‘ಕತ್ತಿಯಂಚಿನ ದಾರಿ’ಯಲ್ಲಿ ‘ಮೀಮಾಂಸೆ’ಯಾದ ವಿಮರ್ಶೆ
ಡಾ. ರಹಮತ್ ತರೀಕೆರೆ ಅವರ ‘ಕತ್ತಿ ಅಂಚಿನ ದಾರಿ’ ಕನ್ನಡದ ಮಹತ್ವದ ಪುಸ್ತಕಗಳಲ್ಲಿ ಒಂದು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನ ಆಗಿರುವ ಈ ಪುಸ್ತಕ ‘ಮಹತ್ವದ ಕೃತಿ’ ಎಂಬುದು ಸಾಬೀತಾಗಿದೆ. ಆದರೆ, ಪುಸ್ತಕವೊಂದರ ಮಹತ್ವ ನಿರ್ಧಾರ ಆಗುವುದು ಅದಕ್ಕೆ ಸಿಗುವ ಮನ್ನಣೆ, ಗೌರವಗಳ ಮೂಲಕ ಅಲ್ಲ. ಹಾಗೆ ಆಗಬಾರದು ಕೂಡ. ಮಹತ್ವ ನಿರ್ಧರಿಸುವುದಕ್ಕೆ ಇರುವ ಹಲವು ಮನದಂಡಗಳ ಪೈಕಿ ಪ್ರಶಸ್ತಿಯೂ ಒಂದು ಎಂಬುದರಲ್ಲಿ ಎರಡು ಮತಿಲ್ಲ. ‘ಕತ್ತಿಯಂಚಿನ ದಾರಿ’ ಪುಸ್ತಕವು ಕೇವಲ ಪ್ರಶಸ್ತಿ ಪಡೆದ ಕಾರಣದಿಂದಾಗಿ ಮಹತ್ವ ಪಡೆದ ಕೃತಿ ಅಲ್ಲ ಎಂಬುದು ಅರಿವಿಗೆ ಬರುವುದಕ್ಕೆ ಹೆಚ್ಚು ಹೊತ್ತು ಹಿಡಿಯುವುದಿಲ್ಲ.
ಕತ್ತಿಯಂಚಿನ ದಾರಿಯಲ್ಲಿ ಒಟ್ಟು ೨೦ ಲೇಖನಗಳಿವೆ. ೨೫೮ ಪುಟಗಳ ಈ ಪುಸ್ತಕವು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ವೈಚಾರಿಕತೆಯ ಭಾರ ಇಲ್ಲದ ಇಲ್ಲಿನ ಚಿಂತನೆಗಳು ಸರಳ ಮತ್ತು ನೇರವಾಗಿ ಇರುವುದರಿಂದ ಪ್ರಿಯವಾಗುತ್ತವೆ.
ಅಪ್ಪಟ ಸಾಹಿತ್ಯ ವಿಮರ್ಶೆಯ ಗ್ರಂಥವಾದರೂ ಅದರಾಚೆಗೆ ಬೆಳೆದು ನಿಲ್ಲುತ್ತದೆ. ಸಾಹಿತ್ಯದ ಮೀಮಂಸೆ ಕಟ್ಟಿಕೊಡುವುದರ ಜೊತೆಗೆ ಸಂಸ್ಕೃತಿ ಕುರಿತ ಹರಳುಗಟ್ಟಿದ ಚಿಂತನೆಗಳನ್ನು ಮಂಡಿಸುತ್ತದೆ. ಕೇವಲ ಸಾಹಿತ್ಯ ಮತ್ತು ಸಂಸ್ಕೃತಿಗೆ ಮತ್ರ ಸೀಮಿತವಾಗದೆ ಒಟ್ಟು ಬದುಕಿನ ಗ್ರಹಿಕೆಯನ್ನು ಶ್ರೀಮಂತಗೊಳಿಸುತ್ತವೆ.
೨೦ ಲೇಖನಗಳ ಪೈಕಿ ‘ಕುವೆಂಪು ಚಿಂತನೆ; ಆಕರ್ಷಣೆ ವಿಕರ್ಷಣೆ’ ಮತ್ತು ‘ಕುವೆಂಪು: ವೈರುಧ್ಯಗಳ ಹಾದಿಯ ಪಯಣಿಗನಾಗಿ’ ಎಂಬ ಎರಡು ಲೇಖನಗಳು ಮತ್ರ ಒಂದೇ ವಿಷಯ- ವ್ಯಕ್ತಿಗೆ ಸಂಬಂಧಿಸಿದವುಗಳಾಗಿವೆ. ಅದು ಬಿಟ್ಟರೆ ಉಳಿದ ೧೮ ಲೇಖನಗಳು ವಿಭಿನ್ನ ವಸ್ತು ಸಂಗತಿಯನ್ನು ಅನಾವರಣಗೊಳಿಸುತ್ತವೆ. ಈ ಪುಸ್ತಕದಲ್ಲಿ ಮೂರು ಮದರಿಯ ಬರೆಹಗಳಿವೆ. ಅವುಗಳನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು. ಲೇಖಕ/ಕವಿಯನ್ನು ಕೇಂದ್ರವಾಗಿಟ್ಟುಕೊಂಡ ಬರೆಹಗಳು. ಕೃತಿಯನ್ನು ಕುರಿತ ಬರೆಹಗಳು. ಮೂರನೆಯದಾಗಿ ನಿರ್ದಿಷ್ಟವಾಗಿ ಲೇಖಕ-ಕೃತಿಗೆ ಸೀಮಿತವಾಗದ ‘ಸಾಹಿತ್ಯ-ತತ್ವ’ ಕುರಿತ ಲೇಖನಗಳು.
‘ರಾಮಚಂದ್ರಶರ್ಮ; ನಂಬಿಕೆಯ ಲೋಕವಿಲ್ಲದ ಕವಿ’, ‘ನಿಸಾರ್ ಕಾವ್ಯದ ಸಾಂಸ್ಕೃತಿಕ ‘ಕಷ್ಟ’ಗಳು’, ‘ಶಾಂತಿನಾಥ ಆಧುನಿಕತೆಯ ಆರಾಧಕ’, ‘ಕಾರಂತರ ಚಿಂತನೆಯ ಪರಿ: ಒಂದು ಟಿಪ್ಪಣಿ’, ಸುಬ್ಬಣ್ಣ: ಮನಸ್ಸನ್ನು ಬೆಳೆಸಿದ ಚಿಂತಕ’, ‘ಚನ್ನಯ್ಯ ಸಾವನ್ನು ಧೇನಿಸುತ್ತಿದ್ದ ಲೇಖಕ’, ‘ಲಂಕೇಶ್: ಸಾವಿನ ತನಕ ಓದು’, ‘ಮೊಕಾಶಿ ಪುಣೇಕರ: ನನ್ನ ಗುರು’ ಬರೆಹಗಳು ಮೊದಲ ಗುಂಪಿಗೆ ಸೇರುತ್ತವೆ.
‘ತೇಜಸ್ವಿಯವರ ‘ಮಯಲೋಕ’, ‘ಶೈವ ಪ್ರತಿಭೆ’ ಮತ್ತು ದಾರ್ಶನಿಕ ‘ಹೊಡೆದಾಟ’, ‘ರಾಜಾವಳಿ ಕತೆ ಹಾಗೂ ಕರ್ನಾಟಕದ ‘ಪ್ರಪಂಚು’, ‘ಶೂನ್ಯ ಸಂಪಾದನೆ ಹಾಗೂ ಡೆಮಕ್ರಸಿ’, ‘ವಡ್ಡಾರಾಧನೆ: ಕಥನ ಕಾರಣಗಳು’ ಲೇಖನಗಳು ಎರಡನೇ ಗುಂಪಿನವು.
‘ಬಸವಣ್ಣನ ಸಾಹಿತ್ಯ ತತ್ವ ಯವುದು?’, ‘ರಾಘವಾಂಕನ ಕಾವ್ಯತತ್ವ: ಕೆಲವು ಟಿಪ್ಪಣಿಗಳು’, ‘ಮುಸ್ಲಿಂ ತತ್ವಪದಕಾರರು: ಹೀಗೆನ್ನುವುದು ಯಕೆ ಕಷ್ಟ?’ ‘ಮುಸ್ಲಿಂ ಜಾನಪದ ಎಂಬುದು ಇದೆಯೇ?’ ಹಾಗೂ ‘ಕತ್ತಿಯಂಚಿನ ದಾರಿ’ ಲೇಖನಗಳು ಮೂರನೇ ಗುಂಪಿಗೆ ಸೇರುತ್ತವೆ,
ಈ ಪುಸ್ತಕದಲ್ಲಿನ ಎಲ್ಲ ಬರೆಹಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದವುಗಳಾದ್ದರಿಂದ ಅವುಗಳ ಸ್ವರೂಪ ಕೂಡ ಭಿನ್ನವಾಗಿವೆ. ಆದರೆ, ಎಲ್ಲ ಬರಹಗಳೂ ಅವು ಬರೆದ ‘ಕ್ಷಣ’ ಮೀರುವ ಗುಣ ಹೊಂದಿವೆ. ಅದಕ್ಕೆ ತರೀಕೆರೆ ಅವರ ‘ನಿರ್ವಹಣೆ’ ಕಾರಣ. ಅಭಿನಂದನೆ, ಶ್ರದ್ಧಾಂಜಲಿ ಮತ್ತು ಸೆಮಿನಾರುಗಳ ಬರವಣಿಗೆ ಕೂಡ ಗಂಭೀರ ಸ್ವರೂಪದಲ್ಲಿ ಹೇಗಿರಲು ಸಾಧ್ಯ? ಎಂಬುದಕ್ಕೆ ‘ಕತ್ತಿಯಂಚಿನ ದಾರಿ’ ಅತ್ಯುತ್ತಮ ಉದಾಹರಣೆ. ಸಭೆ-ಸಮರಂಭಗಳಲ್ಲಿ ಮತನಾಡುವುದು ಮತ್ತು ಪತ್ರಿಕೆಗಳಿಗೆ ಬರೆಯುವುದು ಎಂದರೆ ‘ತೆಳುಗೊಳಿಸುವುದು’ ಎಂದು ಭಾವಿಸಲಾಗುತ್ತದೆ. ‘ಕತ್ತಿಯಂಚಿನ ದಾರಿ’ಯಲ್ಲಿನ ಲೇಖನಗಳು ತೆಳುಗೊಳಿಸದೇ ಇರುವ ಕಾರಣಕ್ಕಾಗಿಯೇ ಸಾಮಯಿಕ ಮಹತ್ವ ಮುಗಿದ ನಂತರವೂ ಪ್ರಸ್ತುತವಾಗುತ್ತವೆ. ಸಾರ್ವಕಾಲಿಕ ಆಗುವಂತೆ ವಸ್ತುವನ್ನು ನಿರ್ವಹಿಸುವ ತರೀಕೆರೆ ಅವರು ಅದಕ್ಕಾಗಿ ಬಹಳ ಕಷ್ಟ ಪಡುತ್ತಾರೆ ಎಂದೇನು ಅನ್ನಿಸುವುದಿಲ್ಲ. ತಮ್ಮ ಎಂದಿನ ಶೈಲಿಯಲ್ಲಿ ಸರಳವಾಗಿ, ಅರ್ಥವಾಗುವ ಹಾಗೆ ಖಚಿತವಾದ ಪದಗಳಲ್ಲಿ ಒಂದಾದ ನಂತರ ಮತ್ತೊಂದು ಅಂಶವನ್ನು ದಾಖಲಿಸುತ್ತ ಹೋಗುವ ‘ಸೂತ್ರ’ ರೂಪಿಸಿ, ರೂಢಿಸಿಕೊಂಡ್ದಿದಾರೆ. ಅದನ್ನು ಅವರ ಶೈಲಿ ಎಂದು ಕರೆಯಬಹುದು. ಹಾಗಂತ ಅದು ಸ್ಟಿರಿಯೋಟೈಪ್ ಆದ ಬರವಣಿಗೆ ಏನಲ್ಲ. ಜಾಡಿಗೆ ಬಿದ್ದು ಏಕತಾನತೆ ಆಗದಂತೆ ಎಚ್ಚರದಿಂದ ನಿರ್ವಹಿಸಿರುವುದು ಗೋಚರವಾಗುತ್ತದೆ. ಮೊದಲೇ ತಿಳಿಸಿದಂತೆ ಒಂದಕ್ಕಿಂತ ಮತ್ತೊಂದು ಲೇಖನವು ವಸ್ತು- ವಿಷಯ, ನಿರ್ವಹಣೆ, ಪ್ರಸ್ತುತಿಯ ರೀತಿಯಲ್ಲಿ ವೈವಿಧ್ಯಮಯವಾಗಿದೆ.
ವಸ್ತುವಿನ ಜೊತೆ ಕಾಯ್ದುಕೊಳ್ಳುವ ನಿರ್ದಿಷ್ಟ ಅಂತರ ಇಲ್ಲಿನ ಬರಹಗಳನ್ನು ಪ್ರಿಯವಾಗಿಸುತ್ತದೆ. ತಮಗೆ ಪ್ರಿಯವೆನಿಸಿದ ಲೇಖಕ/ಪುಸ್ತಕದ ಬಗ್ಗೆ ಬರೆಯುವಾಗ ಪರ ವಾದಿಸುವ ಅಥವಾ ಹಾಗೆಯೇ ವಿರೋಧಿಸುವ ಧಾಟಿಯ ವಕೀಲರ ಮತುಗಳಂತೆ ಇರದೆ ಓದುಗ ತನ್ನದೇ ‘ನಿಲುವು’ ತಳೆಯುವುದಕ್ಕೆ ಅನುಕೂಲ ಆಗುವಂತೆ ಎರಡೂ ಮಗ್ಗುಲಗಳನ್ನು ದಾಖಲಿಸುವುದು ಗುಣವಿಶೇಷ. ಟೀಕೆ-ಮೆಚ್ಚುಗೆ ಮತ್ರ ಸೀಮಿತವಾಗದೇ ಚಿಂತನೆಗೆ ಹಚ್ಚುವ ರೀತಿಯ ಜಿಜ್ಞಾಸೆ ನಡೆಯುತ್ತದೆ. ಲೇಖಕರು ಬರವಣಿಗೆಯ ‘ಕತ್ತಿಯಂಚಿನ ದಾರಿ’ಯನ್ನು ಹೆಚ್ಚು ಸಶಕ್ತವಾಗಿ ನಿಭಾಯಿಸ್ದಿದಾರೆ.
ವೈಚಾರಿಕ ಕಾರಣಗಳಿಗೆ ಪ್ರಿಯರಾದ ಕುವೆಂಪು ಮತ್ತು ಇಷ್ಟಪಡುವ ಲಂಕೇಶ್, ಮೆಚ್ಚಿಕೊಳ್ಳುವ ತೇಜಸ್ವಿ ಕುರಿತ ಬರಹ, ತಮ್ಮ ಗುರುಗಳಾದ ಚೆನ್ನಯ್ಯ, ಮೊಕಾಶಿ ಪುಣೇಕರ್ ಕುರಿತ ಲೇಖನಗಳು ಕೂಡ ಲೇಖಕರ ವಿಮರ್ಶನ ಪ್ರಜ್ಞೆಯ ಧ್ಯೋತಕದಂತಿವೆ. ಪ್ರಿಯವಾಗುವ ಸಂಗತಿಗಳ ಬಗ್ಗೆ ವೈಭವೀಕರಿಸದೆ, ಇಷ್ಟವಾಗದ ವಿಷಯದ ಬಗ್ಗೆ ಕಟುವಾದ ಪದಗಳಲ್ಲಿ ಟೀಕೆಯ ಮೂಲಕ ನಿರಾಕರಿಸುವುದಿಲ್ಲ. ಎರಡೂ ರೀತಿಯ ಬರವಣಿಗೆಯಲ್ಲಿಯೂ ಒಳನೋಟ ನೀಡುವ ಗುಣ ಅಪ್ಯಾಯಮನವಾಗಿದೆ. ಎಲ್ಲಿಯೂ ‘ಇದಮಿತ್ಥಂ’ ಎಂಬ ಫಮನು ಹೊರಡಿಸುವ ರೀತಿಯ ನಿಲುವು ಇಲ್ಲ.
ಯವುದೇ ವ್ಯಕ್ತಿ, ಪುಸ್ತಕ, ವಿಷಯದ ಬಗ್ಗೆ ಬರೆಯುತ್ತಿದ್ದರೂ ಅದು ಕೇವಲ ಆಯ ಸಂಗತಿಗೆ ಮತ್ರ ಸೀಮಿತ ಆಗುವುದಿಲ್ಲ. ಕೇಂದ್ರದ ಸುತ್ತ ಸುತ್ತಿದರೂ ಅದರಾಚೆಗೆ ಇರುವ ಸಂಗತಿಗಳನ್ನು ಅನಾವರಣ ಮಡುತ್ತಾರೆ. ಲೇಖಕರಿಗಿರುವ ವ್ಯಾಪಕ ಓದು ಅರಿವಿಗೆ ಬರದೇ ಇರುವುದಿಲ್ಲ. ಕುವೆಂಪು ಅಥವಾ ಕಾರಂತರ ಬಗ್ಗೆ ಬರೆಯುವಾಗ ಅವರ ಸಮಕಾಲೀನ ಲೇಖಕರ ಒಲವು-ನಿಲುವುಗಳು ಕೂಡ ಪ್ರಸ್ತಾಪ ಆಗುತ್ತವೆ. ರಾಮಚಂದ್ರಶರ್ಮರ ಬಗ್ಗೆ ಇರುವ ಲೇಖನ ‘ಕತ್ತಿಯಂಚಿನ ದಾರಿ’ಯಲ್ಲಿನ ಬರಹಗಳ ಪೈಕಿ ನನಗೆ ಹೆಚ್ಚು ಪ್ರಿಯವಾದದ್ದು. ನಂಬಿಕೆಯ ಲೋಕವಿಲ್ಲದೇ ಇರುವ ಕಾರಣಕ್ಕಾಗಿ ಶರ್ಮರು ಇತರ ಲೇಖಕರಿಗಿಂತ ಭಿನ್ನರಾಗುತ್ತಾರೆ ಎಂದು ದಾಖಲಿಸಿರುವ ರೀತಿ ಸೊಗಸಾಗಿದೆ. ರಾಮಚಂದ್ರಶರ್ಮರ ಕಾವ್ಯದ ಬಗೆಗಿನ ಲೇಖನವು ಕೇವಲ ಶರ್ಮರ ಸಾಹಿತ್ಯದ ಬಗೆಗಿನ ಚರ್ಚೆಗೆ ಮತ್ರ ಸೀಮಿತವಾಗಿಲ್ಲ. ಸಮಕಾಲೀನ ಲೇಖಕರ ಜೊತೆಗೆ ಸೋದಾಹರಣದ ಮೂಲಕ ತುಲನೆ ಮಡಲಾಗಿದೆ. ಕವಿತೆ, ಸಾಹಿತ್ಯದಿಂದ ಆರಂಭವಾದರೂ ಅದರಾಚೆಗೆ ‘ನಂಬಿಕೆಯ ಬದುಕು’ ಮೀಮಂಸೆಯ ಕೇಂದ್ರವಾಗುತ್ತದೆ. ನಂಬಿಕೆ ಎನ್ನುವುದು ಕೇವಲ ದೇವರು ಮತ್ತು ಧರ್ಮಕ್ಕೆ ಸೀಮಿತವಾದ್ದಲ್ಲ. ಅದನ್ನು ಹೊರತು ಪಡಿಸಿ ಪರಿಸರ, ಜೀವನಪ್ರೀತಿ, ಕಾಳಜಿಗಳು ಕೂಡ ಹೇಗೆ ಕವಿ/ವ್ಯಕ್ತಿಯೊಬ್ಬನ ಬದುಕು ಕಟ್ಟಿಕೊಳ್ಳುವುದಕ್ಕೆ ಪೂರಕವಾಗಿರುತ್ತದೆ ಎನ್ನುವ ಅಂಶಗಳನ್ನು ಮನದಟ್ಟಾಗುವ ಹಾಗೆ ವಿವರಿಸಲಾಗಿದೆ.
ಈ ಪುಸ್ತಕದ ಬಹುತೇಕ ಲೇಖನಗಳು ಕನ್ನಡದ ಗದ್ಯ ಲೇಖಕರು ಅಥವಾ ಪುಸ್ತಕಗಳನ್ನು ಕುರಿತವುಗಳಾಗಿವೆ. ಕುವೆಂಪು, ರಾಮಚಂದ್ರಶರ್ಮ, ನಿಸಾರ್ ಹೊರತು ಪಡಿಸಿದರೆ ಉಳಿದೆಲ್ಲವು ಗದ್ಯ ಕೇಂದ್ರಿತವಾದವುಗಳು. ತರೀಕೆರೆ ಅವರಿಗೆ ಕಾವ್ಯಕ್ಕಿಂತ ಗದ್ಯದ ಮೇಲೆ ಹೆಚ್ಚು ಒಲವು ಎಂದು ಕಾಣಿಸುತ್ತದೆ. ಕಾವ್ಯದ ಯಜಮನಿಕೆ ಧೋರಣೆಯ ಪ್ರಸ್ತಾಪ ಕೂಡ ಬರುತ್ತದೆ. ಸಾಹಿತ್ಯಲೋಕದ ಮೇಲು-ಕೀಳುಗಳ ಬಗ್ಗೆ, ಸಾಂಸ್ಕೃತಿಕ ರಾಜಕಾರಣದ ಬಗ್ಗೆ ತರೀಕೆರೆ ಅವರು ದಾಖಲಿಸ್ದಿದಾರೆ. ಭಾವುಕರಾಗದೇ ಇರುವ ಕಾರಣಕ್ಕಾಗಿ ಇಲ್ಲಿ ಬರಹಗಳು ಮೆಚ್ಚುಗೆಗೆ ಪಾತ್ರವಾಗುತ್ತವೆ. ಹರಿತವಾದ ಹತ್ಯಾರಗಳನ್ನು ಪೋಸ್ಟ್‌ಮರ್ಟಂ ಮಡುವ ರೀತಿಯಲ್ಲಿ ಇಲ್ಲದೇ ಇರುವುದು ಕೂಡ ವಿಶೇಷ.
ಸಾಹಿತ್ಯ ವಿಮರ್ಶೆ ಮತ್ತು ಕಾವ್ಯ/ಸಾಹಿತ್ಯ ಮೀಮಂಸೆಗಳ ನಡುವಿನ ವ್ಯತ್ಯಾಸ ಕಡಿಮೆ ಮಡಿದ ಕೃತಿಯಿದು. ಅರ್ಥಾತ್ ಸಾಹಿತ್ಯ ವಿಮರ್ಶೆಯನ್ನು ಮೀಮಂಸೆಯ ಎತ್ತರ ಏರಿಸಿದ ಕೃತಿ ಎಂದು ಕೂಡ ಕರೆಯಬಹುದು. ಬರವಣಿಗೆ ಎನ್ನುವುದು ‘ಕತ್ತಿಯಂಚಿನ ದಾರಿ’ ಎಂಬ ರೂಪಕದ ಮೂಲಕ ಹೇಳುತ್ತಾರೆ. ಅದರ ಸ್ವರೂಪ, ಆಯಮಗಳನ್ನು ವಿವರವಾಗಿ ಮನದಟ್ಟಾಗುವಂತೆ ವಿವರಿಸುತ್ತಾರೆ.
ವಿಭಿನ್ನ ಒಳನೋಟಗಳನ್ನು ನೀಡುವ ಈ ಕೃತಿಯು ಕನ್ನಡದ ಮಹತ್ವದ ಲೇಖಕ/ಕೃತಿಗಳ ಬಗ್ಗೆ ಅರಿಯುವುದಕ್ಕೆ ಸಹಾಯ ಮಡುತ್ತದೆ. ಕೇವಲ ಅಷ್ಟು ಮತ್ರವಲ್ಲದೆ ಒಟ್ಟು ಸಾಹಿತ್ಯದ ಬಗೆಗಿನ ಓದುಗನ ತಿಳುವಳಿಕೆಯನ್ನು ಹೆಚ್ಚುವಂತೆ ಮಡುತ್ತದೆ. ಲೇಖಕನ ಕುರಿತ ಬರವಣಿಗೆ ಕೇವಲ ವ್ಯಕ್ತಿಚಿತ್ರ ಕಟ್ಟಿಕೊಡುವುದಕ್ಕೆ ಮತ್ರ ಸೀಮಿತವಾಗಿಲ್ಲ. ಬದುಕು ಮತ್ತು ಸಾಹಿತ್ಯ ಪರಸ್ಪರ ತಳುಕು ಹಾಕಿಕೊಂಡು ಬೆಳೆಯುತ್ತ, ಬದಲಾಗುತ್ತ ಹೋಗುವ ರೀತಿಯನ್ನು ಹಿಡಿದಿಡುವ ರೀತಿ ಸೊಗಸಾಗಿದೆ. ಜೀವಪರ ಕಾಳಜಿ ಮತ್ತು ಜನಪರ ನಿಲುವುಗಳನ್ನು ಹೊಂದಿರುವ ಕೃತಿ. ವೈಚಾರಿಕತೆಯ ಭಾರದಲ್ಲಿ ನಲುಗಿ ಹೋಗದೇ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
-ದೇವು ಪತ್ತಾರ, ಬೀದರ್
ಕಾಮೆಂಟ್‌ಗಳು