ಕರ್ನಾಟಕ ಮಾಧ್ಯಮ: ಹಿಂದಣ ಹೆಜ್ಜೆ- ಮುಂದಣ ದಾರಿ?

ಕರ್ನಾಟಕದ ಮಾಧ್ಯಮಗಳ ಕೊಡುಗೆ- ಸಾಧನೆಗಳು ಅನನ್ಯವಾದುದು.  ರಾಜ್ಯದ ಸುದ್ದಿಗಳು ಇಂಗ್ಲೆಂಡಿನ ಆಂಗ್ಲಭಾಷೆಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಮಾಧ್ಯಮದ  ಜೊತೆಗಿನ ಒಡನಾಟ ಆರಂಭವಾಯಿತು. ನಂತರದ ದಿನಗಳಲ್ಲಿ ಜರ್ಮನಿಯ ಮಿಶಿನರಿಗಳು ಕನ್ನಡ ಪತ್ರಿಕಾ ಲೋಕವನ್ನು ಅನಾವರಣ ಮಾಡಿದರು. 20ನೇ ಶತಮಾನದ ಆರಂಭದ ದಿನಗಳಲ್ಲಿ, ಕನ್ನಡ ನವೋದಯ ಲೇಖಕರು ಸಾಹಿತ್ಯ ಪತ್ರಿಕೆಗಳು-ನಿಯತಕಾಲಿಕೆಗಳ ಮೂಲಕ ಸಾಂಸ್ಕೃತಿಕ ವಾತಾವರಣ ರೂಪುಗೊಳ್ಳಲು ಕಾರಣರಾದರು. ನಿಯತಕಾಲಿಕೆ ಪ್ರಕಟಿಸಿದ ಅಥವಾ ಸಂಪಾದಕರಾಗಿರದ  ಅಥವಾ ಅವುಗಳಿಗೆ ಬರೆಯದ ನವೋದಯ ಕಾಲಕ್ಕೆ ಸೇರಿದ ಲೇಖಕರು ಇಲ್ಲವೇ ಎಲ್ಲ ಎನ್ನುವಷ್ಟು ಕಡಿಮೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲುಗೊಳ್ಳುವುದಕ್ಕಾಗಿಯೇ ಪತ್ರಿಕೆಗಳು ರೂಪುಗೊಂಡವು. ಆಗಿನ ವರ್ತಮಾನದ ಒತ್ತಡವನ್ನು ಅನಾವರಣ ಮಾಡಿ, ರಾಜಕೀಯ- ಸಾಮಾಜಿಕ ಚಟುವಟಿಕೆಗಳಿಗೆ ಇಂಬು ನೀಡಿದವು. ಕೆಲವರು ಭೂಗತರಾಗಿದ್ದು, ಕರಪತ್ರಗಳನ್ನು, ಸುದ್ದಿಪತ್ರಿಕೆಗಳನ್ನು ಹೊರಡಿಸಿದರು.
ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಒಂದೇ ಆಡಳಿತಕ್ಕೆ ಸೇರಬೇಕು ಎಂಬ ಕನಸು ಕಂಡವರು ಕನ್ನಡದ ಬರಹಗಾರರು. ಅವರು ರೂಪಿಸಿದ ಸಾಂಸ್ಕೃತಿಕ ಒತ್ತಡವನ್ನು ಪತ್ರಿಕೆಗಳು ಕೂಡ ಜೀವಂತವಾಗಿಟ್ಟವು. ಏಕೀಕರಣಕ್ಕೆ ಸಂಬಂಧಸಿದಂತೆ ರಾಜಕಾರಣದ ದಿಕ್ಕುದೆಸೆಗಳನ್ನು ರೂಪಿಸಿದ ಹಿರಿಮೆ ಕನ್ನಡ –ಕರ್ನಾಟಕದ ಪತ್ರಿಕೆಗಳಿಗೆ ಸಲ್ಲುತ್ತದೆ. ಪ್ರಗತಿಶೀಲ ಸಾಹಿತಿಗಳು ತಮ್ಮ ಅಂಕಣಗಳು- ನಿಯತಕಾಲಿಕೆಗಳ ಮೂಲಕ ಕನ್ನಡದ- ಕರ್ನಾಟಕದ ಅಸ್ಮಿತೆಯ ಚಹರೆಗಳು ರೂಪುಗೊಳ್ಳುವುದಕ್ಕೆ ಕಾರಣರಾದರು. 70ರ ದಶಕದಲ್ಲಿ ಕನ್ನಡದ ಸಾಹಿತ್ಯಕ- ಸಾಂಸ್ಕೃತಿಕ ಬದುಕನ್ನು ರೂಪಿಸುವಲ್ಲಿ ಕನ್ನಡದ ಪ್ರಮುಖ ದಿನಪತ್ರಿಕೆಗಳು ಮಹತ್ವದ ಪಾತ್ರ ವಹಿಸಿದವು. 70-80ರ ದಶಕದ ಕರ್ನಾಟಕದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಬದುಕಿನ ಜೊತೆಗೆ ಪತ್ರಿಕೆಗಳು (ದಿನಪತ್ರಿಕೆ-ವಾರಪತ್ರಿಕೆಗಳು) ನೇರವಾಗಿ ಗುರುತಿಸಿಕೊಂಡವು. ಆಗ ರೂಪುಗೊಂಡ ರೈತ- ದಲಿತ- ಕನ್ನಡ ಚಳುವಳಿಗಳ ಬೆಳವಣಿಗೆಗಳಿಗೆ ಪತ್ರಿಕೆಗಳು ಇಂಬು ನೀಡಿದವು. ಕನ್ನಡ ಚಳುವಳಿಗೆ ‘ಸಮೂಹ ಸನ್ನಿ’ ಎಂದು ಕರೆದರೂ ರಾಜ್ಯದ ಜನಮಾನಸದ ಒತ್ತಡಕ್ಕೆ ಮಣಿದು ತಮ್ಮ ನಿಲುವು ಬದಲಿಸಿಕೊಳ್ಳಬೇಕಾಯಿತು. ರಾಜ್ಯದಲ್ಲಿನ ಚಳುವಳಿಗಳಿಗೆ ಪೂರಕವಾಗಿ ಕೆಲಸ ಮಾಡಿದ ಪತ್ರಿಕೆಗಳು ಅವುಗಳ ಜನಪರ-ಜೀವಪರ ಧೋರಣೆಗಳನ್ನು ಗುರುತಿಸಿ, ಪ್ರಚುರ ಪಡಿಸುವುಲ್ಲಿ ತಮ್ಮದೇ ಮಹತ್ವದ ಕೊಡುಗೆ ನೀಡಿದವು. ಅವುಗಳ ಪ್ರಭುತ್ವ ವಿರೋಧಿ ಧೋರಣೆ- ಸಾಮಾನ್ಯರ ಪರವಾಗಿರಬೇಕು ಎಂಬ ಕಾಳಜಿ- ಸಾರ್ವಜನಿಕ ಜೀವನ ನಾಶವಾಗದಿರುವಂತೆ ನೋಡಿಕೊಳ್ಳುವ ಎಚ್ಚರ- ವೈಚಾರಿಕ ಸಂಗತಿಗಳಿಗೆ ಸಂಬಂಧಿಸಿದ ಖಚಿತತೆ ಗಮನಾರ್ಹವಾದುದು.
ಕರ್ನಾಟಕದ- ಕನ್ನಡದ ಮಾಧ್ಯಮಗಳು ಜಾಗತಿಕ ಮತ್ತು ರಾಷ್ಟ್ರೀಯ ಬೆಳವಣಿಗೆ- ಬದಲಾವಣೆಗಳ ಜೊತೆಗೆ ಹೆಜ್ಜೆ ಹಾಕುತ್ತ, ತನ್ನ ಜಾಡನ್ನು ಬದಲಿಸುತ್ತ ಬಂದಿವೆ. ಜಾಗತೀಕರಣ ಉಂಟು ಮಾಡಿದ ತಲ್ಲಣ ಮತ್ತು ಮಾರುಕಟ್ಟೆಯ ಪೈಪೋಟಿಗಳು ಕನ್ನಡದ ಪತ್ರಿಕೆಗಳನ್ನು ‘ಉದ್ಯಮ’ವಾಗಿ ಪರಿವರ್ತಿಸುವುದಕ್ಕೆ ಕಾರಣವಾದವು. ಬಂಡವಾಳ ಹೂಡದಿದ್ದರೂ ಒಂದು ಕಾಲಕ್ಕೆ ಓದುಗ ಮಾಲೀಕನಾಗಿದ್ದ. ಆದರೆ, ನಂತರದ ದಿನಗಳಲ್ಲಿ ಜಾಹೀರಾತುದಾರರು ಪತ್ರಿಕೋದ್ಯಮದ ಸ್ವರೂಪ ನಿರ್ಧರಿಸುವಂತಹ ಸ್ಥಿತಿ ರೂಪುಗೊಂಡಿತು. ಮತ್ತು ಅದಕ್ಕಾಗಿ ಪತ್ರಿಕೆಗಳು ಪ್ರಸರಣ ಸಂಖ್ಯೆ ಹೆಚ್ಚಿಸಿಕೊಳ್ಳುವ ಅನಿವಾರ್ಯ ಒತ್ತಡವನ್ನು ಎದುರಿಸಬೇಕಾಯಿತು. ಅದರ ಫಲವಾಗಿ ಮುಂಚೂಣಿಯಲ್ಲಿದ್ದ ಸಾಮಾಜಿಕ ಕಾಳಜಿಗಳು ಹಿಂದೆ ಸರಿದವು. ಜಾಹೀರಾತು ರಹಿತ ಪತ್ರಿಕೆ ತರುವ ಸಾಹಸ ಮಾಡಿದ ಲಂಕೇಶ್ ತಮ್ಮ ವಾರಪತ್ರಿಕೆಯ ಮೂಲ ರಾಜಕೀಯ- ಸಾಂಸ್ಕೃತಿಕ ಬದುಕಿನ ಸ್ವರೂಪ ರೂಪುಗೊಳ್ಳುವುದಕ್ಕೆ ಕಾರಣರಾಗಿದ್ದರು. ಈಗ ಅದೆಲ್ಲವೂ ಇತಿಹಾಸದ ಭಾಗ. ವರ್ತಮಾನದ ಪತ್ರಿಕೋದ್ಯಮ- ಮಾಧ್ಯಮಗಳು ಸಾಗುತ್ತಿರುವ ದಿಕ್ಕು ಆತ್ಮಹತ್ಯಾತ್ಮಕ ಸ್ವರೂಪದ್ದಾಗಿದೆ. ಓದುಗ- ಸಾಮಾಜಿಕ ಕಾಳಜಿಗಳು- ಬಹುಸಂಖ್ಯಾತ ಗ್ರಾಮೀಣರು, ಅವರ ನೋವು-ನಲಿವುಗಳು ಮಾಧ್ಯಮಗಳಿಗೆ ಬೇಡವಾಗಿದೆ. ಜನರ ನಾಡಿಮಿಡಿತ ಅರಿಯುವ ಮತ್ತು ಅದಕ್ಕೆ ಸ್ಪಂದಿಸುವ ಸಂವೇದನೆಯನ್ನು ಕನ್ನಡದ ಮಾಧ್ಯಮಲೋಕ ಕಳೆದುಕೊಂಡಿದೆ. ಪ್ರಚಾರಕ್ಕೆ ಬರುವುದಕ್ಕಾಗಿ, ಮಾರುಕಟ್ಟೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಅತ್ಯಂತ ಕೀಳುಮಟ್ಟಕ್ಕೆ ಇಳಿಯಲೂ ಮಾಧ್ಯಮಗಳು ಹಿಂದೇಟು ಹಾಕುತ್ತಿಲ್ಲ ಎಂಬುದು ವಿಷಾದದ ಸಂಗತಿ. ಹಿಂದೆ ಸಾರ್ವಜನಿಕ ಬದುಕನ್ನು ರೂಪಿಸಿದ ಮಾಧ್ಯಮಗಳು ಸ್ವತಃ ತಾವೇ ಸಂಯಮ ಕಳೆದುಕೊಂಡ ‘ಗುಂಪು’ ಆಗಿದೆ. ಮಾಧ್ಯಮಗಳ ಹೊಣೆಗೇಡಿ ವರ್ತನೆಯಿಂದಲೇ ಕನ್ನಡದ ಪ್ರಮುಖ ಲೇಖಕರಾದ ಕಲಬುರ್ಗಿ, ಅನಂತಮೂರ್ತಿ ಅವರು ಕೊನೆಯ ದಿನಗಳು ಅಸಹನೀಯಗೊಂಡವು. ಕಲಬುರಗಿಯವರ ವಿರುದ್ಧ ಮಾಧ್ಯಮಗಳು ರೂಪಿಸಿದ ಸಾಮಾಜಿಕ ಅಭಿಪ್ರಾಯವು ಅವರ ಹತ್ಯೆಯಲ್ಲಿ ಪರ್ಯವಸನಗೊಂಡಿತು. ಸಾಮಾಜಿಕ ಕಾಳಜಿ ಇಲ್ಲದ- ರಾಜಕೀಯ, ಅಲ್ಲ ಪಕ್ಷದ ಪರ ನಿಲುವು ತಳೆಯಲು ಹಿಂದೇಟು ಹಾಕದ, ವ್ಯಕ್ತಿ ಆರಾಧನೆಗಳಲ್ಲಿ ತೊಡಗಿಕೊಂಡಿರುವ ಕರ್ನಾಟಕ ಮಾಧ್ಯಮದ ಮುಂದಿನ ನಡೆಯು ಯಾವ ದಿಕ್ಕಿಗೆ ಹೊರಳಬಹುದು ಎಂಬುದು ಕುತೂಹಲಕರ ಸಂಗತಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಬಸವೇಶ್ವರ ಮತ್ತು ಅವನ ಕಾಲ