ರಾಚಪ್ಪನೆಂಬ ಗಿಟಾರ್ ಮಾಂತ್ರಿಕ
'ಗಿಟಾರ್ ರಾಚಪ್ಪ' ಬದುಕಿರುವಾಗಲೇ ದಂತಕತೆಯಾಗಿದ್ದ. ಅವನಿಲ್ಲದೆ ನಾಲ್ಕು ವರ್ಷಗಳೇ ಕಳೆದು ಹೋಗಿವೆ. ಆಗಾಗ ಕೆಲವರಿಗೆ ಮೆಲುಕು ಹಾಕುವುದಕ್ಕೆ ಮಾತ್ರ ಜೀವಂತವಾಗಿದ್ದಾನೆ. ನಾನು ಹೇಳುತ್ತಿರುವುದು ಯಾರೋ ಅನಾಮಿಕ ಸಂಗೀತಗಾರನ ಬಗ್ಗೆ ಅಲ್ಲ.
ವಿಜಾಪುರ, ಗುಲ್ಬರ್ಗ, ಬೀದರ್ ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯನಾಗಿದ್ದ ಆಲಗೂರ ರಾಚಪ್ಪ ಶಾಸ್ತ್ರೀಯ ಸಂಗೀತದ ವೇದಿಕೆಗಳಲ್ಲಿ ಎಂತಹ ಗಾಯಕ/ವಾದಕನ ಜೊತೆಗಾದರೂ ಸವಾಲು ಹಾಕಬಲ್ಲ ಸಾಮಥ್ರ್ಯ ಹೊಂದಿದವನಾಗಿದ್ದ. ಶಾಸ್ತ್ರೀಯ ಸಂಗೀತಗಾರರು ಹೊಟ್ಟೆಕಿಚ್ಚು ಪಡುವಷ್ಟು ಜನಪ್ರಿಯನಾಗಿದ್ದ ರಾಚಪ್ಪ ಆಶ್ಚರ್ಯಕರ ರೀತಿಯಲ್ಲಿ ಎಲ್ಲಿಯೂ ಸಲ್ಲದೆ ಹೋದ.
ರಾಚಪ್ಪ ಮತ್ತು ಅವನ ಸಂಗೀತದ ಬಗ್ಗೆ ಕಥೆಗಳನ್ನೇ ಕೇಳಿದ್ದ ನನಗೆ ಸಹಜವಾಗಿ ಒಮ್ಮೆಯಾದರೂ ಅವನನ್ನು ನೋಡಬೇಕು ಎಂಬ ಆಸೆ ಮೂಡಿತ್ತು. ಅವನ ಬಗ್ಗೆ ಇದ್ದ ಕಥೆಗಳನ್ನು ನಂತರ ವಿವರಿಸುತ್ತೇನೆ. ಮೊದಲ ಬಾರಿಗೆ ರಾಚಪ್ಪನನ್ನು ನೋಡಿದ್ದು ನನಗೆ ಈಗಲೂ ಚೆನ್ನಾಗಿ ನೆನಪಿದೆ. ಸರಿಯಾಗಿ ಹತ್ತು ವರ್ಷಗಳ ಹಿಂದೆ ಸುರಪುರ ತಾಲ್ಲೂಕಿನ ಕೆಂಭಾವಿ ಗ್ರಾಮದಲ್ಲಿ ಒಂದು ಸನ್ಮಾನ ಸಮಾರಂಭದಲ್ಲಿ ರಾಚಪ್ಪ ಸಂಗೀತ ನೀಡಬೇಕಿತ್ತು. ಕಾರ್ಯಕ್ರಮ ಆರಂಭವಾಗಲು ಇನ್ನೇನು ಅರ್ಧ ಗಂಟೆ ಇದೆ ಎನ್ನುವವರೆಗೂ ರಾಚಪ್ಪ ನಾಪತ್ತೆಯಾಗಿದ್ದ. ಎಲ್ಲರಿಗೂ ರಾಚಪ್ಪ ಎಲ್ಲಿ? ಎಂಬ ಪ್ರಶ್ನೆ ಕಾಡುತ್ತಿತ್ತು. ಆದರೆ, ಅವನ ಬಗ್ಗೆ ಗೊತ್ತಿದ್ದವರಿಗೆ ಅದೇನು ಅಂತಹ ಅಚ್ಚರಿಯ ಸಂಗತಿ ಆಗಿರಲಿಲ್ಲ. ಕೊನೆಯ ಗಳಿಗೆಯಲ್ಲಿ ಏನೋ ತೊಂದರೆಯಾಗಿ ತಪ್ಪಿಸುವುದು ಅವನಿಗೆ ಹೊಸದೇನಲ್ಲ. ಎಷ್ಟೋ ಬಾರಿ ಬಸ್ಚಾಜರ್್ ನೀಡಲು ಹಣವಿಲ್ಲದೇ ಕಾರ್ಯಕ್ರಮಕ್ಕೆ ಹೋಗಲಾರದ್ದೂ ಇದೆ. ಯಾಕೋ ರಾಚಪ್ಪ ಮೊನ್ನಿ ಕಾರ್ಯಕ್ರಮಕ್ಕ ಬರಲಿಲ್ಲ ಅಂತ ಕೇಳಿದ್ರ. ಮುಗಳ್ನಗುತ್ತ 'ಬರಲಿಕ್ಕ ರೊಕ್ಕ ಇರಲಿಲ್ರಿ' ಅಂತಿದ್ದ. 'ಖೋಡಿ ರೊಕ್ಕ ಇಲ್ಲ ಅಂತ ಮೊದಲ ಹೇಳಿದ್ರ ಕೊಡ್ತಿದ್ದಿವಲ್ಲ, ಹಂಗ್ಯಾಕ ಮಾಡಿದಿ' ಎಂದು ಬೈದರೂ ಅದು 'ನನಗೆ ಅಲ್ಲ' ಎಂಬಂತೆ ನಿರುಮ್ಮಳವಾಗಿರುತ್ತಿದ್ದ. ಅವತ್ತು ಕೆಂಭಾವಿ ಕಾರ್ಯಕ್ರಮಕ್ಕೆ ಕೂಡ ರಾಚಪ್ಪ ಬರಲಿಕ್ಕಿಲ್ಲ ಎಂದುಕೊಂಡ ಆಯೋಜಕರು 'ಖೋಡಿ ಎಷ್ಟು ಹೇಳಿದರೂ ತನಗ ತಿಳಿದಂಗ ಮಾಡ್ತದ. ಕಡೀ ಗಳಿಗ್ಯಾಗ ಕೈ ಕೊಡ್ತದ' ಎಂದು ಗೊಣಗಲು ಆರಂಭಿಸಿದ್ದರು. ನಾನು ಮತ್ತು ನನ್ನ ಅಣ್ಣ ಸೇರಿದಂತೆ ಕೆಲವರಿಗೆ ಅಂದು ರಾಚಪ್ಪ ಸ್ಟಾರ್ ಅಟ್ರ್ಯಾಕ್ಷನ್ ಆಗಿದ್ದ. 'ರಾಚಪ್ಪ ಬಂದಾನೇನ್ರಿ' ಅಂತ ಕೇಳಿದರೆ 'ಬಂದಿಲ್ರಿ, ಬರಬಹುದು' ಎಂದು ಅಸಹನೆಯಿಂದಲೇ ಉತ್ತರಿಸಿದರು. ರಾಚಪ್ಪನ ಶಿಷ್ಯ ರಮೇಶ್ 'ಗುರುಗೋಳು ಬರ್ತಿನಿ ಅಂದಾರ, ಬಂದೇ ಬರತಾರ. ಬಂದಿರಬಹುದು ಇಲ್ಲೇ ಎಲ್ಯಾರ ಅದಾರೇನ್ ನೋಡ್ರಿ' ಎಂದು ಹೇಳಿದರು. ಬಂದರ ನಮಗ ಗೊತ್ತಗುವುದಿಲ್ಲವೇ? ಆವಾಗನಿಂದ ಇಲ್ಲೇ ನಿಂತಿವಿ ಎಂಬ ಪ್ರತಿಕ್ರಿಯೆ ನೀಡಿದರು. ಕೊನೆಗೆ ಶಿಷ್ಯ ರಮೇಶನೇ ಮೂಲೆಯಲ್ಲಿ ಕುಳಿತಿದ್ದ ಗುರುವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ. 'ಅಲ್ಲಿ ಅದಾರ ನೋಡ್ರಿ' ಎಂದು ಹೇಳಿದ. ಇದ್ದಕ್ಕಿದ್ದಂತೆ ಕಾಣಿಸಿಕೊಂಡ ರಾಚಪ್ಪನನ್ನು ನೋಡುತ್ತಿದ್ದಂತೆಯೇ ಎಲ್ಲರ ಆತಂಕ ದೂರಾಯಿತು.
ಅದೊಂದು ನಾಲ್ಕುವರೆ ಅಡಿ ಎತ್ತರದ ವಾಮನ ಮೂತರ್ಿ. ರಾತ್ರಿಯ ಕತ್ತಲನ್ನೂ ನಾಚಿಸುವಷ್ಟು ಕಪ್ಪಾಗಿದ್ದ ವ್ಯಕ್ತಿಯ ತಲೆಗೂದಲು ಶ್ವೇತವರ್ಣಕ್ಕೆ ತಿರುಗಿದ್ದವು. ಮಾಸಿದ್ದ ಕಾಲರ್ನ ಶಟರ್್ ಮತ್ತು ತೇಪೆ ಹಾಕಿದ್ದ ಪ್ಯಾಂಟ್ ಹಾಕಿಕೊಂಡಿದ್ದ ರಾಚಪ್ಪನಿಗೆ ಆಗ 50ರ ಪ್ರಾಯ ಇರಬಹುದು. ನೋಡುತ್ತಿದ್ದಂತೆಯೇ ಅಂದರೆ ಮೊದಲ ನೋಟಕ್ಕೇ ತಿರಸ್ಕಾರಕ್ಕೆ ಕಾರಣವಾಗಬಹುದಾದ ರೂಪ ರಾಚಪ್ಪನದಾಗಿತ್ತು. ಕಥೆ ಕೇಳಿ ಕಟ್ಟಿಕೊಂಡಿದ್ದ ನನ್ನ ಕಲ್ಪನೆಯನ್ನು ಸುಳ್ಳಾಗಿಸುವುದಕ್ಕಾಗಿಯೇ ಅವನು ವೇಷಧರಿಸಿ ಬಂದಿರಬಹುದೇ ಎಂಬ ಯೋಚನೆ ಬಂತು. ಅದೇ ಕ್ಷಣಕ್ಕೆ ಕೆಲವೇ ದಿನಗಳ ಹಿಂದೆ ಓದಿದ್ದ ಜನ್ನನ ಯಶೋಧರ ಚರಿತೆಯ ಅಷ್ಟಾವಂಕನ ನೆನಪಾಗದೇ ಇರಲಿಲ್ಲ. ಧಾರವಾಡದ ಶಾಸ್ತ್ರೀಯ ಸಂಗೀತದ ಬೃಹತ್ ವೇದಿಕೆಗಳಲ್ಲಿ ಗರಿಗರಿಯಾದ ಮಿಂಚುವ, ಹೊಳೆಯುವ ಬಟ್ಟೆ ಧರಿಸಿದ್ದ ರಾಷ್ಟ್ರೀಯ ಖ್ಯಾತಿಯ ಕಲಾವಿದರನ್ನು ನೋಡಿದ್ದ ನನಗೆ ರಾಚಪ್ಪನನ್ನು ಸಂಗೀತಗಾರ ಎಂದು ಒಪ್ಪಿಕೊಳ್ಳಲು ಮನಸ್ಸಾಗಲಿಲ್ಲ. ರಾಚಪ್ಪನ ಸಂಗೀತದ ಬಗ್ಗೆ ಬಹಳಷ್ಟು ಆಸೆ ಇಟ್ಟುಕೊಂಡಿದ್ದ ನನಗೆ ಮೊದಲ ನೋಟದಲ್ಲಿಯೇ ನಿರಾಸೆ ಉಂಟಾಯಿತು. ನೋಡುವುದಕ್ಕೆ ಥೇಟ್ ಕೋತಿಯ ಕೈಗಳ ಹಾಗೆ ಕಾಣುತ್ತಿದ್ದ ಪುಟ್ಟ ಕೈಗಳಲ್ಲಿ ಮಾಂತ್ರಿಕ ಶಕ್ತಿ ಅಡಗಿರಬಹುದು ಎಂದು ಒಪ್ಪಿಕೊಳ್ಳಲು ಮನಸ್ಸು ಹಿಂದೇಟು ಹಾಕಿತು.
ಅದೇ ಹೊತ್ತಿಗೆ ಸ್ವಾರಸ್ಯಕರ ಪ್ರಸಂಗ ನಡೆಯಿತು. ರಾಚಪ್ಪನ ಕಟ್ಟಾ ಅಭಿಮಾನಿಯಾಗಿದ್ದ ಕಾರ್ಯಕ್ರಮದ ಆಯೋಜಕ ಗುರು 'ಇಲ್ಯಾಕೆ ಕುಳಿತಿಯೋ ರಾಚಪ್ಪ. ನಿನ್ ಸಲುವ್ಯಾಗಿ ಎಷ್ಟು ಹುಡುಕ್ಯಾಡಿದ್ವಿ' ಅಂತ ಕೇಳಿದರೆ ಏನೂ ಆಗಿಲ್ಲ ಎಂಬಂತೆ ಪೆಕರು ಪೆಕರಾಗಿ ನಗುತ್ತ 'ಫಂಕ್ಷನ್ ಇನ್ನಾ ತಡ ಐತೆಲ್ರಿ ಅದಕ್ಕ ಇಲ್ಲೇ ಕುಳಿತಿದ್ದೆ' ಎಂದು ಉತ್ತರಿಸಿದ. 'ಇರಲಿ ಬಿಡು ಎಲ್ಲೈತಿ ನಿನ್ನ ಗಿಟಾರ್' ಅಂತ ಕೇಳಿದ್ರ ಏನೂ ಗೊತ್ತಿಲ್ಲದ ಅಮಾಯಕನಂತೆ 'ಬಾ ಅಂದಿದ್ರಿ ಬಂದಿನ್ರಿ. ಗಿಟಾರ್ ತಗೊಂಬಾ ಅಂತ ಹೇಳಿಲ್ರಿ' ಎಂದು ಅಸಹಾಯಕ ನಗೆ ನಕ್ಕ. ಕಾರ್ಯಕ್ರಮಕ್ಕೆ ಬಂದು ಒಂದು ಗಂಟೆ ಸುಮ್ಮನೆ ಕುಳಿತು ಶುರುವಾಗಲು ಹತ್ತು ನಿಮಿಷ ಇರುವಾಗ 'ಗಿಟಾರ್ ತಂದಿಲ್ಲ' ಅಂತ ಹೇಳಿದರೆ ಆಯೋಜಕರ ಸ್ಥಿತಿ ಏನಾಗಿರಬೇಡ. 'ಕಾರ್ಯಕ್ರಮ ಐತಿ ಬಾ ಅಂತ ಬಾ ಅಂತ ಹೇಳಿತ್ತಲ್ಲ' ಅಂದರೆ 'ಹೌದ್ರಿ. ಆದರ ಗಿಟಾರ್ ಬಗ್ಗೆ ಏನೂ ಅಂದಿದಿಲ್ರಿ' ಎಂದು ತನ್ನದೇ ರಾಗ ಮುಂದುವರೆಸಿದ. ಅವನ ಜೊತೆ ಚಚರ್ೆ- ವಾದ ಮಾಡುವುದರಲ್ಲಿ ಅರ್ಥ ಇಲ್ಲ ಮತ್ತು ಅದಕ್ಕೆ ಸಮಯಾವಕಾಶವೂ ಇಲ್ಲ ಎಂದು ಅರಿತ ಗುರು 'ಈಗೇನು ಮಾಡೋದು?' ಅಂತ ಪ್ರಶ್ನಿಸಿದರೆ. 'ಇಲ್ಲೇ ಶರಣರ ಮನ್ಯಾಗ ಗಿಟಾರ್ ಐತ್ರಿ. ಅದನ್ನೇ ತರಿಸಿದ್ರಾತು' ಎಂದು ಯಾವುದೇ ಟೆನ್ಶನ್ ಮಾಡಿಕೊಳ್ಳದೇ ಹೇಳಿದ. ರಾಚಪ್ಪ ಹೇಳಿದ ಶರಣರ ಮನೆ ಕೆಂಭಾವಿಯಿಂದ ಆರು ಕಿ.ಮೀ. ದೂರದಲ್ಲಿದ್ದ ಹಳ್ಳಿಯೊಂದರಲ್ಲಿ ಇತ್ತು. ಏನಾದರೂ ವ್ಯವಸ್ಥೆ ಮಾಡಿ ಅದನ್ನು ತರಿಸುವುದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಗೊಣಗುತ್ತ, ಬೈಯುತ್ತ ವೆಹಿಕಲ್ ಕಳಿಸಿ ಗಿಟಾರ್ ತರಿಸಿದ್ದಾಯಿತು.
ಗಿಟಾರ್ ಬಗ್ಗೆ ನನಗಿದ್ದ ಕಲ್ಪನೆಯನ್ನೇ ಸುಳ್ಳು ಮಾಡುವಂತಿತ್ತು ಅದು. ನಾನು ಮಾತ್ರ ಅಲ್ಲ ಯಾರು ನೋಡಿದರೂ ಅದನ್ನು ಗಿಟಾರ್ ಎಂದು ಕರೆಯುವುದು ಸಾಧ್ಯವಿರಲಿಲ್ಲ. ಸುಮಾರು ಒಂದೂವರೆ ಅಡಿ ಉದ್ದ ಆರೆಂಟು ಇಂಚು ಅಗಲದ ಕಟ್ಟಿಗೆಯ ನಡುವೆ ನಾಲ್ಕಾರು ಮೊಳೆ ಬಡಿದು ತಂತಿಗಳನ್ನು ಕಟ್ಟಲಾಗಿತ್ತು. ಅದನ್ನು ಮುಟ್ಟಿ ಸಂಗೀತ ಹೊರಡಿಸುವುದಿರಲಿ ನೋಡುವುದಕ್ಕೆ ಕೂಡ ಗಿಟಾರ್ನ ಯಾವುದೇ ಸ್ವರೂಪ ಅದಕ್ಕೆ ಇರಲಿಲ್ಲ. ತಾನೇ ಮಾಡಿದ್ದ ಆ ಸಂಗೀತ ಯಂತ್ರಕ್ಕೆ ರಾಚಪ್ಪ ಗಿಟಾರ್ ಎಂದು ಹೆಸರಿಟ್ಟಿದ್ದ. ಅದು ಗಿಟಾರ್ನಂತೆ ಕಾರ್ಯನಿರ್ವಹಿಸುವಂತೆ ರಾಚಪ್ಪ ಆದೇಶ ಮಾಡಿದ್ದರಿಂದ ಅದು ಅವನ ಮಾತು ಕೇಳುತ್ತಿತ್ತು. ರಾಚಪ್ಪನ ಆದೇಶ ಪಾಲಿಸುವ ಯಂತ್ರದಿಂದ ಥೇಟ್ ಗಿಟಾರ್ನ ಹಾಗೆ ಸ್ವರಗಳೂ ಹೊಮ್ಮುತ್ತಿದ್ದರಿಂದ ಜನ ಕೂಡ ಅದು ಗಿಟಾರ್ ಅಲ್ಲ ಎಂದು ವಾದಿಸುವ ಸಾಹಸಕ್ಕೆ ಹೋಗಿರಲಿಲ್ಲ. ಜನರಿಗೆ ಸಂಗೀತ ಬೇಕಾಗಿತ್ತೇ ಹೊರತು ನೋಡಲು ಸುಂದರವಾದ ಗಿಟಾರ್ ಆಗಲಿ, ಅತಿ ಸುಂದರನಾದ ದೇವಮಾನವನಂತಹ ಕಲಾವಿದನಾಗಲಿ ಅಲ್ಲ.
ರಾಚಪ್ಪನ ಹುಡುಕಾಡುವುದು ಮತ್ತು ಗಿಟಾರ್ ತರಿಸಲು ಪಟ್ಟ ಶ್ರಮಗಳಿಂದಾಗಿ ಒಂದೂವರೆ ಗಂಟೆ ತಡವಾಗಿ ಕಾರ್ಯಕ್ರಮ ಆರಂಭವಾಯಿತು. ಅದು ಹಳ್ಳಿ ಆಗಿದ್ದರಿಂದ ಜನ ತಾಳ್ಮೆಯಿಂದ, ಪ್ರೀತಿಯಿಂದ ಕಾದು ಕುಳಿತಿದ್ದರು. ಬೇಸಿಗೆಯ ದಿನಗಳಾಗಿದ್ದರಿಂದ ಜನ ಉಸ್ ಉಸಿರು ಬಿಡುತ್ತ ಶಟರ್್ನ ಗುಂಡಿಗಳನ್ನು ಬಿಚ್ಚಿ, ಕೈಯಲ್ಲಿದ್ದ ಕಚರ್ಿಫಿನಿಂದ ಗಾಳಿ ಹಾಕಿಕೊಳ್ಳುತ್ತಿದ್ದರು. ಸೆಕೆಯಿಂದ ಬಸವಳಿದಿದ್ದ ಜನರಿಗೆ ರಾಚಪ್ಪನ ಸಂಗೀತ ಅಮೃತಸಿಂಚನ ಮಾಡಿತು. ಗಿಟಾರ್ ಮೇಲೆ ಕೈಯಿಟ್ಟು ಸ್ವರ ಹೊರಡಿಸಲು ರಾಚಪ್ಪ ಆರಂಭಿಸುತ್ತಿದ್ದಂತೆಯೇ ಇಡೀ ಸಭಾಂಗಣದಲ್ಲಿ ಎಲ್ಲ ಚಟುವಟಿಕೆಗಳು ನಿಂತವು. ಅಲ್ಲಿ ರಾಚಪ್ಪನ ಗಿಟಾರ್ ಸಂಗೀತ ಮತ್ತು ಅದರ ಪ್ರತಿಧ್ವನಿ ಆಗಾಗ ಚಪ್ಪಾಳೆ ಮಾತ್ರ ಕೇಳಿಸುತ್ತಿದ್ದವು.
ಸರಿಯಾಗಿ ನಾಲ್ಕು ಗಂಟೆ ಕಾಲ ಗಿಟಾರ್ ನುಡಿಸಿದ ರಾಚಪ್ಪ ಕಾಲವನ್ನು ಹಿಡಿದು ನಿಲ್ಲಿಸಿದ್ದ. 'ಝನಕ್ ಝನಕ್ ಪಾಯಲ್ ಭಾಜೆ.....' 'ಕರೆದರೂ ಕೇಳದೆ....' ಮುಂತಾದ ಚಿತ್ರಗೀತೆಗಳನ್ನು ಕೇಳುಗರ ಆಪೇಕ್ಷೆಯ ಮೇರೆಗೆ ನುಡಿಸಿದ ರಾಚಪ್ಪ ತನ್ನ ಸಂಗೀತ ಪ್ರಸ್ತುತಿಯ ಬಗ್ಗೆ ಇದ್ದ ಕಥೆಗಳನ್ನು ನಿಜವಾಗಿಸುತ್ತ ಹೊರಟಿದ್ದ. ನಾಲ್ಕಾರು ತಂತಿಗಳ ಮೇಲೆ ಕೈಯಲ್ಲಿದ್ದ ಕಬ್ಬಿಣದ ತುಂಡೊಂದರಿಂದ ಸ್ಪಶರ್ಿಸುತ್ತ ಮಾಂತ್ರಿಕ ಲೋಕವನ್ನೇ ಸೃಷ್ಟಿಸಿದ್ದ. ಒಂದು ಹಂತದಲ್ಲಿ 'ಹಾಡೆಲ್ಲ ಬ್ಯಾಡ್ರಿ' ಅಂತ ಹೇಳಿ 'ಈಗ ನೋಡ್ರಿ' ಎಂದು ಗಮನ ಸೆಳೆದ. ತಂತಿಗಳನ್ನು ಮುಟ್ಟುತ್ತ ಕುದುರೆಯ ಓಟ, ವಿಮಾನದ ಹಾರಾಟದ ಸದ್ದು, ರೈಲಿನ ಶಬ್ದಗಳನ್ನು ತನ್ನ ಗಿಟಾರ್ನಲ್ಲಿ ಹುಟ್ಟಿಸಿದ. ಅದುವರೆಗೂ ಸಂಗೀತದಲ್ಲಿ ಲೀನರಾಗಿ ತಲೆಯಾಡಿಸುತ್ತಿದ್ದ ಜನ ರಾಚಪ್ಪನ ತಂತ್ರವನ್ನು ಕಂಡು ಬೆರಗಾದರು. ಸಂಗೀತ ಮುಗಿಸಿದ ನಂತರ ಇದುವರೆಗೆ ಏನೂ ನಡೆದೇ ಇಲ್ಲವೆಂಬಂತೆ, ತನಗೂ ಸಂಗೀತಕ್ಕೂ ಸಂಬಂಧವೇ ಇಲ್ಲ ಎಂಬಂತೆ ಎದ್ದು ನಡೆದ. ಜನ ಅವನನ್ನು ನೋಡುತ್ತ, ಚಚರ್ಿಸುತ್ತ ನಿಂತಿದ್ದರು.
ಅಂದಹಾಗೆ ಈ ರಾಚಪ್ಪನನ್ನು ಜನ 'ಆಲಗೂರ ರಾಚಪ್ಪ' ಎಂದೂ ಕರೆಯುತ್ತಿದ್ದರು. ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ ಆಲಗೂರ ಎಂಬ ಊರಿದೆ. ರಾಚಪ್ಪನ ಮೂಲ ಊರು ಆಲಗೂರು ಆದರೂ ಅವ ಇರುತ್ತಿದ್ದದ್ದು ಬಸವನಬಾಗೇವಾಡಿ ತಾಲ್ಲೂಕಿನ ಇವಣಗಿ ಗ್ರಾಮದಲ್ಲಿ. ಕಾಲಲ್ಲಿ ನಾಯಿ ಗೆರೆ ಇರುವವರಂತೆ ಸದಾ ಊರೂರು ಸುತ್ತಾಡುತ್ತಿದ್ದ ರಾಚಪ್ಪನಿಗೆ ಹೇಳಿಕೊಳ್ಳುವದಕ್ಕೆ ಅಂತ ಒಂದೂರಿತ್ತು. ಅದು ಕೇವಲ ಲೌಕಿಕದ ಅಡ್ರೆಸ್ ಆಗಿತ್ತು. ರಾಚಪ್ಪ ಯಾವುದಾದರೂ ಊರಿಗೆ ಹೋದರೆ ಅಲ್ಲಿ ಸಂಗೀತದ ಮೂಲಕ ಗೆಳತಿಯರನ್ನಾಗಿ ಮಾಡಿಕೊಳ್ಳುವುದು ಸುಲಭವಾಗಿತ್ತು. ಹಾಗಾಗಿ ಒಂದೇ ಊರಲ್ಲಿ ಎರಡ್ಮೂರು ತಿಂಗಳು ಇದ್ದು ಮುಂದಿನೂರಿಗೆ 'ಹೊಸ ಬೇಟೆ'ಗೆ ಹೊರಟು ಬಿಡುತ್ತಿದ್ದ. ಅವನ ಸಂಗೀತಕ್ಕೆ ಮರುಳಾಗುತ್ತಿದ್ದ ಹೆಣ್ಣುಗಳ ಸಂಖ್ಯೆಗೆ ಕೊರತೆಯೇನೂ ಇರಲಿಲ್ಲ. ಅವನು ನಿಜವಾದ ಅರ್ಥದಲ್ಲಿ ಅಷ್ಟಾವಂಕನಂತೆ ವತರ್ಿಸುತ್ತಿದ್ದ. ಅಧಿಕೃತವಾಗಿಯೇ ಎರಡು ಮದುವೆಯಾಗಿದ್ದ ರಾಚಪ್ಪ ತನ್ನ ಮನೆಯಲ್ಲಿ ದಿನಗಳನ್ನು ಕಳೆದದ್ದು ಮತ್ತು ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಿದ್ದು ಬಹಳ ಕಡಿಮೆ. ಇದೆಲ್ಲ ಸಂಗತಿಗಳು ನಾನು ಅವರಿವರಿಂದ ಕೇಳಿದ್ದು.
ವೃತ್ತಿರಂಗಭೂಮಿ ಅಂತ ಕರೆಯಲಾಗುವ ಕಂಪೆನಿ ನಾಟಕಗಳಲ್ಲಿ ಸಂಗೀತವನ್ನು ನಾಯಕನಾಗಿಸಿದ್ದ. ಹಳ್ಳಿಗಳಲ್ಲಿ ಹುಡುಗರು ಕಲಿತು ಆಡುವ ನಾಟಕಗಳಿಗೂ ರಾಚಪ್ಪ ಸಂಗೀತ ನೀಡಿದ್ದಿದೆ. ರಾಚಪ್ಪನ ಗಿಟಾರ್ ಕೇಳುವುದಕ್ಕಾಗಿಯೇ ಜನ ನಾಟಕಕ್ಕೆ ಬಂದ ದಿನಗಳೂ ಇದ್ದವು. ಗಿಟಾರ್ನಲ್ಲಿಯೇ ಹಲವು ಚಮತ್ಕಾರಗಳನ್ನು ಮಾಡಿ ಜನರನ್ನು ಸೆಳೆಯುತ್ತಿದ್ದ ರಾಚಪ್ಪ ಸಂಗೀತದ ಮೂಲಕ ನಾಟಕ ಕಳೆಕಟ್ಟುವಂತೆ ಮಾಡುತ್ತಿದ್ದ ಹೊಟ್ಟೆ ಪಾಡಿಗಾಗಿ ನಾಟಕದಲ್ಲಿ ಕೆಲಸ ಮಾಡುವುದು, ಸಂಗೀತ ನೀಡುವುದು ರಾಚಪ್ಪನಿಗೆ ಅನಿವಾರ್ಯವಾಗಿತ್ತು. ಇದೆಲ್ಲ ಕೇವಲ 15ರಿಂದ 20 ವರ್ಷದ ಮಾತು.
'ಗಿಟಾರ್ ರಾಚಪ್ಪ' ಹೆಸರೇ ಸೂಚಿಸುವ ಹಾಗೆ ರಾಚಪ್ಪ ಗಿಟಾರ್ ನುಡಿಸುತ್ತಿದ್ದ. ಕೇವಲ ಗಿಟಾರ್ ಮಾತ್ರ ಅಲ್ಲ ಹಾಡುವುದರಲ್ಲಿ, ತಬಲಾ ಬಾರಿಸುವುದರಲ್ಲಿಯೂ ನಿಷ್ಣಾತನಾಗಿದ್ದ. ಅವ ತಬಲಾ ಮೇಲೆ ಕೈ ಇಟ್ಟರೆ ಕೇಳುಗ-ನೋಡುಗನನ್ನು ಮಂತ್ರಮುಗ್ಧನನ್ನಾಗಿಸುತ್ತಿದ್ದ. ರಾಚಪ್ಪನ ಕೈ ತಬಲಾ ಮೇಲೆ ಆಡುತ್ತಿದ್ದರೆ ಕಣ್ಣಿಗೆ ಏನೂ ಕಾಣಿಸುತ್ತಿರಲಿಲ್ಲ, ಬರೀ ಕೇಳಿಸುತ್ತಿತ್ತು. ರಾಚಪ್ಪ ತಬಲಾ ಕಲಾವಿದನಾಗಿ ಸಂಗೀತಕ್ಕೆ ಬಂದ. ಬಹಳ ಶ್ರಮ ಹಾಕಬೇಕಾಗುತ್ತದೆ ಎನ್ನುವ 'ಸೋಮಾರಿ'ತನದ ಕಾರಣದಿಂದ ತಬಲಾ ಕೈಬಿಟ್ಟ. ಅದು ಅವನೇ ಹೇಳುತ್ತಿದ್ದ ಕಾರಣವಾಗಿತ್ತಾದರೂ ನಿಜ ಸಂಗತಿ ಬೇರೆ ಏನೋ ಇದ್ದಿರಬಹುದು. ಅದು ರಾಚಪ್ಪನ ಜೊತೆಗೇ ಕಾಲನ ಮನೆ ಸೇರಿದೆ.
ಆಲಗೂರು ರಾಚಪ್ಪನಿಗೆ ಸಂಬಂಧಿಸಿದಂತೆ ಸುಮಾರು 25 ವರ್ಷಗಳ ಹಿಂದೆ ನಡೆದ ಘಟನೆಯೊಂದನ್ನು ನನ್ನ ತಂದೆ ಹೇಳಿದ್ದು ಇಲ್ಲಿದೆ.
ಹತ್ತಾರು ಜನ ಸೇರಿ ಗುಲ್ಬರ್ಗ ಜಿಲ್ಲೆಯ ಚಿತಾಪೂರ ತಾಲ್ಲೂಕಿನ ಸನ್ನತಿಯ ಚಂದ್ರಲಾಂಬ ದೇವಸ್ಥಾನಕ್ಕೆ ಹೋಗಿದ್ದರು. ಭೀಮಾನದಿಯ ತಟದಲ್ಲಿ ಇರುವ ಸುಂದರ ದೇಗುಲದಲ್ಲಿ ರಾತ್ರಿ ತಂಗಲು ನಿರ್ಧರಿಸಿದ್ದರು. ಅದೇ ದಿನ ಅಲ್ಲಿ ಸಂಗೀತ ಸಮಾರಾಧನೆಯೂ ಇತ್ತು. ಗಣ್ಯ ಕಲಾವಿದರ ಗಾಯನ, ಅಷ್ಟೇ ಪ್ರಮುಖರ ಸಾಥ್ ಕೂಡ ಇತ್ತು. ಅಕಸ್ಮಾತ್ ಅಲ್ಲಿಗೆ ಹೋದ ತಂಡದಲ್ಲಿದ್ದ ರಾಚಪ್ಪ ತಬಲಾ ಬಾರಿಸುವುದಕ್ಕೆ ಆಸಕ್ತಿ ತೋರಿಸಿದ. ಆದರೆ, ಪೂರ್ವನಿಯೋಜಿತ ಕಲಾವಿದರಿಗೆ ಮಾತ್ರ ಅವಕಾಶ ನೀಡಲು ಆಯೋಜಕರು ನಿರ್ಧರಿಸಿದ್ದರು. ಹಾಗೆಯೇ ಅನಾಮಿಕನೊಬ್ಬನಿಗೆ ವೇದಿಕೆ ಬಿಟ್ಟುಕೊಡಲು ಅಲ್ಲಿದ್ದವರಿಗೆ ಮನಸ್ಸು ಇರಲಿಲ್ಲ. ಅದಕ್ಕೆ ಜಾತಿಯೂ ಅಡ್ಡಬಂದಿತ್ತಂತೆ. ಎಷ್ಟು ಮನವಿ ಮಾಡಿದರೂ ಸಾಧ್ಯವೇ ಇಲ್ಲ ಎಂದು ನಿರಾಕರಿಸಿದರು. ಬಹಳಷ್ಟು ಪಟ್ಟು ಹಿಡಿದ ನಂತರ ರಾತ್ರಿ 12ರ ಸುಮಾರಿಗೆ ಒಂದೈದು ನಿಮಿಷ ಒಂದೇ ಹಾಡಿಗೆ ಸಾಥ್ ನೀಡಲು ಅವಕಾಶ ಕಲ್ಪಿಸಿದರು. ಆಗ ದೊರೆತ ಅವಕಾಶವನ್ನು ಬಳಸಿಕೊಂಡ ರಾಚಪ್ಪ ಅದ್ಭುತ ರೀತಿಯಲ್ಲಿ ತಬಲಾವಾದನದ ಸೊಬಗು ತೋರಿಸಿದ. ಹಾಡುಗಾರನಿಗೆ ಸಾಥ್ ನೀಡುವ ಬದಲು ಗಾಯಕನನ್ನೇ ತನ್ನ ಜೊತೆಗೆ ಕರೆದುಕೊಂಡು ಹೋಗಿ ದಾರಿ ತೋರಿಸುತ್ತ ಹೋದ. ಅವಮಾನಿಸುವುದಕ್ಕಾಗಿ ಯುವಗಾಯಕನ ಜೊತೆಗೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಬೆಳಗಿನ ವರೆಗೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ರಾಚಪ್ಪ ತಬಲಾ ಮೇಲಿನಿಂದ ಕೈ ತೆಗೆಯಲಿಲ್ಲ. ಗಾಯಕರು, ವಾದಕರು ಬದಲಾದರೂ ತಬಲಾ ಸಾಥಿ ಮಾತ್ರ ರಾಚಪ್ಪನೇ ಆಗಿದ್ದ. ಗಾಯಕರೆಲ್ಲ 'ಚೆನ್ನಾಗಿ ನುಡಿಸುತ್ತಾರೆ. ಇವರೇ ಇರಲಿ ಬಿಡಿ' ಎಂದು ಹೇಳಿದ್ದರಿಂದ ಅಂದು ತಬಲಾ ಸಾಥ್ ನೀಡಬೇಕಾಗಿದ್ದವರಿಗೆಲ್ಲ ಸಂಪೂರ್ಣ ವಿರಾಮ ದೊರೆತಿತ್ತು.
ರಾಚಪ್ಪನ ಪರಿಚಯವಾದ ಮೇಲೆ ನಾಲ್ಕಾರು ಕಡೆ ಅವನ ಸಂಗೀತ ಕೇಳಿದ್ದೇನೆ. ಅವನು ಸಂಗೀತದಲ್ಲಿ ಬೆರಗು ಮೂಡಿಸುವ ಮೂಲಕ ತನ್ನ ಸೆಳೆಯುವ ತಂತ್ರ ಅಳವಡಿಸಿಕೊಂಡಿದ್ದ. ಬೆರಗು ಅಲ್ಪಕಾಲೀನ ಮತ್ತು ಅದರಿಂದ ದೊರೆಯುವ ಮೆಚ್ಚುಗೆ ಕೂಡ ಅಷ್ಟೇ ಅಲ್ಪಾಯು ಆಗಿರುತ್ತದೆ. ಅದೊಂದು ಒನ್ಡೇ ಕ್ರಿಕೆಟ್ ಮ್ಯಾಚ್ನ ಬ್ಯಾಟಿಂಗ್ ಇದ್ದಂತೆ. ಟೆಸ್ಟ್ ಕ್ರಿಕೆಟ್ನ ಸ್ವರೂಪದ ಶಾಸ್ತ್ರೀಯ ಸಂಗೀತದ ಕೇಳುಗರಿಗೆ ಅದು ಇಷ್ಟವಾಗಲಿಕ್ಕಿಲ್ಲ. ಆದರೆ, ಅದು ಒಂದು ಪ್ರಕಾರ ಮತ್ತು ಜನಪ್ರಿಯವಾದ ರೀತಿ ಎಂಬುದರಲ್ಲಿ ಎರಡು ಮಾತಿಲ್ಲ. ಕಡಿಮೆ ಅವಧಿಯಲ್ಲಿ ಗಮನ ಸೆಳೆಯುವ ರೀತಿ ಪ್ರಸ್ತುತ ಪಡಿಸುತ್ತಿದ್ದ ರಾಚಪ್ಪ ಅಷ್ಟೊಂದು ಪ್ರತಿಭಾವಂತನಾದರೂ ಯಾಕೆ ದೊಡ್ಡ ಕಲಾವಿದನಾಗಲಿಲ್ಲ ಎಂಬ ಪ್ರಶ್ನೆಯನ್ನು ಹಲವಾರು ಬಾರಿ ಕೇಳಿಕೊಂಡಿದ್ದೇನೆ. ನಾನೇ ಉತ್ತರ ಕಂಡುಕೊಂಡು ಸುಮ್ಮನಾಗಿದ್ದೇನೆ.
ತಬಲಾ ವಾದನದ ಮೂಲಕ ಸಂಗೀತಕ್ಕೆ ಬಂದ ರಾಚಪ್ಪ ಅದನ್ನು ಕರತಲಾಮಲಕ ಮಾಡಿಕೊಂಡ ನಂತರ ದೊಡ್ಡ ದೊಡ್ಡ ಗವಾಯಿಗಳನ್ನು ಕಾಡುವುದಕ್ಕೆ ತನ್ನ ವಿದ್ಯೆಯನ್ನು, ಕೌಶಲ್ಯವನ್ನು ಬಳಸಿಕೊಳ್ಳಲು ಆರಂಭಿಸಿದ. ಸಾಥ್ ನೀಡುವಾಗಲೆಲ್ಲ ಗಾಯಕನ ಕಣ್ಮಸಕು ಮಾಡಿ ಲಯದ ದಟ್ಟ ಕಾಡಿನಲ್ಲಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗುತ್ತಿದ್ದ. ಅಲ್ಲಿ ಕಣ್ಣಿನ ಪಟ್ಟಿ ಬಿಚ್ಚಿ ಮುಂದೆ ಹೋಗುವಂತೆ ಪ್ರೇರೆಪಿಸುತ್ತಿದ್ದ. ಸಾಥಿಯೇ ದಾರಿ ತಪ್ಪಿಸಿದಾಗ ಆಗುವಂತೆ ಗಾಯಕರು/ಕಲಾವಿದರು ಕಂಗಾಲಾಗಿ ಸೋಲು ಒಪ್ಪುವುದು ಅನಿವಾರ್ಯ ಆಗುತ್ತಿತ್ತು. ಹಾಗೆ ಸೋಲು ಒಪ್ಪಿಕೊಳ್ಳುವಂತೆ ಮಾಡಿದ ನಂತರ ತನ್ನ ಲಯದ ಜೊತೆಗಾರಿಕೆ ನೀಡಿ ಮರಳಿ ಕರೆದುತರುತ್ತಿದ್ದ. ಗಾಯಕರ- ಗವಾಯಿಗಳ ಅಹಂ ಮುರಿಯುವುದೇ ವಿದ್ಯೆಯ, ಕೌಶಲ್ಯದ ಬಳಕೆ ಎಂದು ಭಾವಿಸಿದ. ಅದರಿಂದಾಗಿ ತನ್ನ ಎದುರಿಗೆ ದೊರಕಿದ ಎಲ್ಲರನ್ನೂ ಸೋಲಿಸುವ ಗುರಿ ಇಟ್ಟುಕೊಂಡ. ಗೆದ್ದ ಅಹಂ ಬೆಳೆಯುತ್ತ ಹೋಯಿತು. ರಾಚಪ್ಪ ತಬಲಾಕ್ಕೆ ಕೂಡುತ್ತಾನೆ ಎಂದರೆ ಗವಾಯಿಗಳು ಹಾಡಲು ಹಿಂದೇಟು ಹಾಕುವ ಸ್ಥಿತಿಬಂತು. ಗಾಯಕರಿಗೆ-ವಾದಕರಿಗೆ ಸಾಥಿ ಆಗಿರುವ ಬದಲು ತಬಲಾದ ಮೂಲಕ ಅಹಂ ಹೆಚ್ಚಿಸಿಕೊಂಡಿದ್ದ ವಾದಕನನ್ನು ದೂರ ಮಾಡಿದರು. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಗವಾಯಿಗಳಿಗೆ ಅದು ಅನಿವಾರ್ಯವೂ ಆಗಿತ್ತು. ತಬಲಾವನ್ನು ಸೋಲೊ ಮಟ್ಟಕ್ಕೆ ಹೆಚ್ಚಿಸುವ ಸಾಮಥ್ರ್ಯ ಇದ್ದರೂ ಕಲೆಯನ್ನು ಸೋಲಿಸುವುದಕ್ಕೆ ಮಾತ್ರ ಬಳಸಿದ ರಾಚಪ್ಪ ನಿಜವಾದ ಅರ್ಥದಲ್ಲಿ ತಾನೇ ಸೋತಿದ್ದ. ತನ್ನ ಕೌಶಲ್ಯಕ್ಕೆ ಇರುವ ಮಿತಿಯನ್ನು ಅರಿತ ರಾಚಪ್ಪ ಅದನ್ನು ಮೀರಲು ಸಾಧ್ಯವಾಗದಷ್ಟು ದೂರ ನಡೆದು ಬಂದಿದ್ದ. ಅನಿವಾರ್ಯವಾಗಿ ಬೇರೆ ವಾದ್ಯ ಆಯ್ಕೆ ಮಾಡಿಕೊಳ್ಳಬೇಕಾಯಿತು. ಆಗ ಅವನ ನೆರವಿಗೆ ಬಂದದ್ದು ಗಿಟಾರ್. ಅಥವಾ ಹಾಗೆಂದು ಅವನೇ ಕರೆಯುತ್ತಿದ್ದ ಯಂತ್ರ. ಅದರ ಜೊತೆಯಲ್ಲಿಯೇ ಹಾಮರ್ೋನಿಯಂ ಕಲಿತ ರಾಚಪ್ಪ ಹಾಡುವುದನ್ನೂ ರೂಢಿಸಿಕೊಂಡಿದ್ದ. ಸಕಲಕಲಾ ವಲ್ಲಭನಂತಿದ್ದ ರಾಚಪ್ಪ ಸಂಗೀತದ ಸಾಮಥ್ರ್ಯ ಮತ್ತು ವೈಫಲ್ಯಕ್ಕೆ ಸಂಕೇತದಂತಿದ್ದ. ನಾನು ಬೆಂಗಳೂರಿಗೆ ಹೋದ ಮೇಲೆ ರಾಚಪ್ಪನನ್ನು ಕರೆಸಿ ಸಂಗೀತ ಕೊಡಿಸಲು, ಕೆಲವು ಆಸಕ್ತರ ನಡುವೆಯಾದರೂ ಸಂಗೀತ ಪ್ರಸ್ತುತ ಪಡಿಸಲು ಪ್ರಯತ್ನಿಸಿದೆ. ಆದರೆ, ರಾಚಪ್ಪನ ವಿಕ್ಷಿಪ್ತ ಮನಸ್ಥಿತಿ ಮತ್ತು ಅವನ ಜೊತೆಗಾರರ ನಿರಾಸಕ್ತಿಯಿಂದ ಸಾಧ್ಯವಾಗಲಿಲ್ಲ.
'ಎಲ್ಲರನ್ನೂ ಸೋಲಿಸಿದ್ದೇನೆ' ಎಂಬ ಸಮಾಧಾನ ರಾಚಪ್ಪನಿಗೆ ಇದ್ದರೂ 'ದೊಡ್ಡವನಾಗಲಿಲ್ಲ' ಎಂಬ ನಿರಾಶೆ ಇರಲಿಲ್ಲ. ಹೊಟ್ಟೆಪಾಡಿಗಾಗಿ ನಾಲ್ಕು ಕಾಸು ಹೊಂದಿಸಿಕೊಳ್ಳುವುದೇ ಅವನಿಗೆ ದೊಡ್ಡ ಸವಾಲಾಗಿತ್ತು. ಅವನ ಸಂಗೀತಕ್ಕೆ ಮಾರುಹೋದವರು ಸಾವಿರಾರು ಜನರಾದರೂ ನೂರಾರು ಜನ ಮೆಚ್ಚುಗೆಯ ಮಾತಾಡುತ್ತಿದ್ದರು. ಕೆಲವರು ಅವನ ಅಭಿಮಾನಿಗಳೇ ಆಗಿ ಹೋಗಿದ್ದರು. ಡ್ರೈವರ್ ಚೆನ್ನಪ್ಪ ರಾಚಪ್ಪನ ಸಂಗೀತದ ಹುಚ್ಚು ಹಿಡಿಸಿಕೊಂಡಿದ್ದ. ಕೆಎಸ್ಆರ್ಟಿಸಿಯಲ್ಲಿ ಡ್ರೈವರ್ ಆಗಿದ್ದ ಚೆನ್ನಪ್ಪ ಕೆಲಸಕ್ಕೆ ಹೋಗದೇ ರಾಚಪ್ಪನ ಬೆನ್ನುಹತ್ತಿ ತಿರುಗಾಡಿದ್ದಿದೆ. ಅವನ ಕಾಲಬಳಿ ಕುಳಿತುಕೊಳ್ಳಲು ಆಪೇಕ್ಷೆ ಪಟ್ಟದ್ದುಂಟು. ರಾಚಪ್ಪನ ಸಂಗೀತ ಮೆಚ್ಚಿಕೊಂಡಿದ್ದ ಅಣ್ಣ ಅಜೇಂದ್ರ ಒಂದೆರಡು ಕಾರ್ಯಕ್ರಮ ಕೊಡಿಸಿದರು, ಸಂಗೀತ ಕೇಳಿ ಆನಂದಿಸಿದರು. ಆದರೆ, ಅದು ರಾಚಪ್ಪನ ಹೊಟ್ಟೆ ತುಂಬಿಸುವುದಕ್ಕೆ ಸಾಧ್ಯವಿರಲಿಲ್ಲ. ರಾಚಪ್ಪನಿಗೆ ನಿಶ್ಚಿತ ಆದಾಯ ಬರುವ ಹಾಗೆ ಮಾಡಬೇಕು ಎಂದು ಶಹಪುರದಲ್ಲಿ ಕೆಲವರಿಗೆ ಸಂಗೀತ ಪಾಠ ಕೊಡಿಸಿದರೆ ಹೇಗೆ ಎಂಬ ವಿಷಯ ಪ್ರಸ್ತಾಪವಾಯಿತು. ಕಾಳಹಸ್ತಿಸ್ವಾಮಿ, ರಾಮಣ್ಣ, ಚೆನ್ನಪ್ಪ ಅದನ್ನು ಉತ್ಸಾಹದಿಂದ ಪ್ರಾರಂಭಿಸಿದರು. ಆದರೆ, ರಾಚಪ್ಪನ ಬದುಕಿನ ಕಷ್ಟ ನೀಗಿಸುವಷ್ಟು ಸಹಾಯ ಒದಗಿಸುವುದು ಸಾಮಥ್ರ್ಯಕ್ಕೆ ಮೀರಿದ ಮಾತಾಗಿತ್ತು.
ರಾಚಪ್ಪನ ಕೊನೆಯ ದಿನಗಳು ತೀವ್ರ ಕಷ್ಟದಿಂದ ಕೂಡಿದ್ದವು. ಹಳೆಯ ಪ್ರೇಯಸಿಯರೆಲ್ಲ ದೂರ ಸರಿದಿದ್ದರು. ಅಥವಾ ಅವನೇ ಅವರನ್ನು ಬಿಟ್ಟು ಬಂದಿದ್ದ. ಮತ್ತೆ ಮನೆಯತ್ತ ಮುಖ ಮಾಡಿದ. ಅನಾರೋಗ್ಯ ಮತ್ತು ಅಸಹಾಯಕತೆ ನಡುವೆ ನಲುಗಿಹೋದ. ಬೆಂಗಳೂರಿನ ಧಾವಂತದ ಬದುಕಿನ ನಡುವೆಯೂ ನಾನು ರೆಕಾಡರ್್ ಮಾಡಿಟ್ಟುಕೊಂಡ ರಾಚಪ್ಪನ ಗಿಟಾರ್ ಮತ್ತು ತಬಲಾ ವಾದನದ ಸಿಂಚನ ನೆಮ್ಮದಿ ನೀಡುತ್ತಿದ್ದವು. ಹೀಗೆ ಗಿಟಾರ್ ಕೇಳಿದ ದಿನವೇ ಅಣ್ಣನ ಜೊತೆ ರಾಚಪ್ಪನ ವಿಷಯ ಪ್ರಸ್ತಾಪಿಸಿದಾಗ ಬಿಜಾಪುರದ ಬಿಎಲ್ಡಿ ಆಸ್ಪತ್ರೆಯಲ್ಲಿ ಕೊನೆಯ ದಿನಗಳನ್ನು ಎಣಿಸುತ್ತಿರುವ ವಿಷಯ ತಿಳಿಯಿತು. ಮೂರ್ನಾಲ್ಕು ದಿನಗಳ ನಂತರ ಬಂದ ಎಸ್ಎಂಎಸ್ ರಾಚಪ್ಪ ಇನ್ನಿಲ್ಲ ಎಂಬ ಸಂಗತಿ ತಿಳಿಸಿದಾಗ ಏನೋ ಕಸಿವಿಸಿ. ಸಾವಿರಾರು ಜನರನ್ನು ರಂಜಿಸಿದ ರಾಚಪ್ಪ ಪತ್ರಿಕೆಗಳಲ್ಲಿ ಒಂದು ಸಾಲಿನ ಸುದ್ದಿಯೂ ಆಗಲಿಲ್ಲ. ಆಶ್ಚರ್ಯಕರ ಸಂಗತಿ ಎಂದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರ ತಂದಿರುವ ಬಿಜಾಪುರ ಜಿಲ್ಲೆಯ ಕಲಾವಿದರ ಪಟ್ಟಿಯಲ್ಲಿ ರಾಚಪ್ಪನ ಹೆಸರಿದೆ. ತಂದೆಯ ಹೆಜ್ಜೆ ಜಾಡಿನಲ್ಲಿ ನಡೆಯುತ್ತಿರುವ ರಾಚಪ್ಪನ ಮಗಳು ಸೊಗಸಾಗಿ ಭಾವಗೀತೆ- ಭಕ್ತಿಗೀತೆ ಹಾಡುತ್ತಾಳೆ ಎಂದು ಕೇಳಿದ್ದೇನೆ. ರಾಚಪ್ಪ ನೆನಪಾದಾಗಲೆಲ್ಲ ಕ್ಯಾಸೆಟ್- ಸಿ.ಡಿ. ಹಾಕಿಕೊಂಡು ಕೇಳುತ್ತೇನೆ. ಅವನ ಬಗ್ಗೆ ಕಥೆ ಹೇಳುತ್ತೇನೆ. ರಾಚಪ್ಪ ಬದುಕಿದ್ದಾಗಲೇ ದಂತಕಥೆಯಾಗಿದ್ದ. ಸಾವಿನ ನಂತರವೂ ಕಥೆಯಾಗುವುದು ಮುಂದುವರೆದಿದೆ.
ಕಾಮೆಂಟ್‌ಗಳು