ಮುಂದುವರೆದ ಜಾತಿ ರಾಜಕಾರಣ: ಕರ್ನಾಟಕ್ಕೆ ಅಂಟಿದ ಶಾಪ


ಕರ್ನಾಟಕದ ಮತದಾರ ಯಾರೂ ಗೆಲ್ಲದ ಮತ್ತು ಎಲ್ಲರೂ ಸೋತ ಸ್ಥಿತಿಯನ್ನು 2018ರ ವಿಧಾನ ಸಭಾ ಚುನಾವಣೆಯಲ್ಲಿ ರೂಪಿಸಿದ್ದಾನೆ. ಅದನ್ನು ಪ್ರಬುದ್ಧತೆ ಅನ್ನಬೇಕೋ? ಅಸಹಾಯಕತೆ ಅನ್ನಬೇಕೋ? ಮೂರ್ಖತನ ಅನ್ನಬೇಕೋ ಅರ್ಥವಾಗುತ್ತಿಲ್ಲ. ಎಲ್ಲವೂ ಸೇರಿದ ಕಲಸುಮೇಲೋಗರ. ಯಾವುದನ್ನು ಹೇಳಿದರೂ, ಅಂದು ಕೊಂಡರೂ ಉಳಿದೆರಡು ಅದಕ್ಕೆ ಪೈಪೋಟಿ ನೀಡಲು ಮುಂದೆ ಬರುತ್ತವೆ. ಮೇಲ್ಜಾತಿಯ ಮನೋಧರ್ಮ ಮತ್ತು ಕೆಳಜಾತಿಯ ದೌರ್ಬಲ್ಯಗಳೆರಡೂ ಅನಾವರಣಗೊಂಡಿವೆ. ಕೆಳಜಾತಿಯ ನಾಯಕನೊಬ್ಬ ‘ಐದು ವರ್ಷ’ದ ಅವಧಿ ಪೂರೈಸಿದ್ದು ಸೋಕಾಲ್ಡ್ ಮೇಲ್ಜಾತಿಯ ಮನಸ್ಸುಗಳಿಗೆ ಇಷ್ಟವಾಗಲಿಲ್ಲ. ಅದು ಕೇವಲ ಇಷ್ಟಾನಿಷ್ಟದ ಪ್ರಶ್ನೆ ಮಾತ್ರ ಆಗಿ ಉಳಿಯಲಿಲ್ಲ. ‘ಸೋಲಿಸಲೇ ಬೇಕು’ ಎನ್ನುವ ಜಿದ್ದಾಜಿದ್ದಿನ ಕಣವಾಗಿ ಪರಿವರ್ತಿತವಾಯಿತು. ಚಾಮುಂಡೇಶ್ವರಿಯ ಫಲಿತಾಂಶ ಅದನ್ನು ಸ್ಪಷ್ಟವಾಗಿ ಬಿಚ್ಚಿಡುತ್ತದೆ. ಹಾಲಿಮುಖ್ಯಮಂತ್ರಿ ಹಾಗೂ ಅಷ್ಟೇನು ದುರಾಡಳಿತ ನೀಡದ, ಸಣ್ಣಪುಟ್ಟ ಲೋಪಗಳ ನಡುವೆಯೂ ‘ಬಹುಜನ ಹಿತಾಯ’ ಕೆಲಸ ಮಾಡಿದ ನಾಯಕನನ್ನು ದಯನೀಯವಾಗಿ ಸೋಲಿಸಿದ ಮತ್ತು ‘ಸೋಲಿಸಲೇಬೇಕು’ ಎಂದು ಒಗ್ಗಟ್ಟಾಗಿ ನಿಂತು, ಅದಕ್ಕೆ ಪರಿಶ್ರಮ ವಹಿಸಿ ಆಗು ಮಾಡಿದ ಕರ್ನಾಟಕದ ಉಭಯ ಸಮುದಾಯಗಳ ‘ಯಜಮಾನಿಕೆ’ಯ ಸ್ವರೂಪ ಗೋಚರವಾಗುತ್ತದೆ. ಆದರೆ, ಅದಕ್ಕಿಂತ ವಿಚಿತ್ರ ಎಂದರೆ ಸೋಕಾಲ್ಡ್ ಕೆಳಜಾತಿ ಮತ್ತು ಮಧ್ಯಮ ವರ್ಗದ ಜನ ಅಪಾಯ ಅರಿಯದೇ ಶೋಷಕರ ಜೊತೆಗೇ ಹೋಗುವ ‘ದೌರ್ಬಲ್ಯ’. ವರುಣಾ ವಿಧಾನಸಭಾ ಕ್ಷೇತ್ರವನ್ನ ಮಗನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿಯತ್ತ ಮುಖ ಮಾಡುವ ‘ಸ್ವಾರ್ಥ’ ಸಿದ್ಧರಾಮಯ್ಯನವರ ತಲೆಗೆ ಹೇಗೆ? ಯಾಕೆ ಹೊಕ್ಕಿತೋ ಗೊತ್ತಿಲ್ಲ. ಅದು ಅವರನ್ನು ಮತ್ತು ಅವರ ಪಕ್ಷವನ್ನು ಸೋಲಿನ ಬಾಗಿಲಿಗೆ ತಂದು ನಿಲ್ಲಿಸಿದೆ. ಸಿದ್ಧರಾಮಯ್ಯ ಸ್ವಲ್ಪ ಉದಾರವಾಗಿ ವರ್ತಿಸಿದ್ದರೆ ಇಂತಹ ಸ್ಥಿತಿ ಉದ್ಭವ ಆಗುವ ಸಾಧ್ಯತೆಗಳು ಕಡಿಮೆ ಆಗಿರುತ್ತಿದ್ದವು. ಭಾವನಾತ್ಮಕ ಮೇಲುಗೈ ಸಾಧಿಸುವುದಕ್ಕೆ ಸ್ವತಃ ಸಿದ್ಧರಾಮಯ್ಯ ಅವಕಾಶ ಮಾಡಿಕೊಟ್ಟರು. ಅದಕ್ಕೆ ಸ್ವತಃ ಅವರೂ ಸೇರಿದಂತೆ ಕಾಂಗ್ರೆಸ್ ಅದಕ್ಕಿಂತ ಹೆಚ್ಚಾಗಿ ರಾಜ್ಯದ ಜನ ತುಂಬಾ ದುಬಾರಿ ಬೆಲೆ ತೆರ ಬೇಕಾಗಿದೆ. ರಾಜಕೀಯವೂ ಒಂದು ಆಟ. ಇಲ್ಲಿ ಎಲ್ಲವೂ ನನ್ನದೇ ಆಗಬೇಕೆಂದರೆ ಆಗುವುದಿಲ್ಲ. ಕೆಲವೊಮ್ಮೆ ಬಿಟ್ಟು ಕೊಡುವ ದೊಡ್ಡ ಮನಸ್ಸೂ ಮಾಡಬೇಕಾಗುತ್ತದೆ. ಎಂದೂ ಇಲ್ಲದ ರಾಜಕೀಯಕ್ಕೆ ಮಗನನ್ನು ತರುವ ಆಸೆ, ಪುತ್ರ ವ್ಯಾಮೋಹ ಯಾಕೆ ಬೇಕಿತ್ತು? ಕಾಂಗ್ರೆಸ್ ನ ಕುಟುಂಬ ರಾಜಕಾರಣವನ್ನು ಟೀಕೆ ಮಾಡುವ ಸ್ಥಿತಿಯನ್ನು ಯಾವ ರಾಜಕೀಯ ಪಕ್ಷವೂ, ನಾಯಕರೂ ಇಂದು ಉಳಿಸಿಕೊಂಡಿಲ್ಲ. ಸ್ವತಃ ಸಮಾಜವಾದಿ ಎಂದು ಭಾವಿಸಿರುವ ಸಿದ್ಧರಾಮಯ್ಯ ಸೈದ್ಧಾಂತಿಕವಾಗಿ ಕುಟುಂಬ ರಾಜಕಾರಣ ವಿರೋಧಿ ನೆಲೆಯವರು. ಕುಟುಂಬ ರಾಜಕಾರಣದ ಕಾರಣಕ್ಕಾಗಿಯೇ ಅಪಾರ ಪ್ರಮಾಣದ ನಷ್ಟ ಅನುಭವಿಸಿದವರು. ಕೈ ಸುಟ್ಟುಕೊಂಡವರು. ‘ಬೆಂಕಿ’ಯ ಅನುಭವ ಪಾಠ ಕಲಿಸದಿದ್ದರೆ- ಕಲಿಯದಿದ್ದರೆ ಹೇಗೆ? ‘ನಾವು ಗೆದ್ದೇ ಗೆಲ್ಲುವೆವು’ ಅತಿಯಾದ ಆತ್ಮವಿಶ್ವಾಸ ಮತ್ತು ಅದೇ ಹೊತ್ತಿಗೆ ಫಲಿತಾಂಶ ಬರುವ ಮುನ್ನವೇ ಪ್ರಮಾಣ ವಚನದ ದಿನಾಂಕ ನಿಗದಿ ಮಾಡುವ ‘ದುರಹಂಕಾರ’ಗಳೆರಡಕ್ಕೂ ಜನ ಸೂಕ್ತ ನೆಲೆ ಮತ್ತು ನೆಲ ತೋರಿಸಿದ್ದಾರೆ. ಸೋಲುವುದಕ್ಕಿಂತ ಸೋಲಿನ ಭೀತಿ ಹೆಚ್ಚು ಅಪಾಯಕಾರಿ. ಚಾಮುಂಡೇಶ್ವರಿಯ ಅಪಾಯದ ಮುನ್ಸೂಚನೆಗೆ ಇದ್ದ ಕಾರಣ ತುಂಬಾ ಸ್ಪಷ್ಟ. ಮೇಲ್ಜಾತಿ- ಮೇಲ್ವರ್ಗಗಳು ಸೋಲಿಸಲು ಕಟಿಬದ್ಧವಾಗಿವೆ ಎಂಬುದರ ವಾಸನೆ ಬಂದಿತ್ತು. ಅದು ರಾಜ್ಯದಾದ್ಯಂತ ಇದ್ದ- ಇರಬಹುದಾದ ಅತೃಪ್ತಿಯ ಮೇಲೆ ಎಂದು ಅರ್ಥ ಮಾಡಿಕೊಳ್ಳದೇ ಇದ್ದರೆ ಹೇಗೆ? ಯಡಿಯೂರಪ್ಪ- ದೇವೇಗೌಡರು ತೋರಿದ ಧಾಷ್ಟ್ಯವನ್ನು ಸಿದ್ಧರಾಮಯ್ಯ ಕೂಡ ತೋರಿಸಿದ್ದು ‘ಹುಂಬತನ’ ಎನ್ನದೇ ವಿಧಿಯಿಲ್ಲ. ಉಭಯ ನಾಯಕರಿಗೆ ಇದ್ದ ಜಾತಿಯ ಬಲ ಹಾಗೂ ಅದೇ ಪ್ರಮಾಣದಲ್ಲಿ ಇದ್ದ- ಇರುವ ಇಮೇಜ್ ಬಗ್ಗೆ ‘ಕ್ಯಾರೇ’ ಅನ್ನದ ಮನೋಭಾವ ಸಿದ್ಧರಾಮಯ್ಯಗೆ ಇಲ್ಲ. ಮತ್ತು ಅದು ಬರುವುದೂ ಇಲ್ಲ. ಎದುರಾಳಿಗೆ ಕೈ ಕಟ್ಟಲು ಅವಕಾಶ ಮಾಡಿಕೊಟ್ಟದ್ದು ಸಿದ್ದರಾಮಯ್ಯನವರ ಲೋಪ. ರಾಜಕೀಯ ಆಟದಲ್ಲಿ ಸಂದೇಶ- ಸೂಚನೆಗಳೇ ಪ್ರಾಬಲ್ಯ ಮೆರೆಯುತ್ತವೆ. ಅದು ನಲವತ್ತು ವರ್ಷ ರಾಜಕಾರಣ ಮಾಡಿದವರಿಗೆ ಅರ್ಥ ಆಗಿಲ್ಲ ಎಂದರೆ ಹೇಗೆ ನಂಬುವುದು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯಾಬಲವೇ ಮುಖ್ಯ ಎನ್ನುವದರಲ್ಲಿ ಎರಡು ಮಾತಿಲ್ಲ. ಆದರೆ, ಬಹುಜನರು ‘ಒಗ್ಗಟ್ಟು’ ಆಗಲು ಸಾಂಸ್ಕೃತಿಕ-ಸಾಮಾಜಿಕ ಕಾರಣಗಳಿಲ್ಲ. ಆದರೆ, ಪ್ರಬಲರಿಗೆ ಸಂಖ್ಯಾಬಲದ ಕೊರತೆ ಇದ್ದರೂ ‘ಪ್ರಾಬಲ್ಯ’ ತೋರಿಸುವುದಕ್ಕೆ ಹಿಂದೆ ಬೀಳುವುದಿಲ್ಲ. ಬೇಟೆಯಾಡುವ ಹುಲಿ ತಾನು ದುರ್ಬಲನಾದರೂ ಆಗಿದ್ದರೂ ಹಾಗೆ ಭಾವಿಸುವುದಿಲ್ಲ. ಅದು ಭೀತಿ ಉಂಟು ಮಾಡುವ ಮೂಲಕವೇ ಮೇಲುಗೈ ಸಾಧಿಸಲು ಬಯಸುತ್ತದೆ. ಮೇಲ್ಜಾತಿ-ಮೇಲ್ವರ್ಗಳ ತಂತ್ರ ಕೂಡ. ಹುಲಿ ಕಳೆಗುಂದಿದೆ ಎಂದು ಗೊತ್ತಾದರೆ ಜಿಂಕೆಗಳು ಸವಾರಿ ಮಾಡುತ್ತವೆ ಎಂಬ ಮನೋಭಾವವೇ ಆಕ್ರಮಣಾತ್ಮಕ ಧೋರಣೆಗೆ ಕಾರಣವಾಗುತ್ತದೆ. ಹುಲಿಗಳು ಒಂದಾಗುವುದು ದಾಳಿ ಮಾಡುವುದಕ್ಕಾದರೆ, ಜಿಂಕೆಗಳು ಒಂದಾಗುವುದು ರಕ್ಷಣೆಗಾಗಿ. ಜಿಂಕೆಗಳು ಒಂದಾಗಿಯೂ ಹುಲಿಯ ಮೇಲೆ ‘ಸವಾರಿ’ ಮಾಡಲು ಆಗುವುದಿಲ್ಲ. ಹುಲಿ-ಜಿಂಕೆಯ ನೈಸರ್ಗಿಕ ಆಟ- ಜೀವನ್ಮರಣದ ಹೋರಾಟ ಸಿದ್ಧರಾಮಯ್ಯನವರಿಗೆ ಗೊತ್ತಿರದ ಸಂಗತಿಯೇನಲ್ಲ. ಪ್ರಬಲ ಸಮುದಾಯಗಳ ಧ್ರುವೀಕರಣದ ‘ಭಯ’ವೂ ದುರ್ಬಲರನ್ನು ಒಗ್ಗಟ್ಟಾಗಿಸಲು ಅವಕಾಶ ಕಲ್ಪಿಸುತ್ತದೆ. ಅದು ಆ್ಯಂಟಿಪೊಲರೈಸೇಷನ್ ನ ವೇಗವನ್ನು ತೀವ್ರಗೊಳಿಸುತ್ತದೆ. ಒಕ್ಕಲಿಗರು ಜನತಾದಳದ ಜೊತೆಗೆ, ಲಿಂಗಾಯತರು ಬಿಜೆಪಿಯ ಜೊತೆಗೆ ಎಂಬ ಭಾವನಾತ್ಮಕ ಸಂಗತಿ ಎಲ್ಲರಿಗೂ ಗೊತ್ತಿದ್ದ ತೆರೆದಿಟ್ಟ ಸತ್ಯವಾಗಿತ್ತು. ಕರ್ನಾಟಕದ ರಾಜಕಾರಣದ ಬಗ್ಗೆ ಗೊತ್ತಿರುವವರಿಗೆ ಇದು ಹೊಸ ಸಂಗತಿಯೇನಲ್ಲ. ‘ಜಾತಿ ಜನಗಣತಿ’ಯ ಅಸ್ತ್ರ ಬಳಸಿದರೆ ಲಿಂಗಾಯತ-ಒಕ್ಕಲಿಗರೇತರರು ಒಂದಾಗುವ ಅವಕಾಶ ಸಾಧ್ಯವಾಗುತ್ತಿತ್ತು. ಕರ್ನಾಟಕದಲ್ಲಿ ಲಿಂಗಾಯತರು ಇದ್ದಾರೆ ಎಂದು ಭಾವಿಸಿದ್ದೇ ಸರಿಯಾಗಿರಲಿಲ್ಲ. ಬಸವಪ್ರಣೀತ ಲಿಂಗಾಯತ ನಗಣ್ಯವೆನಿಸುವಷ್ಟು ಅಲ್ಪಸಂಖ್ಯಾತ. ಇರುವವರೆಲ್ಲ ಸೈದ್ಧಾಂತಿಕವಾಗಿ- ಭಾವನಾತ್ಮಕವಾಗಿ ವೀರಶೈವರು. ಬಸವಣ್ಣ ಅವರಿಗೆ ಒಂದ ಸಾಂಸ್ಕೃತಿಕ ‘ಐಕಾನ್’. ಅದೂ 50-60ರ ದಶಕದಲ್ಲಿ ಐಡೆಂಟಿಟಿ ಕ್ರೈಸಿಸ್ ನಿಂದ ಹೊರ ಬರುವುದಕ್ಕಾಗಿ ಹುಟ್ಟಿದ ಸಂಕೇತ. ಹನ್ನೆರಡನೇ ಶತಮಾನದ ಬಸವಣ್ಣನನ್ನು 2008ರ ವೇಳೆಗಾಗಲೇ ಕೈಬಿಟ್ಟು ‘ದೂರ’ ನಡೆದು ಬಿಟ್ಟಿದ್ದರು. ದೀನ-ದುರ್ಬಲರ ಪರವಾಗಿ ಮಾತನಾಡುವ ಬಸವ ‘ಪ್ರಾಬಲ್ಯ’ ಮೆರೆಯುವುದಕ್ಕೆ ಅಗತ್ಯ ಎಂದು ಅನ್ನಿಸಿರಲಿಲ್ಲ. ಅದೇ ಕಾರಣಕ್ಕಾಗಿಯೇ ಬಸವಣ್ಣ ಮೇಲಿನ ಪ್ರೀತಿಗಿಂತ ‘ಜಾತಿ’ಯ ಪ್ರೇಮ ಹೆಚ್ಚಾಗಿ ಅದು ಬಿಜೆಪಿ ಪರವಾದ ನಿಲುವು ಆಗಿ ಪರಿವರ್ತನೆಗೊಂಡಿತ್ತು. ಮೇಲ್ಜಾತಿಯವರಿಗೆ ಮಾತ್ರ. ಸ್ವಜನ ಪಕ್ಷಪಾತ ಮಾಡುವ- ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುವ ‘ಅಧಿಕಾರ’ ಮತ್ತು ‘ಹಕ್ಕು’ ಆಯಾಚಿತವಾಗಿ ದೊರೆತಿದೆ. ಅದನ್ನೇ ಸಿದ್ಧರಾಮಯ್ಯ ಕೂಡ ಮಾಡಿದರೆ ಹೇಗೆ ಸಹಿಸಿಕೊಳ್ಳಲು ಆಗುತ್ತದೆ. ಮೇಲ್ಜಾತಿಯ ಜನ ಜಾತಿಯ ಜನ ಒಂದೆಡೆ ಸೇರಿದರೆ ‘ಸಾಂಸ್ಕೃತಿಕ’ ಕಾರಣಕ್ಕಾಗಿ ಎಂದು ವ್ಯಾಖ್ಯಾನಿಸಲಾಗುತ್ತದೆ. ಅದೇ ‘ಕೆಳಜಾತಿ’ (ಪ್ರಬಲರಲ್ಲದ ಸಮುದಾಯ)ಯ ಜನ ಸೇರಿದರೆ ಅದು ‘ಜಾತೀಯತೆ’ ಆಗುತ್ತದೆ. ಶಬ್ದಗಳು ರೂಲ್ ಮಾಡುತ್ತವೆ. ಹೌದು. ಅಲ್ಲಮ ಹೇಳಿದಂತೆ ಭಾಷೆಯೆಂಬುದು ‘ಪ್ರಾಣ ಘಾತಕ’. ಭಾವನೆಗಳಿಗಿಂತ ಭಾಷೆಗೇ ಹೆಚ್ಚು ಮಹತ್ವ. ಸಿದ್ಧರಾಮಯ್ಯ ಎಡವಿದರು. ಕರ್ನಾಟಕದ ಬಹುಜನರು ‘ಆತಂಕ’ಕ್ಕೆ ಒಳಗಾಗಿದ್ದಾರೆ. ಇರುವಾಗ ‘ವಸ್ತು’ವಿನ ಮಹತ್ವ ಗೊತ್ತಾಗುವುದಿಲ್ಲ. ಅರಸು ಜೊತೆ ಹೋಲಿಕೆ ಮಾಡಬಾರದು ಎಂದು ಎಷ್ಟೇ ಹಠ ಹಿಡಿದರೂ ಮಾಡದೇ ಇರಲು ಸಾಧ್ಯವಾಗುತ್ತಿಲ್ಲ. ಹಿಂದೆ ಅರಸು ಇದ್ದಾಗಲೂ ಹೀಗೆಯೇ ಆಗಿತ್ತು. ಈಗ ಸಿದ್ಧರಾಮಯ್ಯ ಅವರಿಗೆ ಕೂಡ ಅದೇ ಆಗಿದೆ. ನಮಗೆ ಅದು ಇತಿಹಾಸ-ಚರಿತ್ರೆಯ ಪುಟ. ಆದರೆ, ಸ್ವತಃ ಅರಸು ರಾಜಕಾರಣ ಮತ್ತು ಅದಕ್ಕಾಗಿ ದೊರೆತ ಪ್ರತಿಫಲ ಸಿದ್ಧರಾಮಯ್ಯನವರಿಗೆ ವರ್ತಮಾನದ ಅನುಭವ ಆಗಿತ್ತು. ಸಿದ್ಧರಾಮಯ್ಯನವರ ವಿರುದ್ಧದ ಅಲೆ ಸುಪ್ತವಾಗಿ, ಜೀವಂತವಾಗಿ ಉಳಿಯುವಂತೆ ಮಾಡುವಲ್ಲಿ ಪ್ರಬಲ ಸಮುದಾಯಗಳು ಯಶ ಕಂಡಿವೆ ಎಂಬುದೇ ಸದ್ಯದ ಸತ್ಯ.
2018 May 16

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಎಸ್.ಎಂ. ಪಂಡಿತ್