ಪಾಲಿಟಿಕ್ಸ್ ಅಂದ್ರ ಗ್ಯಾಂಬ್ಲಿಂಗ್ ಇದ್ಹಾಂಗ- ಮೆರಾಜುದ್ದೀನ್‌ ಪಟೇಲ್‌

ಮೆರಾಜುದ್ದೀನ್‌ ನಿಜವಾದ ಅರ್ಥದಲ್ಲಿ ಅಪರೂಪದ ರಾಜಕಾರಣಿ. ಅಂತಹ ಚಾಣಾಕ್ಷ್ಯ ರಾಜಕಾರಣಿಗಳು ಬಹಳಷ್ಟು ಜನ ಸಿಗುವುದಿಲ್ಲ. ರಾಜಕಾರಣದ ನಿತ್ಯ ಜಂಜಾಟದಲ್ಲಿ ಇದ್ದರೂ ತನ್ನ ಜನಪರ ನಿಲುವು ಉಳಿಸಿಕೊಂಡಿದ್ದ ಮೆರಾಜ್‌ ಅವರು ಬಹಳಷ್ಟು ರಾಜಕಾರಣಿಗಳ ಹಾಗೆ ತೋರಿಕೆಗಾಗಿ ಬಡಜನರ ಪರವಾಗಿ ನಿಂತವರಲ್ಲ. ನಿಜವಾದ ಕಾಳಜಿ ಅವರ ಮಾತು ಮತ್ತು ನಡತೆಯಲ್ಲಿ ವ್ಯಕ್ತವಾಗುತ್ತಿತ್ತು. ಕಳೆದ ವಿಧಾನಸಭಾ (೨೦೦೮) ಚುನಾವಣೆ ಸಂದರ್ಭದಲ್ಲಿ ನಡೆಸಿದ ಸಂದರ್ಶನ ಯಥಾವತ್ತಾಗಿ ಹಾಕುತ್ತಿದ್ದೇನೆ. ಅವರ ವ್ಯಕ್ತಿತ್ವ ಬಿಂಬಿಸುತ್ತದೆ ಎನ್ನುವ ಕಾರಣಕ್ಕಾಗಿ ಇದು ನನಗೆ ಪ್ರಿಯವಾದ ಬರವಣಿಗೆಗಳಲ್ಲಿ ಒಂದು.
*****


`ರಾಜಕೀಯದಾಗ ಯಾವಾಗ ಏನು ಬೇಕಾದರೂ ಆಗಬಹುದು. ಪಾಲಿಟಿಕ್ಸ್ (ರಾಜಕೀಯ), ಅಗ್ರಿಕಲ್ಚರ್ (ಕೃಷಿ) ಮತ್ತು ಗ್ಯಾಂಬ್ಲಿಂಗ್ (ಜೂಜು) ಇವು ಮೂರು ಒಂದೇ ಕೆಟಗರಿಗೆ ಸೇರಿದವು. ಹೀಗೇ ಅಂತ ಖಚಿತ ಹೇಳಲಿಕ್ಕೆ ಆಗುವುದಿಲ್ಲ'
ಇದು ಜೆಡಿ(ಎಸ್) ರಾಜ್ಯ ಘಟಕದ ಅಧ್ಯಕ್ಷ ಮೆರಾಜ್ದುದೀನ್ ಪಟೇಲ್ ಅವರ ಖಚಿತ ಅಭಿಪ್ರಾಯ.
ಪಕ್ಷದ ಹಿರಿಯ ನಾಯಕರಿಗೆ ಆದ `ಮೋಸ' ನಿಮಗೆ ಆಗಲಿಕ್ಕಿಲ್ಲವೇ? ಎಂಬ ಪ್ರಶ್ನೆಗೆ `ನಿನ್ನೆ ಸಿದ್ಧರಾಮಯ್ಯ, ಪಿ.ಜಿ.ಆರ್.ಸಿಂಧ್ಯಾ, ಎಂ.ಪಿ.ಪ್ರಕಾಶ್ಗೆ ಆದ್ದದು ನಾಳೆ ನನಗೂ ಆಗಬಹುದು. ಯಾವಾಗ ಯಾರಿಗೆ ಏನು ಆಗ್ತದ ಹೇಳ್ಲಿಕ್ಕೆ ಆಗುವುದಿಲ್ಲ, ಹೇಳಲಿಕ್ಕೆ ಬರುವುದಿಲ್ಲ. ಆದರೆ, ಮುಂದೊಂದು ದಿನ ಒಳ್ಳೆಯದಾಗಬಹುದು ಅಂತ ಅಂದಾಜು ಇಟ್ಟುಕೊಂಡು ಕೆಲಸ ಮಾಡುತ್ತ ಹೋಗೋದು. ನಸೀಬ್ ಕೆಟ್ಟ ಇ್ದದರ ಏನು ಮಾಡಲಿಕ್ಕೆ ಆಗ್ತದೆ' ಎಂದರು. ಹುಮನಾಬಾದ್ನ ಅವರ ನಿವಾಸದಲ್ಲಿ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ-

`ಉಪಮುಖ್ಯಮಂತ್ರಿ' ಅಂತ ಪಕ್ಷ ಮೂಗಿಗೆ ತುಪ್ಪ ಸವರ್ದಿದು?
ನಾ ಆಸಿ ಇಟ್ಟಿರಲಿಲ್ಲ. ಉಪಮುಖ್ಯಮಂತ್ರಿ ಮಾಡ್ತಿನಿ ಅಂತ `ಅವರು' ಹೇಳಿಲ್ಲ. ಮಾಡ್ರಿ ಅಂತ ನಾನು ಕೇಳಿಲ್ಲ. ಪಕ್ಷದ ಹಿರಿಯ ಮುಖಂಡರು ಮಾಡಿದರೆ ಒಳ್ಳೆಯದು ಅಂತ ಅಭಿಪ್ರಾಯ ಹೇಳ್ದಿದರು. ಆಗಬಹುದಿತ್ತು, ಆಗಲಿಲ್ಲ. ಕೊಡ್ಲಿಲ್ಲ ಅಂದರ ಕೇಳಲಿಕ್ಕೆ ಹೋಗುವುದಿಲ್ಲ. ಏನು ಕೊಟ್ಟಾರ ಅದನ್ನ ಶ್ರದ್ಧೆಯಿಂದ ಮಾಡ್ತಿನಿ.

`ಅಪ್ಪ- ಮಕ್ಕಳ ಪಾರ್ಟಿಯಲ್ಲಿ ನಿಮಗೇನು ಕೆಲಸ?
ಎಲ್ಲ ಪಕ್ಷಗಳೂ ಫ್ಯಾಮಿಲಿ ಪಾರ್ಟಿ ಆಗಿವೆ. ಕಾಂಗ್ರೆಸ್ ಮೊದಲ ಅತ್ತಿ-ಸೊಸಿ ಪಾರ್ಟಿ, ಈಗ ಅವ್ವ-ಮಕ್ಕಳ ಪಾರ್ಟಿ ಆಗಿಲ್ಲವೇ? ಒರಿಸ್ಸಾದಾಗ ತಂದಿ ಸತ್ತ ಮೇಲೆ ಮಗ ಸಿಎಂ ಆಗಲಿಲ್ಲವೇ? ಪಾರ್ಟಿ ಲೀಡ್ ಮಾಡುವವರ ಹತ್ತಿರ ಹತೋಡಿ (ಸುತ್ತಿಗೆ) ಇರ್ತದ. ಅದರಲ್ಲಿ ಏನು ತಪ್ಪಿದೆ? ಪಾರ್ಟಿಯೊಳಗ ನನಗ ಫುಲ್ ಪವರ್ ಕೊಟ್ಟಾರ. ಮೀಟಿಂಗ್ ಕರದಾಗ ನನ್ನ ಅಭಿಪ್ರಾಯ ಕೇಳತಾರ. `ಅವರು' ನನಗ ನಾವು ಹೇಳಿದಾಂಗ ಮಾಡರಿ ಅಂತ ಆರ್ಡರ್ ಮಾಡಿಲ್ಲ. ಬದಲಿಗೆ ನಿಮ್ಮ ಪವರ್ ನೀವು ಉಪಯೋಗಿಸರಿ ಅಂತ ಹೇಳಿದ್ದಾರೆ.

`ನಾಮಕಾ ವಾಸ್ತೆ ಅಧ್ಯಕ್ಷ' ಅಂತ ಕರೆಯುವುದರಿಂದ ನಿಮಗೆ ಏನೂ ಅನ್ನಿಸಲ್ಲವೇ?
ನಾನ್ಯಾಕೆ ನಾಮಕಾ ವಾಸ್ತೆ ಪ್ರೆಸಿಡೆಂಟ್ ಆಗಲಿ? ಪಕ್ಷದ ಬೈಲಾದಾಗ ಇರುವ ಎಲ್ಲ ಅಧಿಕಾರ ನನ್ನ ಹತ್ತಿರ ಇವೆ. ನಾನು ಹೇಳಿದ 90 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಇಡೀ ಹೈದರಾಬಾದ್ ಕರ್ನಾಟಕದ ಟಿಕೆಟ್ ಡಿಸೈಡ್ ಮಾಡ್ದಿದು ನಾನೇ. ಅಡ್ವಾನ್ಸ್ ಆಗಿ ಬ್ಲಾಂಕ್ (ಖಾಲಿ) `ಬಿ ಫಾರಂ' ತಗೊಂಡು ಬಂದಿದ್ದೆ. ಕಾಂಗ್ರೆಸ್‌ನ್ಯಾಗ ಅಭ್ಯರ್ಥಿ ಹೆಸರು ಬರೆದು ಸೋನಿಯಾಗಾಂಧಿ ಸಹಿ ಮಾಡುವ ವರೆಗೆ ಮುಟ್ಟಲಿಕ್ಕೆ ಸಹಿತ ಕೊಡುವುದಿಲ್ಲ. ಅವರು ನಾಮಕಾವಾಸ್ತೆ ನಾನ್ಯಾಕೆ? ನಾನು ಫುಲ್ ಅಂಡ್ ಪವರ್‌ಫುಲ್ ಪ್ರೆಸಿಡೆಂಟ್.

ಅಲ್ಪ ಸಂಖ್ಯಾತರನ್ನು ಓಲೈಸುವುದಕ್ಕೆ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ಅದಕ್ಕೆ ನೀವು `ಹರಕೆಯ ಕುರಿ' ಆಗುತ್ತಿಲ್ಲವೇ?
ಹಂಗೇನು ಇಲ್ಲ. ನಾನೇನು ಸ್ಕೇಪ್‌ಗೋಟ್ ಆಗಿಲ್ಲ, ಆಗುತ್ತಿಲ್ಲ. ಪ್ರತಿಯೊಂದು ಪಾರ್ಟಿಗೂ ತಮ್ಮದೇ ಲೆಕ್ಕಾಚಾರ ಇದ್ದೇ ಇರುತ್ತದೆ. ಕಾಂಗ್ರೆಸ್‌ನವರು ದಲಿತರ ಓಟಿನ ಮೇಲೆ ಕಣ್ಣಿಟ್ಟೇ ಖರ್ಗೆ ಅವರನ್ನು ಅಧ್ಯಕ್ಷ ಮಾಡಿದ್ದಾರೆ. ಗೌಡರ ಮತ್ತು ಒಕ್ಕಲಿಗರ ಓಟಿಗಾಗಿ ಸದಾನಂದಗೌಡರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದೆ. ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಿದ್ದೇವೆ ಅಂತ ತೋರಿಸಿಕೊಳ್ಳುವುದಕ್ಕಾಗಿಯೇ ನನ್ನನ್ನ ಅಧ್ಯಕ್ಷ ಮಾಡಲಾಗಿದೆ. ಹಾಗೆ ಮಾಡಿರುವುದರಿಂದ ಅಲ್ಪಸಂಖ್ಯಾತರ ಓಟುಗಳು ನಮ್ಮ ಪಕ್ಷಕ್ಕೆ ಬರಲಿ ಅಂತ ಲೆಕ್ಕಾಚಾರ ಮಾಡುವುದರಲ್ಲಿ ತಪ್ಪೇನಿದೆ? ರಾಜಕೀಯದಾಗ ಇದೆಲ್ಲ ಮಾಮೂಲು.

`ಬಳಸಿ'ಕೊಳ್ಳುವುದರಿಂದ ಅಲ್ಪ ಸಂಖ್ಯಾತರಿಗೆ ಅನ್ಯಾಯ ಮಾಡಿದ ಹಾಗಲ್ಲವೇ?
ಅದೆಲ್ಲ ಏನೂ ಇಲ್ಲ. ನನ್ನನ್ನ ಅಧ್ಯಕ್ಷ ಮಾಡಿದ್ದರಿಂದಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ಬಹುಮತ ಬಂತು. ನಗರ ಪ್ರದೇಶದಲ್ಲಿ ಇರುವ ಅಲ್ಪಸಂಖ್ಯಾತರೆಲ್ಲ ನಮ್ಮ ಪಕ್ಷವನ್ನು ಬೆಂಬಲಿಸಿದರು. ನಾನು ಅಧ್ಯಕ್ಷ ಇದ್ದುದರಿಂದ 16 ಜನ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿಸಿದೆ. ಅದರಲ್ಲಿ 10 ಮಂದಿ ಗೆಲ್ಲುತ್ತಾರೆ. ಕಾಂಗ್ರೆಸ್‌ನವರೇ ಅಲ್ಪ ಸಂಖ್ಯಾತರಿಗೆ ಮೋಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಗೆಲ್ಲುವ ಕಡೆಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿಲ್ಲ. ಗೆಲ್ಲಲಿ- ಸೋಲಲಿ ನಾವು ಸಾಮಾಜಿಕ ನ್ಯಾಯ ಕಲ್ಪಿಸ್ದಿದೇವೆ. ರಾಜಕೀಯದಲ್ಲಿ ಎಲ್ಲ ಸಮುದಾಯದವರಿಗೆ ಅಧಿಕಾರ ಹಂಚಿಕೆ ಬಹಳ ಮುಖ್ಯ.

ಕ್ಷೇತ್ರ ಅಥವಾ ರಾಜ್ಯದಾದ್ಯಂತ ಪ್ರಚಾರ ಯಾವುದಕ್ಕೆ ನಿಮ್ಮ ಆದ್ಯತೆ?
ರಾಜ್ಯ, ಜಿಲ್ಲೆ ಮತ್ತು ಕ್ಷೇತ್ರ ಎಲ್ಲದಕ್ಕೂ ಆದ್ಯತೆ ನೀಡುತ್ತೇನೆ. ರಾಜ್ಯದಾದ್ಯಂತ ಅಲ್ಪಸಂಖ್ಯಾತರು ಓಟುಗಳು ನಮಗೇ ಬರುತ್ತವೆ. ನಾನು ಕೇವಲ ನನ್ನ ಕ್ಷೇತ್ರದಲ್ಲಿ ಮಾತ್ರ ಉಳಿದು ಪ್ರಚಾರ ಮಾಡುತ್ತಿಲ್ಲ.

ಅಂದರೆ, ನೀವು ಗೆಲ್ಲುವುದು ನಿಮಗೆ ಬೇಕಿಲ್ಲವೇ?
ಹಾಗಂತ ಏನು ಇಲ್ಲ. ನಾನು ಗೆಲ್ಲುತ್ತೇನೆ. ಅಷ್ಟೇ ಅಲ್ಲ, ಗೆದ್ದೇ ಗೆಲ್ಲುತ್ತೇನೆ. ಎಲೆಕ್ಷನ್ ಘೋಷಣೆ ಆಗುವುದಕ್ಕಿಂತ ಮುಂಚೆಯೇ ಎಲ್ಲ ಪ್ರಮುಖರು ಮತ್ತು ಕಾರ್ಯಕರ್ತರನ್ನು ಕರೆಯಿಸಿ ಜವಾಬ್ದಾರಿ ವಹಿಸಿದ್ದೇನೆ. ಪ್ರತಿಯೊಬ್ಬರನ್ನೂ ನಾನೇ ಸ್ವತಃ ಹೋಗಿ ಭೇಟಿ ಮಾಡಿ ಹೇಳಿ ಬಂದಿದ್ದೇನೆ. ಈಗ ರಾಜ್ಯದಾದ್ಯಂತ ಓಡಾಡುತ್ತಿರುವೆ. ನಿತ್ಯವೂ ಕ್ಷೇತ್ರದ ಜನರ ಜೊತೆಗೆ ಸಂಪರ್ಕದಲ್ಲಿರುವೆ.

ನಿಮ್ಮ ಮನೆಯಲ್ಲಿಯೇ `ಬಂಡಾಯ' ಇದೆ. ರಾಜ್ಯ ಹೇಗೆ ನಿಭಾಯಿಸುತ್ತೀರಿ?
ಎಲ್ಲ ಕಡೆಯಲ್ಲಿ ಬಂಡಾಯ- ವಿರೋಧ- ಭಿನ್ನಾಭಿಪ್ರಾಯ ಇರುತ್ತದೆ. ಯಾರ ಮನೆಯಲ್ಲಿ ಇಲ್ಲ? ಅದಕ್ಕೆ ಅನೇಕ ಉದಾಹರಣೆ ಇವೆ. ಇಂದಿರಾಗಾಂಧಿ- ಮನೇಕಾಗಾಂಧಿ ಪರಸ್ಪರ ವಿರುದ್ಧ ಇರಲಿಲ್ಲವೇ? ಈಗ ಬಂಗಾರಪ್ಪ ಮತ್ತು ಅವರ ಮಗನ ನಡುವೆ ಪೈಪೋಟಿ ಇಲ್ಲವೇ? ಅದರಲ್ಲಿ ವಿಶೇಷವೇನಿಲ್ಲ. ನನ್ನ ತಮ್ಮ ನಸೀಮ್ ಪಟೇಲ್ ಪಕ್ಷದ ಕಾರ್ಯಕರ್ತ ಆಗಿ ಕೆಲಸ ಮಾಡಿದ್ದಾನೆ. ಅದಕ್ಕಾಗಿ ಜಿಲ್ಲಾ ಪಂಚಾಯತ್ ಸ್ಥಾನ ನೀಡಲಾಗಿದೆ. ನನಗೆ ಲಾಲ್‌ ಖಿಲೆ (ಕೆಂಪುಕೋಟೆ) ಬೇಕು ಅಂದ್ರೆ ಕೊಡಲಿಕ್ಕೆ ಆಗುತ್ತದೆಯೇ? ಬೀದರ್ ದಕ್ಷಿಣ ಕ್ಷೇತ್ರದಿಂದ ಟಿಕೆಟ್ ಕೊಡುವಂತೆ ಕೇಳಿದ. ಸಾಮಾಜಿಕ ನ್ಯಾಯದ ಮೇಲೆ ಟಿಕೆಟ್ ಕೊಡಬೇಕಾಗುತ್ತದೆ. ಅದಾಗಿ ಒಂದೇ ಕುಟುಂಬ ಅಣ್ಣ- ತಮ್ಮಂದಿರಿಗೆ ಟಿಕೆಟ್ ನೀಡುವುದು ಸರಿಯಲ್ಲ ಎಂದು ತಿಳಿಸಿ ಹೇಳಿದೆ ಕೇಳಲಿಲ್ಲ. ಈಗ ಅವ ನನ್ನ ತಮ್ಮ ಅಲ್ಲ, ನಾನು ಅವನ ಅಣ್ಣ ಅಲ್ಲ.

ಒಂದು ಕುಟುಂಬದಲ್ಲಿ ಒಬ್ಬರಿಗೇ ಟಿಕೆಟ್ ಅಂತಿದೆಯಾ? ಕುಮಾರಸ್ವಾಮಿ- ರೇವಣ್ಣ ಅವರಿಗೆ ಕೊಟ್ಟಿಲ್ಲವೇ?
ಒಂದೇ ಟಿಕೆಟ್ ಅಂತೇನಿಲ್ಲ. ಅವರಿಬ್ಬರೂ ಒಂದೇ ಜಿಲ್ಲೆಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆಯೇ? ಹುಮನಾಬಾದ್ ಮತ್ತು ಬೀದರ್ ದಕ್ಷಿಣ ಕ್ಷೇತ್ರಗಳು ಪರಸ್ಪರ ಅಟ್ಯಾಚ್ಡ್ ಬಾತ್‌ರೂಮ್‌ ಇದ್ದ ಹಾಗಿವೆ. ಇಂತಲ್ಲಿ ಇಬ್ಬರಿಗೆ ಟಿಕೆಟ್ ನೀಡಿದರೆ ನೋಡಿ ಸುಮ್ಮನಿರಲಿಕ್ಕೆ ಜನ ಬುದ್ದು ಇದ್ದಾರೆಯೇ?

ನಿಮ್ಮ `ಬ್ರದರ್' ಇಲ್ಲದ ಚುನಾವಣೆ ಮಾಡುವುದರಿಂದ ನಿಮಗೆ ಮತ್ತು ಪಕ್ಷಕ್ಕೆ ಹಾನಿ ಆಗುವುದಿಲ್ಲವೇ?
ಮೈನಸ್ ಮೆರಾಜುದ್ದೀನ್‌ ನಸೀಮ್ ಇಜ್ ಝೀರೊ. ಅವ ಏನು ಲೀಡರ್ ಇದ್ದಾನ? ಜನರ ಹತ್ತಿರ ಹೋಗಿ ಪೋಸ್ಟ್‌ಮ್ಯಾನ್‌ ಕೆಲಸ ಮಾಡಂತ ಕಳಿಸಿದ್ರ ನಾನೇ ಪೋಸ್ಟ್‌ ಮಾಸ್ಟರ್‌ ಆಗ್ತಿನಿ ಅಂತಾನ. ಈಗ ಆನಿ ತಂದಾನ. ಅವ ಆನಿ ಬಿಟ್ಟು ಒಂಟಿ ತರಲಿ ನಮಗೇನು ಲಾಸ್ ಆಗ್ತದ? ಅವ ಅಪಕ್ವ ರಾಜಕಾರಣಿ ಇದ್ದಾನ. ಸೆಲ್ಫ್ ಡಿಸಿಜನ್ ಇಲ್ಲ. ಅದಕ್ಕ ಪಾಠ ಕಲೀತಾನ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಎಸ್.ಎಂ. ಪಂಡಿತ್

ಬಸವೇಶ್ವರ ಮತ್ತು ಅವನ ಕಾಲ