ಅಂತಃಕರಣ ತಟ್ಟುವ ಆತ್ಮಗೀತ

 


ಕವಿಜೋಡಿಯ ಆತ್ಮಗೀತ (ಕಥಾಕಾವ್ಯ)

ನಟರಾಜ್‌ ಹುಳಿಯಾರ್‌

ಪುಟ: ೨೩೮, ಬೆಲೆ: ೧೨೦

ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ ಅಂಚೆ, ವ್ಹಯಾ ಎಮ್ಮಿಗನೂರ, ಬಳ್ಳಾರಿ-೫೮೩೧೧೩

ದೂರವಾಣಿ: ೮೮೮೦೦೮೭೨೩೫



’ಕವಿ’ಯೇ ಕತೆಯಾಗುವುದು, ಕವಿತೆಯೇ ’ವಸ್ತು’ವಾಗುವುದು ಸಾಹಿತ್ಯದ ಹಲವು ಸೋಜಿಗಗಳಲ್ಲಿ ಒಂದು. ಇದು ಅಪರೂಪವಾದರೂ ಅಸಹಜವೇನಲ್ಲ. ಆಗಾಗ್ಗೆ ಸಾಹಿತ್ಯ ಲೋಕದಲ್ಲಿ ಬೇರೆ ಬೇರೆ ರೀತಿಯಲ್ಲಿ ದಾಖಲಾಗುತ್ತ ಬಂದ ವಿದ್ಯಮಾನ. ಕವಿತೆ ಬರೆಯುವ ಕವಿಯೊಳಗೆ ಕತೆಯೂ ಇರುತ್ತದೆ. ಕವಿಯ ಬದುಕು ಕತೆ-ಕಾವ್ಯಕ್ಕೆ ವಸ್ತುವಾಗುವುದೂ ಇದ್ದೇ ಇದೆ. ಕವಿಯ ಬದುಕು ಹಾಗೂ ಅವನು ಬರೆಯುವ ಕವಿತೆಗಳೆರಡೂ ಸಮಾಜದ ಘಟಕಗಳೇ ಆಗಿರುವುದರಿಂದ ಆ ಬಗ್ಗೆ ಕುತೂಹಲ-ಆಸಕ್ತಿಗಳು ಸಹಜ. ೨೦ನೆಯ ಶತಮಾನದ ಕಾವ್ಯಲೋಕದಲ್ಲಿ ತಮ್ಮ ’ಅನನ್ಯ’ ಕವಿತೆಗಳ ಮೂಲಕ ಗಮನ ಸೆಳೆದ ’ಕವಿಜೋಡಿ’ ಕುರಿತ ’ಕಥಾಕಾವ್ಯ’ವನ್ನು ಕಟ್ಟಲು ಕವಿಯಾಗಿದ್ದ ಕತೆಗಾರ ನಟರಾಜ್‌ ಹುಳಿಯಾರ್‌ ಪ್ರಯತ್ನಿಸಿದ್ದಾರೆ. ಮತ್ತು ಯಶಸ್ವಿಯೂ ಆಗಿದ್ದಾರೆ. ನಟರಾಜರೊಳಗಿನ ಕವಿ-ಕತೆಗಾರರಿಬ್ಬರೂ ಸೇರಿ ಕಟ್ಟಿದ ಕಥನ ’ಕವಿಜೋಡಿಯ ಆತ್ಮಗೀತ’. ಇದು ಏಕಕಾಲಕ್ಕೆ ಕತೆಯೂ ಹೌದು, ಹಾಗೆಯೇ ಕಾವ್ಯ ಕೂಡ. 

ಇಂಗ್ಲೆಂಡಿನ ಕವಿ ಟೆಡ್‌ ಹ್ಯೂಸ್‌ (೧೯೩೦-೧೯೯೮) ಮತ್ತು ಅಮೆರಿಕಾದ ಕವಯತ್ರಿ ಸಿಲ್ವಿಯಾ ಪ್ಲಾತ್‌ (೧೯೩೨-೧೯೬೩) ಎಂಬ ಕವಿಜೋಡಿ ಜನಮನ್ನಣೆಯ ಜೊತೆಗೆ ’ದಂತಕತೆ’ಯಾದವರು. ಒಂದು ಸಂಜೆಯ ಪಾರ್ಟಿಯಲ್ಲಿ ಮುಖಾಮುಖಿಯಾದ ಈ ಇಬ್ಬರು ಕವಿಗಳು ನಂತರ ಸ್ನೇಹಿತರಾದರು. ಅದು ಪ್ರೀತಿ-ಪ್ರೇಮ-ಮೋಹಗಳಾಗಿ ಬೆಳೆದ ’ಸಂಗಾತಿ’ಗಳಾದರು. ಕವಿತೆ ಬರೆಯುವುದಕ್ಕೆ ಪರಸ್ಪರ ಪೂರಕವಾಗಿದ್ದ ಈ ಕವಿಗಳು ’ಕತೆ’ಯಾಗುವುದಕ್ಕೆ ಪೈಪೋಟಿ ನಡೆಸಿದಂತೆ ಬದುಕಿದರು. ಉಭಯರ ನಡುವಿನ ವಿಶ್ವಾಸ ಕಡಿಮೆಯಾಗಿ ನಂಬಿಕೆಗಳು ಅಪನಂಬಿಕೆಗಳಾಗಿ ’ದೂರ’ ಸರಿಯಲು ಕಾರಣವಾದವು. ಪರಸ್ಪರ ಒಮ್ಮತದಿಂದ ಬೇರೆಯಾದ ಕವಿಗಳಿಬ್ಬರೂ ’ನೆಮ್ಮದಿ’ ಕಾಣಲಾಗಲಿಲ್ಲ. ಪುಟ್ಟಮಕ್ಕಳೊಂದಿಗೆ ಒಂಟಿಯಾಗಿ ಬದುಕಲು ನಿರ್ಧರಿಸಿದ ಸಿಲ್ವಿಯಾ ಕೇವಲ ತನ್ನ ೩೧ನೇ ವಯಸ್ಸಿಗೆ ಅಂತ್ಯ ಹಾಡಿಕೊಂಡಳು.ಅದರ ಹೊಣೆ ಹೊರಬೇಕಾದ ಟೆಡ್‌ ಸಮಾಜದ ಕಣ್ಣಲ್ಲಿ ’ದ್ರೋಹಿ’. ನಾಯಕನೇ ಪ್ರತಿನಾಯಕನಾದಂತೆ. ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿ ವಿಫಲಳಾಗಿದ್ದ ಸಿಲ್ವಿಯಾ ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾದಳು. ಕವಿಯೇ ಕತೆಗೆ ವಸ್ತುವಾದಳು. ಸಿಲ್ವಿಯಾಳ ಕವಿತೆಗಳ ಅನುಭವಲೋಕ ಮತ್ತು ಅದು ದಾಖಲಾಗುವ ಕ್ರಮ ಸ್ತ್ರೀವಾದಿಗಳ ಗಮನ ಸೆಳೆಯಿತು. ಮತ್ತೊಂದು ನೆಲೆಯಲ್ಲಿ ಸಾಗಿದ ಟೆಡ್‌ನ ಕವಿತೆಗಳು ಇಂಗ್ಲಿಷ್‌ ಕಾವ್ಯದಲ್ಲಿ ತನ್ನದೇ ಛಾಪು ಮೂಡಿಸಲು ಕಾರಣವಾದವು. ಅವನನ್ನು ಪೊಯೆಟ್‌ ಲಾರಿಯೆಟ್‌ ಮಾಡಿದವು.


ಈ ಕವಿ ಜೋಡಿಯ ಬದುಕನ್ನು ಆಧರಿಸಿ ’ಕಥಾಕಾವ್ಯ’ವನ್ನು ಕಟ್ಟುವ ಮೂಲಕ ನಟರಾಜ ಅವರು ಕನ್ನಡದ ಓದುಗರನ್ನು ಹೊಸ ಅನುಭವಕ್ಕೆ ತೆರೆದಿಟ್ಟಿದ್ದಾರೆ. ಕವಿತೆಗಳ ಓದು-ಕವಿಗಳ ಬದುಕಿನ ಅಧ್ಯಯನ ಎರಡೂ ಸೃಜನಶೀಲ ಅಭಿವ್ಯಕ್ತಿಯಾಗಿ ಈ ಪುಸ್ತಕದಲ್ಲಿ ಅರಳಿವೆ. ಹೀಗಾಗಿ ಇಲ್ಲಿ ಕವಿತೆಯ ಆರ್ದ್ರತೆ-ಸೊಗಸುಗಾರಿಕೆಗಳಿರುವ ’ಕತೆ’ಯ ಸೊಬಗು ಬಿಚ್ಚಿಕೊಂಡಿದೆ. ಇದನ್ನು ಓದುವಾಗ ಕವಿತೆಯ ಅನುಭವ ಆಗುತ್ತಿರುತ್ತದೆ. ಅದೇ ಹೊತ್ತಿಗೆ ಕತೆಯನ್ನೂ ಬಿಚ್ಚಿಡಲಾಗುತ್ತದೆ. ಹದಿನೆಂಟು ನೀಳ್ಗವಿತೆಗಳು ಒಟ್ಟಾಗಿ ಒಂದರ ಪಕ್ಕ ಮತ್ತೊಂದು ಕುಳಿತು ಕತೆ ಹೇಳಿವೆ. ಮಹಾಕಾವ್ಯಕ್ಕೆ ಹತ್ತಿರವಾಗಿರುವಂತೆ ಕಾಣುವ ಆದರೆ ಅದಕ್ಕಿಂತ ಭಿನ್ನ ನೆಲೆ-ದಾರಿಯ ಓದಿನ ಅನುಭವವನ್ನು ಈ ’ಕಥಾಕಾವ್ಯ’ ಕಟ್ಟಿಕೊಡುತ್ತದೆ.

ಕವಿಯಾಗಿದ್ದ ಸಿಲ್ವಿಯಾಳ ಒಳಗೆ ಕಲಾವಿದಳೂ ಆಗಿದ್ದಳು. ಅವಳು ಚಿತ್ರಿಸಿದ ರೇಖೆಗಳನ್ನು ಪ್ರತಿ ಅಧ್ಯಾಯದ ಆರಂಭದಲ್ಲಿ ಹಾಕಲಾಗಿದೆ. ಸಿಲ್ವಿಯಾಳ ಈ ರೇಖೆಗಳು ಅವಳ ವ್ಯಕ್ತಿತ್ವದ ವಿವಿಧ ಮಜಲುಗಳನ್ನು ತೋರಿಸುತ್ತವೆ. ಹಾಗೆಯೇ ಕವಿಗಳ ಬದುಕಿನ ನಾಟಕೀಯತೆಗೆ ದೃಶ್ಯರೂಪ ನೀಡುತ್ತವೆ. ಅವುಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವ ನಟರಾಜ ಅವರ ಶ್ರಮ ಗಮನ ಸೆಳೆಯುತ್ತದೆ. ’ರೂಪಕಗಳ ಸಾವು’ ಸಂಕಲನ ಪ್ರಕಟಿಸಿದ್ದ ನಟರಾಜ ಅವರು ಈ ಸಂಕಲನ-ಕತೆಯ ಮೂಲಕ ಮತ್ತೊಂದು ಲೋಕ ಕಟ್ಟಿದ್ದಾರೆ. ಕನ್ನಡದ ಜಾಯಮಾನಕ್ಕೆ ಭಿನ್ನವಾದ ಆದರೆ ಅದನ್ನು ಬಗ್ಗಿಸಿ, ಒಗ್ಗಿಸಿದ ಕಸುಬುದಾರಿಕೆ ಎದ್ದು ಕಾಣಿಸುತ್ತದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಗುಣ ಈ ಪುಸ್ತಕದ ವಿಶೇಷ.

ಈ ಕಥಾಕಾವ್ಯದ ನಾಯಕಿ ಸಿಲ್ವಿಯಾ. ಇದು ಸಿಲ್ವಿಯಾ ಕೇಂದ್ರಿತ. ಟೆಡ್‌ಗೂ ಇಲ್ಲಿ ಜಾಗ ಉಂಟು. ಮಾತ್ರವಲ್ಲ ಮಹತ್ವದ ಪಾತ್ರವೂ ಇದೆ. ಅವ ಈ ಕಾವ್ಯದ ನಾಯಕ. ಆದರೆ, ಲೋಕಗ್ರಹಿಸಿದ ’ಪ್ರತಿನಾಯಕ’ ಅಲ್ಲ. ಅವರಿಬ್ಬರ ಕವಿತೆಗಳ ಸಾಲುಗಳು ’ಅನುವಾದ’ವಾಗದೇ ಕನ್ನಡೀಕರಣಗೊಂಡಿವೆ. ಕತೆಯಾಗಿಸಿವೆ. ಹೃದಯಂಗಮ ಅನ್ನಿಸುವ ಈ ಕವಿತೆಗಳ ಗುಚ್ಛ ಬುದ್ಧಿ-ಭಾವಗಳ ಹದವಾದ ಮಿಶ್ರಣದಂತಿದೆ.

-ದೇವು ಪತ್ತಾರ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು