ಸಂಶೋಧನೆ ಮತ್ತು ನಾನು


ನಾನು ವೃತ್ತಿಪರ (ಪ್ರೊಫೇಷನಲ್) ಸಂಶೋಧಕನಲ್ಲ. ಹವ್ಯಾಸಿ (ಅಮೆಚ್ಯೂರ್) ಮಾತ್ರ. ಇದೇನಿದು ಮೊದಲಿಗೇ ಕೇವಿಯಟ್ ಎಂದು ಭಾವಿಸಬೇಕಿಲ್ಲ. ವೃತ್ತಿಪರರಿಗೆ ಇರುವ ಗಾಢವಾದ ಹಿನ್ನೆಲೆ- ತಿಳುವಳಿಕೆ- ಶಾಸ್ತ್ರೀಯ ಜ್ಞಾನಗಳು ಅವರನ್ನು ಹೆಚ್ಚು ಆಳಕ್ಕೆ ಇಳಿಯುವಂತೆ ಮಾಡಬಲ್ಲವು. ಹಾಗೆಯೇ ಅವು ಅಬೇಧ್ಯವಾದ, ದಟ್ಟವಾದ ಅರಣ್ಯದೊಳಕ್ಕೆ ಹೋಗದಂತೆ ತಡೆಯಬಲ್ಲವು ಕೂಡ. ಚೌಕಟ್ಟಿನೊಳಗಡೆಯೇ ಕೆಲಸ ಮಾಡಬೇಕಾದ ಅನಿವಾರ್ಯ ಅಗತ್ಯವೂ ಇರುತ್ತದೆ. ಅಮೆಚ್ಯೂರ್ ಗಳ ಸಂಗತಿ ಹಾಗಲ್ಲ. ಅವರು ಎಲ್ಲಿ ಬೇಕೆಂದಲ್ಲಿಗೆ ನುಗ್ಗಿ ಬಿಡಬಲ್ಲರು. ಪೂರ್ವಾನುಭವ ಇಲ್ಲದಿದ್ದರೂ ಅಲ್ಲಲ್ಲಿಯೇ ದೊರೆಯುವ ಅನುಭವ ಮತ್ತು ಅದರ ಅರಿವು ಆಧರಿಸಿ ದಟ್ಟಾರಣ್ಯದಲ್ಲಿ, ಮೇಡುಗಳಲ್ಲಿ ಅಲೆಯುವುದಕ್ಕೆ ಹಿಂದೇಟು ಹಾಕುವುದಿಲ್ಲ. ಪೂರ್ವಾನ್ವಯದ ತಿಳುವಳಿಕೆ ಇಲ್ಲದೇ ಇರುವುದರಿಂದ ದೊರೆತ ವಸ್ತು ಅಮೂಲ್ಯ ಹೌದೋ ಅಲ್ಲವೋ ಎಂಬ ಅರಿವು ತಕ್ಷಣಕ್ಕೆ ಆಗುವುದಿಲ್ಲ. ಅದಕ್ಕಾಗಿ ವೃತ್ತಿಪರರಿಗಿಂತ ಹೆಚ್ಚು ಕಷ್ಟ ಪಡಬೇಕಾಗುತ್ತದೆ. ಹಾಗೆ ಪಡುವ ಕಷ್ಟ ಸರಿಯಾದ ದಾರಿಯಲ್ಲಿ ಇದ್ದರೆ ಫಲ ಸಿಕ್ಕುವುದು ಗ್ಯಾರಂಟಿ. ಇಲ್ಲದೇ ಹೋದರೆ ಸುತ್ತಾಡಿ ಪಟ್ಟ ಶ್ರಮವೆಲ್ಲ ವ್ಯರ್ಥ. ದೊರೆತ ಅನುಭವವೊಂದೇ ಲಾಭ. ಹೀಗಾಗಿ ಅಮೆಚ್ಯೂರ್ ಗಳಿಗೆ ಭಯ- ನಿರ್ಭಯಗಳೆರಡೂ ಜೊತೆ ಜೊತೆಯಲ್ಲಿಯೇ ಇರುತ್ತವೆ. ಹಾಗೆ ನೋಡಿದರೆ ಅದು ಕೇವಲ ಅಮೆಚ್ಯೂರ್ ಗಳಿಗೆ ಮಾತ್ರ ಸೀಮಿತವೇನಲ್ಲ. ವೃತ್ತಿಪರರು ಮುತ್ತುಗಳಿರುವ ಕಡಲನ್ನೇ ಪತ್ತೆಹಚ್ಚಿ ಅಲ್ಲಿಯೇ ಡೈವ್ ಹೊಡೆದು ಹೆಕ್ಕಿ ತಂದು- ಪಾಲೀಷ್ ಮಾಡಿ ತೊರಿಸುತ್ತಾರೆ. ಆದರೆ, ಅಮೆಚ್ಯೂರ್ ಗಳ ಕಥೆ ಹಾಗಲ್ಲ. ತಮ್ಮ ಸುತ್ತಲಿನ ಕಡಲಲ್ಲಿಯೇ ಡೈವ್ ಹೊಡೆದು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ಹೆಕ್ಕಿ ತಂದು ಅರೆಬರೆಯಾಗಿ ಸಂಸ್ಕರಿಸಿ ನೀಡುತ್ತಾರೆ. ಹಾಗೆ ನೀಡುವಾಗ ಆಕಸ್ಮಿಕವಾಗಿ ಅಪೂರ್ವವಾದ- ಅಮೂಲ್ಯವಾದ ವಸ್ತು- ಸಂಗತಿಗಳು ದೊರೆಯಬಹುದು. ಇಲ್ಲವೇ ಮಣಿ- ಮುತ್ತು- ವಜ್ರಗಳಂತೆ ಭಾಸವಾದರೂ ಸಾಮಾನ್ಯವಾದವುಗಳು ಆಗಿರಬಹುದು. ಒಂದೆಡೆ ಖಚಿತತೆ ಇದ್ದರೆ ಮತ್ತೊಂದೆಡೆ ಬೈ ಚಾನ್ಸ್ ಅಥವಾ ಲಕ್ ಇರಬೇಕಾಗುತ್ತದೆ. ಹೀಗೆ ಈ ವಾದವನ್ನು ಮತ್ತಷ್ಟು ವಿವರಿಸಬಹುದು. ವಿಶ್ಲೇಷಿಸಬಹುದು. ನಾನು ಅದನ್ನು ಮಾಡಲು ಹೋಗುವುದಿಲ್ಲ.
ನಾನು ಸಂಶೋಧನೆಯ ಕ್ಷೇತ್ರಕ್ಕೆ ಬಂದದ್ದು ಆಕಸ್ಮಿಕ. ಹಾಗೆಯೇ ಅದಕ್ಕೆ ಯಾವುದೇ ಅಕಾಡೆಮಿಕ್ ಹಿನ್ನೆಲೆ ಇಲ್ಲ ಎಂದು ಮೊದಲಿಗೇ ಸ್ಪಷ್ಟಪಡಿಸುತ್ತೇನೆ. ಪದವಿ ವಿದ್ಯಾರ್ಥಿಯಾಗಿದ್ದಾಗ ಕಥೆ- ಕವಿತೆ ಬರೆದುಕೊಂಡಿದ್ದ ನಾನು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಆಗಲೇ ಧಾರವಾಡದಲ್ಲಿ ಇರುವ ಕಾರಣಕ್ಕಾಗಿ ಹಿಂದೂಸ್ತಾನಿ ಸಂಗೀತ ಕೇಳುವ ಅವಕಾಶ- ಹವ್ಯಾಸ ಆರಂಭವಾಯಿತು. ಎಂ.ಎ. ಮುಗಿಯುತ್ತಿದ್ದಂತೆಯೇ ಖಾಸಗಿ ಕಾಲೇಜೊಂದರಲ್ಲಿ ಇಂಗ್ಲಿಷ್ ಕಲಿಸುವ ಅರೆಕಾಲಿಕ ಮೇಷ್ಟ್ರ ಕೆಲಸ. ಹಾಗೆಯೇ ಅರೆಕಾಲಿಕವಾಗಿ ಸಂಶೋಧನೆಯನ್ನೂ ಕೈಗೆತ್ತಿಕೊಂಡೆ. ಭಾರತೀಯ ಆಂಗ್ಲ ಸಣ್ಣಕಥೆಗಳು ನನ್ನ ಸಂಶೋಧನೆಯ ವಸ್ತುವಾಗಿತ್ತು. ಹಾಗೆ ಅದನ್ನು ಆಯ್ದುಕೊಳ್ಳುವುದಕ್ಕೆ ನನಗೆ ಸಣ್ಣಕಥೆಗಳ ಬಗೆಗಿದ್ದ ಪ್ರೀತಿ ಹಾಗೂ ಅದಕ್ಕಿಂತ ಹೆಚ್ಚಾಗಿ ನನ್ನ ಗೈಡ್ ‘ಇದು ಸುಲಭ’ ಎಂದು ಮಾರ್ಗದರ್ಶನ ಮಾಡಿದ್ದು. ಅದು ನನ್ನನ್ನು ಹೆಚ್ಚು ದೂರ ಕರೆದುಕೊಂಡು ಹೋಗಲಿಲ್ಲ. ಪತ್ರಕರ್ತನಾಗಿ ಬೆಂಗಳೂರು ಸೇರಿದ ದಿನಗಳಲ್ಲಿ ದೊರೆತ ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಂಗತಿಗಳನ್ನು ವರದಿ ಮಾಡುವ ಅವಕಾಶದಿಂದಾಗಿ ಮೊದಲೇ ಇದ್ದ ಸಂಗೀತದ ಆಸಕ್ತಿಯ ಜೊತೆಗೆ ದೃಶ್ಯ (ಚಿತ್ರ- ಶಿಲ್ಪ)ಕಲೆಯ ಬಗೆಗೂ ಕುತೂಹಲ ಬೆಳೆಸಿಕೊಂಡೆ. ನಂತರದ ದಿನಗಳಲ್ಲಿ ವೃತ್ತಿಯ ಭಾಗವಾಗಿ ಸಿನಿಮಾ ಜೊತೆಯಾಯಿತು. ವಿದ್ಯಾರ್ಥಿಯಾಗಿದ್ದ ದಿನಗಳಿಂದಲೇ ನನಗೆ ಒಂದು ಕಲಾಪ್ರಕಾರವು ಮತ್ತೊಂದು ಪ್ರಕಾರದೊಂದಿಗೆ ಮುಖಾಮುಖಿಯಾಗಿ ಹೊಸದೊಂದು ಆಯಾಮ ಪಡೆದುಕೊಂಡು ರೂಪುಗೊಳ್ಳುವ ಸಂಗತಿಗಳ ಬಗ್ಗೆ ಪ್ರೀತಿ- ಆಸಕ್ತಿ. ಸಾಹಿತ್ಯದ ನೆರವಿನೊಂದಿಗೆ ಬೆಳೆಯುತ್ತ ಹೋಗುವ ಸಂಗೀತವು ತನ್ನದೇ ಅರ್ಥದ ಛಾಯೆಗಳನ್ನು ಹೊರಡಿಸುತ್ತದೆ. ಮೇರೆಯನ್ನು ವಿಸ್ತರಿಸುತ್ತದೆ. ಸಂಗೀತವು ಕೇವಲ ಸಾಹಿತ್ಯದಿಂದ ಪಡೆಯುವುದಕ್ಕೆ ಮಾತ್ರ ಸೀಮಿತವೇನಲ್ಲ. ಅದ್ಭುತವಾಗಿ ಮರಳಿ ಕೊಡಬಲ್ಲದು ಕೂಡ. ಪದಗಳಲ್ಲಿ ಹೇಳಲಾಗದ, ಮಾತುಗಳಲ್ಲಿ ವಿವರಿಸಲಾಗದ ಸಂಗತಿಗಳನ್ನು ರೇಖೆ- ಬಣ್ಣ- ಶಿಲ್ಪಗಳು ದಾಖಲಿಸಬಲ್ಲವು. ಅವುಗಳಿಗೆ ಅಕ್ಷರಲೋಕದ ಪ್ರೇರಣೆ ಇರಬಹುದು. ಇಲ್ಲದೇ ಇರಬಹುದು. ಹೀಗೆ ಬೇರೆ ಬೇರೆ ಆಯಾಮ- ಸ್ವರೂಪ- ಹಿನ್ನೆಲೆಯ ಕಲೆಗಳು ಪರಸ್ಪರ ಕೂಡಾಡಿ ಹುಟ್ಟಿಸುವ ಬೆರಗು ಹಾಗೂ ಅದು ಸೃಷ್ಟಿಸುವ ಬೆಡಗು ಮೋಹಿತನನ್ನಾಗಿ ಮಾಡಿದ್ದವು. ಕಾವ್ಯ- ಸಂಗೀತ- ದೃಶ್ಯಕಲೆಗಳು ಪರಸ್ಪರ ಸಂಧಿಸುವ ಹಾಗೂ ಸೃಷ್ಟಿಸುವ ‘ಕಥನವಕಾಶ’ವನ್ನು ಕುರಿತ ಸಂಶೋಧನೆಯನ್ನು ಕೈಗೆತ್ತಿಕೊಂಡೆ. ಅಧಿಕೃತವಾಗಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟರ್ ಮಾಡಿಸಿದ ನಂತರ ಶ್ರದ್ಧೆಯಿಂದ ಕೆಲಸ ಕೂಡ ಆರಂಭಿಸಿದೆ. ಸಾರಲೇಖ ಬರೆದು ಚಾಪ್ಟರ್ ಗಳನ್ನು ಸಿದ್ಧಪಡಿಸಿದ್ದಷ್ಟೇ ಲಾಭ. ಸಂಶೋಧನೆಯು ಕೇಳುವ ಶಿಸ್ತು- ಶ್ರದ್ಧೆ- ಸಮಯಗಳನ್ನು ನೀಡುವುದು ಸಾಧ್ಯವಾಗದೇ ಇರುವುದರಿಂದ, ಅಕಾಡೆಮಿಕ್ ಸಂಸ್ಥೆಗಳು ಮಾಡುವ ಕೆಲಸಕ್ಕಿಂತ ವರದಿಗೇ ಹೆಚ್ಚು ಮಹತ್ವ ನೀಡುವ ಕಾರಣದಿಂದ ಅದನ್ನೂ ಅರ್ಧಕ್ಕೆ ಕೈ ಬಿಡಬೇಕಾಯಿತು. ಪಿಎಚ್.ಡಿ. ಗಾಗಿನ ಸಂಶೋಧನೆಯ ಪೂರ್ಣಗೊಂಡಿಲ್ಲ ಎನ್ನುವುದನ್ನು ಬಿಟ್ಟರೆ ಮೊದಲಿಗೆ ಆರಂಭವಾದ ಸಣ್ಣಕತೆಗಳ ಒಡನಾಟ, ನಂತರ ಜೊತೆಯಾದ ಕಥನವಕಾಶದ ಸುತ್ತಲಿನ ಓಡಾಟದ ಹುಡುಕಾಟ ಮುಂದುವರೆದಿದೆ. ಅದು ಯಾವಾಗ ಪೂರ್ಣಗೊಳುತ್ತದೆ? ಪೂರ್ಣಗೊಳ್ಳುತ್ತವೆಯಾ? ಗೊತ್ತಿಲ್ಲ. ಅಕಾಡೆಮಿಕ್ ಶಿಸ್ತಿನಿಂದ ಕಾಲಬದ್ಧ ಮಿತಿಯೊಳಗೆ ಕೆಲಸ ಮಾಡುವುದು ನನಗೆ ಕಷ್ಟದ ಕೆಲಸ. ವೃತ್ತಿಯಿಂದ ಪತ್ರಕರ್ತನಾಗಿರುವ ನನಗೆ ಡೆಡ್ ಲೈನ್ ಬಗ್ಗೆ ಖಚಿತವಾದ ಅರಿವು ಇದೆ. ಆದರೂ ಅದ್ಯಾಕೋ ಸಂಶೋಧನೆಗೆ ಕಾಲಮಿತಿ ಹಾಕುವ ಬಗ್ಗೆ ನಂಬಿಕೆ ಇಲ್ಲ. ಯಾಕೆಂದರೆ ನನ್ನ ಸಂಶೋಧನೆಯ ಓದು- ಬರಹಕ್ಕಾಗಿ ಕಾಲಮಿತಿ ಹಾಕಿಕೊಂಡಾಗಲೆಲ್ಲ ನನಗೆ ಯಶ ದೊರಕಿಲ್ಲ. ಅಮೂಲ್ಯ ಸಂಗತಿಗಳನ್ನು ಅಥವಾ ಹಾಗೆ ಭಾವಿಸುವ ಸಂಗತಿಗಳನ್ನು ಬದಿಗಿಟ್ಟು ದೊರಕಿದಷ್ಟನ್ನೇ ತೆಗೆದುಕೊಂಡು ತರಾತುರಿಯಲ್ಲಿ ನಿರ್ಣಯಕ್ಕೆ ಬರುವುದು ಸರಿಯಲ್ಲ ಎಂಬುದು ನನ್ನ ನಿಲುವು.
ಹೀಗೆ ಸಂಶೋಧನೆಯ ಜಗತ್ತನ್ನು ಅಕಾಡೆಮಿಕ್ ಹಿನ್ನೆಲೆಯಲ್ಲಿ ಆಗಾಗ ಸ್ಪರ್ಶಿಸಿ- ಗುರಿಮುಟ್ಟಲಾಗದೆ ಅರ್ಧಕ್ಕೆ ಮರಳಿ ಬರುವುದೇ ‘ಸಾಧನೆ’ ಆಗಿದ್ದ ನನಗೆ ಮತ್ತೊಮ್ಮೆ ಅರಿಯದ ಕಾಡಿನಲ್ಲಿ ನಡೆಯುವ ಅವಕಾಶ ದೊರೆತದ್ದು ಆಕಸ್ಮಿಕ. ಅದೂ ಪತ್ರಕರ್ತನಾಗಿ ಬೀದರ್ ಸೇರಿದ ಮೇಲೆ. ತನ್ನ ಸುತ್ತಲಿನ ಪರಿಸರ- ಸಂಸ್ಕೃತಿ- ನಂಬಿಕೆ- ಇತಿಹಾಸ- ಬದುಕು ಅರಿಯದಿದ್ದರೆ ಪತ್ರಕರ್ತನಾಗಿ ಒಳ್ಳೆಯ ಕೆಲಸ ಮಾಡುವುದು ಸಾಧ್ಯವಾಗುವುದಿಲ್ಲ. ಹೀಗೆ ಅರಿಯಬೇಕು ಎನ್ನುವ ಆಸೆ, ಅದು ಹುಟ್ಟು ಹಾಕಿದ ಕುತೂಹಲ. ಹಾಗೆಯೇ ಅದೇ ಹೊತ್ತಿಗೆ ಆದ ಅವಮಾನ- ಅದು ಹುಟ್ಟು ಹಾಕಿದ ಛಲ ನನ್ನನ್ನು ಮತ್ತೆ ಸಂಶೋಧನೆಯತ್ತ ಮುಖ ಮಾಡುವಂತೆ ಮಾಡಿತು. ಹೀಗೆ ಹೊರಡುವುದಕ್ಕೆ ಕಾರಣನಾದವನು ಮಹಮೂದ್ ಗಾವಾನ್. ಅದೇ ದಿನಗಳಲ್ಲಿ ಸುತ್ತಲಿನ ಬದುಕಿನ ಬಗೆಗಿದ್ದ ಸಾಹಿತ್ಯ ಆಧಾರಿತ ನೋಟಕ್ರಮಕ್ಕಿದ್ದ ಮಿತಿಯನ್ನೂ ಅರಿಯುವಂತೆ ಮಾಡಿತು. ರಾಜಕಾರಣ-ಸಮಾಜದ ಕಷ್ಟ- ಬದಲಾವಣೆ- ಬೆಳವಣಿಗೆಗಳ ಕುರಿತು ಹೆಚ್ಚು ಫೋಕಸ್ ಆಗುವುದು ಸಾಧ್ಯವಾಯಿತು. ಮುಖ್ಯವಾಹಿನಿಯಲ್ಲಿ ಇರದ ಅಥವಾ ಕಾಣಿಸದ ಹಾಗೆಯೇ ಮುಖ್ಯವಾಹಿನಿಗಿಂತ ಭಿನ್ನವಾದ ಹಾಗೂ ಅದಕ್ಕಿಂತ ದೊಡ್ಡ ಸಾಧನೆ ಮಾಡಿದ ಹಲವು ಸಂಗತಿಗಳು ನಮ್ಮ ಸುತ್ತ ಇವೆ. ಕಣ್ತೆರೆದು ನೋಡಿದರೆ ಮಾತ್ರ ಅವು ಕಾಣಿಸುತ್ತವೆ. ಮುಂಚೂಣಿಯಲ್ಲಿ ಇರುವ ಅಥವಾ ನಾಯಕರ ಸುತ್ತ ಇರುವ ಬಹುಪರಾಕು ಸಂಸ್ಕೃತಿಯ ವಂಧಿಮಾಗಧರು ಸೃಷ್ಟಿಸುವ ಶ್ರೇಷ್ಠತೆ ಹಾಗೂ ಆ ಕುರಿತ ಭ್ರಮೆಗಳೇ ನಿಜವೆಂದು ಭಾಸವಾಗುವ ಸಂಗತಿಗಳು ಅರಿವಿಗೆ ಬರಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ದನಿ ಇಲ್ಲದವರಿಗೆ ಧ್ವನಿಯಾಗಬೇಕು ಎಂಬ ಆಸೆ- ನಿಲುವಿನ ನೋಟಕ್ರಮವು ನನ್ನ ಓದು ಮತ್ತು ಸಂಸ್ಕಾರದ ಮಿತಿಗಳನ್ನು ತೆರೆದಿಟ್ಟಿತು. ಅನ್ ಸಂಗ್ ಹೀರೋಗಳೇ ನನ್ನ ಹುಡುಕಾಟ- ಬರಹದ ವಸ್ತುವಾಗತೊಡಗಿದರು. ಅದನ್ನೇ ಸಂಶೋಧನೆ ಎಂದು ಕರೆಯುತ್ತಾರೆ ಎಂದು ನನಗೆ ಬಹಳ ದಿನಗಳ ವರೆಗೆ ಗೊತ್ತೇ ಇರಲಿಲ್ಲ. ಅಥವಾ ಆ ಬಗ್ಗೆ ಗಮನ ಹರಿಸಿರಲಿಲ್ಲ. ಭೀಕರ ವರ್ತಮಾನ ಮತ್ತು ಆತಂಕಕಾರಿ ಭವಿಷ್ಯದ ಜೊತೆಗೆ ಹೆಣಗಾಡಬೇಕಾದ ದಿನಗಳಲ್ಲಿ ಇತಿಹಾಸ ಎನ್ನುವುದು ಕೇವಲ ಶೋಕಿಯಾಗಿ ಇರುವ ಸಂಗತಿಯೇನಲ್ಲ. ಇತಿಹಾಸ- ಪರಂಪರೆ ಎನ್ನುವುದು ಕಳೆದು ಹೋದ ನಿನ್ನೆಯ ಸಂಗತಿಗಳ ವೈಭವವನ್ನು ಹಾಡಿ ಹೊಗಳುವುದಕ್ಕಾಗಿ ಇರುವಂತಹುದಲ್ಲ. ಹಾಗೆಯೇ ಅಲ್ಲಿನ ವಿಷಾದ- ನೋವಿನ ಸಂಗತಿಗಳನ್ನು ಮುಂದಿಟ್ಟುಕೊಂಡು ಗೋಳೋ ಎಂದು ಅಳುತ್ತ ಕೂಡಬೇಕಿಲ್ಲ. ವರ್ತಮಾನ- ಭವಿಷ್ಯಗಳನ್ನು ರೂಪಿಸಿಕೊಳ್ಳವುದಕ್ಕಾಗಿ ಚರಿತ್ರೆಯ ಪುಟಗಳು ಅತ್ಯಗತ್ಯ. ಹಾಗಂತ ಚರಿತ್ರೆಯಲ್ಲಿ ಸಂಭವಿಸಿದ ಸಂಗತಿಗಳೆಲ್ಲವೂ ವರ್ತಮಾನದ ಸಮಸ್ಯೆಗಳಿಗೆ ಸೂಕ್ತ ಉತ್ತರ ನೀಡುತ್ತವೆ ಎಂದೇನೂ ಅಲ್ಲ. ಹಿಂದಿನ ಘಟನೆಗಳು ನೀಡುವ ಒಳನೋಟ, ತಿಳುವಳಿಕೆಗಳು ನಡಿಗೆಯ ಬಗ್ಗೆ ಎಚ್ಚರ ವಹಿಸಲು ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ‘ನನ್ನಜ್ಜನಿಗೊಂದು ಆನೆಯಿತ್ತು’ ಎಂಬ ಹಳಹಳಿಕೆಗಳಿಂದ ಯಾವುದೇ ಉಪಯೋಗ ಇಲ್ಲ.
ಇತಿಹಾಸವೇ ಹಾಸುಹೊಕ್ಕಾಗಿರುವ, ರಂಗುರಂಗೀನ ಲೋಕವನ್ನು ಅನಾವರಣ ಮಾಡುವ, ಹಾಗೆಯೇ ಹಿಂದುಳಿದ ಹಣೆಪಟ್ಟಿಯೊಂದಿಗೆ ಲೋಕಕ್ಕೆ ಅಷ್ಟೇನು ಪ್ರಿಯವಲ್ಲದ ಬೀದರ್ ಜೊತೆಗಿನ ಒಡನಾಟವು ನನ್ನ ಪಾಲಿಗೆ ಹೊಸ ಲೋಕವನ್ನೇ ತೆರೆದಿಟ್ಟಿತು. ಪತ್ರಕರ್ತನಿಗಿರುವ ಕಾಳಜಿ - ಸಾಹಿತ್ಯದ ವಿದ್ಯಾರ್ಥಿಗಿರುವ ಆಸಕ್ತಿ ಹಾಗೂ ಕುತೂಹಲಗಳು ಹುಡುಕಾಟದತ್ತ ಮನಸ್ಸು ಮಾಡಲು ಪ್ರೇರೇಪಿಸಿದವು. ಅಗೆಯುತ್ತ ಹೋದಂತೆಲ್ಲ ದೊರೆತ ಹೊಸದು ಎನ್ನಿಸುವ ಮುತ್ತು ರತ್ನ ವಜ್ರದಂತಹ ಬೆಲೆಬಾಳುವ ವಸ್ತುಗಳು ಹಾಗೂ ಅವು ಉಂಟು ಮಾಡುವ ಬೆರಗು ಮತ್ತಷ್ಟು ಅದೇ ದಾರಿಯಲ್ಲಿ ನಡೆಯಲು ಪ್ರೇರೇಪಿಸಿದವು. ದೊರೆತ ವಸ್ತುಗಳಿಗೆ ಒಂದು ನೋಟ ಕೊಟ್ಟು ಪ್ರಸ್ತುತ ಪಡಿಸಿದಾಗ ಸುತ್ತಲಿನ ಜನ ಮಾತ್ರವಲ್ಲ, ದೂರದ ಪ್ರದೇಶ- ದೇಶದ ಜನ ಕೂಡ ಇದೆಲ್ಲ ಇಲ್ಲಿಯೇ ಇತ್ತಾ? ಎಂದು ಅಚ್ಚರಿಯಿಂದ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದರು. ಹೀಗೆ ಸಂಶೋಧನೆಯ ದಾರಿಯಲ್ಲಿ ನಡೆಯುವಾಗ ಜೊತೆಯಾಗಿದ್ದವರು ಬೀದರ್ ನ ಇಬ್ಬರು ಹಿರಿಯ ಜೀವಗಳು. ವೃತ್ತಿಯಿಂದ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದ ಬಿ.ಆರ್. ಕೊಂಡಾ ಅವರು ಇತಿಹಾಸದ ಬಗ್ಗೆ ಆಸಕ್ತಿ ಇದ್ದ ಹಿರಿಯ ಜೀವ. ಹಾಗೆಯೇ, ಐತಿಹಾಸಿಕ ಸಂಗತಿಗಳನ್ನು ವಿಚಕ್ಷಣ ದೃಷ್ಟಿಯಿಂದ ನೋಡುವ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ‘ಬೀದರ್ ಕಿ ಆವಾಜ್’ ಹಿಂದಿ ಪತ್ರಿಕೆಯ ಸಂಪಾದಕ -ಹಿರಿಯ ಪತ್ರಕರ್ತ ಕಾಜಿ ಅರ್ಷದ್ ಅಲಿ. ಅವರಿಬ್ಬರ ಒಡನಾಟ ಇಲ್ಲದಿದ್ದರೆ- ದೊರೆಯದಿದ್ದರೆ ಹೆಚ್ಚು ದೂರ ನಡೆಯುವುದು ಸಾಧ್ಯವಾಗುತ್ತಿರಲಿಲ್ಲ. ಓದಿದ ತಿಳಿದ ಸಂಗತಿಗಳನ್ನು ಇವರಿಬ್ಬರೊಡನೆ ಹಂಚಿಕೊಳ್ಳುತ್ತಿದ್ದರೆ ಅದು ದೊರೆತಷ್ಟು ಮಾತ್ರ ಇರುತ್ತಿರಲಿಲ್ಲ. ಬೆಳೆಯುತ್ತ ಹೋಗುತ್ತಿತ್ತು. ಮಾತು ಮುಗಿಯುವ ವೇಳೆಗೆ ಇದ್ದದ್ದಕ್ಕಿಂತ ಹೆಚ್ಚು ಸಿರಿವಂತ ಆಗಿರುತ್ತಿತ್ತು.
ಇತಿಹಾಸ ಎಂದರೆ ವ್ಯಕ್ತಿಗಳ ಜೀವನ ಚರಿತ್ರೆಗಳ ಸಂಕಲನ ಎಂಬರ್ಥದ ಮಾತಿದೆ. ಇತಿಹಾಸದ ಪುಟಗಳಲ್ಲಿ ನೋಡ ಸಿಗುವ ಅಪರೂಪದ ಅಪೂರ್ವ ವ್ಯಕ್ತಿಗಳು ಅವರ ಕೆಲಸ- ಸಾಧನೆಗಳನ್ನು ಅರಿಯುತ್ತ ಹಾಗೂ ವರ್ತಮಾನದ ಬೆಳಕಿನಲ್ಲಿ ಅವುಗಳಿಗೆ ಅರ್ಥ ಕಲ್ಪಿಸುತ್ತ ಹೋಗುವುದು ಸೊಗಸಾದ ಕೆಲಸ. ಹೀಗೆ ಈ ದಾರಿಯಲ್ಲಿ ಹೊರಟಾಗ ದೊರೆತವರು ಹಲವು ಜನ. ದೊರೆಯುವ ಪುಟ್ಟ ಮಾಹಿತಿಯ ಎಳೆಯನ್ನು ಹಿಡಿದು ಹೊರಟರೆ ಅದು ಹಿಂದೆ ಆಗಿದ್ದ ವಸ್ತ್ರದ ವರೆಗೂ ಕರೆದುಕೊಂಡು ಹೋಗುತ್ತದೆ. ಕೇವಲ ಅಲ್ಲಿಗೇ ನಿಲ್ಲುವುದಿಲ್ಲ. ಆ ವಸ್ತ್ರ ರೂಪುಗೊಳ್ಳುವ ಪ್ರಕ್ರಿಯೆ, ನೇಯ್ಗೆಯಾಗುವ ಪೂರ್ವದ ಸ್ಥಿತಿಯಲ್ಲಿದ್ದ ಹತ್ತಿಯೋ ರೇಷ್ಮೆಯೋ ಬೆಳೆದ ನೆಲ- ಬೆಳೆಯುವುದಕ್ಕೆ ಕಾರಣವಾದ ನೆಲೆ- ಅದು ಹುಟ್ಟು ಹಾಕಿದ ಆರ್ಥಿಕತೆ ಹೀಗೆ ಹತ್ತು ಹಲವು ಸಂಗತಿಗಳು ಬಿಚ್ಚಿಡುತ್ತ ಹೋಗುತ್ತವೆ. ಪತ್ರಕರ್ತನ ಕಾಳಜಿಯೊಂದಿಗೆ ಸಂಶೋಧಕ (ಹಾಗೆನ್ನಬಹುದೇ?) ನ ಕುತೂಹಲ- ಆಸಕ್ತಿಗಳು ಬೆರೆಯುತ್ತ ಹೋದದ್ದರಿಂದ ವ್ಯಕ್ತಿಗಳ ಕುರಿತು ಬರೆಯುವುದು ಸಾಧ್ಯವಾಯಿತು. ಶೂನ್ಯ ಬಂಡವಾಳದಿಂದ ಆರಂಭವಾದ ಕಲಿಕೆಯು ಸಿರಿವಂತಿಕೆಯ ತುದಿಯವರೆಗೂ ಕರೆದೊಯ್ದಿತು. ಈ ದಾರಿಯಲ್ಲಿ ದೊರೆತವರು ಹತ್ತು ಹಲವು ಜನ. ಲಾಭಾಪೇಕ್ಷಯಿಂದ ವ್ಯಾಪಾರ ಮಾಡಲು ರಷ್ಯದಿಂದ ಹೊರಟ ಅಫನಾಸಿ ನಿಕಿಟಿನ್ ದಾರಿ ತಪ್ಪಿ ಬೀದರ್ ಗೆ ಬಂದು ತಲುಪಿದ್ದು, ತನ್ನ ಇಡೀ ಪಯಣವನ್ನು ‘ಮೂರು ಸಮುದ್ರಗಳಾಚೆ’ (ಬಿಯಾಂಡ್ ತ್ರೀ ಸೀಸ್) ಕೃತಿಯಲ್ಲಿ ರೋಚಕವಾಗಿ ದಾಖಲಿಸಿದ್ದು ಇತಿಹಾಸದ ಬಗ್ಗೆ ಸ್ವಲ್ಪ ಅರಿವಿದ್ದರಿಗೂ ಗೊತ್ತಿರುವ ಸಂಗತಿಗಳು. ಕೇವಲ ಅಷ್ಟನ್ನೇ ಕುರಿತು ನಾನು ಬರೆದಿದ್ದರೆ ಅದಕ್ಕೆ ಅಷ್ಟೇನು ಮಹತ್ವ ಇರುತ್ತಿರಲಿಲ್ಲ ಎಂದು ನನಗನ್ನಿಸುತ್ತದೆ. ನನ್ನ ನಿಕಿಟಿನ್ ಕಥನದಲ್ಲಿ ಬರುವ ಪಾತ್ರಗಳು ಕೇವಲ ಲಿಖಿತ ದಾಖಲೆಗಳಿರುವ ಪುಟಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅಲ್ಲಿ ಬೀದರ್ ನ ಮೇಯರ್ ಆಗಿರುವ ಕಾರಣಕ್ಕೆ ರಷ್ಯದಿಂದ ಬಂದ ಆಮಂತ್ರಣ, ಅಲ್ಲಿಗೆ ಹೋಗಿ ಬಂದ ಶೇಷರಾವ್ ಕಾಮತೀಕರ್ ಅವರಿಗೂ ಸ್ಥಳಾವಕಾಶ ಇದೆ. ಕಾಮತೀಕರ್ ಅವರ ಮನೆಯಲ್ಲಿ ಇರುವ ರಷ್ಯದ ನೆನಪು ದಾಖಲಿಸುವ ಛಾಯಾಚಿತ್ರ- ಸ್ಮರಣಿಕೆಗಳಿಗೂ ಜಾಗ ಇದೆ. ಆ ಕಥನದಲ್ಲಿ ಲಾಯರ್ ಕಾಮತೀಕರ್ ಅವರ ಪತ್ನಿಯ ಪುಟ್ಟ ಪಾತ್ರವೂ ಮಿಸ್ ಆಗುವುದಿಲ್ಲ. ನಿಕಿಟಿನ್ ನೆಪದಲ್ಲಿ ಮೊದಲ ಪ್ರಧಾನಿ ನೆಹರು ಹಾಗೂ ಅವರ ಬೀದರ್ ಮೇಲಿನ ಪ್ರೀತಿ ಕೂಡ ದಾಖಲಾಗುತ್ತದೆ. ನೆಹರೂ ಕಾರಣದಿಂದ ರಷ್ಯದ ತ್ವೇರ್ ನಲ್ಲಿ ನಿಕಿಟಿನ್ ಪ್ರತಿಮೆ ಅನಾವರಣ ಆಗುವ ಸಂಗತಿ. ‘ನಿಕಿಟಿನ್ ಹೆಜ್ಜೆ ಜಾಡಿನಲ್ಲಿ’ ನಡೆಯುತ್ತ ಬಂದ ಸಂಶೋಧಕ- ಕುತೂಹಲಿಗಳ ತಂಡ ಹಾಗೂ ಅವರು ಸಾಕ್ಷ್ಯಚಿತ್ರದಲ್ಲಿ ದಾಖಲಿಸಿದ ಅನುಭವಗಳು. ನಿಕಿಟಿನ್ ನೆಪವಾಗಿಟ್ಟುಕೊಂಡು ನಿರ್ಮಾಣವಾದ ಕೆ.ಎ. ಅಬ್ಬಾಸ್ ನಿರ್ದೇಶನದ ‘ಪರದೇಸಿ’ ಸಿನಿಮಾ. ಅದರಲ್ಲಿ ಗಾವಾನ್  ಪಾತ್ರದಲ್ಲಿ ಕಾಣಿಸಿಕೊಂಡ ಪೃಥ್ವಿರಾಜ್ ಕಪೂರ್ ಹಾಗೂ ನಾಯಕಿಯಾಗಿರುವ ನರ್ಗೀಸ್. ನಿಕಿಟಿನ್ ಪ್ರವಾಸ ಕಥನದಲ್ಲಿ ದಾಖಲಿಸಿದ ‘ಬೀದರ್ ನಲ್ಲಿ ಎರಡು ದಿನ ಸಮಾನಗಾತ್ರದ ಚಂದ್ರರು ಕಾಣಿಸುತ್ತಾರೆ’ ಎಂಬ ವಾಕ್ಯ. ಅದರ ಜಾಡು ಹಿಡಿದು ಹುಡುಕುತ್ತ ಹೊರಟಾಗ ದೊರೆತ ‘ಚಾಂದಿನಿ ಚಬೂತರ್’ ಎಂಬ ಚಂದ್ರೋದಯ ವೀಕ್ಷಣೆ- ಬೆಳದಿಂಗಳ ಮನರಂಜನೆಯ ಸ್ಮಾರಕ. ಹೀಗೆ ಪಯಣ ಮುಂದುವರೆಯುತ್ತದೆ. ಅದಕ್ಕೆ ಕೊನೆ ಇಲ್ಲ- ಇರಬಾರದು ಕೂಡ.
ಸಂಶೋಧನೆ ಎನ್ನುವುದು ಕೇವಲ ಲಿಖಿತ- ಅಕ್ಷರದಲ್ಲಿ ದಾಖಲಾದ ಸಂಗತಿಗಳನ್ನು ಮಾತ್ರ ಆಕರವಾಗಿ ಇಟ್ಟು ಹೊರಡುವುದಲ್ಲ. ಜನರ ನಡುವೆ ಜನಜನಿತವಾಗಿರುವ ಕಥೆಗಳು- ಸಂಗತಿಗಳು ಮಾತ್ರವಲ್ಲದೇ ಸಿನಿಮಾ, ಚಿತ್ರದಂತಹ ಬೇರೆ ಬೇರೆ ಸಂಗತಿಗಳನ್ನು ಆಕರವಾಗಿ ಗಮನಿಸಬಹುದು. ಹೀಗೆ ನೋಡಿದ ಸಂಗತಿಗಳನ್ನೆಲ್ಲ ಒಪ್ಪಿಕೊಳ್ಳಬೇಕು ಎಂದೇನು ಇಲ್ಲ. ಅವುಗಳನ್ನು ಬರವಣಿಗೆಯಲ್ಲಿ ದಾಖಲಿಸಿ ಮಹತ್ವ- ನಿರಾಕರಣೆಗಳೆರಡನ್ನೂ ಮಾಡಬಹುದು. ಇದರಿಂದ ಮುಂದೆ ಕೆಲಸ ಮಾಡಬಯಸುವವ ದಾರಿ ತಪ್ಪುವುದು ಕಡಿಮೆಯಾಗುತ್ತದೆ.
ಇತಿಹಾಸ ಎಂದರೆ ರಾಜ ಮಹಾರಾಜರುಗಳ ಕಥೆ ಮಾತ್ರ ಅಲ್ಲ. ಅಲ್ಲಿ ಸಾಮಾನ್ಯನ ಬದುಕು ಕೂಡ ಎಂಬ ಮಾತು ಇದೆ. ಅದು ಹೌದು ಕೂಡ. ದೊಡ್ಡ ದೊಡ್ಡ ದೊರೆಗಳ, ಸಾಮ್ರಾಜ್ಯಗಳ ಬಗ್ಗೆ ಹೆಚ್ಚು ಮಾಹಿತಿ ಇರುತ್ತದೆ- ದೊರೆಯುತ್ತದೆ. ಅದನ್ನು ಹುಡುಕುವುದು ಹಾಗೂ ಬರೆಯುವುದು ಕೂಡ ಸುಲಭ. ಅದರಿಂದ ಮನ್ನಣೆಯ ಭಾಗ್ಯವೂ ದೊರೆಯುತ್ತದೆ. ಆದರೆ, ಬದುಕೆಂದರೆ ಕೇವಲ ಮನ್ನಣೆಯ ಭಾಗ್ಯಕ್ಕಾಗಿ ಹಂಬಲಿಸುವುದು ಮಾತ್ರ ಅಲ್ಲ. ದಾರಿಯಲ್ಲಿ ನಡೆಯುವ ಸಣ್ಣಪುಟ್ಟ ಖುಷಿಗಳು ಹಾಗೂ ಆ ಕಾರಣಕ್ಕಾಗಿ ನಮ್ಮ ಬದುಕಿನ ಸಂಕಷ್ಟಗಳು ಬಾರವಾಗಿ ಎದೆಯ ಮೇಲೆ ಕೂಡದೇ ಅರಿವಿಗೆ ಬಾರದಷ್ಟು ಹಗುರವಾಗಿ ಕಳೆದುಹೋಗುವುದು ಕೂಡ ದೊಡ್ಡ ಲಾಭವೇ ಸರಿ. ಅದನ್ನು ಅಳೆಯಲು ಬರುವುದಿಲ್ಲ ಎಂಬುದು ಬೇರೆ ಮಾತು.
ಮೌಲಪ್ಪ ಎಂಬ ಚಪ್ಪಲಿ ಮಾಡುವ ಕುಶಲಿಕರ್ಮಿಯ ಕುರಿತಾದ ಹುಡುಕಾಟ ನನಗೆ ಖುಷಿ ನೀಡಿದ ಸಂಗತಿಗಳಲ್ಲಿ ಒಂದು. ಮೌಲಪ್ಪನ ಕೈಯಲ್ಲಿ ರೂಪುಗೊಂಡ ಚಪ್ಪಲಿಗಳು ಹೈದರಾಬಾದ್ ನಿಜಾಮ್ ನ ಪಾದ ಸೇರುತ್ತಿದ್ದವು. ಅದಕ್ಕಾಗಿ ನಿಜಾಂ ಮೌಲಪ್ಪನಿಗೆ ರೈಲ್ವೆಯಲ್ಲಿ ಓಡಾಡಲು ಮುಕ್ತ ಅವಕಾಶದ ಇನಾಮು ನೀಡಿದ್ದ ಎಂಬ ಸಂಗತಿಗಳು ಅಷ್ಟೇನು ಮಹತ್ವದ್ದು ಎಂದು ನನಗನ್ನಿಸುವುದಿಲ್ಲ. ಬದಲಿಗೆ ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು ಬೀದರ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೌಲಪ್ಪ ಅವರಿಗೆ ಉಡುಗೊರೆಯಾಗಿ ಚಪ್ಪಲಿಗಳನ್ನು ನೀಡಿದ್ದ. ಅವರು ತನ್ನ ಸ್ವಂತದ ಹಣವನ್ನು ಮೌಲಪ್ಪನಿಗೆ ನೀಡಿದ್ದರೂ ಎನ್ನುವ ಸಂಗತಿ ಕುತೂಹಲ ಹುಟ್ಟಿಸುತ್ತದೆ. ಆದರೆ, ಅದಕ್ಕಿಂತ ಹೆಚ್ಚಾಗಿ ಮೌಲಪ್ಪನಿಗಿದ್ದ ಕೌಶಲ್ಯ ನನ್ನ ಗಮನ ಸೆಳೆಯುತ್ತದೆ. ಅದನ್ನು ಹುಡುಕುತ್ತ ಹೋದಾಗ ಮೌಲಪ್ಪನ ಸೊಸೆ ತನ್ನ ಮಾವ ಮಾಡುತ್ತಿದ್ದ ಕೆಲಸ ಸ್ವರೂಪವನ್ನು ವಿವರಿಸಿದಾಗ ಮೌಲಪ್ಪನಿಗೆ ದೊರೆತ ಮನ್ನಣೆ ಏನೇನೂ ಅಲ್ಲ ಎನ್ನಿಸದೇ ಇರಲಿಲ್ಲ. ತಲಾ ಹತ್ತು ಗ್ರಾಮ್ ತೂಗುವ ಅಂದರೆ ಮಲ್ಲಿಗೆ ತೂಕದ ಚರ್ಮದ ಚಪ್ಪಲಿಗಳನ್ನು ಮಾಡುವ ಮೌಲಪ್ಪನ ಕ್ಷಮತೆ, ಅದಕ್ಕಾಗಿ ಪಟ್ಟ ಶ್ರಮ ಹಾಗೂ ಅದನ್ನು ಜ್ಞಾನ ಎಂದು ಪರಿಗಣಿಸದೇ ಇಲ್ಲವಾಗಿ ಹೋದದ್ದು ತಿವಿಯುತ್ತದೆ- ಯೋಚನೆಗೆ ಹಚ್ಚುತ್ತದೆ. ಮೌಲಪ್ಪನ ಕಥೆಗೂ ಗಾವಾನ್ ಗೂ ಸಂಬಂಧ ಇದೆ. ಆ ಸಂಬಂಧದ ಬಟ್ಟೆಯಲ್ಲಿ ಬಹಮನಿ ಇತಿಹಾಸಕಾರ ಹರೂನ್ ಖಾನ್ ಶೇರ್ವಾನಿ, ಲಂಡನ್ ನಲ್ಲಿ ಅವರಿಗೆ ಸ್ನೇಹಿತರಾಗಿದ್ದ ಜವಾಹರಲಾಲ್ ನೆಹರು, ಅವರಿಬ್ಬರಿಗೂ ಸಹಪಾಠಿಯಾಗಿದ್ದ ‘ಭಾರತದ ಕೋಗಿಲೆ’ ಖ್ಯಾತಿಯ ಸರೋಜಿನಿ ನಾಯ್ಡು. ಸರೋಜಿನಿ ಅವರ ಪತ್ರದಿಂದ ಪ್ರೇರಿತರಾಗಿ ಬೀದರ್ ಗೆ ಬಂದ ರಾಜೇಂದ್ರ ಪ್ರಸಾದ್ ಹೀಗೆ ಎಳೆಗಳು ಒಂದರೊಳಗೊಂದು ಬೆರೆತುಕೊಂಡಿವೆ.
ಗಾವಾನ್ ನೆಪದಲ್ಲಿ ಆರಂಭವಾದ ಹುಡುಕಾಟವು ಹಲವು ಬೈಪ್ರೊಡಕ್ಟ್ ಎನ್ನಬಹುದಾದ ಸಂಗತಿಗಳ ಅರಿಯಲು ಕಾರಣವಾಯಿತು. ಆ ದಾರಿಯಲ್ಲಿ ದೊರೆತವರು ಹತ್ತು ಹಲವು ಜನ ಹಾಗೆಯೇ ಹತ್ತು ಹಲವು ವಿಷಯಗಳು ಕೂಡ. ಕನ್ನಡದ ಮೊದಲ ಕಾದಂಬರಿಯ ಲೇಖಕ ಎಂ.ಎಸ್. ಪುಟ್ಟಣ್ಣ, ಸುರಪುರದಲ್ಲಿ ಆಡಳಿತಾಧಿಕಾರಿಯಾಗಿದ್ದ ಬ್ರಿಟಿಷ್ ಲೇಖಕ ಮೆಡೋಸ್ ಟೇಲರ್, ನೂರಿಪ್ಪತ್ತು ನಕ್ಷತ್ರಗಳನ್ನು ಗುರುತಿಸಿ ಕ್ಯಾಟಲಾಗ್ ರಚಿಸಿದ ಖಗೋಳಶಾಸ್ತ್ರಜ್ಞ ಉಲುಗ್ ಬೇಗ್, ಇರಾನ್ ನ ಸೂಫಿ ಕವಿ ನಿಯಾಮತ್ ಕೀರ್ಮಾನಿ, ಸೂಫಿ ಲೇಖಕ ಖ್ವಾಜಾ ಬಂದೇ ನವಾಜ್, ತತ್ವಜ್ಞಾನಿ ಇಬ್ನ್ ಹಜರ್ ಅಸ್ಖಲಾನಿ, ದೊರೆಯನ್ನು ವಿಚಾರಣೆ ಮಾಡುವ ಪರಮಾಧಿಕಾರ ಕೇಳಿ ಪಡೆದುಕೊಂಡ ನ್ಯಾಯಮೂರ್ತಿ ಶೇಖ್ ಇಬ್ರಾಹಿಂ ಖಾದ್ರಿ ಈ ಪಟ್ಟಿ ಬೆಳೆಯುತ್ತದೆ. ಅದನ್ನಿಲ್ಲಿ ವಿಸ್ತರಿಸಲು ಹೋಗುವುದಿಲ್ಲ. ಒಬ್ಬೊಬ್ಬರ ಬಗ್ಗೆಯೂ ಬರೆಯುವುದಕ್ಕೆ ಹಲವು ಸಂಗತಿಗಳಿವೆ. ಪ್ರತ್ಯೇಕ ಅಧ್ಯಯನಕ್ಕೆ ಅವಕಾಶಗಳಿವೆ. ಆಯಾ ವ್ಯಕ್ತಿಗಳ ಹತ್ತಿರವೇ ಹಲವು ದಿನಗಳ ಕಾಲ ನಿಂತು- ಅರಿತು ಅಥವಾ ಕೆಲಕಾಲ ಕಳೆದುಹೋದದ್ದರ ಪರಿಣಾಮದಿಂದ ಮೂಲ ಹುಡುಕಾಟ ಹೆಚ್ಚು ಮುಂದುವರೆಯುವುದು ಸಾಧ್ಯವಾಗಿಲ್ಲ. ಕಾಲಮಿತಿಯೊಳಗೆ ಮುಗಿಸುವ ಅವಸರವೂ ಇಲ್ಲ. ಗಾವಾನ್ ಕಾರಣದಿಂದ ವ್ಯಕ್ತಿಗಳು ಮಾತ್ರವಲ್ಲ, ಹಲವು ವಿಷಯ- ಸಂಗತಿಗಳನ್ನು ಅರಿಯುವುದು ಸಾಧ್ಯವಾಯಿತು. ಅದು ಅನಿವಾರ್ಯವೂ ಆಗಿತ್ತು. ಇಸ್ಲಾಮ್ ಧರ್ಮ ಹಾಗೂ ಅದರ ತತ್ವಜ್ಞಾನ, ಸೂಫಿ ಚಿಂತನೆ- ಬರವಣಿಗೆಗಳು, ಶಿಕ್ಷಣ- ಗಣಿತ- ಖಗೋಳ, ಆಡಳಿತ ಹಾಗೂ ಸುಧಾರಣೆಗಳು, ಭೂಸುಧಾರಣೆ- ತೆರಿಗೆ ಪದ್ಧತಿ, ನ್ಯಾಯ ಪದ್ಧತಿಯಲ್ಲಿ ತಂದ ಬದಲಾವಣೆ, ಪರ್ಷಿಯಾ ಜೊತೆಗಿನ ಭಾರತದ ಸಂಬಂಧ ಈ ಪಟ್ಟಿಯನ್ನೂ ಬೆಳೆಸಬಹುದು. ನನಗೆ ಪ್ರಿಯವಾದದ್ದು ಗಾವಾನ್ ನ ಪ್ರಾಮಾಣಿಕತೆ- ಒಳ್ಳೆಯತನ ಹಾಗೆಯೇ ಆತಂಕ ಉಂಟು ಮಾಡಿದ್ದು ಅವನು ಅನುಭವಿಸಿದ ಕೆಡುಕುಗಳು. ಈ ಎರಡಕ್ಕೂ ಇರುವ ಪರಂಪರೆಯ ಹುಡುಕಾಟ ನನ್ನ ಆಸಕ್ತಿಯ ಸಂಗತಿ.
ಸ್ಥಳೀಯವಾದ ಚರಿತ್ರೆಯನ್ನು ಅದಕ್ಕೇ ಮಹತ್ವ ಕೊಡುವ ನಿಟ್ಟಿನಲ್ಲಿ ಕಟ್ಟುವ ಪುಟ್ಟ ಪ್ರಯತ್ನ. ಹಾಗೆಯೇ ಇದು ಒಬ್ಬನ ಹುಡುಕಾಟ ಮಾತ್ರ ಅಲ್ಲ. ಒಂದೊಂದು ಎಳೆಯ ಮಾಹಿತಿ ನೀಡಿದ, ನನಗೆ ಅತ್ಯಗತ್ಯವಿರುವ ಪುಸ್ತಕ- ದಾಖಲೆಗಳನ್ನು ಒದಗಿಸಿದ, ಚರ್ಚಿಸಿದ, ಹೊಳೆಯದ ಸಂಗತಿಗಳನ್ನು ತೋರಿಸಿದ ಹಲವು ಜೀವಗಳು ಈ ಪಯಣದಲ್ಲಿ ಜೊತೆಗಿವೆ. ಅದರ ಬಹುಪಾಲು ಶ್ರೇಯ ಅವರಿಗೇ ಸಲ್ಲುತ್ತದೆ. ಅವುಗಳನ್ನು ಒಂದೆಡೆ ತರುವ ಕೊಂಡಿ ರೀತಿಯಲ್ಲಿ ನಾನು ಇದ್ದದ್ದು ನಾನೇ ನಂಬದಿರುವ ನನ್ನ ಪೂರ್ವಸಂಚಿತ ಪುಣ್ಯದ ಫಲ ಇರಬಹುದೇ? ಗೊತ್ತಿಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಬಸವೇಶ್ವರ ಮತ್ತು ಅವನ ಕಾಲ