ಬ್ರಿಟಿಷ್ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಫುಟ್ಬಾಲ್ ಪ್ರತಿಭೆ


ಅದು ಸ್ವಾತಂತ್ರ್ಯಪೂರ್ವ ಕಾಲ. ಹೈದರಾಬಾದ್ನಲ್ಲಿ ನಿಜಾಂ ಆಡಳಿತದಲ್ಲಿ ಮಹಾರಾಜ ಕಿಷನ್ ಪ್ರಸಾದ್ ಅವರು ದಿವಾನರಾಗಿದ್ದ ಅವಧಿ. ಬ್ರಿಟಿಷ್ ಅಧಿಕಾರಿಗಳ ತಂಡ ಮತ್ತು ಹೈದರಾಬಾದ್ ಸಿಟಿ ಕ್ಲಬ್ಗಳ ನಡುವೆ ಫುಟ್ಬಾಲ್ ಪಂದ್ಯ. ಬ್ರಿಟಿಷ್ ಅಧಿಕಾರಿಗಳು, ದಿವಾನರು ಸೇರಿದಂತೆ ರಾಜ್ಯದ ಗಣ್ಯಮಾನ್ಯರೆಲ್ಲ ಆಟ ನೋಡಲು ಕುಳಿತಿದ್ದರು. ಬ್ರಿಟಿಷ್ ಅಧಿಕಾರಿಗಳ ತಂಡ ಮುನ್ನಡೆಯೊಂದಿಗೆ ಮೇಲುಗೈ ಸಾಧಿಸಿತ್ತು. `ಇನ್ನೇನು ಆಟ ಮುಗಿಯಿತು' ಎಂದುಕೊಳ್ಳುತ್ತಿರುವಾಗಲೇ ಸಿಟಿ ಕ್ಲಬ್ ತಂಡದ ಯುವ ಆಟಗಾರನೊಬ್ಬ ಚೆಂಡನ್ನು ತಳ್ಳುತ್ತ ಬಂದು ಪೆಟ್ಟಿಗೆಯತ್ತ ಒದ್ದು ಬಿಟ್ಟ. ಕಣ್ಣು ಪಿಳುಕಿಸುವಷ್ಟರಲ್ಲಿಯೇ `ಗೋಲ್' ಆಗಿಬಿಟ್ಟಿತು. ಮೈದಾನದಲ್ಲಿ ಏನಾಗುತ್ತಿದೆ? ಎಂದು ಬ್ರಿಟಿಷ್ ಆಟಗಾರರು ಬೆರಗಾಗಿ ನೋಡುತ್ತಿರುವಾಗಲೇ ಮತ್ತೆ ತನ್ನ ಕಾಲ್ಚೆಳಕ ತೋರಿಸಿದ ಯುವಕ ಗೆಲುವಿನ ಗೋಲ್ ಬಾರಿಸಿದ. ಆ ಎರಡೂ ಒದೆತಗಳು ಆಕಸ್ಮಿಕ ಆಗಿರಲಿಲ್ಲ. ಪೂರ್ವ ನಿಯೋಜಿತ ತಂತ್ರ ಬಳಸಿಯೇ ಯುವಕ ತನ್ನ ತಂಡಕ್ಕೆ ಗೆಲುವು ದೊರಕಿಸಿಕೊಟ್ಟಿದ್ದ.

ಇದು `ಲಗಾನ್' ಅಥವಾ `ಚೆಕ್ ದೇ' ಸಿನಿಮಾದಂತಹ ಕಥೆಯಲ್ಲ. ಅಕ್ಷರಶಃ ಮೈದಾನದಲ್ಲಿ ನಡೆದ ಘಟನೆ. ಬಾಕ್ಸ್‌ನಲ್ಲಿ ಕಾಲಿನಿಂದ ಬಾಲ್ ತಳ್ಳಿದ ಯುವಕ ಬೀದರ್‍ನ ನಜೀರ್ ಅಹ್ಮದ್ ಖಾನ್. ಯುವಕ ಆಟದಿಂದ ಬೆರಗಾದ ದಿವಾನರು ತಾವು ಕುಳಿತಿದ್ದ ಸ್ಥಾನದಿಂದ ಇಳಿದು ಬಂದರು. ಯುವಕನನ್ನು ಪ್ರೀತಿ, ಆಪ್ಯಾಯತೆಯಿಂದ ಅಪ್ಪಿ ಅಭಿನಂದಿಸಿದರು. `ದೇಸಿ' ತಂಡಕ್ಕೆ ಗೆಲುವು ತಂದಿಟ್ಟ ಯುವಕನಿಗೆ ಶುಭಾಶಯದ ಸುರಿಮಳೆಯೇ ಬಂತು. ತಂಡಕ್ಕೆ ಗೆಲುವು ತಂದ ಯುವಕ ಬೀದರ್ಗೆ ಮರಳಿದ. ಆಗಿನ ಕಲೆಕ್ಟರ್ ಸಾಹೇಬರು ಊರ ಹೊರಗೆ ಕಾದು ನಿಂತು ಸ್ವಾಗತಿಸಿದರು. ನಗರಕ್ಕೆ ಹೆಸರು ತಂದ ಯುವಕನನ್ನು ಕೊಂಡಾಡಿದರು.


ಸ್ವಾತಂತ್ರ್ಯಪೂರ್ವ ದಿನಗಳಲ್ಲಿ `ಬಿದ್ರಿ ಸ್ಪೋರ್ಟಿಂಗ್ ಕ್ಲಬ್' ಪರವಾಗಿ ಆಡುತ್ತಿದ್ದ ನಜೀರ್ ಅಹ್ಮದ್ ಖಾನ್ ಫುಟ್ಬಾಲ್ ಜಗತ್ತಿನಲ್ಲಿ ಬೀದರ್‍ನ ಹೆಸರು ಚಿರಸ್ಥಾಯಿ ಆಗುವಂತೆ ಮಾಡಿದವರು. ನಜೀರ್ ಮೈದಾನದಲ್ಲಿ ಇದ್ದಷ್ಟು ಕಾಲ ನುರಿತ ಬ್ರಿಟಿಷ್ ಅಧಿಕಾರಿಗಳು ಅವರನ್ನು ನಿಯಂತ್ರಿಸುವುದಕ್ಕೆ ಹೆಣಗಾಡುತ್ತಿದ್ದರು. ಆಟದಿಂದ ನಿವೃತ್ತರಾಗುವಂತೆ ಮಾಡುವುದಕ್ಕಾಗಿ ನಿಯಮ ಮೀರಿ ಉದ್ದೇಶಪೂರ್ವಕವಾಗಿ ನಜೀರ್ ಅವರನ್ನು ಬೀಳಿಸಿ ಗಾಯಗೊಳಿಸಿದ್ದೂ ಉಂಟು. ಕೊಲ್ಕತ್ತಾದ ಮಹಮದನ್ ತಂಡದ ಪರವಾಗಿ ಒಂದೆರಡು ಪಂದ್ಯಗಳಲ್ಲಿ ಆಡಿದ ನಜೀರ್ ಅವರು ಕೌಟುಂಬಿಕ ಒತ್ತಡ ಮತ್ತಿತರ ಕಾರಣಗಳಿಂದ ಫುಟ್‌ಬಾಲ್‌ನಿಂದ ದೂರವಾದರು. ಆದರೆ, ಕೊನೆಯ ಉಸಿರು ಎಳೆಯುವ ವರೆಗೂ ಅವರ ಕಾಲುಗಳು ಚೆಂಡಿಗಾಗಿ ತಡಕಾಡುತ್ತಿದ್ದವು.

ಇಂತಹ ಅಸಾಧಾರಣ ಫುಟ್ಬಾಲ್ ಪ್ರತಿಭೆ ನಜೀರ್ ಅವರು ಗುರುವಾರ (ಜನವರಿ 2007) ರಾತ್ರಿ ಕೊನೆ ಉಸಿರು ಎಳೆಯುವುದರೊಂದಿಗೆ ಫುಟ್‌ಬಾಲ್‌ನ ಹೆಸರು ದಾಖಲಾಗುವಂತೆ ಮಾಡಿದ್ದ ಕೊನೆಯ ಕೊಂಡಿಯೊಂದು ಕಳಚಿದಂತಾಗಿದೆ. ಫುಟ್ಬಾಲ್ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕಾರಣಕ್ಕಾಗಿ ಅವರಿಗೆ ಕರ್ನಾಟಕ ಸರ್ಕಾರದಿಂದ ಪ್ರತಿತಿಂಗಳು ಗೌರವಧನ ನೀಡಲಾಗುತ್ತಿತ್ತು. ಆದರೆ, ಇಂತಹ ಅಪರೂಪದ ಕ್ರೀಡಾಪ್ರತಿಭೆ ಅಸು ನೀಗಿದ ಸಂದರ್ಭದಲ್ಲಿ ಸಕರ್ಾರದಿಂದ ಯಾವುದೇ `ಗೌರವ' ಸಿಗಲಿಲ್ಲ. ಕೆಲವೇ ಬಂಧುಗಳ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ಆಟ ಮುಗಿಸಿದ ನಜೀರ್ ಸಾಹೇಬರು ಕಾಲನ ಮನೆ ಸೇರಿದ್ದಾರೆ. ಅವರ ಆಟ ನೆನಪಿಸಿಕೊಳ್ಳುವುದಷ್ಟೇ ಈಗ ಬಾಕಿ ಉಳಿದಿದೆ.



ಕಾಮೆಂಟ್‌ಗಳು

ಸುಭಾಸ.ಎಸ್.ಮಂಗಳೂರ ಹೇಳಿದ್ದಾರೆ…
ಸರ್ ಫುಟ್ಬಾಲ್ ಪ್ರತಿಭೆಯ ಬಗ್ಗೆ ತಮ್ಮ ಲೇಖನ ತುಂಬ ಚೆನ್ನಾಗಿದೆ.ಅದೇ ರೀತಿ ಗಿಟಾರ್ ಮಾಂತ್ರಿಕ ರಾಚಪ್ಪ ಅವರ ಕುರಿತಾದ ಲೇಖನವೂ ಅದ್ಭುತವಾಗಿದೆ.ತಮ್ಮ ಅಂಕಣಗಳನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಓದುತ್ತಿರುತ್ತೇನೆ.ಸರ್ ನಾನೂ ಕೂಡ ಬ್ಲಾಗ್ ನಲ್ಲಿ ಆಗಾಗ ಬರೆಯುತ್ತಿರುತ್ತೇನೆ.ದಯವಿಟ್ಟು ಓದಿ ಸಲಹೆ ಸೂಚನೆ ನೀಡಿ.ನನ್ನ ಬ್ಲಾಗ್ ವಿಳಾಸ www.subhas-mounamatadidag.blogspot.com

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಬಸವೇಶ್ವರ ಮತ್ತು ಅವನ ಕಾಲ

ಕಣವಿ ಅವರೊಂದಿಗೆ ಮಾತುಕತೆ