ಬೇಡದ ಜಂಗದ- ಬೆಲ್ದಾಳ ಶರಣರು


ತಾವು ಧರಿಸಿರುವ ನೊರೆ ಹಾಲಿನಂತಹ ಅಚ್ಚ ಬಿಳುಪಿನ ಬಟ್ಟೆಯಿಂದ ತಟ್ಟನೆ ಗಮನ ಸೆಳೆಯುವ ಸಿದ್ಧರಾಮ ಶರಣರು ಬಸವ ತತ್ವದಲ್ಲಿ ಅಚಲ ನಂಬುಗೆ ಇಟ್ಟವರು. `ಬೆಲ್ದಾಳ ಶರಣರು' ಎಂದೇ ಧಾರ್ಮಿಕ- ಸಾಂಸ್ಕೃತಿಕ ವಲಯದಲ್ಲಿ ಚಿರಪರಿಚಿತರಿರುವ ಅವರದು ಖಚಿತ ನಿಲುವು. ಹಾಗೆಯೇ ಅಷ್ಟೇ ನಿರ್ಭಿಡೆಯಿಂದ ಕಡ್ಡಿ ತುಂಡು ಮಾಡುವಂತೆ ಮಾತನಾಡುವವರು. ವಚನ ಸಾಹಿತ್ಯದ ಬಗ್ಗೆ ಅಪಾರ ಗೌರವ ಇರಿಸಿಕೊಂಡಿರುವ ಬೆಲ್ದಾಳ ಶರಣರು ಮಠ ಮಾನ್ಯಗಳ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಲೂ ಹಿಂದೇಟು ಹಾಕುವವರಲ್ಲ.

ಕರ್ನಾಟಕದ ತುತ್ತ ತುದಿಯಲ್ಲಿರುವ ಔರಾದ್ ತಾಲ್ಲೂಕಿನ ಕೌಠಾ ಗ್ರಾಮದಲ್ಲಿ ಶಾಲೆ-ಕಾಲೇಜು ಮತ್ತು ಆಸ್ಪತ್ರೆಗಳಂತಹ ಸಾರ್ವಜನಿಕ ಸೇವೆಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡ್ದಿದಾರೆ. ಮಾಂಜ್ರಾ ನದಿಯ ದಡದ ಮೇಲಿರುವ ಆಶ್ರಮ ಅವರ ಕಾರ್ಯಕ್ಷೇತ್ರ. ದಲಿತ ವರ್ಗದಲ್ಲಿ ಹುಟ್ಟಿ ಬೆಳೆದ ಅವರು ಸತತ ಅಧ್ಯಯನ, ಸತ್ಸಂಗಗಳ ಮೂಲಕ ಆಧ್ಯಾತ್ಮಿಕ ಲೋಕ ನಿರ್ಮಿಸಿಕೊಂಡು ಪರಂಪರಾನುಗತ ಧಾರ್ಮಿಕ ವ್ಯವಸ್ಥೆಗೆ ಸೆಡ್ಡು ಹೊಡೆದು ಪರ್ಯಾಯ ಲೋಕ ಸೃಷ್ಟಿಸಿದವರು. ಅವರ ಕೌಠಾ ಜಗತ್ತಿನಲ್ಲಿ, ಲೋಕದಲ್ಲಿ ಅಕ್ಷರಶಃ ಮೇಲು-ಕೀಳುಗಳಿಲ್ಲ. ದೀನರ ಸೇವೆಯನ್ನು ಯಾವುದೇ ಆಡಂಬರಗಳಿಲ್ಲದೇ ನಡೆಸುತ್ತ ಬಂದಿರುವ ಅವರಿಗೆ 2006ನೇ ಸಾಲಿನಲ್ಲಿ `ಅನುಭವ ಮಂಟಪ ಪ್ರಶಸ್ತಿ' ಸಂದಿದೆ.

ಸೌಜನ್ಯದ ಸಾಕಾರ ಮೂರ್ತಿಯಂತಿರುವ ಬೆಲ್ದಾಳ ಶರಣರು ಶಿಸ್ತು ಮತ್ತು ಸಂಯಮದ ಬದುಕಿಗೆ ಹೆಸರಾದವರು. ನಿಜಾಂ ಆಡಳಿತದಲ್ಲಿ ಉರ್ದು ನಾಮಫಲಕ ಹಾಕಿ ಶಾಲೆಯಲ್ಲಿ ಕನ್ನಡ ಕಲಿಸಿದ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಒಡನಾಟದಲ್ಲಿ ಬೆಳೆದವರು. ಮಾಡುವ ಕೆಲಸಕ್ಕಾಗಿ ಕೈಒಡ್ಡದೇ `ಬೇಡದ ಜಂಗಮ'ನೆನಿಸಿಕೊಂಡಿದ್ದಾರೆ.

ಬೆಲ್ದಾಳದ ಜನರಿಂದ `ಹುಚ್ಚ- ತಲೆ ಕೆಟ್ಟವ' ಎಂದು ಕರೆಯಿಸಿಕೊಳ್ಳುತ್ತಿದ್ದ `ವಿಠಲ' ನಂತರದ ದಿನಗಳಲ್ಲಿ `ಸಿದ್ಧರಾಮ ಶರಣರು' ಆಗಿ ಬೆಳೆದ ಪರಿ ಅನನ್ಯ. ದಲಿತ ಕುಟುಂಬದಲ್ಲಿ ಜನಿಸಿದ ವಿಠಲ ಶಾಲೆಗೆ ಹೋಗಿ ಕಲಿತದ್ದು ಮೂರನೇ ತರಗತಿಯವರೆಗೆ. ತಂದೆ ಲಾಲಪ್ಪ ಮತ್ತು ತಾಯಿ ಲಕ್ಷ್ಮಿದೇವಿ ಹೊಟ್ಟೆಪಾಡಿಗಾಗಿ ಮನೆಕಟ್ಟುವ ಕೂಲಿ ಕೆಲಸ ಮಾಡುವವರು. ಸಂಜೆ ಭಜನೆ- ಅಭಂಗಗಳನ್ನು ಹಾಡುವ ಮೂಲಕ ದೇವರ ಧ್ಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇದಷ್ಟೇ ವಿಠಲನಿಗೆ ಬಾಲ್ಯದಲ್ಲಿ ದೊರೆತ ಧಾರ್ಮಿಕ ಸಂಪರ್ಕ. ನಂತರ ಬಟ್ಟೆ ಹೊಲಿಯುವ ಕಾಯಕದಲ್ಲಿ ನಿರತರಾದರು. ಜನರೊಡನೆ ಬೆರೆಯದೇ ಒಬ್ಬಂಟಿಯಾಗಿರುತ್ತಿದ್ದ ವಿಠಲನನ್ನು ಹೀಗೆ ಬಿಟ್ಟರೆ `ಕೈತಪ್ಪಿ ಹೋದಾನು' ಎಂದು ಪಾಲಕರು 15ನೇ ವಯಸ್ಸಿನಲ್ಲಿಯೇ ಅಕ್ಕ ನಾಗಮ್ಮಳೊಂದಿಗೆ ಬಾಲ್ಯ ವಿವಾಹ ಮಾಡಿದರು. ಕೌಟುಂಬಿಕ ಜೀವನದ ಜೊತೆಗೆ ಯೋಗಿಕ ಸಾಧನೆಯೂ ಮುಂದುವರೆಯಿತು.

1974ರ ಜನವರಿ 14. ಅಂದು ಔರಾದ್‌ನಲ್ಲಿ ಭಾಲ್ಕಿ ಪಟ್ಟದ್ದೇವರ ಸಮ್ಮುಖದಲ್ಲಿ ಸಿದ್ಧರಾಮೇಶ್ವರ ಜಯಂತಿ. ಭಾಲ್ಕಿ ಗುರುಗಳನ್ನು ಕಾಣುವ ಉದ್ದೇಶದಿಂದ ಕಾರ್ಯಕ್ರಮ ನಡೆಯುತ್ತಿದ್ದ ಅಮರೇಶ್ವರ ಮಂದಿರಕ್ಕೆ ಹೋದರು. ಅದಾಗಲೇ ಸುತ್ತಲಿನ ಜನರಿಗೆ `ಯೋಗಿ' ಎನ್ನಿಸಿಕೊಂಡಿದ್ದರು. ಅದರ ಅರಿವಿದ್ದ ಭಾಲ್ಕಿ ಗುರುಗಳು ವೇದಿಕೆಗೆ ಆಹ್ವಾನಿಸಿ ಮಾತನಾಡುವಂತೆ ಕೇಳಿದರು. ಯುವಕ ವಿಠಲ ತನ್ನ ವಾಗ್ಝರಿಯ ಮೂಲಕ ಸಭೆಯನ್ನು ಬೆರಗುಗೊಳಿಸಿದ. ಪಟ್ಟದ್ದೇವರು ಎದ್ದು ನಿಂತು `ಇಂದು ಸಿದ್ಧರಾಮ ಸಿಕ್ಕ' ಎಂದು ಪ್ರೀತಿಯಿಂದ ಬಿಗಿದಪ್ಪಿದರು. `ಇದುವರೆಗೆ ಕಾಗದದ ಫೋಟೊ ಮೆರೆಸಿದ್ದೀರಿ, ಇದೀಗ ಸಿದ್ಧರಾಮನೇ ಸಿಕ್ಕ' ಎಂದ ಸ್ವಾಮೀಜಿ ಅವರು ವಿಠಲನಿಗೆ `ಸಿದ್ಧರಾಮ' ಎಂದು ನಾಮಕರಣ ಮಾಡಿದರು.

ಅದಾದ ಕೆಲವೇ ದಿನಗಳಲ್ಲಿ ಭಾಲ್ಕಿ ಮಠಕ್ಕೆ ಹೋದ ಸಿದ್ಧರಾಮ ಬೆಲ್ದಾಳಕ್ಕೆ ಬರುವಂತೆ ಮನವಿ ಮಾಡಿದರು. ಆಗ ಔರಾದ್ ತಾಲ್ಲೂಕಿನಲ್ಲಿ ಓಡಾಡಲು ಕುದುರೆ-ಒಂಟೆಗಳನ್ನು ಬಳಸಬೇಕಿತ್ತು. ಕುದುರೆ ಹತ್ತಿ ಬಂದ ಭಾಲ್ಕಿ ಗುರುಗಳು ಬೆಲ್ದಾಳ ಸೀಮಿ ಬರುತ್ತಿದ್ದಂತೆಯೇ ಕೆಳಗಿಳಿದು ನಡೆದು ಬಂದರು. ಆಗ ಊರ ತುಂಬ ಮೆರವಣಿಗೆ. ದಲಿತರ ಕೇರಿಗೆ ಗುರುಗಳು ಬಂದದ್ದು ಆಗಿನ ಕಾಲಕ್ಕೆ ದೊಡ್ಡ ಕ್ರಾಂತಿಯೇ ಆಗಿತ್ತು. ಅದೊಂದು `ರೋಮಾಂಚಕ ಘಟನೆ' ಎಂದು ಬೆಲ್ದಾಳ ಶರಣರು ಮೆಲುಕು ಹಾಕುತ್ತಾರೆ.

1975ರಲ್ಲಿ ಬಸವಕಲ್ಯಾಣದಲ್ಲಿ ಭಾಲ್ಕಿ ಗುರುಗಳಿಂದ ಸಿದ್ಧರಾಮರಿಗೆ ಲಿಂಗದೀಕ್ಷೆ. 12ನೇ ಶತಮಾನದಲ್ಲಿ ಚನ್ನಬಸವಣ್ಣನಿಂದ ಸಿದ್ಧರಾಮನಿಗೆ ದೀಕ್ಷೆ ಆಗಿತ್ತು. ಈಗ ಭಾಲ್ಕಿಯ ಚನ್ನಬಸವರಿಂದ ಸಿದ್ರಾಮನಿಗೆ ದೀಕ್ಷೆ ಎಂದು ಜನರಾಡಿಕೊಂಡರು. ನಂತರದ ದಿನಗಳನ್ನು ಬಸವ ತತ್ವ ಚಿಂತನೆ- ಯೋಗಿಕ ಸಾಧನೆ- ಪ್ರವಚನಗಳಲ್ಲಿ ಸಿದ್ಧರಾಮ ತಮ್ಮನ್ನು ತೊಡಗಿಸಿಕೊಂಡರು.

1981ರಲ್ಲಿ ಕೌಠಾ (ಬಿ)ಕ್ಕೆ ಬಂದ ಶರಣರು ಅಲ್ಲಿಯೇ `ಬಸವ ಯೋಗಾಶ್ರಮ' ಸ್ಥಾಪಿಸಿ `ಮಾದಾರ ಚೆನ್ನಯ್ಯ ಪ್ರಸಾದ ನಿಲಯ' ಆರಂಭಿಸಿದರು. 1982ರಲ್ಲಿ ಆರಂಭವಾದ `ಹರಳಯ್ಯ ಪ್ರೌಢಶಾಲೆ' ಈಗ ಹರಳಯ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಾಗಿ ಬೆಳೆದು 400 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. `ಪಟ್ಟಣದಾಗ ಡೊನೇಷನ್ ತಗೊಂಡು ಸಾಲಿ ನಡಸಾಕ ಭಾಲ ಮಂದಿ ಅದಾರ್ರಿ. ನಮ್ಮ ಹಳ್ಳಿ ಬಡ ಮಕ್ಕಳಿಗಿ ಕಲಸಾಕ ಅಂತಾನೇ ಈ ಸಾಲಿ' ಎನ್ನುತ್ತಾರೆ.

ಧಾರ್ಮಿಕ ಚಿಂತನೆ- ಸಾಮಾಜಿಕ ಸೇವೆಯ ನಡುವೆಯೂ ಸಾಹಿತ್ಯ ಕೃಷಿ ನಡೆಸಿದ ಶರಣರು `ವಚನ ತತ್ವಸಾರ', `ಭಗವಾನ ಬುದ್ಧ', `ಬಸವತತ್ವ ಪ್ರದೀಪಿಕೆ', `ಷಟಸ್ಥಲ ಸಂಪತ್ತು', `ಶೂನ್ಯ ಸಂಪಾದನೆಯ ರಹಸ್ಯ' ಸೇರಿದಂತೆ 15ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬೆಲ್ದಾಳ ಶರಣರ ಸಾಧನೆಯನ್ನು ಗುರುತಿಸಿ ಚಿತ್ರದುರ್ಗದ ಮುರುಘಾಮಠ `ಬಸವಶ್ರೀ' ಪ್ರಶಸ್ತಿ ನೀಡಿ ಗೌರವಿಸಿದೆ. ಅದಲ್ಲದೆ, ಕುಮಾರ ಕಕ್ಕಯ್ಯ ಪ್ರಶಸ್ತಿ, ಕಂಬಳಿವಾಲಾ ಪ್ರಶಸ್ತಿಗಳು ಕೂಡ ಅವರನ್ನು ಅರಸಿ ಬಂದಿವೆ. `ಬಸವಶ್ರೀ'ಯೊಂದಿಗೆ ಬಂದ ಒಂದು ಲಕ್ಷ ರೂಪಾಯಿಗಳನ್ನು ಕೌಠಾದಲ್ಲಿ ಆಸ್ಪತ್ರೆ ನಿರ್ಮಿಸಲು ವಿನಿಯೋಗಿಸಿದ್ದಾರೆ.

ಕೆರೆಯ ನೀರನು ಕೆರೆಗೆ ಚೆಲ್ಲುವ ಕಾಯಕದಲ್ಲಿ ನಿರತರಾಗಿರುವ `ಸ್ದಿದರಾಮ ಶರಣರು' ಸದ್ಯ ಬಸವಕಲ್ಯಾಣದ ಅನುಭವ ಮಂಟಪದ ದಾಸೋಹ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಕಾಮೆಂಟ್‌ಗಳು

Unknown ಹೇಳಿದ್ದಾರೆ…
ಬೆಲ್ದಾಳ ಶರಣರಿಗೆ
ಶರಣು ಶರಣಾರ್ಥಿಗಳು
Unknown ಹೇಳಿದ್ದಾರೆ…
ಬೆಲ್ದಾಳ ಶರಣರಿಗೆ
ಶರಣು ಶರಣಾರ್ಥಿಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಬಸವೇಶ್ವರ ಮತ್ತು ಅವನ ಕಾಲ