ಸಂಗೀತದಿಂದಲೇ ರೊಟ್ಟಿ ಚಟ್ನಿ ಸಿಕ್ಕದ್ದು


`ಸಂಗೀತಕ್ಕಾಗಿಯೇ ಇಡೀ ಜೀವನವನ್ನು ಮುಡಿಪಿಟ್ಟ ನನಗೆ ಅದರಿಂದಲೇ ಅರ್ಧ ರೊಟ್ಟಿ ಚಟ್ನಿ ಸಿಕ್ಕದ್ದು' ಎಂದು ನೇರವಾಗಿ ಹೇಳುವ ಪಂಡಿತ್ ನರಸಿಂಹಲು ವಡವಾಟಿ ಕ್ಲಾರಿಯೋನೆಟ್ ವಾದಕರು ಮಾತ್ರವಲ್ಲ, ಉತ್ತಮ ಗಾಯಕರು ಕೂಡ.
`ಒಂದೇ ವೇದಿಕೆ ಮೇಲೆ ಹಾಡುವುದು ಮತ್ತು ನಂತರ ಕ್ಲಾರಿಯೋನೆಟ್ ನುಡಿಸುವುದು ಕಷ್ಟದ ಕೆಲಸ ಎಂದು ಕಛೇರಿಗಳಲ್ಲಿ ಗಾಯನ ಕಾರ್ಯಕ್ರಮ ನೀಡುವುದನ್ನು ನಿಲ್ಲಿಸಿದೆ' ಎನ್ನುವ ವಡವಾಟಿಯವರು `ಈಗಲೂ ಪ್ರತಿದಿನ ಗಾಯನದ ರಿಯಾಜ್ ಮಾಡುತ್ತೇನೆ. ಗಾಯನದ ಅನುಭವ ಇಲ್ಲದೇ ನುಡಿಸುವ ವಾದನದಲ್ಲಿ 'ಕೊರತೆ' ಕಾಣಿಸುತ್ತದೆ. ಗಾಯನ ಬಿಟ್ಟು ವಾದ್ಯ ಇಲ್ಲ, ವಾದ್ಯ ಬಿಟ್ಟು ಗಾಯನ ಇಲ್ಲ ಎರಡೂ ಒಂದೇ' ಎಂದು ಹೇಳಲು ಮರೆಯುವುದಿಲ್ಲ.
ಪಂಡಿತ್ ಸಿದ್ಧರಾಮ ಜಂಬಲದಿನ್ನಿಯವರ ಹತ್ತಿರ 1965ರಿಂದ 88ರ ಅವಧಿಯಲ್ಲಿ ಗಾಯನ ಕಲಿತ ವಡವಾಟಿಯವರು ಕಛೇರಿಗಳಲ್ಲಿ ಅವರ ಜೊತೆ ಗಾಯನ ಪ್ರಸ್ತುತ ಪಡಿಸುತ್ತಿದ್ದಾರೆ. ಆಗಲೇ ಅದಕ್ಕೂ ಮುನ್ನ ಹೊಟ್ಟೆಪಾಡಿಗಾಗಿ ಕಲಿತಿದ್ದ ಕ್ಲಾರಿಯೋನೆಟ್‌ನ್ನು ಯಾಕೆ ಶಾಸ್ತ್ರೀಯ ಸಂಗೀತಕ್ಕೆ ಬಳಸಬಾರದು ಅನ್ನುವ ಯೋಚನೆ ಬಂದು ಸತತ ಪ್ರಯತ್ನದಿಂದ ಗಾಯನದ ಶೈಲಿಯಲ್ಲಿ ಕ್ಲಾರಿಯೋನೆಟ್ ನುಡಿಸುವುದಕ್ಕೆ ಆರಂಭಿಸಿದರು. ಗಾಯನ- ವಾದನದ ಹದವಾದ ಮಿಶ್ರಣವಿರುವ ಗಾಯಕಿ ಶೈಲಿಯ ಕ್ಲಾರಿಯೋನೆಟ್ ಕೇಳುಗರ ಮೆಚ್ಚುಗೆಗೆ ಪಾತ್ರವಾಯಿತು.
`ಕ್ಲಾರಿಯೋನೆಟ್ ಒಂದು ಇನ್ ಸ್ಟ್ರುಮೆಂಟ್‌ ಅದನ್ನು ಸರ್ಕಸ್ಗೆ, ಬ್ಯಾಂಡ್‌ಗೆ ಬಳಸಬಹುದು. ಶಾಸ್ತ್ರೀಯ ಗಾಯನಕ್ಕೂ ಬಳಸಬಹುದು. ಇದು ಪಾಶ್ಚಾತ ವಾದ್ಯ, ಇಂಡಿಯನ್ ವಾದ್ಯದ ತರಹ ಅಲ್ಲ. ಇದರಲ್ಲಿನ ರೀಡ್ ಅನ್ನು ಬಾಯಲ್ಲಿ ಅಂದರೆ ಹಲ್ಲುಗಳ ನಡುವೆ ಇಟ್ಟುಕೊಂಡರೆ ನಾಲಿಗೆ ಬಳಸಲು ಸಾಧ್ಯವಿಲ್ಲ. ಸ್ವರ ಹೊರಡಿಸುವುದಕ್ಕೆ ಪರಿಶ್ರಮ ಪಡಬೇಕಾಗುತ್ತದೆ. ಧ್ವನಿಯ ಮೂಲಕ ಬರುವ ಸ್ವರವನ್ನು ವಾದ್ಯದಲ್ಲಿ ತರುವುದು ಕಷ್ಟ. ಗಾಯನಕ್ಕಿಂತ ನಾಲ್ಕು ಪಟ್ಟು ಹೆಚ್ಚು ಕಷ್ಟಪಡಬೇಕು. ಗಾಯನಕ್ಕಿಂತ ವಾದ್ಯ ಕಡಿಮೆಯೇನಲ್ಲ. ಎರಡೂ ಗೊತ್ತಿರುವುದರಿಂದ ಈ ಮಾತನ್ನು ಖಚಿತವಾಗಿ ಹೇಳಬಲ್ಲೆ' ಎನ್ನುತ್ತಾರೆ ವಡವಾಟಿಯವರು.
'ನನ್ನ ಹೆಸರು `ನರಸಿಂಹ' ಅಂತಲೇ ಇರೋದು. ನಮ್ಮೂರು ರಾಯಚೂರು ಹತ್ತಿರದ ವಡವಾಟಿ. ಮನೆಯಲ್ಲಿ ಮಾತಾಡೋದು ಕನ್ನಡ ಆದರೂ ತೆಲುಗು ಬಳಕೆ ಜಾಸ್ತಿ. ಅದರಿಂದಲೇ ನನ್ನ ಹೆಸರು `ನರಸಿಂಹಲು' ಅಂತ ಆಯಿತು'. ಧಾರ್ಮಿಕ ಮನೋಭಾವದ ಕುಟುಂಬ. ಅಜ್ಜ ಓಬಳಪ್ಪ ಶಹನಾಯಿ ವಾದಕರು, ಅಪ್ಪ ಗುಡ್ಡಪ್ಪ ತಬಲಾ ಬಾರಿಸುತ್ತಿದ್ದರು. ಅಮ್ಮ ಭಕ್ತಿಸಂಗೀತ. ಸಂಗೀತದ ವಾತಾವರಣದಲ್ಲಿ ಬೆಳೆದ ಅವರು ಓದಿದ್ದು 3ನೇ ತರಗತಿ ವರೆಗೆ ಅದೂ ಉರ್ದು ಮಾಧ್ಯಮದಲ್ಲಿ. ಸಣ್ಣ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದು ಕೊಂಡ ನರಸಿಂಹ ಅವರು ಮನೆಬಿಟ್ಟು ರಾಯಚೂರಕ್ಕೆ ಓಡಿ ಬಂದರು. ಜಿ.ವೆಂಕಟಪ್ಪ ಅನ್ನುವವರ ಬ್ಯಾಂಡ್‌ಸೆಟ್‌ ನಡೆಸುತ್ತಿದ್ದವರ ಮನೆಯಲ್ಲಿಯೇ ವಾಸ. ತಮ್ಮ ಬ್ಯಾಂಡ್‌ಸೆಟ್‌ಗೆ ಉಪಯೋಗ ಆಗಲಿ ಅಂತ ಕ್ಲಾರಿಯೋನೆಟ್ ಕಲಿಸಿದರು. ಬ್ಯಾಂಡ್‌ಸೆಟ್‌ಗಾಗಿ ಬೇಕಾದ ಸಿನಿಮಾ ಹಾಡು ನುಡಿಸುವುದನ್ನು ಕಲಿತೆ. ಅಷ್ಟರಲ್ಲಿಯೇ ತೃಪ್ತಿ ಹೊಂದಬಹುದಿತ್ತು. ಆದರೆ, `ಇಷ್ಟೇ ಮಾಡುವುದಕ್ಕಾಗಿ ಮನೆ ಬಿಟ್ಟು ಬರಬೇಕಾಗಿತ್ತಾ' ಅನ್ನುವ ಯೋಚನೆ ಬಂದು ರಾಯಚೂರಿಗೆ ಬರುತ್ತಿದ್ದ ಜಂಬಲದಿನ್ನಿಯವರ ಹತ್ತಿರ ಶಿಷ್ಯವೃತ್ತಿ ಆರಂಭಿಸಿದರು. ಆಗಲೇ ಅಮೆಚೂರ್ ನಾಟಕಗಳಿಗೆ ಸಂಗೀತ ನೀಡಲಾರಂಭಿಸಿದರು.
`ಸಂಗೀತದಲ್ಲಿ ಅಲ್ಪತೃಪ್ತಿ ಬಂದರೆ ಆಯಿತು, ಸಾಧನೆ ಸಾಧ್ಯವಿಲ್ಲ. ಈ ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತು ಹೋದವರೆ ಹೆಚ್ಚು ಜನ ಅನ್ನುವ ವಿಷಯ ಮನದಟ್ಟಾಯಿತು. ಮನಸ್ಸು ವಿಶಾಲ ಇರಬೇಕು. ಅದಕ್ಕೆ ಕಲಿಕೆಯ ಸಂಸ್ಕಾರವೂ ಬೇಕು' ಎಂದು ಹೊಳೆದು ಪ್ರಯತ್ನವನ್ನು ಮತ್ತಷ್ಟು ಕಠಿಣಗೊಳಿಸಿದೆ' ಎನ್ನುತ್ತಾರೆ ಅವರು. `20 ವರ್ಷ ಸಾಧನೆ ಆದ ಮೇಲೆಯೇ ಶ್ರುತಿ ಜ್ಞಾನ ಆಗೋದು. ಶ್ರುತಿಯಲ್ಲಿ ಸ್ವರ ಬೆರಸಲು ಸಾಧ್ಯವಾಗ್ತದೆ. ಎಲ್ಲದರಲ್ಲಿ ಎಲ್ಲರೂ ಪರಿಣತರಾಗಲು ಸಾಧ್ಯವಿಲ್ಲ ಅಂತ ತಿಳಿದು ಗೊತ್ತಿದ್ದ ಗಾಯನ- ಕ್ಲಾರಿಯೋನೆಟ್‌ಗಳನ್ನು ಬೆರೆಸಿ ಕಾರ್ಯಕ್ರಮ ನೀಡಲಾರಂಭಿಸಿದೆ' ಎಂದು ಅವರು ವಿವರಿಸುತ್ತಾರೆ.
'ಮಾರು ಬಿಹಾಗ' ನನಗೆ ಪ್ರಿಯವಾದ ರಾಗ' ಎನ್ನುವ ವಡವಾಟಿಯವರು `ಪ್ರತಿ ರಾಗದ ಮೇಲೆ ಸಂಪೂರ್ಣ ವಿಶ್ವಾಸ ಇರಬೇಕು. ಆಗ ಮಾತ್ರ ಎಲ್ಲ ರಾಗ ಎಲ್ಲ ಸಮಯದಲ್ಲಿ ನುಡಿಸಬಹುದು. ಅದರಿಂದ ಪರಿಣತಿ ಬರುತ್ತದೆ. ಮೂಡ್ ಜಮಾಯಿಸಿದರೆ ಮಾತ್ರ ಸಂಗೀತ ಕಳೆ ಕಟ್ಟುತ್ತದೆ' ಎಂದು ನುಡಿಯುತ್ತಾರೆ.
ಈಗೀಗ ಕರ್ನಾಟಕಿ ವಾದ್ಯ ಸಂಗೀತದೊಂದಿಗೆ ವಡವಾಟಿಯವರ ಕ್ಲಾರಿಯೋನೆಟ್ ಜುಗಲ್‌ಬಂದಿಗಳ ಅಪಾರ ಜನಮನ್ನಣೆಗೆ ಪಾತ್ರವಾಗಿವೆ. `ಜುಗಲ್‌ಬಂದಿ ನುಡಿಸುವ ಇಬ್ಬರೂ ಕಲಾವಿದರ ಮಧ್ಯೆ ಹೊಂದಾಣಿಕೆ ಇರಬೇಕು, ಒಬ್ಬರ ಸಂಗೀತವನ್ನು ಮತ್ತೊಬ್ಬರು ಎಂಜಾಯ್ ಮಾಡುತ್ತ ಅದಕ್ಕೆ ಪೂರಕವಾಗಿರದಿದ್ದರೆ ಜುಗಲ್‌ಬಂದಿ ಕೆಟ್ಟುಹೋಗುತ್ತದೆ' ಎನ್ನುವ ಅವರು `ಸ್ವತಂತ್ರವಾಗಿ ಕಛೇರಿ ಕೊಡುವುದಕ್ಕಿಂತ ಜುಗಲ್‌ಬಂದಿಯಲ್ಲಿ ಸ್ವಲ್ಪ ರಿಸ್ಟ್ರಿಕ್ಷನ್ ಜಾಸ್ತಿ ಅನ್ಸುತ್ತೆ' ಎಂದು ಹೇಳಲು ಮರೆಯುವುದಿಲ್ಲ.
ಎಂತಹ ಹೊಸ ಟೆಕ್ನಾಲಜಿ ಬಂದರೂ ಕಲಾವಿದನ ಮಹತ್ವ ಹೋಗುವುದಿಲ್ಲ. ಹತ್ತು ವರ್ಷದಿಂದೀಚೆಗೆ ಶಾಸ್ತ್ರೀಯ ಸಂಗೀತದ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ ಸಂಗೀತ ಲೋಕದ ನಿಜವಾದ ಸಾಧನೆ' ಎನ್ನುವ ಅವರು `ಸಂಖ್ಯೆ ಹೆಚ್ಚಾಗಿದೆ. ಹಿಂದಿನಂತೆ ಶ್ರಮ ಹಾಕುವ ಕಾಲ ಇದಲ್ಲ. ಆದ್ದರಿಂದ ಎದ್ದು ಕಾಣುತ್ತಿಲ್ಲ. ಹಾಗಂತ ಈಗಲೂ ಗುಣಮಟ್ಟ ಕಡಿಮೆ ಆಗಿಲ್ಲ. ಜನರ ಹತ್ತಿರ ಶಕ್ತಿ- ಆಯಷ್ಯ ಕಡಿಮೆಯಾಗಿದೆ. ಹಿಂದೆ ಮುಂಜಾನೆ ಎದ್ದು ತಂಬೂರಿ ಹಿಡಕೊಂಡು ಕುಂತು ಅಭ್ಯಾಸ ಆರಂಭಿಸಿದರೆ ಸಂಜಿವರೆಗೂ ಕೂಡುತ್ತಿದ್ದರು. ಈಗದು ಸಾಧ್ಯವಿಲ್ಲ' ಎಂದು ಅವರು ಒಪ್ಪಿಕೊಳ್ಳುತ್ತಾರೆ.

ಚಿತ್ರಗಳು: ಶ್ರೀಧರಮೂ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು