ಕವಿಗಳ ಕಾಣಿಕಿ- ಬೀದರ್ ಕವಿಗೋಷ್ಠಿಗಾಗಿ ಬೇಂದ್ರೆ ಬರೆದ ಕವಿತೆ

ಕವಿಗಳ ಕಾಣಿಕಿ


ಸಲಾಮ್ ಮಾಡ್ತೇವಿ ಶಾಹೀರಿ ವಾಣೀಗೆ
ಜಗ ಜಾಹೀರ ವಜ್ರದ ಖಾಣೀಗೆ
ಕಾಳಾ ಬಝಾರ ಹಜಾರ ಇದ್ರೂ
ಬಾಳೋ ಉಸಿರಿಗೆ ಒಂದೇ ಹೆಸರು:
ಅದು ಕವಿ ಕವೀ ಕಾಣಿಕೀ
ಅದಕ್ಕ ಬೇಕಿಲ್ಲ ಬ್ಯಾರೆ ಆನಿಕಿ

ಬೀದರಕ್ಕ ಆದಾವರೆಷ್ಟೋ?
ಹೋದಾವರೆಷ್ಟೋ?
ಆಗದವರೂ ಇದ್ದಾರು
ಹೋಗದವರೂ ಇದ್ದಾರು
ಬರೋ ಅವರಿಗೆ ಬಾಗಿಲಾ ತೆರದ ಅವ
ಹೋಗೋ ಅವರ ಹಾದಿ ಮುಚ್ಚಿಲ್ಲ

ಪ್ರಜಾ ಇಲ್ಲದ ರಾಜಾ ಯಾವ ಖಾ ಜಾ?
ಯಾವ ಭಾಷಾದಾಗ ಊದಿರಿ ಬೇಂಡಬಾಜಾ
ಕನ್ನಡೀ-ಮರಾಠೀ-ತೇಲಂಗೀ
ಊರ್ದೂ, ಪಾರಸೀ, ಅರಬ್ಬೀ
ಹಿಂದೀ, ಹಿಂದಿನದೂ, ಇಂದಿನದೂ, ಮುಂದಿನದೂ
ಸಂಸ್ಕೃತಾ, ಪ್ರಾಕೃತಾ, ಅಪಭ್ರಂಶಾ, ಪೈಶಾಚಿ
 ೪
ಹೊಡೋ ಗಾಡೀ
ದ್ರಾವಿಡೀ, ಶಾಬರೀ, ಪುಳಿಂದೀ, ಗೊಂಡೀ
ಕರಣದಾಗ ನಾಟಿದ್ದು ನಾಟಲಿ
ಉಳಿದದ್ದು ದಾಟಲೀ
ಸೋಳಾ ದೇಶಾ, ಸೋಳಾ ಭಾಷಾ, ಸೋಳಾ ಅಂಗೀ
ಭಾವ ಇದ್ಹಾಂಗ ಜೀವ, ಜೀವಲಿಂಗೀ

ಹಳೇ ಗೊಂಡಾರಣ್ಯದ ಗಂಗಾಲಹರಿ, ಗೋದಾವರೀ
ಇನ್ನೂ ಹರೀತನ ಅದ ಉತ್ತರಕ್ಕ
ಬೀದರದ ಹತ್ತರ ಹತ್ತರಕ್ಕ

’ಅಹಂ ರಾಷ್ಟೀ ಸಂಗಮನೀ’
ದೇಹದಾಗ ಸ್ನೇಹ ಇರದಿದ್ದರ
ಮನದ ಮೊನೀಯೊಳಗ ದೀಪ ಎಲ್ಲೀದು?
ಜನದ ಜಾತಿ ನೂರಾದರೂ
ಜ್ಯೋತಿ ನೂರಾ ಒಂದು
ಒಂದು ಬಿಂದುವಿಗೇ ನೂರು ಸಂದು
ಸಾವಿರದವರ ಲಕ್ಷ್ಯ ಜೀವ ಕೋಟಿ ಕಡಿಗೆ
ಅಬ್ಜದಾಗ ರಸದ ಅಡಿಗೆ

ಹಿಂದುಸ್ಥಾನ, ಪಾಕಿಸ್ಥಾನ ಒಂದಾಗಬೇಕು
’ಭಾರತ ಹಮಾರಾ’ ಮುಂದಾಗಬೇಕು
ಮನಕ್ಕೊಂದು ಮತಂ ಮಾಡಿ
ಜನ ಧರ್ಮ ಖತಂ ಮಾಡಬ್ಯಾಡ್ರಿ

ಹೋದದ್ದು ನೆನಿಸಿ ಅಳಬ್ಯಾಡ್ರಿ
ಆಗೋದನ್ನ ಕಟ್ಟೋದ್ಹ್ಯಾಂಗ?
ಮುಂದಿನ ನೆಲಿ ಮುಟ್ಟೋದ್ಹ್ಯಾಂಗ?
ಆ ಹಾದಿ ಮ್ಯಾಲ ಹೆಜ್ಜಿ ಹಾಕ್ರಿ

ಕಿಸಾನ ಬುದ್ದಿ ಹಸಾನ ಉಳಿಲಿ
ಜವಾನನ ಚಿತ್ತ ದಿವಾನ ಆಗದಿರಲಿ
ಹೆಣ ಆಗಿ, ಮಣ್ಣಾಗ ಹೂಳಿ, ಎಲುಬಿನ ನೆಲ ಕೆಣಕೋಣೋ
೧೦
ಜನಾ ಆಗಿ ಬಾಳಿನ್ಯಾಗ ಬೆಳದು ಹಗಲಾಗ ಬದುಕೋಣೋ
ಯಾವ ಕೋಣೋ-ಏನ ಕೋಣೋ ಹೃದಯದ ದೃಷ್ಟಿಕೋಣ
ವಿಶ್ವವಿಶಾಲ ಕೋಣ
೧೧
ಚಂದ್ರನಿಗೇ ಹಾರರಿ, ಮಂಗಳಕ್ಕ ಏರರೀ
ನೆಲದಾಗ ಬದುಕದಾವಾ
ಅಂತರಿಕ್ಷದೊಳಗ ಏನು ಸತ್ತಾನು?
ತ್ರಿಪುರ ಸಂಹಾರ ಮಾಡ್ಯಾಳ ಹಿಂದ ಎಷ್ಟೋ ಸಲ
ತ್ರಿಪುರ ಸುಂದರೀ
೧೨
ಆಗೂ, ಬದುಕೂ ಹೋಗೂ ಬಾಳಿನ್ಯಾಗ ಹೊಂದರಿ
ಇಲ್ಲಾ ನಿಮ್ಮನ್ನ ನೀವ ಕೊಂದರಿ
೧೨
ಬೆಳಕಿಗೆ ಬೆನ್ನ ತೋರಿಸಿದರ
ಕತ್ತಲಿ ಮಾರಿ ನೋಡಬೇಕು
ಮತ್ತ ಹಿಂದಿನ ಪಲ್ಲವೀ ಹಾಡಬೇಕು
’ತಮಸೋಮಾ ಜ್ಯೋತಿರ್ಗಮಯ’
’ದೇವನೊಲಿದಾತನೇ ಜಾತ’
ಜಾತಿ ಕಣ್ಣು ಜ್ಯೋತಿ ಕಡಿಗೆ ಹೊರಳಲಿ
ಪ್ರಜ್ಞಾನದಾಗ ವಿಜ್ಞಾನ ಅರಳಲಿ
೧೩
ಈ ಸಂಜ್ಞಾನದ ಧ್ರುಪದ ಆಗಲಿ
’ಸಂವರಧ್ವಂ ಸಂಗಚ್ಛಂದ್ವಂ’
ಭೋಗದಾಗ ಭಾಗ ಬ್ಯಾಡ;
ಯೋಗ ಬೇಕು
ವಿಯೋಗದ ಕಾಲ ನೂಗಬೇಕು
ಚೈತನ್ಯದಾಗ ಇದನ್ನ ತೂಗಬೇಕು
೧೪
ಗುರುದ್ವಾರ ವಾಣೀ ಕೇಳಿದೆ-
’ನಾನಕ ನ್ಹನ್ನೇಹೋ, ರಹೋ
ಜೈಸೆ ನ್ಹನ್ನೇ, ರೂಬ
ಔರ ದುಖ್ ಸುಕ್ ಜಾಯೇಂಗೆ
ದೂಬ ಖೂಪ ಕೀ ಖೂಪ’
೧೫
ತಲೆ ಬಾಗುವವರು ಬಾಳತಾರ
ಹುಲ್ಲು ಬಿದ್ಧಾಂಗ
ನೆಲ ಅಪ್ಪಿದವರು ತಾಳತಾರ
ಕರಿಕಿ ಇದ್ಧಾಂಗ
೧೬
ಬೀದರ್‍ಕಾರ ಬಂದದ ಬೇಂದ್ರೇನ ಹಡಗ
ಸರ್‍ಕಾರದ ಬಂದ್ರಕ್ಕ
ಸಾರಸ್ವತ ಸಮೀಂದ್ರಕ್ಕ
ಎಲ್ಲ ಮೀನಿನ ಕಣ್ಣು ಬಿಚ್ಚಿರ್‍ತಾವ
ಅದರ ಗರೀ ಉಚ್ಚಿರ್‍ತಾವ
ಅದಕ್ಕ ನೆಲಾ, ನೀರು, ಗಾಳಿ, ಬೆಳಕು
ಎಲ್ಲಿದ್ದರೂ ಒಂದ

೧೭
ಸಲಾಮ್ ಮಾಡೇವಿ ಅಂಥಾ
ಶಾಹೀರಿ ವಾಣೀಗೆ
ಜಗಜಾಹೀರ ವಜ್ರದ ಖಾಣೀಗೆ
ಕಾಳಾ ಬಝಾರ ಹಜಾರ ಇದ್ರೂ
ಬಾಳೋ ಉಸಿರಿಗೆ ಒಂದೇ ಹೆಸರು
ಅದು ಕವೀ ಕಾಣಿಕೀ
ಅದಕ ಬೇಕಿಲ್ಲ ಬ್ಯಾರೆ ಆನಿಕಿ
೧೮
ಶಬ್ದದ ಚಲಾವಣೀವಳಗ
ಹೃದಯದ ಲಾವಣೀ ದನಿ ಇರ್‍ತದ
ಅದು ಒಲವು ಇದ್ದಲ್ಲೇ ಬರ್‍ತದ
ಎಚ್ಚರ ಇದ್ದಾವ್ರನ್ನ ಅರ್‍ತದ
ನಿದ್ದಿ ಮಾಡಾವ್ರನ್ನ ಮರ್‍ತದ
 - ದ.ರಾ.ಬೇಂದ್ರೆ
(೧೯೬೮ರಲ್ಲಿ ಬೀದರ್‌ನಲ್ಲಿ ವಾರ್ತಾ ಇಲಾಖೆ ಹಮ್ಮಿಕೊಂಡ ಕವಿಗೋಷ್ಠಿಯಲ್ಲಿ ಓದಿದ ಕವನ)

ಕಾಮೆಂಟ್‌ಗಳು

art studio ಹೇಳಿದ್ದಾರೆ…
ಬೇಂದ್ರೆ ನಮ್ಮ ಬೀದರ ಬಂದು ಕವಿಗೋಷ್ಠಿಯಲ್ಲಿ ಬೀದರಿನ ಮಹಿಮೆ ಬಗ್ಗೆ ಕವನ ಓದಿದರೆಂದರೆ ನನಗೆ ತುಂಬಾ ಖುಷಿ ಆಯಿತು. ಆಗ ನಾನು ಇನ್ನೂ ಹುಟ್ಟಿರಲಿಲ್ಲ.
ಬೀದರ ಭಾಗದಲ್ಲಿ ಹಲವಾರು ಕಡೆ ನಾನು ಕವನ ಓದಿರುವೆ ಬೇಂದ್ರೆಯವರು ನಿಂತ ಜಾಗದಲ್ಲಿ ನಾನೂ ನಿಂತು ಒಂದು ಕವನ ಓದುವ ಆಸೆ ಆಗಿದೆ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು