ಸಾಹಿತ್ಯ ಕೃತಿಗಳಲ್ಲಿ ನಂಬಿಕೆ; ಪ್ರಶಸ್ತಿಯಲ್ಲಿ ಅಲ್ಲ


ಸೌಂದರ್ಯಾನ್ವೇಷಣೆಯನ್ನು ಭಾವಗೀತೆಯ ಗೇಯತೆಗೆ ಅಳವಡಿಸಿ ಗುಜರಾತಿ ಕಾವ್ಯ ಪರಂಪರೆಯಲ್ಲಿ ಹೊಸ ಮಾರ್ಗ ಸೃಷ್ಟಿಸಿದ ರಾಜೇಂದ್ರ ಕೇಶವಲಾಲ್ ಶಹಾ ಅವರು 2001ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದರು.

`ಶಹಾ ಅವರ ಕಾವ್ಯದಲ್ಲಿನ ಆಧ್ಯಾತ್ಮಿಕ ಒಳನೋಟಗಳು ಮಧ್ಯಯುಗೀನ ಕಾಲದ ನರಸಿಂಹ ಮೆಹತಾ, ಕಬೀರ್ ಅವರ ಪರಂಪರೆಯಲ್ಲಿ ಸೇರುತ್ತಾರೆ' ಎಂದು ಜ್ಞಾನಪೀಠ ಪ್ರಶಸ್ತಿ ಸಮಿತಿ ತಿಳಿಸಿತ್ತು.

`ನನಗೆ ಸಾಹಿತ್ಯ ಕೃತಿಗಳಲ್ಲಿ ನಂಬಿಕೆಯಿದೆ, ಪ್ರಶಸ್ತಿಗಳಲ್ಲಿ ಅಲ್ಲ. ನನಗೆ ಪ್ರಶಸ್ತಿ ಬಂದಿರುವುದು ಮಹತ್ವದ ಬದಲಾವಣೆ ಅಂತ ಅನ್ನಿಸುವುದಿಲ್ಲ. ಪ್ರಶಸ್ತಿ ಬರದ್ದಿದರೂ ಈಗಿರುವಷ್ಟೇ ಸಂತಸದಿಂದ ಇರುತ್ತ್ದಿದೆ' ಎಂದು ಪ್ರತಿಕ್ರಿಯಿಸಿದ ಶಹಾ ಅವರ ಕವಿತೆಗಳಲ್ಲಿ ಪ್ರೀತಿ ಪ್ರೇಮ, ನಿಸರ್ಗ, ಧರ್ಮ, ಪುರಾಣ, ಸಾವು, ಆಧುನಿಕ ನಾಗರೀಕತೆ, ರಾಜಕೀಯ, ಸರಳ ಗ್ರಾಮೀಣ ಬದುಕು ಚಿತ್ರಿತವಾಗಿವೆ.

`ಸಾಹಿತ್ಯ ಕೃತಿಗಳು ಪ್ರೇರಣೆ, ಸ್ಫೂರ್ತಿ ಅಥವಾ ಒಳತುಡಿತ ಆಧರಿಸಿರುತ್ತವೆ. ನಾನು ಬರೆದದ್ದು ತನ್ನೀಂತಾನೆ ಅರಳಿದ್ದು, ನನ್ನ ಒಳಮನಸ್ಸು ಹೇಳ್ದಿದನ್ನು ಅಕ್ಷರಕ್ಕೆ ಇಳಿಸಿದ್ದೇನೆ. ಮನಸ್ಸಿನ ಒಳಗಡೆಯೇ ಬೃಹತ್ ಲೋಕವಿದೆ, ಬಾಹ್ಯ ಜಗತ್ತಿನಿಂದ ನಾನೆಂದೂ ಪ್ರೇರಣೆ ಪಡೆದಿಲ್ಲ' ಎಂದು ತಮ್ಮ ಕಾವ್ಯ ಸೃಷ್ಟಿಯ ಸ್ವರೂಪವನ್ನು ವಿವರಿಸುತ್ತಾರೆ.

ಕವಿತೆ ಅಥವಾ ಸಾಹಿತ್ಯಕೃತಿಗಳನ್ನು ತೌಲನಿಕ ದೃಷ್ಟಿಯಿಂದ ನೋಡುವುದನ್ನು ಇಷ್ಟಪಡದ ಅವರು `ನನ್ನ ಕವಿತೆಗಳಿಗೆ ನಾನೇ ವ್ಯಾಖ್ಯಾನ ನೀಡುವುದಿಲ್ಲ' ಎಂದು ಹೇಳುತ್ತಾರೆ. ಶಹಾ ಅವರು `ನನ್ನ ಕವಿತೆಗಳನ್ನು ಇಷ್ಟವಾದರೆ ಓದಿ,ಇಲ್ಲದಿದ್ದರೆ ಬೇಡ' ಎಂದು ಖಡಾಖಂಡಿತವಾಗಿ ಹೇಳಲು ಕೂಡ ಹಿಂಜರಿಯುವುದಿಲ್ಲ.

ಉತ್ತರ ಗುಜರಾತಿನ ಖೇಡಾ ಜಿಲ್ಲೆಯ ಕಪಧ್ವಂಜಿನಲ್ಲಿ 1913ರಲ್ಲಿ ಜನಿಸಿದ ಅವರು ತನ್ನ ಎರಡನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ಮುಂಬೈ ವಿಲ್ಸನ್ ಕಾಲೇಜಿನಲ್ಲಿ ತತ್ವಜ್ಞಾನದಲ್ಲಿ ಪದವಿ ಪಡೆಯುತ್ತಿರುವಾಗಲೇ ಕಾವ್ಯಕೃಷಿ ಆರಂಭಿಸಿದರು. ಬರವಣಿಗೆಯ ಜೊತೆಯಲ್ಲಿಯೇ ಕಿರಾಣಿ ವ್ಯಾಪಾರಿ ಮತ್ತು ಮುದ್ರಣಾಲಯ ನಡೆಸುವ ಕೆಲಸ ಕೂಡ ಮಾಡಿದ್ದಾರೆ.
`ಅಂಗಡಿಯಲ್ಲಿದ್ದಾಗ ವಾಣಿಜ್ಯ ವಹಿವಾಟಿನ ಬಗ್ಗೆ ಮಾತ್ರ ಯೋಚಿಸುತ್ತೇನೆ. ಹೊರ ಬರುತ್ತಿದ್ದಂತೆಯೇ ಅಕ್ಷರ ಬಲ್ಲ ವಿದ್ವಾಂಸನಂತೆ ಯೋಚಿಸಲು ಆರಂಭಿಸುತ್ತೇನೆ. ನನ್ನ ಕೆಲಸವನ್ನು ವಿಭಾಗಿಸಿಕೊಂಡಿರುವುದರಿಂದ ಒಂದರ ಮೇಲೊಂದು ಸೇರಿ ಗೊಂದಲವಾಗುವುದಿಲ್ಲ' ಎಂದು ಹೇಳುತ್ತಾರೆ

`ಕವಿತೆ ರಚನೆಗೆ ಸಂಬಂಧಿಸಿದಂತೆ ಖಚಿತವಾದ ಸಮಯವನ್ನು ನಿಗದಿಪಡಿಸಿಕೊಂಡಿಲ್ಲ. ಮಧ್ಯರಾತ್ರಿಯಲ್ಲಿಯೇ ಕನಸಿನಲ್ಲಿ ಬಂದ ವಿಚಾರಗಳನ್ನು ಕೂಡ ಬರೆದಿದ್ದೇನೆ. ಹಲವಾರು ಸಲ ತಿಂಗಳುಗಟ್ಟಲೆ ಒಂದು ಸಾಲು ಕೂಡ ಬರೆಯಲಾಗದ ಸ್ಥಿತಿಯೂ ಇತ್ತು' ಎನ್ನುವ ಅವರು `ಕಾವ್ಯ ರಚನೆ ನನಗೆ ಅತ್ಯಂತ ಖುಷಿ ನೀಡುವ ಕೆಲಸ ಆದ್ದರಿಂದ ಪ್ರತಿ ಕ್ಷಣವನ್ನೂ ಸಂತಸ-ಸಂಭ್ರಮದಿಂದ ಅನುಭವಿಸುತ್ತೇನೆ.' ಎಂದು ಹೇಳಲು ಮರೆಯುವುದಿಲ್ಲ.

1951ರಲ್ಲಿ ಪ್ರಕಟವಾದ `ಧ್ವನಿ' ಸಂಕಲನ ನಂತರ ಇದುವರೆಗೆ 20 ಸಂಕಲನ ಪ್ರಕಟಿಸ್ದಿದಾರೆ. `ಹಾ ಹೂಂ ಸಾಕ್ಷಿ ಚು' (ಹೌದು, ನಾನೇ ಸಾಕ್ಷಿ) ಸಂಕಲನ ಪ್ರಕಟಣೆಯ ಹಂತದಲ್ಲಿದೆ. ಅಹ್ಮದಾಬಾದ್‌ ಹೊರವಲಯದಲ್ಲಿರುವ ಭೂಪಾಲ್‌ ಪ್ರದೇಶದ ನಿವಾಸಿಯಾಗಿರುವ ಶಹಾ ಭಾವನೆಗಳ ತೀವ್ರತೆಯ ಅಭಿವ್ಯಕ್ತಿ ಮತ್ತು ಕಾವ್ಯ ಪ್ರಕಾರದಲ್ಲಿ ನಾವಿನ್ಯತೆಗೆ ಹೆಸರುವಾಸಿಯಾಗಿದ್ದಾರೆ. ಡಾಂಟೆಯ `ಡಿವೈನ್ ಕಾಮಿಡಿ', ಕೋಲ್ರಿಡ್ಜ್ ನ `ದಿ ಸಾಂಗ್ ಆಫ್ ಎನ್ಸಿಯಂಟ್ ಮ್ಯಾರಿನರ್', ರವೀಂದ್ರನಾಥ್ ಠಾಗೋರ್ರ `ಬ್ಲೇಕ್' ಜಯದೇವನ `ಗೀತಗೋವಿಂದ'ಗಳನ್ನು ಗುಜರಾತಿಗೆ ಅನುವಾದಿಸಿದ್ದಾರೆ.

`ಶಾಂತ ಕೋಲಾಹಲ' ಸಂಕಲನಕ್ಕೆ 1964ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಗುಜರಾತಿನ ಎಲ್ಲ ಮಹತ್ವದ ಪ್ರಶಸ್ತಿ ಪಡೆದಿರುವ ಶಹಾ ಅವರಿಗೆ ಕೆಂದ್ರ ಸಾಹಿತ್ಯ ಅಕಾಡೆಮಿ 2000ರಲ್ಲಿ ಫೆಲೋಶಿಪ್ ಕೂಡ ನೀಡಿದೆ.

ಇತ್ತೀಚೆಗೆ ಗುಜರಾತಿನಲ್ಲಿ ನಡೆದ ಕೋಮುಗಲಭೆಗೆ ಕವಿಯಾಗಿ ಖಚಿತವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು `ಹಿಂದು- ಮುಸ್ಲಿಮರನ್ನು ಒಂದಾಗಿಸಲು ಹೆಣಗಾಡಲೇ? ಮಹಾತ್ಮ ಗಾಂಧಿಯವರಿಗೂ ಅದು ಸಾಧ್ಯವಾಗಿರಲಿಲ್ಲ. ಸಮಾಜದ ಬದುಕಿನಲ್ಲಿ ಹಿಂಸೆ- ಹತ್ಯಾಕಾಂಡಗಳು ತಾತ್ಕಾಲಿಕ ಹಂತಗಳು. ಕಾಲದ ಓಟದಲ್ಲಿ ಇಂತಹ ಎಷ್ಟೋ ಬಾರಿ ಮರುಕಳಿಸಿವೆ. ಆ ವಿಷಯದ ಬಗ್ಗೆ ಕವಿತೆ ಬರೆಯಬೇಕು ಅಂತ ನನಗೆ ಅನ್ನಿಸಿಲ್ಲ' ಎಂದು ವಿವರಿಸಿದರು.

`ಶಹಾ ಅವರು ಶ್ರೇಷ್ಠ ಕವಿ ಮಾತ್ರವಲ್ಲ, ಅತ್ಯುತ್ತಮ ಮಾನವಪ್ರೇಮಿ ಕೂಡ' ಎಂದು ಹೇಳುವ ಗುಜರಾತಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಘುವೀರ ಚೌಧುರಿ ಅವರು `ತತ್ವಜ್ಞಾನ ಮತ್ತು ಕಾವ್ಯದ ತಾಜಾತನಕ್ಕಾಗಿ ರಾಷ್ಟ್ರದ ಹತ್ತು ಮಹತ್ವದ ಕವಿಗಳ ಸಾಲಿನಲ್ಲಿ ನಿಲ್ಲಬಲ್ಲ ವ್ಯಕ್ತಿತ್ವ ಅವರದು' ಎಂದು ಅಭಿಪ್ರಾಯ ಪಡುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಬಸವೇಶ್ವರ ಮತ್ತು ಅವನ ಕಾಲ