’೧೮೫೭ರ ಸಿಪಾಯಿದಂಗೆ’ ಮತ್ತು ’ಭಾಲ್ಕಿ ಪಿತೂರಿ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಸರಿಯಾಗಿ ೬೧ ವರ್ಷಗಳು ಪೂರ್ಣಗೊಂಡಿವೆ. ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೋರಾಟ ಆರಂಭವಾಗಿ ೧೫೧ ವರ್ಷಗಳಾಗಿವೆ. ಸತತ ೯೦ ವರ್ಷಗಳ ಕಾಲ ನಡೆದ ಹೋರಾಟದಲ್ಲಿ ಭಾಗಿಯಾದ ಬಹುತೇಕರು `ಕಾಲ'ನ ಮನೆ ಸೇರಿದ್ದಾರೆ. ಹೊರಾಟ ಮತ್ತು ಅದರ ನೆನಪುಗಳು ಇತಿಹಾಸದ ಪುಟ ಸೇರಿವೆ. ಹಲವು ಪ್ರಸಂಗ- ಘಟನೆಗಳು ಪುಸ್ತಕದ ಪುಟಗಳಲ್ಲಿ ಮರೆತು ಹೋಗಿವೆ. ಮರೆತು ಹೋದ, ಆದರೆ, ಮರೆಯಬಾರದ ಒಂದು ಘಟನೆಯ ವಿವರ ಇಲ್ಲಿದೆ- **** ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಬೀದರ್ ಜಿಲ್ಲೆಯ ಭಾಲ್ಕಿಗೂ ಏನು ಸಂಬಂಧ? ವಿದೇಶಿ ವಿದ್ವಾಂಸರು `ಸಿಪಾಯಿ ದಂಗೆ' ಗುರುತಿಸುವ `ಮೊದಲ ಸ್ವಾತಂತ್ರ್ಯ ಸಂಗ್ರಾಮ' ಆರಂಭವಾದದ್ದು ಸರಿಯಾಗಿ ೧೫೧ ವರ್ಷಗಳ ಹಿಂದೆ. ಸತತ ಹತ್ತು ವರ್ಷಗಳ ಕಾಲ ದೇಶದ ವಿವಿಧ ಕಡೆಗಳಲ್ಲಿ ನಡೆದ ದಂಗೆ- ಪಿತೂರಿಗಳು ಕಂಪೆನಿ ಸರ್ಕಾರವನ್ನು ಕಂಗೆಡಿಸ್ದಿದವು. ಸರಿಯಾಗಿ ಹತ್ತು ವರ್ಷಗಳ ನಂತರ `ಭಾಲ್ಕಿ ಪಿತೂರಿ'ಯನ್ನು ವಿಫಲಗೊಳಿಸುವ ಮೂಲಕ ಬ್ರಿಟಿಷರು ಮೊದಲ ಹೋರಾಟವನ್ನು ಸಂಪೂರ್ಣವಾಗಿ ಕೊನೆಗೊಳಿಸುವಲ್ಲಿ ಯಶಸ್ವಿಯಾದರು. ಆ ಕಥೆಯ ಕೆಲವು ಐತಿಹಾಸಿಕ ವಿವರಗಳು ಇಲ್ಲಿವೆ- ೧೮೫೭ಮೇ ೧೦ರಂದು ಮೀರತ್‌ನಲ್ಲಿ ಮತ್ತು ಅಂಬಾಲಾಗಳ ಬ್ರಿಟಿಷ್ ಸೇನಾ ಪಡೆಯಲ್ಲಿ ಆರಂಭವಾದ ದಂಗೆಯು ರಾಷ್ಟ್ರದ ಹಲವೆಡೆಗಳಲ್ಲಿ ಪಸರಿಸಿತು. ಭಾರತೀಯರು ನಡೆಸಿದ ೧೮೫೭ರ ಹೋರಾಟದ ತಕ್ಷಣದ ಕಾರಣ ಬಂದೂಕಿನ ತೋಟಾಗಳಿಗೆ `ಹಂದಿ ಮತ್ತು ಗೋವಿನ ಕೊಬ್ಬು ಸವರಿದ್ದಾರೆ' ಎಂಬ ವದಂತಿ. ಸೈನಿಕರಲ್ಲಿ ಕ್ಷಿಪ್ರಗತಿಯಲ್ಲಿ ಹರಡಿದ ಈ ಹೋರಾಟವನ್ನು ತಡೆಯುವಲ್ಲಿ ಬ್ರಿಟಿಷ್ ಅಧಿಕಾರಿಗಳು ಯಶಸ್ವಿಯಾದರು. `ಸಿಪಾಯಿ ದಂಗೆ' ಎಂದು ಕರೆಯಲಾಗುವ ೧೮೫೭ರ ಹೋರಾಟ ಕೇವಲ ಸೈನಿಕರ ಹಠಾತ್ ಪ್ರತಿಕ್ರಿಯೆ ಆಗಿರಲಿಲ್ಲ. ಅದಕ್ಕೆ ಪೂರ್ವಭಾವಿಯಾಗಿ ಬ್ರಿಟಿಷ್ ದುರಾಡಳಿತದ ವಿರುದ್ಧ ಉತ್ತರ ಭಾರತ ತಾತ್ಯಾಟೋಪಿ ಮತ್ತು ಪುಣೆಯ ನಾನಾ ಸಾಹೇಬ್ ವ್ಯವಸ್ಥಿತ ಯೋಜನೆ ರೂಪಿಸಿದ್ದರು. ಅದು, ಸೈನಿಕರ ರೂಪದಲ್ಲಿ ಹಠಾತ್ ಆಗಿ ಸಿಡಿದದ್ದರಿಂದ `ಯೋಜನೆ' ಬುಡಮೇಲಾಯಿತು. ಆದರೆ, ಬ್ರಿಟಿಷರ ವಿರುದ್ಧ ಸಣ್ಣ ಪುಟ್ಟ ಸಂಸ್ಥಾನಗಳನ್ನು ಒಂದುಗೂಡಿಸುವಲ್ಲಿ ಪೇಶ್ವೆ ನಾನಾ ಸಾಹೇಬ್ ಮತ್ತು ತಾತ್ಯಾಟೋಪಿಯ ಕನಸು ಮಾತ್ರ ಜೀವಂತವಾಗಿ ಉಳಿದಿತ್ತು. ನಾನಾ ಸಾಹೇಬ್ರ ಅಣ್ಣನ ಮಗ ರಾವ್ ಸಾಹೇಬ್ ಅಂತಹುದೇ ಸಂಚಿನ ಭಾಗವಾಗಿ ೧೮೬೨ರಲ್ಲಿ ತನ್ನ ಸಹಚರರೊಡನೆ ಹೈದರಾಬಾದ್‌ಗೆ ಬರುತ್ತಾನೆ. ಆಗ, ಸುಳಿವು ಅರಿತ ಅವನನ್ನು ಬೆನ್ನಟ್ಟುತ್ತಾರೆ. ತಲೆ ತಪ್ಪಿಸಿಕೊಂಡು ಓಡಿ ಹೋದರೂ ಆಗ್ರಾದಲ್ಲಿ ಸೆರೆ ಸಿಕ್ಕುತ್ತಾನೆ. ಬ್ರಿಟಿಷರು ಅವನನ್ನು ಗಲ್ಲಿಗೆ ಹಾಕುತ್ತಾರೆ. ಕೆಲವರ್ಷ ಹೈದರಾಬಾದ್‌ನಲ್ಲಿ ಗುಪ್ತವಾಗಿ ಉಳಿಯುವ ರಾವ್ಸಾಹೇಬ್‌ನ ಬೆಂಬಲಿಗ ರಾಮರಾವ್ ತನ್ನ ಸಹಚರರೊಂದಿಗೆ ೧೮೬೭ರಲ್ಲಿ ಬೀದರ್‌ಗೆ ಬರುತ್ತಾನೆ. ಬೀದರ್ ತಾಲ್ಲೂಕಿನ ಅಷ್ಟಿ ಗ್ರಾಮದಲ್ಲಿ `ಭಗವಾ ಧ್ವಜ' ಆರೋಹಣ ನಡೆಸುತ್ತಾನೆ. ಆಗ, ದೇಶಮುಖರು, ಪಟೇಲರು ಬ್ರಿಟಿಷರ ವಿರ್ದುದ ಒಂದಾಗುವಂತೆ ಸತಾರಾದ ಅರಸ ನೀಡಿದ ಪತ್ರ ಅವನ ಜೊತೆಗಿರುತ್ತದೆ. ನಂತರ ಮರಾಠ ಮತ್ತು ನಿಜಾಂ ಆಡಳಿತ ಅಂಚಿನಲ್ಲಿರುವ ಭಾಲ್ಕಿಯಲ್ಲಿ ಯೋಜನೆ ರೂಪಿಸುವುದಕ್ಕಾಗಿ ಸಭೆ ಸೇರುತ್ತಾರೆ. ಅವರಲ್ಲಿ ಭೀಮರಾವ್, ಬಾಲಕೃಷ್ಣ ಮತ್ತು ವಿಠೋಬಾ ಪ್ರಮುಖರು. ಅದರ ಸುಳಿವು ದೊರೆತ ಬ್ರಿಟಿಷ್ ಅಧಿಕಾರಿಗಳು ಪಿತೂರಿಯನ್ನು ಭೇದಿಸಿ ಎಲ್ಲರನ್ನೂ ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ. ಆ ಘಟನೆಯನ್ನೇ `ಭಾಲ್ಕಿ ಪಿತೂರಿ' ಎಂದು ದಾಖಲಿಸಲಾಗಿದೆ. ಆ ಘಟನೆಯೇ ೧೮೫೭ರ `ಸಿಪಾಯಿ ದಂಗೆ'ಯ ಕೊನೆಯ `ಪಿತೂರಿ' ಎಂದು ಕರ್ನಾಟಕ ಸರ್ಕಾರ ೧೯೭೭ರಲ್ಲಿ ಪ್ರಕಟಿಸಿ ಬೀದರ್ ಜಿಲ್ಲಾ ಗ್ಯಾಸೆಟಿಯರ್‌ನಲ್ಲಿ ದಾಖಲಾಗಿದೆ. ಹೀಗೆ ೧೮೫೭ರ `ಪ್ರಥಮ ಸ್ವಾತಂತ್ರ್ಯ ಸಂಗ್ರಾಮ'ದ ಕೊನೆಗೊಂಡದ್ದು ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ. ಅದು ೧೮೬೭ರಲ್ಲಿ. `ಭಾಲ್ಕಿ ಪಿತೂರಿ' ಎಂದೇ ಇತಿಹಾಸದ ಪುಟದಲ್ಲಿ ಅದನ್ನು ದಾಖಲಿಸಲಾಗಿದೆ. ೧೮೫೭ರ ಘಟನೆಯನ್ನು ಬ್ರಿಟಿಷ್ ಮತ್ತು ಪಾಶ್ಚಾತ್ಯ ಇತಿಹಾಸ ತಜ್ಞರು `ಸಿಪಾಯಿ ದಂಗೆ' ಎಂದು ದಾಖಲಿಸಿದರೆ, ಭಾರತೀಯ ವಿದ್ವಾಂಸರು `ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ಕರೆಯುತ್ತಾರೆ. ಹಾಗೆಯೇ, ಭಾಲ್ಕಿಯ ಘಟನೆ ಕೂಡ ಬ್ರಿಟಿಷರು ಬರೆದ `ಇತಿಹಾಸ'ದಲ್ಲಿ `ಪಿತೂರಿ' ಎಂದು ದಾಖಲಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಬಸವೇಶ್ವರ ಮತ್ತು ಅವನ ಕಾಲ