ಕಮಲೇಶ್ ರೇಖೆಗಳಲ್ಲಿ ಬೀದರ್



There are painters who transform the sun to a yellow spot, but there are others who wish the help of their intelligence, transform a yellow spot into sun- Pablo Picasso



ಪೆನ್ಸಿಲ್-ರಬ್ಬರ್ ಬಳಸದೇ ನೇರವಾಗಿ ಪೆನ್ ಬಳಸಿ ಸ್ಮಾರಕಗಳ ಲ್ಯಾಂಡ್‌ಸ್ಕೇಪ್ ರಚಿಸುವ ಕಮಲೇಶ್ ಅವರ ಕಲಾಕೃತಿಗಳು ಮೊದಲ ನೋಟಕ್ಕೇ ಗಮನ ಸೆಳೆಯುತ್ತವೆ. ಅವರ ಲ್ಯಾಂಡ್‌ಸ್ಕೇಪ್ ಆಕೃತಿಗಳಲ್ಲಿನ ಆಕಾರ-ಗಾತ್ರಗಳಲ್ಲಿನ ಪ್ರಮಾಣ ಬದ್ಧತೆ ನೂರಕ್ಕೆ ನೂರು ಪ್ರತಿಶತ ಪರ್ಫೆಕ್ಟ್ ಆಗಿರುತ್ತದೆ. ಅತ್ಯಂತ ಪ್ರಸಿದ್ಧ ಸ್ಮಾರಕಗಳನ್ನು ಕೂಡ ವಿಭಿನ್ನ ದೃಷ್ಟಿಕೋನದಿಂದ ನೋಡಿ ಅದನ್ನು ದಾಖಲಿಸುವ ಕಲಾಚಾತುರ್ಯ ಕಮಲೇಶ್ ಅವರಿಗಿದೆ.
ನೋಡನೋಡುತ್ತಿದ್ದಂತೆಯೇ ಸ್ಥಳದಲ್ಲಿಯೇ ಕುಳಿತು ಪೆನ್ ಬಳಸಿ ಚಕಚಕನೆ ಚಿತ್ರ ಬರೆದು ಸ್ಮಾರಕಗಳು-ಕಟ್ಟಡಗಳನ್ನು ಗೆರೆಗಳಲ್ಲಿ ದಾಖಲಿಸುತ್ತಿದ್ದರೆ ’ಮ್ಯಾಜಿಕ್’ ನೋಡಿದ ಬೆರಗುಗೊಳಿಸುವ ಅನುಭವ ಉಂಟಾಗುತ್ತದೆ. ಕಮಲೇಶ್ ಅವರು ತಮ್ಮ ಲ್ಯಾಂಡ್‌ಸ್ಕೇಪ್ ಕಲಾಕೃತಿಗಳನ್ನು ಸ್ಥಳದಲ್ಲಿಯೇ ಕುಳಿತು ದಾಖಲಿಸುತ್ತಾರೆ. ಹೀಗಾಗಿ ಕರ್ನಾಟಕದ ಮಾತ್ರವಲ್ಲ ದೇಶದ ಮೂಲೆಮೂಲೆಗಳಿಗೂ ಹೋಗಿ ಚಿತ್ರ ರಚಿಸಿದ್ದಾರೆ. ಛಾಯಾಚಿತ್ರಗಳನ್ನು ಮುಂದಿಟ್ಟುಕೊಂಡು ಕಲಾಕೃತಿ ರಚಿಸುವ ಪರಿಪಾಠ ಅವರದಲ್ಲ. ಹೀಗಾಗಿ ಅವರ ಪ್ರತಿಯೊಂದು ಕಲಾಕೃತಿಯು ಸ್ಮಾರಕ-ಕಟ್ಟಡದ ಮುಂಭಾಗ, ಹತ್ತಿರದಲ್ಲಿಯೇ ರಚನೆ ಆಗಿರುವಂತಹದು. ಹೀಗಾಗಿ ನೆರಳು-ಬೆಳಕಿನ ಸಂಯೋಜನೆಯು ಕಲಾಕೃತಿಗಳಲ್ಲಿ ಸೊಗಸಾಗಿ ದಾಖಲಾಗುತ್ತದೆ. ಕಮಲೇಶ್ ಅವರ ಕಲಾಕೃತಿಗಳು ನಿರ್ಜಿವ ಸ್ಮಾರಕದ ರೇಖೆಗಳಲ್ಲಿ ದಾಖಲಿಸಿದ-ದಾಖಲಿಸುವ ಪ್ರಯತ್ನ ಅಲ್ಲ. ಅವುಗಳ ಸುತ್ತಲ ವಾತಾವರಣ, ಬದುಕು-ಗ್ರಹಿಕೆಗಳು ರೇಖೆಗಳ ಕಲಾತ್ಮಕ ಅಭಿವ್ಯಕ್ತಿಯಾಗಿ ಮರುಸೃಷ್ಟಿಯಾಗುವುದು ಕಮಲೇಶ್ ಅವರ ಕಲಾಕೃತಿಗಳ ವೈಶಿಷ್ಟ್ಯ. ಸ್ಮಾರಕಗಳ ಜೊತೆಗೆ ಅವುಗಳ ಐತಿಹಾಸಿಕ ಮಹತ್ವ, ವಾಸ್ತುಶಿಲ್ಪದ ಅನನ್ಯತೆಯನ್ನೂ ಬರವಣಿಗೆಯ ಮೂಲಕ ಪರಿಚಯಿಸುವುದರಿಂದ ಕಮಲೇಶ್ ಅವರೊಳಗಿನ ಇತಿಹಾಸಕಾರ, ಲೇಖಕ ಕೂಡ ಕಾಣಿಸಿಕೊಳ್ಳುತ್ತಾನೆ. ಸ್ಮಾರಕಗಳನ್ನು ಕುರಿತು ಅವರಿಗಿರುವ ಜ್ಞಾನ-ತಿಳುವಳಿಕೆ ಅಪಾರವಾದದ್ದು. ಅವರ ಅಧ್ಯಯನದ ಫಲ ಅವರ ಬರವಣಿಗೆಯಲ್ಲಿ ಗೋಚರವಾಗುತ್ತದೆ. ಕರ್ನಾಟಕ ನೂರಾರು, ಸಾವಿರಾರು ಸ್ಮಾರಕಗಳನ್ನು ಅವರು ತಮ್ಮ ರೇಖೆಗಳ ಮೂಲಕ ಹಿಡಿದಿಟ್ಟಿದ್ದಾರೆ. ಕಮಲೇಶ್ ಅವರ ಗೆರೆಗಳಲ್ಲಿ ಅರಳಿರುವ ಲ್ಯಾಂಡ್‌ಸ್ಕೇಪ್‌ಗಳನ್ನು ನೋಡುವುದೇ ಒಂದು ಸೊಬಗು.
ಮೂಲತಃ ಮೈಸೂರಿನವರಾದ ಕಮಲೇಶ್ ಅವರು ಸದ್ಯ ಬೆಂಗಳೂರಿನ ನಿವಾಸಿ. ಕಮಲೇಶ್ ಅವರು ಸುಂದರ ಹಸ್ತಾಕ್ಷರಗಳು ಕನ್ನಡ-ಇಂಗ್ಲಿಷ್ ಕ್ಯಾಲಿಗ್ರಫಿಯಲ್ಲಿ ವ್ಯಕ್ತವಾಗುತ್ತವೆ. ವಾಟರ್ ಕಲರ್-ಆಯಿಲ್ ಪೇಂಟಿಂಗ್, ವ್ಯಕ್ತಿಚಿತ್ರ, ಪುಸ್ತಕಗಳ ಮುಖಪುಟ, ಪತ್ರಿಕೆಗಳ ವಿನ್ಯಾಸ, ಒಳಾಂಗಣ ಅಲಂಕರಣ ಹೀಗೆ ಅವರ ಪ್ರತಿಭೆಯು ಹಲವು ಮಾಧ್ಯಮ-ಸ್ವರೂಪಗಳಲ್ಲಿ ಅನಾವರಣಗೊಂಡಿದೆ. ಬೀದರಿನ ಐತಿಹಾಸಿಕ ಸ್ಮಾರಕಗಳನ್ನು ಕಮಲೇಶ್ ಅವರು ದಾಖಲಿಸಿದ ಪರಿ ಕೂಡ ಅನನ್ಯ. ಕಮಲೇಶ್ ಅವರ ರೇಖೆಗಳಲ್ಲಿ ದಾಖಲಾದ ಬೀದರ್ ಕುರಿತಾದ ರೇಖಾಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ಕಮಲೇಶ್ ಅವರು ಪ್ರವಾಸೋದ್ಯಮ ಇಲಾಖೆಗಾಗಿ ಈ ಚಿತ್ರಗಳನ್ನು ರಚಿಸಿದ್ದರು. ಮೂಲಚಿತ್ರಗಳು ಪ್ರವಾಸೋದ್ಯಮ ಇಲಾಖೆಯ ಬಳಿ ಇವೆ. ಸುಮಾರು ಎರಡು ದಶಕಗಳ ಹಿಂದೆ ಚಿತ್ರಿಸಲಾದ ರೇಖಾಕೃತಿಗಳ ನೆರಳಚ್ಚು ಪ್ರತಿಗಳನ್ನು ಕಮಲೇಶ್ ಒದಗಿಸಿದ್ದಾರೆ. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
-ದೇವು ಪತ್ತಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಬಸವೇಶ್ವರ ಮತ್ತು ಅವನ ಕಾಲ