ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ


ಕನ್ನಡ ಮಾತನಾಡುವ ಪ್ರದೇಶಗಳು ಒಂದೇ ಆಡಳಿತ ವ್ಯಾಪ್ತಿಗೆ ಸೇರುವುದಕ್ಕಾಗಿ ಹೋರಾಟವೂ ಸೇರಿದಂತೆ ನಡೆದ ಸಭೆ- ಸಮಾರಂಭ ಹಾಗೂ ವಾಗ್ವಾದ, ಚರ್ಚೆ ಮುಂತಾದ ಚಟುವಟಿಕೆಗಳನ್ನು ‘ಏಕೀಕರಣ ಚಳುವಳಿ’ ಎಂದು ಕರೆಯಲಾಗುತ್ತದೆ. ಅಂದರೆ ಹಿಂದೆ ಕನ್ನಡ ಮಾತನಾಡುವ ಜನ ಒಂದೇ ಆಡಳಿತಕ್ಕೆ ಒಳಪಟ್ಟಿರಲಿಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಹೌದು ಕನ್ನಡ ಭಾಷೆ ಮಾತನಾಡುವ ಜನ ಹತ್ತು ಹಲವು ಆಡಳಿತ ಪ್ರದೇಶಗಳಲ್ಲಿ ಹರಿದು ಹಂಚಿಹೋಗಿದ್ದರು. ಆಡಳಿತ ನಡೆಸುವುದಕ್ಕೆ ಸಂಬಂಧಿಸಿದಂತೆ ಒಂದು ಭಾಷೆಯನ್ನು ಮಾತನಾಡುವ ಜನ ಒಂದೇ ಪ್ರದೇಶದ ವ್ಯಾಪ್ತಿಗೆ ಸೇರಬೇಕು ಎಂಬ ಪರಿಕಲ್ಪನೆಯೇ ಇರಲಿಲ್ಲ. ಏಕೀಕರಣ ಚಳುವಳಿಯು ಯಾಕೆ? ಮತ್ತು ಹೇಗೆ? ಹುಟ್ಟಿಕೊಂಡಿತು. ಅದು ಬೆಳೆದು ಬಂದ ರೀತಿಯನ್ನು ಸ್ಥೂಲವಾಗಿ ಅರಿತು ಕೊಂಡರೆ ಕನ್ನಡ ಭಾಷಿಕರೂ ಸೇರಿದಂತೆ ಹಲವು ಭಾರತೀಯ ಭಾಷೆಗಳ ಪ್ರತ್ಯೇಕ ಪ್ರಾಂತ್ಯಗಳು ಅಥವಾ ರಾಜ್ಯಗಳು ರೂಪುಗೊಂಡ ಕಥೆಯು ಅರಿವಿಗೆ ಬರುತ್ತದೆ.
1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷ್ ಆಡಳಿತದಿಂದ ಮುಕ್ತಗೊಂಡಿತು. ಸತತ ಮತ್ತು ಸುದೀರ್ಘ ಹೋರಾಟದ ಫಲವಾಗಿ ಸ್ವಾತಂತ್ರ್ಯವೇನೋ ದೊರೆಯಿತು. ಆದರೆ, ಧರ್ಮದ ಹೆಸರಿನಲ್ಲಿ ಭಾರತವು ಎರಡು ದೇಶಗಳಾಗಿ ವಿಭಜನೆಗೊಂಡಿತು. ಪಾಕಿಸ್ತಾನ- ಭಾರತಗಳೆರಡೂ ಪ್ರತ್ಯೇಕ ದೇಶಗಳಾಗಿ ಬ್ರಿಟಿಷ್ ಆಡಳಿತದಿಂದ ಸ್ವತಂತ್ರಗೊಂಡವು. ಬ್ರಿಟಿಷ್ ಆಡಳಿತ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರತದಾದ್ಯಂತ ಏಕರೂಪಿಯಾದ ಆಡಳಿತ ವ್ಯವಸ್ಥೆ ಇರಲಿಲ್ಲ. ಬ್ರಿಟಿಷರಿಂದ ನೇರವಾಗಿ ಆಳ್ವಿಕೆಗೆ ಒಳಗಾಗಿದ್ದ ಪ್ರದೇಶಗಳಿದ್ದವು. ಹಾಗೆಯೇ, ಸಣ್ಣ ಪುಟ್ಟ ದೊರೆಗಳ ಸಂಸ್ಥಾನಗಳೂ ಅಸ್ವಿತ್ವದಲ್ಲಿದ್ದವು. ಅವರೆಲ್ಲರೂ ಬ್ರಿಟಿಷ್ ಆಧಿಪತ್ಯವನ್ನು ಒಪ್ಪಿಕೊಂಡಿದ್ದರೂ ಆಡಳಿತ ವ್ಯವಸ್ಥೆ ಮಾತ್ರ ಒಂದಕ್ಕಿಂತ ಮತ್ತೊಂದು ಭಿನ್ನವಾಗಿದ್ದವು. ಬ್ರಿಟಿಷರು ಸ್ವಾತಂತ್ರ್ಯ ಘೋಷಿಸುವ ಸಮಯದಲ್ಲಿ ಈ ಸಂಸ್ಥಾನಗಳಿಗೆ ತಮ್ಮದೇ ಸ್ವತಂತ್ರ ನಿಲುವು ತಳೆಯಲು ಅವಕಾಶ ನೀಡಿದರು. ಸಂಸ್ಥಾನಗಳು ಭಾರತದ ಅಥವಾ ಪಾಕಿಸ್ತಾನಗಳ ಭಾಗವಾಗಿ ಇರಬಹುದು ಅಥವಾ ಸ್ವತಂತ್ರವಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬಹುದು ಎಂಬುದು ಆ ಘೋಷಣೆಯ ಪ್ರಮುಖ ಅಂಶವಾಗಿತ್ತು. ಸ್ವಾತಂತ್ರ್ಯೋತ್ತರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಹಾಗೂ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಈ ಸಂಸ್ಥಾನದ ಪ್ರಮುಖರ ಸಭೆ ಕರೆದು ಭಾರತದ ಒಕ್ಕೂಟದ ಭಾಗವಾಗುವಂತೆ ಸೂಚಿಸಿದರು. ಕಾಶ್ಮೀರದ ದೊರೆ ಹಾಗೂ ಹೈದರಾಬಾದ್ ನಿಜಾಮ್ ಹೊರತು ಪಡಿಸಿ ದೇಶದಲ್ಲಿದ್ದ ಎಲ್ಲ 534 ದೊರೆಗಳು ಭಾರತ ಒಕ್ಕೂಟದ ಭಾಗವಾಗಲು ಒಪ್ಪಿದರು. ಬಹುಸಂಖ್ಯಾತ ಹಿಂದುಗಳು ಪ್ರಜೆಗಳಾಗಿದ್ದ ಹೈದರಾಬಾದ್ ನ ನಿಜಾಮ್ ಸ್ವತಂತ್ರವಾಗಿ ಉಳಿಯುವ ನಿಲುವು ತಳೆದ ಹಾಗೆಯೇ ಬಹುಸಂಖ್ಯಾತ ಮುಸ್ಲಿಂ ಪ್ರಜೆಗಳನ್ನು ಒಳಗೊಂಡಿದ್ದ ಕಾಶ್ಮೀರದ ದೊರೆಯ ಮೇಲೆ ಪಾಕಿಸ್ತಾನ ಮತ್ತು ಭಾರತಗಳೆರಡೂ ತಮ್ಮ ದೇಶಕ್ಕೆ ಸೇರುವಂತೆ ಒತ್ತಾಯಿಸಿದವು. ಕಾಶ್ಮೀರವನ್ನು ಸೈನಿಕ ಕಾರ್ಯಾಚರಣೆ ಹಾಗೂ ಹೈದರಾಬಾದ್ ಪ್ರಾಂತ್ಯವನ್ನು ‘ಪೊಲೀಸ್ ಆ್ಯಕ್ಷನ್’ ಮೂಲಕ ಭಾರತದಲ್ಲಿ ಸೇರಿಸಿಕೊಳ್ಳಲಾಯಿತು. ಅದರ ಫಲವಾಗಿ 1950ರ ಜನವರಿ 26ರಂದು ಭಾರತದ ಒಕ್ಕೂಟವು ಸ್ವತಂತ್ರ ಸಂವಿಧಾನವನ್ನು ಒಳಗೊಂಡ ‘ಗಣರಾಜ್ಯ’ವಾಯಿತು.
ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಒಪ್ಪಿಕೊಂಡ ಗಣರಾಜ್ಯವಾದ ನಂತರ 1952ರಲ್ಲಿ  ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆದವು. ಆಗ ಕನ್ನಡ ಮಾತನಾಡುವ ಜನರು 22 ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದರು. ಮೈಸೂರು ದೊರೆಗಳ ಆಡಳಿತ ವ್ಯಾಪ್ತಿಗೆ ಸೇರಿದ್ದ ‘ಹಳೆಮೈಸೂರು’, ನೇರವಾಗಿ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿದ್ದ ‘ಮುಂಬೈ ಕರ್ನಾಟಕ’ ಹಾಗೂ ಮದ್ರಾಸ್ ಆಡಳಿತದ ವ್ಯಾಪ್ತಿಯಲ್ಲಿದ್ದ ಈಗಿನ ಬಳ್ಳಾರಿ, ಮಂಗಳೂರು ಜಿಲ್ಲೆಗಳು, ಹೈದರಾಬಾದ್ ಪ್ರಾಂತ್ಯಕ್ಕೆ ಸೇರಿದ್ದ ‘ಹೈದರಾಬಾದ್ ಕರ್ನಾಟಕ’ ಪ್ರದೇಶಗಳು ಗಾತ್ರ ಹಾಗೂ ಜನಸಂಖ್ಯೆಯ ದೃಷ್ಟಿಯಿಂದ ದೊಡ್ಡವಾಗಿದ್ದವು. ಇವುಗಳಲ್ಲದೇ ಸಣ್ಣಪುಟ್ಟ ಸಂಸ್ಥಾನಗಳಾದ ಕೊಡಗು, ಕೊಲ್ಲಾಪುರ, ಸಾಂಗ್ಲಿ, ಮಿರ್ಜಿ, ಕುಂದರವಾಡ, ಜಮಖಂಡಿ, ಮುಧೋಳ, ರಾಮದುರ್ಗ, ಜತ್ತ, ಅಕ್ಕಲಕೋಟೆ, ಔಂಧ, ಸವಣೂರು ಮತ್ತು ಸೊಂಡೂರು ಪ್ರದೇಶಗಳಲ್ಲಿಯೂ ಕನ್ನಡ ಭಾಷಿಕರು ಇದ್ದರಾದರೂ ಆ ಪ್ರದೇಶಗಳೆಲ್ಲವೂ ಬೇರೆ ಬೇರೆ ಆಡಳಿತ ವ್ಯವಸ್ಥೆಗೆ ಒಳಪಟ್ಟಿದ್ದವು. ಇವುಗಳನ್ನು ಒಂದೇ ಆಡಳಿತ ವ್ಯವಸ್ಥೆಯ ವ್ಯಾಪ್ತಿಗೆ ತರಬೇಕು ಎಂಬ ಯೋಚನೆಯು ಸ್ವಾತಂತ್ರ್ಯ ಪೂರ್ವದ ದಿನಗಳಿಂದಲೇ ಚಾಲ್ತಿಯಲ್ಲಿತ್ತು. ಕ್ರೈಸ್ತ ಮಿಶಿನರಿಗಳು ಕನ್ನಡದ ಸಾಹಿತ್ಯಕ ಕೆಲಸಗಳ ಮೂಲಕ ಭಾವನಾತ್ಮಕವಾಗಿ ಒಂದುಗೂಡಿಸುವ ಪ್ರಕ್ರಿಯೆ ಆರಂಭಿಸಿದ್ದರು. ಅದಕ್ಕೂ ಮುನ್ನ ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿಯೇ ಕ್ಯಾಪ್ಟನ್ ಮೆಡೋಸ್ ಟೇಲರ್ ಕನ್ನಡ ಮಾತನಾಡುವದ ಪ್ರದೇಶಗಳ ಮೇರೆಗಳನ್ನು ಸೂಚಿಸಿದ್ದ. ಮತ್ತೊಬ್ಬ ಬ್ರಿಟಿಷ್ ಅಧಿಕಾರಿ ಥಾಮಸ್ ಮನ್ರೊ ಕನ್ನಡ ಭಾಷಿಕರು ಒಗ್ಗೂಡುವುದಕ್ಕೆ ನಾಂದಿ ಹಾಡಿದ್ದ.
ಸ್ವಾತಂತ್ರ್ಯೋತ್ತರ ಭಾರತವನ್ನು ಯಾವ ರೀತಿಯ ಆಡಳಿತ ವ್ಯವಸ್ಥೆ ರೂಪಿಸಬೇಕು? ಪ್ರಾಂತ್ಯಗಳ ಸ್ವರೂಪ ಹೇಗೆ ಇರಬೇಕು? ಎಂಬ ಚರ್ಚೆಯು ಏಕೀಕರಣ ಚಳವಳಿಯು ಮೂರ್ತಸ್ವರೂಪ ಪಡೆಯುವುದಕ್ಕೆ ಕಾರಣವಾಯಿತು. ಭಾರತದ ಒಕ್ಕೂಟದ ಪ್ರದೇಶಗಳನ್ನು ಐದು ಪ್ರಾಂತ್ಯಗಳಾಗಿ ವಿಂಗಡಿಸಬೇಕು ಎಂಬ ನಿಲುವು ಒಂದೆಡೆಗಾದರೆ ಭಾಷಾವಾರು ಪ್ರಾಂತ್ಯಗಳನ್ನು ರಚಿಸಬೇಕು ಎಂಬ ಅಭಿಪ್ರಾಯ ಮತ್ತೊಂದೆಡೆಗಿತ್ತು. ಈ ಬಗ್ಗೆ ಅಧ್ಯಯನ ನಡೆಸುವುದಕ್ಕಾಗಿ ಒಂದಾದ ಮೇಲೊಂದರಂತೆ ಮೂರು ಸಮಿತಿಗಳನ್ನು ರಚಿಸಲಾಯಿತು. ಜೆ.ಪಿ. ಧರ್ ಸಮಿತಿಯು ರಾಜ್ಯಗಳ ಪುನರ್ ವಿಂಗಡಣೆಯ ಬಗ್ಗೆಯೇ ಆಕ್ಷೇಪ ವ್ಯಕ್ತ ಪಡಿಸಿತು. ಅದಕ್ಕೆ ಕಾಂಗ್ರೆಸ್ ಸೇರಿದಂತೆ ತೀವ್ರ ಪ್ರತಿರೋಧ ವ್ಯಕ್ತವಾಯಿತು. ನಂತರ ಜವಾಹರಲಾಲ್ ನೆಹರು, ವಲ್ಲಭಭಾಯಿ ಪಟೇಲ್. ಪಟ್ಟಾಭಿ ಸೀತರಾಮಯ್ಯ ಅವರನ್ನು ಒಳಗೊಂಡ ‘ಜೆವಿಪಿ’  ಸಮಿತಿಯು ಭಾಷಾವಾರು ಪ್ರಾಂತ್ಯ ರಚನೆಯ ಪರವಾದ ನಿಲುವು ತಳೆದಿತ್ತಾದರೂ ಅದು ಕೇವಲ ಆಂಧ್ರಪ್ರದೇಶ ರಾಜ್ಯ ರಚನೆಗೆ ಸೂಚನೆ ನೀಡಿತ್ತು. ಇದರಲ್ಲಿ ಕನ್ನಡ ಮಾತನಾಡುವ ಜನರ ಏಕೀಕರಣವನ್ನು ಕಡೆಗಣಿಸಲಾಗಿತ್ತು. ಆಗ ಕರ್ನಾಟಕದಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಕಾಂಗ್ರೆಸ್ ನಿಲುವು ಖಂಡಿಸಿ ‘ಕರ್ನಾಟಕ ಏಕೀಕರಣ ಪಕ್ಷ’ ಸ್ಥಾಪನೆ ಮಾಡಲಾಯಿತು. ಇದಕ್ಕೆ ರಾಜ್ಯದ ಪ್ರಮುಖ ರಾಜಕಾರಣಿಗಳ ಬೆಂಬಲ ವ್ಯಕ್ತವಾಗಿತ್ತು. ಪ್ರಾಂತ್ಯಗಳ ವಿಂಗಡಣೆಗೆ ಸಂಬಂಧಿಸಿದಂತೆ ರಚಿತವಾದ ಫಜಲ್ ಅಲಿ ಕಮೀಷನ್ ಮುಂದೆ ಏಕೀಕರಣದ ಪರವಾಗಿ ಗುದ್ಲೆಪ್ಪ ಹಳ್ಳಿಕೇರಿ ಅವರು ತಮ್ಮ ಖಚಿತವಾದ ನಿಲುವು ವ್ಯಕ್ತಪಡಿಸಿದರು. ಫಜಲ್ ಅಲಿ ಕಮೀಷನ್ ವರದಿ ಕೂಡ ಭಾಷೆಯ ಆಧಾರದ ಮೇಲೆ ವಿಂಗಡಣೆ ಮಾಡುವುದರ ಪರವಾಗಿರಲಿಲ್ಲ. ಅದನ್ನು ವಿರೋಧಿಸಿ ಶಾಸಕ ಸ್ಥಾನ ತೊರೆದ ಅಂದಾನಪ್ಪ ದೊಡ್ಡಮೇಟಿ ಅವರು ಜಕ್ಕಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಹುಬ್ಬಳ್ಳಿ ಧಾರವಾಡದಲ್ಲಿ ತೀವ್ರವಾದ ಗಲಾಟೆ ಮುಂದುವರೆಯಿತು. ಆಗ ನಡೆದ ಉಪಚಚುನಾವಣೆಯಲ್ಲಿ ಕಾಂಗ್ರೆಸ್  ದಯನೀಯ ಸೋಲು ಕಂಡರೆ ಏಕೀಕರಣ ಪಕ್ಷಕ್ಕೆ ಏಕಪಕ್ಷೀಯ ಬೆಂಬಲ ವ್ಯಕ್ತವಾಯಿತು. ಕರ್ನಾಟಕದಲ್ಲಿ ಏಕೀಕರಣ ಚಳವಳಿಯ ಕಾವು ಏರುತ್ತಿರುವಾಗಲೇ ಆಂಧ್ರಪ್ರದೇಶದಲ್ಲಿ ಅಮರಣಾಂತ ಉಪವಾಸ ನಿರತ ಪೊಟ್ಟಿ ಶ್ರೀರಾಮುಲು ತೀವ್ರವಾಗಿ ಅಸ್ವಸ್ಥಗೊಂಡು ಅಸುನೀಗಿದರು. ಇದರಿಂದ ಪ್ರತಿಭಟನೆಯ ಸ್ವರೂಪವು ತಾರಕಕ್ಕೆ ಏರಿತು. ತಕ್ಷಣ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರವು ಭಾಷಾವಾರು ಪ್ರಾಂತ್ಯಗಳ ರಚನೆಗೆ ಅದರಲ್ಲೂ ವಿಶೇಷವಾಗಿ ‘ಮೈಸೂರು ರಾಜ್ಯ’ ಸ್ಥಾಪನೆಗೆ ಒಲವು ತೋರಿತು.
ಏಕೀಕರಣ ಚಳವಳಿಯು ಹುಟ್ಟಿಕೊಂಡಿದ್ದು ಉತ್ತರ ಕರ್ನಾಟಕದಲ್ಲಿ. ಅದಕ್ಕೆ ಕಾರಣರಾದವರು ‘ಕನ್ನಡದ ಕುಲಪುರೋಹಿತ’ ಎಂದೇ ಖ್ಯಾತರಾದ ಆಲೂರು ವೆಂಕಟರಾವ್ ಅವರು. ‘ಕರ್ನಾಟಕದ ಗತವೈಭವ’ (1812)ಕೃತಿಯ ಮೂಲಕ ಆಲೂರರು ಏಕೀಕರಣದ ಕನಸು ಕಂಡರು..ಹ. ದೇಶಪಾಂಡೆಯವರ ನೇತೃತ್ವದಲ್ಲಿ ಆರಂಭವಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು (1890) ಕನ್ನಡಪರ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಏಕೀಕರಣ ಚಳುವಳಿಯನ್ನು ಜೀವಂತವಾಗಿಟ್ಟಿತ್ತು. ಆಲೂರು ವೆಂಕಟರಾವ್ ಅವರ ನೇತೃತ್ವದಲ್ಲಿ ನಡೆದ 1907 ಮತ್ತು 1908ರಲ್ಲಿ ಏರ್ಪಡಿಸಿದ ಕನ್ನಡ ಲೇಖಕರ ಸಮಾವೇಶವು ಏಕೀಕರಣ ಚಳವಳಿಯು ಹರಳುಗಟ್ಟುವುದಕ್ಕೆ ಕಾರಣವಾಯಿತು. ವಿದ್ಯಾವರ್ಧಕ ಸಂಘದ ಹೋರಾಟವು ಅದೇ ಮಾದರಿಯ ಹಲವು ಸಂಸ್ಥೆಗಳ ಹುಟ್ಟಿಗೂ ಪ್ರೇರಣೆ ನೀಡಿತು. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು (1915), ಶಿವಮೊಗ್ಗದಲ್ಲಿ ಕರ್ನಾಟಕ ಸಂಘ (1916) ಹಾಗೂ ಕಾಸರಗೋಡಿನಲ್ಲಿ ಕರ್ನಾಟಕ ಸಮಿತಿ (1955)ಗಳು ಹುಟ್ಟಿಕೊಂಡು ಏಕೀಕರಣ ಚಳುವಳಿಯು ವ್ಯಾಪಕವಾಗಿ ಹರಡಲು, ಬೆಳೆಯಲು ತಮ್ಮ ಕೈಗೂಡಿಸಿದವು.
ಮಹಾತ್ಮಗಾಂಧಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ (1924) ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆ’ಯನ್ನು ಗಂಗೂಬಾಯಿ ಹಾನಗಲ್ ಪ್ರಸ್ತುತಪಡಿಸಿದ್ದರು. ಏಕೀಕರಣದ ನಿಲುವಿಗೆ ಅಧಿವೇಶನ ಅಧಿಕೃತ ಹಾಗೂ ವ್ಯಾಪಕ ರಾಜಕೀಯ ಬೆಂಬಲ ದೊರೆಯಿತು. ಅದರ ಫಲವಾಗಿ ಹುಟ್ಟಿಕೊಂಡ ‘ಏಕೀಕರಣ ಸಭಾ’ ನಂತರದ ದಿನಗಳಲ್ಲಿ ‘ಏಕೀಕರಣ ಸಂಘ’ವಾಗಿ ಪರಿವರ್ತನೆಗೊಂಡಿತು.
ಆಲೂರರು ಏಕೀಕರಣದ ಉದ್ದೇಶದಿಂದ ಆರಂಭಿಸಿದ ಸಾಂಸ್ಕೃತಿಕ ಹೋರಾಟವು ಕೇವಲ ಸಾಹಿತ್ಯ- ಸಾಂಸ್ಕೃತಿಕ ಚಳವಳಿಯಾಗಿ ಮಾತ್ರ ಉಳಿಯಲಿಲ್ಲ. ರಾಜಕೀಯ ನೇತಾರರೂ ಅದಕ್ಕೆ ಕೈಗೂಡಿಸಲು ಆರಂಭಿಸಿದರು. ಗುದ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಂಬಳಿ, ರಂಗರಾವ ದಿವಾಕರ್, ಎಸ್. ನಿಜಲಿಂಗಪ್ಪ, ಮಂಗಳವೇಢೆ ಶ್ರೀನಿವಾಸರಾವ್, ಕೌಜಲಗಿ ಶ್ರೀನಿವಾಸರಾವ್, ಕೆಂಗಲ್ ಹನುಮಂತಯ್ಯ, ಟಿ. ಮರಿಯಪ್ಪ, ಸಾಹುಕಾರ ಚೆನ್ನಯ್ಯ, ಎಚ್.ಕೆ. ವೀರನಗೌಡ, ಎಚ್. ಸಿದ್ದಯ್ಯ, ಬಿ.ಎ. ಕಕ್ಕಿಲ್ಲಾಯ, ಎಚ್.ಸಿ. ದಾಸಪ್ಪ ಮುಂತಾದವರು ಸಕ್ರಿಯವಾಗಿ ಪಾಲುಗೊಂಡಿದ್ದರು.
ಅಭಿವೃದ್ಧಿ ಹೊಂದಿದ ಹಳೇಮೈಸೂರು ಪ್ರಾಂತ್ಯದಲ್ಲಿ ಪ್ರಗತಿ ಕಾಣದ ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಪ್ರಾಂತ್ಯ ಸೇರುವುದಕ್ಕೆ ತಕರಾರುಗಳು ಕೂಡ ಕಾಣಿಸಿಕೊಂಡವು. ಉತ್ತರದ ಪ್ರದೇಶಗಳನ್ನು ಸೇರಿಸುವುದಕ್ಕೆ ತಕರಾರು ವ್ಯಕ್ತಪಡಿಸಿದ ಕೆಲವರು ಕನ್ನಡ ಮಾತನಾಡುವ ಎರಡು ರಾಜ್ಯಗಳ ಪ್ರಸ್ತಾಪ ಮಾಡಿದರು. ಇದರಲ್ಲಿ ಜಾತಿ ಸಮೀಕರಣವೂ ಸೇರಿದ್ದರಿಂದ ರಾಜಕೀಯ ಗೋಜಲು ಉಂಟಾಯಿತು. ಅದನ್ನು ಸರಿಪಡಿಸಲು ಮುಂದಾದವರು ಸಾಹಿತಿ-ಲೇಖಕರು. ಕನ್ನಡದ ಕಟ್ಟಾಳುವಿನಂತೆ ಓಡಾಡಿದ ಅ.ನ.ಕೃಷ್ಣರಾಯರ ಕೊಡುಗೆ ಅಮೂಲ್ಯ. ಉಳಿದ ಕನ್ನಡ ಲೇಖಕರು ಕೂಡ ಏಕೀಕರಣದ ಪರವಾದ ನಿಲುವೇ ಹೊಂದಿದ್ದು ಅವರ ಬರವಣಿಗೆ- ಸಾಹಿತ್ಯಕೃತಿಗಳ ಅಧ್ಯಯನದಿಂದ ಅರಿವಿಗೆ ಬರುತ್ತದೆ. ಬಿಎಂ ಶ್ರೀಕಂಠಯ್ಯ, ಕುವೆಂಪು, ಬೇಂದ್ರೆ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಜಯದೇವಿ ತಾಯಿ ಲಿಗಾಡೆ, ಶಿವರಾಮ ಕಾರಂತ, ಬೆಟಗೇರಿ ಕೃಷ್ಣಶರ್ಮ ಮುಂತಾದವರು ಬರವಣಿಗೆ ಹಾಗೂ ಉಪನ್ಯಾಸ, ಚಳವಳಿಯಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದರು, ಮಾತ್ರವಲ್ಲ ಚಳುವಳಿಗೆ ತಾತ್ವಿಕ ನೆಲೆಗಟ್ಟು ಒದಗಿಸಿಕೊಟ್ಟರು.
ಹೈದರಾಬಾದ್ ಪ್ರಾಂತ್ಯ ವಿಮೋಚನೆ (1948) ಸಂದರ್ಭದಲ್ಲಿ ಉಂಟಾದ ಹೋರಾಟದ ಪ್ರಜ್ಞೆಯು ಏಕೀಕರಣ ಚಳುವಳಿಯಲ್ಲಿಯೂ ಮುಂದುವರೆಯಿತು. ಆರ್.ವಿ.ಬಿಡಪ ಅವರ ನೇತೃತ್ವದಲ್ಲಿ ನಡೆದ ರೈಲುರೋಕೊ ಚಳವಳಿಯಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪರಮಪೂಜ್ಯ ಚೆನ್ನಬಸವ ಪಟ್ಟದ್ದೇವರು ಸಕ್ರಿಯವಾಗಿ ಪಾಲುಗೊಂಡಿದ್ದರು. ಪ್ರಭುರಾವ ಕಂಬಳಿವಾಲೆ, ಸರದಾರ ಶರಣಗೌಡ, ಭೀಮಣ್ಣ ಖಂಡ್ರೆ, ಅಣ್ಣಾರಾವ ಗಣಮುಖಿ, ಕಪಟರಾಳ ಕೃಷ್ಣರಾವ್, ವೀರಣ್ಣ ತಿಮ್ಮಾಜಿ, ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದರು. 
ಪ್ರಾದೇಶಿಕವಾಗಿ ಹಲವು ನಿಟ್ಟಿನಿಂದ ಒಗ್ಗೂಡಬೇಕು ಎಂಬ ಬಯಕೆಯು ಕೇವಲ ಭಾವನಾತ್ಮಕ ಸಂಗತಿ ಮಾತ್ರ ಆಗಿ ಉಳಿಯದೇ ಅದಕ್ಕೆ ಹೋರಾಟದ ಸ್ವರೂಪ ಕೊಟ್ಟು ಹೋರಾಡಿದ ಜೀವಗಳು ಹಲವು. ಸರಿ ಸುಮಾರು ನೂರು ವರ್ಷಗಳ ಕಾಲ ಏಕೀಕರಣ ಚಳವಳಿಯನ್ನು ಜೀವಂತವಾಗಿಟ್ಟ ನೂರಾರು ಮಹಾನ್ ಚೇತನಗಳ ಹೋರಾಟದ ಫಲವಾಗಿ ನವೆಂಬರ್ 1, 1956ರಂದು ಕನ್ನಡ ಭಾಷಿಕರೆಲ್ಲ ಒಂದೇ ಆಡಳಿತ ವ್ಯಾಪ್ತಿಗೆ ‘ಮೈಸೂರು’ ರಾಜ್ಯದ ಉದಯವಾಯಿತು. ‘ಕರ್ನಾಟಕ’ ಆಗುವ ಬೇಡಿಕೆ ಮಾತ್ರ ಮುಂದುವರೆಯಿತು. ಮುಖ್ಯಮಂತ್ರಿಗಳಾಗಿದ್ದ ದೇವರಾಜು ಅರಸು ಅವರು 1973ರಲ್ಲಿ ‘ಕರ್ನಾಟಕ’ ಎಂದು ನಾಮಕರಣ ಮಾಡುವುದರ ಮೂಲಕ ಏಕೀಕರಣದ ಹೋರಾಟವು ತಾತ್ವಿಕ ಅಂತ್ಯ ಕಂಡಿತು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು