‘ಬಹಿಷ್ಕೃತ ಭಾರತ’ದ ಮೂಕನಾಯಕ



ಅಂಬೇಡ್ಕರ್ ಎಂದಾಕ್ಷಣ ತಕ್ಷಣ ನೆನಪಿಗೆ ಬರುವುದು ಭಾರತದ ಸಂವಿಧಾನದ ಕರಡು ಸಿದ್ಧಪಡಿಸಿದವರು ಮತ್ತು ಶೋಷಿತ ದಲಿತರಿಗೆ ಬಿಡುಗಡೆಯ ಬೆಳಕು ತೋರಿಸಿದ ಮಹಾನ್ ಚೇತನ. ಹೌದು ಈ ಎರಡೂ ಅಂಶಗಳು ನಿಜ. ಅವು ತುಂಬಾ ಮಹತ್ವದ ಸಂಗತಿಗಳು ಎಂಬುದರಲ್ಲಿ ಎರಡು ಮಾತೇನಲ್ಲ. ಆದರೆ, ಅಂಬೇಡ್ಕರ್ ಅವರ ಪ್ರತಿಭೆ ಹಾಗೂ ಚಿಂತನೆಯ ಹೊಳಹುಗಳು ಕೇವಲ ಅವೆರಡಕ್ಕೇ ಸೀಮಿತವೇ? ಎಂಬ ಪ್ರಶ್ನೆ ಕೇಳಿಕೊಂಡರೆ ಉತ್ತರ ಸಿಗುವುದು ಕಷ್ಟವೇನಲ್ಲ. ಅಂಬೇಡ್ಕರ್ ಒಬ್ಬ ಪ್ರಖರ ವಿಚಾರವಾದಿ, ಚಿಂತಕ. ಹಾಗೆಯೇ ಅವರೊಬ್ಬ ರಾಷ್ಟ್ರೀಯವಾದಿ. ಆರ್ಥಿಕ- ಸಾಮಾಜಿಕ- ಧಾರ್ಮಿಕ ವಿಚಾರಗಳ ಚಿಂತನೆಯ ವಿಷಯಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ಅವರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಮತ್ತೊಂದು ವ್ಯಕ್ತಿತ್ವ ದೊರೆಯುವುದು ಕಷ್ಟ. ಅಥವಾ ಬಹುತೇಕ ಅಸಾಧ್ಯ. ಆಧುನಿಕ ಭಾರತದ ಅದ್ಭುತ ವ್ಯಕ್ತಿ-ವ್ಯಕ್ತಿತ್ವ ಅಂಬೇಡ್ಕರ್. ಅವರದು ಅಸಾಧಾರಣ  ಸಾಧನೆ. ಅರಿವಿನ ಕ್ಷಿತಿಜದ ಮೇರೆಯನ್ನು ವಿಸ್ತರಿಸುತ್ತಲೇ ಹೋಗುವ ಅಂಬೇಡ್ಕರ್ ಅವರು ಅಮೆರಿಕಾದ ಕೋಲಂಬಿಯಾ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ ಪಡೆದಿದ್ದರು.  ಕೋಲಂಬಿಯಾ ವಿಶ್ವವಿದ್ಯಾಲಯ ಆರಂಭವಾಗಿ ಸರಿ ಸುಮಾರು 300 ವರ್ಷಗಳಾಗಿವೆ. ಈ ಮೂರು ಶತಮಾನಗಳ ಕಾಲಘಟ್ಟದಲ್ಲಿ ಕೋಲಂಬಿಯಾದಿಂದ ಪದವಿ ಪಡೆದ ಮತ್ತು ಜಾಗತಿಕ ನಕಾಶೆಯಲ್ಲಿ ತಮ್ಮ ಸಾಧನೆಯ ಮೂಲಕ ತಮ್ಮದೇ ಛಾಪು ಮೂಡಿಸಿದ ಹಲವು ಗಣ್ಯರು ನೋಡಸಿಗುತ್ತಾರೆ. ಅವರೆಲ್ಲರಿಗಿಂತ ಒಂದು ಹೆಜ್ಜೆ ಹೆಚ್ಚು ಮುಂಚೂಣಿಯಲ್ಲಿಯೇ ಅಂಬೇಡ್ಕರ್ ನಿಲ್ಲುತ್ತಾರೆ. ಇತ್ತೀಚಿಗೆ ಕೋಲಂಬಿಯಾ ವಿಶ್ವವಿದ್ಯಾಲಯವು ತನ್ನ ಸಾರ್ವಕಾಲಿಕ ಶ್ರೇಷ್ಠ ವಿದ್ಯಾರ್ಥಿ ಎಂದು ಪ್ರಕಟಿಸಿದೆ. ಇದು ಸಾಧಾರಣ ಸಾಧನೆಯೇನಲ್ಲ. ಆದರೆ, ಇದೆಲ್ಲಕ್ಕೂ ಮೀರಿ ಭಾರತ ಮತ್ತು ಭಾರತೀಯರು ಅಂಬೇಡ್ಕರ್ ಅವರು ನಡೆಸಿದ ಚಿಂತನೆಗಳು ಅವರ ಬರವಣಿಗೆಯಲ್ಲಿ ಅಪೂರ್ವ ರೀತಿಯಲ್ಲಿ ದಾಖಲಾಗಿವೆ.
ಬಹುಮುಖಿ ಸಂಸ್ಕೃತಿಯ ಮೇಲೆ ಬಹುಸಂಖ್ಯಾತ ಸಮುದಾಯದ ಏಕಸ್ವರೂಪಿ ಚಿಂತನೆಯನ್ನು ಒತ್ತಾಯ ಪೂರ್ವಕವಾಗಿ ಹೇರಲಾಗುತ್ತಿರುವ ಈ ದಿನಗಳಲ್ಲಿ ಅಂಬೇಡ್ಕರ್ ಅವರ ವಿಚಾರಗಳು ಹೆಚ್ಚು ಪ್ರಸ್ತುತವಾಗಿ ಕಾಣಿಸುತ್ತವೆ. ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ್ದ ಅಂಬೇಡ್ಕರ್ ಅವರು ಅಧಿಕಾರಿಗಳ ಸರ್ಕಾರ ಬದಲಿಗೆ ಜನರಿಂದ ಜನರಿಗಾಗಿ ಇರುವ ಜನರ ಸರ್ಕಾರ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದರು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಪ್ರಜಾಪ್ರಭುತ್ವ ವ್ಯವಸ್ಥೆಯು ಪ್ರಶ್ನಾತೀತವಾಗಿ ಪ್ರಬಲ ಬಹುಸಂಖ್ಯಾತ ಸಮುದಾಯದ ಒಡೆತನಕ್ಕೆ ಸಿಲುಕಬಾರದು ಎಂದು ಎಚ್ಚರಿಸಿದ್ದರು. ಪ್ರಜಾಪ್ರಭುತ್ವ ಎಂದರೆ ಶೋಷಿತರ, ಧ್ವನಿಯಿಲ್ಲದವರ ಪರವಾಗಿ ನಡೆಸುವ ರಾಜಕಾರಣ ಎಂದಾಗಬೇಕು. ಮತ್ತು ಅದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳಕೂಡದು ಎಂಬುದು ಅಂಬೇಡ್ಕರ್ ಅವರ ಖಚಿತ ನಿಲುವಾಗಿತ್ತು. ಅಂಬೇಡ್ಕರ್ ಅವರು ಆತಂಕದಿಂದ ಭವಿಷ್ಯ ನುಡಿದಂತೆಯೇ ಭಾರತವು ನಡೆಯುತ್ತಿರುವುದು ಪ್ರಬಲರ ಶಕ್ತಿಯೇ ಮೇಲಾಗುತ್ತಿರುವುದು ಅರಣ್ಯನ್ಯಾಯದಲ್ಲಿ ಸಹಜ ನ್ಯಾಯವು ಹಿಂದಕ್ಕೆ ಸರಿಯುಂತಾಗಿರುವ ಬೆಳವಣಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ವಿಚಾರಗಳ ಪುನರ್ ಪರಿಶೀಲನೆ- ಚಿಂತನೆ ನಡೆಸಿ ಆ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ನಡೆಯುವ ಅಗತ್ಯವಿದೆ.
ಪಾಕಿಸ್ತಾನದ ವಿಭಜನೆಯನ್ನು ಕುರಿತು ಅಂಬೇಡ್ಕರ್ ಅವರು ರಚಿಸಿದ ಪುಸ್ತಕದಲ್ಲಿ ಪ್ರತಿಪಾದಿಸಿದ ಸಂಗತಿಗಳು ಕುತೂಹಲಕಾರಿಯಾದದ್ದು. ‘ಪಾಕಿಸ್ತಾನ ಅಥವಾ ಭಾರತದ ವಿಭಜನೆ’ ಕೃತಿಯಲ್ಲಿ ಅಂಬೇಡ್ಕರ್ ಅವರು ‘ಪಾಕಿಸ್ತಾನವನ್ನು ಸೋಲಿಸಿ ಸದೆ ಬಡಿದಷ್ಟು ಸುಲಭವಾಗಿ ‘ಪಾಕಿಸ್ತಾನದ ಭೂತ’ವನ್ನು ನಿಗ್ರಹಿಸುವುದು ಸುಲಭವಲ್ಲ. ಎಲ್ಲಿಯವರೆಗೆ ಅಸಮಾನತೆ, ಶೋಷಣೆಯ ಬೀಜಗಳು ಜೀವಂತವಾಗಿರುತ್ತವೆಯೋ ಅಲ್ಲಿ ಹೊಸ ಪಾಕಿಸ್ತಾನದ ಭೂತಗಳು ತಲೆ ಎತ್ತುತ್ತವೆ. ಭಾರತದ ಭವಿಷ್ಯದ ರಾಜಕೀಯದ ದಿನಗಳಲ್ಲಿ ಕೇಂದ್ರದ ಸರ್ಕಾರವು ಏಕಸ್ವಾಮ್ಯ ಮೆರೆಯುವುದನ್ನು ಮುಂದುವರೆಸಿದರೆ ಭೂತದ ನೆರಳು ಬೇರೆ ಸ್ವರೂಪದಲ್ಲಿ ಧುತ್ತೆಂದು ಮುಂದೆ ಬಂದು ನಿಲ್ಲಲಿದೆ. ಪಾಕಿಸ್ತಾನದ ಹುಟ್ಟಿನ ಹಿಂದಿನ ವೈಚಾರಿಕ ಎಳೆಗಳು ಹಾಗೂ ಭವಿಷ್ಯದಲ್ಲಿ ಎಚ್ಚೆತ್ತುಕೊಂಡು ನಡೆಯಬೇಕಾದ ಕ್ರಮಗಳನ್ನು ಅಂಬೇಡ್ಕರ್ ವಿವರಿಸಿದ್ದಾರೆ.
ಮನುಸ್ಮೃತಿಗೆ ಬೆಂಕಿ ಹಚ್ಚಿ ಸುಟ್ಟ ಸಂದರ್ಭದಲ್ಲಿ ಅಂಬೇಡ್ಕರ್ ಅವರು ‘ಮನುವಿನ ಬಗ್ಗೆ ಹೆಚ್ಚು ಕಠಿಣವಾಗಿ ವರ್ತಿಸಿದೆ ಎಂದು ನಿಮಗನ್ನಿಸಬಹುದು. ಆದರೆ, ನನ್ನ ಶಕ್ತಿಯು ಮನುವಿನ ಭೂತವನ್ನು ಕೊಲ್ಲುವಷ್ಟು ಶಕ್ತಿಶಾಲಿಯಾಗಿಲ್ಲ. ಬಯಕೆಗಳು ಈಡೇರದ ಪ್ರೇತಾತ್ಮದಂತೆ ಮನುವಿನ ವಿಚಾರಗಳು ಮತ್ತಷ್ಟು ದಿನ ಮುಂದುವರೆಯುವ ಭಯ ನನಗಿದೆ. ಮನು ಬರುವ ಮುಂಚೆಯೂ ಭಾರತದಲ್ಲಿ ಜಾತಿ ಪದ್ಧತಿ ಇತ್ತು. ಆದರೆ, ಮನು ಅದಕ್ಕೆ ಸೈದ್ಧಾಂತಿಕ ಸ್ವರೂಪ ನೀಡಿ, ಮನ್ನಣೆ ದೊರಕುವಂತೆ ಮಾಡಿದ’ ಎಂದು ವ್ಯಾಖ್ಯಾನಿಸಿದ್ದರು.
ಪ್ರಖರ ವಿಚಾರವಾದಿಯಾಗಿದ್ದ ಅಂಬೇಡ್ಕರ್ ಅವರು ಹಿಂದು ಸಮಾಜದ ಆ ಮೂಲಕ ಭಾರತೀಯ ಸಮಾಜ ವ್ಯವಸ್ಥೆಯನ್ನು ಹದಕ್ಕೆ ತರುವುದಕ್ಕಾಗಿ ಹಿಂದು ಕೋಡ್ ಮಸೂದೆ ಸಿದ್ಧಪಡಿಸಿದ್ದರು. ಚುನಾವಣಾ ರಾಜಕೀಯವು ಹುಟ್ಟು ಹಾಕಿದ ಹಿಂದೂ ಮತಗಳು ದೂರ ಸರಿಯುವ ಭಯದಿಂದ ಮಸೂದೆಯ  ಕೆಲಸ ನಿಲ್ಲಿಸಬೇಕಾಯಿತು. ಮಹಿಳೆಯರಿಗೆ ನ್ಯಾಯ ಒದಗಿಸುವ ಉದ್ದೇಶ ಹೊಂದಿದ್ದ ಈ ಮಸೂದೆಗೆ ಕರ್ಮಠ ಹಿಂದೂ ಸಮುದಾಯದ ವಿರೋಧ ವ್ಯಕ್ತವಾಗಬಹುದು ಎಂಬುದು ಆಗಿನ ಆಡಳಿತಾರೂಢ ಪಕ್ಷದ ಭಯವಾಗಿತ್ತು. ಆದರೆ, ಹೊಂದಾಣಿಕೆ ಮಾಡಿಕೊಳ್ಳಲು ಬಯಸದ ಅಂಬೇಡ್ಕರ್ ಅವರು ತಮ್ಮ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಬದ್ಧತೆಯನ್ನು ಮೆರೆದಿದ್ದರು.
ನಮಗೆಲ್ಲ ಸಿದ್ಧಾಂತಗಳನ್ನು ರೂಪಿಸಿದ ವೈಚಾರಿಕ ಅಂಬೇಡ್ಕರ್ ಅವರ ಪರಿಚಯವಿದೆ. ಸತತ ಓದು, ಅಧ್ಯಯನದಿಂದ ಕಟ್ಟಿಕೊಂಡಿದ್ದ ಜ್ಞಾನಲೋಕದಲ್ಲಿ ಅವರು ಸದಾಕಾಲ ಸಂಚರಿಸುತ್ತಿದ್ದರು. ಸದಾ ನಿಮ್ನವರ್ಗದ ಜನರ ಬಗ್ಗೆ ಚಿಂತಿಸುತ್ತಿದ್ದ ಅಂಬೇಡ್ಕರ್ ಅವರು ತಮ್ಮ ಸುತ್ತಲು ನಡೆಯುತ್ತಿದ್ದ ಬೆಳವಣಿಗೆಗಳಿಂದ ಖಿನ್ನರಾಗುತ್ತಿದ್ದರು. ಒಂಟಿತನ ಅವರನ್ನು ಹತಾಶೆಗೆ ದೂಡುತ್ತಿತ್ತು. ಒಂಟಿತನದಿಂದ ಪಾರಾಗುವುದಕ್ಕಾಗಿ ಅಂಬೇಡ್ಕರ್ ಅವರು ಪೇಂಟಿಂಗ್ ಮಾಡುವುದನ್ನು ಆರಂಭಿಸಿದ್ದರು. ಅಷ್ಟು ಮಾತ್ರವಲ್ಲದೆ ಸಾಠೆ ಸಹೋದರರಿಂದ ಗಿಟಾರ್ ವಾದನ ಕಲಿಯತೊಡಗಿದ್ದರು. ಬೌದ್ಧಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಕನಸು ಕಂಡಿದ್ದರು ಅಂಬೇಡ್ಕರ್. ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು ಇಂದಿನ ಅಗತ್ಯ. ಹಾಗೆಯೇ ಅದು ಅನಿವಾರ್ಯ ಕೂಡ ಆಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಬಸವೇಶ್ವರ ಮತ್ತು ಅವನ ಕಾಲ