ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಮುನ್ನಡೆ


ಬಳ್ಳಾರಿಯೂ ಸೇರಿದಂತೆ ಹೈದರಾಬಾದ್ ಕರ್ನಾಟಕ ಎಂದು ಗುರುತಿಸಲಾಗುವ ಗುಲ್ಬರ್ಗ ಕಂದಾಯ ವಿಭಾಗದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸಮೀಪದ ಸ್ಪರ್ಧಿಗಳಿಗಿಂತ ಮುಂದಿದೆ. ಒಂದು ಕಾಲಕ್ಕೆ ಕಾಂಗ್ರೆಸ್ ನ ಭದ್ರಕೋಟೆ ಎಂದೇ ಈ ಪ್ರದೇಶವನ್ನು ಗುರುತಿಸಲಾಗುತ್ತಿತ್ತು. ಇಡೀ ಕರ್ನಾಟಕವು ಕಾಂಗ್ರೇಸ್ಸೇತರ ಪಕ್ಷಗಳಿಗೆ ಮತ ಹಾಕಿದರೂ ಗುಲ್ಬರ್ಗ ವಿಭಾಗ ಮಾತ್ರ ಕಾಂಗ್ರೆಸ್ ನ ಪರವಾದ ನಿಲುವು ತಳೆಯುತ್ತಲೇ ಬಂದಿತ್ತು. ಅದಕ್ಕೆ ಸಾಮಾಜಿಕ, ಐತಿಹಾಸಿಕ ಕಾರಣಗಳೂ ಇವೆ ಎನ್ನುವುದು ಬೇರೆ ಮಾತು. ಕಳೆದ ಒಂದು ದಶಕದ ಅವಧಿಯಲ್ಲಿ ಬಳ್ಳಾರಿ ರಿಪಬ್ಲಿಕ್ ನ ಬೆಳವಣಿಗೆಗೆ ಕಾರಣವಾದ ಗಣಿಗಾರಿಕೆಯು ‘ಮಾಫಿಯಾ’ ಹಂತಕ್ಕೆ ಬೆಳೆದು ನಿಂತು ರಾಜ್ಯ ರಾಜಕಾರಣದ ದಿಕ್ಕುದೆಸೆಗಳನ್ನೇ ಬದಲಾಯಿಸಿತು. ಬಳ್ಳಾರಿ ಗಣಿದೊರೆಗಳ ಅಬ್ಬರ ರಾಜ್ಯದ ಗಡಿಯನ್ನೇ ಇಲ್ಲವಾಗಿಸುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬಳ್ಳಾರಿ ಸುತ್ತಲಿನ ಜಿಲ್ಲೆಗಳಲ್ಲಿಯೂ ತಮ್ಮ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದರು. ಅದೆಲ್ಲ ಹಳೆಯ ಕತೆ. ಬಳ್ಳಾರಿ ರಿಪಬ್ಲಿಕ್ ನ ದಿನಗಳಲ್ಲಿಯೂ ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ದಯನೀಯವಾದ ಸಾಧನೆಯನ್ನೇನು ಮಾಡಿರಲಿಲ್ಲ.
ಹೈಕದಲ್ಲಿ ಒಟ್ಟು ಆರು ಜಿಲ್ಲೆಗಳು ಮತ್ತು 41 ವಿಧಾನಸಭಾ ಕ್ಷೇತ್ರಗಳಿವೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು,ಕೊಪ್ಪಳ, ಬಳ್ಳಾರಿ. ಕಾಂಗ್ರೆಸ್ ಪ್ರಬಲವಾಗಿರುವ ಕಾರಣಕ್ಕಾಗಿ ಇಲ್ಲಿ ಕಾಂಗ್ರೆಸ್ ವರ್ಸಸ್ ಕಾಂಗ್ರೇಸ್ಸೇತರ ಎಂಬ ವಿಭಜನೆ ಸಹಜ. ಬಿಜೆಪಿಯು ತನ್ನ ಹಳೆಯ ಹುಲಿಗಳನ್ನು ಕೈ ಬಿಟ್ಟು ಹೊಸ ಪ್ರಯೋಗಕ್ಕೆ ಕೈ ಹಾಕುವ ಯಡವಟ್ಟು ಮಾಡಿಕೊಂಡಿದೆ. ಅದಕ್ಕೆ ಕೆಜೆಪಿಯ ಹಳೆ ಸಂಗಡಿಗರತ್ತ ರಾಜ್ಯ ಬಿಜೆಪಿ ಅಧ್ಯಕ್ಷ ಒಲವು ತೋರಿದ್ದೇ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತದೆ. ಅವರೀಗ ಬಂಡಾಯದ ಬಾವುಟ ಬೀಸಿ ಜೆಡಿಎಸ್ ನಿಂದ ಕಣಕ್ಕೆ ಇಳಿದಿದ್ದಾರೆ. ಅದು ಜೆಡಿಎಸ್ ಗೆ ಪ್ಲಸ್ ಪಾಯಿಂಟ್. ಹಿಂದೆ ಜೆಡಿಎಸ್ ನಿಂದ ಚುನಾಯಿತರಾಗಿದ್ದ ಕೆಲವರು ತಮ್ಮ ಪಕ್ಷ ತೊರೆದದ್ದರಿಂದ ‘ಖಾಲಿ’ ಸ್ಥಾನ ಉಂಟಾಗಿತ್ತು. ಬಿಜೆಪಿ ಸೃಷ್ಟಿಸಿದ ಅವಕಾಶದಿಂದ ಜೆಡಿಎಸ್ ತನ್ನ ನೆಲೆ ಕಂಡು ಕೊಳ್ಳುವುದಕ್ಕೆ ಕಾರಣವಾಗಿದೆ.
ಕರ್ನಾಟಕದ ನಕಾಶೆಯಲ್ಲಿ ತುತ್ತ ತುದಿಯಲ್ಲಿರುವ ಬೀದರ್ ಜಿಲ್ಲೆಯಲ್ಲಿ ಒಂದು ಪರಿಶಿಷ್ಟ ಜಾತಿಗೆ ಸೇರಿದ ಸ್ಥಾನವೂ ಸೇರಿದಂತೆ ಒಟ್ಟು ಆರು ವಿಧಾನ ಸಭಾ ಕ್ಷೇತ್ರಗಳಿವೆ. ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಸಾಹಿತ್ಯಕ ಚಳವಳಿಗೆ ನೆಲೆ-ನೆಲ ಒದಗಿಸಿದ ಬಸವ ಕಲ್ಯಾಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಚುನಾಯಿತರಾಗಿದ್ದ ಮಲ್ಲಿಕಾರ್ಜುನ ಖೂಬಾ ಪಕ್ಷ ತೊರೆದು ಬಿಜೆಪಿ ಸೇರಿ ಕಣಕ್ಕೆ ಇಳಿದಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಮತ್ತು ಹಿರಿಯ ನಾಯಕರು ಬಿಜೆಪಿ ತೊರೆದು ಜೆಡಿಎಸ್ ಜೊತೆ ಸೇರಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮತ್ತು ಬಿಜೆಪಿಯ ಪ್ರಮುಖ ಮತಬ್ಯಾಂಕ್ ಎಂದು ಪರಿಗಣಿಸಲಾಗುವ ಮರಾಠ ಸಮುದಾಯಕ್ಕೆ ಸೇರಿದ ಮಾಜಿ ಸಚಿವ ಪಿ.ಜಿ,ಆರ್. ಸಿಂಧ್ಯಾ ಅವರ ಸ್ಪರ್ಧೆಯಿಂದ ಚುನಾವಣಾ ಕಣಕ್ಕೆ ರಂಗು ಬಂದಿದೆ. ಮಾಜಿ ಸಚಿವ ಬಸವರಾಜ ಪಾಟೀಲ್ ಅಟ್ಟೂರು, ಮಾಜಿ ಶಾಸಕ ಮಾರುತಿರಾವ್ ಮೂಳೆ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾರೆ. ಕಾಂಗ್ರೆಸ್ ನಿಂದ ಎರಡನೇ ಬಾರಿಗೆ ಕಣಕ್ಕೆ ಇಳಿದಿರುವ ಕೋಲಿ-ಕಬ್ಬಲಿಗೆ ಸಮುದಾಯಕ್ಕೆ ಸೇರಿದ ಬಿ. ನಾರಾಯಣ್ ಅವರಿಗೆ ಸಾಂಪ್ರದಾಯಿಕ ಮತ ಬ್ಯಾಂಕ್ ಕೈ ಬಿಡದಿದ್ದರೆ ಗೆಲುವು ನಿಶ್ಚಿತ. ಲಿಂಗಾಯತ- ವೀರಶೈವ ವಿವಾದ, ಶಾಸಕ ಖೂಬಾ ಕಾರ್ಯವೈಖರಿ ಬಗೆಗಿನ ಅಸಮಾಧಾನ, ಅಲ್ಪಸಂಖ್ಯಾತರ ಮತಗಳ ಪ್ರಮಾಣ ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್ ಆಗಲಿದೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯಂತೆ ಕಂಡರೂ ನಿಜವಾದ ಸ್ಪರ್ಧೆ ಕಾಂಗ್ರೆಸ್- ಬಿಜೆಪಿ ಮಧ್ಯೆಯೇ ಏರ್ಪಡಲಿದೆ. ಜೆಡಿಎಸ್ ಪಕ್ಷವು ಬಿಜೆಪಿ ಎಷ್ಟು ಮತ್ತು ಯಾವ ಪ್ರಮಾಣದ ನಷ್ಟವನ್ನುಂಟು ಮಾಡುತ್ತದೆ ಎಂಬುದು ಕುತೂಹಲಕಾರಿ ಅಂಶ.
ಭಾಲ್ಕಿಯಲ್ಲಿ ಸಚಿವ ಈಶ್ವರ ಖಂಡ್ರೆ ಕಾಂಗ್ರೆಸ್ ನಿಂದ ಕಣಕ್ಕೆ ಇಳಿದಿದ್ದಾರೆ. ಅವರಿಗೆ ಪ್ರಬಲ ಎದುರಾಳಿಯಾಗಿದ್ದ ಬಿಜೆಪಿಯ ಪ್ರಕಾಶ್ ಖಂಡ್ರೆ ಅವರಿಗೆ ಟಿಕೇಟ್ ನಿರಾಕರಿಸಿರುವುದರಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಡಿ.ಕೆ. ಸಿದ್ರಾಮ ಈ ಬಾರಿ ಬಿಜೆಪಿ ಅಭ್ಯರ್ಥಿ. ತ್ರಿಕೋನ ಸ್ಪರ್ಧೆಯಲ್ಲಿ ಜೆಡಿಎಸ್ ನ ಪ್ರಕಾಶ್ ಖಂಡ್ರೆ ಅವರು ತೆಗೆದುಕೊಳ್ಳಲಿರುವ ಮರಾಠ ಮತಗಳು ಬಿಜೆಪಿಯ ಓಟಕ್ಕೆ ಅಡ್ಡಿಯನ್ನುಂಟು ಮಾಡಲಿವೆ. ಅಲ್ಪಸಂಖ್ಯಾತರ ಮತಗಳನ್ನು ತನ್ನ ಜೊತೆಗೆ ಇಟ್ಟುಕೊಳ್ಳಲು ಕಾಂಗ್ರೆಸ್ ಗೆ ಸಾಧ್ಯವಾಗದೇ ಇರುವ ಸಂದರ್ಭದಲ್ಲಿ ಮಾತ್ರ ಸಂಕಷ್ಟಕ್ಕೆ ಸಿಲುಕಲಿದೆ.
ಹುಮನಾಬಾದ್ ಕ್ಷೇತ್ರದಲ್ಲಿ ಹಾಲಿ ಶಾಸಕ ರಾಜಶೇಖರ ಪಾಟೀಲ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಪುನರಾಯ್ಕೆ ಬಯಸಿ ಕಣಕ್ಕೆ ಇಳಿದಿದ್ದಾರೆ. ಹಿಂದೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲಿನ ರುಚಿ ಉಣಿಸಿದ್ದು ನಂತರ ಜೆಡಿಎಸ್ನ ರಾಜ್ಯ ಅಧ್ಯಕ್ಷರೂ ಆದ ಮಾಜಿ ಸಚಿವ ಮೆರಾಜುದ್ದೀನ್ ಪಟೇಲ್. ಅವರ ಸಹೋದರ ನಸೀಮ್ ಪಟೇಲ್ ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿಯಿಂದ ಅಷ್ಟೇನೂ ಪ್ರಬಲವಲ್ಲದ ಸುಭಾಷ ಕಲ್ಲೂರು ಕಣಕ್ಕೆ ಇಳಿದ್ದಾರೆ. ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳು ತೀರಾ ಕಡಿಮೆ. ಆದಾಗ್ಯೂ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಅದರ ಲಾಭ ಜೆಡಿಎಸ್ ಗೆ ದೊರೆಯುತ್ತದೆ. ನೇರ ಹಣಾಹಣಿಯಲ್ಲಿ ಕಾಂಗ್ರೆಸ್ ಅನ್ನು ಮಣಿಸುವುದು ಕಷ್ಟ.
ಸತತ ಎರಡು ಬಾರಿ ಶಾಸಕರಾಗಿ ಔರಾದ್ ಮೀಸಲು ಕ್ಷೇತ್ರದಿಂದ ಆಯ್ಕೆ ಆಗಿರುವ ಪ್ರಭು ಚವ್ಹಾಣ್ ಈ ಬಾರಿಯೂ ಬಿಜೆಪಿ ಅಭ್ಯರ್ಥಿ. ಅವರ ಗೆಲುವಿನ ಓಟಕ್ಕೆ ತಡೆ ಒಡ್ಡಲು ಇದ್ದ ಅವಕಾಶವನ್ನು ಹಿರಿಯ ನಿವೃತ್ತ ಅಧಿಕಾರಿ ಭೀಮಸೇನರಾವ್ ಶಿಂಧೆ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಕಾಂಗ್ರೆಸ್ ಕೈ ಚೆಲ್ಲಿದೆ. ಇಲ್ಲಿ ಜೆಡಿಎಸ್ ನದ್ದು ನಾಮಕಾವಸ್ತೆ ಸ್ಪರ್ಧೆ.
ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ನಿಧನದ ನಂತರ ತೆರವಾಗಿದ್ದ ಬೀದರ್ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ರಹೀಮ್ ಖಾನ್ ಚುನಾಯಿತರಾಗಿದ್ದರು. ಉಪಚುನಾವಣೆಯಲ್ಲಿ ಸ್ಪರ್ಧಾ ಕಣಕ್ಕೆ ಇಳಿಯಲು ಹಿಂದೇಟು ಹಾಕಿದ್ದ ಗುರುಪಾದಪ್ಪ ಪುತ್ರ ಈಗ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ನೇರ ಹಣಾಹಣಿಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿ ಇರುವಂತೆ ಕಾಣಿಸುವುದಕ್ಕೆ ಕಾರಣ ಈ ಕ್ಷೇತ್ರದಲ್ಲಿ ಇರುವ ‘ಅಹಿಂದ’ ಮತಗಳೇ ಕಾರಣ.
ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕರ್ನಾಟಕ ಮಕ್ಕಳ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅಶೋಕ ಖೇಣಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಅವರ ಪ್ರಬಲ ಎದುರಾಳಿಯಾಗಿ ಜೆಡಿಎಸ್ ನ ಮಾಜಿ ಸಚಿವ ಬಂಡೆಪ್ಪಾ ಕಾಶೆಂಪೂರ್ ಕಣಕ್ಕೆ ಇಳಿದಿದ್ದಾರೆ. ಈ ಉಭಯರ ನಡುವ ನಡೆದ ಕಳೆದ ಚುನಾವಣೆಯ ಕದನದಲ್ಲಿ ಕಾಂಗ್ರೆಸ್, ಬಿಜೆಪಿ, ಕೆಜೆಪಿಗಳು ದಿಕ್ಕಾ ಪಾಲಾಗಿ ಹೋಗಿದ್ದವು. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಶೈಲೇಂದ್ರ ಬೆಲ್ದಾಳೆ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿ. ಸಂಪನ್ಮೂಲದ ಕೊರತೆ ಬಿಟ್ಟರೆ ಬಂಡೆಪ್ಪಾ ಕಾಶೆಂಪೂರ್ ಅವರಿಗೆ ಹಿನ್ನಡೆಯಾಗಲು ಕಾರಣಗಳೇ ಇಲ್ಲ. ಸಜ್ಜನ ರಾಜಕಾರಣಿ ಬಂಡೆಪ್ಪಾ ಕಾಶೆಂಪೂರ್ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿಲು ಖೇಣಿಯವರು ಎಷ್ಟು ಪ್ರಮಾಣದ ತಡೆ ಒಡ್ಡುತ್ತಾರೆಯೋ ಕಾದು ನೋಡಬೇಕು.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ಮೂರು ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರಗಳು ಸೇರಿದಂತೆ ಒಟ್ಟು ಒಂಬತ್ತು ಸ್ಥಾನಗಳಿವೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಸೇಡಂನಿಂದ ಪುನರಾಯ್ಕೆ ಬಯಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಅವರ ಎದುರಾಳಿಯಾಗಿ ಬಿಜೆಪಿಯ ಪ್ರಭಾಕರ ತೇಲ್ಕೂರ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮುಕ್ರಂಖಾನ್ ಈ ಬಾರಿ ಕಾಂಗ್ರೆಸ್ ಸೇರಿ ಶರಣಪ್ರಕಾಶ್ ಪರ ಕೆಲಸ ಮಾಡುತ್ತಿದ್ದಾರೆ. ಒಂದು ಕಾಲಕ್ಕೆ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿದ್ದ ಬಸವರಾಜ ಪಾಟೀಲ್ ಸೇಡಂ ಅವರ ‘ಮೌನ’ ಕಾಂಗ್ರೆಸ್ ಗೆ ವರದಾನ. ನಾಲ್ಕು ಬಾರಿ ಸೋತ ‘ಅನುಕಂಪ’ ಮಾತ್ರ ತೇಲ್ಕೂರ್ ಅವರ ಸ್ಪರ್ಧೆಯನ್ನು ಜೀವಂತವಾಗಿ ಇಟ್ಟಿದೆ. ಲಿಂಗಾಯತ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಕಾರಣಕ್ಕಾಗಿ ವೀರಶೈವರು ತಕರಾರು ಮಾಡುತ್ತಿರುವುದು ಶರಣಪ್ರಕಾಶ್ ಅವರು ಎದುರಿಸಲಿರುವ ಸವಾಲು.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿಂಚೋಳಿ ಮೀಸಲು ಕ್ಷೇತ್ರದಲ್ಲಿ ಡಾ. ಉಮೇಶ್ ಜಾಧವ ಅವರು ಪುನರಾಯ್ಕೆ ಬಯಸಿ ಕಾಂಗ್ರೆಸ್ ನಿಂದ ಕಣಕ್ಕೆ ಇಳಿದಿದ್ದಾರೆ. ವೃತ್ತಿಯಿಂದ ವೈದ್ಯರಾಗಿರುವ ಉಮೇಶ್ ಅವರು ತಮ್ಮ ಜನಪರ ಕಾಳಜಿ, ಮತ್ತು ಕೆಲಸಗಳಿಂದಾಗಿ ಕ್ಷೇತ್ರದಲ್ಲಿ ಜನಪ್ರಿಯರಾಗಿರುವವರು. ಶಾಸಕರಾಗಿ ಆಯ್ಕೆಯಾದ ನಂತರವೂ ತಮ್ಮ ವರ್ಚಸ್ಸು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಅವರ ವಿಶೇಷ. ಬಿಜೆಪಿಯಿಂದ ಸ್ಪರ್ಧಿಸಿರುವ ಸುನೀಲ್ ವಲ್ಯಾಪುರೆ ಅವರು ಉಮೇಶ್ ಜಾಧವ ಅವರ ಜನಪ್ರಿಯತೆಯ ಮುಂದೆ ಎಷ್ಟು ಕಾಲ ಟೀಕಾಯಿಸುತ್ತಾರೋ ನೋಡಬೇಕು.
ಮತ್ತೊಂದು ಮೀಸಲು ಕ್ಷೇತ್ರ ಚಿತ್ತಾಪುರ. ಹಾಲಿ ಸಚಿವ ಪ್ರಿಯಾಂಕ ಖರ್ಗೆ ಅವರು ಕಾಂಗ್ರೆಸ್ ನಿಂದ ಸ್ಪರ್ಧಾ ಕಣದಲ್ಲಿದ್ದಾರೆ. ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ತೆರವಾದ ಸ್ಥಾನವನ್ನು ಯಶಸ್ವಿಯಾಗಿ ತುಂಬಿರುವ ಪ್ರಿಯಾಂಕ ಅವರು ಕಳೆದ ಐದು ವರ್ಷದ ಅವಧಿಯಲ್ಲಿ ಚಿತ್ತಾಪುರ ಕಂಡು ಕೇಳರಿಯದಷ್ಟು ಅನುದಾನ ಹರಿದು ಬರುವಂತೆ ಮಾಡಿದ್ದಾರೆ. ಕೇವಲ ಅಷ್ಟು ಮಾತ್ರವಲ್ಲದೆ ಅದು ಸದುಪಯೋಗ ಆಗುವಂತೆಯೂ ನೋಡಿಕೊಂಡಿದ್ದಾರೆ. ಭರವಸೆ ಮೂಡಿಸಿರುವ ಯುವನಾಯಕನಾಗಿರುವ ಪ್ರಿಯಾಂಕ ಅವರಿಗೆ ಎದುರಾಳಿಯಾಗಿ ಬಿಜೆಪಿಯಿಂದ ವಾಲ್ಮಿಕಿ ನಾಯಕ್ ಕಣಕ್ಕೆ ಇಳಿದಿದ್ದಾರೆ. ತೀವ್ರ ಹಣಾಹಣಿ ನಡೆದ ಉಪಚುನಾವಣೆಯಲ್ಲಿ ಪ್ರಿಯಾಂಕ ಅವರನ್ನು ಹಣಿದಿದ್ದ ವಾಲ್ಮಿಕಿ ನಾಯಕ್ ಅವರು ಮೊದಲಿನ ವರ್ಚಸ್ಸು ಉಳಿಸಿಕೊಂಡಿಲ್ಲ. ಪಕ್ಷದ ಭಾರೀ ಬೆಂಬಲವೂ ಜೊತೆಗಿಲ್ಲ.
ಗುಲ್ಬರ್ಗ ಗ್ರಾಮೀಣ ಕೂಡ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರ. ಬಿಜೆಪಿಯ ಪ್ರಮುಖ ನಾಯಕ ಮಾಜಿ ಸಚಿವ ರೇವುನಾಯಕ್ ಬೆಳಮಗಿ ಅವರಿಗೆ ಟಿಕೆಟ್ ನಿರಾಕರಿಸಿರುವುದರಿಂದ ಅವರು ಜೆಡಿಎಸ್ ನಿಂದ ಕಣಕ್ಕೆ ಇಳಿದಿದ್ದಾರೆ. ಸಂಪನ್ಮೂಲದ ಥೈಲಿ ಹಿಡಿದುಕೊಂಡು ‘ಮೇಡಂ’ ಅವರ ಮೂಲಕ ಟಿಕೆಟ್ ಪಡೆದು ಬಂದಿರುವ ಬಿಜೆಪಿಯ ಬಸವರಾಜ ಮತ್ತಿಮೂಡ ಬಿಜೆಪಿ ಅಭ್ಯರ್ಥಿ. ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಿ. ರಾಮಕೃಷ್ಣ ಅವರ ಪುತ್ರ ವಿಜಯಕುಮಾರ ಕಾಂಗ್ರೆಸ್ ಅಭ್ಯರ್ಥಿ. ತ್ರಿಕೋನ ಸ್ಪರ್ಧೆ ಇರುವ ಕ್ಷೇತ್ರದಲ್ಲಿ ಟಿಕೆಟ್ ವಂಚಿತನಾಗಿರುವ ಕಾರಣಕ್ಕೆ ರೇವುನಾಯಕ್ ಅವರು ತಮಗಿರುವ ಸಿಂಪಥಿ ಮತ್ತು ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಶಕ್ತಿಯಿಂದ ಮುಂಚೂಣಿಯಲ್ಲಿದ್ದಾರೆ. ಸಂಪನ್ಮೂಲದ ಬಲದಿಂದ ಚುನಾವಣೆಯ ಎದುರಿಸುತ್ತಿರುವ ಬಿಜೆಪಿ ಅಭ್ಯರ್ಥಿಯ ಮುಂದೆ ಕಾಂಗ್ರೆಸ್ ಸ್ವಲ್ಪ ಕಳೆಗುಂದಿದಂತಿದೆ.
ಗುಲ್ಬರ್ಗ ಉತ್ತರ ಕ್ಷೇತ್ರದಲ್ಲಿ ಮಾಜಿ ಸಚಿವ ಕಮರುಲ್ ಇಸ್ಲಾಮ್ ಅವರ ಪತ್ನಿ ಕೆ. ಫಾತಿಮಾ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ನಿಂದ ನಾಸೀರ್ ಹುಸೇನ್, ಬಿಜೆಪಿಯಿಂದ ಚಂದ್ರಕಾಂತ ಪಾಟೀಲ್ ಸ್ಪರ್ಧಾಕಣದಲ್ಲಿದ್ದಾರೆ. ಅನುಕಂಪದ ಅಲೆ ಮತ್ತು ಕಮರುಲ್ ಮತಬ್ಯಾಂಕ್ ಫಾತಿಮಾ ಅವರ ಬೆಂಬಲಕ್ಕೆ ಇದೆ. ಕಮರುಲ್ ಅವರನ್ನು ಸಮರ್ಥವಾಗಿ ಎದುರಿಸಿದ್ದ ನಾಸೀರ್ ಜೆಡಿಎಸ್ ನ ಆಶಾಕಿರಣ. ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿಗಳಿಬ್ಬರೂ ಅಲ್ಪಸಂಖ್ಯಾತರಾಗಿರುವ ಕಾರಣದ ಮತ ವಿಭಜನೆಯ ಲಾಭ ತನಗಾಗಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಶೇ. 49 ರಷ್ಟು ಮತದಾರರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೇ ಇರುವುದು ಈ ಕ್ಷೇತ್ರದ ವಿಶೇಷ.
ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ನಿಂದ ಧರಂಸಿಂಗ್ ಅವರ ಬಲಗೈ ಭಂಟ ಎಂದು ಗುರುತಿಸಲಾಗುವ ಅಲ್ಲಮಪ್ರಭು ಪಾಟೀಲ್ ಸ್ಪರ್ಧಿಸಿದ್ದಾರೆ. ಜೆಡಿಎಸ್ ನಿಂದ ಬಸವರಾಜ ದಿಗ್ಗಾವಿ ಕಣದಲ್ಲಿದ್ದಾರೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಇರುವಂತೆ ಕಂಡರೂ ನೇರ ಹಣಾಹಣಿ ಇರುವುದು ಕಾಂಗ್ರೆಸ್- ಬಿಜೆಪಿ ನಡುವೆಯೇ. ಜೆಡಿಎಸ್ ತೆಗೆದುಕೊಳ್ಳುವ ಮತಗಳು ಬಿಜೆಪಿಯ ಗೆಲುವಿಗೆ ಅಡ್ಡಿಯುಂಟು ಮಾಡಬಲ್ಲವು. ಆದರೆ, ಅದರ ತೀವ್ರತೆ ಹೆಚ್ಚಾದಷ್ಟು ಅದರ ಲಾಭ ಕಾಂಗ್ರೆಸ್ ಗೆ ದೊರೆಯಲಿದೆ. ಬಿಜೆಪಿಯು ಮುಂಚೂಣಿಯಲ್ಲಿದೆ. ಕಾಂಗ್ರೆಸ್ ತನ್ನ ಕರಾಮತ್ತು ತೋರಿಸಿದರೆ ಅದು ಅಚ್ಚರಿಯೇ ಸರಿ.
ಜೇವರ್ಗಿ ಮತಕ್ಷೇತ್ರದಲ್ಲಿ ಹಾಲಿ ಶಾಸಕ ಅಜಯ್ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಾ ಕಣದಲ್ಲಿದ್ದಾರೆ. ಇದು ಅವರ ಎರಡನೇ ಪ್ರಯತ್ನ. ಅವರಿಗೆ ಪ್ರಬಲ ಎದುರಾಳಿಯಾಗಿ ಜೆಡಿಎಸ್ ನ ಕೇದಾರಲಿಂಗಯ್ಯ ಹಿರೇಮಠ ಅವರು ತೀವ್ರ ಪೈಪೋಟಿ ಒಡ್ಡುತ್ತಿದ್ದಾರೆ. ಬಿಜೆಪಿಯ ಮಾಜಿ ಶಾಸಕ ದೊಡ್ಡಪ್ಪಗೌಡ ನರಬೋಳಿ ಅವರು ಕೂಡ ಸ್ಪರ್ಧೆಯಲ್ಲಿದ್ದಾರೆ. ತ್ರಿಕೋನ ಸ್ಪರ್ಧೆಯಲ್ಲಿ ಪೈಪೋಟಿ ಇರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ. ಸಂಪನ್ಮೂಲ ಹರಿದಾಡುವ ಕಾರಣಕ್ಕಾಗಿ ‘ಸೂಕ್ಷ್ಮ’ ಕ್ಷೇತ್ರ ಪರಿಗಣಿಸಲಾಗುವ ಜೇವರ್ಗಿಯಲ್ಲಿ ‘ಅದು’ ನಿರ್ಣಾಯಕ ಪಾತ್ರ ವಹಿಸಿದರೆ ‘ಕಾಂಗ್ರೆಸ್’ನ ಗೆಲುವಿನ ಓಟವನ್ನು ತಡೆಯಲು ಸಾಧ್ಯವಿಲ್ಲ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಅಫಜಲಪುರ ಮತಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಎಂ.ವೈ. ಪಾಟೀಲ್ ಎದುರಾಳಿ. ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಗತ ಸ್ಪರ್ಧೆಯೇ ಮುಖ್ಯ. ಉಭಯರ ನಡುವೆ ನೇರ ಹಣಾಹಣಿ. ಎಂ.ವೈ. ಪಾಟೀಲ್ ತಮ್ಮ ಸಮುದಾಯದ ಮತಗಳ ಜೊತೆಗೆ ಪಾರಂಪರಿಕ ಕಾಂಗ್ರೆಸ್ ಮತ ಬ್ಯಾಂಕ್ ಸೇರಿರುವುದರಿಂದ ಮೇಲುಗೈ ಸಾಧಿಸಿದ್ದಾರೆ. ತೋಳ್ಬಲ ಮತ್ತು ಸಂಪನ್ಮೂಲದ ಭರಾಟೆಯು ತೀವ್ರವಾದರೆ ಮಾತ್ರ ಮಾಲೀಕಯ್ಯ ಅವರು ಗೆಲುವಿನ ನಗೆ ಬೀರಬಹುದು. ಖರ್ಗೆ ಅವರು ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗುತ್ತಿದೆ.
ಅಳಂದ ಕ್ಷೇತ್ರದಲ್ಲಿ ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬಿ.ಆರ್. ಪಾಟೀಲ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ. ಅವರ ಪ್ರಬಲ ಎದುರಾಳಿ ಸುಭಾಷ ಗುತ್ತೇದಾರ ಅವರು ಜೆಡಿಎಸ್ ತೊರೆದು ಬಿಜೆಪಿಯಿಂದ ಸ್ಪರ್ಧಾಕಣಕ್ಕೆ ಇಳಿದಿದ್ದಾರೆ. ಈ ಕ್ಷೇತ್ರದಲ್ಲಿಯೂ ಕೂಡ ಪಕ್ಷದ ಹೆಸರಿನಲ್ಲಿ ಚುನಾವಣೆ ನಡೆಯುವುದು ಕಡಿಮೆ. ಏನಿದ್ದರೂ ಉಭಯ ನಾಯಕರ ನಡುವಿನ ಪೈಪೋಟಿಯೇ ಸ್ಪರ್ಧೆಗೆ ರಂಗು ತರುತ್ತದೆ. ಬಿ.ಆರ್. ಪಾಟೀಲ್ ಅವರಿಗೆ ಕಾಂಗ್ರೆಸ್ ಮತಗಳು ಸೇರ್ಪಡೆ ಆಗಿರುವುದು ಪ್ಲಸ್ ಪಾಯಿಂಟ್. ಹಾಗೆಯೇ ಸುಭಾಷ ಗುತ್ತೇದಾರ್ ಅವರ ಮತಗಳ ಬುಟ್ಟಿಯಲ್ಲಿದ್ದ ಅಲ್ಪಸಂಖ್ಯಾತರ ಮತಗಳು ಬಿಜೆಪಿಯ ಕಾರಣಕ್ಕಾಗಿ ದೂರ ಸರಿದರೆ ಬಿ.ಆರ್. ಮತ್ತೊಮ್ಮೆ ತಮ್ಮ ಗಾಂಧಿ ಟೋಪಿ ಸರಿ ಮಾಡಿಕೊಳ್ಳಬಹುದು.
ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಶಹಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಸ್ಪರ್ಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಗುರು ಪಾಟೀಲ್ ಶಿರವಾಳ ಈ ಬಾರಿ ಬಿಜೆಪಿ ಅಭ್ಯರ್ಥಿ. ಶರಣಬಸಪ್ಪ ಅವರಿಗೆ ಅವರದೇ ಸಮುದಾಯಕ್ಕೆ ಸೇರಿದ ಅಮೀನ್ ರೆಡ್ಡಿ ಜೆಡಿಎಸ್ ನಿಂದ ಸ್ಪರ್ಧಿಸಿರುವುದು ಅಡ್ಡಿ ಆಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಅದು ಸತ್ಯಸಂಗತಿಯೇನಲ್ಲ. ನಿಜವಾದ ಪೈಪೋಟಿ ಇರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ. ಕೆಜೆಪಿಯ ಕಾರಣಕ್ಕಾಗಿ ಗುರುಪಾಟೀಲ್ ಪಡೆದಿದ್ದ ಅಲ್ಪಸಂಖ್ಯಾತರ ಮತಗಳು ಮತ್ತು ತಂದೆಯ ಸಾವಿನ ಕಾರಣದಿಂದ ಉಂಟಾಗಿದ್ದ ‘ಅನುಕಂಪ’ ಗೆಲುವಿನ ದಡ ಸೇರಿಸಿದ್ದವು. ಈಗ ಅವೆರಡೂ ಇಲ್ಲದಿರುವುದು ಗುರು ಪಾಟೀಲ್ ಅವರ ಸ್ಪರ್ಧೆಯನ್ನು ಕಠಿಣಗೊಳಿಸಿದೆ. ಶರಣಬಸಪ್ಪ ದರ್ಶನಾಪುರ ಮತ್ತೊಮ್ಮೆ ಗೆಲುವಿನ ನಗೆ ಬೀರಿದರೆ ಅಚ್ಚರಿಯೇನಿಲ್ಲ.
ಗುರುಮಿಟಕಲ್ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಬಾಬುರಾವ ಚಿಂಚನಸೂರು ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಚಿಂಚನಸೂರು ಅವರ ಕೋಲಿ-ಕಬ್ಬಲಿಗೆ ಸಮುದಾಯಕ್ಕೆ ಸೇರಿದ ಸಾಯಿಬಣ್ಣ ಬೋರಬಂಡ ಕಣದಲ್ಲಿದ್ದಾರೆ. ಜೆಡಿಎಸ್ ನಿಂದ ನಾಗಣಗೌಡ ಕಂದಕೂರ ಕಾಂಗ್ರೆಸ್- ಬಿಜೆಪಿಗೆ ತೀವ್ರ ಪೈಪೋಟಿ ಒಡ್ಡುತ್ತಿದ್ದಾರೆ. ತ್ರಿಕೋನ ಸ್ಪರ್ಧೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸುವ ಸಾಧ್ಯತೆಗಳೇ ಹೆಚ್ಚು.
ಯಾದಗಿರಿ ಕ್ಷೇತ್ರದಿಂದ ಮಾಜಿ ಸಚಿವ ಡಾ. ಮಲಕರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ ಅವರ ಎದುರಾಳಿಯಾಗಿ ಬಿಜೆಪಿ ಅಭ್ಯರ್ಥಿಯಾಗಿ ವೆಂಕಟರೆಡ್ಡಿ ಮುದ್ನಾಳ ಕಣದಲ್ಲಿದ್ದಾರೆ. ನೇರ ಹಣಾಹಣಿ ಇರುವ ಕ್ಷೇತ್ರದಲ್ಲಿ ‘ವಯಸ್ಸು’ ಮಲಕರೆಡ್ಡಿ ಅವರಿಗಿರುವ ಸಮಸ್ಯೆ. ಉಭಯರೂ ಒಂದೇ ಸಮುದಾಯಕ್ಕೆ ಸೇರಿದವರು. ಬಿಜೆಪಿಯಿಂದ ವೀರಬಸವಂತರೆಡ್ಡಿ ಅವರಿಗೆ ಟಿಕೆಟ್ ನಿರಾಕರಿಸಿರುವುದು ಅಚ್ಚರಿ ಮೂಡಿಸಿದೆ. ಅದರ ಲಾಭ ಕಾಂಗ್ರೆಸ್ ಪಡೆಯಬಹುದೇ?
ಸುರಪುರ ಮತಕ್ಷೇತ್ರದಲ್ಲಿ ಹಾಲಿ ಶಾಸಕ ವೆಂಕಟಪ್ಪ ನಾಯಕ್ ಅವರಿಗೆ ಬಿಜೆಪಿಯ ನರಸಿಂಹ ನಾಯಕ (ರಾಜುಗೌಡ) ಎದುರಾಳಿಯಾಗಿದ್ದಾರೆ. ನೇರ ಹಣಾಹಣಿ ಇರುವ ಕ್ಷೇತ್ರದಲ್ಲಿ ತೀವ್ರ ಪೈಪೋಟಿ – ಪರಸ್ಪರ ಕೈ ಮಿಲಾಯಿಸುವ ಹಂತ ತಲುಪುವುದು ಸಹಜ ಸಂಗತಿ. ಜೆಡಿಎಸ್ ನಿಂದ ಸುರಪುರ ಅರಸು ಮನೆತನಕ್ಕೆ ಸೇರಿದ ಕೃಷ್ಣಪ್ಪ ನಾಯಕ ಸ್ಪರ್ಧಿಸಿದ್ದಾರೆ. ಸಮಬಲರ ನಡುವಿನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿರುವಂತೆ ಭಾಸವಾಗುತ್ತದೆ.
ರಾಯಚೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಒಂದು ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಎರಡು ಕ್ಷೇತ್ರಗಳು ಸೇರಿದಂತೆ ಒಟ್ಟು ಏಳು ಸ್ಥಾನಗಳಿವೆ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ  ಬಿಜೆಪಿಯಿಂದ ತಿಪ್ಪರಾಜು ಹವಾಲ್ದಾರ ಕಾಂಗ್ರೆಸ್ ನಿಂದ ಬಸನಗೌಡ ದದ್ದಲ ಮತ್ತು ಜೆಡಿಎಸ್ ನಿಂದ ರವಿ ಪಾಟೀಲ್ ಸ್ಪರ್ಧಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಯಲ್ಲಿ ಬಸನಗೌಡರಿಗೆ ಹಿನ್ನಡೆಯಾಗುವ ಸಾಧ್ಯತೆಗಳು ತೀರಾ ಕಡಿಮೆ.
ರಾಯಚೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸೈಯದ್ ಯಾಸೀನ್ ಮತ್ತು ಬಿಜೆಪಿಯಿಂದ ಶಿವರಾಜ್ ಪಾಟೀಲ್ ಸ್ಪರ್ಧಿಸಿದ್ದಾರೆ. ಜೆಡಿಎಸ್ ನ ಮಹಾಂತೇಶ ಪಾಟೀಲ್ ಅವರು ಬಿಜೆಪಿ ಅಭ್ಯರ್ಥಿಯ ಓಟಕ್ಕೆ ಅಡ್ಡಗಾಲು ಹಾಕಲಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮಾನ್ವಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಹಂಪಯ್ಯ ನಾಯಕ್, ಬಿಜೆಪಿಯಿಂದ ಶರಣಯ್ಯ ಗುಡದಿನ್ನಿ ಸ್ಪರ್ಧಿಸಿದ್ದಾರೆ. ಜೆಡಿಎಸ್ ನ ರಾಜಾ ವೆಂಕಟಪ್ಪ ನಾಯಕ ಉಭಯರಿಗೂ ಪೈಪೋಟಿ ಒಡ್ಡಲಿದ್ದಾರೆ. ಗೆಲುವಿನ ನಗೆ ಬೀರುವ ಅವಕಾಶ ಇರುವುದು ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿಗೆ ಮಾತ್ರ.
ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಶಿವನಗೌಡ ನಾಯಕ್ ಮತ್ತು ಅವರಿಗೆ ಎದುರಾಳಿಯಾಗಿ ಸೋದರ ಮಾವ ರಾಜಶೇಖರ ನಾಯಕ್ ಸ್ಪರ್ಧೆಯಲ್ಲಿದ್ದಾರೆ. ಮಾವ ಅಳಿಯರಿಬ್ಬರೂ ಪರಸ್ಪರ ಸೋಲು-ಗೆಲುವಿನ ರುಚಿ ಅನುಭವಿಸಿದ್ದಾರೆ. ಈ ಬಾರಿ ಗೆಲುವು ಸಾಧಿಸುವುದಕ್ಕಾಗಿ ಉಭಯರಿಗೂ ಜೆಡಿಎಸ್ ನ ವೆಂಕಟೇಶ್ ಪೂಜಾರ ಅಡ್ಡಿಯಾಗಿದ್ದಾರೆ. ಶಿವನಗೌಡ ಮತ್ತೆ ವಿಧಾನಸಭೆಯ ಮೆಟ್ಟಿಲು ಹತ್ತಿದರೆ ಅಚ್ಚರಿಯೇನಿಲ್ಲ.
ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾಗಿರುವ ಲಿಂಗಸೂರಿನಲ್ಲಿ ಜೆಡಿಎಸ್ ನಿಂದ ಚುನಾಯಿತರಾಗಿ ಪಕ್ಷ ತೊರೆದು ಬಿಜೆಪಿ ಸೇರಿರುವ ಮಾನಪ್ಪ ವಜ್ಜಲ್ ಕಣದಲ್ಲಿದ್ದಾರೆ. ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್ ದುರ್ಗಪ್ಪ ಹೊಳಗೇರಿ ಮತ್ತು ಜೆಡಿಎಸ್ ನ ಸಿದ್ದು ಬಂಡಿ ಕಣದಲ್ಲಿದ್ದಾರೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾನಪ್ಪ ವಜ್ಜಲ್ ಎದುರಿಸುತ್ತಿರುವ ಪ್ರತಿರೋಧ ನೋಡಿದರೆ ಅವರ ಹಾದಿಯ ದುರ್ಗಮವಾಗಿರುವುದು ಅರಿವಿಗೆ ಬರುತ್ತದೆ.
ಸಿಂಧನೂರು ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಂಪನಗೌಡ ಬಾದರ್ಲಿ ಮತ್ತು ಬಿಜೆಪಿಯ ಶೇಷಗಿರಿರಾವ್, ಜೆಡಿಎಸ್ ನ ವೆಂಕಟರಾವ್ ನಾಡಗೌಡ ಸ್ಪರ್ಧಾ ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿರುವುದು ಕಂಡು ಬರುತ್ತಿದೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಮಸ್ಕಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರತಾಪಗೌಡ ಪಾಟೀಲ್, ಬಿಜೆಪಿಯಿಂದ ಬಸನಗೌಡ ತುರುವೀಹಾಳ್ ಮತ್ತು ಜೆಡಿಎಸ್ ನಿಂದ ರಾಜಾ ಸೋಮನಾಥ ನಾಯಕ್ ಸ್ಪರ್ಧಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಸ್ಪರ್ಧೆಯಲ್ಲಿ ಕಾಂಗ್ರೆಸ್ ನ ಅಭ್ಯರ್ಥಿಯ ಪರವಾದ ಮಾತುಗಳು ಕೇಳಿಬರುತ್ತಿವೆ.

ಕೊಪ್ಪಳ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ಕುಷ್ಟಗಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಮರೇಗೌಡ ಬಯ್ಯಾಪುರ, ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ್ ಮತ್ತು ಜೆಡಿಎಸ್ ನಿಂದ ಹೆಚ್.ಸಿ. ನೀರಾವರಿ ಸ್ಪರ್ಧಿಸಿದ್ದಾರೆ. ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ. ಪ್ರಚಾರ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗೆ ಎದುರಾಗುತ್ತಿರುವ ಪ್ರತಿರೋಧವು ಅವರನ್ನು ಅಸಹಾಯಗೊಳಿಸಿದೆ.
ಕನಕಗಿರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಶಿವರಾಜ ತಂಗಡಗಿ ಮತ್ತು ಬಿಜೆಪಿಯಿಂದ ಬಸವರಾಜ ದಡೇಸೂಗುರು ಸ್ಪರ್ಧಿಸಿದ್ದಾರೆ. ನೇರ ಹಣಾಹಣಿಯಲ್ಲಿ ಬಿಜೆಪಿಯು ತಂಗಡಗಿಯವರನ್ನು ಹಣಿಯುವ ಹಂಬಲದಲ್ಲಿದೆ.
ಗಂಗಾವತಿಯಿಂದ ಜೆಡಿಎಸ್ ತೊರೆದು ಬಂದ ಶಾಸಕ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರಿಗೆ ಎದುರಾಳಿಯಾಗಿ ಬಿಜೆಪಿಯ ಪರಣ್ಣ ಮುನವಳ್ಳಿ ಕಣದಲ್ಲಿದ್ದಾರೆ. ಹಿಂದು-ಮುಸ್ಲಿಮ್ ಎಂಬ ವಿಭಜನೆಗೆ ಬಿಜೆಪಿಯು ಶಕ್ತಿಮೀರಿ ಪ್ರಯತ್ನಿಸುತ್ತದೆ. ಅದಕ್ಕಾಗಿ ಕೋಮುದ್ವೇಷ ಹರಡುವ, ಬೆಂಕಿಯುಗುಳುವ ಬಾಯ್ಬಡುಕರನ್ನು ಬಿಜೆಪಿ ಬಳಸುತ್ತಿದೆ. ಅದು ಅನ್ಸಾರಿಯವರ ದಾರಿಯನ್ನು ಕಷ್ಟಗೊಳಿಸಲು ಕಾರಣವಾಗಿದೆ. ಬಿಜೆಪಿಗೆ ಅದೇ ತಿರುಗುಬಾಣವೂ ಆಗಬಹುದು.
ಯಲಬುರ್ಗಾ ಕ್ಷೇತ್ರದಿಂದ ಸಚಿವ ಬಸವರಾಜ ರಾಯರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾದರೆ ಬಿಜೆಪಿಯಿಂದ ಹಾಲಪ್ಪ ಆಚಾರ್, ಜೆಡಿಎಸ್ ನಿಂದ ವೀರಣಗೌಡ ಪಾಟೀಲ್  ಕಣದಲ್ಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವ ರಾಯರೆಡ್ಡಿ ಅವರ ಗೆಲುವು ಕಷ್ಟವಾಗಲಿಕ್ಕಿಲ್ಲ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.  
ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಮರೇಶ ಕರಡಿ ಸ್ಪರ್ಧೆಗಿಳಿದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಘವೇಂದ್ರ ಹಿಟ್ನಾಳ್ ಸ್ಪರ್ಧಿಸಿದ್ದಾರೆ. ನೇರ ಹಣಾಹಣಿಯಲ್ಲಿ ಬಿಜೆಪಿಯು ಮುಂಚೂಣಿಯಲ್ಲಿ ಇರುವಂತೆ ಭಾಸವಾಗುತ್ತದೆ. ಇಬ್ಬರ ಪಕಿ ವಿಜಯಮಾಲೆ ಯಾರಿಗೆ ಸಿಗಲಿದೆ ಎನ್ನುವುದಕ್ಕಾಗಿ ಫಲಿತಾಂಶದ ವರೆಗೂ ಕಾಯಬೇಕು.
ಬಳ್ಳಾರಿ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮೂರು ಕ್ಷೇತ್ರಗಳು ಸೇರಿದಂತೆ ಒಟ್ಟು ಒಂಬತ್ತು ವಿಧಾನಸಭಾ ಕ್ಷೇತ್ರಗಳಿವೆ. ಗಣಿಗಾರಿಕೆಯ ಆರ್ಭಟದಲ್ಲಿ ನಲುಗಿಹೋಗಿದ್ದ ಬಳ್ಳಾರಿಯು ಈಗ ಚೇತರಿಸಿಕೊಳ್ಳುತ್ತಿದೆ. ಹಣ- ಅಧಿಕಾರ ರಾಜಕೀಯ ಚಿತ್ರಣವನ್ನೇ ಬದಲಿಸಿ ಬಿಟ್ಟಿದ್ದವು. ಮರಳಿ ಮಾಮೂಲಿ ಸ್ಥಿತಿಗೆ ಬರುತ್ತಿರುವ ಬಳ್ಳಾರಿಯು ಈ ಬಾರಿ ಬಿಜೆಪಿಗೆ ಸುಲಭದ ತುತ್ತೇನಲ್ಲ. ಬಿಜೆಪಿಯ ಮಡಿಲಿನಲ್ಲಿಯೇ ಇದ್ದವರನ್ನು ತನ್ನೆಡೆಗೆ ಸೆಳೆದುಕೊಂಡಿರುವ ಕಾಂಗ್ರೆಸ್ ಗೆ ಲಾಭದ ಲೆಕ್ಕಾಚಾರದಲ್ಲಿ ನಿರತವಾಗಿದೆ. ಕಾಂಗ್ರೆಸ್ ಹಿಂದೆಂದಿಗಿಂತ ಉತ್ತಮ ಸ್ಥಿತಿಯಲ್ಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಜಯನಗರ ಕ್ಷೇತ್ರದಲ್ಲಿ ಆನಂದಸಿಂಗ್ ಅವರು ಕಾಂಗ್ರೆಸ್ ನಿಂದ ಸ್ಪರ್ಧೆಗೆ  ಇಳಿದಿದ್ದಾರೆ. ಅವರಿಗೆ ಎದುರಾಳಿಯಾಗಿರುವ ಬಿಜೆಪಿಯ ಗವಿಯಪ್ಪ ಪೈಪೋಟಿ ನೀಡುತ್ತಿರುವರಾದರೂ ಅದು ಸಾಕಾಗುತ್ತಿಲ್ಲ. ಕಂಪ್ಲಿಯಲ್ಲಿ ಬಿಜೆಪಿಯ ಸುರೇಶಬಾಬು ಅವರಿಗೆ ಕಾಂಗ್ರೆಸ್ ನ ಜಿ.ಎನ್. ಗಣೇಶ ತೀವ್ರ ಪೈಪೋಟಿ ಒಡ್ಡುತ್ತಿದ್ದಾರೆ. ಹಡಗಲಿಯಲ್ಲಿ ಕಾಂಗ್ರೆಸ್ ನ ಪರಮೇಶ್ವರ ನಾಯಕ್ ಮತ್ತು ಬಿಜೆಪಿಯ ಚಂದ್ರಾನಾಯಕ ನಡುವಿನ ಪೈಪೋಟಿಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಶಿರಗುಪ್ಪದಲ್ಲಿ ಬಿಜೆಪಿಯ ಸೋಮಲಿಂಗಪ್ಪ ಅವರು ಕಾಂಗ್ರೆಸ್ ನ ಎಸ್.ಟಿ. ಮುರಳಿಕೃಷ್ಣ ಅವರಿಗಿಂತ ಉತ್ತಮ ಸ್ಥಿತಿಯಲ್ಲಿದ್ದಾರೆ. ಹಗರಿಬೊಮ್ಮನಹಳ್ಳಿ ಬಿಜೆಪಿಯ ನೇಮಿರಾಜ್ ನಾಯಕ್ ಮತ್ತು ಕಾಂಗ್ರೆಸ್ ಭೀಮಾ ನಾಯಕ ನಡುವಿನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಬಳ್ಳಾರಿ ಗ್ರಾಮೀಣ (ಎಸ್ ಟಿ) ಮಾಜಿ ಸಂಸದ ಸಣ್ಣಫಕೀರಪ್ಪ ಬಿಜೆಪಿ ಅಭ್ಯರ್ಥಿಯಾದರೆ ಕಾಂಗ್ರೆಸ್ ನಿಂದ ನಾಗೇಂದ್ರ ತೀವ್ರ ಪೈಪೋಟಿ ನೀಡುತ್ತಿದ್ದಾರೆ.  ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಸೋಮಶೇಖರರೆಡ್ಡಿ ಅವರಿಗೆ ಎದುರಾಳಿಯಾಗಿರುವ ಕಾಂಗ್ರೆಸ್ ನ ಅನಿಲ್ ಲಾಡ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಗೆಲುವು ಮಾತ್ರ ಕಾಂಗ್ರೆಸ್ ಅಭ್ಯರ್ಥಿಯದೇ ಎನ್ನಲಾಗುತ್ತಿದೆ. ಸಂಡೂರು (ಎಸ್ ಟಿ) ಕ್ಷೇತ್ರದಲ್ಲಿ ಬಿಜೆಪಿಯಿಂದ ಡಿ. ರಾಘವೇಂದ್ರ ಮತ್ತು ಕಾಂಗ್ರೆಸ್ ನಿಂದ ತುಕಾರಾಂ ಕಣದಲ್ಲಿದ್ದಾರೆ. ತುಕಾರಾಂ ಪುನರಾಯ್ಕೆಯಾಗುವ ಸಾಧ್ಯತೆಗಳೇ ಹೆಚ್ಚು. ಕೂಡ್ಲಿಗಿ (ಎಸ್ ಟಿ) ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ರಘು ಗುಜ್ಜಲ್ ಮತ್ತು ಬಿಜೆಪಿಯಿಂದ ಎನ್.ವೈ. ಗೋಪಾಲಕೃಷ್ಣ ಸ್ಪರ್ಧಾ ಕಣದಲ್ಲಿದ್ದಾರೆ. ರಘು ಗುಜ್ಜಲ್ ಅವರಿಗೆ ಗೆಲುವಿನ ನಗೆ ಬೀರುವುದು ಕಷ್ಟವಾಗಲಾರದು.
08 May 2018 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಬಸವೇಶ್ವರ ಮತ್ತು ಅವನ ಕಾಲ