’ನಾನು’ ಅಂದರೆ ದೇವು

ನೋಡಿ ಸ್ವಾಮಿ ನಾನೊಬ್ಬ ಸಣ್ಣ ಮನುಷ್ಯ. ಕರ್ಣಾಟವೆಂಬ ದೇಶದ ಆಚೆಗೆ ಏನಿದೆ? ಎಂದು ಕಂಡವನಲ್ಲ. ಅಷ್ಟೇ ಏಕೆ ಕರ್ನಾಟಕದ ಒಳಗಡೆ ಕೂಡ ಹೆಚ್ಚು ಓಡಾಡಿದವನಲ್ಲ. ಏಳೆಂಟು ವರ್ಷದಿಂದ ಪತ್ರಕರ್ತನಾಗಿ ಕೆಲಸ ಮಾಡುತ್ತ ಬಂದಿದ್ದೇನೆ. ಅದೂ ಹೊಟ್ಟೆಯ ಪಾಡಿಗಾಗಿ. 'ಕೋಶ ಓದು, ದೇಶ ನೋಡು' ಎಂಬ ಗಾದೆ ಕೇಳಿದ್ದೇನೆ. ಅದನ್ನು ಜಾರಿಗೆ ತರುವಷ್ಟು ದೊಡ್ಡ ಮನಸ್ಸು, ಮನುಷ್ಯ ನಾನಾಗಿಲ್ಲ. ಆಗಲು ಆಸೆ ಇತ್ತು, ಇದೆ. ಆದರೆ, ಎಲ್ಲ ಕನಸು- ಆಸೆಗಳು ಈಡೇರುವುದಿಲ್ಲ ಅಲ್ಲವೇ? ಎಷ್ಟೋ ಬಾರಿ ಅವು ನಮ್ಮ ಕಣ್ಣಮುಂದೆಯೇ ಕಮರಿಹೋಗುವುದನ್ನು ನೋಡುತ್ತ ಅಸಹಾಯಕರಾಗಿ ಇರಬೇಕಾಗುತ್ತದೆ. ನಾನು ಕನರ್ಾಟಕ ಎಂಬ ಬಾವಿ ಅಲ್ಲಲ್ಲ. 'ಬೀದರ್' ಎಂಬ ರಾಜಧಾನಿಯಿಂದ ದೂರ ಇರುವ, ನಾಲ್ಕೈದು ತಾಲ್ಲೂಕುಗಳಿರುವ ಸಣ್ಣ ಬಾವಿಯೊಳಗಿನ ಕಪ್ಪೆ. ಅದಕ್ಕೆ ತಾನಂದುಕೊಂಡದ್ದೇ ದೊಡ್ಡ ಜಗತ್ತು.
ಇದೇ ನೆಪದಲ್ಲಿ ನನ್ನ ಬಗ್ಗೆ ಒಂದಿಷ್ಟು ಬರೆಯುತ್ತೇನೆ. ಹೈದರಾಬಾದ್ ಕರ್ನಾಟಕ ಎಂಬ ಬಿರುಬಿಸಿಲಿನ ಗುಲ್ಬರ್ಗ ಜಿಲ್ಲೆಯ ಶಹಾಪುರ ಎಂಬ ಪಟ್ಟಣ ನನ್ನ ಊರು. ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಈಗ ನಿವೃತ್ತರಾಗಿದ್ದಾರೆ. ಅವರು ಕೆಲಸ ಮಾಡುತ್ತಿದ್ದ 'ಅಣಬಿ' ಕುಗ್ರಾಮದಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಆರಂಭವಾಯಿತು. ಕರೆಂಟ್ ಇಲ್ಲದ, ಬಸ್ಗಳೇ ಬಾರದ ಯಾವ ದಿಕ್ಕಿನಿಂದ ಹೋದರೆ ನಡೆದುಕೊಂಡೇ ಹೋಗಬೇಕಾಗಿದ್ದ ಗ್ರಾಮ ಅದು. ಕತ್ತಲಾಗುತ್ತಿದ್ದಂತೆ ಸಿರಿವಂತರಂತೆ ಕಂದೀಲು ಖರೀದಿಸಲಾಗದೆ ಚಿಮಣಿಯ ಬೆಳಕಿನಲ್ಲಿ ಜೀವನ ನಡೆಸುತ್ತಿದ್ದೆವು. ಹೊಟ್ಟೆ ಬಟ್ಟೆಗೆ ಕೊರತೆ ಇರಲಿಲ್ಲ ಬಿಡಿ. ಕಲ್ಲು ಹಾಸಿನ ಛಾವಣಿ ಇದ್ದ ಕಟ್ಟಿದ 'ಹರಜಾಪರ' ಮನೆಗಳವು. ಶಹಾಬಾದ್ ಫರಸಿಗಳನ್ನು ಬೆಳಕು, ಗಾಳಿ ಬರುವಂತೆ ನೀರು ಸುರಿಯದೆ ಆಶ್ರಯ ನೀಡದಂತೆ ಕಲಾತ್ಮಕವಾಗಿ ಅವುಗಳನ್ನು ಒಂದರ ಮೇಲೊಂದು ಇಟ್ಟು ಮಾಳಿಗೆ ಮಾಡುತ್ತಾರೆ. ಅಂತಹ ಮಾಳಿಗೆಯಿಂದ ದೊಡ್ಡ ಗಾತ್ರದ ಕರಿಚೇಳುಗಳು ಬಿದ್ದು ಗಾಬರಿ- ಭಯ ಆತಂಕ ಪಟ್ಟ ಘಳಿಗೆಗಳು ಕಡಿಮೆಯೇನಿಲ್ಲ. ಮೊದಲೇ ಹೇಳಿದ ಹಾಗೆ ನಮ್ಮ ಮನೆಯಲ್ಲಿ ಕಂದೀಲು ಇರಲಿಲ್ಲ. ಕರಿಚೇಳುಗಳು ಬಿದ್ದರೆ ತಕ್ಷಣ ಗೊತ್ತಾಗಲಿ ಎಂಬ ಕಾರಣಕ್ಕಾಗಿ ರಾತ್ರಿಯಿಡೀ ಚಿಮಣಿ ಹಚ್ಚಿರುತ್ತಿದ್ದೆವು. ದೊಡ್ಡ ಗಾತ್ರದ ಒಂದೇ ಕೋಣೆ ಇರುವ ಮನೆಯದು. ಆ ಊರಿನ ಕುಲಕಣರ್ಿಯವರು ತಮ್ಮ ಮನೆಯ ಹೊರಗಡೆಯಿದ್ದ ಕಟ್ಟಿಗೆ- ದನಗಳಿಗೆ ಮೇವು ಸಂಗ್ರಹಿಸಿಡುತ್ತಿದ್ದ 'ಕೊಟಗಿ'ಯನ್ನು ಖಾಲಿ ಮಾಡಿಸಿದ್ದರು. ನಮ್ಮ ತಂದೆಯವರೇ ಹಣ ನೀಡಿ ಅದಕ್ಕೆ ಛತ್ತು ಹಾಕಿಸಿದ್ದು ನೆನಪಿದೆ. ಅದಕ್ಕಾಗಿ 'ಬಾಡಿಗೆ' ಕೂಡ ಕೊಡುತ್ತಿದ್ದೆವು. ಒಂದು ಮೂಲೆಯಲ್ಲಿ ಒಲೆಗಳನ್ನು ಹೂಡಿ ಅಡುಗೆ ಮಾಡಲಾಗುತ್ತಿತ್ತು. ಮತ್ತೊಂದು ಮೂಲೆಯಲ್ಲಿ ನನ್ನ ಪಾಟಿ-ಪುಸ್ತಕಗಳ ಬ್ಯಾಗು ಇಡುತ್ತಿದ್ದೆ. ಮಧ್ಯದಲ್ಲಿ ಮಲಗುವ ವ್ಯವಸ್ಥೆ ಮಾಡಿಕೊಂಡಿದ್ದೆವು. ಸಣ್ಣ ಪುಟ್ಟ ಸಪ್ಪಳವಾದರೂ ಎದ್ದು ಕೂಡಬೇಕು. ಹಾವು ಕಡಿದು ಸತ್ತ ಸುದ್ದಿ ಮೇಲಿಂದ ಮೇಲೆ ಕೇಳುತ್ತಿದ್ದೆವು. ಹಾವುಗಳಿರಲಿ ದೊಡ್ಡವರ ಅಂಗೈ ಅಗಲದಷ್ಟು ದೊಡ್ಡದಾಗಿದ್ದ ಚೇಳು ಕಚ್ಚುವುದೇ ಸಾಕಾಗುತ್ತಿತ್ತು ಸಾಯಲು.
ಇಂತಹದೇ ದಿನಗಳಲ್ಲಿ ನಾವು ಒಂದು ಹೊಲ ಖರೀದಿಸಿದೆವು. ನಮ್ಮ ತಂದೆಯವರ ದೂರದ ಸಂಬಂಧಿಯೇ ಅದನ್ನು ನಮಗೆ ಮಾರಿದರು. ಎಂಟು ಎಕರೆಯ ಹೊಲ ಅದು. ಜನ ಅದನ್ನು ಹೊಲ ಎಂದು ಕರೆಯುತ್ತಿದ್ದರು. ಹಾಗೆ ನೋಡಿದರು ಅದು ದೊಡ್ಡದೊಡ್ಡ ಬಂಡೆಗಳಿದ್ದ ಬಂಜರು ಭೂಮಿ. ಮೊದಲ ವರ್ಷ ಅದರಲ್ಲಿ ಬಂದ ಬೆಳೆಯ ಪ್ರಮಾಣ ಬೇರೆಯವರ ಒಂದು ಎಕರೆ ಹೊಲದ ಬೆಳೆಗೆ ಸಮನಾಗಿತ್ತು. ನಮ್ಮ ಕಡೆ ಯಾರೇ ಹೊಲ ಖರೀದಿಸಿದರೂ 'ಮುತ್ತು’ ಬೆಳೆಯಬೇಕು ಅನ್ನುವ ಕಾರಣಕ್ಕಾಗಿ ಮೊದಲ ವರ್ಷ ಜೋಳ ಬಿತ್ತುತ್ತಾರೆ. ನಿತ್ಯ ರೊಟ್ಟಿ/ಭಕ್ರಿ ತಿನ್ನುವ ನಮ್ಮ ಮನೆಗಳಲ್ಲಿ ಆಗಾಗ ಅಂದರೆ ಹಬ್ಬ- ಹುಣ್ಣಿವೆಗಳ ಸಂದರ್ಭದಲ್ಲಿ ಅನ್ನ ಮಾಡಲಾಗುತ್ತಿತ್ತು. ದುಬಾರಿ ಅಕ್ಕಿ ಖರೀದಿಸಿ ಅನ್ನ ಮಾಡಿ ಊಟ ಮಾಡುವುದು ಸಾಧ್ಯವೇ ಇರಲಿಲ್ಲ. ಶಹಪುರದಲ್ಲಿ ನನ್ನ ತಂದೆಯವರಿಗೆ ಪಿತ್ರಾರ್ಜಿತವಾಗಿ ಬಂದ ಗದ್ದೆಯಲ್ಲಿ ಬೆಳೆಯುತ್ತಿದ್ದ ಭತ್ತವು ನಮ್ಮ ಇಡೀ ವರ್ಷಕ್ಕೆ ಸಾಕಾಗುವಷ್ಟು ಇರುತ್ತಿತ್ತು. ಅಣಬಿಯಲ್ಲಿ ಹೊಲ ಖರೀದಿಸಿದ ನಂತರ ಜೋಳ ಬಿತ್ತಿದ ಬಗ್ಗೆ ಪ್ರಸ್ತಾಪಿಸಿದೆ. ಜೋಳ ತೆನೆ ಬಿಟ್ಟದ್ದನ್ನು ನೋಡಿದ ಗಳಿಗೆ ನನ್ನ ಜೀವನದ ಅತ್ಯಂತ ಅವಿಸ್ಮರಣೀಯ ಅನುಭವಗಳಲ್ಲಿ ಒಂದು. ಎತ್ತಿನ ಬಂಡಿಕಟ್ಟಿಕೊಂಡು ಸೀತನಿ (ಸಿಹಿತೆನೆ= ಜೋಳದ ಕಾಳು ಎಳೆಯವಾಗಿದ್ದಾಗ ಅದನ್ನು ಸುಟ್ಟು ತಿನ್ನುತ್ತಾರೆ. ಅತ್ಯಂತ ರುಚಿಯಾದ ಕಾಳುಗಳನ್ನು ತಿನ್ನುವುದೇ ವಿಶಿಷ್ಟ ಅನುಭವ) ತಿನ್ನಲು ಹೋಗಿದ್ದೆವು. ಎರಡನೇ ವರ್ಷ ಹತ್ತಿ ಬಿತ್ತಲಾಯಿತು. ಮೊದಲ ವರ್ಷಕ್ಕಿಂತ ಬೇರೆಯದೇ ಬೆಳೆ ಆಗಿದ್ದರಿಂದ ನಮಗೂ ಅದನ್ನು ನೋಡುವುದೇ ಖುಷಿ. ಬಿಡಿಸಿದ ಹತ್ತಿಯ ತೊಳೆಗಳನ್ನು ಚೀಲಗಳಲ್ಲಿ ತುಂಬಿಕೊಂಡು ಬಂದು ಮನೆಯಲ್ಲಿ ಸುರಿಯಲಾಯಿತು. ಇಡಲು ಬೇರೆ ಜಾಗವೇ ಇಲ್ಲದ್ದರಿಂದ ಮನೆಯಲ್ಲಿಯೇ ಇಟ್ಟುಕೊಳ್ಳುವುದು ಅನಿವಾರ್ಯವೂ ಅಗತ್ಯವೂ ಆಗಿತ್ತು. ಮನೆಯ ಕಾಲುಭಾಗವನ್ನು ಹತ್ತಿ ಆಕ್ರಮಿಸಿಕೊಂಡು ಬಿಟ್ಟಿತು. ಹೀಗೆ ಹಾಕಿದ ಹತ್ತಿಯಿಂದ ಕೆಲವೇ ಅಡಿ ದೂರದಲ್ಲಿ ನಾವು ಮಲಗಿದ್ದವು. ಅವ್ವನ ಆರೋಗ್ಯ ಸರಿಯಿರಲಿಲ್ಲ. ಆಸ್ಪತ್ರೆಗೆ ತೋರಿಸುವುದಕ್ಕಾಗಿ ದೂರ ದೇಶದ ಬಿಜಾಪುರಕ್ಕೆ ಕರೆದುಕೊಂಡು ಹೋಗಿದ್ದರು. ಮನೆಯಲ್ಲಿ ಇದ್ದದ್ದು ನಾನು, ನನ್ನ ಪುಟ್ಟ ತಂಗಿ ಮತ್ತು ತಂದೆಯ ತಾಯಿ ಆಯಿ. ಓದಲು ಅಂತ ಕೆಲವು ಹುಡುಗರು ನಮ್ಮ ಮನೆಗೆ ಬರುತ್ತಿದ್ದರು. ವಯಸ್ಸಾದ ಆಯಿ ಮತ್ತು ಕೆಲವು ಹುಡುಗರು ಇದ್ದ ಅಂತಹ ಒಂದು ರಾತ್ರಿ ಎಷ್ಟೊಂದು ಭೀಕರವಾಗಿತ್ತು ಎನ್ನುವುದನ್ನು ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ. ಏನೋ ಸಪ್ಪಳ ಆಯಿತು ಎಂದು ಕಣ್ತೆರೆದು ನೋಡಿದರೆ ನಾವು ಕೂಡಿ ಹಾಕಿದ್ದ ಹತ್ತಿ ಬೆಂಕಿ ಹತ್ತಿ ಉರಿಯುತ್ತಿತ್ತು. ಅದು ಹರಡಿ ನಾವು ಹೊರಬರಬೇಕಿದ್ದ ಬಾಗಿಲನ್ನು ಕೂಡ ಆವರಿಸಿತ್ತು. ಎಲ್ಲರನ್ನು ಎಬ್ಬಿಸಿ ಕಿಟಕಿ ಮುರಿದು ಹೊರ ತರಲಾಯಿತು. ಯಾರಿಗೂ ಸುಟ್ಟ ಗಾಯಗಳಾಗಲಿಲ್ಲ. ಒಂದು ತೊಳೆ ಹತ್ತಿ ಕೂಡ ಉಳಿಯಲಿಲ್ಲ. ಎಲ್ಲವೂ ಬೆಂಕಿಗೆ ಆಹುತಿಯಾಯಿತು. ಸ್ವಲ್ಪ ಅಜಾಗರೂಕತೆ ವಹಿಸಿದ್ದರೆ ನಾವು ಅರಗಿನ ಮನೆಯಲ್ಲಿ ಸಿಕ್ಕಿಕೊಂಡವರಂತೆ ದಹಿಸಿಹೋಗುತ್ತಿದ್ದೆವು. ಅದಾದ ನಂತರವೂ ಮನೆ ರಿಪೇರಿ ಮಾಡಿಸಿಕೊಂಡು ಇರಲು ಆರಂಭಿಸಿದೆವು. ನಾಗರಿಕ ಎಂದು ಕರೆಯುವ ವ್ಯವಸ್ಥೆಯಿಂದ ತುಂಬ ದೂರ ಇದ್ದೆವು ಅಂತ ಈಗ ಅನ್ನಿಸುತ್ತಿದೆ. 'ಗ್ರಾಮೀಣ ಬದುಕು' ಎಂದರೆ ನನಗೆ ಅಣಬಿಯಾಚೆಗಿನ ಜಗತ್ತು ಕಾಣಿಸುವುದೇ ಇಲ್ಲ. ಕತೆ- ಕಾದಂಬರಿ ಪದ್ಯ ಓದುವಾಗ ಹಳ್ಳಿಯ ಬದುಕಿನ ಪ್ರಸ್ತಾಪವಾದಾಗಲೆಲ್ಲ ನನಗೆ ಅಣಬಿಯದೇ ನೆನಪು ಬರುತ್ತಿತ್ತು. ಅದರಿಂದಾಚೆಗೆ ಈಗಲೂ ಬರಲು ಸಾಧ್ಯವಾಗಿಲ್ಲ. ಅದು ನನ್ನ ಮಿತಿ. ಎಸ್ಎಸ್ಎಲ್ಸಿ ಇದ್ದಾಗ ಓದಿದ ಕಂಬಾರರ 'ಸಿಂಗಾರೆವ್ವ ಮತ್ತು ಅರಮನೆ', ಪಿ.ಯು.ಸಿ ವಿದ್ಯಾರ್ಥಿಯಾಗಿದ್ದಾಗ ಓದಿದ ರಾವಬಹದ್ದೂರರ 'ಗ್ರಾಮಾಯಣ' ಕಾದಂಬರಿಯ ಘಟನೆಗಳು ಪೂರ್ತಿ ನಡೆದದ್ದು ಅಣಬಿಯಲ್ಲಿಯೇ ಎಂದು ಖಚಿತವಾಗಿ ನಂಬಿದವ ನಾನು. ಈಗಲೂ ನಂಬುತ್ತೇನೆ. ಮಾಧ್ಯಮಿಕ ಶಾಲೆ ಇಲ್ಲದ ಕಾರಣಕ್ಕಾಗಿ ಸ್ವಂತ ಊರಾದ ಶಹಾಪುರಕ್ಕೆ ಮರಳಬೇಕಾಯಿತು. ಅದು ಕೂಡ ಅತ್ತ ನಗರವೂ ಅಲ್ಲದ, ಇತ್ತ ಗ್ರಾಮವೂ ಅಲ್ಲದಂತಹ ಪಟ್ಟಣ. ಗ್ರಂಥಾಲಯ ಅಂದರೆ ಏನು ಎಂದು ಗೊತ್ತಿಲ್ಲದ ಸಾವಿರಾರು ಜನ ವಿದ್ಯಾವಂತರು ಅಲ್ಲಿದ್ದರು, ಈಗಲೂ ಇದ್ದಾರೆ. ಶಾಲೆಯ ಬೀರುಗಳಲ್ಲಿದ್ದ ಪುಸ್ತಕ ಅದೂ ಕಾದಂಬರಿಗಳನ್ನು ಪಡೆದು ಓದಲು ಆರಂಭಿಸಿದೆ. ಕಾದಂಬರಿ ಓದಿದರೆ ಹಾಳಾಗುತ್ತಾರೆ ಎಂಬ ನಂಬಿಕೆ ಅತ್ಯಂತ ಪ್ರಚಲಿತದಲ್ಲಿತ್ತು. ಆ ದಿನಗಳಲ್ಲಿಯೇ ಭೈರಪ್ಪ, ಕಾರಂತ, ಅನಕೃ, ತರಾಸು ಕಾದಂಬರಿ ಓದಿದ್ದು. ಪಠ್ಯಪುಸ್ತಕ ಓದದೆ ಪತ್ರಿಕೆಗಳು- ಕಾದಂಬರಿ ಓದುತ್ತಿದ್ದ ಹುಡುಗ ನಾನು. ಎಸ್ಎಸ್ಎಲ್ಸಿಯಲ್ಲಿ ಮೊದಲ ಬಾರಿಗೆ ಪಾಸಾಗಿದ್ದೇ ಎಂಬುದೇ ಹೆಮ್ಮೆಯ ಸಂಗತಿಯಾಗಿತ್ತು. ಪಿಯುಸಿಗಾಗಿ ಪ್ರವೇಶ ಪಡೆಯುವುದಕ್ಕಾಗಿ ಧಾರವಾಡಕ್ಕೆ ಹೋದೆ. ಹೊಸ ದೊಡ್ಡ ಜಗತ್ತನ್ನು ಮೊದಲ ಬಾರಿಗೆ ನೋಡಿದೆ. ಅದಕ್ಕಿಂತ ಮುಂಚೆ ಒಂದೆರಡು ಬಾರಿ ಗುಲ್ಬರ್ಗಕ್ಕೆ ಹೋಗಿ ಪರಕೀಯ ಅನುಭವ ಪಡೆದು ಕೆಲವೇ ಗಂಟೆಗಳಲ್ಲಿ ಓಡಿ ಬಂದುಬಿಟ್ಟುಬಿಟ್ಟಿದ್ದೆ. ಧಾರವಾಡದಲ್ಲಿ ಓದುವ ನನ್ನ ಕನಸು ಕಡಿಮೆ ಅಂಕ ಬಂದಿದ್ದವು ಎನ್ನುವ ಕಾರಣಕ್ಕಾಗಿ ಈಡೇರಲಿಲ್ಲ. ಧಾರವಾಡದ ಯಾವ ಕಾಲೇಜಿನಲ್ಲಿಯೂ ಪ್ರವೇಶ ದೊರೆಯಲಿಲ್ಲ. ಆಗ ಆಯ್ಕೆ ಮಾಡಿಕೊಂಡದ್ದು ನನ್ನ ಬಂಧುವೊಬ್ಬರು ಲೆಕ್ಚರರ್ ಆಗಿದ್ದ ಹೊಸಪೇಟೆಯ ವಿಜಯನಗರ ಕಾಲೇಜನ್ನು. ಹೊಸಪೇಟೆಯಲ್ಲಿ ಎರಡು ವರ್ಷ ಪಿ.ಯು.ಸಿಗಾಗಿ ಕಳೆದೆ ಅದೇ ದಿನಗಳಲ್ಲಿ ಹಂಪಿ ನೋಡುವ ಅಲ್ಲಲ್ಲ ಅನುಭವಿಸುವ ಅವಕಾಶ ದೊರೆಯಿತು. ಪ್ರತಿ ವಾರ- ರಜಾದಿನಗಳನ್ನು ಹಂಪಿಗೆ ಅಲ್ಲಿನ ಕಲ್ಲುಗಳ ಜೊತೆ ಕಳೆಯುತ್ತ ಬಂದೆ. ಮಧ್ಯೆ ಕಾಣಿಸಿಕೊಂಡ ಬೆನ್ನುನೋವಿನ ಸಮಸ್ಯೆ ಪರೀಕ್ಷೆ ಬರೆಯಲಾಗದಂತೆ ಮಾಡಿತು. ಚೇತರಿಸಿಕೊಂಡು ಬರೆದ ಪರೀಕ್ಷೆಯಲ್ಲಿ ಪಾಸಾಗಲು ವಿಫಲಯತ್ನ. ಒಂದೆರಡು ಬಾರಿಯಲ್ಲ ನಾಲ್ಕು ಬಾರಿ. ಕೊನೆಗೊಮ್ಮೆ ಪಾಸಾಗುವ ವೇಳೆಗೆ ಆಸೆಗಳೇ ಉಳಿದಿರಲಿಲ್ಲ. ನಾನು ಮುಂದೆ ಓದಬಹುದು ಅಂತ ಯಾರೂ ಭಾವಿಸಿರಲಿಲ್ಲ. ನನ್ನ ಸುತ್ತಲು ಇರುವವರೆಲ್ಲ 'ಓದು ಅವನ ತಲೆಗೆ ಹತ್ತುವುದಿಲ್ಲ. ಯಾವುದಾದರೂ ಬಿಸಿನೆಸ್ ಹಚ್ಚಿಕೊಡಿ' ಎಂದು ಸಲಹೆ ಮಾಡುತ್ತಿದ್ದರು. ಈ ಹುಡುಗ ಯಾಕೆ ಹೀಗಾದ? ಬಹುಶಃ ಕಾದಂಬರಿ ಓದಿದ್ದರಿಂದಲೇ ಹೀಗಾಗಿರಬಹುದು ಎಂದು ಆಡಿಕೊಂಡರು. ಪಿಯುಸಿ ಮುಗಿಸಿ ಡಿಗ್ರಿಗಾಗಿ ಧಾರವಾಡಕ್ಕೆ ಹೋದೆ. ಒಬ್ಬನೇ ಒಬ್ಬಂಟಿಯಾಗಿ. ಏನು ಮಾಡಬೇಕು ಅಂತ ಗೊತ್ತಿರಲಿಲ್ಲ. ಎಲ್ಲಿ ಉಳಿಯಬೇಕು ಎಂದು ಗೊತ್ತಿರಲಿಲ್ಲ. ಮೊದಲ ಬಾರಿಗೆ ನನ್ನದಲ್ಲದ ಜಗತ್ತನ್ನು ಮುಖಾಮುಖಿಯಾಗುತ್ತಿತ್ತು. ಮೇಲಿಂದ ಮೇಲೆ ಕಾಡುತ್ತ ಬಂದ ಸೋಲು ಅಸಹಾಯಕನನ್ನಾಗಿ ಮಾಡಿತ್ತು. ಮತ್ತೊಂದು ಸೋಲು ಎದುರಿಸುವುದು ಸಾಧ್ಯವೇ ಇರಲಿಲ್ಲ. ರ್ಯಾಂಕ್ ಬಂದ, ಡಿಸ್ಟಿಂಕ್ಷನ್, ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿದ್ಯಾಥರ್ಿಗಳಿಗೇ ಸೀಟು ಸಿಗುವುದು ಕಷ್ಟವಾಗಿದ್ದ ದಿನಗಳವು. ನಾಲ್ಕು ಬಾರಿ ಫೇಲಾದ ನನಗೆ ಯಾರು ತಾನೆ ಅಡ್ಮಿಷನ್ ಕೊಡಿಸಲು ಸಾಧ್ಯವಿತ್ತು. ಏನೂ ಇಲ್ಲದವನಿಗೆ ಹುಲ್ಲು ಕಡ್ಡಿಯೇ ಆಸರೆಯಾಗುತ್ತದೆ. ನಾನು ಧಾರವಾಡಕ್ಕೆ ಹೋಗುವ ಕೆಲವೇ ದಿನ ಅಲ್ಲ ವರ್ಷ ಮೊದಲು ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. ವೇದಿಕೆಯಲ್ಲಿ ಭಾಷಣ ಮಾಡಿದ್ದ ಕವಿ ಸಿದ್ಧಲಿಂಗ ಪಟ್ಟಣಶೆಟ್ಟರು ನೆನಪಾದರು. ಅವರು ಕನರ್ಾಟಕ ಕಾಲೇಜಿನಲ್ಲಿ ಹಿಂದಿ ವಿಭಾಗದ ಮುಖ್ಯಸ್ಥರು. ಅವರನ್ನು ಭೇಟಿ ಮಾಡಿದರೆ ಸಹಾಯ ಆಗಬಹುದು ಅಂತ ಅನ್ನಿಸಿತು. ಯಾಕೆ ಹಾಗನ್ನಿಸಿತು ಅಂತ ಗೊತ್ತಿಲ್ಲ. ಅದಕ್ಕಿಂತ ಮುಂಚೆ ಒಮ್ಮೆಯೂ ಅವರನ್ನು ಭೇಟಿ ಮಾಡಿರಲಿಲ್ಲ. ಯಾರೂ ಗೊತ್ತಿಲ್ಲದ ಊರಿನಲ್ಲಿ ಓಡಾಡುತ್ತಿದ್ದೆ. ನೆನಪು- ಕಲ್ಪನೆಗಳೇ ಆಸರೆಯಾಗಿದ್ದವು. ವೇದಿಕೆಯಲ್ಲಿ ನೋಡಿದ್ದ ಪಟ್ಟಣಶೆಟ್ಟರ ಸಹಾಯ ಕೇಳಬೇಕು ಎಂಬುದು ಅಂತಹುದೇ ಒಂದು ಹುಂಬ ಆಲೋಚನೆಯಾಗಿತ್ತು. ಮನೆ ಹುಡುಕುತ್ತ ಹೊರಟೆ ನನ್ನ ಸುದೈವದಿಂದ ಸರ್ ಮನೆಯಲ್ಲಿಯೇ ಇದ್ದರು. ಯಾರು ನೀವು? ಏನು ಬಂದದ್ದು? ಎಂದು ಕೇಳಿದರು. ಅವರ ಜೊತೆ ಏನು ಮಾತಾಡುವುದು ಎಂದು ಗೊತ್ತಾಗದೇ ಕಕ್ಕಾಬಿಕ್ಕಿಯಾಗಿ ಬಿಟ್ಟೆ. ಒಂದರೆಕ್ಷಣ ಸಾವರಿಸಿಕೊಂಡು ಬಿ.ಎ.ಗೆ ಅಡ್ಮಿಷನ್ ಎಂದು ಹೇಳಿದೆ. ನಮ್ಮ ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದಿದೆ ಎಂದರು. ಅವರ ಕಾಲೇಜಿನಲ್ಲಿ ಸೀಟು ಸಿಗುವುದು ಸಾಧ್ಯವೇ ಇಲ್ಲ ಎಂದು ನನಗೆ ಗೊತ್ತಿತ್ತು. ಆಗ ನಾನು ನನಗೆ ತಿಳಿದಿದ್ದ ಸಣ್ಣ ಸಂಗತಿಗಳ ಸಹಾಯ ಪಡೆಯಬಯಸಿದೆ. ಶಿವಾನಂದ ಗಾಳಿ ಸರ್ಗೆ ನೀವು ಒಂದು ಲೆಟರ್ ಕೊಟ್ಟರೆ ನನಗೆ ಸಹಾಯ ಆಗುತ್ತದೆ ಎಂದು ಬಿಟ್ಟೆ. ಅವರಿಗೆ ಏನನ್ನಿಸಿತೋ ಗೊತ್ತಿಲ್ಲ. ತಕ್ಷಣ ಎದ್ದು ಒಂದು ನೋಟುಬುಕ್ಕಿನ ಕಾಗದ ಹರಿದು ಅದರಲ್ಲಿ ಎರಡು ಸಾಲಿನ ಪುಟ್ಟಪತ್ರ ಬರೆದರು. ಅದು ಹೀಗಿತ್ತು.
ಪ್ರಿಯ ಶಿವಣ್ಣ,
ಈ ಪತ್ರ ತಂದಿರುವ ದೇವು ನನಗೆ ಬೇಕಾದವರು. ಸಾಧ್ಯವಾದರೆ ಅವರಿಗೆ ಸಹಾಯ ಮಾಡು.
ಅದನ್ನು ಹಿಡಿದುಕೊಂಡು ಗಾಳಿ ಸರ್ ಮನೆಯ ಕಡೆಗೆ ಓಡಿದೆ. ಅವರು ನಾಳೆ ಕಾಲೇಜಿಗೆ ಬಾ ಎಂದರು. ಬೆಳಿಗ್ಗೆ ಜೆ.ಎಸ್.ಎಸ್ ಕಾಲೇಜಿಗೆ ಹೋದರೆ ಅಲ್ಲಿಯೂ ಕೂಡ ಅರ್ಜಿ ಹಾಕುವ ಕೊನೆಯ ದಿನ ಮುಗಿದು ಹೋಗಿತ್ತು. ಸ್ವತಃ ಗಾಳಿ ಅವರೇ ಆಫೀಸ್ ರೂಮಿಗೆ ಹೋಗಿ ನನಗಾಗಿ ಒಂದು ಅರ್ಜಿ ತಂದು ಕೊಟ್ಟು ಇದನ್ನು ತುಂಬಿಕೊಂಡು ಬಾ ಎಂದು ನೀಡಿದರು. ನನಗಿನ್ನೂ ಖಚಿತವಾಗಿ ನೆನಪಿದೆ. ಕಾಲೇಜಿನ ಬಯಲು ರಂಗಮಂದಿರದಲ್ಲಿ ಕುಳಿತು ಅರ್ಜಿ ತುಂಬಿದೆ. ಆಗಲೇ 'ಇಂಗ್ಲಿಷ್' ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದೆ. ಬಿ.ಎ.ದಲ್ಲಿ ಯಾವ ವಿಷಯಗಳಿರುತ್ತವೆ ಎಂಬುದೇ ಗೊತ್ತಿರಲಿಲ್ಲ. ಇತಿಹಾಸದ ಬಗ್ಗೆ ಸ್ವಲ್ಪ ಕೇಳಿದ್ದೆ. ಪೊಲಿಟಿಕಲ್ ಸೈನ್ಸ್ ಎಂದರೆ ಸೈನ್ಸ್ಗೆ ಸಂಬಂಧಿಸಿದ್ದು ಏನೋ ಇರಬಹುದು ಎಂದು ಆಯ್ಕೆ ಮಾಡಿದೆ. ಭರ್ತಿ ಮಾಡಿದ ಅರ್ಜಿ ಗಾಳಿ ಸರ್‌ಗೆ ನೀಡಿದರೆ ಇಷ್ಟೊಂದು ಬಾರಿ ಫೇಲಾದ ನೀನು ಇಂಗ್ಲಿಷ್ ಯಾಕೆ ತಗೋತಿ? ಕನ್ನಡ ತೆಗೆದುಕೋ ಅಂತ ಸಲಹೆ ಮಾಡಿದರು. ಅಳುಕುತ್ತಲೇ ಸುಧಾರಿಸಿಕೊಳ್ಳುತ್ತೇನೆ ಎಂದದ್ದು ನೆನಪು. 'ನಿನಗೆ ತಿಳಿದಂತೆ ಮಾಡು' ಎಂದು ಗೊಣಗುತ್ತ ನನ್ನ ಅರ್ಜಿಯನ್ನು ಅಜಿತ್‌ ಪ್ರಸಾದ್ ಗೆ ನೀಡಿದರು. ಮರುದಿನ ಪ್ರಕಟಿಸಿದ ಎರಡನೇ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಅಡ್ಮಿಷನ್ ಮಾಡಿಸಲು ಕಿಸೆಯಲ್ಲಿ ದುಡ್ಡಿರಲಿಲ್ಲ. ಕೇಳಬೇಕು ಎಂದರೆ ಗೊತ್ತಿರುವವರು ಯಾರೂ ಇರಲಿಲ್ಲ. ಮತ್ತೊಮ್ಮೆ ಎಲ್ಲ ಕಳೆದುಕೊಳ್ಳುತ್ತಿರುವ ಅನುಭವ. ಆಗ ಬೇಕಿದ್ದದ್ದು ಕೇವಲ 300 ರೂಪಾಯಿ. ನನ್ನ ಅಸಹಾಯಕ ಗಳಿಗೆಗಳಲ್ಲಿ ಆಪ್ತನಂತೆ ಜೊತೆಗಿದ್ದದ್ದು ಪುಸ್ತಕಗಳು. ಇಂದು ನಾನು ಬದುಕಿರುವದಕ್ಕೆ ಅಥವಾ ಬದುಕುವಂತೆ ನನಗೆ ಆತ್ಮವಿಶ್ವಾಸ ತುಂಬಿದ್ದು ಪುಸ್ತಕಗಳೇ. ಏನಾದರಾಗಲಿ ಎಂದು ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಹೋದೆ. ಅಲ್ಲಿ ನಮ್ಮೂರಿಂದ ಬಂದಿದ್ದ ರಂಗರಾಜ ಕಾಣಿಸಿದರು. ಅವರ ಹತ್ತಿರ ಹೋಗಿ ಅನುಮಾನಿಸುತ್ತಲೇ ಹಣ ಕೇಳಿದೆ. ಎರಡು ಯೋಚಿಸದೇ ಹಣ ನೀಡಿದರು. ಅಡ್ಮಿಷನ್ ಮಾಡಿಸಿದೆ. ಧಾರವಾಡದಲ್ಲಿ ಉಳಿದು ಓದಲು ಆರಂಭಿಸಿದೆ. 'ಇಂಗ್ಲಿಷ್ ಸಾಹಿತ್ಯ' ಪತ್ರಿಕೆಯಲ್ಲಿ ಅತಿ ಹೆಚ್ಚು ಅಂಕ ಪಡೆದದ್ದಕ್ಕಾಗಿ ಬಿ.ಎಂ.ಶ್ರೀ ಹೆಸರಿನ ಫೆಲೋಶಿಪ್ ನನಗೆ ದೊರೆಯಿತು. ಧಾರವಾಡದಲ್ಲಿ ಇದ್ದ ದಿನಗಳಲ್ಲಿ ಗೋವಾ ನೋಡುವ ಆಸೆಯಿತ್ತು. ಪುಸ್ತಕ ಖರೀದಿಸುವ ಚಟ ಯಾವಾಗಲೂ ಕಿಸೆಯಲ್ಲಿ ಹಣ ಇರದಂತೆ ಮಾಡುತ್ತಿತ್ತು. ಅತ್ಯಂತ ಸಮೀಪದಲ್ಲಿ ಇದ್ದರೂ ನನಗೆ ಹೋಗಲು ಆಗಲೇ ಇಲ್ಲ. ಈಗಲೂ ನನಗೆ ಗೋವಾ ನೋಡುವುದು ಸಾಧ್ಯವಾಗಿಲ್ಲ.
ಬಿ.ಎ. ನಂತರ ಒಂದರೆಕ್ಷಣ ಪತ್ರಿಕೋದ್ಯಮ ಓದುವ ಆಸೆಯಾಯಿತು. ಆದರೆ, ಇಂಗ್ಲಿಷ್ ಆಯ್ಕೆ ಮಾಡಿದೆ. ಎಂ.ಎ. ಮುಗಿದ ನಂತರ ಹೈದರಾಬಾದ್ ಕರ್ನಾಟಕದಲ್ಲಿ ಇಂಗ್ಲಿಷ್ ಕಲಿಸುವ ಇರಾದೆಯಿಂದ ಊರಿಗೆ ಮರಳಿದೆ. ಪಾರ್ಟ್ ಟೈಮ್‌ ಲೆಕ್ಚರರ್ ಆಗಿ ಕೆಲಸ ತಿಂಗಳಿಗೆ 600 ಸಂಬಳ. ಮತ್ತೆ ಒಂಟಿತನ, ಅಸಹಾಯಕತೆ. ಅಂತಹ ದಿನಗಳಲ್ಲಿ ಆಸರೆಯಾದದ್ದು ಪ್ರಜಾವಾಣಿ.
ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಪತ್ರಿಕೋದ್ಯಮದ ಅ.. ಆ.. ಇ.. ಕಲಿಯಲು ಆರಂಭಿಸಿದೆ. ನನ್ನ ಜೊತೆ ಕೆಲಸಕ್ಕೆ ಸೇರಿದ್ದ ಬಹುತೇಕ ಜನ ಪತ್ರಿಕೋದ್ಯಮದಲ್ಲಿ ಪಡೆದವರಾಗಿದ್ದರು. ಆಗಾಗ ಕವಿತೆ- ಕತೆ ಬರೆದುಕೊಂಡಿದ್ದ ನನಗೆ ಅವರ ಜೊತೆ ಸ್ಪರ್ಧಿಸುವುದು ಸಾಧ್ಯವೇ ಇರಲಿಲ್ಲ. ಆಗ ಅವರಂತೆ ಕೆಲಸ ಕಲಿಯಬೇಕು. ಯಾಕೆಂದರೆ ಬದುಕು ರೂಪಿಸಿಕೊಳ್ಳಬೇಕು. ಸಿಕ್ಕಿರುವ ಕೆಲಸ ಬಿಟ್ಟರೆ ಮತ್ತೆಂದೂ ದಾರಿ ಸಿಗುವುದಿಲ್ಲ ಎಂಬ ಹಠದಿಂದ ಎಲ್ಲಿಗೂ ಹೋಗದೆ ಕಣ್ಣಿಗೆ ಬಟ್ಟೆ ಕಟ್ಟಿದ ಗಾಣದೆತ್ತಿನಂತೆ ಅಲ್ಲಿಯೇ ಸುತ್ತಿದೆ. ಬೆಂಗಳೂರಿನಲ್ಲಿದ್ದ ದಿನಗಳಲ್ಲಿ ನಾನು ನೋಡಿದ ದೂರದ ದೇಶ ಎಂದರೆ ಪಾಂಡಿಚೇರಿ. ಬೇಂದ್ರೆ- ಮಧುರಚೆನ್ನರ ಪದ್ಯಗಳಲ್ಲಿ ಅರವಿಂದರು ಮತ್ತು ಪಾಂಡಿಯ ಬಗ್ಗೆ ಓದಿದ್ದೆ. ಮದುವೆಯಾಗಲು ಮನೆಯಲ್ಲಿ ಒತ್ತಾಯಿಸುತ್ತಿದ್ದ ದಿನಗಳವು. ಮದುವೆಯಾದರೆ ಸ್ವಾತಂತ್ರ್ಯ ಕಳೆದುಕೊಳ್ಳುತ್ತೇನೆ ಎಂದು ಭಾವಿಸಿದ್ದ ದಿನಗಳವು. ಪಾಂಡಿಯ ಪ್ರಶಾಂತ ವಾತಾವರಣ ಮತ್ತು ಸಮುದ್ರದ ಅಬ್ಬರದ ಅಲೆಗಳ ನಡುವೆ ಸಿಲುಕಿದ್ದೆ. ನಿರ್ಣಯ ತೆಗೆದುಕೊಳ್ಳಲೇ ಬೇಕಿತ್ತು. ನಾನು ಮದುವೆಯಾಗುವ ನಿರ್ಣಯಕ್ಕೆ ಬಂದದ್ದು ಪಾಂಡಿಯಲ್ಲಿಯೇ. ನಾನು ಕರಾವಳಿ ನೋಡಿದ್ದು ಕಾರವಾರ ಮತ್ತು ಪಾಂಡಿಯಲ್ಲಿ ಮಾತ್ರ. ಮಧುಚಂದ್ರಕ್ಕೆ ಅಂತ ಕೇರಳದ ಮುನ್ನಾರಗೆ ಹೋಗಿದ್ದೆ. ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಶ್ರವಣಬೆಳಗೊಳ, ಬೇಲೂರು- ಹಳೆಬೀಡು ನೋಡಿದೆ. ಸಾಹಿತ್ಯ ಸಮ್ಮೇಳನದ ವರದಿ ಮಾಡುವುದಕ್ಕಾಗಿ ತುಮಕೂರಿಗೆ ಹೋಗಿದ್ದೆ. ಸ್ನೇಹಿತ ಚಿದಾನಂದ ಸಾಲಿಯ ಮದುವೆ ಕಾರಣಕ್ಕಾಗಿ ರಾಯಚೂರು ನೋಡಿದೆ. ಕೆಲಸ ಸಿಕ್ಕ ಬಂಧುವನ್ನು ಬಿಡುವುದಕ್ಕಾಗಿ ಚಾಮರಾಜನಗರಕ್ಕೆ ಹೋಗಿ ಬಂದೆ. ಕುವೆಂಪು ಮೇಲಿನ ಪ್ರೀತಿ- ಭಕ್ತಿಯಿಂದ ಕುಪ್ಪಳಿಗೆ ಹೋಗಿದ್ದೆ. ಈಗಲೂ ಮಂಗಳೂರು, ಚಿಕ್ಕಮಗಳೂರು, ಕೋಲಾರ, ಮಂಡ್ಯ, ಹಾಸನ, ಮಡಿಕೇರಿ, ಶಿವಮೊಗ್ಗ ನೋಡಿಲ್ಲ.
ಬೆಂಗಳೂರಿನಿಂದ ನೇರವಾಗಿ ಬೀದರ್‌ಗೆ ಬಂದೆ. ಅದೂ ರೈಲಿನಲ್ಲಿ 18ಗಂಟೆಗಳ ಪ್ರಯಾಣ ಮಾಡಿ. ಮತ್ತೆ ಹೊಸ ಜನ, ಹೊಸ ಊರು, ಕೆಲಸ ಕಲಿಯುವುದು ಹೊಂದಿಕೊಳ್ಳುವುದು. ಹಿಂಜರಿಕೆ- ಭಯ- ಆತಂಕ ಸದಾ ಜೊತೆಯಲ್ಲಿಯೇ ಇವೆ. ಬೀದರ್ ಎಂಬ ದ್ವೀಪಕ್ಕೆ ಬಂದ ಮೇಲೆ ಎಲ್ಲಿಗೂ ಹೋಗಿಲ್ಲ. ನಾನೀಗ ಊರಿನಿಂದ ಹೈದರಾಬಾದ್ ಕೇವಲ 120 ಕಿ.ಮೀ. ದೂರದಲ್ಲಿದೆ. ಬೀದರ್ನ ಜನ ಶಾಪಿಂಗ್ ಮಾಡುವುದಕ್ಕಾಗಿ ಹೈದರಾಬಾದ್ಗೆ ಹೋಗುತ್ತಾರೆ. ಪ್ರತಿ ದಿನ ನೂರಾರು ಬಸ್ ಓಡಾಡುತ್ತವೆ. ನನ್ನ ಜೊತೆಗೆ ಇರುವ ನನ್ನ ವಿಚಿತ್ರ ಹವ್ಯಾಸಗಳು ನನ್ನ ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸುತ್ತ ಬಂದಿವೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕೇಳುವುದರಲ್ಲಿ ವಿಶೇಷ ಆಸಕ್ತಿ ಇರುವ ನನಗೆ ಪೇಂಟಿಂಗ್, ಸಾಹಿತ್ಯದ ಓದು ತುಂಬ ಇಷ್ಟ. ಹಾಗೆಯೇ ಕ್ಲಾಸಿಕ್ ಸಿನಿಮಾ ನೋಡುವುದು. ನಾನಿರುವ ದ್ವೀಪದಲ್ಲಿಯೇ ನನಗಿಷ್ಟವಾದ ಹವ್ಯಾಸಗಳ ಲೋಕ ಕಟ್ಟಿಕೊಂಡಿದ್ದೇನೆ. ಹೀಗಾಗಿ ಬೀದರ್‌ನಲ್ಲಿ ಇದ್ದರೂ ಒಂಟಿ ಆಗಿಲ್ಲ. ಬೇಂದ್ರೆ, ಮನಸೂರು, ಕುವೆಂಪು ಸದಾ ನನ್ನ ಜೊತೆಗಿರುತ್ತಾರೆ. ಕಂಬಾರ, ಲಂಕೇಶ, ತೇಜಸ್ವಿ, ಚಿತ್ತಾಲ, ದೇಸಾಯಿ, ಅನಂತಮೂರ್ತಿ ಕೂಡ.
ಅಂದಹಾಗೆ ನನಗೆ ಇಂಡಿಯಾಗೇಟ್ ಮತ್ತು ಗೇಟ್ ವೇ ಆಫ್ ಇಂಡಿಯಾದ ನಡುವಿನ ಅಂತರ ಗೊತ್ತಿದೆ. ನಾನು ಆ ನಗರಗಳಿಗೆ ಹೋಗದಿದ್ದರು ಕೂಡ.
ಗುಲಾಂ ಮುಂತಕಾ ಬಗ್ಗೆ ಬರೆಯುವಾಗ ಯಾಮಾರಿದ್ದು ನಿಜ. ಅದಕ್ಕೆ ಮುಂತಕಾ ವಿವರಗಳನ್ನು ಹೇಳುವಾಗ 'ಇಂಡಿಯಾ ಗೇಟ್' ಎಂದೇ ವಿವರಿಸಿದ್ದು ಒಂದು ಕಾರಣ ಇರಬಹುದು ಅಂತ ಈಗ ಅನ್ನಿಸುತ್ತದೆ. ಬರೆಯುವುದಕ್ಕೆ ಸುಲಭ ಅನ್ನುವ ಕಾರಣಕ್ಕಾಗಿ ಕೂಡ ನಾನು ಅದನ್ನು ಆಯ್ಕೆ ಮಾಡಿಕೊಂಡಿರಬಹುದು. ಎಚ್ಚರಿಸಿದ್ದಕ್ಕೆ ಧನ್ಯವಾದಗಳು. ಹಿರಿಯ ಪತ್ರಕರ್ತ ಏನಲ್ಲ. ವಯಸ್ಸಾದ ಮಾತ್ರಕ್ಕೆ ಹಿರಿಯರೇನಾಗುವುದಿಲ್ಲ.

ಕಾಮೆಂಟ್‌ಗಳು

ಓಂಕಾರ ಮಠಪತಿ ಹೇಳಿದ್ದಾರೆ…
"'ನಾನು ಅಂದರೆ ದೇವು"ನಿಮ್ಮ ನೇರ ಲೇಖನ ಓದಿದೆ ಸರ್,
ಮನಸ್ಸಿಗೆ ಹಿಡಿಸಿತ್ತು.ಸಂಕಷ್ಟದ ದಿನಗಳನ್ನ ಮನಸ್ಸಿಗೆ ಮನಸ್ಸಿಗೆ ಮುಟ್ಟುವಂತೆ ಹೇಳಿದ್ದಿರಿ.ನಿಮ್ಮಲ್ಲಿಯ ಅನುಭವವೇ ನಿಮ್ಮನ್ನ ುನ್ನತಕ್ಕೆ ಏರಿಸಿದೆ.ಯಾರು ಏನೆ ಹೇಳಿದರು ಬೀದರ್ ನಂತಹ ಹಿಂದುಳಿದ ಜಿಲ್ಲೆಗೆ ಬಂದು ಹೊಸತನದ ಬರವಣಿಗೆಗೆ ನಾಂದಿ ಹಾಡಿದ್ದಿರಿ. ಅನ್ನೋ ಅನಿಸಿಕೆ ನಂದು.ಪತ್ರಿಕೊದ್ಯಮ ಅಂದ್ರೆ ಬೆಂಗಳೂರಿನ ಕಡೆಯವರೆ ಅನ್ನುವ ಿಂದಿನ ದಿನಗಳಲ್ಲಿ ನಮಗೆ ನೀವು ಸ್ಪೂರ್ತಿ.ನಿಮ್ಮ ಲೇಖನ ಹಿಡಿಸಿದೆ ಹೀಗೆ ನಿಮ್ಮ ಜೀವನದ ಬಗ್ಗೆ ಬರೆಯುತ್ತಿರಿ ...
ಪ್ರೇಮತಾಣ ಹೇಳಿದ್ದಾರೆ…
ಲೇಖನ ತುಂಬ ಇಷ್ಟವಾಯಿತು. ಅನುಭವಗಳು, ಅವುಗಳು ಕಲಿಸಿದ್ದು, ಅವೆಲ್ಲವನ್ನೂ ಹೇಳಿರುವ ಬಗೆ ಆಪ್ತವಾಯಿತು.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು