ಜೌಗು ನೆಲದಲ್ಲಿ ಬಂಪರ್‌ ಬೆಳೆ



ಕೇವಲ 15ವರ್ಷಗಳ ಹಿಂದೆ ಬೆಳೆ ಬೆಳೆಯಲು ಉಪಯುಕ್ತವಲ್ಲದ ಜೌಗು ಪ್ರದೇಶವಾಗಿದ್ದ ನೆಲ ಇಂದು ರಾಜ್ಯದಲ್ಲಿಯೇ ಅತಿ ಹೆಚ್ಚು ಕಡಲೆ ಇಳುವರಿ ತರುತ್ತಿದೆ. ಕಾರಂಜಾ ನದಿಗುಂಟ ಇರುವ ಕಾರಣಕ್ಕಾಗಿಯೇ ಭಾಲ್ಕಿ ತಾಲ್ಲೂಕಿನ ಕುರುಬಖೇಳಗಿಯ ಶೇಷಪ್ಪ ಬಿರಾದಾರ ಅವರಿಗೆ ಸೇರಿದ ಬೀಳು ಬಿಡಲಾಗಿತ್ತು. ಆಗಾಗ ಬರುವ ನೆರೆ ಮತ್ತು ಅತಿ ನೀರಿನ ಕಾರಣದಿಂದಾಗಿ ಬಿತ್ತಿ ಬೆಳೆಯಲು ಸಾಧ್ಯವಿಲ್ಲದ ಹೊಲವಾಗಿತ್ತು. ದನಕರುಗಳಿಗೆ ಮೇವಾದರೂ ಆಗಲಿ ಎನ್ನುವ ಕಾರಣಕ್ಕಾಗಿ ಆ ಹೊಲವನ್ನು ಬೀಳು ಬಿಡಲಾಗಿತ್ತು.
ಹರಿಯುತ್ತಿದ್ದ ಕಾರಂಜಾ ನದಿಗೆ ಅಡ್ಡಗಟ್ಟಿ ಜಲಾಶಯ ನಿರ್ಮಿಸಿದ ಮೇಲೆ ನದಿಯ ಹರಿವು ನಿಂತೇ ಹೋಯಿತು. ನದಿ ನೀರು ಬರುವುದು ನಿಂತ ಮೇಲೆ ಹೊಲಕ್ಕೆ ಜೀವ ಬಂತು. ಹಿಂದೆ ನದಿಯ ನೀರಿನಗುಂಟ ಬಂದಿದ್ದ ಮೆಕ್ಕಲು ಮಣ್ಣು ಹೊಲವನ್ನು ಫಲವತ್ತಾಗಿಸಿತ್ತು. ಅದೇ ಹೊಲದಲ್ಲಿ ಕೃಷಿ ಆರಂಭಿಸಲು ನಿರ್ಧರಿಸಿದರು ಶೇಷಪ್ಪ ಬಿರಾದಾರ.
ಕೆಲವು ವರ್ಷಗಳ ಸತತ ಪ್ರಯತ್ನದ ನಂತರ ಏನನ್ನೂ ಬೆಳೆಯಲು ಸಾಧ್ಯವಿಲ್ಲದ ಜಮೀನಿನಲ್ಲಿ ಸುತ್ತಲ ಹತ್ತು ಹಳ್ಳಿಯ ಯಾರೊಬ್ಬರ ಹೊಲದಲ್ಲಿಯೂ ಇರದಷ್ಟು ಪ್ರಮಾಣದ ಇಳುವರಿ ಬರಲಾರಂಭಿಸಿತು. ಬಿತ್ತಿದ ವಸ್ತು ಏನೇ ಆದರೂ ಬಂಪರ್ ಇಳುವರಿ ತರುವ ಅದೃಷ್ಟಶಾಲಿ ಹೊಲವಾಯಿತು.
ಮಳೆನೀರನ್ನೇ ಆಶ್ರಯಿಸಿ ಕೃಷಿ ಮಾಡುವುದನ್ನು ಮುಂದುವರೆಸಿದ ಶೇಷಪ್ಪ ಅವರು ಕೆಲ ವರ್ಷಗಳ ನಂತರ ಕಡಲೆ ಆ ನೆಲಕ್ಕೆ ಸೂಕ್ತ ಎಂದು ನಿರ್ಧರಿಸಿದರು. ಅದಾದ ಮೇಲೆ ಕಡಲೆಯ ಬೆಳೆಯು ಅವರಿಗೆ ಕೈತುಂಬ ಹಣ ಮಾತ್ರವಲ್ಲದೇ ಹೆಸರು, ಪ್ರಶಸ್ತಿ, ಕೀರ್ತಿ ತರಲಾರಂಭಿಸಿತು. ರಾಜ್ಯದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ಕಡಲೆ ಬೆಳೆಯುವುದಕ್ಕಾಗಿ ರಾಜ್ಯ ಸರ್ಕಾರ ನೀಡುವ ಕೃಷಿ ಪ್ರಶಸ್ತಿ ಈ ಹೊಲದಲ್ಲಿ ಬೆಳೆದ ಕಡಲೆಗೆ ಬಂದಿದೆ. 2004-05ರಲ್ಲಿ ಈ ಹೊಲದಲ್ಲಿಯೇ ಕೃಷಿ ಮಾಡಿದ್ದಕ್ಕಾಗಿ ಪ್ರಕಾಶ ಬಿರಾದರ ಕೃಷಿ ಪ್ರಶಸ್ತಿಗೆ ಭಾಜನರಾಗಿದ್ದರು. ಅದರ ನಂತರದ ವರ್ಷದಲ್ಲಿ ಅವರ ತಂದೆ ಶೇಷಪ್ಪ ಬಿರಾದಾರ ಅವರಿಗೂ 2005-06ನೇ ಸಾಲಿನ ಕಡಲೆ ಬೆಳೆಗಾಗಿ ಕೃಷಿ ಪ್ರಶಸ್ತಿ ಸಂದಿದೆ. ಒಂದೇ ಕುಟುಂಬಕ್ಕೆ ಸೇರಿದ ಇಬ್ಬರಿಗೆ ಕೃಷಿ ಪ್ರಶಸ್ತಿ ಬಂದಿರುವುದು ಅಪರೂಪ. ಅದರಲ್ಲೂ ಸತತ ಎರಡು ಬಾರಿ ಪ್ರಶಸ್ತಿ ಪಡೆದ ಉದಾಹರಣೆ ರಾಜ್ಯದಲ್ಲಿಯೇ ಮತ್ತೊಂದಿಲ್ಲ.
ರಾಜ್ಯ ಸರ್ಕಾರವು ಹೆಕ್ಟೇರ್‌ವಾರು ಅತಿ ಹೆಚ್ಚು ಇಳುವರಿ ಬರುವಂತೆ ಕೃಷಿ ಮಾಡುವ ರೈತರಿಗೆ ಕೃಷಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಪ್ರಶಸ್ತಿ ಪುರಸ್ಕೃತ ರೈತನಿಗೆ 30 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುತ್ತದೆ. ಪ್ರಕಾಶ ಬಿರಾದಾರ ಅವರಿಗೆ ಪ್ರಶಸ್ತಿ ಬಂದ ವರ್ಷದಲ್ಲಿ ಹೆಕ್ಟೇರ್‌ಗೆ 28 ಕ್ವಿಂಟಾಲ್ ಕಡಲೆ ಬೆಳೆಯಲಾಗಿದ್ದರೆ ಅವರ ತಂದೆ ಶೇಷಪ್ಪ ಅವರಿಗೆ ಪ್ರಶಸ್ತಿ ಬಂದ ವರ್ಷದ ಕಡಲೆಯ ಇಳುವರಿ ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿ ಹೆಕ್ಟೇರ್‌ಗೆ 33ಕ್ವಿಂಟಾಲ್ ಬೆಳೆ ಬಂದಿದೆ.
`ಕರ್ನಾಟಕ ರಾಜ್ಯ ಬೀಜ ನಿಗಮವು ಮಾರಾಟ ಮಾಡುವ ಅಣ್ಣಿಗೇರಿ ಫೌಂಡೇಶನ್ ತಳಿಯ ಬೀಜಗಳನ್ನೇ ಬಿತ್ತುತ್ತೇವೆ. ಆಗಾಗ ಸದಿ (ಕಳೆ) ತೆಗೆಸುತ್ತೇವೆ. ಗೊಬ್ಬರದ ಪ್ರಮಾಣ ಕೂಡ ಹೆಚ್ಚಿಗೆ ನೀಡುವುದಿಲ್ಲ. ಹುಳುಗಳ ನಿಯಂತ್ರಣಕ್ಕಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಸೂಚಿಸುವ ಕೀಟನಾಶಕಗಳನ್ನು ಬಳಸುತ್ತೇವೆ' ಎಂದು ಶೇಷಪ್ಪ ಬಿರಾದಾರ ಹೇಳುತ್ತಾರೆ.
`ಹೊಲದ ನಮಗಿರುವುದು ನಿಜವಾಗಿಯೂ ಪುಣ್ಯ ಸರ್. ನಮಗೆ ಒಳ್ಳೆ ಬೆಳೆ ಬರುತ್ತಿದೆ. ಅದರಿಂದ ಹಣ- ಹೆಸರು ಎರಡೂ ಬಂದಿದೆ. ಇದಕ್ಕೆಲ್ಲ ಭಾಲ್ಕಿ ತಾಲ್ಲೂಕಿನ ಮತ್ತು ಬೀದರ್ ಜಿಲ್ಲೆಯ ಕೃಷಿ ಅಧಿಕಾರಿಗಳ ಸಲಹೆ- ಸೂಚನೆಗಳೇ ಕಾರಣ. ಅವರ ಸಲಹೆಯಿಂದಲೇ ನಾವು ಒಳ್ಳೆಯ ಬೆಳೆ ತೆಗೆಯುವುದು ಸಾಧ್ಯವಾಗಿದೆ' ಎಂದು ಪ್ರಶಸ್ತಿ ಪಡೆದಿರುವ ಶೇಷಪ್ಪ ಬಿರಾದಾರ ಅವರ ಪುತ್ರ ಪ್ರಕಾಶ ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಸತತ ಎರಡು ವರ್ಷ ಅರಸಿ ಬಂದ ಪ್ರಶಸ್ತಿಯಿಂದ ತೃಪ್ತರಾಗಿರುವ ಬಿರಾದಾರ ಕುಟುಂಬ ಈ ಬಾರಿ ಅದೇ ಹೊಲದಲ್ಲಿ `ಕಾಬೂಲ್ ಚನಾ' ಎಂದು ಕರೆಯಲಾಗುವ ದೊಡ್ಡಗಾತ್ರದ ಬಿಳಿಬಣ್ಣದ ಕಡಲೆ ಬಿತ್ತಲಾಗಿದೆ. ಕಣ್ಮನ ತಣಿಸುವ ಹಸಿರು ಹೊಲದ ಮಧ್ಯೆ ಪ್ರತಿ ಗಿಡಕ್ಕೆ ಇರುವ ನೂರಾರು ಕಡಲೆ ಕಾಯಿಗಳು ಗಿಡದ ಸೊಬಗು ಹೆಚ್ಚಿಸಿವೆ. ಈ ವರ್ಷವೂ ಒಳ್ಳೆಯ ಇಳುವರಿ ನೀಡುವ `ಭರವಸೆ' ನೀಡುತ್ತಿವೆ.
ಚಿತ್ರ: ಟಿ.ಗೋಪಿಚಂದ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಬಸವೇಶ್ವರ ಮತ್ತು ಅವನ ಕಾಲ