ಎನ್. ಧರಂಸಿಂಗ್ : ಸಿಕಂದರ್ ಜಬ್ ಚಲಾ ದುನಿಯಾ ಸೆ ದೋನೋ ಹಾತ್ ಖಾಲಿ
ದೋನೋ ಹಾತ್ ಖಾಲಿ
ಥೇ
ಕ್ಯಾ ಲಾಯಾ ಥಾ ಸಿಕಂದರ್
ದುನಿಯಾ ಮೇ, ಲೇ
ಚಲಾ ಕ್ಯಾ
ಹೈ ಹಾತ್ ದೋನೊ ಖಾಲಿ
ಬಾಹರ್ ಕಫನ್ ಕೆ
(ದೊರೆಯು ಜಗತ್ತಿನಿಂದ
ಹೊರ ನಡೆದಾಗ
ಎರಡೂ ಕೈಗಳು ಖಾಲಿಯಿದ್ದವು
ಈ ಜಗಕೆ ಬರುವಾಗ
ದೊರೆ ತಂದದ್ದಾದರೂ ಏನು?
ತೆಗೆದುಕೊಂಡು ಹೋದದ್ದಾದರೂ
ಏನು?
ಶವವಸ್ತ್ರದ ಹೊರಗೆ
ಎರಡೂ ಕೈ ಖಾಲಿ)
ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ಅವರು ರಾಜಕೀಯ ಜೀವನದ
‘ಇನ್ನಿಂಗ್ಸ್’ ಪೂರ್ಣಗೊಳಿಸಿದ್ದಾರೆ. ಸತತ 49 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಅವರು ಕಂಡದ್ದು ಕೇವಲ
ಎರಡು ಸೋಲು. ಆ ಎರಡು ಸೋಲುಗಳನ್ನು ಹೊರತು ಪಡಿಸಿದರೆ ಅವರದು ಯಶೋಗಾಥೆ.
ರಾಜಕೀಯ ಕ್ಷೇತ್ರಕ್ಕೆ ಬಂದಾಗಿನಿಂದ ಕೊನೆಯ ಉಸಿರು ಇರುವ ವರೆಗೆ ಒಂದೇ ರಾಜಕೀಯ ಪಕ್ಷದಲ್ಲಿದ್ದ
ಧರಂಸಿಂಗ್ ಅವರು ಮಾತೃಪಕ್ಷದಲ್ಲಿಯೇ ನೆಲೆ ಕಂಡುಕೊಂಡಿದ್ದರು. ಪಕ್ಷ ನಿಷ್ಠೆಯೇ
ಅವರನ್ನು ಮುಖ್ಯಮಂತ್ರಿ ಹುದ್ದೆಯವರೆಗೆ ಕರೆದೊಯ್ದಿತು. ಅದೇ ಅವರಿಗೆ ಸಂಸತ್ತಿಗೆ
ಪ್ರವೇಶಿಸುವಂತೆ ಮಾಡಿತು. ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ,
ವಿರೋಧ ಪಕ್ಷದ ನಾಯಕನ ಸ್ಥಾನಗಳೂ ಒಲಿದು ಬಂದದ್ದಕ್ಕೆ ಪಕ್ಷ ನಿಷ್ಠೆಯೇ ಪ್ರಮುಖ ಕಾರಣ.
‘ಅಜಾತ ಶತ್ರು’ ಎಂದೇ ಗುರುತಿಸಲಾಗುತ್ತಿದ್ದ ಧರಂಸಿಂಗ್ ಅವರು ಬದುಕಿನ
ವಿವರಗಳನ್ನು ಎರಡು ಸೋಲುಗಳ ಮೂಲಕ ಉಲ್ಲೇಖ ಮಾಡುವಂತಾದದ್ದು ಮಾತ್ರ ವಿಷಾದದ ಸಂಗತಿ. ವಕೀಲರಾಗಿದ್ದ ಧರಂಸಿಂಗ್ ಅವರು 1968ರಲ್ಲಿ ಕಲಬುರಗಿ (ಆಗಿನ ಗುಲ್ಬರ್ಗ) ನಗರಸಭೆಯ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ
ಜೀವನ ಆರಂಭಿಸಿದರು. 1969ರಲ್ಲಿ ನಿಜಲಿಂಗಪ್ಪ ನೇತೃತ್ವದಲ್ಲಿ ಕಾಂಗ್ರೆಸ್
ರಾಷ್ಟ್ರೀಯ ಮಟ್ಟದಲ್ಲಿ ವಿಭಜನಯಾಗಿತ್ತು. ಇಂಡಿಕೇಟ್ (ಇಂದಿರಾ ಕಾಂಗ್ರೆಸ್) –ಸಿಂಡಿಕೇಟ್ (ನಿಜಲಿಂಗಪ್ಪ ನೇತೃತ್ವದ ‘ಸಂಸ್ಥಾ ಕಾಂಗ್ರೆಸ್’) ಎಂದು ಕರೆಯಲಾಗುತ್ತಿತ್ತು. ಇಂದಿರಾ ನೇತೃತ್ವದ ಕಾಂಗ್ರೆಸ್ ಗೆ
ದೇವರಾಜ ಅರಸು ಅವರ ನಾಯಕತ್ವ. ಉತ್ತರ ಕರ್ನಾಟಕದಲ್ಲಿ ಪ್ರಬಲ ಲಿಂಗಾಯತ ಸಮುದಾಯಕ್ಕೆ
ಸೇರಿದ ನಾಯಕರೆಲ್ಲ ನಿಜಲಿಂಗಪ್ಪ ನೇತೃತ್ವದ ಸಂಸ್ಥಾ ಕಾಂಗ್ರೆಸ್ ನಲ್ಲಿದ್ದರು. 1972ರ ವಿಧಾನಸಭಾ ಚುನಾವಣೆಗೆ ಇಂದಿರಾ ಕಾಂಗ್ರೆಸ್ ನಿಂದ ಸ್ಪರ್ಧಿಸುವುದಕ್ಕೆ ಅಭ್ಯರ್ಥಿಗಳ ಹುಡುಕಾಟ
ನಡೆಸಬೇಕಾದ ಸ್ಥಿತಿ ಇತ್ತು. ಕರ್ನಾಟಕದಲ್ಲಿ ಇಂದಿರಾ ಕಾಂಗ್ರೆಸ್ ಮೊದಲ
ಬಾರಿಗೆ ಸತ್ವ ಪರೀಕ್ಷೆ ಎದುರಿಸಬೇಕಾಗಿತ್ತು.
ಸಂಸ್ಥಾ
ಕಾಂಗ್ರೆಸ್ ಜೇವರ್ಗಿಯಿಂದ ತನ್ನ ಅಭ್ಯರ್ಥಿಯಾಗಿ ಹೆಸರಾಂತ ನಾಯಕ ಮಹಾದೇವಪ್ಪ ರಾಂಪುರೆ ಅವರನ್ನು ಕಣಕ್ಕೆ
ಇಳಿಸಿತ್ತು. ಹೈದರಾಬಾದ್
ಶಿಕ್ಷಣ ಸಂಸ್ಥೆಯ ಮೂಲಕ ಗಣನೀಯ ಸಾಧನೆ ಮಾಡಿದ್ದ ರಾಂಪುರೆ ಅವರು ಸಹಜವಾಗಿಯೇ ಎದುರಾಳಿ ಇಲ್ಲದ ಪ್ರಬಲ
ಸ್ಪರ್ಧಿಯಾಗಿದ್ದರು. ಪ್ರಬಲ ಸಮುದಾಯದ ಬೆಂಬಲ, ಸಂಸ್ಥಾ ಕಾಂಗ್ರೆಸ್ ಗಿದ್ದ ಮನ್ನಣೆ ಹಾಗೂ ಸ್ವಂತ ವರ್ಚಸ್ಸು ಮಹಾದೇವಪ್ಪ ಅವರ ಜೊತೆಗಿದ್ದವು.
ಆಗ ಇಂದಿರಾ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವ
ಜವಾಬ್ದಾರಿ ಕರ್ನಾಟಕದ ಪ್ರಮುಖ ನಾಯಕ ಕೋಳೂರು ಮಲ್ಲಪ್ಪ ಅವರದಾಗಿತ್ತು. ಗೆಲುವಿನ ಆಸೆ ಕೂಡ ಇಟ್ಟುಕೊಳ್ಳದೆ ‘ಸ್ಪರ್ಧೆಗಾಗಿ ಸ್ಪರ್ಧೆ’
ಎಂಬಂತೆ ಮಲ್ಲಪ್ಪ ಅವರು ಗುಲ್ಬರ್ಗ ನಗರಸಭೆಯ ಸದಸ್ಯರಾಗಿದ್ದ ಧರಂಸಿಂಗ್ ಅವರಿಗೆ
ಟಿಕೆಟ್ ನೀಡಿದರು. ಸಮಬಲರಲ್ಲದವರ ನಡುವಿನ ಸ್ಪರ್ಧೆ ಎಂದೇ ಆಗ ಪರಿಗಣಿಸಲಾಗಿತ್ತು.
ಚುನಾವಣೆಯ ಚದುರಂಗದ ಆಟದಲ್ಲಿ ಗೆಲುವು- ಸೋಲು ನಿರ್ಧಾರವಾಗುವುದಕ್ಕೆ
ಸಿದ್ಧಸೂತ್ರಗಳಿರುವುದಿಲ್ಲ. ಆ ಪೈಪೋಟಿಯಲ್ಲಿ ಧರಂಸಿಂಗ್ ಆಶ್ಚರ್ಯಕರ ರೀತಿಯಲ್ಲಿ
ಗೆಲುವು ತಮ್ಮದಾಗಿಸಿಕೊಂಡರು. ಅಲ್ಲಿಂದ ಆರಂಭವಾದ ಅವರ ವಿಜಯದ ಓಟ ಸತತ ಎಂಟು
ಬಾರಿಯ ಗೆಲುವುಗಳ ವರೆಗೂ ಮುಂದುವರೆಯಿತು.
ಒಂಬತ್ತನೇ
ಬಾರಿಗೆ ಚುನಾವಣೆಗೆ ಸ್ಪರ್ಧಿಸುವ ವೇಳೆಗಾಗಲೇ ಧರಂಸಿಂಗ್ ಅವರು ಮುಖ್ಯಮಂತ್ರಿಯೂ ಆಗಿ ಮಾಜಿಯಾಗಿದ್ದರು. ಎದುರಾಳಿಯಾಗಿ ಇದ್ದದ್ದು ಮೊದಲ
ಬಾರಿಗೆ ಸ್ಪರ್ಧಿಸುತ್ತಿದ್ದ ಯುವಕ ದೊಡ್ಡಪ್ಪಗೌಡ ನರಬೋಳಿ. ದೊಡ್ಡಪ್ಪಗೌಡರ
ತಂದೆಯನ್ನು ಹಲವು ಬಾರಿ ಸೋಲಿಸಿದ್ದ ಧರಂಸಿಂಗ್, ಯುವಕ ತನ್ನ ಸಮನಾದ ಎದುರಾಳಿ
ಆಗಬಹುದು ಎಂಬ ಅಂದಾಜೇನೋ ಇತ್ತು. ಆದರೆ, ಫಲಿತಾಂಶ
ಮಾತ್ರ ವಿರುದ್ಧವಾಗಿತ್ತು. ಅಂಚೆಮತ ಪತ್ರಗಳ ಎಣಿಕೆಯಲ್ಲಿ ಕೇವಲ
55 ಮತಗಳೊಂದಿಗೆ ಅವರು ಹಿಂದೆ ಬಿದ್ದಿದ್ದರು. ಮೊದಲ ಬಾರಿಗೆ
ಸೋಲು ಅವರಿಗೆ ಎದುರಾಗಿತ್ತು. ಅದನ್ನವರು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿದರು.
ಸೋಲಿನ
ನಂತರ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ಅವರದಲ್ಲ.
ನಂತರ ಬಂದ ಲೋಕಸಭಾ ಚುನಾವಣೆಯಲ್ಲಿ ಬೀದರ್ ಮತಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ
ಇಳಿದರು. ಆಗ ಅವರಿಗೆ ಎದುರಾದದ್ದು ಅವರದೇ ಸಂಪುಟದಲ್ಲಿ ಸಚಿವರಾಗಿದ್ದ ಗುರುಪಾದಪ್ಪ
ನಾಗಮಾರಪಳ್ಳಿ. ಗೆಲುವು ಸಾಧಿಸಿ ಎರಡನೇ ಬಾರಿಗೆ ಸಂಸತ್ ಪ್ರವೇಶಿಸಿದರು.
ಅದಕ್ಕಿಂತ ಮೊದಲು ಗುಲ್ಬರ್ಗ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿದ್ದ ಧರಂಸಿಂಗ್ ಅವರು
ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ರಾಜೀನಾಮೆ ನೀಡಿದ್ದರು. ಪಕ್ಷದ ನಾಯಕಿ ಇಂದಿರಾಗಾಂಧಿ ಅವರಿಗೆ ಪ್ರಿಯವಾಗಿದ್ದ ಕೇರಳದ ಸ್ಟೀಫನ್ ಅವರಿಗೆ ತಮ್ಮ ಸ್ಥಾನವನ್ನು
ಬಿಟ್ಟುಕೊಟ್ಟು ಪಕ್ಷನಿಷ್ಠೆ ಮೆರೆದಿದ್ದರು.
ಎರಡನೇ
ಬಾರಿಗೆ ಬೀದರ್ ನಿಂದ ಸ್ಪರ್ಧಿಸಿದ ಧರಂಸಿಂಗ್ ಅವರಿಗೆ ಎದುರಾಳಿ ಬಹುತೇಕ ‘ಅನಾಮಧೇಯ’ರಾಗಿದ್ದ ಭಗವಂತ ಖೂಬಾ. ದೇಶದಾದ್ಯಂತ ಬೀಸಿದ ಬಿಜೆಪಿ ಅಲೆಯ ಎದುರು
ನಿಲ್ಲುವುದು ಧರಂಸಿಂಗ್ ಅವರಿಗೆ ಸಾಧ್ಯವಾಗಲಿಲ್ಲ. ಸಂಸತ್ ಸದಸ್ಯರಾಗಿದ್ದಾಗ
ಮಾಡಿದ್ದ ಕೆಲಸಗಳು ಅವರ ಕೈ ಹಿಡಿಯಲಿಲ್ಲ.
ಇದು ರಾಜಕೀಯ
ಏಣಿಯಾಟದ ಸ್ಥೂಲ ವಿವರಣೆ.
2004ರಲ್ಲಿ ಅತಂತ್ರ ವಿಧಾನಸಭೆ ರೂಪುಗೊಂಡಾಗ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ
ಸರ್ಕಾರ ರಚಿಸುವ ಅನಿವಾರ್ಯತೆ ಎದುರಾಗಿತ್ತು. ದೇವೇಗೌಡರಿಗೆ ಪ್ರಿಯರಾಗಿದ್ದರಿಂದ
ಧರಂಸಿಂಗ್ ಅವರಿಗೆ ಮುಖ್ಯಮಂತ್ರಿ ಹುದ್ದೆ ದೊರೆಯುವುದು ಕಷ್ಟವೇನಾಗಲಿಲ್ಲ. ತನ್ನ ಪಕ್ಷದೊಳಗೆ ಮಾತ್ರವಲ್ಲದೆ ವಿರೋಧಿ ಪಾಳೆಯದಲ್ಲಿಯೂ ಸ್ನೇಹಿತರನ್ನು ಒಳಗೊಂಡಿದ್ದರು
ಧರಂಸಿಂಗ್. ಅದೇ ಕಾರಣಕ್ಕೆ ಅವರನ್ನು ‘ಅಜಾತಶತ್ರು’
ಎಂದು ಕರೆಯಲಾಗುತ್ತದೆ. ಧರಂಸಿಂಗ್ ಜೊತೆಗೆ ಒಡನಾಡಿದ ಯಾರೊಬ್ಬರೂ
ಅವರಿಗೆ ವಿರೋಧಿ ಆಗಿರುವುದು- ಆಗುವುದು ಸಾಧ್ಯವಿರಲಿಲ್ಲ. ಪ್ರತಿಯೊಂದನ್ನೂ ಅಳೆದು ತೂಗಿ ಅದು ತನಗೇ ಲಾಭವಾಗುವಂತೆ ಮಾಡಿಕೊಳ್ಳುವ ಲೆಕ್ಕಾಚಾರ,
ಎದುರಾಳಿಯ ಎದೆಯಲ್ಲಿಯೂ ಆರ್ದ್ರತೆ ಮೂಡಿಸುವ ಮೆದುವಾದ ಮಾತು ಅವರಿಗೆ ವೈರಿಗಳಿಲ್ಲದಂತೆ
ಮಾಡಿತ್ತು. ಮಾತಿನಲ್ಲಿ- ಪ್ರೀತಿಯಲ್ಲಿ ಧರಂಸಿಂಗ್
ಎದುರು ಗೆಲ್ಲುವುದು ಅರ್ಥಾತ್ ಅವರ ಖೆಡ್ಡಾಕ್ಕೆ ಬೀಳದೇ ಇರುವುದು ಸಾಧ್ಯವೇ ಇರಲಿಲ್ಲ. ಸ್ನೇಹಿತರಿಗೆ- ಬೇಕಾದರಿಗೆ- ಪ್ರಿಯರಿಗೆ
ಯಾವ ರೀತಿಯ ಲಾಭ ಒದಗಿಸಿಕೊಡಬೇಕು ಎಂಬ ಹವಣಿಕೆ ಸದಾ ಜಾಗೃತವಾಗಿರುತ್ತಿತ್ತು. ಹಾಗೆಯೇ ವಿರೋಧಿಗಳನ್ನು ಬುಟ್ಟಿಯೊಳಕ್ಕೆ ಹಾಕಿಕೊಳ್ಳುವುದಕ್ಕೆ ಏನು? ಹೇಗೆ ? ಮಾಡಬೇಕು ಎಂಬ ಯೋಚನೆ ಸದಾ ಜೀವಂತವಾಗಿರುತ್ತಿತ್ತು.
ಅದೇ ಅವರ ಗೆಲುವಿನ ಗುಟ್ಟು ಕೂಡ ಆಗಿತ್ತು.
ರಾಜಕೀಯ
ತಂತ್ರಗಾರಿಕೆಯಲ್ಲಿ ಧರಂಸಿಂಗ್ ಅವರಿಗೆ ಸಮನಾಗಿ ನಿಲ್ಲಬಲ್ಲವರು ಅಪರೂಪ. ಕೇವಲ 400ಕ್ಕಿಂತ ಕಡಿಮೆ ಮತಗಳಿರುವ ಸಮುದಾಯಕ್ಕೆ ಸೇರಿಯೂ ಸತತವಾಗಿ ಎಂಟು ಬಾರಿ ಗೆಲುವು ಸಾಧಿಸಲು
ಸಾಧ್ಯವಾದದ್ದು ತಂತ್ರಗಾರಿಕೆಯ ಕಾರಣದಿಂದಲೇ. ಈ ತಂತ್ರಗಾರಿಕೆ ಅವರಿಗೆ
ಎಂದೂ ಕೈ ಕೊಟ್ಟಿಲ್ಲ. ಅವರ ಸೋಲುಗಳು ಕೂಡ ಅವರ ಲೋಪಗಳಿಂದಾದುವುಗಳಲ್ಲ.
ಕುಟುಂಬದ ಸದಸ್ಯರ- ಬೆಂಬಲಿಗರ ಲೆಕ್ಕಾಚಾರ ತಲೆಕೆಳಗಾದದ್ದರಿಂದ
ಹಿನ್ನೆಡೆಯಾಯಿತು.
ಹೈದರಾಬಾದ್
ಕರ್ನಾಟಕದ ಹಿಂದುಳಿದಿರುವಿಕೆಯ ಬಗ್ಗೆ ಕಾಳಜಿ ಹೊಂದಿದ್ದ ಧರಂಸಿಂಗ್ ಅವರು ನಂಜುಂಡಪ್ಪ ವರದಿ ಸಲ್ಲಿಸುವ
ಮುನ್ನವೇ ಸಲ್ಲಿಸಲಾಗಿದ್ದ ‘ಧರಂಸಿಂಗ್ ವರದಿ’ಯು ಹಿಂದುಳಿದಿರುವಿಕೆಯ ಕಾರಣ, ಸ್ವರೂಪ ಮತ್ತು ಕೈಗೊಳ್ಳಬೇಕಾದ ಕ್ರಮಗಳನ್ನು ಒಳಗೊಂಡಿತ್ತು. ಪ್ರಾದೇಶಿಕ
ಅಸಮಾನತೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮೊದಲ ವರದಿ ಸಿದ್ಧಪಡಿಸಿದ ಹಿರಿಮೆ ಧರಂಸಿಂಗ್ ವರದಿಗೆ ಸಲ್ಲುತ್ತದೆ.
ಅದಾದ ನಂತರ ತನ್ನ ಅನುಗಾಲದ ಗೆಳೆಯ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸೇರಿ ನಡೆಸಿದ
ಸತತ ಪ್ರಯತ್ನದ ಫಲವಾಗಿ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ಮಾಡಿಸುವುದು
ಸಾಧ್ಯವಾಯಿತು. ಹೈದರಾಬಾದ್ ಕರ್ನಾಟಕದ ಬಹುದಿನದ ಬೇಡಿಕೆಯಾಗಿದ್ದ ಸಂವಿಧಾನದ
ತಿದ್ದುಪಡಿ ಸಾಧ್ಯವಾಗಿದ್ದು ಉಭಯ ನಾಯಕರಿಂದ. ಪ್ರಾದೇಶಿಕ ಅಸಮಾನತೆಯ ಅರಿವಿದ್ದ
ಧರಂಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡಗಳಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದವು.
ಧರಂಸಿಂಗ್
ಅವರ ರಾಜಕೀಯ ಜೀವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ವಿಧಾನಸಭೆಯಲ್ಲಿ ವಿರೋಧ ಪಕ್ಷದ
ನಾಯಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಇದ್ದ ಧರಂಸಿಂಗ್ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ
ಇದ್ದಾಗಲೆಲ್ಲ ಸಚಿವ ಹುದ್ದೆ ಅವರದಾಗಿರುತ್ತಿತ್ತು. ಅದು ಕೂಡ ಸಾಮಾನ್ಯ
ಇಲಾಖೆಗಳೇನಾಗಿರುತ್ತಿರಲಿಲ್ಲ. 1998ರಲ್ಲಿ ವಿಧಾನಸಭೆಯ ಚುನಾವಣೆಯ ನಂತರ
ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಮಾತ್ರ ಖರ್ಗೆ-ಧರಂಸಿಂಗ್ ಅವರು ಸಚಿವರಾಗಿರಲಿಲ್ಲ. ಆ ಅವಧಿಯ ಬಗ್ಗೆ ಅವರು ಹೆಚ್ಚು
ಮಾತನಾಡಲು ಬಯಸುತ್ತಿರಲಿಲ್ಲ. ತನ್ನ ಅಸಹಾಯಕತೆ ಮತ್ತು ಮೌನವನ್ನು ನಂತರದ
ದಿನಗಳಲ್ಲಿ ಶಕ್ತಿಯಾಗಿಯೂ ಬೆಳೆಸಿಕೊಂಡರು.
ಧರಂಸಿಂಗ್
ಅವರದು ಅಭಿವೃದ್ಧಿ ರಾಜಕಾರಣವಲ್ಲ.
ದೂರಗಾಮಿ ಯೋಜನೆಗಳನ್ನು ರೂಪಿಸಿ ಅದನ್ನು ಜನರಿಗೆ ತಲುಪಿಸುವುದರಲ್ಲಿ ಅವರಿಗೆ ಒಲವಿರಲಿಲ್ಲ.
ಯಾರಾದರೂ ಹೇಳಿದರೆ, ಹೇಳಿದಾಗ ಮಾತ್ರ ಆ ಕೆಲಸವನ್ನು ಮಾಡಿ
ಮುಗಿಸುತ್ತಿದ್ದರು. ತಾವೇ ಸ್ವಯಂಪ್ರೇರಣೆಯಿಂದ ದೂರದೃಷ್ಟಿಯ ಯೋಜನೆ ರೂಪಿಸಿದ್ದು
ಕಡಿಮೆ. ಸಾಮುದಾಯಿಕ ನೆಲೆಯ ಅಭಿವೃದ್ಧಿಗಿಂತ ವ್ಯಕ್ತಿಗತ ಲಾಭ ದೊರಕಿಸಿಕೊಡುವುದರ
ಕಡಗೆ ಹೆಚ್ಚು ಗಮನ ಹರಿಸುತ್ತಿದ್ದರು. ಅದು ತಂದು ಕೊಡುವ ಲಾಭದ ಬಗ್ಗೆ ಅವರಿಗೆ
ಅಪಾರ ನಂಬಿಕೆಯಿತ್ತು.
ಹೈದರಾಬಾದ್ ನ ಉಸ್ಮಾನಿಯಾ
ವಿಶ್ವವಿದ್ಯಾಲಯದಿಂದ ಕಾನೂನು ಪದವೀಧರರಾಗಿದ್ದ ಧರಂಸಿಂಗ್ ಅವರಿಗೆ ಉರ್ದು ಶಾಹಿರಿ ಎಂದರೆ ಅಪಾರ ಪ್ರೀತಿ.
ಅವರು ನೂರಾರು ಮುಷೈರಾ (ಕವಿಗೋಷ್ಠಿ)ಗಳಲ್ಲಿ ಭಾಗವಹಿಸಿದ್ದಾರೆ.
ಮಾತು ಮಾತಿಗೂ ಶಾಹಿರಿಯ ಸಾಲುಗಳನ್ನು ಉಲ್ಲೇಖಿಸುವುದು ಅವರ ಖಯಾಲಿ. ಅವರು ಪ್ರಸ್ತಾಪಿಸುತ್ತಿದ್ದ
ಕೆಲವು ಶಾಹಿರಿ ಇಲ್ಲಿವೆ.
ಇಷ್ಕ್ ನಾಕಾಮ್ ಸಹಿ:
ಜಿಂದಗಿ ನಾಕಾಮ್ ನಹಿ. (ಪ್ರೀತಿಯಲ್ಲಿ ಸೋತಿರಬಹುದು: ಜೀವನದಲ್ಲಿ ಸೋಲುವುದಿಲ್ಲ), ಶ್ಯಾಮ್ ಭೀ ಥೀ
ಧುಂವಾ ಧುಂವಾ; ಹುಸ್ನ ಭೀ ಥಾ ಉದಾಸ್ ಉದಾಸ್, ಯಾದ್ ಸಿ ಆ ಕೆ ರಹಾ ಗಯೇಂ, ದಿಲ್ ಕೊ ಕೈ ಕಹನಿಯಾಂ.
ಧರಂಸಿಂಗ್
ಅವರ ನಿಧನದೊಂದಿಗೆ ಕರ್ನಾಟಕ ಕಂಡ ಮಹತ್ವದ ರಾಜಕೀಯ ವ್ಯಕ್ತಿತ್ವದ ಯುಗ ಮುಗಿದಿದೆ. ಅವರ ಇಬ್ಬರೂ ಗಂಡುಮಕ್ಕಳು ವಿಧಾನಸೌಧದೊಳಗೆ
ಇದ್ದಾರೆ. ಹಿರಿಯ ಮಗ ವಿಜಯಸಿಂಗ್ ವಿಧಾನ ಪರಿಷತ್ ಸದಸ್ಯರಾದರೆ,
ಕಿರಿಯ ಮಗ ಮತ್ತು ಸಕ್ರಿಯ ರಾಜಕಾರಣದ ವಾರಸುದಾರರಾಗಿರುವ ಡಾ. ಅಜಯ್ ಸಿಂಗ್ ಜೇವರ್ಗಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ತಂದೆಯ ದಾರಿಯಲ್ಲಿ ನಡೆಯುವ ಕಷ್ಟ- ನಡೆಯಲಾಗದ ಅಸಹಾಯಕತೆಗಳೆರಡೂ
ಅವರ ಮುಂದಿವೆ. ಮುಂದಿನ ದಿನಗಳ ರಾಜಕೀಯ ಲೆಕ್ಕಾಚಾರದಲ್ಲಿ ಧರಂಸಿಂಗ್ ಅವರ
ಕೌಶಲದ ನಡೆ ಇರುವುದಿಲ್ಲ ಎಂಬುದು ಮಾತ್ರ ನಿಜ.
ಕಾಮೆಂಟ್‌ಗಳು