ಛಾಯಾಗ್ರಾಹಕ ಅಲ್ಲ, ಫೋಟೊ ಎಂಜಿನಿಯರ್
ತನ್ನಲ್ಲಿರುವ ಅಪರೂಪದ ಕ್ಯಾಮರಾಗಳು ಮತ್ತು ಅವುಗಳಿಂದ ಕ್ಲಿಕ್ಕಿಸಿದ ಫೋಟೆಗಳಿಂದ ಬೆರಗುಗೊಳಿಸುವ ವ್ಯಕ್ತಿ ಗುಲಾಂ ಮುಂತಾಕ್. ಐತಿಹಾಸಿಕವಾಗಿ ಮಹತ್ವದ ನಗರವಾದರೂ ಸಮಕಾಲೀನವಾಗಿ `ಹಿಂದುಳಿದ' ಹಣೆಪಟ್ಟಿ ಕಟ್ಟಿಕೊಂಡ ಬೀದರ್‌ನಂತಹ ಪುಟ್ಟ ಪಟ್ಟಣದಲ್ಲಿ ಇರುವ ಅದ್ಭುತ ವ್ಯಕ್ತಿ. ಕ್ಯಾಮರಾ ಹುಚ್ಚಿನ ಈ ಛಾಯಾಗ್ರಾಹಕ ಜಗತ್ತಿನಲ್ಲಿಯೇ ಅತಿ ದೊಡ್ಡ ನೆಗೆಟಿವ್ ಒಡೆಯ. ಅವರ ಬಳಿ ಇರುವ ಎಂಟು ಅಡಿ ಅಗಲದ ನೆಗೆಟಿವ್ನಷ್ಟು ದೊಡ್ಡ ನೆಗೆಟಿವ್ ಜಗತ್ತಿನಾದ್ಯಂತ ಬೇರೆಲ್ಲಿಯೂ ಇಲ್ಲ. ನೆಹರೂ ಕಾಲದ ದೆಹಲಿಯ ಛಾಯಾಗ್ರಾಹಕ ಎ.ಆರ್.ದತ್ತಾ ಸಂದರ್ಶನವೊಂದರಲ್ಲಿ `ನನ್ನ ಹತ್ತಿರ ಇರುವ ಆರು ಅಡಿ ಅಗಲದ ನೆಗೆಟಿವ್ ಅತ್ಯಂತ ದೊಡ್ಡದು' ಎಂದು ತಿಳಿಸಿದ್ದರು. ಆದರೆ, ಮುಂತಾಕ್ ಬಳಿ ಅದಕ್ಕಿಂತ ಎರಡು ಅಡಿ ಹೆಚ್ಚು ಅಗಲವಾಗಿರುವ ನೆಗೆಟಿವ್ ಇದೆ. ಸಾಲಾಗಿ 400ಕ್ಕೂ ಹೆಚ್ಚು ಜನ ಕುಳಿತಾಗ ಕ್ಲಿಕ್ಕಿಸಿದ ಗ್ರೂಪ್ ಫೋಟೊ (ಸಮೂಹ ಚಿತ್ರ)ದಲ್ಲಿನ ಪ್ರತಿಯೊಬ್ಬರನ್ನೂ ನಿಚ್ಚಳವಾಗಿ ಕಾಣಿಸುವಂತೆ ಒಂದೇ ಕಾಲಕ್ಕೆ ಸೆರೆ ಹಿಡಿಯಬಲ್ಲರು ಮುಂತಾಕ್. ಆ ಚಿತ್ರದ ನೆಗೆಟಿವ್ನಿಂದ ಪ್ರತಿಯೊಬ್ಬ ವ್ಯಕ್ತಿಯ ಪ್ರತ್ಯೇಕ ಛಾಯಾಚಿತ್ರ ಪ್ರಕಟಿಸಬಹುದು. ಸಮೂಹದಲ್ಲಿರುವ ಎಲ್ಲರ ಮುಖದ ಮೇಲಿನ ನೆರಿಗೆಗಳು, ಹಣೆಯ ಮೇಲಿನ ಬೆವರ ಹನಿಯನ್ನೂ ಈ ಕ್ಯಾಮರಾ ದಾಖಲಿಸುತ್ತದೆ.ಕೇವಲ ಇವಷ್ಟೇ ಅಲ್ಲ. ಅಂತಹ ಹತ್ತು ಹಲವು ವೈಶಿಷ್ಟ್ಯಗಳ ಆಗರ ಈ ಮುಂತಾಕ್. ಪರಸ್ಪರ ಮುಖಾಮುಖಿಯಾಗಿರುವ ಮುಂಬೈನ ಗೇಟ್...