ಅಂತಃಕರಣ ತಟ್ಟುವ ಆತ್ಮಗೀತ
ಕವಿಜೋಡಿಯ ಆತ್ಮಗೀತ (ಕಥಾಕಾವ್ಯ) ನಟರಾಜ್ ಹುಳಿಯಾರ್ ಪುಟ: ೨೩೮, ಬೆಲೆ: ೧೨೦ ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ ಅಂಚೆ, ವ್ಹಯಾ ಎಮ್ಮಿಗನೂರ, ಬಳ್ಳಾರಿ-೫೮೩೧೧೩ ದೂರವಾಣಿ: ೮೮೮೦೦೮೭೨೩೫ ’ಕವಿ’ಯೇ ಕತೆಯಾಗುವುದು, ಕವಿತೆಯೇ ’ವಸ್ತು’ವಾಗುವುದು ಸಾಹಿತ್ಯದ ಹಲವು ಸೋಜಿಗಗಳಲ್ಲಿ ಒಂದು. ಇದು ಅಪರೂಪವಾದರೂ ಅಸಹಜವೇನಲ್ಲ. ಆಗಾಗ್ಗೆ ಸಾಹಿತ್ಯ ಲೋಕದಲ್ಲಿ ಬೇರೆ ಬೇರೆ ರೀತಿಯಲ್ಲಿ ದಾಖಲಾಗುತ್ತ ಬಂದ ವಿದ್ಯಮಾನ. ಕವಿತೆ ಬರೆಯುವ ಕವಿಯೊಳಗೆ ಕತೆಯೂ ಇರುತ್ತದೆ. ಕವಿಯ ಬದುಕು ಕತೆ-ಕಾವ್ಯಕ್ಕೆ ವಸ್ತುವಾಗುವುದೂ ಇದ್ದೇ ಇದೆ. ಕವಿಯ ಬದುಕು ಹಾಗೂ ಅವನು ಬರೆಯುವ ಕವಿತೆಗಳೆರಡೂ ಸಮಾಜದ ಘಟಕಗಳೇ ಆಗಿರುವುದರಿಂದ ಆ ಬಗ್ಗೆ ಕುತೂಹಲ-ಆಸಕ್ತಿಗಳು ಸಹಜ. ೨೦ನೆಯ ಶತಮಾನದ ಕಾವ್ಯಲೋಕದಲ್ಲಿ ತಮ್ಮ ’ಅನನ್ಯ’ ಕವಿತೆಗಳ ಮೂಲಕ ಗಮನ ಸೆಳೆದ ’ಕವಿಜೋಡಿ’ ಕುರಿತ ’ಕಥಾಕಾವ್ಯ’ವನ್ನು ಕಟ್ಟಲು ಕವಿಯಾಗಿದ್ದ ಕತೆಗಾರ ನಟರಾಜ್ ಹುಳಿಯಾರ್ ಪ್ರಯತ್ನಿಸಿದ್ದಾರೆ. ಮತ್ತು ಯಶಸ್ವಿಯೂ ಆಗಿದ್ದಾರೆ. ನಟರಾಜರೊಳಗಿನ ಕವಿ-ಕತೆಗಾರರಿಬ್ಬರೂ ಸೇರಿ ಕಟ್ಟಿದ ಕಥನ ’ಕವಿಜೋಡಿಯ ಆತ್ಮಗೀತ’. ಇದು ಏಕಕಾಲಕ್ಕೆ ಕತೆಯೂ ಹೌದು, ಹಾಗೆಯೇ ಕಾವ್ಯ ಕೂಡ. ಇಂಗ್ಲೆಂಡಿನ ಕವಿ ಟೆಡ್ ಹ್ಯೂಸ್ (೧೯೩೦-೧೯೯೮) ಮತ್ತು ಅಮೆರಿಕಾದ ಕವಯತ್ರಿ ಸಿಲ್ವಿಯಾ ಪ್ಲಾತ್ (೧೯೩೨-೧೯೬೩) ಎಂಬ ಕವಿಜೋಡಿ ಜನಮನ್ನಣೆಯ ಜೊತೆಗೆ ’ದಂತಕತೆ’ಯಾದವರು. ಒಂದು ಸಂಜೆಯ ಪಾರ್ಟಿಯಲ್ಲಿ ಮುಖಾಮುಖಿಯಾದ ಈ ಇಬ್ಬರು ಕವ...