ಹುಮನಾಬಾದ್: ಸಂಕ್ರಾಂತಿಯ ಬಾನಲ್ಲಿ ಬಣ್ಣದ ಪಟಗಳ ಚಿತ್ತಾರ
ಹಾರಲು ಆಸೆ ಜೊತೆಗೆ ಒಂದಷ್ಟು ಕನಸುಗಳಿದ್ದರೆ ಸಾಕು. ಬಾಕಿ ಎಲ್ಲ ತನ್ನಿಂದ ತಾನೆ ಸೇರಲು ಆರಂಭವಾಗುತ್ತವೆ. ನೀಲಿ ಬಾನಲ್ಲಿ ಹಕ್ಕಿಗಳಂತೆ ಮುಕ್ತವಾಗಿ ಹಾರಬಯಸುವ ಜೀವಿ ಮನುಷ್ಯ. ಅವನಿಗೆ ತನಗೆ ಇರುವ ಎಲ್ಲ 'ಮಿತಿ' ಮೀರಬಯಸುವ ಹಂಬಲ. ತನ್ನ ಆಸೆ- ಕನಸುಗಳಿಗೆ ಅನುಗುಣವಾಗಿ ಹಬ್ಬ ಹರಿದಿನಗಳನ್ನು ರೂಪಿಸಿಕೊಳ್ಳುತ್ತಾನೆ.
ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಬಣ್ಣ ಬಣ್ಣದ ಗಾಳಿಪಟ ಹಾರಿಸಿ ಸಂಕ್ರಾಂತಿ ಆಚರಿಸಲಾಗುತ್ತದೆ. ಹೀಗಾಗಿ ಇಡೀ ನೀಲಿ ಆಕಾಶದಲ್ಲಿ ಬಣ್ಣದ ಚಿತ್ತಾರ ಮೂಡುತ್ತದೆ. ಹಬ್ಬದೂಟದ ಜೊತೆಗೆ ಮನರಂಜನೆ, ಆಟಗಳೂ ಸೇರಿಕೊಳ್ಳುವ ಸಂಕ್ರಾಂತಿಯ ಮೆರಗು ಕಣ್ಮನ ತಣಿಸುತ್ತದೆ. ನಾಡಿನ ವಿವಿಧ ಕಡೆಗಳಲ್ಲಿ ಎಳ್ಳುಬೆಲ್ಲ ವಿನಿಮಯದ ಮೂಲಕ ಆಚರಿಸಿದರೆ ಹುಮನಾಬಾದ್‌ನಲ್ಲಿ ಮಾತ್ರ ವಿಶಿಷ್ಟ ಬಗೆಯಲ್ಲಿ ಸಂಕ್ರಾಂತಿ ನಡೆಯುತ್ತದೆ.
ಸಂಕ್ರಾಂತಿ ಹಬ್ಬ ಹುಮನಾಬಾದ್‌ನಲ್ಲಿ ಕೇವಲ ಎಳ್ಳುಬೆಲ್ಲ ವಿನಿಮಯ ಮಾಡಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಹಲವು ಬಣ್ಣದ ಗಾಳಿಪಟಗಳನ್ನು ಹಾರಿಸುವುದರೊಂದಿಗೆ ಸಡಗರದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಸಂಕ್ರಾಂತಿಯ ಆಗಮನದ ಸೂಚನೆ ಬಹಳಷ್ಟು ಮುಂಚೆಯೇ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಾಳಿಪಟಗಳ ಅಂಗಡಿಗಳು ತಲೆ ಎತ್ತುವುದರೊಂದಿಗೆ ಸಿಗತೊಡಗುತ್ತದೆ. ಹಬ್ಬದ ದಿನವಂತೂ ಬಾನಂಗಣದಲ್ಲಿ ಗಾಳಿಪಟ- ಪತಂಗಗಳ ನಯನ ಮನೋಹರ ಚಿತ್ತಾರ.
ನೀಲಿ ಕ್ಯಾನ್ವಾಸ್ ಮೇಲೆ ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಗಾಳಿಪಟಗಳನ್ನು ನೋಡುವುದೇ ಒಂದು ಸೊಗಸು. ಹದವಾದ- ಹಿತವಾದ ಗಾಳಿ ಬೀಸುವ ಜನವರಿಯ ನೀಲಿಯ ಆಗಸದಲ್ಲಿ ಪಟಗಳನ್ನು ಹಾರಿಸುವ ಹುಡುಗ- ಯುವಕರ ಸಂಭ್ರಮಕ್ಕೆ ಎಣೆಯೇ ಇರುವುದಿಲ್ಲ. ಎಲ್ಲ ಊರಲ್ಲಿಯೂ ಗಾಳಿಪಟ ಮತ್ತು ಅದನ್ನು ಹಾರಿಸುವ ಸಂಪ್ರದಾಯ ಇದ್ದೇ ಇರುತ್ತದೆ. ಆದರೆ, ಹುಮನಾಬಾದ್‌ನಲ್ಲಿ ಅದೊಂದು `ದೇಸಿ ಕಲೆ'. ಬಹಳಷ್ಟು ದಿನಗಳಿಂದ ಚಾಲ್ತಿಯಲ್ಲಿರುವ ಗಾಳಿಪಟಗಳ ವೈವಿಧ್ಯಮಯ ಲೋಕ ಬೆರಗುಗೊಳಿಸುವಂತಹ್ದದು.
ಬಣ್ಣ ಬಣ್ಣದ ಕಾಗದಕ್ಕೆ ಒಂದು ಬಿದರಿನ ಕಡ್ಡಿಯನ್ನು ಬಾಗಿಸಿ ಅಂಟು ಬಳಸಿ ತಯಾರಿಸಲಾಗುವ `ಪತಂಗ' ಮೇಲ್ನೋಟಕ್ಕೆ ಸರಳ ಎಂಬಂತೆ ಗೋಚರವಾಗುತ್ತದೆ. ಸುಂದರವಾಗಿ, ಆಕರ್ಷಕವಾಗಿ ಕಾಣುವಂತೆ ಮಾಡುವುದನ್ನು ಬಿಟ್ಟರೆ ಗಾಳಿಪಟದಲ್ಲೇನು ವೈವಿಧ್ಯತೆ ಇರಲು ಸಾಧ್ಯ? ಎಂಬ ಪ್ರಶ್ನೆ ಮೂಡುವುದು ಕೂಡ ಸಹಜ.
ಎಲ್ಲ ಸಂದೇಹ, ಪ್ರಶ್ನೆಗಳನ್ನು ಹುಸಿಗೊಳಿಸುವಂತೆ ಗಾಳಿಪಟದ ಲೋಕ ತೆರೆದುಕೊಳ್ಳುತ್ತದೆ. `ಖೂಬ್ಸೂರತ್ ಪತಂಗ' ನೋಡುವುದಕ್ಕೆ ಸೊಗಸಾಗಿರುವ ಕಣ್ಮನ ತಣಿಸುವ ಪಟವಾದರೆ `ಅಲ್ಲಿ ಡಾಗ್' ತನ್ನ ಬೃಹತ್ ಗಾತ್ರದೊಂದಿಗೇ ಗಮನ ಸೆಳೆಯುತ್ತದೆ. 15 ಅಡಿ ಉದ್ದ ಮತ್ತು ಅಗಲದ `ಅಲ್ಲಿ ಡಾಗ್' ಪಟಗಳನ್ನು ದಪ್ಪನೆಯ ದಾರ ಕಟ್ಟಿ ಹಾರಿಸುವುದರಿಂದ ಅದನ್ನು `ಸುತಳಿ ಪತಂಗ' ಎಂತಲೂ ಕರೆಯುತ್ತಾರೆ. ಒಂದೇ ಗಾತ್ರದಲ್ಲಿ ಇದ್ದರೂರೂ ವೈವಿಧ್ಯಮಯ ಬಣ್ಣದ ಕಾಗದ ಮತ್ತು ಅವುಗಳನ್ನು ಹಚ್ಚುವ ರೀತಿಯಿಂದಾಗಿ ಹಲವು ರೀತಿಯ ಗಾಳಿಯಲ್ಲಿ ತೇಲುವ ಪಟಗಳು ತಯಾರಾಗುತ್ತವೆ. ಅವುಗಳಲ್ಲಿ ಗಿಲೋರಿದಾರ್, ಟೋಪಿದಾರ್, ದುಪ್ಪನ್ದಾರ್, ಚೌಪನ್ದಾರ್, ಪಟ್ಟಿದಾರ್, ಕಲಿದಾರ್, ಲಂಗೋಟಧುಪನ್ ಪ್ರಮುಖವಾದವುಗಳು.
ಬಾನಿನಲ್ಲಿ ಹಕ್ಕಿಯಂತೆ ಹಾರಲಾಗದೇ ತನ್ನ ಕನಸು, ಕಲ್ಪನೆಗಳನ್ನು ಹರಿಯ ತೇಲಿ ಬಿಡುವ ಜೀವಿ ಮಾನವ. ಪಟ ನೋಡಲು ಚೆಂದ ಇದ್ದರೆ ಮಾತ್ರ ಸಾಲದು ಎಂದುಕೊಂಡು `ಪ್ರಯೋಗ' ಮಾಡುವ ಕನಸುಗಾರ- ಕಲಾವಿದರು ಮತ್ತು ಅದನ್ನು ಮೆಚ್ಚಿ ಪ್ರಶಂಸಿಸುವ ಪರಂಪರೆಯೂ ಇದೆ.
ಗಾಳಿಪಟಗಳು ಕೇವಲ ಹಾರಿಸಿ ನೋಡಿ ಸಂತಸ- ಸಂಭ್ರಮ ಪಡುವುದಕ್ಕೆ ಮಾತ್ರ ಸೀಮಿತವಲ್ಲ. ಗಾಳಿಪಟ ಹಾರಿಸುವುದರಲ್ಲಿ ಸ್ಪರ್ಧೆಯೂ ಇರುತ್ತದೆ. ಟೂಬ್ಲೈಟ್ ಗಾಜಿನ ಪುಡಿ, ಅನ್ನ, ನವಸಾಗರ ಬಳಸಿ ತಯಾರಿಸಲಾಗುವ `ಮಾಂಜಾ' (ಸೂತ್ರದ ದಾರ) ಬಳಸಿ ಬೇರೆಯವರ ಪಟಗಳ ಸೂತ್ರವನ್ನು ಕತ್ತರಿಸುವ ಪೈಪೋಟಿಯೂ ಇರುತ್ತದೆ. ಹೀಗೆ ಕತ್ತರಿಸುವ ಸ್ಪರ್ಧೆಯಲ್ಲಿಯೇ ಹಲವು ವಿಧಾನಗಳಿವೆ. ಅವುಗಳಲ್ಲಿ ಖೀಂಚ್ ಮತ್ತು ಡೀಲ್ ಪ್ರಮುಖವಾದವುಗಳು. ಎಳೆದು ಕತ್ತರಿಸುವ ಪದ್ಧತಿ ಒಂದಾದರೆ ಸರಳ ಬಿಟ್ಟು ಕತ್ತರಿಸುವುದು ಮತ್ತೊಂದು ವಿಧಾನ.
ಉತ್ತರ ಭಾರತದಿಂದ ಹಾರಿ ಬಂದಿರುವ ಗಾಳಿಪಟ ಕಲೆ ಹುಮನಾಬಾದ್ ನಲ್ಲಿ ತನ್ನ ಸೊಬಗು, ಸೌಂದರ್ಯ ವೃದ್ಧಿಸುವುದರೊಂದಿಗೆ ಜನಜೀವನದ ಭಾಗವಾಗಿದೆ. ಗಾಳಿಪಟವು ಹಿಂದೂ ಮುಸ್ಲಿಂರು ಒಂದೆಡೆ ಸೇರಿ ಹಾರಿಸುವ ಸಾಮರಸ್ಯದ ಕೊಂಡಿಯೂ ಆಗಿದೆ. ಹೀಗೆ ಕಲಾತ್ಮಕ ಅಭಿವ್ಯಕ್ತಿ ಮತ್ತು ಸ್ಪರ್ಧೆಯ ಸಂಗಮ ಆಗಿರುವ ಗಾಳಿಪಟಗಳ ಹಾರಾಟ ಕಣ್ಮನ ಸೆಳೆಯುತ್ತದೆ.
ಸಂಕ್ರಾಂತಿಯ ದಿನದಂದು ಗಾಳಿಪಟ ಹಾರಿಸಲು ಹುಮನಾಬಾದ್‌ನ ಪ್ರತಿ ಮನೆಯಲ್ಲಿ ಬೆಳಗಿನಿಂದಲೇ ವಿಶೇಷ ಸಿದ್ಧತೆ ಆರಂಭವಾಗುತ್ತದೆ. ಬೆಳಿಗ್ಗೆಯಿಂದಲೇ ಮನೆಯ ಮಾಳಿಗೆಗಳ ಮೇಲೆ ಹಾಕಲಾಗುವ ಟೆಂಟ್ ಕೆಳಗಡೆ ಕುಟುಂಬದ ಎಲ್ಲ ಸದಸ್ಯರು ಸೇರುತ್ತಾರೆ. ಗಂಡು ಮಕ್ಕಳು ಗಾಳಿಪಟ ಹಾರಿಸುವಲ್ಲಿ ನಿರತರಾಗಿರುತ್ತಾರೆ. ಅದನ್ನು ನೋಡುತ್ತ ರುಚಿಯಾದ ತಿಂಡಿ ಸವಿಯುತ್ತ ಸ್ಪರ್ಧೆ ಆನಂದ ಸವಿಯುತ್ತಾರೆ. ಅಲ್ಲದೇ ಸಿನಿಮಾ ಗೀತೆ ಮತ್ತು ಸ್ಥಳೀಯ ಜನಪದ ಗೀತೆಗಳ ತಾಳಕ್ಕೆ ಯುವಕರು ಕುಣಿದು ಕುಪ್ಪಳಿಸುತ್ತಾರೆ. ಮನೆಯಲ್ಲಿರುವ ಚಿಕ್ಕ ಮಕ್ಕಳು ಇವರಿಗೆ ಸಣ್ಣಪುಟ್ಟ ಕೆಲಸಗಳಲ್ಲಿ ನೆರವಾಗುತ್ತಾರೆ.
ಸಣ್ಣ ಮಕ್ಕಳು ಗಾಳಿಪಟಕ್ಕೆ ಬಾಲ ಹಚ್ಚಿ ಹಾರಿಸುತ್ತಾರೆ. ಇದರಿಂದಾಗಿ ಪಟ ಗೋತಾ ಹೊಡೆಯದೇ ನೇರವಾಗಿ ಹಾರುತ್ತದೆ. ಆದರೆ, ಯುವಕರು ಮತ್ತು ಹಿರಿಯರು ಗಾಳಿಪಟಕ್ಕೆ ಬಾಲ ಹಚ್ಚದೇ ಹಾರಿಸುತ್ತಾರೆ. ಇವುಗಳನ್ನು ಹಾರಿಸುವುದು ಚಾಣಾಕ್ಷ ಕೆಲಸವೇ ಆಗಿರುತ್ತದೆ. ಏಕೆಂದರೆ ಇವುಗಳು ನೇರವಾಗಿ ಹಾರದೇ ಇರುವುದು. ಆದರೆ, ಇವುಗಳನ್ನೇ ಹಾರಿಸುವಲ್ಲಿ ವಿಶೇಷ ಮಜಾವಿದೆ ಎನ್ನುತ್ತಾರೆ.
ಗಾಳಿಪಟ ಆಕಾಶದಲ್ಲಿ ಹಾರಾಡಬೇಕಾದರೆ ಅದಕ್ಕೆ ಹಾಕಲಾಗುವ ಸೂತ್ರ(ಸುಸ್ತೂರ) ಮುಖ್ಯವಾಗಿರುತ್ತದೆ. ಎಲ್ಲರಿಗೂ ಸುಸ್ತೂರ ಹಾಕಲು ಬರುವುದಿಲ್ಲ. ಇದನ್ನು ಹಾಕಲು ಕೆಲವು ಪರಿಣತರು ಇರುತ್ತಾರೆ. ಇವರು ಸುಸ್ತೂರ ಹಾಕಿಕೊಟ್ಟ ಗಾಳಿಪಟಗಳು ನಿರಾಯಾಸವಾಗಿ ಹಾರಾಡುತ್ತವೆ.
ಗಾಳಿಪಟ ಹಾರಿಸುವವರು ಒಂದೆಡೆಯಾದರೆ ಸ್ಪರ್ಧೆಯಲ್ಲಿ ಮಾಂಜಾದಾರಕ್ಕೆ ಕಡಿದು ಹೋಗುವ ಗಾಳಿಪಟಗಳನ್ನು ಹಿಡಿಯುವವರು ಮತ್ತೊಂದೆಡೆ. ಯಾವ ಸ್ಥಳದಲ್ಲಿ ಗಾಳಿಪಟಗಳು ಸ್ಪರ್ಧೆಗೆ ಇಳಿಯುತ್ತವೆ ಎಂಬುದನ್ನು ಗಮನಿಸಿ ಅವುಗಳಿಂದ ದೂರದ ಸ್ಥಳದಲ್ಲಿ ನಿಲ್ಲುತ್ತಾರೆ. ಅವುಗಳು ಕಡಿದ ತಕ್ಷಣ ಅವುಗಳ ಬೆನ್ನು ಹತ್ತಿ ಹಿಡಿಯಲು ಮತ್ತೊಂದು ಸ್ಪರ್ಧೆಯೇ ಏರ್ಪಡುತ್ತದೆ. ಕೆಲವರು ಇವುಗಳನ್ನು ಹಿಡಿಯಲು ವಿಶೇಷ ಸಿದ್ಧತೆಯಲ್ಲಿ ಬರುತ್ತಾರೆ. ಉದ್ದನೆಯ ಕಟ್ಟಿಗೆಗೆ ಮುಳ್ಳುಗಳನ್ನು ಜೋಡಿಸಿ ಪತಂಗ ನೆಲಕ್ಕೆ ಬೀಳುವ ಮುನ್ನವೇ ಅವುಗಳನ್ನು ವಶಪಡಿಸಿಕೊಳ್ಳುತ್ತಾರೆ. ಗಾಳಿಪಟ ಸ್ಪರ್ಧೆಯಷ್ಟೇ ಇವರ ಸ್ಪರ್ಧೆಯು ಮನಸ್ಸಿಗೆ ಹಿತ ನೀಡುತ್ತದೆ.
ಆಧುನಿಕತೆಯ ಭರಾಟೆ ಮತ್ತು ಒತ್ತಡದಿಂದಾಗಿ ಕಳೆದ ಕೆಲ ವರ್ಷಗಳಿಂದ ಗಾಳಿಪಟದ ಸಡಗರ ಕಡಿಮೆಯಾಗುತ್ತಿದೆ. ಆದರೆ, ಹಬ್ಬದ ಜೊತೆಗೇ ಗಾಳಿಪಟದ ನಂಟು ಇರುವುದರಿಂದ `ಸಾಂಕೇತಿಕ'ವಾಗಿ ಹಾರಿಸುವವರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ.
*********
ಹೀಗೊಂದು ’ಪ್ರೇಮ ಪ್ರಸಂಗ’
ಕೆಲವೊಮ್ಮೆ ಜೀವವಿಲ್ಲದ ಗಾಳಿಪಟದೊಂದಿಗೆ ಹಕ್ಕಿಗಳು ತಮ್ಮ ಒಡನಾಡಿ ಎಂದು ಭಾವಿಸಿ ಸರಸಕ್ಕೆ ಇಳಿಯುತ್ತವೆ. ಈ ಆಟದಿಂದಾಗಿ ಧರೆಯಲ್ಲಿದ್ದವರ ಗಮನ ಆಕಾಶದ ಕಡೆಗೆ ಹೋಗುತ್ತದೆ. ಕಳೆದ ವರ್ಷ ಹಸಿರು ಬಣ್ಣದ ಗಾಳಿಪಟವೊಂದು ಶುಭ್ರವಾದ ನೀಲಿ ಆಕಾಶದಲ್ಲಿ ದೀರ್ಘ ಸಮಯದಿಂದ ಹಾರಾಡಿತು. ಆದರೆ, ಕೆಲ ಸಮಯದ ನಂತರ ಇದರ ಜೊತೆಗೆ ಹಕ್ಕಿಯೊಂದು ಕೂಡಿಕೊಂಡಿತು. ಪಟವು ಹಾರಾಡಿದ ಕಡೆಗೆ ಹಕ್ಕಿ ಹಾರಾಡಿತು. ಹಲವು ನಿಮಿಷಗಳಷ್ಟು ಕಾಲ ಹಕ್ಕಿಯ ಚಿತ್ತ ಗಾಳಿ ಪಟದತ್ತ. ನೆರೆದಿದ್ದ ಜನಸ್ತೋಮ ಆಕಾಶದಲ್ಲಿ ಪ್ರಣಯ ಪ್ರಸಂಗಕ್ಕೆ ಸಾಕ್ಷಿಯಾಯಿತು. ಆಗ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಪ್ರಣಯದಾಟದ ಕೆಲವು ನೋಟ ಇಲ್ಲಿವೆ.
ಕಾಮೆಂಟ್‌ಗಳು