ಕರ್ನಾಟಕ ಮಾಧ್ಯಮ: ಹಿಂದಣ ಹೆಜ್ಜೆ- ಮುಂದಣ ದಾರಿ?
ಕರ್ನಾಟಕದ ಮಾಧ್ಯಮಗಳ ಕೊಡುಗೆ- ಸಾಧನೆಗಳು ಅನನ್ಯವಾದುದು. ರಾಜ್ಯದ ಸುದ್ದಿಗಳು ಇಂಗ್ಲೆಂಡಿನ ಆಂಗ್ಲಭಾಷೆಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಮಾಧ್ಯಮದ ಜೊತೆಗಿನ ಒಡನಾಟ ಆರಂಭವಾಯಿತು. ನಂತರದ ದಿನಗಳಲ್ಲಿ ಜರ್ಮನಿಯ ಮಿಶಿನರಿಗಳು ಕನ್ನಡ ಪತ್ರಿಕಾ ಲೋಕವನ್ನು ಅನಾವರಣ ಮಾಡಿದರು. 20ನೇ ಶತಮಾನದ ಆರಂಭದ ದಿನಗಳಲ್ಲಿ, ಕನ್ನಡ ನವೋದಯ ಲೇಖಕರು ಸಾಹಿತ್ಯ ಪತ್ರಿಕೆಗಳು-ನಿಯತಕಾಲಿಕೆಗಳ ಮೂಲಕ ಸಾಂಸ್ಕೃತಿಕ ವಾತಾವರಣ ರೂಪುಗೊಳ್ಳಲು ಕಾರಣರಾದರು. ನಿಯತಕಾಲಿಕೆ ಪ್ರಕಟಿಸಿದ ಅಥವಾ ಸಂಪಾದಕರಾಗಿರದ ಅಥವಾ ಅವುಗಳಿಗೆ ಬರೆಯದ ನವೋದಯ ಕಾಲಕ್ಕೆ ಸೇರಿದ ಲೇಖಕರು ಇಲ್ಲವೇ ಎಲ್ಲ ಎನ್ನುವಷ್ಟು ಕಡಿಮೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲುಗೊಳ್ಳುವುದಕ್ಕಾಗಿಯೇ ಪತ್ರಿಕೆಗಳು ರೂಪುಗೊಂಡವು. ಆಗಿನ ವರ್ತಮಾನದ ಒತ್ತಡವನ್ನು ಅನಾವರಣ ಮಾಡಿ, ರಾಜಕೀಯ- ಸಾಮಾಜಿಕ ಚಟುವಟಿಕೆಗಳಿಗೆ ಇಂಬು ನೀಡಿದವು. ಕೆಲವರು ಭೂಗತರಾಗಿದ್ದು, ಕರಪತ್ರಗಳನ್ನು, ಸುದ್ದಿಪತ್ರಿಕೆಗಳನ್ನು ಹೊರಡಿಸಿದರು. ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಒಂದೇ ಆಡಳಿತಕ್ಕೆ ಸೇರಬೇಕು ಎಂಬ ಕನಸು ಕಂಡವರು ಕನ್ನಡದ ಬರಹಗಾರರು. ಅವರು ರೂಪಿಸಿದ ಸಾಂಸ್ಕೃತಿಕ ಒತ್ತಡವನ್ನು ಪತ್ರಿಕೆಗಳು ಕೂಡ ಜೀವಂತವಾಗಿಟ್ಟವು. ಏಕೀಕರಣಕ್ಕೆ ಸಂಬಂಧಸಿದಂತೆ ರಾಜಕಾರಣದ ದಿಕ್ಕುದೆಸೆಗಳನ್ನು ರೂಪಿಸಿದ ಹಿರಿಮೆ ಕನ್ನಡ –ಕರ್ನಾಟಕದ ಪತ್ರಿಕೆಗಳಿಗೆ ಸಲ್ಲುತ್ತದೆ. ಪ್ರಗತಿಶೀಲ ಸಾಹಿತಿಗಳು ತಮ್...