ನೂತನ ಜಿಲ್ಲೆಯ ನೂರೆಂಟು ಸಮಸ್ಯೆಗಳು:

ನೂತನ ಜಿಲ್ಲೆಯ ನೂರೆಂಟು ಸಮಸ್ಯೆಗಳು: ಗೋಳು ಕೇಳೋರ್‍ಯಾರು?


ರಾಜ್ಯದ ನೂತನ ಜಿಲ್ಲೆ ಯಾದಗಿರಿ ಹಿಂದಿನ ಬಿಜೆಪಿ ಸರಕಾರದ ಕೊಡುಗೆ. ಐದು ವರುಷದ ಅವಯಲ್ಲಿ ಬಿಜೆಪಿ ಸರಕಾರ ಘೋಷಿಸಿದ ಏಕೈಕ ಜಿಲ್ಲೆ ಇದು. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಗುಲ್ಬರ್ಗ ಜಿಲ್ಲೆಯ ವಿಭಜನೆಯನ್ನು ಯಾದಗಿರಿ ನೂತನ ಜಿಲ್ಲಾ ಕೇಂದ್ರವಾಗಿ ಪ್ರಕಟಿಸುವ ಮೂಲಕ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗು ಮಾಡಿದ್ದರು. ಭೌಗೋಳಿಕವಾಗಿ ಎರಡನೇ ದೊಡ್ಡ ಜಿಲ್ಲೆಯಾಗಿದ್ದ ಗುಲ್ಬರ್ಗ ವಿಭಜಿಸುವುದು ಅನಿವಾರ್ಯವೂ ಅಗತ್ಯವೂ ಆಗಿತ್ತು. ಅದನ್ನು ಜಿಲ್ಲಾ ಪುನರ್‌ವಿಂಗಡಣೆಯ ಕುರಿತು ಅಧ್ಯಯನ ನಡೆಸಿದ ಸಮಿತಿಗಳು ಖಚಿತ ಪಡಿಸಿದ್ದವು. ಜಿಲ್ಲಾ ಕೇಂದ್ರ ಯಾವುದು ಆಗಬೇಕು? ಎಂಬ ಬಗ್ಗೆ ಭಿನ್ನ ಅಭಿಪ್ರಾಯ ಕೇಳಿ ಬಂದದ್ದರಿಂದ ನೂತನ ಜಿಲ್ಲೆಯ ಘೋಷಣೆ ಮರೀಚಿಕೆ ಆಗಿತ್ತು. ಗದಗ - ಹಾವೇರಿ, ದಾವಣಗೆರೆ, ಬಾಗಲಕೋಟ ಜಿಲ್ಲೆಗಳ ರಚನೆ ಮಾಡಿದ ಜೆಎಚ್ ಪಟೇಲ್ ನೇತೃತ್ವದ ಸರಕಾರ ತೀವ್ರ ಒತ್ತಡ ಎದುರಾದ ಹಿನ್ನೆಲೆಯಲ್ಲಿ ಗುಲ್ಬರ್ಗ ವಿಭಜನೆಯನ್ನು ಕೈ ಬಿಟ್ಟಿತ್ತು.

ಜಿಲ್ಲಾ ಕೇಂದ್ರ ಯಾದಗಿರಿ ಆಗಬೇಕೋ? ಅಥವಾ ಕೇಂದ್ರದಲ್ಲಿ ಇರುವ ಶಹಾಪುರ ಅಥವಾ ಐತಿಹಾಸಿಕ ಕಾರಣಗಳಿಂದ ಮಹತ್ವದಾಗಿದ್ದ ಸುರಪುರವೋ? ಎಂಬ ಅಂಶ ಜಿಜಸೆಗೆ ಕಾರಣವಾಗಿತ್ತು. ಉದ್ದೇಶಿತ ನೂತನ ತಾಲೂಕು ಕೇಂದ್ರಗಳಿಂದ ಸಮಾನ ದೂರದಲ್ಲಿ ಇರುವ ನಗರ ಜಿಲ್ಲಾ ಕೇಂದ್ರ ಆಗಬೇಕು ಎಂಬ ವಾದವೂ ಇತ್ತು. ಆದರೆ, ಸ್ಥಳೀಯ- ಪ್ರಮುಖ ರಾಜಕೀಯ ನಾಯಕರ ಹಗ್ಗ ಜಗ್ಗಾಟದಿಂದ ಗುಲ್ಬರ್ಗದ ವಿಭಜನೆಯು ಬಿಡಿಸಲಾಗದ ಕಗ್ಗಂಟಾಗಿ ಪರಿವರ್ತನೆ ಆಗಿತ್ತು. ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಪ್ಯಾಕೇಜ್ ಮೇಲೆ ಪ್ಯಾಕೇಜ್ ಘೋಷಿಸುವುದರಿಂದಲೇ ಎಲ್ಲವೂ ಸಾಧ್ಯವಾಗುತ್ತದೆ ಎಂದು ಭಾವಿಸಿದ್ದ ಅಂದಿನ ಮುಖ್ಯಮಂತ್ರಿಗಳು ಅದರ ಭಾಗವಾಗಿ ನಡೆಸಿದ ಮೊದಲ ಸಂಪುಟ ಸಭೆಯಲ್ಲಿ (೨೦೦೯) ಯಾದಗಿರಿಯನ್ನು ರಾಜ್ಯದ ೩೦ನೇ ಜಿಲ್ಲೆಯಾಗಿ ಘೋಷಿಸುವ ನಿರ್ಣಯ ತೆಗೆದುಕೊಳ್ಳುವಂತೆ ನೋಡಿಕೊಂಡಿದ್ದರು. ಅದಾಗಿ ನಾಲ್ಕು ವರುಷಗಳೇ ಕಳೆದಿವೆ. ಜಿಲ್ಲಾ ಕೇಂದ್ರ ಘೋಷಿಸುವಾಗ ಇದ್ದ ಉಮೇದು ಅದನ್ನು ಕಟ್ಟುವ ವೇಳೆಗಾಗಲೇ ಇಳಿದು ಹೋಗಿತ್ತು. 
ಹತ್ತು ತಾಲೂಕುಗಳಿದ್ದ ಗುಲ್ಬರ್ಗ ಜಿಲ್ಲೆಯನ್ನು ವಿಭಜಿಸುವ ವೇಳೆ ಅರ್ಧಕ್ಕೆ ಇಳಿಸಬಹುದಿತ್ತು. ತಲಾ ಐದು ತಾಲೂಕುಗಳಿರುವ ಎರಡು ಜಿಲ್ಲೆಗಳನ್ನು ರಚಿಸಿದ್ದರೆ ವಿಭಜನೆಗೊಂದು ತಾರ್ಕಿಕ ಅರ್ಥ ಇರುತ್ತಿತ್ತು ಮತ್ತು ಬರುತ್ತಿತ್ತು. ರಾಜಕೀಯ ಒತ್ತಡಗಳಿಗೆ ಮಣಿದು ಕೇವಲ ಮೂರು ತಾಲೂಕುಗಳನ್ನು ಒಳಗೊಂಡ ಹೊಸ ಜಿಲ್ಲೆ ರಚಿಸಲಾಯಿತು. ಯಾದಗಿರಿ, ಶಹಾಪುರ ಮತ್ತು ಸುರಪುರ ತಾಲೂಕುಗಳನ್ನು ಒಳಗೊಂಡ ಯಾದಗಿರಿ ಜಿಲ್ಲೆಯು ಗಾತ್ರದಲ್ಲಿ ಅತ್ಯಂತ ಸಣ್ಣದಿರುವ ಜಿಲ್ಲೆಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ವಿಭಜನೆಯ ನಂತರ ಮೂರು ತಾಲೂಕುಗಳನ್ನು ಕಳೆದುಕೊಂಡರೂ ಗುಲ್ಬರ್ಗದ ಗಾತ್ರ ಕಡಿಮೆಯೇನು ಆಗಲಿಲ್ಲ. ಸದ್ಯ ಜಿಲ್ಲಾ ಕೇಂದ್ರವು ತಾಲೂಕು ಕೇಂದ್ರಗಳಿಂದ ಸಮಾನ ಅಂತರದಲ್ಲಿ ಇದೆ ಎಂಬುದು ಮಾತ್ರ ಸಮಾಧಾನದ ಸಂಗತಿ.
ಯಾದಗಿರಿಯು ನೂತನ ಜಿಲ್ಲೆ ಆಗಿ ಪರಿವರ್ತನೆಗೊಂಡ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಸಡಗರದ ಸವಿ ಮುಗಿಯುವ ಮುನ್ನವೇ ವಾಸ್ತವದ ಕಹಿನೆರಳು ಸುತ್ತಿಕೊಳ್ಳಲು ಆರಂಭಿಸಿತು. ರಾಜ್ಯ ಸರಕಾರ ಮನಸ್ಸು ಮಾಡಿದ್ದರೆ ಅರ್ಥಾತ್ ಇಚ್ಛಾಶಕ್ತಿ ತೋರಿಸಿದ್ದರೆ ಬೆಟ್ಟದಂತೆ ಬಂದಿದ್ದ ಕಷ್ಟ ಮಂಜಿನ ಹಾಗೆ ಕರಗಿ ಹೋಗುತ್ತಿತ್ತು. ಕಲ್ಪನೆಯಲ್ಲಿ, ಮಾತಿನಲ್ಲಿ ಸಾಧ್ಯವಾದದ್ದು ಸಾಕಾರಗೊಳ್ಳುವುದು ಕಷ್ಟದ ಕೆಲಸ. ಮಾತಿನಲ್ಲಿಯೇ ಕಟ್ಟಿದ ಮಂಟಪ ಎಷ್ಟು ಹೊತ್ತು ನಿಂತೀತು? ನೂತನ ಜಿಲ್ಲಾ ಕೇಂದ್ರ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ರಾಜ್ಯ ಸರಕಾರ ೩೦೦ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿತು. ಆ ಪೈಕಿ ರಾಜಧಾನಿಯಿಂದ ಹೊರಟ ಹಣದ ಪ್ರಮಾಣ ಕೋಟಿಗಳಲ್ಲಿ ಅಲ್ಲ ಲಕ್ಷಗಳಲ್ಲಿ ಇತ್ತು. ಹಣ ಹರಿದು ಬರುವುದರ ಪ್ರಮಾಣ ಹೆಚ್ಚಲಿಲ್ಲ ಅಷ್ಟೇ ಅಲ್ಲ ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳುವದರತ್ತ ಕೂಡ ಗಮನ ಹರಿಯಲಿಲ್ಲ. ದೂರದೃಷ್ಟಿ ಮತ್ತು ಇಚ್ಛಾಶಕ್ತಿಯುಳ್ಳ ಪ್ರಬಲ ಸಚಿವರಿಗೆ ಉಸ್ತುವಾರಿ ನೀಡಿದ್ದರೆ ಚೆನ್ನಾಗಿರುತ್ತಿತ್ತು. ಜಿಲ್ಲೆಯ ಮೆದಲ ಉಸ್ತುವಾರಿ ಹೊಣೆಗಾರಿಕೆ ಹೊತ್ತದ್ದು ಬಾಲಚಂದ್ರ ಜರಕಿಹೊಳಿ ಅವರು ಒಮ್ಮೆಯೂ ಜಿಲ್ಲೆಗೆ ಭೇಟಿ ಮಾಡಲಿಲ್ಲ. ಪ್ರಗತಿ ಪರಿಶೀಲನೆ ನಡೆಸುವ ಮಾತಂತೂ ದೂರವೇ ಉಳಿಯಿತು. ನಂತರ ಯಾದಗಿರಿ ಉಸ್ತುವಾರಿ ಹೊಣೆ ಹೊತ್ತದ್ದು ಮುಮ್ತಾಜ್ ಅಲಿ ಖಾನ್. ಪ್ರತಿ ಶನಿವಾರ ತಪ್ಪದೇ ಜಿಲ್ಲೆಗೆ ಭೇಟಿ ನೀಡುತ್ತಿದ್ದ ಸಚಿವರು ಸಭೆ-ಸಮಾರಂಭ, ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ, ಇದ್ದ ಕೆಲವೇ ಅಕಾರಿಗಳಿಗೆ ತಾಕೀತು ಮಾಡಿ ತೆರಳುತ್ತಿದ್ದರು. ಅದಾದ ನಂತರ ಜಿಲ್ಲೆಯವರೇ ಆದ ರಾಜುಗೌಡರು ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿದ್ದರು. ಈಗ ಹಿಂದೆ ಸಪ್ತಖಾತೆಗಳ ಜವಾಬ್ದಾರಿ ಹೊತ್ತಿದ್ದ ಬಾಬುರಾವ ಚಿಂಚನಸೂರ ಅವರು ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. 
ಪ್ರಾದೇಶಿಕ ಅಸಮಾನತೆ ಅಧ್ಯಯನ ಉನ್ನತಾಕಾರ ಸಮಿತಿಯು ೨೦೦೨ರಲ್ಲಿ ಸಲ್ಲಿಸಿದ ವರದಿಯಲ್ಲಿ (ನಂಜುಂಡಪ್ಪ ವರದಿ) ಯಾದಗಿರಿ ಜಿಲ್ಲೆಯಲ್ಲಿ ಈಗ ಇರುವ ಮೂರು ತಾಲೂಕುಗಳೂ ಅತ್ಯಂತ ಹಿಂದುಳಿದ ತಾಲೂಕುಗಳಾಗಿದ್ದವು. ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳ ಪೈಕಿ ಸುರಪುರ ೧೫೭ನೇ ಸ್ಥಾನದಲ್ಲಿ ಇದ್ದರೆ ಯಾದಗಿರಿ ೧೬೨ ಮತ್ತು ಶಹಾಪುರ ೧೭೧ನೇ ಸ್ಥಾನದಲ್ಲಿದ್ದವು. ಆದ್ದರಿಂದ ಅತ್ಯಂತ ಹಿಂದುಳಿದ ಪ್ರದೇಶಕ್ಕೆ ಸೇರಿದ ಈ ಜಿಲ್ಲೆಗೆ ನೂತನ ಜಿಲ್ಲೆಯಾಗುವ ಭಾಗ್ಯ ದೊರೆತದ್ದು ಈ ಭಾಗದ ದೆಸೆಯನ್ನೇ ಬದಲಿಸುವುದಕ್ಕೆ ಕಾರಣವಾಗಬಹುದು ಎಂಬ ಆಶಾಭಾವನೆ ಮೂಡಿಸಿತ್ತು. ಆದರೆ, ಕಳೆದ ಐದು ವರುಷಗಳಲ್ಲಿ ಆದ ಬೆಳವಣಿಗೆಗಳು ನಿರೀಕ್ಷೆಗಳನ್ನು ಹುಸಿಗೊಳಿಸಿವೆ ಮತ್ತು ಆಸೆಗಳನ್ನು ಚಿವುಟಿ ಹಾಕಿವೆ. ವಿಶೇಷ ಕಾಳಜಿ- ಆಸಕ್ತಿ ಮತ್ತು ಇಚ್ಛಾಶಕ್ತಿಗಳಿಂದ ಸಾಧನೆ ಸಾಧ್ಯವಾಗಬಹುದಿತ್ತು. ಆದರೆ, ನಿರಾಸಕ್ತಿ ಮತ್ತು ಕಾಟಾಚಾರಕ್ಕಾಗಿ ಮಾಡುವ ಕ್ರಿಯೆಗಳಿಂದಾಗಿ ಯಾದಗಿರಿಯು ತನ್ನ ಹಿಂದಿನ ಸ್ಥಿತಿಗಿಂತ ಮೇಲೆ ಅಥವಾ ಮುಂದೆ ಬರುವುದು ಸಾಧ್ಯವಾಗಿಲ್ಲ.
ಯಾದಗಿರಿ ಜಿಲ್ಲೆಯಲ್ಲಿ ೧೨೦೦ಕ್ಕೂ ಹೆಚ್ಚು ಸರಕಾರಿ ಹುದ್ದೆಗಳು ಖಾಲಿ ಇವೆ. ೧೮ ಇಲಾಖೆಗಳಲ್ಲಿ ಜಿಲ್ಲಾ ಮುಖ್ಯಸ್ಥರೇ ಇಲ್ಲ. ಜಿಲ್ಲೆಯಲ್ಲಿ ಈಗ ಇರುವ ಪ್ರತಿಯೊಬ್ಬ ಅಕಾರಿಯೂ ಕನಿಷ್ಠ ಎರಡು ಹುದ್ದೆಗಳ ಹೆಚ್ಚುವರಿ ಹೊಣೆಗಾರಿಕೆಯನ್ನು ಹೊರಬೇಕಾಗುತ್ತಿದೆ. ಇದರಿಂದಾಗಿ ಸರಕಾರದಿಂದ ಆಯಾಚಿತವಾಗಿ ಬರುವ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸಾಧ್ಯವಾಗುತ್ತಿಲ್ಲ.  ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬರುವ ಸರಕಾರಿ ಯೋಜನೆಗಳ ಪ್ರಮಾಣ ಶೇ.೫೦ಕ್ಕಿಂತ ಕಡಿಮೆ. ಅನುದಾನದ ಸದ್ಬಳಕೆ ಸಾಧ್ಯವಿಲ್ಲದ ಮತ್ತು ಸಾಧ್ಯವಾಗದ ಕಡೆಗಳಲ್ಲೆಲ್ಲ ದುರ್ಬಳಕೆ ಆಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಉದ್ಯೋಗ ಖಾತರಿಯಂತಹ ಕೂಲಿ ನೀಡುವ ಯೋಜನೆಯ ಹಣ ಒಂದೇ ದಿನ ಹತ್ತು ಕೋಟಿಗೂ ಹೆಚ್ಚು  ಖರ್ಚಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಸರಕಾರದಿಂದ ಕೇವಲ ಅನುದಾನ ಹರಿದು ಬಂದರೆ ಮಾತ್ರ ಸಾಲದು ಅದನ್ನು  ಉದ್ದೇಶಿತ ಯೋಜನೆಗಳಿಗೆ ಬಳಸುವುದಕ್ಕೆ ಅನುವಾಗುವಂತಹ ಸಿಬ್ಬಂದಿಯೂ ಇರಬೇಕು. ಜಾರಿಗೆ ತರುವ ಅಕಾರಿ ಮತ್ತು ಕೊರತೆಯಿಲ್ಲದ ಅನುದಾನಗಳೆರಡೂ ಕೂಡಿದರೆ ಮಾತ್ರ ಮೂಲಸೌಕರ್ಯಗಳೂ ಸೇರಿದಂತೆ ಪ್ರಗತಿಯತ್ತ ಹೆಜ್ಜೆ ಹಾಕಲು ಸಾಧ್ಯ.
ಯಾದಗಿರಿ ಕಂದಾಯ ದಾಖಲೆಗಳಲ್ಲಿ ಜಿಲ್ಲೆ ಆಗುವುದಕ್ಕಿಂತ ಬಹಳಷ್ಟು ಮುಂಚೆಯೇ ಶೈಕ್ಷಣಿಕ ಜಿಲ್ಲೆ ಆಗಿತ್ತು. ಆದರೂ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಕಡೆಗೆ ಗಮನ ಹರಿಸುವುದು ಸಾಧ್ಯವಾಗಿಲ್ಲ. ಮೂರು ತಾಲೂಕುಗಳಿರುವ ಸಣ್ಣಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದರೆ ಸಿಬ್ಬಂದಿ ಕೊರತೆಯ ಪ್ರಮಾಣ ಅರಿವಿಗೆ ಬರುತ್ತದೆ. ಪ್ರೌಢಶಾಲೆಗಳ ಸ್ಥಿತಿಯೂ ಇದಕ್ಕೆ ಹೊರತೇನಲ್ಲ. ಪ್ರೌಢಶಾಲೆಗಳಿಗಾಗಿ ೩೨೦ ಶಿಕ್ಷಕರ ಅಗತ್ಯವಿದೆ. ಕೊರತೆ ಮತ್ತು ಇಲ್ಲಗಳ ನಡುವೆ ನಲುಗುತ್ತಿರುವ ಜಿಲ್ಲೆಯು ಸಹಜವಾಗಿಯೇ ಎಸ್‌ಎಸ್‌ಎಲ್‌ಸಿ ಮತ್ತು  ಪಿಯುಸಿ ಪರೀಕ್ಷೆಗಳಲ್ಲಿ  ಕೊನೆಯ ಸ್ಥಾನಗಳಲ್ಲಿ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತಿದೆ. ಅಥವಾ ಅದಕ್ಕಾಗಿ ಪೈಪೋಟಿ ನಡೆಸಬೇಕಾಗುತ್ತಿದೆ. ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಾತ್ರ ಸ್ವಂತ ಕಟ್ಟ ಹೊಂದಿರುವ ಭಾಗ್ಯವಂತರಾಗಿದ್ದಾರೆ. ಯಾದಗಿರಿ ನಗರಸಭೆ ಕಚೇರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳ ಕಚೇರಿ ಹೊರತು ಪಡಿಸಿದರೆ  ಎಲ್ಲ ಸರಕಾರಿ ಕಚೇರಿಗಳೂ ಖಾಸಗಿ ಕಟ್ಟಡಗಳಲ್ಲಿಯೇ ನಡೆಯುತ್ತಿವೆ. ಹಿಂದೆ ಉಪವಿಭಾಗ ಅಕಾರಿಗಳ ಕಚೇರಿಯಾಗಿದ್ದ  ಕಟ್ಟಡವನ್ನೇ ಈಗ ಜಿಲ್ಲಾಕಾರಿಗಳ ಕಚೇರಿ ಆಗಿ ಪರಿವರ್ತಿಸಲಾಗಿದೆ. ಜಿಲ್ಲಾ ಪಂಚಾಯಿತಿ ಕಚೇರಿ ಸೇರಿದಂತೆ ಎಲ್ಲ ಸರಕಾರಿ ಕಚೇರಿಗಳೂ ಖಾಸಗಿ ಕಟ್ಟಡಗಳಲ್ಲಿ ವೆ. 
ಯಾದಗಿರಿಯು ಪ್ರಧಾನವಾಗಿ ಕೃಷಿ ಆರ್ಥಿಕತೆಯಿಂದ ಕೂಡಿದ ಜಿಲ್ಲೆ. ಭೀಮಾ ಮತ್ತು ಕೃಷ್ಣಾ ನದಿಯ ನಡುವೆ ಬರುವ ಜಿಲ್ಲೆಯ ಶಹಾಪುರ-ಸುರಪುರ ತಾಲೂಕಿನ ಹಳ್ಳಿಗಳು ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ನೀರಾವರಿ ಹೊಂದಿವೆ. ಆದರೆ, ನಿಷೇತ ಬೆಳೆಗಳ ಹಾವಳಿ ಹೆಚ್ಚಿರುವುದರಿಂದ ನೀರಾವರಿ ಯೋಜನೆಯ ಬಾಲದ ತುದಿಯಲ್ಲಿ ಇರುವವರಿಗೆ ಒಮ್ಮೆ ಕೂಡ ಹನಿ ನೀರು ನೋಡುವುದು ಸಾಧ್ಯವಾಗಿಲ್ಲ. ನೀರಾವರಿ ಇದ್ದರೂ ಕೃಷಿ ಉತ್ಪಾದನೆಯು ರಾಜ್ಯಮಟ್ಟದ ಸರಾಸರಿ ಪ್ರಮಾಣಕ್ಕಿಂತ ಕೆಳಮಟ್ಟದಲ್ಲಿದೆ. ಇಡೀ ಜಿಲ್ಲೆಯಲ್ಲಿ ಒಂದು ಕೂಡ ಕೈಗಾರಿಕಾ ವಸಾಹತು ಪ್ರದೇಶ ಇಲ್ಲ. ಕಡೇಚೂರು ಗ್ರಾಮದ ಬಳಿ ಕೈಗಾರಿಕೆಗಳನ್ನು ಆರಂಭಿಸುವುದಕ್ಕಾಗಿ ೩,೩೦೦ ಎಕರೆ ಪ್ರದೇಶವನ್ನು ಸ್ವಾನ ಪಡಿಸಿಕೊಂಡದ್ದೇ ಸಾಧನೆ. ಅದಿನ್ನೂ ಡಿನೋಟಿಫೈ ಆಗಿಲ್ಲ  ಎಂಬುದು ಸಮಾಧಾನದ ಸಂಗತಿ. ಆದ್ದರಿಂದ ಮುಂದೊಂದು ದಿನ ಅಲ್ಲಿ ಕೈಗಾರಿಕೆಗಳು ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. 
ದಶ ದಿಕ್ಕುಗಳಿಂದಲೂ ಕಾಡುತ್ತಿರುವ ಸಮಸ್ಯೆಗಳ ಹುತ್ತದಿಂದ ಹೊರಬಂದು ಹೊಸ ಕನಸುಗಾರಿಕೆ ಮತ್ತು ಕಸುವಿನೊಂದಿಗೆ ಬೆಳೆಯುವುದಕ್ಕೆ ಇಚ್ಛಾಶಕ್ತಿಯ ಮಾಂತ್ರಿಕ ಸ್ಪರ್ಶ ಅತ್ಯಗತ್ಯ. ಹಿಂದಿನ ಸರಕಾರ ಘೋಷಿಸಿದ ನೂತನ ಜಿಲ್ಲೆಯ ಅಭಿವೃದ್ಧಿಗೆ ನೂತನ ಸರಕಾರ ಮುಂದಾಬಹುದೇ? ಅಥವಾ ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ಯಾದಗಿರಿಯ ದುಸ್ಥಿತಿಗೆ ಕೊನೆಯಿಲ್ಲದಂತಾಗುವುದೇ?  ಕಾದು ನೋಡಬೇಕು.
ದೇವು ಪತ್ತಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಬಸವೇಶ್ವರ ಮತ್ತು ಅವನ ಕಾಲ