ಆದಿಲ್‌ಷಾಹಿ ಸಾಹಿತ್ಯ ಅನುವಾದ ಯೋಜನೆಆದಿಲ್‌ಷಾಹಿ ಸಾಹಿತ್ಯ ಅನುವಾದ

ಆದಿಲ್‌ಶಾಹಿ ಆಡಳಿತದ ಅವಯಲ್ಲಿ  ರಚಿತವಾದ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮಹತ್ವಾಕಾಂಕ್ಷಿ ಯೋಜನೆಯು ಕಾರ್ಯರೂಪಕ್ಕೆ ಬಂದಿದೆ. ಮೂರು ವರ್ಷದ ಅವಯ ಈ ಯೋಜನೆಯಲ್ಲಿ  ಒಟ್ಟು 20 ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲು ಉದ್ದೇಶಿಸಲಾಗಿದೆ.  ಈಗಾಗಲೇ ಏಳು ಸಂಪುಟಗಳು ಸಿದ್ಧಗೊಂಡಿವೆ. ಮುಂಬರುವ ಜನವರಿಯಲ್ಲಿ ಮೊದಲ ಕಂತಿನ ಪುಸ್ತಕಗಳು ಬಿಡುಗಡೆ ಆಗಲಿವೆ. ಸುಮಾರು 10,000 ಪುಟಗಳಷ್ಟು ಇರುವ ಸಾಹಿತ್ಯವು 20 ಸಂಪುಟಗಳಲ್ಲಿ  ಇರುತ್ತದೆ. ಅವುಗಳಲ್ಲಿ  ಆದಿಲ್‌ಶಾಹಿ ಆಡಳಿತದ ಅವಯ ಎರಡು ಸಂಪುಟಗಳು ಸನದು ಮತ್ತು ಫರ್ಮಾನುಗಳನ್ನು ಒಳಗೊಂಡಿರುತ್ತವೆ. ಈ ಯೋಜನೆಗೆ ಆಸರೆ ಆದದ್ದು ವಿಜಾಪುರದ ಬಿಎಲ್‌ಡಿಇ ಸಂಸ್ಥೆಯ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ನೋಡುವುದಕ್ಕೂ ದುರ್ಲಭವಾಗಿದ್ದ  ಅಪರೂಪದ ಹಸ್ತಪ್ರತಿಗಳನ್ನು ಹೈದರಾಬಾದ್‌ನ ಸಾಲಾರ್‌ಜಂಗ್ ಮ್ಯೂಸಿಯಂ ಹಾಗೂ ಹೈದರಾಬಾದ್, ದೆಹಲಿ ಪತ್ರಾಗಾರ ಇಲಾಖೆ, ಗೋಳಗುಮ್ಮಟ ಮ್ಯೂಸಿಯಂ- ಗ್ರಂಥಾಲಯ, ಪುಣೆ ಭಾರತೀಯ ಇತಿಹಾಸ ಸಂಶೋಧನ ಕೇಂದ್ರ, ಲಂಡನ್ ಬ್ರಿಟಿಷ್ ಮ್ಯೂಸಿಯಂ, ಲಂಡನ್ ಇಂಡಿಯಾ ಆಫೀಸ್ ಲೈಬ್ರರಿಗಳಿಂದ ಸಂಗ್ರಹಿಸಲಾಗಿದೆ.
ಫೆರಿಸ್ತಾನ ಇತಿಹಾಸ : ಅಹ್ಮದ್‌ನಗರದ ನಿಜಾಮ್‌ಷಾಹಿ ಅರಸು ಕುಮಾರರಿಗೆ ಫಾರಸಿ ಕಲಿಸುವ ಉದ್ದೇಶದಿಂದ ಕ್ಯಾಸ್ಪಿಯನ್ ಸಮುದ್ರದ ಮೂಲಕ ಭಾರತಕ್ಕೆ ಆಗಮಿಸಿದ ಫೆರಿಸ್ತಾ ಮೂಲತಃ ಇರಾನ್‌ನ ಆಸ್ತ್ರಾಬಾದ್ ನಗರಕ್ಕೆ ಸೇರಿದವನು. ಮುಹಮ್ಮದ್ ಖಾಸೀಮ್ ಹಿಂದುಶಹಾ ಫೆರಿಸ್ತಾ ಅವನ ಪೂರ್ಣ ಹೆಸರು. ರಾಜಕುಮಾರ ಮೀರಾನ್ ತಂದೆಯ ಸಿಂಸಾಹನದಿಂದ ಇಳಿಸಿ ಅಕಾರಕ್ಕೆ ಬಂದ ನಂತರದ ಹಳೆಯ ಸ್ನೇಹಿತನೇ ವೈರಿಯಾದ. ಕೈಯಲ್ಲಿ  ಜೀವ ಹಿಡಿದುಕೊಂಡ  ಫೆರಿಸ್ತಾ ಅಹ್ಮದ್‌ನಗರ ತೊರೆದು ಬಿಜಾಪುರಕ್ಕೆ ವಲಸೆ ಬಂದ. ಎರಡನೇ ಇಬ್ರಾಹಿಂನ ಅವಯಲ್ಲಿ  ಆಸ್ಥಾನ ಸೇರಿದ ಫೆರಿಸ್ತಾ ದೊರೆಯ ಅಣತಿಯಂತೆ ಭಾರತದ ಇತಿಹಾಸ ರಚನೆಗೆ ಮುಂದಾದ. ಅವನ ಇತಿಹಾಸದ ಬರವಣಿಗೆಯನ್ನು ಒಳಗೊಂಡ ಪುಸ್ತಕವನ್ನು  ಗುಲ್ಶನ್ ಏ ಇಬ್ರಾಹಿಂ ಅಥವಾ ತಾರೀಖ್ ಏ ನೌರಸ್ ಅಥವಾ ತಾರೀಖ್ ಏ ಫೆರಿಸ್ತಾ ಎಂದು ಕರೆಯಲಾಗುತ್ತದೆ. 13 ಅಧ್ಯಾಯಗಳಲ್ಲಿ ಇರುವ ತಾರೀಖ್ ಏ ಫೆರಿಸ್ತಾ ಕೃತಿಯು ದೆಹಲಿಯಷ್ಟೇ ಪ್ರಾಮುಖ್ಯತೆ ದಖನ್ ಮತ್ತಿತರ ಸಣ್ಣಪುಟ್ಟ ಸಂಸ್ಥಾನದ ದೊರೆಗಳಿಗೂ ನೀಡಿದ ಕಾರಣಕ್ಕಾಗಿ ಮಹತ್ವದ್ದಾಗಿದೆ. ಇತಿಹಾಸ ರಚನೆಗಾಗಿ ಫೆರಿಸ್ತಾನು ಅದುವರೆಗೆ ಬಂದಿದ್ದ ಎಲ್ಲ ಕೃತಿಗಳನ್ನು ಅವಲೋಕಿಸಿದ್ದ. ಅಷ್ಟೇ ಅಲ್ಲ ತಾನು ಮಾಹಿತಿ ಪಡೆದ 29 ಕೃತಿಗಳ ಪಟ್ಟಿ ನೀಡಿದ್ದಾನೆ.
ಮಧ್ಯಕಾಲೀನ ಭಾರತದ ಮಹತ್ವದ ಐತಿಹಾಸಿಕ ಆಕರ ಎಂದು ಪರಿಗಣಿಸಲಾಗುವ ಫೆರಿಸ್ತಾನ ಕೃತಿಯು ನಾಲ್ಕು ಬಾರಿ ಇಂಗ್ಲಿಷಿಗೆ ಅನುವಾದಗೊಂಡಿದೆ. ಜೋನಾಥನ್ ಸ್ಕಾಟ್ 1794ರಲ್ಲಿ  ಎರಡು ಸಂಪುಟಗಳಲ್ಲಿ ’ಫೆೆರಿಸ್ತಾ’ಸ್ ಹಿಸ್ಟರಿ ಆಫ್ ಡೆಕ್ಕನ್’ ಪ್ರಕಟಿಸಿದ. ಅದಾದ ನಂತರ 1803ರಲ್ಲಿ ಅಲೆಕ್ಸಾಂಡರ್ ಡೌ ಮೂರು ಸಂಪುಟಗಳಲ್ಲಿ  ’ಹಿಸ್ಟರಿ ಆಫ್ ಹಿಂದೂಸ್ತಾನ್’ ಪ್ರಕಟಿಸಿದ.  ಬ್ರಿಟಿಷ್ ಅನುವಾದಕರಾದ ಎಚ್.ಎಂ. ಎಲಿಯಟ್ ಮತ್ತು ಜಾನ್ ಡಾಸನ್ ಅವರು 1867ರಲ್ಲಿ  ಪ್ರಕಟಿಸಿದ ’ಹಿಸ್ಟರಿ ಆಫ್ ಇಂಡಿಯಾ ಆ್ಯಸ್ ಟೋಲ್ಡ್ ಬೈ ಇಟ್ಸ್ ಹಿಸ್ಟಾರಿಯನ್ಸ್’ ಎಂಬ ಎಂಟು ಸಂಪುಟಗಳಲ್ಲಿ ಫೆರಿಸ್ತಾನ ಪುಸ್ತಕದ ಆಯ್ದ ಭಾಗ ಅನುವಾದಗೊಂಡಿತು. ಈ ಮೂರು ಅನುವಾದಗಳೂ ಫೆರಿಸ್ತಾನ ಬೃಹತ್ ಗ್ರಂಥದ ಆಯ್ದ ಭಾಗಗಳಲ್ಲಿದ್ದವು.
ಅದಕ್ಕೂ ಮುನ್ನ (1829) ಮದ್ರಾಸಿನಲ್ಲಿ ಬ್ರಿಟಿಷ್ ಸೈನಿಕ ಅಕಾರಿ ಜಾನ್ ಬ್ರಿಗ್ಸ್  ಫೆರಿಸ್ತಾನ ಪುಸ್ತಕದ ಐತಿಹಾಸಿಕ ಮಹತ್ವ ಅರಿತಿದ್ದ. ಜಾನ್ ಬ್ರಿಗ್ಸ್ ಫೆರಿಸ್ತಾನ ಕೃತಿ ಅನುವಾದ ಮಾಡುವುದಕ್ಕಾಗಿಯೇ ಫಾರಸಿ ಕಲಿತಿದ್ದ. ’ಹಿಸ್ಟರಿ ಆಫ್ ದ ರೈಸ್ ಆಫ್ ಮಹೋಮದನ್ ಪವರ್ ಇನ್ ಇಂಡಿಯಾ’ ನಾಲ್ಕು ಸಂಪುಟಗಳಲ್ಲಿದೆ. ಲಭ್ಯವಿರುವ ಇರುವ ನಾಲ್ಕು ಇಂಗ್ಲಿಷ್ ಅನುವಾದಗಳ ಪೈಕಿ ಬ್ರಿಗ್ಸ್‌ನ ಅನುವಾದವೇ ಹೆಚ್ಚು ಜನಪ್ರಿಯ.  ಫೆರಿಸ್ತಾನ ಇತಿಹಾಸದ ಬಹುತೇಕ ಅನುವಾದ ಇರುವ ಈ ಕೃತಿಯು ಮೂಲಕ್ಕೆ ಹೆಚ್ಚು  ನಿಷ್ಟವಾಗಿದೆ. ಆದರೆ, ಬ್ರಿಗ್ಸ್ ಕೂಡ ಇಡೀಯಾಗಿ ಫೆರಿಸ್ತಾನ ಪುಸ್ತಕ ಅನುವಾದ ಮಾಡಿರಲಿಲ್ಲ. ಭಾರತೀಯ ಸಂತರನ್ನು ಕುರಿತ ವಿವರಗಳಿರುವ 12ನೇ ಅಧ್ಯಾಯವನ್ನು  ಬ್ರಿಗ್ಸ್  ಸಂಪೂರ್ಣವಾಗಿ ಕೈ ಬಿಟ್ಟಿದ್ದ. ಅಲ್ಲದೇ ತನಗೆ ಐತಿಹಾಸಿಕ ಮಹತ್ವದ್ದು ಎನಿಸುವ ಅಂಶಗಳಿಗೆ ಆದ್ಯತೆ ನೀಡಿ ಸಾಮಾನ್ಯರಿಗೆ ಸೇರಿದ ಕೆಲವು ಸಾಲುಗಳನ್ನು ಅನುವಾದಕ್ಕೆ ಪರಿಗಣಿಸಿರಲಿಲ್ಲ.
ಫೆರಿಸ್ತಾನ ಇತಿಹಾಸವು ಇಡೀಯಾಗಿ ತರ್ಜುಮೆಗೊಂಡಿರುವುದು ಉರ್ದು ಭಾಷೆಯಲ್ಲಿ ಮಾತ್ರ.  1964ರಲ್ಲಿ  ದೇವಬಂದ್‌ನಿಂದ ಪ್ರಕಟವಾಗಿರುವ ಉರ್ದು ಅನುವಾದ ಮಾತ್ರ ಪದಶಃ  ಭಾಷಾಂತರ. ಸದ್ಯ ಇದೇ ಆವೃತ್ತಿಯನ್ನು ಇಟ್ಟುಕೊಂಡು ಕನ್ನಡಕ್ಕೆ ಅನುವಾದಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಫಾರಸಿ ಮೂಲ ಹಾಗೂ ಇಂಗ್ಲಿಷ್ ಅನುವಾದಗಳು ಜತೆಯಲ್ಲಿಟ್ಟು  ತುಲನೆ ಮಾಡಲಾಗುತ್ತಿದೆ. ಕನ್ನಡದಲ್ಲಿ ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗುತ್ತಿರುವ ಫೆರಿಸ್ತಾನ ಅನುವಾದವನ್ನು ಹದಿನಾಲ್ಕು ಜನ ಅನುವಾದಕರು ಮಾಡಿದ್ದಾರೆ. ಕನ್ನಡದ ಇತಿಹಾಸದ ಗ್ರಂಥಗಳ ಉಲ್ಲೇಖಗಳಲ್ಲಿ ದೊರಕುತ್ತಿದ್ದ  ಫೆರಿಸ್ತಾನ ಪುಸ್ತಕವು ಮೊದಲ ಬಾರಿಗೆ ಕನ್ನಡಕ್ಕೆ ಇಡೀಯಾಗಿ ಬರುತ್ತಿದೆ.

ಅಬ್ದುಲ್ಲಾ  ದೆಹಲ್ವಿ
ದಖನಿ ಉರ್ದುವಿನಲ್ಲಿ ಇರುವ  ’ಇಬ್ರಾಹಿಂನಾಮಾ’ ಕೃತಿಯು ಕಾವ್ಯದ ಮೂಲಕ ಇತಿಹಾಸವನ್ನು ಕಟ್ಟುವ ವಿಶಿಷ್ಟ ಪ್ರಯತ್ನ. ಇರುವ ದ್ವಿಪದಿ ರೂಪದ ಪದ್ಯಗಳು ತಮ್ಮ ಕಾವ್ಯಾತ್ಮಕ ಕಾರಣದಿಂದ ಗಮನ ಸೆಳೆಯುತ್ತವೆ. ಋತುಗಳ ವರ್ಣನೆ ಸೊಗಸಾಗಿದೆ. ದಖನಿಯಿಂದ ಉರ್ದುವಿಗೆ ಭಾಷಾಂತರಿಸಿಕೊಂಡು ನಂತರ ಕನ್ನಡೀಕರಣಗೊಳಿಸಲಾಗುತ್ತಿದೆ. ಹೈದರಾಬಾದ್‌ನ ಸಾಲಾರ್ ಜಂಗ್ ಅವರ ಆಸ್ಥಾನದಲ್ಲಿ ಇದ್ದ ಮೀರ್ ಅಲಿ ಅಹ್ಮದ್ ರಚಿಸಿದ ಗುಲ್‌ದಸ್ತ್ ಏ ಬಿಜಾಪುರ ಹಾಗೂ ಫಿತುರ್‌ಖಾನ್ ಲಾರಿಯ ’ಹಫ್ತ್ ಖುರ್ಷಿ’ ಹಾಗೂ ಮೊದಲನೇ ಅಲಿ ಆದಿಲ್‌ಶಹಾನಿಗೆ ಆಪ್ತನಾಗಿದ್ದ ರಫಿಯುದ್ದೀನ್ ತಜಕಿರುಲ್ ಉಲ್ ಮುಲ್ ಹಾಗೂ ಖಾಜಿ ನುರುಲ್ಲಾ ರಚಿಸಿದ ’ತಾರೀಖ್ ಏ ಅಲಿ ಆದಿಲ್‌ಶಹಾ’  ಮತ್ತು ಮುಲ್ಲಾ ನುಸ್ರತಿ ರಚಿಸಿದ ’ಅಲಿನಾಮ’ ಮೊದಲನೇ ಹಂತದಲ್ಲಿ  ಪ್ರಕಟವಾಗುತ್ತಿವೆ.


ಸಿದ್ಧಗೊಂಡಿರುವ ಪುಸ್ತಕಗಳು
1) ಫೆರಿಸ್ತಾ- ಗುಲ್ಶನ್ ಏ ಇಬ್ರಾಹಿಂ
2) ಅಬ್ದುಲ್ ದೆಹಲ್ವಿ- ಇಬ್ರಾಹಿಂನಾಮಾ
3) ಮೀರ್ ಅಹ್ಮದ್ ಅಲಿಖಾನ್- ಗುಲ್‌ದಸ್ತಾ ಏ ಬಿಜಾಪುರ
4) ಮೀರ್ ರಫಿಯುದ್ದೀನ ಶಿರಾಜಿ- ತಜಕ್‌ದಿರ್ ಉಲ್ ಮುಲ್ಕ್
5)  ಮುಲ್ಲಾ ನುಸ್ರತಿ - ಅಲಿನಾಮಾ
6) ಮುಲ್ಲಾ ಜುಹುರ್ ಬಿನ್ ಜುಹುರಿ-ಮುಹಮ್ಮದ್ ನಾಮಾ
7) ಇಬ್ರಾಹಿಂ ಜುಬೇರಿ- ಬಸಾತಿನ್ ಅಲ್ ಸಲಾತಿನ್ಅನುವಾದ ಯೋಜನೆಗೆ ಆಯ್ಕೆ ಮಾಡಲಾದ ಪುಸ್ತಕಗಳು
1) ಮೀರ್ ಅಹ್ಮದ್ ಅಲಿಖಾನ್- ಗುಲ್‌ದಸ್ತಾ ಏ ಬಿಜಾಪುರ
2) ಅಬುಲ್ ಹಸನ್ ಖಾದ್ರಿ- ಷಾಹಿಪತ್ ಹಿ ಖುದಾ
3) ಸೈಯದ್ ಅಲಿ ಬಿಲ್‌ಗ್ರಾಮಿ- ತಾರೀಖ್ ಏ ದಖನ್
4) ಸೈಯದ್ ಮೊಹಿಯುದ್ದೀನ್ ಪೀರ್‌ಜಾದ್- ಅಹವಾಲೆ ಸಲಾತಿನ್ ಬಿಜಾಪುರ
5) ಫಿತುರ್‌ಖಾನ್ ವಲ್ಲದ್ ಅಸದ್‌ಖಾನ್ ಲಾರಿ- ಹಫ್ತ್ ಖುರ್ಷಿ
6) ಎರಡನೇ ಇಬ್ರಾಹಿಂ ಆದಿಲ್ ಶಹಾ- ಕಿತಾಬ್ ಏ ನೌರಸ್
7) ಇಬ್ರಾಹಿಂ ಜುಬೇರಿ- ರೌಜತ್ ಅಲ್ ಔಲಿಯಾ ಏ ಬಿಜಾಪುರ
8) ಇಬ್ರಾಹಿಂ ಜುಬೇರಿ- ಬಸಾತಿನ್ ಅಲ್ ಸಲಾತಿನ್
9) ಅಬ್ದುಲ್ ಇಬ್ರಾಹಿಂನಾಮಾ ಅಸದ್‌ಬೇಗ್- ವಕಾಯತ್ ಎ ಅಸದ್‌ಬೇಗ್
10) ಮುಲ್ಲಾ ನುಸ್ರತಿ - ಅಲಿನಾಮಾ
11) ಬಸಿರುದ್ದೀನ್ ಅಹ್ಮದ್-ವಕಾಯತ್ ಎ ಮಾಮಲ್‌ತಕ್ ಬಿಜಾಪುರ
12) ಉಮರ್ ಹಾಸಿಂ ಘಜ್ನಿ-  ಫುತುಹತ್ ಏ ಆದಿಲ್‌ಷಾಹಿ
13) ಶೇಕ್ ಜೈನುದ್ದೀನ್ ಅಲ್ ಮಾಬಾದಿ- ಫುತುಹುತ್ ಉಲ್ ಮುಜಾಹಿದ್ದೀನ್
14) ಮೀರ್ ರಫಿಯುದ್ದೀನ ಶಿರಾಜಿ- ತಜಕ್‌ದಿರ್ ಉಲ್ ಮುಲ್ಕ್
15) ಫೆರಿಸ್ತಾ- ಗುಲ್ಶನ್ ಏ ಇಬ್ರಾಹಿಂ
16) ಮುಲ್ಲಾ ಜುಹುರ್ ಬಿನ್ ಜುಹುರಿ-ಮುಹಮ್ಮದ್ ನಾಮಾ
17) ಅಬ್ದುಲ್ ದೆಹಲ್ವಿ- ಇಬ್ರಾಹಿಂನಾಮಾ
18) ಖಾಜಿ ನೂರುಲ್ಲಾ- ತಾರೀಖ್ ಏ ಅಲಿ ಆದಿಲ್‌ಶಹಾ


ಆದಿಲ್‌ಶಾಹಿ: ಐತಿಹಾಸಿಕ ಹಿನ್ನೆಲೆ
ಗೋದಾವರಿ ನದಿಯಿಂದ ಕೆಳಗೆ ಮತ್ತು ತುಂಗಭದ್ರಾ ನದಿಯ ಮೇಲ್ಭಾಗದ ಪ್ರದೇಶವನ್ನು  ’ದಖನ್’ ಎಂದು ಕರೆಯಲಾಗುತ್ತದೆ. ಈ ದಖನ್ ಪ್ರಸ್ಥಭೂಮಿಯಲ್ಲಿ ಕನ್ನಡ- ಮರಾಠಿ- ತೆಲುಗು ಭಾಷೆಗಳು ಪರಸ್ಪರ ಮುಖಾಮುಖಿ ಆಗುತ್ತವೆ. ಕೊಡುಕೊಳ್ಳುವಿಕೆಯ ಮೂಲಕ ಬೆಳೆಯುತ್ತ ಹೋಗುತ್ತವೆ. ಚಿನ್ನ- ಸಿರಿವಂತಿಕೆಗೆ ಈ ದಖನ್ ಹೆಸರುವಾಸಿಯಾಗಿತ್ತು. ಅದೇ ಕಾರಣಕ್ಕಾಗಿಯೇ ದೆಹಲಿಯಲ್ಲಿ ದೊರೆಯಾಗಿದ್ದ  ಅಲಾವುದ್ದೀನ್ ಖಿಲ್ಜಿಯು ದಖನ್‌ನತ್ತ ಮುಖ ಮಾಡಿದ. ಅವನ ನಂತರ ಅಕಾರ ಬಂದದ್ದು ತುಘಲಕ್ ಮನೆತನ. ದಖನ್ ಪ್ರಾಂತ್ಯದ ಆಡಳಿತಾಕಾರಿ ಆಗಿದ್ದ  ಉಲುಗ್‌ಖಾನ್ ನಂತರ ದೆಹಲಿ ಸಿಂಹಾಸನವನ್ನೇರಿ ಮಹಮದ್ ಬಿನ್ ತುಘಲಕ್ ಆದ. ಯುವರಾಜನಾಗಿದ್ದ ದಿನಗಳಲ್ಲಿ ಕಳೆದ ದಖನ್ ಬಗೆಗಿನ ಮೋಹ, ಆಡಳಿತ ಕೇಂದ್ರವು ಮಧ್ಯದಲ್ಲಿರಬೇಕು ಎಂಬ ತರ್ಕದಿಂದ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿ (ದೌಲತಾಬಾದ್)ಗೆ ವರ್ಗಾಯಿಸಿದ. ಆಡಳಿತ ವ್ಯವಸ್ಥೆಯನ್ನಲ್ಲದೆ ಜನತೆಯನ್ನೂ  ಸ್ಥಳಾಂತರಿಸುವ ಲೋಪ ಎಸಗಿದ ತುಘಲಕ್ ಪ್ರಮಾದದಿಂದ ಎಚ್ಚೆತ್ತುಕೊಂಡು ದೆಹಲಿಗೆ ಮರುವರ್ಗಾವಣೆ ಮಾಡಿದ.
ತುಘಲಕ್‌ನ ಆಡಳಿತದ ವಿರುದ್ಧ  ದಖನ್‌ನಲ್ಲಿ ಕಾಣಿಸಿಕೊಂಡ ಮೊದಲ ಪ್ರತಿರೋಧವು ಹಂಪಿಯಲ್ಲಿ  ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾಯಿತು. ಅದಾದ ಕೆಲ ವರ್ಷಗಳ ನಂತರ ಮುಸ್ಲಿಂ ಸರದಾರರೆಲ್ಲ ಸೇರಿ ದಂಗೆ ಎದ್ದು  ಬಹಮನಿ ಸಾಮ್ರಾಜ್ಯ ಸ್ಥಾಪನೆಗೆ ಮುಂದಾದರು. ಬಹಮನಿ ದೊರೆಗಳು ಗುಲ್ಬರ್ಗ- ಬೀದರ್ ರಾಜಧಾನಿ ಆಗಿಸಿಕೊಂಡು ಆಡಳಿತ ನಡೆಸಿದರು. ಬೀದರ್‌ನಲ್ಲಿ ಪ್ರಧಾನಿ ಆಗಿದ್ದ ಮಹಮೂದ್ ಗಾವಾನ್‌ನ ಸಾಕುಮಗ ಯುಸೂಫ್ ಆದಿಲ್‌ಖಾನ್ ಬಿಜಾಪುರ ಪ್ರಾಂತ್ಯದ ಆಡಳಿತಾಕಾರಿ ಆಗಿದ್ದ. ಗಾವಾನ್‌ನ ಹತ್ಯೆಯ ನಂತರ ಬಹಮನಿ ಸಾಮ್ರಾಜ್ಯ ಒಡೆದು ಐದು ಹೋಳಾಯಿತು. ನ್ಯಾಯವಂತ (ಆದಿಲ್) ಯುಸೂಫ್ ಸ್ವಾತಂತ್ರ್ಯ ಘೋಷಿಸಿದ. ಹೊಸ ಸಾಮ್ರಾಜ್ಯದ ಹುಟ್ಟಿಗೆ ನಾಂದಿ ಹಾಡಿದ. ಯುಸೂಫ್‌ನ ನಂತರದ ಆದಿಲ್‌ಷಾಹಿ ದೊರೆಗಳು ವಾಸ್ತುಶಿಲ್ಪ- ಕಲೆ- ಸಾಹಿತ್ಯ- ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಹಲವು ಭಾಷೆ- ಸಂಸ್ಕತಿಗಳ ಕುದಿತಟ್ಟೆಯಂತಿದ್ದ ದಖನ್ ಪ್ರದೇಶವು ಬಹಮನಿ- ಆದಿಲ್‌ಷಾಹಿ ಅರಸರ ಕಾಲದಲ್ಲಿಯೇ ಪರಸ್ಪರ ಹೊಂದಿಕೊಂಡು ಬಾಳುವ ಸಂಸ್ಕೃತಿಗೆ ನಾಂದಿ ಹಾಡಿತು. ಜತೆಯಾಗಿ ಬಾಳುವ ಸಂಸ್ಕೃತಿಗೆ ಸೂಫಿಗಳು ನೀರು ಎರೆದರು. ಇಡೀ ಭಾರತಕ್ಕೆ ಜಾತ್ಯತೀತ ವೌಲ್ಯಗಳ ಸಂದೇಶ ರವಾನೆಯಾದದ್ದು  ದಖನ್‌ನಿಂದ. ನಂತರದ ದಿನಗಳಲ್ಲಿ  ದೆಹಲಿಯಲ್ಲಿ ಅಕ್ಬರ್ ಅದನ್ನ  ’ದೀನ್ ಇಲಾಹಿ’ಯ ಮೂಲಕ ಅಕೃತಗೊಳಿಸಿದ.
ಆದಿಲ್‌ಷಾಹಿ ಅರಸು ಮನೆತನವು ಆರಂಭದ ದಿನಗಳಲ್ಲಿ ತನ್ನ ಅಸ್ತಿತ್ವಕ್ಕಾಗಿ ವಿಜಯನಗರದ ಸಾಮ್ರಾಜ್ಯದ ಜತೆಗಲ್ಲದೇ ತನ್ನ ಸಹೋದರ ರಾಜ್ಯಗಳಾದ ಇಮಾದ್‌ಷಾಹಿ, ಕುತುಬ್‌ಷಾಹಿ, ಬರೀದ್‌ಷಾಹಿ ಅರಸರ ಜತೆ ಹೆಣಗಾಡಿತು. ನಂತರದ ದಿನಗಳಲ್ಲಿ  ಪಶ್ಚಿಮದ ಕಡೆಯಿಂದ ಮರಾಠರು ಮತ್ತು ಉತ್ತರದ ಕಡೆಯಿಂದ ಮೊಘಲ್ ದೊರೆಗಳು ವಾತಾವರಣದ ಬಿಸಿ ಮುಂದುವರೆಯುವಂತೆ ಮಾಡಿದ್ದರು. ಕೊನೆಗೆ ಔರಂಗಜೇಬ್‌ನ ಕಾಲದಲ್ಲಿ ಬಿಜಾಪುರ ಮೊಘಲ್‌ರ ಪಾಲಾಯಿತು. ಕ್ರಿ.ಶ. 1489ರಿಂದ 1686ರ ನಡುವಿನ ಅವಯಲ್ಲಿ  ಒಂಭತ್ತು ಆದಿಲ್‌ಷಾಹಿ ದೊರೆಗಳು ಆಡಳಿತ ನಡೆಸಿದರು.
ಆದಿಲ್‌ಷಾಹಿ ಅರಸರ ಕಾಲದಲ್ಲಿಯೇ ಇಸ್ಲಾಮಿಕ್ ಚಿತ್ರಕಲೆಯು ಪ್ರಫುಲ್ಲಿತವಾಗಿ ಅರಳಿತು. ಚಿತ್ರಕಲೆಯು ಮಿನಿಯೇಚರ್ ಭಾವಚಿತ್ರ ರಚಿಸುವ ಹಂತ ತಲುಪಿದರೆ ಇಬ್ರಾಹಿಂನ ಕಾಲದಲ್ಲಿ ಶಾಸ್ತ್ರೀಯ ಸಂಗೀತದಲ್ಲಿಯೂ ಗಣನೀಯ ಸಾ‘ನೆ ಕಂಡಿತು. ಬೃಹತ್ ಗುಂಬಜ್ ಇರುವ ಗೋಳಗುಮ್ಮಟ, ಕುಸುರಿ ಕೆಲಸದ ಇಬ್ರಾಹೀಂ ರೋಜಾ, ಅಪೂರ್ಣಗೊಂಡಿರುವ ಬಾರಾಕಮಾನ್‌ದಂತಹ ಅನನ್ಯ ವಾಸ್ತುಶಿಲ್ಪಕ್ಕೆ ಕಾರಣರಾದ ಆದಿಲ್‌ಷಾಹಿ ಅರಸರ ಕಾಲದಲ್ಲಿಯೇ ದಖನಿಯು ಸಾಹಿತ್ಯಕ ಅಭಿವ್ಯಕ್ತಿಯ ಹಂತಕ್ಕೆ ಏರಿತು. ಮರಾಠಿ- ಫಾರಸಿ- ದಖನಿ- ಉರ್ದು ಭಾಷೆಗಳಲ್ಲಿ ಆದಿಲ್‌ಷಾಹಿ ಸಾಮ್ರಾಜ್ಯದ ಐತಿಹಾಸಿಕ ದಾಖಲೆಗಳಲ್ಲಿ ಹರಡಿಕೊಂಡಿವೆ.


****

ಡಾ. ಎಂ.ಎಂ. ಕಲಬುರ್ಗಿ
ಅಧ್ಯಕ್ಷರು, ಆದಿಲ್‌ಶಾಹಿ ಸಾಹಿತ್ಯ ಅನುವಾದ ಯೋಜನಾ ಸಮಿತಿ
ಆದಿಲ್‌ಶಾಹಿ ಸಾಹಿತ್ಯದ ಅನುವಾದದ ಹಿಂದಿನ ಉದ್ದೇಶ ಏನು?
ಮಧ್ಯಕಾಲೀನ ಅವಧಿಯ ವರೆಗೆ ಭಾರತೀಯ ಮನಸ್ಸುಗಳು ಪುರಾಣಗಳಲ್ಲಿ ಮುಳುಗಿ ಹೋಗಿದ್ದವು. ಅವರಿಗೆ ಇತಿಹಾಸದ ಅರಿವು ಇರಲಿಲ್ಲ. ಆದರೆ, ಮುಸ್ಲಿಂ ಲೇಖಕರಿಗೆ ಐತಿಹಾಸಿಕ ಪ್ರಜ್ಞೆ ಇತ್ತು. ಇತಿಹಾಸಕಾರನ ಬರವಣಿಗೆಯಲ್ಲಿ ಕೇವಲ ರಾಜಕೀಯ ಮಾತ್ರ ಇರುವುದಿಲ್ಲ. ಸುತ್ತಲಿನ ಸಮಾಜದ ಆಗುಹೋಗುಗಳನ್ನು ಕೂಡ ದಾಖಲಿಸಿರುತ್ತಾನೆ. ಅಂತಹ ಪಠ್ಯಗಳನ್ನು ಅನುವಾದಿಸಿಕೊಂಡಾಗ ಮಾತ್ರ ಚರಿತ್ರೆಯನ್ನು ಕಟ್ಟಿಕೊಳ್ಳುವುದು ಸಾಧ್ಯವಾಗುತ್ತದೆ. ಹಿಂದಿನ ಇತಿಹಾಸಕಾರರಿಗೆ ಮುಸ್ಲಿಮರು ನಮ್ಮವರಲ್ಲ ಎನ್ನುವ ಭಾವನೆ ಇತ್ತು. ಆದ್ದರಿಂದ ವಿಜಯನಗರದಷ್ಟೇ ಪ್ರಭಾವಶಾಲಿಯಾಗಿದ್ದ ಆದಿಲ್‌ಶಾಹಿ ಅರಸರ ಬಗ್ಗೆ ಹೆಚ್ಚು ಕೆಲಸ ಆಗಲಿಲ್ಲ.  ಬಹುತೇಕ ಪಠ್ಯಗಳು ಉರ್ದು- ಅರಬ್ಬಿ- ಫಾರಸಿ ಭಾಷೆಗಳಲ್ಲಿ ಇದ್ದದ್ದರಿಂದ ಕನ್ನಡಕ್ಕಿರಲಿ ಇಂಗ್ಲಿಷಿಗೂ ಅನುವಾದ ಆಗಿರಲಿಲ್ಲ. ಅಷ್ಟೇ ಅಲ್ಲ, ಆದಿಲ್‌ಶಾಹಿ ಸಾಹಿತ್ಯಕ್ಕೆ ಸಂಬಂಸಿದ ಬಹಳಷ್ಟು ಪಠ್ಯಗಳು ಮುದ್ರಣ ಕಾಣದೇ ಕೇವಲ ಹಸ್ತಪ್ರತಿಗಳಲ್ಲಿ ಮಾತ್ರ ಉಳಿದುಕೊಂಡಿದ್ದವು, ಆಕರಗಳು ಅಲ‘್ಯ ಆಗಿದ್ದರಿಂದ ಮತ್ತು ಅವುಗಳ ಅ‘್ಯಯನ ಮತ್ತು ಪ್ರಕಟಣೆ ಸಾಧ್ಯ ಆಗಿರಲಿಲ್ಲ.


ಅನುವಾದ ಯೋಜನೆ ರೂಪುಗೊಂಡದ್ದು ಹೇಗೆ?
ಹಂಪಿಯ ಕನ್ನಡ ವಿಶ್ವದ್ಯಾಲಯದ ಕುಲಪತಿ ಆಗಿದ್ದ ಸಂದರ್ಭದಲ್ಲಿ ಆದಿಲ್‌ಶಾಹಿ ಸಾಹಿತ್ಯದ ಬಗ್ಗೆ ಆಸಕ್ತಿ ಹುಟ್ಟಿತು. ವಿಜಯನಗರ ಸಾಮ್ರಾಜ್ಯದ ಸಮಕಾಲೀನ ಅರಸು ಮನೆತನಗಳಾದ ಬಹಮನಿ-ಆದಿಲ್‌ಶಾಹಿಗಳ ಬಗ್ಗೆ ಅರಿಯದಿದ್ದರೆ ಕರ್ನಾಟಕದ ಇತಿಹಾಸವೇ ಪೂರ್ಣ ಆಗುವುದಿಲ್ಲ. ಚರಿತ್ರೆಯನ್ನು ಕಟ್ಟಿಕೊಳ್ಳುವಾಗ ಇಡೀಯಾದ, ವಿಶಾಲ ಮನೋಭಾವದಿಂದ ಸಂಗತಿಗಳನ್ನು ನೋಡಬೇಕಾಗುತ್ತದೆ. ಇದುವರೆಗೆ ವಿಜಯನಗರದ ಬಗ್ಗೆ ನಡೆದ ಸಂಶೋಧನೆ- ಚರ್ಚೆಯ ಶೇ.10ರಷ್ಟೂ  ಆದಿಲ್‌ಶಾಹಿ- ಬಹಮನಿ ಸಾಮ್ರಾಜ್ಯದ ಬಗ್ಗೆ ನಡೆದಿಲ್ಲ. ಅದಕ್ಕೆ ಆದಿಲ್‌ಶಾಹಿ ಸಾಮ್ರಾಜ್ಯದ ಅಧ್ಯಯನಕ್ಕೆ ಆಕರವಾಗಿರುವ ಆಸ್ಥಾನ ಸಾಹಿತ್ಯವು ಉರ್ದು, ಫಾರಸಿ ಮತ್ತು ಅರಬ್ಬಿ ಭಾಷೆಗಳಲ್ಲಿ ಇರುವುದರಿಂದ ಕನ್ನಡಿಗರಿಗೆ ಅನ್ಯವಾಗಿಯೇ ಉಳಿದಿದೆ. ಆದಿಲ್‌ಶಾಹಿ ಸಾಹಿತ್ಯದ ಬಗ್ಗೆ ಸ್ಥೂಲವಾದ ಔಟ್‌ಲೈನ್ ಸಿಗಲಿ ಎನ್ನುವ ಕಾರಣಕ್ಕಾಗಿ ಆಗ ವಿಷಯದಲ್ಲಿ  ಆಸಕ್ತರಾಗಿದ್ದ ಕೃಷ್ಣ ಕೋಲಾರ ಕುಲಕರ್ಣಿ ಅವರಿಂದ ’ಆದಿಲ್‌ಶಾಹಿ ಆಸ್ಥಾನ ಸಾಹಿತ್ಯ’ ಬಗ್ಗೆ ಉಪನ್ಯಾಸ ಏರ್ಪಡಿಸಿ ನಂತರ ಪುಸ್ತಕ ರೂಪದಲ್ಲಿ ಪ್ರಕಟಿಸಲಾಯಿತು. ಹಾಗೆಯೇ ಕರ್ನಾಟಕದ ಫಾರಸಿ, ಅರಬ್ಬಿ, ಉರ್ದು ಶಾಸನಗಳ ಸಂಪುಟ ಕೂಡ ಪ್ರಸಾರಾಂಗದಿಂದ ಹೊರತರಲಾಯಿತು.

ಕರ್ನಾಟಕದ ಇತಿಹಾಸದ ಪುನರ್‌ವ್ಯಾಖ್ಯಾನಕ್ಕೆ ಕಾರಣ ಆಗಬಹುದೇ?
ಫಾರಸಿ ಮತ್ತು  ಉರ್ದು ಪಠ್ಯಗಳನ್ನು ಗಮನಿಸದೇ ಇದ್ದರೆ ಇತಿಹಾಸ ಪೂರ್ಣ ಆಗುವುದಿಲ್ಲ. ಸಮಕಾಲೀನ ಮತ್ತು ಕನ್ನಡೇತರ ಭಾಷೆಯಲ್ಲಿ ಇರುವ ಪಠ್ಯಗಳಿಂದ ಕರ್ನಾಟಕದ ಇತಿಹಾಸವನ್ನು ಬೇರೆ ರೀತಿಯಲ್ಲಿ ಕಟ್ಟಿಕೊಳ್ಳಲು ಸಾಧ್ಯ. ಆದಿಲ್‌ಶಾಹಿಗಳದ್ದು ಉತ್ತರದ ಮೊಗಲ್‌ರ ಜತೆ ಹಾಗೂ ದಕ್ಷಿಣದ ವಿಜಯನಗರದ ಅರಸರ ಜತೆಗೆ ಹೋರಾಟ-ಪೈಪೋಟಿ ಮಾಡಿದ ಮಾಡಿದ ಪ್ರಮುಖ ಅರಸು ಮನೆತನ. ಉತ್ತರ ದಕ್ಷಿಣ ಭಾರತದ ಕೊಂಡಿಯಂತಿರುವ ಆದಿಲ್‌ಶಾಹಿ ಆಡಳಿತ ಅವಯ ಸಾಹಿತ್ಯ ಅನುವಾದಿಸುವ ಯೋಜನೆ ಕೈಗೆತ್ತಿಕೊಂಡೆವು. ಉರ್ದು ಭಾಷೆಯಿಂದ ಅನುವಾದ ಮಾಡುವವರು ಸಿಗುತ್ತಾರೆ. ಫಾರಸಿಯಿಂದ ಅನುವಾದಿಸುವವರು ಸಿಗುವುದು ಕಠಿಣ. ಆದ್ದರಿಂದ ಮೊದಲ ಹಂತದಲ್ಲಿ ಉರ್ದು ಮತ್ತು ಮರಾಠಿ  ಭಾಷೆಯಲ್ಲಿ ಇರುವ ಕೃತಿಗಳನ್ನು ಅನುವಾದಿಸಿ ನಂತರ ಫಾರಸಿ ಕೃತಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ.


*****

ಕೃಷ್ಣ ಕೋಲಾರ ಕುಲಕರ್ಣಿ
ನಿರ್ದೇಶಕರು, ಆದಿಲ್‌ಶಾಹಿ ಸಾಹಿತ್ಯ ಅನುವಾದ ಯೋಜನೆ, ವಚನ ಪಿತಾಮಹ ಫ.ಗು. ಹಳಕಟ್ಟಿ ಸಂಶೋ‘ನ ಕೇಂದ್ರ, ಬಿಎಲ್‌ಡಿಇ ಸಂಸ್ಥೆ , ವಿಜಾಪುರ

ಪ್ರಶ್ನೆ: ಆದಿಲ್‌ಶಾಹಿ ಸಾಹಿತ್ಯದ ಬಗ್ಗೆ  ಆಸಕ್ತಿ ತಳೆಯಲು ಕಾರಣ ಇದೆಯೇ?
ದಾಸ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರಾದ ಕಾಖಂಡಕಿ ಮಹಿಪತಿದಾಸರ ಬಗ್ಗೆ  ಪಿಎಚ್.ಡಿ. ಅಧ್ಯಯನ ನಡೆಸುತ್ತಿರುವ ಸಂದರ್ಭದಲ್ಲಿ ಮಹಿಪತಿದಾಸರು ಆದಿಲ್‌ಷಾಹಿ ಅರಸರಲ್ಲಿ ಅಧಿಕಾರಿಯಾಗಿದ್ದರು ಎಂಬ ಅಂಶ ಗೊತ್ತಾಯಿತು. ಅಧ್ಯಯನಕ್ಕೆ ಅಗತ್ಯವಾಗಿರುವ ಆಕರಗಳು ಲಭ್ಯವಿಲ್ಲದ್ದರಿಂದ ತುಂಬಾ ಕಷ್ಟ ಪಡಬೇಕಾಯಿತು. ಪಠ್ಯಪುಸ್ತಕಗಳಲ್ಲಿ ಇದ್ದ 2-3 ಪ್ಯಾರಾದಷ್ಟೇ ಮಾಹಿತಿ ಮಾತ್ರ ಲಭ್ಯವಿತ್ತು. ಬೇರೆ ಬೇರೆ ಕಡೆಗಳಲ್ಲಿಯೂ ಅಷ್ಟೇ ಮಾಹಿತಿ ಬೇರೆ ಪದಗಳಲ್ಲಿ ಸಿಗುತ್ತಿತ್ತು. ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದ ಅರಸು ಮನೆತನಕ್ಕೆ ಸಂಬಂಸಿದ ಮಾಹಿತಿ ವ್ಯಾಪಕವಾಗಿ ದೊರೆಯದೇ ಇರುವುದು ದೊಡ್ಡ ಕೊರತೆ ಅನಿಸಿತು. ಹಾಗಂತ ಆಕರ- ಮಾಹಿತಿಯನ್ನು ಒಳಗೊಂಡ ಪುಸ್ತಕಗಳು ಇರಲಿಲ್ಲವೆಂದೇನಲ್ಲ. ಇದ್ದ  ಸಾಮಗ್ರಿಯೆಲ್ಲ ಮರಾಠಿ- ಉರ್ದು- ಫಾರಸಿ ಭಾಷೆಯ ಗ್ರಂಥಗಳಲ್ಲಿ ಹಂಚಿ ಹೋಗಿತ್ತು. ನಮ್ಮ ಭಾಗದ ಚರಿತ್ರೆಯನ್ನು ಕಟ್ಟಿಕೊಳ್ಳಲು ಬೇಕಾದ ಮಾಹಿತಿ ಕನ್ನಡದಲ್ಲಿ  ದೊರೆಯದ ಬಗ್ಗೆ ಪಿಚ್ಚೆನ್ನಿಸಿತು. ಅದು ವಿಜಾಪುರ ಮತ್ತು ಆದಿಲ್‌ಶಾಹಿ ಅರಸು ಮನೆತನದ ಬಗೆಗೆ ನನ್ನ ಕಾಳಜಿ ಬೆಳೆಸಿಕೊಳ್ಳುವುದಕ್ಕೆ ಕಾರಣವಾಯಿತು.

ಪ್ರಶ್ನೆ: ನಂತರದ ಬೆಳವಣಿಗೆಗಳೇನು?
ನನ್ನಲ್ಲಿ ಸುಪ್ತವಾಗಿದ್ದ ಆಸೆಗೆ ನೀರೆರೆದವರು ಹಿರಿಯ ಸಂಶೋಧಕ ವಿದ್ವಾಂಸ ಎಂ.ಎಂ. ಕಲಬುರ್ಗಿ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಮೇಲೆ ಕಲಬುರ್ಗಿ ಅವರು ನಮ್ಮ ಭಾಗದ ಚರಿತ್ರೆ ಕಟ್ಟಿಕೊಳ್ಳುವುದಕ್ಕಾಗಿ ಆದಿಲ್‌ಷಾಹಿ ಮನೆತನದ ಆಡಳಿತದ ಅವಯಲ್ಲಿನ ಸಾಹಿತ್ಯದ ಬಗೆಗೆ ಅರಿಯುವುದು ಅಗತ್ಯ ಎಂದು ಮನಗಂಡು ನನ್ನಿಂದ  ’ಆದಿಲ್‌ಶಾಹಿ ಆಸ್ಥಾನ ಸಾಹಿತ್ಯ’ ಎಂಬ ಉಪನ್ಯಾಸ ಕೊಡಿಸಿ ನಂತರ ಅದನ್ನೇ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಅಲ್ಲಿಂದ ಆರಂಭವಾದ ಈ ನಡೆ ಮುಂದೆ ಅವರದೇ ಒತ್ತಾಸೆಯಿಂದ ಇಬ್ರಾಹಿಂ ಜುಬೈರಿಯ ’ಬಸಾತೀನ್ ಅಲ್-ಸಲಾತಿನ್’ ಅನುವಾದ ಕೈಗೊಂಡೆ. 1968ರಲ್ಲಿಯೇ ಮುಂಬೈ ಸರಕಾರ ಮರಾಠಿಗೆ ಭಾಷಾಂತರಿಸಿ ಪ್ರಕಟಿಸಿದ್ದ  ’ಬಸಾತಿನ್ ಅಲ್-ಸಲಾತಿನ್’ ಅನುವಾದಿಸುವುದು ಕಷ್ಟವಾಗಲಿಲ್ಲ. 700 ಪುಟಗಳ ಬಸಾತಿನ್ ಕೃತಿಯು ಆದಿಲ್‌ಷಾಹಿ ಮನೆತನದ ಎಂಟು ಅರಸರ ಆಡಳಿತದ ಅವಯಲ್ಲಿನ ಬೇರೆ ಬೇರೆ ಲೇಖಕರು ರಚಿಸಿದ ಗ್ರಂಥಗಳ ಆಯ್ದ ಭಾಗಗಳನ್ನು ಒಳಗೊಂಡಂತಹದ್ದು.

ಪ್ರಶ್ನೆ: ಆದಿಲ್‌ಶಾಹಿ ಸಾಹಿತ್ಯದ ಅನುವಾದ ಯೋಜನೆ ರೂಪುಗೊಂಡದ್ದು ಹೇಗೆ?
2011ರಲ್ಲಿ ಕಲಬುರ್ಗಿ ಅವರ ಅಧ್ಯಕ್ಷತೆಯಲ್ಲಿ ನಡೆದ  ’71ರ ಸಂಭ್ರಮ’ ಕಾರ್ಯಕ್ರಮದಲ್ಲಿ  ಕಲಬುರ್ಗಿ ಅವರು ಆದಿಲ್‌ಶಾಹಿ ಅರಸರ ಆಡಳಿತದಲ್ಲಿ ಸಾಹಿತ್ಯವನ್ನು ಕನ್ನಡೀಕರಿಸುವುದರ ಮಹತ್ವವನ್ನು ಪ್ರತಿಪಾದಿಸಿದರು. ಬಿಎಲ್‌ಡಿಇ ಅಧ್ಯಕ್ಷರಾದ ಈಗಿನ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರು ಯೋಜನೆ ಬಗ್ಗೆ ಆಸಕ್ತಿ ತೋರಿಸಿ ಎಷ್ಟು  ಖರ್ಚಾಗಬಹುದು ಎಂದು ಕೇಳಿದಾಗ ಕಲಬುರ್ಗಿ ಅವರು ಸುಮಾರು ಒಂದು ಕೋಟಿ ರೂಪಾಯಿವರೆಗೂ ಆಗಬಹುದು ಎಂದು ತಿಳಿಸಿದರು. ಪಾಟೀಲ್‌ರು ಬಿಎಲ್‌ಡಿಇ ಮೂಲಕವೇ ಪ್ರಕಟಿಸುವ ‘ರವಸೆ ನೀಡಿ ಯೋಜನೆ ಆರಂಭಿಸುವಂತೆ ಸೂಚಿಸಿದರು. ಯೋಜನೆಯ ಹೊಳಹು ಸ್ಪಷ್ಟವಾಗುತ್ತಿದ್ದಂತೆಯೇ ಈ ಯೋಜನೆಯನ್ನು ಕರ್ನಾಟಕ ಸರಕಾರದಿಂದ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಆಗ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಈ ಯೋಜನೆಯ ಬಗ್ಗೆ  ಮೆಚ್ಚುಗೆ ಸೂಚಿಸಿ 75 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ತಿಳಿಸಿದರು. ಈಗಾಗಲೇ 25 ಲಕ್ಷ ರೂಪಾಯಿ ಬಿಡುಗಡೆ ಆಗಿದೆ. ಹೀಗೆ ಯೋಜನೆ ಕೆಲಸ ಆರಂಭವಾಯಿತು.

***
ಯೋಜನೆಯ ಮಿತಿಗಳು

ಮರಾಠಿ ಮತ್ತು ಇಂಗ್ಲಿಷಿನಿಂದ ಭಾಷಾಂತರ ಆಗುತ್ತಿರುವ ಅನುವಾದಗಳು ಕೇವಲ ಆ ಭಾಷೆಯಿಂದ ಮಾತ್ರ ಆಗುತ್ತಿರುವುದಿಲ್ಲ. ಆ ಭಾಷಿಕ ಮನೋಧರ್ಮದ ಜತೆಗೇ ಬರುತ್ತವೆ ಎನ್ನುವುದನ್ನು ಗಮನಿಸಬೇಕು.

ಕೇವಲ ರಾಜಕೀಯ ಇತಿಹಾಸಕ್ಕೆ ಸೀಮಿತಗೊಳ್ಳಬೇಕಿಲ್ಲ. ರಾಜಕೀಯದಲ್ಲಿ ಆಸಕ್ತಿ ಇರುವ ಪಠ್ಯಗಳನ್ನು ಮಾತ್ರ ಭಾಷಾಂತರಿಸಿಕೊಂಡರೆ ಸಾಲದು. ಇಂದು ಬಹುಮುಖ್ಯ ಆಗಿರುವ ಸಾಂಸ್ಕೃತಿಕ ಪಠ್ಯಗಳನ್ನು ಅನುವಾದಿಸಿಕೊಳ್ಳಬೇಕು. ಅಂತಹ ಪಠ್ಯಗಳು ಕನ್ನಡಕ್ಕೆ ಬರುವ ಅಗತ್ಯದೆ. ಕನ್ನಡ ಜಾನಪದದ ಜತೆಗೆ ದಖನಿ ಭಾಷೆ ಅನುಸಂಧಾನ ನಡೆಸಿದೆ. ಚರಕನಾಮೆ- ಚಕ್ಕಿನಾಮೆಗಳಲ್ಲಿ ಇದು ಸ್ಪಷ್ಟವಾಗಿ ಗೋಚರವಾಗುತ್ತದೆ. ಮೇಲ್ನೋಟಕ್ಕೆ ಸರಳವಾಗಿರುವ ಬೀಸುವ ಕಲ್ಲಿನ ಹಾಡಿನಲ್ಲಿ ಒಂದು ಕಲ್ಲು ಸ್ಥಗಿತ ಮತ್ತೊಂದು ಚಲನಶೀಲ ಎಂದು ಹೇಳುತ್ತ ಒಂದು ಆತ್ಮ ಮತ್ತೊಂದು ಪರಮಾತ್ರ ಎರಡರ ನಡುವಿನ ಚಲನೆಯಿಂದ ಹಿಟ್ಟು ಬರುತ್ತಿದೆ ಎನ್ನುತ್ತ ಆಧ್ಯಾತ್ಮಿಕ ನೆಲೆಗೆ ಕೊಂಡೊಯ್ಯುತ್ತವೆ.

ಕರ್ನಾಟಕದ ಇತಿಹಾಸ ಬರವಣಿಗೆಗೆ ಅಸ್ತಿಭಾರ ಹಾಕಿದ್ದು  ಬಹಮನಿ ಅರಸರ ಕಾಲದಲ್ಲಿ. ಗುಲ್ಬರ್ಗ- ಬೀದರ್ ರಾಜಧಾನಿ ಆಗಿದ್ದ  ಬಹಮನಿ ಆಡಳಿತದ ಅವಯಲ್ಲಿ ರಚಿತವಾದ ಇತಿಹಾಸ ಮತ್ತು ಸಾಹಿತ್ಯ ಕುರಿತಾದ ಗ್ರಂಥಗಳನ್ನು ಅನುವಾದಕ್ಕೆ ತೆಗೆದುಕೊಳ್ಳದಿದ್ದರೆ ಈ ಯೋಜನೆ ಪೂರ್ಣ ಆಗುವುದಿಲ್ಲ. ಆದಿಲ್‌ಶಾಹಿ ಆಡಳಿತಕ್ಕೆ ಹಿನ್ನೆಲೆಯಾಗಿದ್ದು ಬಹಮನಿ ಸಾಮ್ರಾಜ್ಯ. ಕೇವಲ ಆದಿಲ್‌ಶಾಹಿ ಆಡಳಿತದ ಅವಗೆ ಮಾತ್ರ ಸೀಮಿತಗೊಳಿಸಬೇಕಿಲ್ಲ. ದಖನಿ ಭಾಷೆಯನ್ನು ಮೊದಲಿಗೆ ಬಳಸಿದ್ದು  ದಖನ್ ಪ್ರದೇಶದ ಸೂಫಿಗಳು. ದಖನಿ ಭಾಷೆಯ ಮಹತ್ವದ ಲೇಖಕ ಖ್ವಾಜಾ ಬಂದೇ ನವಾಜ್ ಅವರ ಬರವಣಿಗೆಗಳನ್ನು ಒಳಗೊಳ್ಳದೇ ಇರುವುದು ಈ ಯೋಜನೆಯ ದೊಡ್ಡ  ಮಿತಿ.

ಆದಿಲ್‌ಶಾಹಿ ಆಸ್ಥಾನದಲ್ಲಿ ಲೇಖಕ/ಕವಿಯಾಗಿರದ ಆದರೆ ಸಮಕಾಲೀನರಾಗಿದ್ದ ಸೂಫಿ ಸಂತ ಶಾ ಮಿರಾಂಜಿ ಮತ್ತು ಅವನ ಮಗ ಅಮೀನುದ್ದೀನ್ ಅಲಾ (ಶಿರಹಟ್ಟಿ ಫಕೀರೇಶನ ಗುರು)ನ ರಚನೆಗಳು ಹಾಗೂ ಗೋಗಿ ಮಹ್ಮದ್ ಭೈರಿ ಅವರಂತಹ ಬರವಣಿಗೆಗಳನ್ನು ಒಳಗೊಳ್ಳುವ ಅಗತ್ಯದೆ. ಆದಿಲ್‌ಶಾಹಿ ಅರಸರ ಅವಯ ಕೊನೆಯ ದಿನಗಳಲ್ಲಿ ಬದುಕಿದ್ದ ಮಹ್ಮದ್ ಭೈರಿ ಆ ಕಾಲದ ಬಹುದೊಡ್ಡ ಲೇಖಕ  ಅವನ ಮನ್‌ಲಗನ್‌ದಂತಹ ಮಹತ್ವಪೂರ್ಣ ಕೃತಿ ಕನ್ನಡೀಕರಣಗೊಳ್ಳದೇ ಇದ್ದರೆ ಕರ್ನಾಟಕದ ಚರಿತ್ರೆ ಪೂರ್ಣ ಆಗುವುದಿಲ್ಲ.

ಅನುವಾದಕರು
1) ಬಿ. ಜಯಾಚಾರ- ಯಾದಗಿರಿ
2) ಬಾನು ಮುಷ್ತಾಕ್- ಹಾಸನ
3) ಹಸನ್ ನಯೀಂ ಸುರಕೋಡ- ರಾಮದುರ್ಗ
4) ಎಂ.ಎನ್. ನದಾಫ್- ಬಿಜಾಪುರ
5) ವಸಂತ ಕುಷ್ಟಗಿ- ಗುಲ್ಬರ್ಗ
6) ಅಮೀರುದ್ದೀನ್ ಖಾಜಿ- ಬಿಜಾಪುರ
7) ಅಬ್ದುಲ್ ಹಮೀದ್ - ತಿಪಟೂರು
8) ಬಿ. ರಘೋತ್ತಮ ದೇಸಾಯಿ- ಬೆಂಗಳೂರು
9) ಮಹ್ಮದ್ ಶಿಬಗತ್‌ಉಲ್ಲಾ- ಬೆಂಗಳೂರು
10) ಆರ್.ಕೆ. ಕುಲಕರ್ಣಿ- ಬಿಜಾಪುರ
11) ವಿಠಲರಾವ ಗಾಯಕ್ವಾಡ- ಹಂಪಿ
12) ಕೃಷ್ಣ ಕೋಲಾರ ಕುಲಕರ್ಣಿ- ಬಿಜಾಪುರ
13) ವೌಲಾನಾ ಮಹಿಬುಬ್ ರಹಮಾನ್ ಮದನಿ- ಬಿಜಾಪುರ
14) ವೌಲಾನಾ ಜಾಕೀರ್ ಹುಸೇನ್- ಬಿಜಾಪುರ

ಆದಿಲ್‌ಶಾಹಿ ಅನುವಾದ ಯೋಜನಾ ಸಮಿತಿ
ಅಧ್ಯಕ್ಷತೆ- ಎಂ.ಎಂ. ಕಲಬುರ್ಗಿ
ಕೃಷ್ಣ ಕೋಲಾರ ಕುಲಕರ್ಣಿ- ನಿರ್ದೇಶಕ
ಸದಸ್ಯರು- ರಂಜಾನ್ ದರ್ಗಾ
ರಹಮತ್ ತರೀಕೆರೆ
ಎಚ್.ಜಿ. ದಡ್ಡಿ
ಬಿ.ಜಿ. ಮೂಲಿಮನಿ
ಹಳಕಟ್ಟಿ ಸಂಶೋಧನ ಕೇಂದ್ರದ ಶಿವಯೋಗಿ ತಂಬಾಕೆ, ಎಂ.ಎಸ್. ಮದಬಾ
ಜಿಲ್ಲಾಕಾರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಬಸವೇಶ್ವರ ಮತ್ತು ಅವನ ಕಾಲ