ಹಾವು ಹೊಡೆದು ಹದ್ದಿಗೆ ಹಾಕಿದ ‘ಕೃಷ್ಣ’
ಮರೆವು ಹಾಗೂ ದಿವ್ಯ ಮೌನದಿಂದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೊರ ಬಂದಿದ್ದಾರೆ. ಅವರಿಗೀಗ ಅವಮಾನ ಆಗಿದೆಯಂತೆ. ಇರಬಹುದು. ಅವರವರ ನೋಟಕ್ಕೆ ಹಾಗೂ ಮೂಗಿನ ನೇರಕ್ಕೆ ತಾವು ಸರಿ ಅಂದುಕೊಂಡದ್ದು ಮಾತ್ರ ಕಾಣಿಸುತ್ತದೆ. ಅದರಲ್ಲೇನು ವಿಶೇಷವಿಲ್ಲ. ಕಾಂಗ್ರೆಸ್ ವಿರೋಧಿ ರಾಜಕಾರಣದಿಂದ ರಾಜಕೀಯ ಪ್ರವೇಶಿಸಿರುವುದಾಗಿ ನೆನಪಿಸಿಕೊಂಡಿರುವ ಕೃಷ್ಣ ಅವರು ಅದಕ್ಕಾಗಿ ತಾವು ಪ್ರಜಾ ಸೋಷಲಿಸ್ಟ್ ಪಾರ್ಟಿಯಿಂದ ಮೊದಲ ಬಾರಿಗೆ ಆಯ್ಕೆಯಾದ ಕ್ಷಣವನ್ನು ಮೆಲುಕು ಹಾಕಿದ್ದಾರೆ. ಅಲ್ಲಿಂದ ಕಾಂಗ್ರೆಸ್ ಸೇರಿದ ನಂತರದ ಎಲ್ಲ ಬದಲಾವಣೆ, ಬೆಳವಣಿಗೆಗಳನ್ನು ಕೃಷ್ಣ ಮರೆತು ಬಿಟ್ಟಿದ್ದಾರೆ. ಇದೊಂದು ರೀತಿಯ ಜಾಣ ಮರೆವು. ವಯಸ್ಸಿನ ಕಾರಣಕ್ಕಾಗಿ ಅವರನ್ನು ಕಾಡುತ್ತಿದ್ದ ಮರೆವಿನ ರೋಗ ಇದೀಗ ಇದ್ದಕ್ಕಿದ್ದಂತೆ ಇಲ್ಲವಾಗಿರುವುದು ಸೋಜಿಗದ ಸಂಗತಿ. ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದ ಕೃಷ್ಣ ಅವರು ವಿಶ್ವಸಂಸ್ಥೆಯಲ್ಲಿ ತಮ್ಮದಲ್ಲದ ಭಾಷಣ ಓದಿ ನಗೆಪಾಟಲಿಗೆ ಈಡಾಗಿದ್ದರು. ಹಾಗೂ ಇಡೀ ದೇಶ ತಲೆತಗ್ಗುವಂತೆ ಮಾಡಿದ್ದರು. ಅಷ್ಟೆಲ್ಲ ಅವಾಂತರಕ್ಕೂ ಮುನ್ನ ಕಾಂಗ್ರೆಸ್ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ಮಾಡಿತ್ತು. ಅಷ್ಟಕ್ಕೇ ಸುಮ್ಮನಿರದ ಕಾಂಗ್ರೆಸ್ ರಾಜಭವನದಲ್ಲಿ ರಾಜಕೀಯ ನಿವೃತ್ತ ಜೀವನ ನಡೆಸುತ್ತಿದ್ದ ಕೃಷ್ಣರನ್ನು 2009ರ ವಿಧಾನಸಭೆಯ ಮುನ್ನಾದಿನಗಳಲ್ಲಿ ರಾಜೀನಾಮೆ ಕೊಡಿಸಿ ರಾಜ್ಯ ರಾಜಕಾರಣಕ್ಕೆ ಮರಳಿ ಬರುವಂತೆ ಮಾಡಿದ್ದರ ಹಿಂದೆ ಯಾವ ಯೋಚನೆ ಇತ್ತೋ ಗೊತ್ತಿಲ್ಲ. ಕಾಂಗ್ರೆಸ್ ಥಿಂಕ್ ಟ್ಯಾಂಕ್ ಈ ಬಗ್ಗೆ ಸ್ಪಷ್ಟೀಕರಿಸಬೇಕು. ಕಾಂಗ್ರೆಸ್ ನಲ್ಲಿ ಅಂತಹ ಥಿಂಕಿಸುವ ಟ್ಯಾಂಕ್ ಇದ್ದರೆ.
ಅದಿರಲಿ, ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು ಇಬ್ಭಾಗವಾಗಿ ದಾಯಾದಿಗಳಂತೆ ಕಚ್ಚಾಡುತ್ತಿರುವಾಗಲೂ ಪಕ್ಷವು ಕೃಷ್ಣರ ಗುಂಪಿನ ಪರವಾಗಿಯೇ ಇತ್ತು. ಕೃಷ್ಣರಿಗೆ ಆಪ್ತೆಯಾಗಿರುವ ರಮ್ಯ ಸ್ಪಂದನಳಿಗೆ ಟಿಕೆಟ್ ನೀಡಿ ಸಂಸತ್ ಪ್ರವೇಶಿಸುವುದಕ್ಕೆ ಅವಕಾಶ ಕಲ್ಪಿಸಿದ ಕಾಂಗ್ರೆಸ್ ನಂತರ ಕೂಡ ಕೃಷ್ಣರ ಕಾರಣಕ್ಕಾಗಿಯೇ ಅಂಬಿ ತಂಡದ ಅಸಮಾಧಾನವನ್ನೂ ಎದುರಿಸಬೇಕಾಯಿತು. ರಾಜಕೀಯದಲ್ಲಿ ಅದೆಲ್ಲ ಮಾಮೂಲು ಸಂಗತಿ ಬಿಡಿ.
ಕೃಷ್ಣ ಅವರು ಕರ್ನಾಟಕಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮಾಡಿರುವ ಘನಂದಾರಿ ಉಪಕಾರವನ್ನು ಸ್ಮರಿಸುವುದಕ್ಕೆ ಇದು ಸಕಾಲ. ಮುಖ್ಯಮಂತ್ರಿಯಾಗಿದ್ದ ಅವಧಿಯುದ್ದಕ್ಕೂ ನಾಜೂಕಯ್ಯನಂತಿದ್ದ ಕೃಷ್ಣ ಅವರು ಮೇಲ್ಮಧ್ಯಮ ವರ್ಗದ ನಗರ ಕೇಂದ್ರಿತ ಮತದಾರರನ್ನು ಓಲೈಸುತ್ತ, ಭಾರೀ ಜನಪ್ರಿಯತೆಯ ಭ್ರಮೆಯಲ್ಲಿ ತೇಲುತ್ತಿದ್ದರು. ಬೆಂಗಳೂರನ್ನು ಸಿಂಗಾಪೂರ್ ಮಾಡುವುದಾಗಿ ಹೇಳಿದ್ದ ಕೃಷ್ಣ ಅವರ ಸಮಕಾಲೀನರಾಗಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಅದೇ ರೀತಿಯ ಯೋಚನಾಕ್ರಮ ಹೊಂದಿದ್ದರು. ಹೀಗಾಗಿಯೇ ಕೃಷ್ಣ ಸೇರಿದಂತೆ ಎಲ್ಲ ಮೂವರಿಗೂ ಮತದಾರರು ಅವರ ನೆಲೆ- ನೆಲ ತೋರಿಸಿದ್ದರು. ಗ್ರಾಮೀಣ ಹಾಗೂ ಅವಕಾಶ ವಂಚಿತ ಸಮುದಾಯಗಳನ್ನು ಅಂದರೆ ಅಂಚಿನಲ್ಲಿ ಇರುವ ಸಮುದಾಯ- ಸಂಗತಿಗಳನ್ನು ಕೇಂದ್ರಕ್ಕೆ ತರಲು ಹಿಂದೇಟು ಹಾಕಿದ ಈ ಮೂವರು ನಾಯಕರು ಮಧ್ಯಮ ವರ್ಗ ಹಾಗೂ ಮಾಧ್ಯಮಗಳು ಹುಟ್ಟು ಹಾಕಿದ ಭ್ರಮೆಗಳಲ್ಲಿ ‘ಹೊಳೆ’ಯುತ್ತಿದ್ದರು. ಅವರನ್ನು ತೇಲಿಸಿ ದಡ ತಲುಪಿಸಿದ್ದು 2004ರ ಚುನಾವಣೆ.
ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರು ಸಿಲಿಕಾನ್ ಆಗಿ ಜಾಗತಿಕ ನಕಾಶೆಯಲ್ಲಿ ಢಾಳಾಗಿ ಗುರುತಿಸಿಕೊಂಡದ್ದು ಸುಳ್ಳೇನಲ್ಲ. ಅಂತಹ ಅವಕಾಶ ಕೃಷ್ಣ ಅವರಿಗೆ ದೊರಕಿದ್ದು ಅವರ ಪೂರ್ವಸೂರಿಯಾಗಿದ್ದ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಂದಾಗಿ. ಮೊಯ್ಲಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆರಂಭಿಸಿದ (ಕಾಮನ್ ಎಂಟ್ರೆನ್ಸ್ ಟೆಸ್ಟ್) ಸಿಇಟಿಯಿಂದಾಗಿ ಆರ್ಥಿಕವಾಗಿ ಸಬಲರಾಗಿಲ್ಲದ ಪ್ರತಿಭಾವಂತರಿಗೆ ಅವಕಾಶದ ಬಾಗಿಲು ತೆರೆದುಕೊಂಡವು. ಹೊಸದಾಗಿ ತಾಂತ್ರಿಕ ಶಿಕ್ಷಣ ಪಡೆದಿದ್ದ ಯುವ ಸಮೂಹ ತಮ್ಮ ಬುದ್ಧಿವಂತಿಕೆ ಹಾಗೂ ಕ್ಷಮತೆಯಿಂದ ಕಾರ್ಯ ನಿರ್ವಹಿಸಿ ಜಗತ್ತಿನ ಗಮನ ಸೆಳೆಯುವುದಕ್ಕೆ ಕಾರಣರಾಗಿದ್ದರು. ಸಿಇಟಿಯ ಫಲವಾಗಿ ಕೆನೆಗಟ್ಟುವ ಸಮಯದಲ್ಲಿ ಕಾಣಿಸಿಕೊಂಡ ಕೃಷ್ಣ ಅವರು ಐಟಿ (ಮಾಹಿತಿ ತಂತ್ರಜ್ಞಾನ) ಕ್ಷೇತ್ರ ಬೆಳೆಯುವುದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ್ದರು. ಅದರ ಫಲವಾಗಿ ಜಗತ್ತಿನಾದ್ಯಂತ ಬೆಂಗಳೂರು ಒಂದು ಬ್ರ್ಯಾಂಡ್ ಬೆಳೆಯುವುದಕ್ಕೆ ಕಾರಣವಾಯಿತು.
1999ರಲ್ಲಿ ಕಾಂಗ್ರೆಸ್ ಪಕ್ಷವು ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕೃಷ್ಣ ಅವರಿಗೆ ಮುಖ್ಯಮಂತ್ರಿಯಾಗುವ ಸದವಕಾಶ ದೊರೆಯಿತು. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸಿದ ಏಕೈಕ ಸುದೈವಿ ನಾಯಕ ಎಂದರೆ ಕೃಷ್ಣ. ಇಂತಹ ಸುದೈವಿ ಕರ್ನಾಟಕಕ್ಕೆ ಮಾಡಿದ ಉಪಕಾರ ಸ್ಮರಿಸದಿದ್ದರೆ ಹೇಗೆ? ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕೃಷ್ಣ ಅವರಿಗೆ ವಿರೋಧ ಪಕ್ಷದಲ್ಲಿ ಇದ್ದ ಜನತಾ ಪರಿವಾರದ ನಾಯಕರ ಮೇಲೆ ಕಣ್ಣು ಬಿದ್ದಿತು. ಜನತಾ ಪರಿವಾರದ ನಾಯಕರನ್ನು ಕಾಂಗ್ರೆಸ್ ಗೆ ಸೆಳೆಯುವ ಐಡಿಯಾವನ್ನು ಅದ್ಯಾರು ಕೃಷ್ಣರ ತಲೆಯಲ್ಲಿ ತುಂಬಿದರೋ ಅದು ಸ್ವತಃ ಕೃಷ್ಣ ಅವರ ಯೋಚನೆ-ಯೋಜನೆಯೋ ಗೊತ್ತಿಲ್ಲ. ಅದರ ಫಲವಾಗಿ ಜನತಾ ಪರಿವಾರದ ಪ್ರಮುಖರನ್ನೆಲ್ಲ ಕಾಂಗ್ರೆಸ್ ಸೇರುವಂತೆ ನೋಡಿಕೊಂಡರು. ಅದೊಂದು ತಮ್ಮ ಭಾರೀ ಯಶಸ್ಸು ಎಂಬಂತೆ ಭ್ರಮಿಸಿದರು ಕೂಡ. ಪ್ರಬಲ ಎದುರಾಳಿಗಳೇ ಇಲ್ಲದಿರುವಾಗ ಇರುವವ ಮಾತ್ರ ಕಣದಲ್ಲಿ ಉಳಿಯುತ್ತಾನೆ ಎಂಬ ಅರೆಬೆಂದ ರೀತಿಯಲ್ಲಿ ಯೋಚಿಸಿದ ಕೃಷ್ಣ ಅವರು ಜನತಾ ಪರಿವಾರದ ಬೆನ್ನು ಮೂಳೆ ಮುರಿಯುವಲ್ಲಿ ಯಶಸ್ವಿಯೇನೋ ಆದರು. ಅದರೆ, ಅದರ ಫಲವಾಗಿ ಕರ್ನಾಟಕದಲ್ಲಿ ಬಿಜೆಪಿಯು ಬೆಳೆಯುವುದಕ್ಕೆ ಅನುವು ಮಾಡಿಕೊಟ್ಟ ಹಿರಿಮೆಯೂ ಕೃಷ್ಣ ಅವರಿಗೆ ಸಲ್ಲಬೇಕು. ಎರಡು ಸೆಕ್ಯುಲರ್ (?) ಪಕ್ಷಗಳ ನಡುವಿನ ಪೈಪೋಟಿಯನ್ನು ಇಲ್ಲವಾಗಿಸಿದ ಕೃಷ್ಣ ಅವರು ಹಾವನ್ನೇನೋ ಹೊಡೆದರು. ಆದರೆ, ಹಾಕಿದ್ದು ಮಾತ್ರ ಹದ್ದಿಗೆ. ಜನತಾ ಪರಿವಾರದ ಪ್ರಮುಖ ನಾಯಕರ ಗೈರು ಹಾಜರಿಯ ಲಾಭ ಬಿಜೆಪಿಯು ರಾಜ್ಯದಲ್ಲಿ ನೆಲೆ ಪಡೆಯುವುದಕ್ಕೆ ಸದವಕಾಶ ಕಲ್ಪಿಸಿತು. ಕೃಷ್ಣರ ದೂರದೃಷ್ಟಿಯ ಕೊರತೆಯ ಫಲವಾಗಿ ಜನತಾ ಪರಿವಾರ ಇಲ್ಲವಾಗಿ ಬಿಜೆಪಿಯು ಪ್ರಬಲ ರಾಜಕೀಯ ಪಕ್ಷವಾಗಿ ಬೆಳೆಯಿತು. ಕೃಷ್ಣ ಹಾಕಿದ ಅಡಿಪಾಯಕ್ಕೆ ಪೂರಕವಾಗಿ ಕೆಲಸ ಮಾಡಿದ ಕುಮಾರಸ್ವಾಮಿ ಹಾಗೂ ದೊಡ್ಡಗೌಡರು ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ನೆರವಾದರು. ರಾಜಕೀಯ ಲೆಕ್ಕಾಚಾರ ಮಾಡುವಲ್ಲಿ ಕೃಷ್ಣ ಹೇಗೆ ಎಡವಿದರು? ಅದರ ಫಲವೇನಾಯಿತು? ಎಂಬುದೀಗ ಇತಿಹಾಸ.
ಕೃಷ್ಣ ಮಾಡಿದ ಮತ್ತೊಂದು ತಪ್ಪು ನಿರ್ಧಾರ ಎಂದರೆ ಅಧಿಕಾರದ ಅವಧಿಯು ಇನ್ನೂ ಆರು ತಿಂಗಳು ಇರುವಾಗಲೇ ಲೋಕಸಭಾ ಚುನಾವಣೆಯ ಜೊತೆಗೆ ರಾಜ್ಯ ವಿಧಾನಸಭೆಯ ಚುನಾವಣೆಯೂ ನಡೆಯುವಂತೆ ನೋಡಿಕೊಂಡಿದ್ದು. ಅದರ ಫಲವಾಗಿ ಕೃಷ್ಣ ಅವರ ಸಚಿವ ಸಂಪುಟದ 30ಕ್ಕೂ ಹೆಚ್ಚು ಸಚಿವರು ವಿಧಾನಸಭೆಗೆ ಮರುಆಯ್ಕೆಗೊಳ್ಳುವಲ್ಲಿ ವಿಫಲರಾದರು. ಸ್ವತಃ ಭೀತರಾಗಿದ್ದ ಕೃಷ್ಣ ಅವರು ತವರೂರು ಮದ್ದೂರಿನಿಂದ ಬೆಂಗಳೂರು ನಗರದ ಚಾಮರಾಜಪೇಟೆಗೆ ವಲಸೆ ಬಂದರು. ಚುನಾವಣೆಯಲ್ಲಿ ಕೃಷ್ಣ ಗೆದ್ದರೂ ರಾಜಕೀಯವಾಗಿ ತಾವು ಸೋತದ್ದು ಮಾತ್ರವಲ್ಲ ಕಾಂಗ್ರೆಸ್ ಅನ್ನೂ ದಯನೀಯವಾಗಿ ಸೋಲಿಸಿದರು. ಕೋಮುವಾದಿ ಎಂಬ ಹಣೆಪಟ್ಟಿ ಹೊಂದಿರುವ ಕೃಷ್ಣರಂತಹದ್ದೇ ಯೋಚನಾ ಕ್ರಮ ಹೊಂದಿರುವ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ತಮ್ಮದೇ ಕೊಡುಗೆ ನೀಡಿರುವ ಕೃಷ್ಣ ಅವರು ಅಧಿಕೃತವಾಗಿ ಪಕ್ಷ ಸೇರುವುದಷ್ಟೇ ಬಾಕಿ ಉಳಿಸಿದ್ದಾರೆ. ಹಾಗೆ ಆದರೆ, ಗೌಡರ ನೆಲದಲ್ಲಿ ತಮಗೆ ನೆಲೆಯೂರುವುದಕ್ಕೆ ಅವಕಾಶ ಕಲ್ಪಿಸಿದ ಬಿಜೆಪಿಯು ಕೃಷ್ಣರಿಗೆ ಚಿರಕಾಲ ಋಣಿಯಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಕಾಮೆಂಟ್‌ಗಳು