ಸಾಂಸ್ಕೃತಿಕ ಚರಿತ್ರೆ ಕಟ್ಟಿಕೊಡುವ ವ್ಯಕ್ತಿಚಿತ್ರಗಳು
ಮಾತು ಮುಗಿದಿಲ್ಲ (ಲೇಖಕರ ಒಡನಾಟ) ಸಿದ್ಧಲಿಂಗ ಪಟ್ಟಣಶೆಟ್ಟಿ ಪುಟಗಳು ೨೪೦, ಬೆಲೆ ೨೪೦ ಅನನ್ಯ ಪ್ರಕಾಶನ, ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-೫೮೦೦೦೪ ಕವಿ ಮತ್ತು ಸೃಜನಶೀಲ ಅನುವಾದಕ ಎಂದು ಗುರುತಿಸಲಾಗುವ ಪಟ್ಟಣಶೆಟ್ಟಿ ಅವರು ’ಚಹಾದ ಜೋಡಿ ಚೂಡಾದ್ಹಾಂಗ’ ಅಂಕಣದ ಮೂಲಕ ಚಿರಪರಿಚಿತರು. ಹದಿನೆಂಟು ಕವನ ಸಂಕಲನ ಹಾಗೂ ಹದಿನೆಂಟು ಅನುವಾದಿತ ನಾಟಕಗಳನ್ನು ಪ್ರಕಟಿಸಿರುವ ಅವರ ೧೧ನೇ ಗದ್ಯ ಬರೆಹಗಳ ಸಂಕಲನವಿದು. ಉತ್ತರ ಕರ್ನಾಟಕದ ಆಡುಮಾತನ್ನು ಬಳಸಿ ಬರೆಯುವ ಅವರ ಗದ್ಯವು ಸಹಜ ಮಾತಿನ ಲಯವನ್ನು ವಿಸ್ತರಿಸಿ ಕವಿತೆಯಾಗಿ ಬಿಡಬಲ್ಲದು. ಸರಾಗವಾಗಿ ಓದಿಸಿಕೊಂಡು ಹೋಗುವ ಲವಲವಿಕೆಯ ಗದ್ಯ ಅವರದು. ದಟ್ಟ ನೆನಪಿನ ಓಣಿಯಲ್ಲಿ ಓಡಾಡುತ್ತ ಅಲ್ಲಿನ ವ್ಯಕ್ತಿ ವಿವರ, ಘಟನೆ- ಸಂಗತಿಗಳನ್ನು ಕರಾರುವಾಕ್ಕಾಗಿ ಪದಕ್ಕಿಳಿಸುವ ಕೌಶಲ ಪಟ್ಟಣಶೆಟ್ಟರಿಗೆ ಸಿದ್ಧಿಸಿದೆ. ಹಾಗೆ ದಾಖಲಿಸುವಾಗ ಅದರ ತಾಜಾತನ ಕಳೆದುಹೋಗದಂತೆ ಅವರು ಬರೆಯಬಲ್ಲರು. ಧಾರವಾಡ ಕೇಂದ್ರಿತ ಉತ್ತರ ಕರ್ನಾಟಕದ ಲೇಖಕ-ಕವಿಗಳ ಜೊತೆಗಿನ ಒಡನಾಟದ ಗಳಿಗೆಯನ್ನು ದಾಖಲಿಸುವ ’ಮಾತು ಮುಗಿದಿಲ್ಲ’ ಸಂಕಲನವು ಒಟ್ಟು ಹದಿನಾರು ಬರೆಹಗಳನ್ನು ಒಳಗೊಂಡಿದೆ. ಅದರಲ್ಲಿ ಎರಡು ಲೇಖನಗಳು ಬೇಂದ್ರೆಯವರನ್ನು ಕುರಿತವುಗಳಾಗಿದ್ದರೆ ಮತ್ತೆರಡು ಗಿರಡ್ಡಿ ಗೋವಿಂದರಾಜ ಅವರನ್ನು ಕುರಿತವು. ’ಸಂಕ್ರಮಣ’ ಸಾಹಿತ್ಯ ಪತ್ರಿಕೆ ಆರಂಭಿಸಿ ಸಾಹಿತ್ಯಕ-ಸಾಂಸ್ಕೃತಿಕ ಲೋಕದಲ್ಲಿ ಅದಕ್ಕೊಂದು ಛಾಪು ಮೂಡಿಸಲು ಕಾರಣರ...