ಕರ್ನಾಟಕ ಚುನಾವಣಾ ಫಲಿತಾಂಶ ಮತ್ತು 2019ರ ಲೋಕಸಭಾ ಚುನಾವಣೆ


ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಮಾಧ್ಯಮಗಳು ಮತ್ತು ರಾಜಕೀಯ ವಿಶ್ಲೇಷಕರು 2019ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದು ಬಿಂಬಿಸಿವೆ. ಮೇಲ್ನೋಟಕ್ಕೆ ಅದು ಸರಿ ಎಂದು ಕೂಡ ಅನ್ನಿಸುತ್ತಿತ್ತು. ಅನ್ನಿಸುತ್ತಿದೆ. ರಾಜಕಾರಣದಲ್ಲಿ ಕಂಡದ್ದು, ಕೇಳಿದ್ದು ಮಾತ್ರ ‘ಸತ್ಯ’ ಅಲ್ಲ. ಹಾಗಾದರೆ ಕರ್ನಾಟಕದ ಚುನಾವಣೆಯು ಸೆಮಿಫೈನಲ್ ಅಲ್ಲವೇ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆಟದ ನಿಯಮಗಳು ರಾಜಕೀಯಕ್ಕೆ ಅನ್ವಯಿಸುವುದಿಲ್ಲ. ಜನ ರಾಜಕೀಯ ಆಯ್ಕೆಯನ್ನು ಆಟದ ರೀತಿಯಲ್ಲಿ ಮನರಂಜನೆ ಎಂದು ಭಾವಿಸುವುದಿಲ್ಲ. ಯಾಕೆಂದರೆ ಅವರಿಗೆ ತಮ್ಮ ಆಯ್ಕೆ ಉಂಟು ಮಾಡುವ ಅಪಾಯದ ಅರಿವು –ಮುನ್ಸೂಚನೆ ಇದ್ದೇ ಇರುತ್ತದೆ. ಎರಡು ಚುನಾವಣೆಯ ನಡುವಿನ ಅವಧಿಯಲ್ಲಿ ‘ಮತದಾರ ಪ್ರಭು’ ಅಸಹಾಯಕ. ಅದು ಅವನಿಗೆ ಗೊತ್ತಿರದ ಸಂಗತಿಯೇನಲ್ಲ. ಸಣ್ಣಪುಟ್ಟ ಬದಲಾವಣೆ- ಘಟನೆ-ಬೆಳವಣಿಗೆಗಳೂ ಸಂಕೇತ-ಸೂಚನೆ ನೀಡುತ್ತವೆ ಎನ್ನುವುದು ಒಂದು ಹಂತದ ಮಟ್ಟಿಗಿನ ತರ್ಕಕ್ಕೆ ಸರಿ. ತರ್ಕವು ಸತ್ಯದ ಸಮೀಪ ಹೋಗಬಹುದಾದ ದಾರಿ ಮಾತ್ರ. ತರ್ಕದಿಂದಲೇ ಸತ್ಯವನ್ನು ಅರಿಯಲು-ಪಡೆಯಲು ಸಾಧ್ಯವಿಲ್ಲ. ಹಾಗಾದರೆ ಅದು ಹೇಗೆ ಸಿಗುತ್ತದೆ? ಅದನ್ನು ಪಡೆಯುವ ಕ್ರಮ ಏನು? ಅದು ವರ್ತಮಾನವನ್ನು ಹಿಡಿಯುವ ಹಂಬಲದ ಹಾಗೆ. ಸಿಕ್ಕಿತು ಎಂದು ಅನ್ನಿಸುವ ವೇಳೆಗಾಗಲೇ ಅದು ಬದಲಾಗಿ ಬಿಟ್ಟಿರುತ್ತದೆ. ಅದಿರಲಿ.
ಒಮ್ಮೆ ಓಟು ಕೊಟ್ಟ ಮೇಲೆ ಮತದಾರ ಮೂಕ ಪ್ರೇಕ್ಷಕ ಆಗುತ್ತಾನೆ. ಐದು ವರ್ಷದ ವರೆಗೆ ಬರಿ ನೋಡುವುದಷ್ಟೇ ಅವನ ಕೆಲಸ. ಸಾಕ್ಷಿ ಆಗಿ ಉಳಿಯುತ್ತಾನೆ. ಭಾಗಿ ಆಗಲು ಅವಕಾಶವೇ ಇಲ್ಲದ ಮೇಲೆ ಸಾಕ್ಷಿ ಮಾತ್ರ ಆಗಿ ಉಳಿಯುವ ಅನಿವಾರ್ಯ ಸ್ಥಿತಿ ಅವನ ಮುಂದಿರುತ್ತದೆ. ಮಧ್ಯೆ ಬರುವ ರಾಜ್ಯಗಳ ಚುನಾವಣೆಗಳು ಆಯಾಭಾಗದ ಮನಸ್ಥಿತಿ ಮಾತ್ರ ಆಗಿರುತ್ತದೆ. ಇಡೀ ಇಂಡಿಯಾದ ಆಯ್ಕೆ ಆಗಿರುವುದಿಲ್ಲ. ಮತದಾರನಿಗೆ ತಾನು ಆಯ್ಕೆ ಮಾಡುತ್ತಿರುವುದು ‘ಲೋಕಸಭೆ’ ಮತ್ತು  ‘ವಿಧಾನಸಭೆ’ಗೆ ಎಂಬುದರ ಸ್ಪಷ್ಟ ಅರಿವು ಇದ್ದೇ ಇದೆ. ಇರುತ್ತದೆ. ಅದಕ್ಕಾಗಿ ಭಾರತೀಯ ಮತದಾರರನ್ನು ಅನಕ್ಷರಸ್ಥ ಆದರೆ ಪ್ರಜ್ಞಾವಂತ ಎಂದು ಗುರುತಿಸುವುದು. ಕೋಟೆಯನ್ನು ಪ್ರಬಲಗೊಳಿಸಲು ಬಿಟ್ಟು ನೋಡುತ್ತ ಕುಳಿತು ಕೊಳ್ಳುವ ಮತದಾರನಿಗೆ ಕೋಟೆ ಕಟ್ಟಿದವ ತನ್ನ ಮುಂದೆ ಬಂದು ನಿಲ್ಲುತ್ತಾನೆ ಎಂದು ಗೊತ್ತಿದೆ. ಅದಕ್ಕಾಗಿ ಕೋಟೆಯ ನಿರ್ಮಾಣ ಕಾರ್ಯ ಎಷ್ಟೇ ಪ್ರಬಲವಾಗಿ  ನಡೆದರೂ ನೋಡಿಯೇ ಇಲ್ಲದಂತೆ ಸುಮ್ಮನಿರುತ್ತಾನೆ. ನಿರ್ಣಾಯಕ ಹಂತ ಬರುವವರೆಗೆ ಕಾಯುವ ಆಟ ರಾಜಕಾರಣಿಗಳಿಗಿಂತ ಮತದಾರನಿಗೆ ಚೆನ್ನಾಗಿ ಗೊತ್ತಿದೆ. ಭಾರತದಲ್ಲಿ ಅಂತಹ ಹಲವು ನಿರ್ಣಯಗಳನ್ನು ತೋರಿಸಿದ್ದನ್ನು ನಾವು ನೋಡಿದ್ದೇವೆ. ನೋಡುತ್ತಿದ್ದೇವೆ.
ವಿಧಾನಸಭಾ ಚುನಾವಣೆಗಳು ಸಂಕೇತ- ಸೂಚನೆ ನೀಡುತ್ತವೆ. ಕರ್ನಾಟಕದ ಚುನಾವಣೆಯೂ 2019ಕ್ಕೆ ಸಂಬಂಧಿಸಿದಂತೆ ಸೂಚನೆ ನೀಡಿದೆ. ಕೇಂದ್ರದಲ್ಲಿರುವ ಸರ್ಕಾರದ ಬಗ್ಗೆ ಅಸಮಾಧಾನ ಇದ್ದರೂ ಅದು ವಿರೋಧಿ ಮತವಾಗಿ ಪರಿವರ್ತನೆ ಆಗಿಲ್ಲ. ಹಾಗೆಯೇ ಆಗದೇ ಇರುವುದಕ್ಕೆ ತನಗಾದ- ಆಗುತ್ತಿರುವ ತೊಂದರೆಗಿಂತ ಮುಸ್ಲಿಮರು ಮತ್ತು ದಲಿತರ ವಿರೋಧಿ ನಿಲುವೇ ಕಾರಣ. ಅಸ್ಪೃಶ್ಯರನ್ನು ಸಮಾನವಾಗಿ ನೋಡಬಯಸದ ಮನಸ್ಥಿತಿ ಹಾಗೂ ಮುಸ್ಲಿಮರ ಬಗ್ಗೆ ಇರುವ ಅನೂಹ್ಯ ಭೀತಿ ಇವೆರಡನ್ನೂ ಹುಟ್ಟಿಸುವಲ್ಲಿ ಮತ್ತು ಅದು ತಳಹಂತದ ವರೆಗೂ ಹರಡುವಂತೆ ಮಾಡುವಲ್ಲಿ ಕೇಂದ್ರದ ಆಡಳಿತಾರೂಢ ಪಕ್ಷ ಯಶಸ್ವಿಯಾಗಿದೆ. ಅದು ಕೇಂದ್ರದಲ್ಲಿ ರಾಜಕೀಯ ಪಕ್ಷದ ‘ಸಾಧನೆ’ ಎನ್ನುವುದಕ್ಕಿಂತ ಹೆಚ್ಚಾಗಿ ಅದನ್ನು ರೂಪಿಸುತ್ತಿರುವ ‘ಚಿಂತನಾ ಕ್ರಮ’ದ ‘ಗೆಲುವು’ ಎನ್ನುವುದರಲ್ಲಿ ಎರಡು ಮಾತಿಲ್ಲ. ಕರ್ನಾಟಕದ ವಿಧಾನಸಭಾ ಚುನಾವಣೆಯ ಫಲಿತಾಂಶವು ಬಹುಜನರ ಪರವಾಗಿ ರಾಜಕಾರಣ ಮಾಡುವುದರ ಅಪಾಯದ ಮುನ್ಸೂಚನೆ ನೀಡಿದೆ. ಹಾಗೆ ಅವರನ್ನು ಬಿಟ್ಟುಕೊಡದೇ ಪ್ರಬಲರ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಬಗ್ಗೆ ಕಂಡುಕೊಳ್ಳಬೇಕಾದ ದಾರಿಯ ಬಗ್ಗೆ ಯೋಚಿಸಲು ವಿರೊಧಪಕ್ಷಗಳಿಗೆ ಇದು ಸಕಾಲ.
ವಾಸ್ತವಾಗಿ ವಿಧಾನಸಭೆಯ ಚುನಾವಣೆಗೂ ಲೋಕಸಭಾ ಚುನಾವಣೆಗೂ ನೇರ ಸಂಬಂಧ ಇಲ್ಲ. ವಿಧಾನಸಭಾ ಚುನಾವಣೆಗಳು ಮತ್ತು ಅದರ ಫಲಿತಾಂಶಗಳು ಕೇಂದ್ರದಲ್ಲಿರುವ ಸರ್ಕಾರದ-ಪಕ್ಷದ ಆತ್ಮವಿಶ್ವಾಸ ಮತ್ತು ಓಟದ ವೇಗ ಹೆಚ್ಚಿಸುವ- ಕಡಿಮೆ ಮಾಡಲು ಕಾರಣವಾಗುತ್ತವೆ. ಹಾಗಂತ ವಿಧಾನಸಭಾ ಚುನಾವಣೆಗಳ ಫಲಿತಾಂಶವೇ ಲೋಕಸಭೆಯಲ್ಲಿ ಪ್ರತಿಧ್ವನಿಸುತ್ತದೆ ಅಥವಾ ಎಂದು ಭಾವಿಸಬೇಕಿಲ್ಲ. ವಿಧಾನಸಭಾ ಚುನಾವಣೆಗಳಲ್ಲಿ ತೋರಿದ ನಿಲುವಿಗೆ ತೀರಾ ವ್ಯತಿರಿಕ್ತವಾದ ನಿಲುವು ತೋರಿಸಿದ ನೂರಾರು ಉದಾಹರಣೆಗಳು ನಮ್ಮ ಮುಂದಿವೆ. ಅಧಿಕಾರದಲ್ಲಿ ಇರುವವರ ಆತ್ಮವಿಶ್ವಾಸ  ಹೆಚ್ಚುವಂತೆ ಮಾಡುವುದು ಕೂಡ ಮತದಾರ ತೋರಿಸುವ ‘ಜಾಣ ನಡೆ’ ಎಂದು ವ್ಯಾಖ್ಯಾನಿಸಬೇಕಾಗುತ್ತದೆ.
2014ರ ಲೋಕಸಭಾ ಚುನಾವಣೆಯ ನಂತರ ದೆಹಲಿಯಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತದಾದದ್ದು ಬಿಟ್ಟರೆ ಉಳಿದಂತೆ ಎಲ್ಲ ಕಡೆಗಳಲ್ಲಿಯೂ ‘ಪ್ರಭುತ್ವ’ ತನ್ನ ಹಸ್ತ ಚಾಚುವಲ್ಲಿ ಯಶ ಕಂಡಂತೆ ಭಾಸವಾಗುತ್ತದೆ. ಬಿಹಾರದ ಮತದಾರ ನೀಡಿದ ಫಲಿತಾಂಶವೂ ಆಡಳಿತಾರೂಢರ ಪರವಾಗುವಂತೆ ಮಾಡಿದ್ದು ‘ಮುತ್ಸದ್ದಿ’ ರಾಜಕಾರಣಿಯೇ. ಉತ್ತರ ಪ್ರದೇಶದಲ್ಲಿ ಕೋಮುಭಾವನೆ ಕೆರಳಿಸುವ ಮೂಲಕ ವಿರೋಧಿಗಳನ್ನು ‘ಅಸಹಾಯಕ’ ಮಾಡುವಲ್ಲಿ ಕೇಂದ್ರ ಯಶಸ್ವಿಯಾದಂತೆ ಭಾಸವಾಗುತ್ತಿದೆ. ಪಂಜಾಬ, ಗೋವಾ, ಅರುಣಾಚಲ ಪ್ರದೇಶ, ಸಿಕ್ಕಿಂಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪಕ್ಷದ ವಿರುದ್ಧ ಮತ ಚಲಾವಣೆಯಾದರೂ ‘ತಂತ್ರ’ದಿಂದ ಅಧಿಕಾರಕ್ಕೆ ಅನುಭವಿಸುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದ ಚುನಾವಣಾ ಫಲಿತಾಂಶವು ಕೂಡ ಮೇಲ್ನೋಟಕ್ಕೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪಕ್ಷದ ಪರವಾದ ನಿಲುವು ಎಂಬಂತೆ ಭಾಸವಾಗುತ್ತದೆ. ಕೇಂದ್ರದ ನಾಯಕರ ಆರ್ಭಟ- ತೋರಿದ ಆಸಕ್ತಿ ಹಾಗೆ ಅನ್ನಿಸುವಂತೆ ಮಾಡಿದೆ. ಲೋಕಸಭಾ ಚುನಾವಣೆಗೂ ಮುನ್ನ ನಡೆಯಲಿರುವ ಮಧ್ಯಪ್ರದೇಶ ಮತ್ತು ರಾಜಸ್ತಾನ ಚುನಾವಣೆಗಳು ಕೂಡ ನೀಡುವ ‘ಸಂಕೇತ’ವನ್ನೂ ಗಮನಿಸಬೇಕು. ಆದರೆ, ಸಂಕೇತಗಳೇ ಸತ್ಯವಾಗಿ ಪರಿವರ್ತನೆ ಆಗುತ್ತವೆ ಎಂದು ಭಾವಿಸಬೇಕಿಲ್ಲ. ತೋರುದೀಪ ಮಾತ್ರ ಗುರಿಯಲ್ಲ.
ರಾಜ್ಯಗಳ ದಂಡಯಾತ್ರೆಯಲ್ಲಿ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಗೆ ಅಧಿಕಾರ ಸಿಗದಂತೆ ಮಾಡುವ ಪ್ರಯತ್ನಗಳು ತೀರಾ ವೇಗವಾಗಿ ನಡೆಯುತ್ತಿವೆ. ಅದು ಬಹುತೇಕ ಸಫಲವಾಗುವ ಸಾಧ್ಯತೆಗಳೇ ಹೆಚ್ಚು. ವಿಧಾನಸಭೆ ಚುನಾವಣೆಗಳ ಫಲಿತಾಂಶಗಳ ಆಧಾರದ ಮೇಲೆ ‘ಭಾರತ’ ನಿರ್ಧರಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮುಂದೆ ನಿರ್ಣಾಯಕ ಗಳಿಗೆಯಲ್ಲಿ ‘ಮಾರಿಹಬ್ಬ’ ಮಾಡುವುದಕ್ಕಾಗಿಯೇ ಗುಟ್ಟು ಬಿಟ್ಟುಕೊಡದೆ ಕಾಯುತ್ತಿರುತ್ತಾನೆ ಎಂಬುದು ಸುಳ್ಳೇನಲ್ಲ. ಸಣ್ಣಪುಟ್ಟ ಸಂಗತಿಗಳಿಗೆ ಪ್ರತಿಕ್ರಿಯೆ ನೀಡಿ ಕೈ ಸುಟ್ಟುಕೊಳ್ಳಲು ಮತದಾರರು ಬಯಸುವುದಿಲ್ಲ. ನಿರ್ಣಾಯಕ ಘಟ್ಟಕ್ಕಾಗಿ ಕಾಯುತ್ತಾರೆ. 2019 ಅಂತಹ ‘ಕಾಯುವಿಕೆ’ಗೆ ಅಂತ್ಯ ಹಾಡಲಿದೆ. ಅದಕ್ಕಿಂತ ಮೊದಲಿನವುಗಳೆಲ್ಲ ಪ್ರಕ್ರಿಯೆ ಮಾತ್ರ.
2018 May 16


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಎಸ್.ಎಂ. ಪಂಡಿತ್