ಕವಿಗಳು ಮತ್ತು ತಾಜಮಹಲ್ಚೆಲುವಾಗಿರುವ ತಾಜ್ ಸಹಜವಾಗಿ ಭಾವನಾಜೀವಿಗಳನ್ನು ತನ್ನತ್ತ ಸೆಳೆಯುತ್ತಿದೆ. ಅದರ ಸುತ್ತ ಹರಡಿರುವ ಕತೆ- ದಂತಕತೆಗಳು ಕೂಡ ಅದರ ಸೌಂದರ್ಯವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿವೆ. ತಾಜ್ ಜೊತೆಗೆ ಕವಿಗಳು, ಕಲಾವಿದರು, ಪ್ರೇಮಿಗಳು ಮತ್ತು ರಸಿಕರಿಗೆ ಅತ್ಯಂತ ಭಾವನಾತ್ಮಕ ಸಂಬಂಧ. ಪ್ರತಿಯೊಬ್ಬ ಕವಿಯೂ ಒಂದಲ್ಲ ಒಂದು ಹಂತದಲ್ಲಿ ತಾಜ್ ಬಗ್ಗೆ ಪ್ರೀತಿ- ಒಲವು ತೋರಿಸಿರುತ್ತಾನೆ. ಆ ಒಲವು ಕೇವಲ ರಮ್ಯವಾದ ಚಿತ್ರಣದಲ್ಲಿ ಕೊನೆಗೊಂಡಿರಬೇಕೆಂದೆನೂ ಇಲ್ಲ. ತಾಜ್ ಕುರಿತು ಹಲವು ವಿಭಿನ್ನ ನೋಟ- ದೃಷ್ಟಿಕೋನಗಳ ಕವಿತೆಗಳಿವೆ. ಕನ್ನಡ ಮತ್ತು ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಹಲವು ಕವಿಗಳ 'ಪ್ರೇಮಾರಾಧನೆ'ಯ ಸಂಕೇತವಾಗಿ ತಾಜ್ ಚಿತ್ರಿತವಾಗಿದೆ.
ರವೀಂದ್ರನಾಥ್ ಠಾಕೂರ್ `ಕಾಲದ ಕೆನ್ನೆಯ ಮೇಲಿನ ಮುತ್ತಿನ ಹನಿ' ಎಂದು ತಾಜ್ ಬಗ್ಗೆ ಬರೆದರೆ ಇಂಗ್ಲಿಷ್ ಕವಿ ಸರ್ ಎಡ್ವಿನ್ ಅರ್ನಾಲ್ಡ್‌ `ಸಾಮಾನ್ಯ ವಾಸ್ತುಶಿಲ್ಪದ ತುಣುಕಲ್ಲ. ಜೀವಂತ ಕಲ್ಲುಗಳ ಮೇಲೆ ಕೆತ್ತಿದ ಸಾಮ್ರಾಟನ ಪ್ರೇಮ-ಕನಸು' ಎಂದು ವ್ಯಾಖ್ಯಾನಿಸುತ್ತಾನೆ.
ಬೆಂದ್ರೆಯವರು `ಬೆಲೆ ಕಟ್ಟಬರದ ಈ ಪ್ರೇಮ ಸ್ಮಾರಕ ಕೊನೆಗೆ ಕಾಲಲೀಲೆಗೆ ಈಡೇ?' ಎಂದು ಪ್ರಶ್ನಿಸಿ `ಮಣ್ಣ ಪ್ರಕೃತಿಗೆ ಸದಾ ಮಣ್ಣ ಆಟವೆ ಸಾಜ/ಅಂದು ಕತೆಯಾದೀತು ಇಂದಿನದ್ಭುತ ತಾಜ;/ ಬಿಟ್ಟಾವು ಈ ಕಥಾಕಲ್ಪವೃಕ್ಷದ ಕೊನೆಗೆ ಪ್ರೇಮಸ್ಮಾರಕಕೆ ಸಾವಿರದ ಸಾವಿರ ಕವನ' ಎಂದು ಪ್ರೀತಿ- ಗೌರವ ಸೂಚಿಸುತ್ತಾರೆ.
ಮಲಯಾಳಿ ಕವಿ ಅಯ್ಯಪ್ಪ ಪಣಿಕ್ಕರ್ ತಮ್ಮ `ಆಗ್ರಾದಲ್ಲಿ ಚಳಿ' ಕವಿತೆಯಲ್ಲಿ `ಚಂದ್ರ ಶಿಲೆಯ ನೊರೆಗಳ ಸಾಲು ಗಟ್ಟಿಗೊಂಡು ಮುದುಡುವ/ ಮುಮ್ತಾಜಳ ಕಣ್ಣೀರನ್ನು ಅನಶ್ವರವಾಗಿಸಿದ ತಾಜು' ಎಂದು ಬರೆದರೆ, ಸಿದ್ದಯ್ಯ ಪುರಾಣಿಕರು `ಶಿಲೆಯ ಹಾಲಿಗೆ ಕಲೆಯ ಹೆಪ್ಪು ಹಾಕಿ ಕಡೆಯೆ ಕುಶಲತೆಯೆಂಬ ಕಡೆಗೋಲನಿಕ್ಕಿ ಹರಿದುದಾಕಡೆ ತಕ್ರ ಯಮುನೆಯಾಗಿ, ಮೆರೆದುದೀಕಡೆ ಬೆಣ್ಣೆ ತಾಜಮಹಲಾಗಿ' ಎಂದು ತಮ್ಮ ಕಲ್ಪನೆ ಹರಿಯ ಬಿಡುತ್ತಾರೆ.
ನೊಬೆಲ್ ಪುರಸ್ಕೃತ ಕವಿಗೆ ನೆರೂಡಗೆ ತಾಜಮಹಲ್ ನೋಡಬೇಕೆಂಬ ಮಹದಾಸೆ. ಎಡಪಂಥೀಯ ನೆರೂಡ ರಷ್ಯಾ-ಭಾರತ ಸಂಬಂಧದ ಮಧ್ಯವರ್ತಿಯಾಗಿ ದೆಹಲಿಗೆ ಆಗಮಿಸಿದಾಗ ಆಗಿನ ಪ್ರಧಾನಿ ನೆಹರೂಗೆ ತನ್ನ ಆಸೆ ವಿವರಿಸುತ್ತಾರೆ. ನೆಹರೂ ಅದಕ್ಕೆ ಒಪ್ಪುತ್ತಾರೆ. ಆದರೆ, ನೆರೂಡ ಭಾರತದಲ್ಲಿ ಇದ್ದಷ್ಟೂ ದಿನ ಅವರ ಚಲನವಲನ ಗಮನಿಸುವಂತೆ ಬೇಹುಗಾರರಿಗೆ ಸೂಚಿಸಿರುತ್ತಾರೆ. ಈ ವಿಷಯ ತಿಳಿದ ನೆರೂಡ ನೊಂದು ತಾಜ್‌ಗೆ ಭೇಟಿ ನೀಡುವ ತನ್ನ ಯೋಜನೆ ರದ್ದುಗೊಳಿಸಿ ರಷ್ಯಕ್ಕೆ ಮರಳುತ್ತಾರೆ. ತಾಜ್ ನೋಡಲಾಗದ ತಮ್ಮ ಹಳಹಳಿಕೆಯನ್ನು ನೆರೂಡ ತಮ್ಮ ಆತ್ಮಕತೆಯಲ್ಲಿ ದಾಖಲಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಬಸವೇಶ್ವರ ಮತ್ತು ಅವನ ಕಾಲ