’ಒಕ್ಕಲತನದ ಮ್ಯಾಲ ನನಗ ಭಾಳ ಒಲವು’
ತಮ್ಮ ಕಲಾಕೃತಿಗಳಲ್ಲಿ ಹೈದರಾಬಾದ್ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಕಲ್ಬುರ್ಗಿ ಸುತ್ತಲಿನ ಬದುಕಿನ ಅನುಭವ- ಜೀವಂತಿಕೆಯನ್ನು ಚಿತ್ರಿಸುವ ವಿ.ಜಿ. ಅಂದಾನಿಯವರು ಪ್ರಾದೇಶಿಕ ಅನನ್ಯ ಶೈಲಿಯ ಮೂಲಕ ಹೆಸರುವಾಸಿಯಾಗಿರುವವರು. ಕಲ್ಬುರ್ಗಿಯಂತಹ ಬರಡು ನೆಲದಲ್ಲಿ ` ಐಡಿಯಲ್ ಫೈನ್ ಆರ್ಟ್ ಸ್ಕೂಲ್ ' ಮೂಲಕ ಕಲಾಪರಂಪರೆಯನ್ನು ಹುಟ್ಟುಹಾಕಿರುವ ಅಂದಾನಿಯವರು ತಮ್ಮ ಕುಟುಂಬ , ನೆನಪು- ಹಳಹಳಿಕೆ- ಕನಸುಗಳನ್ನು ಮನಬಿಚ್ಚಿ ಮಾತನಾಡುತ್ತಾರೆ. ` ನಮ್ಮೂರು ಕಲ್ಬುರ್ಗಿಗೆ 25 ಕಿ.ಮೀ. ದೂರದಲ್ಲಿರುವ ಕಿರಣಗಿ. ನಾ ಸಣ್ಣಾವ್ದಿದಾಗ ನಮ್ಮದು ಜಾಯಿಂಟ್ ಫ್ಯಾಮಿಲಿ. ಒಬ್ಬ ಅಕ್ಕ ಸೇರಿದಂತೆ 11 ಸಹೋದರರಲ್ಲಿ ನಾನೇ ಕಡೆಯವ. ನಿಜಾಂ ಕಾಲದಲ್ಲಿ ಪಟವಾರಿ ಆಗಿದ್ದ ಅಜ್ಜ ಭಾರೀ ಮನಸ್ಯಾ ಇದ್ದ . ಅವನಿಂದಾನೇ ಮನ್ಯಾಗ ಎಲ್ಲರಿಗಿ ಎಜ್ಯುಕೇಷನ್ ಸಿಕ್ಕಿದ್ದು. ಆದ್ರ ನಮ್ಮ ಫಾದರ್ ಮಾತ್ರ ಪೂರ್ತಿ ಹೊಲಾನೇ ನಂಬಿ ಬದುಕಿದ್ದವರು. ನನಗೂ ಒಕ್ಕಲತನದ ಮ್ಯಾಲ ಭಾಳ ಒಲವ ಐತಿ. ಈಗೀಗ ಕಲ್ಬುರ್ಗಿ ಊರ ಹೊರಗ ಒಂದೀಟು ಹೊಲ ತಗೊಂಡು ತೋಟ-ಪಟ್ಟಿ ತರಹ ಮಾಡಬೇಕು ಅಂತ ಅಂದುಕೊಂಡೀನಿ ' ಎಂದು ತಮ್ಮ ಹಿನ್ನೆಲೆ ಮತ್ತು ` ಕನಸು ' ವಿವರಿಸುತ್ತಾರೆ. ` ನಮ್ಮೂರಿಗೆ ಸನೀಪದ ದೊಡ್ಡ ಊರಂದ್ರ ಎಸಿಸಿ ಫ್ಯಾಕ್ಟರಿಯಿಂದ ಫೇಮಸ್ ಆಗಿದ್ದ ಶಹಾಬಾದ. ಅಲ್ಲಿಗೆ ಸಿನಿಮಾ ನೋಡುದಕ್ಕೆ ಹೋಗ್ತಿದ್ವಿ. ನಾನು ` ಆವಾರಾ ', `420' ನೋಡಿದ್ದೆಲ್ಲಾ ಅಲ್ಲಿಯೇ. ಆಗೇ ನಾಕಾರು ಸರ...