್ತಿಸಿದ್ದೇನೆ. ಹೀಗಾಗಿ ಸಾಹಿತ್ಯದ ಜೊತೆಗೆ ನಿರ್ಧಿಷ್ಟವಾದ ಮತ್ತು ಹದವಾದ ’ಮಾನಸಿಕ ದೂರ’ ಇಟ್ಟುಕೊಳ್ಳುವುದು ಸಾಧ್ಯವಾಗಿದೆ. ಬರಹಗಾರನಾಗಿ ನನಗೆ ಇರುವ ಅನುಭವ ಸೀಮಿತವಾದದ್ದು. ಮೊದಲೇ ಹೇಳಿದ ಹಾಗೆ ನನಗೆ ಓದುವುದೇ ಅಭಿವ್ಯಕ್ತಿ ಎಂದು ನಂಬಿದ್ದರಿಂದ ಓದುವ ಖುಷಿಯನ್ನೇ ಬೆಳೆಸಿಕೊಳ್ಳುತ್ತ ಹೋದೆ. ಬರೆಯುವುದಕ್ಕಿಂತ ಓದುಗನಾಗುವುದೇ ನನ್ನ ಆಸಕ್ತಿ ಮತ್ತು ಗುರಿಯಾಗಿತ್ತು. ಹಾಗೆ ನೋಡಿದರೆ ನನ್ನ ಮತ್ತು ನನ್ನಂತಹ ಹಲವರ ಸಾಹಿತ್ಯದ ಆಸಕ್ತಿ ಬೆಳೆಯಲು ಆರಂಭವಾದದ್ದು ಭಾನುವಾರದ ಸಾಪ್ತಾಹಿಕ ಮತ್ತು ವಾರಪತ್ರಿಕೆಗಳ ಮೂಲಕ, ಕಳೆದ ಒಂದು ದಶಕದ ಅವಧಿಯಲ್ಲಿ ಸಾಹಿತ್ಯ ಪತ್ರಿಕೆಗಳ ಜೊತೆಗಿನ ಒಡನಾಟ ಮತ್ತು ಪ್ರಮುಖ ದೈನಿಕದಲ್ಲಿ ಅದರಲ್ಲೂ ವಿಶೇಷವಾಗಿ ಸಾಪ್ತಾಹಿಕ ವಿಭಾಗದಲ್ಲಿ ಕೆಲಸ ಮಾಡಿದ ಅನುಭವದ ಹಿನ್ನೆಲೆಯಲ್ಲಿ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಬಯಸುತ್ತೇನೆ.
’ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು’ ಎಂಬ ಶೀರ್ಷಿಕೆಯ ಅಡಿಯಲ್ಲಿ ಚರ್ಚೆ ನಡೆಸುವುದಕ್ಕಾಗಿ ಇಲ್ಲಿ ನಿಂತಿದ್ದೇನೆ. ಆದರೂ ನನ್ನ ಬಹುತೇಕ ಮಾತುಗಳು ಮುದ್ರಣ ಮಾಧ್ಯಮವನ್ನು ಕೇಂದ್ರವಾಗಿಟ್ಟುಕೊಂಡಿರುತ್ತವೆ ಎಂದು ಸ್ಪಷ್ಟಪಡಿಸುತ್ತೇನೆ.
ವಿಷಯಕ್ಕೆ ಪ್ರವೇಶಿಸುವ ಮುನ್ನ ಸಂಕ್ಷಿಪ್ತವಾಗಿ ಸಾಹಿತ್ಯ ಮತ್ತು ಪತ್ರಿಕೆಗಳು, ಸಾಹಿತ್ಯ ಪತ್ರಿಕೆಗಳು, ಪತ್ರಿಕೆಗಳಲ್ಲಿ ಸಾಹಿತ್ಯ ಎನ್ನುವ ಅಂಶಗಳ ಕಡೆಗೆ ಗಮನ ಸೆಳೆಯಬಯಸುತ್ತೇನೆ.
ಪತ್ರಿಕೆಗಳು ಸಾಹಿತ್ಯದ ನಡುವಿನ ಸಂಬಂಧ ಅವಿನಾಭಾವವಾದದ್ದು. ಹಾಗೆ ನೋಡಿದರೆ ಸಾಹಿತ್ಯವೇ ಪತ್ರಿಕೆಗಳಿಗೆ ಹಿರಿಯಣ್ಣ. ಪತ್ರಿಕೆಗಳು ಆರಂಭ ಆದ ದಿನಗಳಲ್ಲಿ ಸಾಹಿತಿಗಳೇ ಪತ್ರಕರ್ತರೂ ಆಗಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇತ್ತು. ಎರಡನ್ನೂ ಪರಸ್ಪರ ಬೇರ್ಪಡಿಸಲಾಗದ ಸ್ಥಿತಿಯಿತ್ತು. ಸದ್ಯ ಎರಡು ಪ್ರತ್ಯೇಕ ಎಂದು ಗುರುತಿಸಬಹುದಾದಷ್ಟು ಸಾಹಿತ್ಯ ಮತ್ತು ಪತ್ರಿಕಾ ಕ್ಷೇತ್ರಗಳು ಬೆಳೆದಿವೆ. ಆದರೂ ಒಂದು ಕ್ಷೇತ್ರ ಮತ್ತೊಂದನ್ನು ಬಿಟ್ಟಿರಲಾರದಷ್ಟು ಪರಸ್ಪರ ಪರಾವಲಂಬಿಯಾಗಿದೆ. ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ಸಾಹಿತ್ಯ ಮತ್ತು ಪತ್ರಿಕೆಗಳೆರಡೂ ತನ್ನ ಸ್ವರೂಪ ಮತ್ತು ಅಸ್ತಿತ್ವವನ್ನು ಬದಲಿಸಿಕೊಳ್ಳುತ್ತ ಬಂದಿವೆ.
ಕನ್ನಡ ಪತ್ರಿಕೆಗಳ ಮತ್ತು ಸಾಹಿತ್ಯದ ಇತಿಹಾಸ ಬಲ್ಲವರಿಗೆ ಸಾಹಿತ್ಯ ಪತ್ರಿಕೆಗಳ ಮೂಲಕ ಕನ್ನಡ ಲೇಖಕರು ಮಾಡಿರುವ ಅನನ್ಯ ಸಾಧನೆಯ ಅರಿವು ಇದ್ದೇ ಇದೆ. ನನ್ನ ವಿಷಯದ ವ್ಯಾಪ್ತಿಗೆ ಮೀರಿದ್ದು ಆದ್ದರಿಂದ ಆಸೆ ಇದ್ದರೂ ತುಂಬಾ ಹಿಂದಕ್ಕೆ ಹೋಗಲು ಬಯಸುವುದಿಲ್ಲ. ಕನ್ನಡ ನವೋದಯ ಕಾಲದ ಬಹುತೇಕ ಲೇಖಕರು ಸಂಪಾದಕರಾಗಿ ಪತ್ರಿಕೆ ಪ್ರಕಟಿಸುವುದರಲ್ಲಿಯೂ ತಮ್ಮ ಅಭಿವ್ಯಕ್ತಿ ಕಂಡುಕೊಂಡಿದ್ದರು. ಅವರಿಗೆ ಕೇವಲ ಬರವಣಿಗೆ ಮಾಡಿದರೆ ಸಾಕಾಗುತ್ತಿರಲಿಲ್ಲ. ಬರವಣಿಗೆಯ ಜೊತೆಗೆ ಅದಕ್ಕೆ ತಕ್ಕ ಓದುಗರನ್ನು ರೂಪಿಸುವ ಜವಾಬ್ದಾರಿಯೂ ಇತ್ತು. ಅದನ್ನವರು ಯಶಸ್ವಿಯಾಗಿ ನಿರ್ವಹಿಸಿದರು ಕೂಡ. ಬರವಣಿಗೆಯ ಮೂಲಕ ಓದುಗರನ್ನು ತಲುಪುವುದಕ್ಕಾಗಿ ಸಾಹಿತ್ಯ ಪತ್ರಿಕೆಗಳ ವೇದಿಕೆಗಳಲ್ಲದೆ ಬೇರೆ ಮಾರ್ಗಗಳೇ ಆಗ ಇರಲಿಲ್ಲ.
ಎ.ಆರ್.ಕೃಷ್ಣಶಾಸ್ತ್ರಿಗಳು ಆರಂಭಿಸಿದ ಪ್ರಬುದ್ಧ ಕರ್ನಾಟಕ, ಬೇಂದ್ರೆ ಆರಂಭಿಸಿ ಮಾಸ್ತಿಯವರು ಮುಂದುವರೆಸಿದ ’ಜೀವನ’, ಆಲೂರು ವೆಂಕಟರಾಯರಿಂದ ಆರಂಭವಾಗಿ ಗೆಳೆಯರ ಬಳಗದಿಂದ ಮುಂದುವರೆದ ಜಯ ಕರ್ನಾಟಕ, ಬೆಟಗೇರಿ ಕೃಷ್ಣಶರ್ಮರ ’ಜಯಂತಿ’, ಶಿವರಾಮ ಕಾರಂತರ ’ವಸಂತ’ ಸೇರಿದಂತೆ ಬಹುತೇಕ ಎಲ್ಲ ಪತ್ರಿಕೆ ಮತ್ತು ಅವುಗಳ ಸಂಪಾದಕ- ಲೇಖಕರಿಗೂ ಹೊಸ ಲೇಖಕರಿಗೆ ಅವಕಾಶ ಕಲ್ಪಿಸುವ ಮೂಲಕ ಸಾಹಿತ್ಯದ - ಚರ್ಚೆಯ ವೇದಿಕೆ ಸಿದ್ಧಪಡಿಸುವುದು ಮತ್ತು ಓದುಗರಿಗೆ ಸಂಸ್ಕಾರ ನೀಡುವ ಜವಾಬ್ದಾರಿ ಇತ್ತು. ಈ ತಲೆಮಾರಿನ ಲೇಖಕರು ಸಾಹಿತ್ಯವನ್ನು ತಲುಪಿಸುವುದಕ್ಕಾಗಿ ಪತ್ರಿಕೆಗಳನ್ನು ಬಳಸಿಕೊಂಡರು. ಅರ್ಥಾತ್ ಪತ್ರಿಕೆಗಳು ಸಾಹಿತ್ಯದ ವಾಹಕಗಳಾಗಿದ್ದವು.
ಪ್ರಗತಿಶೀಲ ಎಂದು ಗುರುತಿಸಲಾಗುವ ಕಾಲಘಟ್ಟದಲ್ಲಿ ಪತ್ರಿಕೆಗಳು ತಮ್ಮ ಸ್ವತಂತ್ರ ಅಸ್ತಿತ್ವ ಕಂಡುಕೊಂಡಿದ್ದವು. ಸಾಹಿತ್ಯದಾಚೆಯ ಬದುಕಿಗೂ ತಮ್ಮ ಪರಿಧಿಯನ್ನು ವಿಸ್ತರಿಸಿಕೊಂಡಿದ್ದವು. ಇರುವ ವೇದಿಕೆಯನ್ನು ಸಾಹಿತ್ಯವನ್ನು ಜನಪ್ರಿಯಗೊಳಿಸುವುದಕ್ಕೆ ಲೇಖಕರು ಬಳಸಿಕೊಂಡರು. ಅನಕೃ, ತರಾಸು, ಕಟ್ಟಿಮನಿ ತರಹದ ಲೇಖಕರು ಕಥೆ- ಕಾದಂಬರಿಯ ಮೂಲಕ ಓದುಗ ಪಡೆ ಹೆಚ್ಚಿಸಲು ಕಾರಣರಾದರು. ಇದೇ ಕಾಲಘಟ್ಟದಲ್ಲಿ ಧಾರಾವಾಹಿಗಳ ಮೂಲಕ ಕಥೆ ಹೇಳುವ ಪರಿಪಾಠ ಕೂಡ ಆರಂಭವಾಯಿತು. ತೆಳುವಾದ ಕಥಾಹಂದರವನ್ನು ಇಟ್ಟುಕೊಂಡು ಜನಪ್ರಿಯ ಅಂಶಗಳನ್ನು ಅಳವಡಿಸಿಕೊಂಡು ಬರೆಯುವ ತುರ್ತು ಮತ್ತು ಅನಿವಾರ್ಯತೆ ಅವರಿಗಿತ್ತು. ಯಾಕೆಂದರೆ ಅಷ್ಟೊತ್ತಿಗಾಗಲೇ ಅವರು ಉದ್ದೇಶಿಸಿ ಹೇಳುತ್ತಿರುವ ಸಮುದಾಯದ ಗಾತ್ರ ಬೆಳೆದಿತ್ತು. ಸಾಹಿತ್ಯಕ್ಕಿದ್ದ ಮನರಂಜನೆ ನೀಡುವ ಗುಣವನ್ನು ಆ ಕಾಲದ ಲೇಖಕರು ಸಶಕ್ತವಾಗಿ ಬಳಸಿಕೊಂಡರು. ಅಥವಾ ಅದೇ ಕೇಂದ್ರ ಕಾಳಜಿಯೂ ಆಗಿತ್ತು. ನಿರಂಜನ ಅವರು ಅಂಕಣ ಸಾಹಿತ್ಯಕ್ಕೆ ನೆಲೆ ಒದಗಿಸಿದ ಪ್ರಮುಖರಲ್ಲಿ ಒಬ್ಬರು.
ನವ್ಯ ಕಾಲಘಟ್ಟದಲ್ಲಿ ಅಡಿಗರ ’ಸಾಕ್ಷಿ’, ಧಾರವಾಡದ ಚಂಪಾ- ಗಿರಡ್ಡಿ- ಪಟ್ಟಣಶೆಟ್ಟಿ ಗೆಳೆಯರ ’ಸಂಕ್ರಮಣ’, ಅನಂತಮೂರ್ತಿ ಅವರ ’ಋಜುವಾತು’ ಮತ್ತಿತರ ಪತ್ರಿಕೆಗಳು ಸಾಹಿತ್ಯಕ್ಕೆ ಆದ್ಯತೆ ನೀಡುವ ಮೂಲಕ ದೊಡ್ಡ ಪತ್ರಿಕೆಗಳ ಪ್ರಮುಖ ಧಾರೆಗಳಿಂದ ಭಿನ್ನವಾಗಿ ಉಳಿದವು. ಆಗಲೇ ಸಾಹಿತ್ಯ ಮತ್ತು ಪತ್ರಿಕೆಗಳು ಎಂದು ಎರಡಾಗಿ ವಿಭಜನೆ ಆದವು. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ನಡೆಯುತ್ತಿದ್ದ ಪ್ರಯೋಗಗಳಿಗೆ ಅವಕಾಶ ನೀಡುವುದು ಮತ್ತು ಲೇಖಕರಿಗೆ ವೇದಿಕೆ ಕಲ್ಪಿಸುವ ಜವಾಬ್ದಾರಿಯನ್ನು ಸಾಹಿತ್ಯ ಪತ್ರಿಕೆಗಳು ಗಂಭೀರವಾಗಿ ಕೈಗೆತ್ತಿಕೊಂಡವು. ಸಾಹಿತ್ಯದ ಚರ್ಚೆಗೆ ಅವಕಾಶ ಕಲ್ಪಿಸುವ ಮೂಲಕ ಸಾಹಿತ್ಯದ ಬೆಳವಣಿಗೆಯ ಜೊತೆಗೆ ಓದುಗನ ಚಿಂತನೆ ಮತ್ತು ಗ್ರಹಿಕೆಗಳೆರಡನ್ನೂ ಬೆಳೆಸಿದವು.
ಇದೇ ಕಾಲಘಟ್ಟದಲ್ಲಿ ನವ್ಯ ಲೇಖಕರಿಗೆ ಜನಪ್ರಿಯ ವೇದಿಕೆಯಲ್ಲಿ ಬಹುಸಂಖ್ಯಾತರನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಕಲ್ಪಿಸಿದ್ದು ’ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿ. ಅದಕ್ಕೆ ಆಗ ಪುರವಣಿಯಲ್ಲಿ ಕೆಲಸ ಮಾಡುತ್ತಿದ್ದ ಸಂಪಾದಕೀಯ ಸಿಬ್ಬಂದಿಯ ಆಸಕ್ತಿಯ ಜೊತೆಗೆ ಕಾಲದ ಅಗತ್ಯವೂ ಆಗಿದ್ದರಿಂದ ಅಂತಹದ್ದೊಂದು ಸಾಹಿತ್ಯಕ ಪುರವಣಿ ರೂಪಿಸುವುದು ಅನಿವಾರ್ಯ ಅಗತ್ಯವಾಗಿತ್ತು. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ ಸಾಹಿತ್ಯವನ್ನು ಜನಪ್ರಿಯಗೊಳಿಸುವ ಕೆಲಸವನ್ನು ಸಾಪ್ತಾಹಿಕ ಪುರವಣಿ ಯಶಸ್ವಿಯಾಗಿ ನಿರ್ವಹಿಸಿತು. ಈಗ ಆ ಬಗ್ಗೆ ಮಾತನಾಡಿದರೆ ಅದು ವೈಕಂ ಬಷೀರ್ ಅವರ ’ನನ್ನ ಅಜ್ಜನಿಗೊಂದಾನೆಯಿತ್ತು’ ಎಂಬ ಕಥೆಯ ಧ್ವನಿಯಂತೆ ಕೇಳಿಸುತ್ತಿದೆ.
ಎಂಬತ್ತು ಮತ್ತು ತೊಂಬತ್ತರ ದಶಕ ಕೂಡ ಸಾಪ್ತಾಹಿಕ ಪುರವಣಿಗಳಲ್ಲಿ ಸಾಹಿತ್ಯ ನಾಯಕನ (ಹೀರೋ) ಪಾತ್ರ ನಿರ್ವಹಿಸುತ್ತಿದ್ದ ಕಾಲ. ನಿತ್ಯದ ಮಾರಾಟಕ್ಕಿಂತ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಿಕೆಗಳು ಮಾರಾಟವಾಗುತ್ತಿದ್ದವು. ಜನ ಕೂಡ ಭಾನುವಾರದ ಪುರವಣಿಗಾಗಿ ಕಾದು ಕುಳಿತಿರುತ್ತಿದ್ದರು. ಅದು ಹಿಂದಿನ ಕಾಲದಲ್ಲಿ ಇಡೀ ವಾರಕ್ಕೆ ಬೇಕಾಗುವಷ್ಟು ತರಕಾರಿ ಖರೀದಿ ಮಾಡುವುದಕ್ಕಾಗಿ ಸಂತೆಯ ದಿನಕ್ಕಾಗಿ ಕಾದ ಹಾಗೆ. ಹಾ.ಮಾ.ನಾಯಕ ಜನಪ್ರಿಯ ’ಸಂಪ್ರತಿ’ ಅಂಕಣವೂ ಸೇರಿದಂತೆ ಇಡೀ ಪುರವಣಿಯ ಬಹುಪಾಲು ಪ್ರದೇಶವನ್ನು ಸಾಹಿತ್ಯ ಆಕ್ರಮಿಸಿರುತ್ತಿತ್ತು. ಕಥೆ- ಕವಿತೆ, ಪ್ರಬಂಧ, ಲೇಖನ, ಪುಸ್ತಕ ವಿಮರ್ಶೆ ಹೀಗೆ ಸಾಹಿತ್ಯವೇ ಪ್ರಮುಖ ಬಾಕಿ ಎಲ್ಲ ಕ್ಷೇತ್ರಗಳು ಗೌಣ ಎನ್ನುವಂತಾಗಿತ್ತು. ಕೊನೆಯ ಪುಟದಲ್ಲಿ ಸೇರಿದ ಸಿನಿಮಾ ತನ್ನ ಜನಪ್ರಿಯತೆಯಿಂದಾಗಿ ಪ್ರತ್ಯೇಕ ಪುರವಣಿ ಆಗುವಂತಹ ಸ್ಥಾನ ಪಡೆಯಿತು.
ಆಗ ಪತ್ರಿಕೆಯು ಬರಹಗಾರರಿಗೆ ಅವಕಾಶ ಕಲ್ಪಿಸುವುದಕ್ಕೆ ಓದುಗರ ನಿರೀಕ್ಷೆಯನ್ನು ತಣಿಸುವುದೇ ಪ್ರಮುಖ ಕಾರಣ ಆಗಿತ್ತು. ಈಗ ಕೂಡ. ಪತ್ರಿಕೆ ಇರುವುದು ಓದುಗರಿಗಾಗಿಯೇ ಹೊರತು ಲೇಖಕರಿಗಾಗಿ ಅಲ್ಲ. ’ಓದುಗ ದೊರೆ’ಯ ನಿರೀಕ್ಷೆ, ಆಸೆ- ಆಕಾಂಕ್ಷೆಗಳನ್ನು ಲಕ್ಷದಲ್ಲಿ ಇಟ್ಟುಕೊಂಡೇ ಸಂಚಿಕೆ ರೂಪಿಸಬೇಕಾಗುತ್ತದೆ. ಮನರಂಜನೆಯ ಪ್ರಮುಖ ಸರಕಾಗಿದ್ದ ಸಾಹಿತ್ಯವನ್ನು ನೀಡುವುದಕ್ಕೆ ಓದುಗರ ಒತ್ತಾಸೆಯೇ ಕಾರಣವಾಗಿತ್ತು.
ಸುತ್ತಲಿನ ಬದುಕು ಬದಲಾದಂತೆ ಅದರ ಸ್ವರೂಪಕ್ಕೆ ಅನುಗುಣವಾಗಿ ಸಾಹಿತ್ಯದ ಅಗತ್ಯ ಮತ್ತು ಆದ್ಯತೆಗಳೂ ಬದಲಾಗುವುದು ಅನಿವಾರ್ಯ ಮತ್ತು ಅಗತ್ಯ. ಓದುಗರಲ್ಲಿ ಪ್ರಮುಖವಾಗಿ ಮಧ್ಯಮವರ್ಗದ ಗೃಹಿಣಿಯರು- ಮಹಿಳೆಯರು ಕಾದಂಬರಿ- ಕಥೆ ಓದುವ ಮೂಲಕ ಸಾಹಿತ್ಯಕ್ಕೆ ಜನಪ್ರಿಯತೆಯ ಸ್ವರೂಪ ತಂದುಕೊಟ್ಟಿದ್ದರು. ’ಸುಧಾ’ ಮತ್ತು ’ತರಂಗ’ ಹಾಗೂ ’ಮಯೂರ’ ಮತ್ತು ’ತುಷಾರ’ದಂತಹ ಬ್ರಿಡ್ಜ್ ಪತ್ರಿಕೆಗಳಿಗೆ ಜೀವ ಇದ್ದದ್ದೇ ಈ ಮಹಿಳಾ ಓದುಗರಿಂದಾಗಿ. ಆಗ ಮಹಿಳಾ ಓದುಗರನ್ನೇ ಗಮನದಲ್ಲಿಟ್ಟುಕೊಂಡು ಬರೆಯುವ ಅನಿವಾರ್ಯತೆಯನ್ನು ಆಯಾ ಪತ್ರಿಕೆಗಳಿಗೆ ಬರೆಯುವ ಲೇಖಕ ಎದುರಿಸುತ್ತಿದ್ದ. ಓದುವುದನ್ನು ಬಿಟ್ಟು ಟಿ.ವಿ. ಧಾರಾವಾಹಿಗಳಲ್ಲಿ ಮಹಿಳೆಯರು ಆಸಕ್ತಿ ತಳೆಯಲು ಆರಂಭಿಸಿದ ಮೇಲೆ ಸಾಹಿತ್ಯದ ಬೆನ್ನು ಮೂಳೆ ಮುರಿಯಿತು. ಮಹಿಳಾ ಓದುಗರೆಂಬ ಬೃಹತ್ ಮರದ ಅಡಿಯಲ್ಲಿ ಆಸರೆ ಪಡೆದಿದ್ದ ಸಾಹಿತ್ಯದ ಬಳ್ಳಿ ನಿರಾಶ್ರಿತವಾಯಿತು. ಹಾಗೆಯೇ ಮನರಂಜನೆಯ ಹಲವು ಸಾಧ್ಯತೆ- ಅವಕಾಶಗಳು ತೆರೆದುಕೊಂಡವು. ಬದಲಾದ ಕಾಲ ಮತ್ತು ಸಂದರ್ಭವನ್ನು ನಿಭಾಯಿಸುವಲ್ಲಿ ಕನ್ನಡದ ಲೇಖಕರು ತೋರಿಸಿದ ಮಡಿವಂತಿಕೆಯ ಕಾರಣದಿಂದಲೇ ಇಂದು ಸಾಹಿತ್ಯ ಸೈಡ್‌ವಿಂಗ್‌ನಲ್ಲಿ ನಿಂತು ಬೇರೆಯವರು ಆಡುತ್ತಿರುವ ನಾಟಕವನ್ನು ನೋಡಬೇಕಾದ ಸ್ಥಿತಿಗೆ ಬಂದಿದೆ. ಟಿ.ವಿ.ಯಲ್ಲಿ ಓದಿನ ವೈರಿಯನ್ನು ಗುರುತಿಸಿದ ಕನ್ನಡ ಲೇಖಕರ ಪಡೆಯು ಅದನ್ನು ಬೈಯುವುದಕ್ಕಾಗಿಯೇ ಶ್ರಮ ವ್ಯಯಿಸಿದರೇ ಹೊರತು ಹೊಸ ಸವಾಲುಗಳಿಗೆ ಬರವಣಿಗೆಯನ್ನು ಸಿದ್ಧಪಡಿಸಲಿಲ್ಲ. ಇದರಿಂದಾಗಿ ಇದ್ದ ಕೆಲವು ಓದುಗರು ಕೂಡ ಕೈ ಬಿಡಲು ಆರಂಭಿಸಿದರು. ಓದುಗ ಸಾಹಿತ್ಯದಿಂದ ದೂರ ಸರಿಯುತ್ತಿದ್ದಾನೆ ಎಂಬ ವಾಸನೆ ಬಡಿಯುತ್ತಿದ್ದಂತೆಯೇ ಪ್ರಮುಖ ಪತ್ರಿಕೆ ತಮ್ಮ ಪುರವಣಿಯಿಂದ ಸಾಹಿತ್ಯವನ್ನು ಹೊರ ಹಾಕಿತು. ಉಳಿದ ಪತ್ರಿಕೆಗಳ ಪುರವಣಿಗಳು ಸಂಪೂರ್ಣವಾಗಿ ತ್ಯಜಿಸದಿದ್ದರೂ ಅವುಗಳ ಸ್ವರೂಪದಲ್ಲಿ ತೀವ್ರ ಬದಲಾವಣೆ ಕಾಣಿಸಿತು. ಸಾಹಿತ್ಯಕ್ಕೆ ಅಲ್ಪಸ್ವಲ್ಪ ಸ್ಥಾನ ಉಳಿದಿದ್ದರೆ ಆ ವಿಭಾಗಗಳಲ್ಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳ ವೈಯಕ್ತಿಕ ಆಸೆಯ ಫಲದಿಂದಾಗಿ. ಅದು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆಯುತ್ತಿರುವ ವ್ಯಕ್ತಿಗೆ ತಾತ್ಕಾಲಿಕ ವ್ಯವಸ್ಥೆ ನೀಡಿ ಬದುಕಿಸಿದ ಹಾಗಿತ್ತು. ಸುತ್ತಲಿನ ಬದುಕಿನ ವೇಗ- ಒತ್ತಡದ ತೀವ್ರತೆಯೂ ಏಕಾಂತದ ಓದಿಗೆ ಅಡ್ಡಿ ಮಾಡಲು ಆರಂಭಿಸಿತು. ಇದೆಲ್ಲದರ ಪರಿಣಾಮವಾಗಿ ಸಾಹಿತ್ಯ ಜನರಿಂದ ದೂರ ಆಗುತ್ತ ಹೋಯಿತು.
ಸಹಜವಾಗಿಯೇ ’ಯಾರೂ ಓದದ’ ಎಂಬ ತೀರ್ಮಾನಕ್ಕೆ ಬಂದ ಸಾಹಿತ್ಯಕ್ಕೆ ಸ್ಥಳಾವಕಾಶ ಕಡಿಮೆ ಆಯಿತು. ಕಡಿಮೆ ಆದ ಸ್ಥಳದಲ್ಲಿಯೇ ಬರೆಯುವ ಒತ್ತಡವನ್ನು ಲೇಖಕರು ಎದುರಿಸಬೇಕಾಗಿದೆ. ಹಿಂದೆ ಲೇಖಕರಿಗೆ ಸಾಕಷ್ಟು ಬರೆಯಲು ಅವಕಾಶ ನೀಡಿ ಎರಡ್ಮೂರು ವಾರಗಳಲ್ಲಿ ಧಾರಾವಾಹಿ ರೂಪದಲ್ಲಿ ಕಥೆಗಳನ್ನು ಪ್ರಕಟಿಸಿ ಬರಹಗಾರರಿಗೆ ಮುಕ್ತವಾಗಿ- ಸ್ವಚ್ಛಂದವಾಗಿ ಬರೆಯಲು ಪುರವಣಿಗಳು ಅವಕಾಶ ನೀಡಿದ್ದವು. ಅದೇ ಪುರವಣಿಗಳಲ್ಲಿ ಕಥೆಗಳ ಗಾತ್ರ- ಸೈಜ್ ಪ್ರಮುಖ ಮಾನದಂಡ ಆಗಲು ಆರಂಭವಾಗಿದೆ. ಈ ನಿಯಂತ್ರಣವು ಕಥೆಯ ಸ್ವರೂಪ ಮತ್ತು ನಿರ್ವಹಣೆಯ ಮೇಲೂ ಪರಿಣಾಮ ಬೀರಿದೆ.. ಟೆಸ್ಟ್ ಕ್ರಿಕೆಟ್ ಆಡುತ್ತಿದ್ದ ದಿನಗಳಲ್ಲಿ ಪ್ರಮುಖನಾಗಿದ್ದ ಸುನೀಲ್ ಗವಾಸ್ಕರ್, ಗುಂಡಪ್ಪ ವಿಶ್ವನಾಥ ತರಹದ ಕ್ರಿಕೆಟಿಗರು ಒನ್‌ಡೇ ಕ್ರಿಕೆಟ್‌ನ ಆರಂಭದ ದಿನಗಳಲ್ಲಿ ಔಟ್‌ಡೇಟೆಡ್ ಅನ್ನಿಸುತ್ತಿದ್ದರು. ೨೦-೨೦ ಬಂದಾಗ ಕೂಡ ರಾಹುಲ್- ಸಚಿನ್‌ನಂತಹ ಸ್ಟಾರ್‌ಗಳು ಕೂಡ ತಿಣುಕಾಡುತ್ತಿದ್ದರೆ ಹೊಸ ಹುಡುಗರು ಮೊದಲ ವಿಶ್ವಕಪ್ ಗೆದ್ದು ಬಂದರು. ಹೀಗೆ ಬದಲಾದ ಸಾಹಿತ್ಯ ಸಂದರ್ಭದಲ್ಲಿ ಬದಲಾವಣೆಯನ್ನು ಅರಗಿಸಿಕೊಳ್ಳಲಾಗದ ಹಳೆಯ ಹುಲಿಗಳು ಗೊಣಗಾಡುತ್ತಿದ್ದರೆ ಹೊಸ ಲೇಖಕರು ಪದಗಳ ಮಿತಿಯಲ್ಲಿ ಸಾಹಿತ್ಯವನ್ನು ಸೃಷ್ಟಿಸುವ ಸವಾಲು ಎದುರಿಸಿ ತಕ್ಕಮಟ್ಟಿಗೆ ಯಶಸ್ವಿಯಾಗುತ್ತಿದ್ದಾರೆ. ಇದು ಫಾಸ್ಟ್‌ಫುಡ್‌ನ ಕಾಲ. ಆರೋಗ್ಯಕ್ಕೆ ಒಳ್ಳೆಯದಲ್ಲದಿದ್ದರೂ ತಕ್ಷಣಕ್ಕೆ ಸಿಗುವಂತಹದರ ಕಡೆಗೇ ಒಲವು ಜಾಸ್ತಿ. ಕಾಯುವುದಕ್ಕೆ ತಾಳ್ಮೆ ಇಲ್ಲ. ಹೀಗಾಗಿ ತುಂಬ ಗುಣಮಟ್ಟದ್ದು ನೀಡಬೇಕು ಎನ್ನುವ ತುರ್ತು ಅಗತ್ಯವೂ ಇಲ್ಲ. ಸಾಹಿತ್ಯ ಕೂಡ ಇದಕ್ಕೆ ಹೊರತಾಗಿಲ್ಲ. ಇದರಿಂದಾಗಿ ಗುಣಮಟ್ಟಕ್ಕಿಂತ ತಕ್ಷಣ ಪೂರೈಸುವುದಕ್ಕೆ ಮತ್ತು ಸ್ಪೈಸಿ ಆಗಿರುವುದಕ್ಕೆ ಹೆಚ್ಚು ಆದ್ಯತೆ ದೊರೆಯುತ್ತಿದೆ. ಅದು ಸಹಜ ಕೂಡ.
ಪುರವಣಿಯಲ್ಲಿ ಕಥೆಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅದರ ಗಾತ್ರವೇ ಆಯ್ಕೆಯ ಮೊದಲ ಮಾನದಂಡ ಆಗಿದೆ. ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದರೂ ಅನಿವಾರ್ಯ. ಪತ್ರಿಕೆಗಳು ಹೀಗೆ ಲೇಖಕನ ಮೇಲೆ ತಮಗೆ ಬೇಕಾದಂತೆ ಬರೆಸಿಕೊಳ್ಳುವದಕ್ಕಾಗಿ ಒತ್ತಡ ಹೇರುವುದು ಹೊಸದೇನಲ್ಲ. ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕಥೆಗಳ ಸ್ವರೂಪವೇ ಬೇರೆ, ಮಯೂರದಲ್ಲಿ ಪ್ರಕಟವಾಗುತ್ತಿದ್ದ ಕಥೆಗಳೇ ಬೇರೆ. ’ಭಾವನಾ’ದಲ್ಲಿ ಪ್ರಕಟವಾಗುತ್ತಿದ್ದ ಕಥೆಗಳ ಧ್ವನಿ- ಆಶಯ- ನಿರೂಪಣೆಯ ವಿಧಾನಗಳೇ ಬೇರೆ. ಲೇಖಕರೇ ಸಂಪಾದಕರಾಗಿದ್ದ ಸಂದರ್ಭಗಳಲ್ಲಿ ಅವರು ಆ ಪತ್ರಿಕೆಗೆ ಬರೆಯುವ ಉಳಿದ ಲೇಖಕರ ಬರವಣಿಗೆಗಳನ್ನು ನಿಯಂತ್ರಿಸುತ್ತಿರುತ್ತಾರೆ. ನೇರವಾಗಿ ಇದನ್ನೇ ಬರೆಯಿರಿ ಎಂಬ ಒತ್ತಡ ಹೇರದಿದ್ದರೂ ಲೇಖಕನ ಬರವಣಿಗೆ ಮತ್ತು ವ್ಯಕ್ತಿತ್ವ ಸಂಪಾದಕನಲ್ಲಿ ಎಕ್ಸ್‌ಟೆಂಡ್ ಆಗಿರುತ್ತಿತ್ತು. ಆಯಾ ಪತ್ರಿಕೆಯ ಸಂಪಾದಕನ ಮನಸ್ಥಿತಿಯನ್ನು ಆಧರಿಸಿ ಬರೆಯುವ ಒತ್ತಡವನ್ನು ಬಹುಸಂಖ್ಯಾತ ಲೇಖಕರು ಎದುರಿಸುತ್ತಿರುತ್ತಾರೆ. ಅವರಲ್ಲಿ ಬಹಳಷ್ಟು ಜನ ಹೊಸ ನೆಲೆ ಕಂಡುಕೊಳ್ಳಬಯಸುವ ಲೇಖಕರಾಗಿತ್ತಾರೆ. ನೆಲೆಕಂಡುಕೊಂಡ ನಂತರವೂ ಬದಲಾಗುವುದಿಲ್ಲ.
ಹಾಗೆ ನೋಡಿದರೆ ಓದುಗರ ಸಂಖ್ಯೆ ಕಡಿಮೆಯಾಗಿದೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ಕಡಿಮೆಯಾದದ್ದು ಲೇಖಕರ ಸಂಖ್ಯೆಯಲ್ಲಿ. ವಾಸ್ತವವಾಗಿ ಓದುಗರ ಸಂಖ್ಯೆಯಲ್ಲಿ ವ್ಯಾಪಕವಾದ ಹೆಚ್ಚಳ ಕಂಡು ಬಂದಿದೆ. ಹಿಂದೆ ಓದುಗ ಲೇಖಕ ಬರೆದದ್ದನ್ನು ಭಯ- ಭಕ್ತಿ- ಗೌರವಗಳಿಂದ ಓದುತ್ತಿದ್ದ. ಅದು ಈಗ ಇಲ್ಲ. ಮಾಹಿತಿ ತಂತ್ರಜ್ಞಾನದ ಕೃಪೆಯಿಂದಾಗಿ ದೊರೆತ ಹೊರ ಜಗತ್ತಿನ ಅರಿವಿನಿಂದಾಗಿ ಓದುಗ ಬೆಳೆದಿದ್ದಾನೆ. ಬದಲಾಗಿದ್ದಾನೆ. ಅದಕ್ಕೆ ಪೂರಕವಾಗಿ ಲೇಖಕರೂ ಬದಲಾಗಬೇಕಾದ ಜರೂರಿ ಇದೆ. ವಾಸ್ತವವಾಗಿ ಲೇಖಕರೂ ಬದಲಾಗುತ್ತಿದ್ದಾರೆ. ಹಳಬರು ಬದಲಾಗಲು ಬಯಸದಿದ್ದರೆ ಹೋಯಿತು. ಹೊಸಬರು ತಮ್ಮ ನೆಲೆ ಕಂಡುಕೊಳ್ಳುವುದಕ್ಕಾಗಿ ಹೊಸ ಸಾಹಿತ್ಯ ಪ್ರಕಾರಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಒಂದೆರೆಡು ಪತ್ರಿಕೆಗಳಿದ್ದ ಸಂದರ್ಭದಲ್ಲಿ ಕೆಲವೇ ಲೇಖಕರನ್ನು ಗಮನದಲ್ಲಿ ಇಟ್ಟುಕೊಂಡು ಗುಣಮಟ್ಟ ಕಾಪಾಡುವುದು ಸುಲಭ ಸಾಧ್ಯವಿತ್ತು. ಗಣನೀಯ ಪ್ರಮಾಣದಲ್ಲಿ ಲೇಖಕರು ಈ ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುತ್ತಿರುವ ದಿನಗಳಲ್ಲಿ ಪ್ರಕಟಣೆಯ ಸಾಧ್ಯತೆಗಳು ಹೆಚ್ಚಾಗಿವೆ. ಅವಸರವಸರಲ್ಲಿ ಒಂದಿಷ್ಟು ಕಸ ಜಾಸ್ತಿಯೇ ಬರುತ್ತಿದೆ. ಸೋಸಿ ಸರಿ ಮಾಡಬೇಕಾದ ಅಕಾಡೆಮಿಯಂತಹ ಸಂಸ್ಥೆಗಳು ಪ್ರಕಟಿಸುತ್ತಿರುವ ಸಾಹಿತ್ಯ ವಾರ್ಷಿಕ ಸಂಕಲನಗಳ ಸ್ಥಿತಿ ಏನಾಗಿದೆ ಎನ್ನುವ ಪ್ರಸ್ತಾಪ ಮಾಡದಿರುವುದೇ ಒಳ್ಳೆಯದು.
ಇನ್ನು ಪತ್ರಿಕೆಗಳು ನಡೆಸುವ ಸಾಹಿತ್ಯ ಸ್ಪರ್ಧೆಗಳಿಂದ ಸಾಹಿತ್ಯಲೋಕಕ್ಕೆ ಲಾಭವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಿರಿಯ- ಕಿರಿಯ ಲೇಖಕರಿಬ್ಬರೂ ಡೆಮಾಕ್ರಾಟಿಕ್ ಆಗಿ ಯೋಚನೆ ಮಾಡಿ ಪರಸ್ಪರ ಸ್ಪರ್ಧೆಗೆ ಇಳಿಯುವಂತಹ ಮನಸ್ಥಿತಿಯನ್ನು ರೂಪಿಸುವಲ್ಲಿ ಸ್ಪರ್ಧೆಗಳು ಯಶ ಕಂಡಿವೆ. ಸ್ಪರ್ಧೆಗಳಿಂದ ಲೇಖಕರಿಗೆ ಸ್ಟಾರ್‌ಗಿರಿ ದೊರೆಯುತ್ತಿದೆ. ಹಾಗೆಯೇ ಸ್ವಲ್ಪ ಕಾಸು ಕೂಡ. ಸ್ಪರ್ಧೆಯಲ್ಲಿ ಗೆಲ್ಲುವುದೇ ಪ್ರಮುಖ ಅಂಶ ಆದದ್ದರಿಂದ ರೂಪುಗೊಂಡಿರುವ ಸಿದ್ಧವಿನ್ಯಾಸಗಳು ಕೂಡ ಲೇಖಕರಿಗೆ ಮಿತಿ ಒಡ್ಡಿ ಅದನ್ನು ಮೀರುವಂತೆ ಸವಾಲು ಹಾಕುತ್ತಿವೆ. ಪ್ರಜಾವಾಣಿ ಆರಂಭಿಸಿದ ಕಥಾಸ್ಪರ್ಧೆಯನ್ನು ಈಗ ಬಹುತೇಕ ಎಲ್ಲ ಪತ್ರಿಕೆಗಳೂ ನಡೆಸುತ್ತಿವೆ. ಕಳೆದ ೩-೪ ವರ್ಷಗಳಿಂದ ಕವನ ಸ್ಪರ್ಧೆ ಕೂಡ ಆರಂಭವಾಗಿದೆ. ಮಧ್ಯೆ ಆರಂಭವಾಗಿದ್ದ ನಾಟಕ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗಳಿಗೆ ಅಂತಹ ಒಳ್ಳೆಯ ಪ್ರತಿಕ್ರಿಯೆ ದೊರೆಯಲಿಲ್ಲ. ಸ್ಪರ್ಧೆಯಲ್ಲಿ ಬಹುಮಾನಿತರಾಗುವ ಕಥೆಗಾರರ ವಸ್ತುವಿನ ಆಯ್ಕೆ ಮತ್ತು ನಿರೂಪಣೆಗಳು ಆಯಾ ಲೇಖಕರ ಮಿತಿಗಳೇ ಅಗಿಬಿಟ್ಟಿರುವ ಸಂಗತಿಗಳಿವೆ. ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಾಗಿ ಲೇಖಕರು/ಕವಿಗಳು ತಾವೇ ಹೆಣೆದುಕೊಂಡಿರುವ ಬಲೆಯಿಂದ ಹೊರ ಬರಲು ಸಾಧ್ಯವಾಗದೇ ಒದ್ದಾಡುವುದನ್ನು ಕಾಣುತ್ತಿದ್ದೇವೆ. ಅದನ್ನು ಮೀರಿ ಬೆಳೆದ ಲೇಖಕರು ಇಲ್ಲವೆಂದೇನು ಅಲ್ಲ. ಆದರೆ, ಅಂತಹವರ ಸಂಖ್ಯೆ ಬಹಳ ಕಡಿಮೆ.
ಪ್ರಸಾರದ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಗುಣಮಟ್ಟದ ಸಾಹಿತ್ಯ ಪ್ರಕಟಣೆಗೆ ಅವಕಾಶ ಮತ್ತು ಒಟ್ಟು ಸಾಹಿತ್ಯದ ಬೆಳವಣಿಗೆಗೆ ’ಸಾಹಿತ್ಯ ಪತ್ರಿಕೆಗಳು’ ನೀಡಿದ ಅವಕಾಶ ಗಮನಾರ್ಹ. ಸಾಹಿತ್ಯ ಪತ್ರಿಕೆಗಳ ಉದ್ದೇಶವೇ ಸಾಹಿತ್ಯದಲ್ಲಿ ಆಸಕ್ತಿ ಇರುವ ’ಅಲ್ಪಸಂಖ್ಯಾತ’ರನ್ನು ಗಮನದಲ್ಲಿ ಅದರಲ್ಲೂ ವಿಶೇಷವಾಗಿ ಕೆಲವೇ ಪ್ರಕಾರ ಮತ್ತು ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡಿರುತ್ತವೆ. ಹೀಗಾಗಿ ಅವುಗಳಿಗೆ ಸಾಧ್ಯವಾದದ್ದು. ದೊಡ್ಡ ಪತ್ರಿಕೆಗಳ ಪುರವಣಿಗಳಿಗೆ ಸಾಧ್ಯವಾಗುವುದಿಲ್ಲ. ಸಾಹಿತ್ಯ ಪತ್ರಿಕೆಗಳು ಗಂಭೀರ ಎನ್ನುವಂತಹ ಬರಹಗಳಿಗೆ ಅವಕಾಶ ಕಲ್ಪಿಸುವುದಕ್ಕೆ ಸಾಧ್ಯವಿದೆ. ಆದರೆ, ಪುರವಣಿಗಳಲ್ಲಿ ಅಂತಹದ್ದಕ್ಕೆ ಅವಕಾಶ ಕಡಿಮೆ. ಬಹುಸಂಖ್ಯಾತ ’ಸಾಮಾನ್ಯ’ ಓದುಗರನ್ನು ಲಕ್ಷದಲ್ಲಿ ಇಟ್ಟುಕೊಂಡು ಪುರವಣಿಗಳನ್ನು ತಯಾರಿಸಬೇಕಾದ ಅನಿವಾರ್ಯ ಒತ್ತಡವನ್ನು ದೊಡ್ಡ ಪತ್ರಿಕೆಗಳು ಎದುರಿಸುತ್ತಿರುತ್ತವೆ. ಸಾಹಿತ್ಯ ಪತ್ರಿಕೆಗಳಲ್ಲಿ ಸಾಹಿತ್ಯವೇ ಕೇಂದ್ರದಲ್ಲಿದ್ದರೆ ದೈನಿಕಗಳಲ್ಲಿ ಸಾಹಿತ್ಯವೂ ಒಂದಾಗಿರುತ್ತದೆ. ಆದರೆ ಎರಡೂ ಪ್ರಕಾರದ ಪತ್ರಿಕೆಗಳೂ ಸಾಹಿತ್ಯದ ರಚನೆ ಮತ್ತು ಓದು ಸೇರಿದಂತೆ ಇಡೀ ಸಾಹಿತ್ಯದ ಸೆಲೆಯನ್ನು ನಿಯಂತ್ರಿಸುತ್ತಿರುತ್ತವೆ.
ಸಮಕಾಲೀನ ಸಮಸ್ಯೆ- ಸವಾಲುಗಳನ್ನು ಗಮನದಲ್ಲಿ ಇಟ್ಟುಕೊಂಡು ಬರುತ್ತಿರುವ ಕಥೆ- ಕವಿತೆಗಳ ಪ್ರಮಾಣ ಬಹಳಷ್ಟು ಕಡಿಮೆ. ಸಮಕಾಲೀನ ಆಗಿರುವುದು ಸಾರ್ವಕಾಲಿಕ ಕೂಡ ಆಗಲು ಸಾಧ್ಯವಿದೆ. ಈ ಎರಡಲಗಿನ ಕತ್ತಿಯಿಂದ ಲೇಖಕ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ತಪ್ಪಿಸಿಕೊಳ್ಳುವುದಕ್ಕಾಗಿ ದೂರ ಹೋದರೆ ವಾಸ್ತವದಿಂದ ದೂರ ಸರಿದಂತಾಗುತ್ತದೆ. ನಿರ್ವಾತದಲ್ಲಿ ಕುಳಿತು ಸಾಹಿತ್ಯ ಸೃಷ್ಟಿ ಸಾಧ್ಯವಿಲ್ಲ. ಚಂದ್ರ ಎಷ್ಟೇ ಸುಂದರ- ಚೆಲುವಾಂತ ನಾಗಿದ್ದರೂ ಅವನ ಬೆಳಕು ಬಂದದ್ದು ಪ್ರಖರವಾದ ಸೂರ್ಯನಿಂದ. ಬದುಕಿನಿಂದ -ಅನುಭವದಿಂದ ಬೆಳಕು ಪಡೆಯದೇ ಲೇಖಕರು ಸಶಕ್ತವಾದದ್ದನ್ನು ನೀಡಲು ಸಾಧ್ಯವಿಲ್ಲ. ಈ ಅಂಶ ಲೇಖಕರಿಗೆ ಗೊತ್ತಿಲ್ಲ ಅಂತ ಅಲ್ಲ. ಸಮಕಾಲೀನ ಅಗತ್ಯಗಳನ್ನು ಅರಿಯುವಲ್ಲಿ ಓದುಗ ಯಶಸ್ವಿಯಾದಂತೆ ಬಹುಪಾಲು ಲೇಖಕರು ಆಗಿಲ್ಲ. ಅಂತಹ ವಾತಾವರಣ ಸೃಷ್ಟಿಸುವಲ್ಲಿ ಸಾಹಿತ್ಯ ಸಂಸ್ಥೆಗಳು ಪೂರಕವಾಗಿ ಕೆಲಸ ಮಾಡಿಲ್ಲ. ಇದು ಕೇವಲ ದೂರುವ ಮಾತಲ್ಲ. ಅಕಾಡೆಮಿಕ್ ನೆಲೆಯಲ್ಲಿ ನಡೆಯಬೇಕಾಗಿದ್ದ ಚರ್ಚೆ- ಮಾತು- ಸಂವಾದಗಳು ಹಿಂದೆ ಸರಿದಿವೆ. ಅಥವಾ ಕೇವಲ ಬೆಂಗಳೂರು ಕೇಂದ್ರಿತವಾಗಿವೆ. ಲೇಖಕರು ಕೂಡ ಬೆಂಗಳೂರಿನಲ್ಲಿ ಕುಳಿತು ಕರ್ನಾಟಕ ನೋಡಬಯಸುವ ಸಂಪಾದಕರನ್ನು ಗಮನದಲ್ಲಿ ಇಟ್ಟುಕೊಂಡು ಬರೆಯಬೇಕಾದ ಒತ್ತಡದಲ್ಲಿದ್ದಾನೆ. ಅದು ಅವನ ಸಾಹಿತ್ಯ ಕೃತಿಗಳಲ್ಲಿ ವ್ಯಕ್ತವಾಗುತ್ತಿದೆ. ಇಲ್ಲದಿದ್ದರೆ ಪ್ರಕಟ ಆಗುವುದೇ ಇಲ್ಲ ಎಂಬ ನಿರಾಸೆಯೂ ಇದೆ.
6-11-2008
ಕಾಮೆಂಟ್‌ಗಳು