ಮುಂದುವರೆದ ಜಾತಿ ರಾಜಕಾರಣ: ಕರ್ನಾಟಕ್ಕೆ ಅಂಟಿದ ಶಾಪ
ಕರ್ನಾಟಕದ ಮತದಾರ ಯಾರೂ ಗೆಲ್ಲದ ಮತ್ತು ಎಲ್ಲರೂ ಸೋತ ಸ್ಥಿತಿಯನ್ನು 2018ರ ವಿಧಾನ ಸಭಾ ಚುನಾವಣೆಯಲ್ಲಿ ರೂಪಿಸಿದ್ದಾನೆ. ಅದನ್ನು ಪ್ರಬುದ್ಧತೆ ಅನ್ನಬೇಕೋ? ಅಸಹಾಯಕತೆ ಅನ್ನಬೇಕೋ? ಮೂರ್ಖತನ ಅನ್ನಬೇಕೋ ಅರ್ಥವಾಗುತ್ತಿಲ್ಲ. ಎಲ್ಲವೂ ಸೇರಿದ ಕಲಸುಮೇಲೋಗರ. ಯಾವುದನ್ನು ಹೇಳಿದರೂ, ಅಂದು ಕೊಂಡರೂ ಉಳಿದೆರಡು ಅದಕ್ಕೆ ಪೈಪೋಟಿ ನೀಡಲು ಮುಂದೆ ಬರುತ್ತವೆ. ಮೇಲ್ಜಾತಿಯ ಮನೋಧರ್ಮ ಮತ್ತು ಕೆಳಜಾತಿಯ ದೌರ್ಬಲ್ಯಗಳೆರಡೂ ಅನಾವರಣಗೊಂಡಿವೆ. ಕೆಳಜಾತಿಯ ನಾಯಕನೊಬ್ಬ ‘ಐದು ವರ್ಷ’ದ ಅವಧಿ ಪೂರೈಸಿದ್ದು ಸೋಕಾಲ್ಡ್ ಮೇಲ್ಜಾತಿಯ ಮನಸ್ಸುಗಳಿಗೆ ಇಷ್ಟವಾಗಲಿಲ್ಲ. ಅದು ಕೇವಲ ಇಷ್ಟಾನಿಷ್ಟದ ಪ್ರಶ್ನೆ ಮಾತ್ರ ಆಗಿ ಉಳಿಯಲಿಲ್ಲ. ‘ಸೋಲಿಸಲೇ ಬೇಕು’ ಎನ್ನುವ ಜಿದ್ದಾಜಿದ್ದಿನ ಕಣವಾಗಿ ಪರಿವರ್ತಿತವಾಯಿತು. ಚಾಮುಂಡೇಶ್ವರಿಯ ಫಲಿತಾಂಶ ಅದನ್ನು ಸ್ಪಷ್ಟವಾಗಿ ಬಿಚ್ಚಿಡುತ್ತದೆ. ಹಾಲಿಮುಖ್ಯಮಂತ್ರಿ ಹಾಗೂ ಅಷ್ಟೇನು ದುರಾಡಳಿತ ನೀಡದ, ಸಣ್ಣಪುಟ್ಟ ಲೋಪಗಳ ನಡುವೆಯೂ ‘ಬಹುಜನ ಹಿತಾಯ’ ಕೆಲಸ ಮಾಡಿದ ನಾಯಕನನ್ನು ದಯನೀಯವಾಗಿ ಸೋಲಿಸಿದ ಮತ್ತು ‘ಸೋಲಿಸಲೇಬೇಕು’ ಎಂದು ಒಗ್ಗಟ್ಟಾಗಿ ನಿಂತು, ಅದಕ್ಕೆ ಪರಿಶ್ರಮ ವಹಿಸಿ ಆಗು ಮಾಡಿದ ಕರ್ನಾಟಕದ ಉಭಯ ಸಮುದಾಯಗಳ ‘ಯಜಮಾನಿಕೆ’ಯ ಸ್ವರೂಪ ಗೋಚರವಾಗುತ್ತದೆ. ಆದರೆ, ಅದಕ್ಕಿಂತ ವಿಚಿತ್ರ ಎಂದರೆ ಸೋಕಾಲ್ಡ್ ಕೆಳಜಾತಿ ಮತ್ತು ಮಧ್ಯಮ ವರ್ಗದ ಜನ ಅಪಾಯ ಅರಿಯದೇ ಶೋಷಕರ ಜೊತೆಗೇ ಹೋಗುವ ‘ದೌರ್ಬಲ್ಯ’. ವರುಣಾ ವಿಧಾನಸಭಾ ಕ್ಷೇತ್ರವನ್ನ ಮಗನಿ...